ADVERTISEMENT

ಮೃದು ಹಿಂದುತ್ವವೋ ಹಿಂದೂ ಧರ್ಮವೋ?

ಸೆಕ್ಯುಲರ್‌ವಾದವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಅಗತ್ಯವಿದೆ...

ಪ್ರಜಾವಾಣಿ ವಿಶೇಷ
Published 24 ಆಗಸ್ಟ್ 2018, 19:41 IST
Last Updated 24 ಆಗಸ್ಟ್ 2018, 19:41 IST
   

ಭಾರತದಲ್ಲಿ ವಿಜೃಂಭಿಸುತ್ತಿರುವ ‘ಹಿಂದುತ್ವ’ದ ಕಠೋರತೆಗೆ ಎದುರಾಗಿ ‘ಮೃದು ಹಿಂದುತ್ವ’ ಎನ್ನುವ ಎಲ್ಲರನ್ನೂ ಒಳಗೊಳ್ಳುವ, ಪ್ರಜಾತಾಂತ್ರಿಕವಾದ ಹಿಂದುತ್ವವನ್ನು ರೂಪಿಸಬೇಕು ಎಂದು ಕೆಲ ತಿಳಿವಳಿಕಸ್ಥರು ಇತ್ತೀಚೆಗೆ ವಾದಿಸುತ್ತಿದ್ದಾರೆ. ಜೊತೆಗೆ ಸೆಕ್ಯುಲರ್‌ವಾದದ ಲೋಪದೋಷ ಗುರುತಿಸಿ ಅದನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸಬೇಕು ಎಂದೂ ಭಾವಿಸುತ್ತಿದ್ದಾರೆ. ಹಿಂದುತ್ವದ ಕಠೋರತೆಗೆ ಎದುರಾಗಿ ಸೌಹಾರ್ದದ ಹಿಂದುತ್ವ ಪ್ರತಿಪಾದಿಸುವವರ ಸದಿಚ್ಛೆಯನ್ನು ನಾವು ಪ್ರಶ್ನಿಸುತ್ತಿಲ್ಲವಾದರೂ, ತಾತ್ವಿಕವಾಗಿ ಮೃದು ಹಿಂದುತ್ವದ ರಾಜಕೀಯ ಮಹತ್ವವನ್ನು ಅನುಮಾನದಿಂದಲೇ ನೋಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿಂದುತ್ವ- ಹಿಂದೂ ಧರ್ಮ- ಸೆಕ್ಯುಲರ್‌ವಾದಗಳಿಗೆ ಸಂಬಂಧಿಸಿರುವ ಕೆಲವು ವಿಚಾರ ಮುಂದಿಡಲಾಗುತ್ತಿದೆ.

