ADVERTISEMENT

ದಂಡಿಗ್ಹೋದ ಮಗನ ದಾರಿ ಕಾಯುವ ತಾಯೇ...

ಯುದ್ಧದ ಸನ್ನಿವೇಶ ಎದುರಾದಾಗ ಈ ಲೋಕವು ತಾಯಂದಿರ ಅಭಿಪ್ರಾಯ ಕೇಳಿದ್ದು ಇದೆಯೇ?

ಸಬಿತಾ ಬನ್ನಾಡಿ
Published 22 ಮಾರ್ಚ್ 2019, 20:00 IST
Last Updated 22 ಮಾರ್ಚ್ 2019, 20:00 IST
   

ಯುದ್ಧ ತಡೆಯುವುದಕ್ಕಾಗಿ ಎಷ್ಟೆಲ್ಲಾ ಪ್ರಯತ್ನಗಳಾದವು, ಎಷ್ಟೆಲ್ಲಾ ತಾಳ್ಮೆ ವಹಿಸಬೇಕಾಯಿತು, ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಯಿತು. ಆದರೂ ಯಾರೋ ಕೆಲವರ ಮೂರ್ಖತನದಿಂದಾಗಿ ಕೊನೆಗೂ ಯುದ್ಧ ಮಾಡಲೇಬೇಕಾಯಿತು. ಯುದ್ಧದ ನಡುವೆ, ಯಾರು ವರ್ಷಗಳ ಕಾಲ ಯುದ್ಧ ನಿಲ್ಲಿಸುವ ಪ್ರಯತ್ನ ಮಾಡಿದ್ದರೋ ಅವರೇ ಇಂತಹ ಸಂದರ್ಭದಲ್ಲಿ ‘ಯುದ್ಧದ ಅನಿವಾರ್ಯ’ವನ್ನೂ ಬೋಧಿಸಿ ಹುರಿದುಂಬಿಸಬೇಕಾಯಿತು! ಹೌದು, ಇದೆಲ್ಲವೂ ಮಹಾಭಾರತ ಯುದ್ಧದ ಕುರಿತು ಹೇಳುತ್ತಿರುವ ಮಾತು. ಈ ಮಾತು ಯಾಕೆಂದರೆ, ಶ್ರೀಕೃಷ್ಣನ ಕೊನೆಯ ಕ್ಷಣದವರೆಗಿನ ಪ್ರಯತ್ನ ಯುದ್ಧ ನಿಲ್ಲಿಸುವುದು ಆಗಿತ್ತೇ ಹೊರತು ಯುದ್ಧ ಮಾಡುವುದಾಗಿರಲಿಲ್ಲ. ಈ ಮಹಾಕಾವ್ಯ ಸಾರ್ವಕಾಲಿಕವಾಗಲು ಹಲವು ಕಾರಣಗಳಿರಬಹುದು. ಅದರಲ್ಲಿ ಇದು ಎಂದಿಗೂ ಕೊನೆಯ ಕಾರಣವಲ್ಲ.

ಇಂದು ನಾವು ಭಗವದ್ಗೀತೆಯ ಭಾಗವನ್ನಷ್ಟೇ ಹೇಳಿ ಯುದ್ಧದ ಸಮರ್ಥನೆ ಮಾಡಲು ಹೊರಟರೆ, ಅದಕ್ಕಿಂತ ಹಿಂದಿನ ಕೃಷ್ಣ ಪ್ರಯತ್ನಕ್ಕೆ ಅಪಚಾರವೆಸಗಿದಂತೆ. ಮಹಾಭಾರತ ಯುದ್ಧವಾಗದಂತೆ ತಡೆಯಲು ಶ್ರೀಕೃಷ್ಣ ಎಷ್ಟೆಲ್ಲ ಸಾಧ್ಯವೋ ಅಷ್ಟೆಲ್ಲಾ ಪ್ರಯತ್ನ ಮಾಡುತ್ತಾನೆ. ಪಾಂಡವರ ಪರವಾಗಿ ಕೃಷ್ಣ ಇದ್ದರೂ, ಆಗ ನಡೆದ ಯುದ್ಧದಲ್ಲಿ ಕೌರವರ ಪರ ವಹಿಸಿದವರ ಸಂಖ್ಯೆಯೇ ದೊಡ್ಡದು. ಮನೆಯ ಹಿರಿಯರು, ಗುರುಗಳು ಮೂಕಪ್ರೇಕ್ಷಕರಂತೆ ಕೌರವರ ಜೊತೆಗೆ ಇದ್ದರು. ದುಷ್ಟ ಶಿಕ್ಷೆಗಾಗಿ, ಶಿಷ್ಟ ರಕ್ಷಣೆಗಾಗಿ ಎಂದು ಹೇಳುವಾಗಲೂ, ಕೃಷ್ಣನ ರಕ್ಷಣೆ ಇದ್ದೂ ಪಾಂಡವರು ಕಾಡುಪಾಲಾಗುವುದಾಗಲೀ, ಅಜ್ಞಾತವಾಸಿಗಳಾಗಿ ಬೇರೆಯವರ ಮನೆಯ ಊಳಿಗ ಮಾಡುವುದಾಗಲೀ ತಪ್ಪಲಿಲ್ಲ. ಮಹಾಬಲದ ಬೆಂಬಲ ಕೌರವರ ಅಹಂಕಾರವನ್ನು ಉದ್ದೀಪಿಸುತ್ತಾ ಹೋಯಿತು. ಯುದ್ಧದಾಹ ಅಪರಿಮಿತವಾಗಿ ಬೆಳೆಯಿತು. ಧೃತರಾಷ್ಟ್ರ, ದುರ್ಯೋಧನರ ಮೂರ್ಖತನ ಮೇರೆ ಮೀರಿತು. ಯುದ್ಧ ನಡೆಯದೆ ಬೇರೆ ದಾರಿಯೇ ಇಲ್ಲ ಎಂಬ ಸಂದರ್ಭ ಸೃಷ್ಟಿಯಾಯಿತು. ಆಗಲೂ ಕೃಷ್ಣ ಕೊನೆಯದೊಂದು ಪ್ರಯತ್ನ ಮಾಡುತ್ತಾನೆ. ತಾಯಿಯಾದವಳು ಎಂದೂ ಯುದ್ಧ ಬೆಂಬಲಿಸಲಾರಳು ಎಂಬೊಂದು ನಂಬಿಕೆ ಕೃಷ್ಣನಿಗಿತ್ತೇನೋ. ಕುಂತಿಯನ್ನು ಕರ್ಣನ ಬಳಿಗೆ ಕಳಿಸುತ್ತಾನೆ. ಕರ್ಣ ಒಪ್ಪಿದರೆ ಅವನೇ ರಾಜನಾಗಬಹುದು, ಕೌರವ ಪಾಂಡವರನ್ನು ಆಳಬಹುದು, ಯುದ್ಧ ತಡೆಯಬಹುದು ಎಂಬ ಯೋಚನೆ.

ತಾಯ್ತನವನ್ನು ಈ ಲೋಕ ಸದಾ ಹಾಡಿ ಹೊಗಳುತ್ತಿರುತ್ತದೆ. ಭಾವುಕವಾಗುತ್ತದೆ. ಆದರೆ ಎಂದಾದರೂ ಈ ಲೋಕ, ಯುದ್ಧದ ಸನ್ನಿವೇಶ ಎದುರಾದಾಗ ತಾಯಂದಿರ ಹತ್ತಿರ ಯುದ್ಧ ಬೇಕೇ ಬೇಡವೇ ಎಂದು ಅಭಿಪ್ರಾಯ ಕೇಳಿದ್ದು ಇದೆಯೇ ಅಥವಾ ಜಗದ ತಾಯಂದಿರೆಲ್ಲ ಸೇರಿ ಯುದ್ಧ ಬೇಡವೇ ಬೇಡ ಎಂದರೆ ಅದು ಕೇಳಿಸಿಕೊಂಡೀತೇ? ತಾಯಿಗೆ ನಿಜವಾಗಿಯೂ ಈ ಆಯ್ಕೆ ಇದೆಯೇ? ಜಗದ ಆಯ್ಕೆಯನ್ನು ತಾಯಿ ಬೆಂಬಲಿಸಿದರೆ ಆಗ ಆಕೆ ಒಳ್ಳೆಯ ತಾಯಿ ಅನ್ನಿಸಿಕೊಳ್ಳುತ್ತಾಳೆಯೇ ಹೊರತು ತಾಯಿಯ ಆಯ್ಕೆಯನ್ನು ಜಗತ್ತು ಬೆಂಬಲಿಸುವುದನ್ನು ನಿರೀಕ್ಷಿಸಲಾಗುವುದಿಲ್ಲ.