ಸೆಕ್ಯುಲರ್‌ವಾದ ಭಾರತದಲ್ಲಿಂದು ಸಂಕಟದ ದಿನಗಳನ್ನು ಎದುರಿಸುತ್ತಿದೆ. ಸೆಕ್ಯುಲರ್‌ವಾದದ ಹುಟ್ಟು, ವಿಕಾಸ ಹಾಗೂ ವಿಭಿನ್ನ ಸಮಾಜಗಳಲ್ಲಿ ಅದು ಪಡೆದ- ಪಡೆಯುತ್ತಿರುವ ರೂಪಾಂತರಗಳ ಬಗೆಗೆ ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಭಾರತೀಯ ಸೆಕ್ಯುಲರ್‌ವಾದದ ಕುರಿತು ಚಿಂತನೆ ನಡೆಸಿದ ಪ್ರಾಜ್ಞರು ಅದರ ಸಂಕಷ್ಟಗಳ ಬಗ್ಗೆ ಚರ್ಚಿಸಿದ್ದಾರೆ. ಸೆಕ್ಯುಲರ್‌ವಾದ ಇಂದು ಪ್ರಶ್ನಾತೀತ ಸಿದ್ಧಾಂತವಾಗಿ ಉಳಿಯದೆ, ಅನೇಕ ಸವಾಲುಗಳ ದಾರಿಯಲ್ಲಿ ತೆವಳುತ್ತಿದೆ. ಈ ಹಿನ್ನೆಲೆಯಲ್ಲಿ ಸೆಕ್ಯುಲರ್‌ವಾದವನ್ನು ನಿರನುಮಾನದಿಂದ, ಸಾರ್ವಕಾಲಿಕ ಸತ್ಯವೆಂಬಂತೆ ಭಾವಿಸುವುದು ಮೂರ್ಖತನ. ಕರ್ನಾಟಕದಲ್ಲಿ ಸೆಕ್ಯುಲರ್‌ವಾದದ ಬಾವುಟ ಹಿಡಿದು ತಿರುಗುವವರು ಒಂದು ತಾತ್ವಿಕ ದೃಷ್ಟಿಕೋನವಾಗಿ ಸೆಕ್ಯುಲರ್‌ವಾದವು ಜಗತ್ತಿನಲ್ಲಿ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಅರ್ಥದಲ್ಲಿ ಮೃದು ಹಿಂದುತ್ವವಾದಿಗಳು ಒತ್ತಾಯಿಸುವ ಸೆಕ್ಯುಲರ್‌ವಾದದ ವಿಮರ್ಶೆ ಮುಖ್ಯವಾದದ್ದು. ಇಲ್ಲಿ ಸೆಕ್ಯುಲರ್‌ವಾದದ ವಿಮರ್ಶೆ ನಡೆಸಬೇಕೋ ಅಥವಾ ಸ್ವ-ವಿಮರ್ಶೆ ನಡೆಸಬೇಕೋ ಎನ್ನುವ ಬಗ್ಗೆ ಸ್ಪಷ್ಟತೆ ಇರುವುದು ಒಳ್ಳೆಯದು. ಯಾಕೆಂದರೆ ಸೆಕ್ಯುಲರ್‌ವಾದವನ್ನು ಬದುಕಿನ ಅವಿಭಾಜ್ಯ ದೃಷ್ಟಿಕೋನವೆಂದು ತಿಳಿಯುವುದಾದರೆ ನಾವು ಅದರ ಕುರಿತು ನಡೆಸುವ ವಿಮರ್ಶೆ ಸ್ವ- ವಿಮರ್ಶೆಯಾಗುತ್ತದೆ. ಇಲ್ಲದಿದ್ದಲ್ಲಿ ನಮ್ಮದಲ್ಲದ, ಆದರೆ ನಮ್ಮನ್ನು ಪ್ರಭಾವಿಸುತ್ತಿರುವ ವಿದ್ಯಮಾನವೊಂದರ ಕುರಿತು ವಿಮರ್ಶಿಸಿದಂತಾಗುತ್ತದೆ.

ಭಾರತದಂತಹ ದೇಶದಲ್ಲಿ ಧರ್ಮ-ಸಂಸ್ಕೃತಿಯ ಪ್ರಶ್ನೆಗಳನ್ನು ಸೆಕ್ಯುಲರ್‌ವಾದವು ನೋಡುವ ಮತ್ತು ನಿರ್ವಹಿಸುವ ರೀತಿಗೆ ಸಂಬಂಧಿಸಿದಂತೆ ಸೆಕ್ಯುಲರ್‌ವಾದದ ಕುರಿತ ನಮ್ಮ ಸ್ವ-ವಿಮರ್ಶೆ ನಡೆಯಬೇಕಿದೆ. ಒಂದು ಬಗೆಯ ಧರ್ಮನಿರಪೇಕ್ಷ ಸೆಕ್ಯುಲರ್‌ವಾದವನ್ನು ನಾವು ಪ್ರತಿಪಾದಿಸಿಕೊಂಡು ಬಂದಿರುವುದರಿಂದ ಧರ್ಮ- ಸಂಸ್ಕೃತಿಗಳ ಬಹುಮುಖ್ಯ ಪ್ರಶ್ನೆಗಳನ್ನು ಭಾರತೀಯ ಸೆಕ್ಯುಲರ್‌ವಾದ ಸಮರ್ಪಕವಾಗಿ ಎದುರಿಸಿಲ್ಲ. ಮಾತ್ರವಲ್ಲ, ಅನೇಕ ಧಾರ್ಮಿಕ ಸಂಕಷ್ಟಗಳಿಗೆ ಭಾರತದ ಸೆಕ್ಯುಲರ್‌ವಾದ ಸ್ಥೂಲ ಪರಿಹಾರಗಳನ್ನಷ್ಟೇ ಸೂಚಿಸಿದೆ. ಆದ್ದರಿಂದ, ಭಾರತದ ಸೆಕ್ಯುಲರ್‌ವಾದವನ್ನು ಧಾರ್ಮಿಕವಾಗಿ ಸಂವೇದನಾಶೀಲಗೊಳಿಸುವ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಅಗತ್ಯವಿದೆ. ಇದು ಒಂದು ಬೃಹತ್ ಕಾರ್ಯಸೂಚಿ. ಈ ಕುರಿತು ಅನೇಕ ವಿದ್ವಾಂಸರು ಮಹತ್ವದ ಮಾತುಗಳನ್ನು ಆಡಿದ್ದಾರೆ. ಅವನ್ನು ನಾವಿಲ್ಲಿ ಚರ್ಚಿಸುವುದಿಲ್ಲ. ಮೃದು ಹಿಂದುತ್ವದ ಪ್ರತಿಪಾದಕರು, ಸೆಕ್ಯುಲರ್‌ವಾದದ ವಿಮರ್ಶೆ ನಡೆಸಬೇಕು ಎನ್ನುತ್ತಿರುವುದಕ್ಕೆ ಇದು ನಮ್ಮ ಪ್ರತಿಕ್ರಿಯೆ.

ADVERTISEMENT

ಇನ್ನು ಹಿಂದುತ್ವದ ವಿಚಾರ. ಮೃದು ಹಿಂದುತ್ವವನ್ನು ಪ್ರತಿಪಾದಿಸುತ್ತಿರುವವರು, ಹಿಂದುತ್ವದ ಉಗಮವನ್ನು ವಿವೇಕಾನಂದರ ಚಿಂತನೆಯಲ್ಲಿ ಕಾಣುತ್ತಾರೆ. ವಿವೇಕಾನಂದರು ಆಧುನಿಕತೆಯ ಪರಿಭಾಷೆಯಲ್ಲಿ ಹಿಂದೂತನಕ್ಕೆ ಹೊಸ ವ್ಯಾಖ್ಯಾನ ಒದಗಿಸಿದರು. ಇದರ ಹಿಂದಿದ್ದ ವಿವೇಕ ಅನೇಕ ಸದ್ವಿಚಾರದ ಭಾರತೀಯರಿಗೆ ಪ್ರಿಯವಾಯಿತು. ವಿವೇಕಾನಂದರು ಪ್ರತಿಪಾದಿಸಿದ ಹಿಂದುವಾದ ತನ್ನ ವಿಶ್ವಾತ್ಮಕತೆಯಿಂದಾಗಿ ವ್ಯಾಪಕ ಜನಪ್ರಿಯತೆ ಗಳಿಸಿಕೊಂಡಿತು.

ಹಿಂದೂ ಧರ್ಮಕ್ಕೆ ಆಧುನಿಕತೆಯ ಮೊನಚನ್ನು ಒದಗಿಸಿದವರಲ್ಲಿ ವಿವೇಕಾನಂದರು ಪ್ರಮುಖರಿರಬಹುದು. ಆದರೆ ಅವರು ಮೊದಲಿಗರಲ್ಲ. ವಿವೇಕಾನಂದರಿಗಿಂತ ಮೊದಲು ಮತ್ತು ನಂತರ ಅನೇಕ ತಾತ್ತ್ವಿಕರು; ಆಧುನಿಕ ಪರಿಭಾಷೆಯಲ್ಲಿ ಹಿಂದೂ ಧರ್ಮದ ಆಧ್ಯಾತ್ಮಿಕ ವಿಶ್ವವನ್ನು ಮರುನಿರೂಪಿಸಿದವರಿದ್ದಾರೆ. ಆದುದರಿಂದ ಸನಾತನ ಹಿಂದೂ ಧರ್ಮಕ್ಕಿಂತ ಭಿನ್ನವಾದ ಮತ್ತು ಕೆಲವೊಮ್ಮೆ ವ್ಯತಿರಿಕ್ತವಾದ ಹಿಂದೂ ಧರ್ಮದ ಬಲುದೊಡ್ಡ ಬೌದ್ಧಿಕ ಪರಂಪರೆಗಳನ್ನು ನಾವು ಗುರುತಿಸಬಹುದು (ಇದರ ಜೊತೆಗೆ ‘ಹಿಂದೂ ಧರ್ಮವೇ ವಸಾಹತು ನಿರ್ಮಾಣ’ ಎನ್ನುವ ವಾದವೂ ಇದೆ). ಹಾಗಾಗಿ, ಮೃದು ಹಿಂದುತ್ವ ಎನ್ನುವಾಗ ಯಾವುದನ್ನು ಉದ್ದೇಶಿಸಿದ್ದೇವೆ ಎನ್ನುವುದರ ಕುರಿತು ನಮಗೆ ಸ್ಪಷ್ಟತೆ ಬೇಕು.