ADVERTISEMENT

ಇತ್ತೀಚೆಗೆ ಬಾಲಾಕೋಟ್‌ ವಾಯುದಾಳಿಯ ನಂತರ ಪಾಕಿಸ್ತಾನದ ತಾಯಂದಿರು ಯುದ್ಧ, ಭಯೋತ್ಪಾದನೆ ವಿರೋಧಿಸಿ ಪ್ರತಿಭಟನೆ ಮಾಡಿದರು ಎಂಬ ಸುದ್ದಿ ಬಂದಿತ್ತು. ಇದು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಶಾಲೆಯ ಮಕ್ಕಳ ಮಾರಣಹೋಮದಂತಹ ಪರಿಣಾಮಗಳು ಅಲ್ಲಿನ ತಾಯಂದಿರಿಗೆ ಗೊತ್ತಿದೆ. ಅಲ್ಲಿನ ಸರ್ಕಾರದ, ಸೈನ್ಯದ ನಿರ್ಧಾರಕ್ಕಿಂತ ಅಲ್ಲಿನ ತಾಯಂದಿರ ನಿರ್ಧಾರ ಭಿನ್ನವಾದುದು. ಅವರಿಗೆ ಇದೆಲ್ಲದರಿಂದ ಮುಕ್ತಿ ಬೇಕಿದೆ. ಆ ತಾಯಂದಿರ ವಿವೇಕ ಅಲ್ಲಿನ ಸರ್ಕಾರ ಮತ್ತು ಸೈನ್ಯಕ್ಕೆ ಬಂದರೆ ಭಯೋತ್ಪಾದನೆಯಿಂದ ಪೀಡಿತವಾದ ಜನರು ನೆಮ್ಮದಿಯ ನಿಟ್ಟುಸಿರುಬಿಡಬಹುದು. ತಾಯಂದಿರು ಇಂತಹ ಪ್ರಯತ್ನವನ್ನು ಆಗಾಗ ಮಾಡಿದ್ದನ್ನು ಇತಿಹಾಸ ದಾಖಲಿಸಿದೆ.

ಅಮೆರಿಕವು ವಿಯೆಟ್ನಾಂ ಮೇಲೆ ಯುದ್ಧ ಆರಂಭಿಸಿದಾಗ, ಆಸ್ಟ್ರೇಲಿಯಾ ತಾನು ಅದರ ಮಿತ್ರ ರಾಷ್ಟ್ರವಾದ್ದರಿಂದ ತನ್ನ ಬೆಂಬಲ ಸೂಚಿಸಿ ತನ್ನ ಸೈನಿಕರನ್ನು ಅಲ್ಲಿಗೆ ಕಳುಹಿಸುವುದಾಗಿ ಹೇಳುತ್ತದೆ. ಆಗ ಆ ಸೈನಿಕರ ತಾಯಂದಿರು 1965ರಲ್ಲಿ ‘ಸೇವ್ ಅವರ್ ಸನ್ಸ್’ ಎಂಬ ಒಕ್ಕೂಟ ಸ್ಥಾಪಿಸಿ ಪ್ರತಿಭಟಿಸುತ್ತಾರೆ. ಯುದ್ಧದ ಬದಲಿಗೆ ಮಾತುಕತೆ ನಡೆಸಿ ಎನ್ನುತ್ತಾರೆ. ಇದೇ ಯುದ್ಧ ವಿರೋಧಿಸಿ ಅಮೆರಿಕದಲ್ಲೂ ತಾಯಂದಿರು ‘ಅನದರ್ ಮದರ್ ಫಾರ್ ಪೀಸ್’ ಎಂಬ ಗುಂಪನ್ನು 1967ರಲ್ಲಿ ಶುರು ಮಾಡಿದ್ದರು. 1976ರಿಂದ 83ರ ತನಕ ಅರ್ಜೆಂಟಿನಾದ ಮಿಲಿಟರಿ ಸರ್ವಾಧಿಕಾರದ ಆಡಳಿತದಲ್ಲಿ ‘ಕಾಣೆಯಾದ’ ತಮ್ಮ ಮಕ್ಕಳನ್ನು ಹುಡುಕಿಕೊಡಿ ಎಂಬ ಘೋಷಣೆ ಇಟ್ಟುಕೊಂಡು ಹೋರಾಡಿದ ತಾಯಂದಿರನ್ನು ‘ಪ್ಲಾಝಾ ಡಿ ಮಾಯೋದ ಅಮ್ಮಂದಿರು’ ಎಂದು ಕರೆಯುತ್ತಾರೆ. ಇದರ ನೇತೃತ್ವ ವಹಿಸಿದ ಮುಂಚೂಣಿ ನಾಯಕಿಯರಿಗೆ ಹಿಂಸೆ ನೀಡಿ ಕೊಲೆ ಮಾಡಲಾಯಿತು. ಕೆಲವರನ್ನು ಜೈಲಿಗೂ ಅಟ್ಟಲಾಯಿತು. ಆದರೆ ಅವರ ಮೌನ ಪ್ರತಿಭಟನೆ ಅಷ್ಟೇ ಪರಿಣಾಮವನ್ನೂ ಉಂಟು ಮಾಡಿ ಜಗತ್ತಿನಾದ್ಯಂತ ಮಾನವ ಹಕ್ಕುಗಳ ದಮನದ ವಿರುದ್ಧದ ಹೋರಾಟಕ್ಕೆ ಪ್ರೇರಣೆ ನೀಡಿತು.

1994ರಲ್ಲಿ ರಷ್ಯಾವು ಚೆಚನ್ಯಾದ ಮೇಲೆ ಯುದ್ಧ ಆರಂಭಿಸಿದಾಗ ರಷ್ಯಾದ ಸೈನಿಕರ ತಾಯಂದಿರು ಯುದ್ಧ ವಿರೋಧಿಸಲು ನಿರ್ಧರಿಸಿದರು. ಸುಮಾರು ನಾಲ್ಕಾರು ತಿಂಗಳು ಅವರು ಜಾಥಾ ನಡೆಸಿ, ಗಡಿಭಾಗದ ತನಕವೂ ಹೋದರು. ಗಡಿಯಾಚೆಯ ಚೆಚನ್ಯಾದ ತಾಯಂದಿರೂ ಇದನ್ನು ಬೆಂಬಲಿಸಿದ್ದು ವಿಶೇಷ. ಇಸ್ರೇಲ್ 1997ರಲ್ಲಿ ಲೆಬನಾನ್ ಮೇಲೆ ಯುದ್ಧ ಮಾಡಲು ಹೊರಟಾಗ 73 ಸೈನಿಕರ ಮರಣವಾಗುತ್ತದೆ. ಆಗ ‘ನಾಲ್ಕು ಜನಅಮ್ಮಂದಿರು’ ಪ್ರತಿಭಟನೆಯನ್ನು ಆರಂಭಿಸಿ ಮುನ್ನಡೆಸಿದರು. ಈ ಪ್ರತಿಭಟನೆ ಜನಪ್ರಿಯವಾಗಿ ನಂತರ ಇಸ್ರೇಲ್ ಸರ್ಕಾರ ಮಣಿದಿತ್ತು. ಆದರೆ, ಭಾರತದ ತಾಯಂದಿರೂ ಹೀಗೆ ಸಂದೇಶವೊಂದನ್ನು ಹೊತ್ತು ನಿಲ್ಲುವ ಅವಕಾಶ ಸದ್ಯದ ಸ್ಥಿತಿಯಲ್ಲಿ ಇದೆಯೇ? ಸುಮ್ಮನೇ ಒಮ್ಮೆ ಕಲ್ಪಿಸಿಕೊಳ್ಳಿ. ಕುಂತಿಯಂತಹ ಹೆಣ್ಣು ಮಗಳೊಬ್ಬಳು ಯುದ್ಧ ಬೇಡ ಎಂದರೆ ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲಾ ಕಮೆಂಟ್ ಬರಬಹುದು? ನಮ್ಮ ಶಬ್ದಕೋಶಗಳೇ ನಾಚಿ ಮುಖಮುಚ್ಚಿಕೊಳ್ಳಬಹುದು.