ಬಹುಮುಖ್ಯ ಸಂಗತಿಯೆಂದರೆ ಹಿಂದುತ್ವ ಮತ್ತು ಹಿಂದೂಧರ್ಮಗಳ ನಡುವಿನ ಅಂತರ. ಹಿಂದುತ್ವವೆನ್ನುವ ಪದವನ್ನು ವಿವೇಕಾನಂದರು ಮೊದಲಿಗೆ ಬಳಸಿದರು ಎನ್ನುವುದನ್ನು ಒಪ್ಪಿಕೊಂಡರೂ, ಹಿಂದುತ್ವಕ್ಕೆ ಸ್ಪಷ್ಟ ಸೈದ್ಧಾಂತಿಕ ಹಾಗೂ ರಾಜಕೀಯ ತಳಹದಿ ಒದಗಿಸಿದವರು ವಿ.ಡಿ. ಸಾವರ್ಕರ್. ಅವರ ವ್ಯಾಖ್ಯಾನದಂತೆ, ಹಿಂದುತ್ವವೆಂದರೆ ಹಿಂದೂಧರ್ಮದ ಮೂಲಸಾರ. ಅದು ಅವರ ಪ್ರಕಾರ ಚರಿತ್ರೆಯೂ ಹೌದು, ನೆನಪೂ ಹೌದು. ಜೊತೆಗೆ ಭೌಗೋಳಿಕ ಖಚಿತತೆ ಇರುವ ರಾಷ್ಟ್ರವೂ ಹೌದು. ಅಂದರೆ ಹಿಂದುತ್ವವನ್ನು ಸಾವರ್ಕರ್ ಬಹಳ ಸ್ಪಷ್ಟವಾಗಿ ಒಂದು ರಾಷ್ಟ್ರವಾದಿ ರಾಜಕೀಯ ಸಿದ್ಧಾಂತವನ್ನಾಗಿ ಕಟ್ಟಿದರು.

ಇಂದು ಮೃದು ಹಿಂದುತ್ವ ಬೇಕು ಎನ್ನುವವರು ಹಿಂದೂ ಎಂಬ ಧಾರ್ಮಿಕ ಚಿಂತನೆಗಳ ಸಮುಚ್ಚಯದಲ್ಲಿರುವ ವಿಭಿನ್ನ ಸಂಪ್ರದಾಯ ಹಾಗೂ ಶಾಖೋಪಶಾಖೆಗಳ ಸಾಂಸ್ಕೃತಿಕ ವಿಶ್ವದಲ್ಲಿರುವ ಸೂಕ್ಷ್ಮವಾದ ಆದರೆ ಮಹತ್ವದ ವ್ಯತ್ಯಾಸಗಳನ್ನು ಗುರುತಿಸಬೇಕಾಗುತ್ತದೆ. ಅಂತೆಯೇ, ಅವು ಪ್ರತಿನಿಧಿಸುವ ಮೌಲಿಕ ಜಗತ್ತುಗಳ ನಡುವೆ ಗೆರೆಗಳನ್ನು ಎಳೆಯಬೇಕಾಗುತ್ತದೆ. ಅಷ್ಟು ಮಾತ್ರವಲ್ಲದೆ, ಈ ಧಾರ್ಮಿಕ ಪರಂಪರೆಗಳ ಆಧಾರದಲ್ಲಿ ಮೈದಳೆದ ರಾಜಕೀಯ ಸಿದ್ಧಾಂತಗಳ ನಡುವೆಯೂ ವ್ಯತ್ಯಾಸ ಗುರುತಿಸಬೇಕಾಗುತ್ತದೆ. ಈ ಪರಿಪ್ರೇಕ್ಷ್ಯದಲ್ಲಿ ಸನಾತನ ಎಂದು ಕರೆಯುವ ಹಿಂದೂ ಧರ್ಮದ ವಿಭಿನ್ನ ಸಂಪ್ರದಾಯ, ಹಿಂದೂ ಧರ್ಮದ ಕುರಿತು ಆಧುನಿಕ ಕಾಲಘಟ್ಟದಲ್ಲಿ ಮಾಡಲಾದ ನವನವೀನ ವ್ಯಾಖ್ಯಾನಗಳು ಮತ್ತು ಹಿಂದುತ್ವವೆನ್ನುವ ಆಧುನಿಕ ರಾಷ್ಟ್ರವಾದಿ ರಾಜಕೀಯ ಸಿದ್ಧಾಂತ, ಇವುಗಳ ನಡುವಿನ ವ್ಯತ್ಯಾಸಗಳ ಸ್ಪಷ್ಟವಾದ ಅರಿವು ಬಹುಮುಖ್ಯ.

ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ಹಿಂದುತ್ವದ ಕಠೋರ ಹಾಗೂ ಮೃದು ಮುಖಗಳ ಬಗೆಗಿನ ಸಮಕಾಲೀನ ಜಿಜ್ಞಾಸೆಯನ್ನು ಮರುಪರಿಶೀಲಿಸಬಹುದು. ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಮೃದು ಹಿಂದುತ್ವದ ಅವಶ್ಯಕತೆಯ ಪ್ರತಿಪಾದನೆ ಮಾಡುವವರು ಹಿಂದೂ ಧರ್ಮದ ಪ್ರಜಾತಾಂತ್ರಿಕ ಆಶಯಗಳನ್ನು ಮುನ್ನೆಲೆಗೆ ತರಲು ಆಶಿಸುತ್ತಾರೆ. ಅಂತೆಯೇ ಅವರು ಹಿಂದೂ ಧರ್ಮದ ಬಹುರೂಪ ಹಾಗೂ ಇವು ಪ್ರತಿನಿಧಿಸುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಾರೆ. ಹಿಂದುತ್ವದ ಸೋಂಕಿನ ಮೂಲಕ ಹಿಂದೂ ಧಾರ್ಮಿಕ ಅಸ್ಮಿತೆಗೆ ತಗುಲಿರುವ ಉಗ್ರಕಾಯಿಲೆಯ ಹಿನ್ನೆಲೆಯಲ್ಲಿ, ಹಿಂದೂ ಧಾರ್ಮಿಕ ಪರಂಪರೆಗಳಲ್ಲಿರುವ ‘ವಸುಧಾ ಏವ ಕುಟುಂಬ’ದ ಆಶಯಗಳನ್ನು ಮುಂದಕ್ಕೆ ತರುವುದು ಸ್ವಾಗತಾರ್ಹವಾದ ರಾಜಕೀಯ ಕ್ರಿಯಾಚರಣೆಯೇ ಸರಿ. ಹಿಂದುತ್ವ ತನ್ನ ಚಾರಿತ್ರಿಕ ವಿಕಾಸದಲ್ಲಿ ಪಡೆದುಕೊಳ್ಳುತ್ತಿರುವ ಆಕ್ರಮಣಶೀಲತೆಯನ್ನು, ಹಿಂದೂ ಅಸ್ಮಿತೆಯ ಹಿಂಸಾತ್ಮಕ ಹೇರಿಕೆಗಳನ್ನು ಮತ್ತು ಭಾರತದ ಪ್ರಜಾತಾಂತ್ರಿಕ ಬದುಕಿನ ಮೌಲ್ಯಗಳನ್ನು ಸಾರಾಸಗಟಾಗಿ ಅವಗಣಿಸುವ ಹಿಂದುತ್ವದ ಕ್ರಮಗಳನ್ನು ವಿರೋಧಿಸಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಈ ವಿರೋಧವನ್ನು ನಾವು ನಿರ್ವಹಿಸುವ ರೀತಿಗಳ ಕುರಿತು ಮರುಪರಿಶೀಲನೆಯನ್ನೂ ನಡೆಸಬೇಕಾಗಿದೆ ಎನ್ನುವುದು ನಮ್ಮ ನಿಲುವು.