ಮಹಿಳಾ ದಿನಾಚರಣೆಯಂದು ‘ಪ್ರಜಾವಾಣಿ’ಯು ಸೈನಿಕರ ಅಮ್ಮಂದಿರನ್ನು ಮಾತಾಡಿಸಿದಾಗ ಅವರೆಲ್ಲರೂ ತಮ್ಮ ಮಕ್ಕಳ ಬಗೆಗೆ ಹೆಮ್ಮೆಯಿಂದ ಮಾತಾಡಿದ್ದರು. ಹಾಗೆಯೇ ಪ್ರತೀ ತಾಯಿಯೂ ಯುದ್ಧದ ವಾತಾವರಣ ಮೂಡಿದಾಗ ಆಗುವ ಆತಂಕವನ್ನೂ ಹಂಚಿಕೊಂಡಿದ್ದರು. ಇಂತಹ ಸನ್ನಿವೇಶದಲ್ಲಿ, ಫೋನ್ ಮಾಡಿದಾಗ ಆ ಕಡೆಯಿಂದ ಫೋನ್‍ಗೆ ಉತ್ತರ ಇಲ್ಲದಾಗ ನಿದ್ದೆ ಬರದ ಕ್ಷಣಗಳ ಬಗ್ಗೆ ಹೇಳಿಕೊಂಡಿದ್ದರು. ನಿಜ. ಸೈನ್ಯಕ್ಕೆ ಸೇರಿದ ಮೇಲೆ ಯುದ್ಧಕ್ಕೆ ಅಂಜಿಕೊಳ್ಳಲು ಆಗುವುದಿಲ್ಲ. ಆದರೆ, ಎಲ್ಲ ದೇಶಗಳೂ ಯುದ್ಧದ ಸನ್ನಿವೇಶ ನಿರ್ಮಾಣ ಆಗದಂತೆ ಎಚ್ಚರ ವಹಿಸಬೇಕಾದ್ದು ಅಷ್ಟೇ ಅವಶ್ಯಕ ಎನ್ನುವುದನ್ನು ಮರೆಯುವಂತಿಲ್ಲ.

ಮತ್ತೆ ಮಹಾಭಾರತಕ್ಕೆ ಮರಳಿದರೆ, ಅಭಿಮನ್ಯುವಿನ ಕೆಚ್ಚೆದೆಯ ಹೋರಾಟವನ್ನು ಮೆಚ್ಚಿ ದುರ್ಯೋಧನ, ‘ನಿನ್ನತಾಯಿ ನಿನ್ನನ್ನು ಮಾತ್ರ ಹೆರಲಿಲ್ಲ, ‘ವೀರ ಜನನಿ’ ಎಂಬಹೆಸರನ್ನೂ ಹೆತ್ತಳು’ ಎಂದುದಾಗಿ ಕವಿ ರನ್ನ ವರ್ಣಿಸುತ್ತಾನೆ. ಆದರೆ ಸ್ವತಃ ಸುಭದ್ರೆ ಇದನ್ನು ಹೇಳಿದಳೇ? ದಾಖಲೆ ಇಲ್ಲ. ಹಾಗೆ ನೋಡಿದರೆ ಇದು ಯುದ್ಧದ ಭೀಕರತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಇಷ್ಟೆಲ್ಲಾ ಆಗಿ ಕೊನೆಗೆ ಏನಾಗುತ್ತದೆ? ನೂರು ಹೆತ್ತ ಗಾಂಧಾರಿ ಮತ್ತು ಮೂರು ಹೆತ್ತ ಕುಂತಿ ಇಬ್ಬರೂ ವೈರಾಗ್ಯವಶರಾಗಿ ಕಾಡಿನೆಡೆಗೆ ಪಯಣ ಮಾಡುವಾಗ ಕಾಳ್ಗಿಚ್ಚಿಗೆ ಸಿಲುಕಿ ಮರಣ ಹೊಂದುತ್ತಾರೆ. ಕೃಷ್ಣ ಹೇಳಹೊರಟಿದ್ದು ಅದನ್ನೇ. ಯುದ್ಧ ಬೇಡವೆಂದರೂ ದುರ್ಯೋಧನನಂತಹ ಮೂರ್ಖರು ಯುದ್ಧದಾಹಿಗಳಾದಾಗ ಯುದ್ಧ ಅನಿವಾರ್ಯವೆಂಬ ಸನ್ನಿವೇಶ ಹುಟ್ಟುತ್ತದೆ. ಆಗ ಹೋರಾಡದೇ ನಡುವೆ ಬಿಡುವಂತಿಲ್ಲ. ದುರಂತಗಳನ್ನೂ ತಡೆಯುವಂತಿಲ್ಲ - ಜಗದ ಎಲ್ಲಾ ನಾಯಕರೇ, ವ್ಯಕ್ತಿಗತ ಲಾಭ, ನಷ್ಟಗಳ ಲೆಕ್ಕಾಚಾರ ಬಿಟ್ಟು ಒಮ್ಮೆ ಸೈನಿಕರ ತಾಯಂದಿರ ಮಾತಿಗೆ ಕಿವಿಗೊಡಿ- ವಿಶ್ವಮಾನವರಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.