ತನ್ನನ್ನು ಹಿಂದೂ ಎಂದು ಕರೆದುಕೊಳ್ಳುವ ಸಮುದಾಯಗಳ ಹಿತಾಸಕ್ತಿ ಮತ್ತು ಅವುಗಳ ಆತಂಕಗಳನ್ನು ಸಹಾನುಭೂತಿಯಿಂದ ನೋಡುವ ಹಾಗೂ ಈ ಸಮುದಾಯಗಳನ್ನು ಅಹಿಂಸಾತ್ಮಕವಾದ ಪ್ರಜಾತಾಂತ್ರಿಕ ರಾಜಕಾರಣಕ್ಕೆ ಕರೆತರುವ ನೆಲೆಯಲ್ಲಿ ಬಹುಬಗೆಯ ಕ್ರಿಯಾಚರಣೆಗಳು ಈಗಾಗಲೇ ನಡೆದಿವೆ. ಅನೇಕ ವರ್ಷಗಳಿಂದ ನಡೆಯುತ್ತಿರುವ ಹಿಂದೂ ಧಾರ್ಮಿಕಕೃತಿಗಳ ಹಾಗೂ ಸಂಪ್ರದಾಯಗಳ ಮರುನಿರೂಪಣೆ ಒಂದೆಡೆಯಾದರೆ; ರಾಜಾರಾಮ ಮೋಹನ್ ರಾಯ್, ವಿವೇಕಾನಂದ, ಅರಬಿಂದೋ, ಗಾಂಧಿ ಹಾಗೂ ವಿನೋಭಾರಂತಹ ಆಧ್ಯಾತ್ಮಿಕ ಚಿಂತಕರ ಚಿಂತನೆಯನ್ನು ಹಿಂದೂ ವಿಶ್ವದೃಷ್ಟಿಯ ಭಾಗವಾಗಿ ಗ್ರಹಿಸುವ ಪ್ರಯತ್ನ ಮತ್ತೊಂದೆಡೆ ನಡೆದಿದೆ. ಈ ಎಲ್ಲ ಪ್ರಯತ್ನಗಳನ್ನು ಹಿಂದೂ ಧರ್ಮದ ನವನವೀನ ಬಹುರೂಪಗಳಾಗಿ ನೋಡಬೇಕೇ ಹೊರತು, ಅವನ್ನೇ ಮೃದು ಹಿಂದುತ್ವವೆಂದು ಕರೆಯುವುದು ಸೂಕ್ತವಲ್ಲ.

ಮೃದು ಹಿಂದುತ್ವದ ಪ್ರತಿಪಾದನೆ, ಅನಿರ್ದಿಷ್ಟವಾದ ಹಾಗೂ ಅಸ್ತವ್ಯಸ್ತವಾದ ರಾಜಕೀಯ ಲಹರಿಯೇ ಹೊರತು ಅದೊಂದು ಚಿಂತನೆಯಲ್ಲ. ಹಿಂದುತ್ವವನ್ನು ಸ್ಪಷ್ಟರೂಪದ ರಾಷ್ಟ್ರವಾದಿ ರಾಜಕೀಯ ಸಿದ್ಧಾಂತವೆಂದು ತಿಳಿಯುವುದಾದರೆ ಅದರ ಕಠೋರ ಮತ್ತು ಅದರ ಮೃದು ರೂಪ ಯಾವುದು? ತನ್ನ ಆಶೋತ್ತರಗಳನ್ನು ಹಿಂಸೆ, ದಬ್ಬಾಳಿಕೆಗಳಿಂದ ಸಾಧಿಸುವ ಹಿಂದುತ್ವವನ್ನು ಕಠೋರ ಹಿಂದುತ್ವ ಎಂದೂ; ಅದನ್ನೇ ನಯ-ನಾಜೂಕಿನಲ್ಲಿ ಸಾಧಿಸುವ ದಾರಿಯನ್ನು ನಾವು ಮೃದು ಹಿಂದುತ್ವವೆಂದೂ ಕರೆಯುತ್ತೇವೆ ಎಂದಾದರೆ ಇವೆರಡರ ನಡುವಿನ ಮೂಲಭೂತ ವ್ಯತ್ಯಾಸಗಳೇನು? ಈ ವ್ಯತ್ಯಾಸಗಳು ಗಲಿಬಿಲಿಗೊಳಿಸುವಂತಹವು ಮತ್ತು ರಾಜಕೀಯವಾಗಿ ಅಪಾಯಕಾರಿಯಾದವು. ಯಾಕೆಂದರೆ ಕಠೋರ ಹಿಂದುತ್ವ ಹಾಗೂ ಮೃದು ಹಿಂದುತ್ವಗಳ ನಡುವಿನ ವ್ಯತ್ಯಾಸ ಸಾಪೇಕ್ಷವಾದದ್ದು. ಉದಾಹರಣೆಗೆ ಸಾವರ್ಕರ್‌ ಎದುರಿಗೆ ಗೊಳವಲ್ಕರ್‌ ಕಠೋರವಾಗಿ ಕಾಣುತ್ತಾರೆ. ದೀನದಯಾಳ್‌ ಎದುರಿಗೆ ಸಾವರ್ಕರ್‌ ಕಠೋರವಾಗಿ ಕಾಣುತ್ತಾರೆ. ನಮ್ಮ ಕಾಲದ ರಾಜಕಾರಣದಲ್ಲಿ ನರೇಂದ್ರ ಮೋದಿಯವರ ಎದುರಿಗೆ ಅಡ್ವಾಣಿ ಮೃದುವಾಗಿ ಕಾಣುತ್ತಾರೆ. ಅಡ್ವಾಣಿಯವರ ಎದುರಿಗೆ ವಾಜಪೇಯಿ ಮೃದುವಾಗಿ ಕಾಣುತ್ತಾರೆ. ಹೀಗಾಗಿ, ಹಿಂದುತ್ವದ ಕಠೋರ ಮತ್ತು ಮೃದು ರೂಪಗಳು ಸಾಪೇಕ್ಷವೂ ತುಲನಾತ್ಮಕವೂ ಆಗಿವೆ.

ಮೃದು ಹಿಂದುತ್ವ ಅಂತ ಒಂದಿದೆ ಎಂದು ನಂಬುವುದು, ಒಂದು ಬಗೆಯ ಪಾಪನಿವೇದನಾ ಮನೋಭಾವದಿಂದ ಬಹಳ ರಕ್ಷಣಾತ್ಮಕವಾದ ಮಾತುಗಳನ್ನು ಇಂದಿನ ಬಹಳ ಉಗ್ರರೂಪದಲ್ಲಿರುವ ಹಿಂದುತ್ವದ ಎದುರು ಮಾತಾಡೋದು ರಾಜಕೀಯವಾಗಿ ಬಹಳ ಮುಗ್ಧವೂ ಜೊತೆಗೆ ಅಪಾಯಕಾರಿಯೂ ಆದ ವಿದ್ಯಮಾನವಾಗಿದೆ.

ಈಗಿನ ಧರ್ಮಸಂಕಟದ ಕಾಲದಲ್ಲಿ ನೈತಿಕ ನೆಲೆಗಟ್ಟನ್ನು ಆಧರಿಸಿ ನಿಂತಿರುವ ಹಿಂದೂ ಧರ್ಮವನ್ನು ಅರ್ಥ ಮಾಡಿಕೊಳ್ಳುವ ಮೊದಲ ಹೆಜ್ಜೆಯೆಂದರೆ, ಒಂದು ರಾಜಕೀಯ ಸಿದ್ಧಾಂತವಾಗಿ ರೂಪುಗೊಂಡಿರುವ ಆಧುನಿಕ ಹಿಂದುತ್ವವನ್ನು ತಾತ್ತ್ವಿಕವಾಗಿ ನಿರಾಕರಿಸುವುದೇ ಆಗಿದೆ. ಹಾಗೆಯೇ ಭಾರತದಲ್ಲಿ ಸೆಕ್ಯುಲರ್‌ವಾದಿಯಾಗಿರುವುದೆಂದರೆ ಈ ನೆಲದ ಧಾರ್ಮಿಕ-ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಕ್ತ ಭಾವದಿಂದ ತೆರೆದುಕೊಳ್ಳುವುದೂ ಆಗಿದೆ. ಹಿಂದುತ್ವ ಅನ್ನುವುದೇ ಒಂದು ವಿಘಟನಕಾರಿಯಾದ ರಾಜಕೀಯ ಸಿದ್ಧಾಂತ. ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ, ಹಿಂದುತ್ವಕ್ಕೂ ಹಿಂದೂ ದೈವ-ದೇವರುಗಳಿಗೂ, ಹಿಂದುತ್ವಕ್ಕೂ ಸನಾತನವಾದ ನಮ್ಮ ಸಾಂಸ್ಕೃತಿಕ ಹೆಗ್ಗುರುತು ಮತ್ತು ಸದ್ಗುಣಗಳಿಗೂ ಯಥಾರ್ಥ ಸಂಬಂಧವಿಲ್ಲ. ಆದರೆ ಸಂಬಂಧ ಇದೆ ಎಂದು ತೋರಿಸಲು ಮತ್ತು ಜನರನ್ನು ನಂಬಿಸಲು ಹಿಂದುತ್ವ ಪ್ರಯಾಸಪಡುತ್ತದೆ. ಅದಕ್ಕಾಗಿ ಆ ಸಂಬಂಧಗಳ ಸಾರ್ವಜನಿಕ ಪ್ರದರ್ಶನವನ್ನೂ ಅದು ನಡೆಸುತ್ತದೆ.

ಹಿಂದೂ ಧರ್ಮ ಎಂದರೆ ಹಲವು ಮತ-ಸಂಪ್ರದಾಯಗಳ ಜನರಿಗೆ ತಮ್ಮ ಬಾಳ್ವೆ ಮತ್ತು ಜೀವನದರ್ಶನದ ಕುರಿತ ಗಾಢನಂಬಿಕೆ. ಹಿಂದುತ್ವ ಎಂದರೆ ತಮ್ಮ ಜೊತೆ ಸಹಮತ ಇಲ್ಲದ ಭಿನ್ನಮತೀಯರಿಗೆ ರವಾನಿಸುವ ಕಡು ಎಚ್ಚರಿಕೆ. ಹಿಂದೂ ಧರ್ಮ ಎಂದರೆ ಗುರು-ಹಿರಿಯರಲ್ಲಿ, ದೈವ-ದೇವರುಗಳಲ್ಲಿ ಭಯ-ಭಕ್ತಿ. ಆದರೆ ಹಿಂದುತ್ವ ಅನ್ನೋದು ‘ಅನ್ಯರನ್ನು’ ಸೃಷ್ಟಿಸಿ ಅವರನ್ನು ಭಯಭೀತಗೊಳಿಸುವ ರಾಜಕೀಯ ಶಕ್ತಿ. ಹಿಂದೂ ಧರ್ಮ ಎಂದರೆ ತನ್ನ ನೈತಿಕ ನಡವಳಿಕೆಗಳ ಬಗ್ಗೆ ಮತ್ತು ತಾನು ಎದುರಿಸುವ ಧರ್ಮಸಂಕಟಗಳ ಬಗ್ಗೆ ವಿಲವಿಲ ಒದ್ದಾಡುವ ತುಮುಲ. ಹಿಂದುತ್ವ ಅಂದರೆ ‘ಇದಮಿತ್ಥಂ’ ಎಂಬ ಅಚಲ ನಿಲುವು. ಹಿಂದೂ ಧರ್ಮ ಎಂದರೆ ಸ್ವಂತಕ್ಕೆ ಪ್ರಶ್ನೆ ಕೇಳುವ ಸ್ಥೈರ್ಯ. ಹಿಂದುತ್ವ ಎಂದರೆ ಅನ್ಯವನ್ನು ಮಾತ್ರ ವಿಮರ್ಶೆ, ಪ್ರಶ್ನೆ ಮಾಡುವ ಅಧಿಕಾರ. ಹಿಂದೂ ಧರ್ಮದಲ್ಲಿ ಚಿಂತನೆಯೇ ಪ್ರಧಾನ. ಹಿಂದುತ್ವದಲ್ಲಿ ಪ್ರತಿಪಾದನೆಯೇ ಪ್ರಧಾನ. ‘ಗರ್ವದಿಂದ ಹೇಳುತ್ತೇನೆ ನಾನೋರ್ವ ಹಿಂದೂ’ ಎನ್ನುವುದು ಹಿಂದುತ್ವ. ‘ಗರ್ವ ಪಡದಿರು, ಗರ್ವ ಪಡುವವನು ನಾಶವಾಗುತ್ತಾನೆ’ ಎನ್ನುವುದು ಹಿಂದೂ ಧರ್ಮ.

ಸೆಕ್ಯುಲರ್‌ವಾದವನ್ನು ವಿಮರ್ಶಿಸುವ, ಹಿಂದುತ್ವವನ್ನು ಮೃದುಗೊಳಿಸುವ ನಮ್ಮ ನಾಡಿನ ತಿಳಿವಳಿಕಸ್ಥರು ಹೊರಡಬೇಕಾಗಿರುವುದು ಮೃದು ಹಿಂದುತ್ವದೆಡೆಗೋ ಅಥವಾ ನೈತಿಕ ಪ್ರಶ್ನೆಗಳನ್ನೇ ಆಧರಿಸಿ ನಿಂತಿರುವ ಹಿಂದೂ ಧರ್ಮದೆಡೆಗೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.