ಮನುಷ್ಯರಿಗೆ ಅತೀ ಬೇಗ ಹತ್ತಿರವಾಗುವ ಅಥವಾ ಹೊಂದಿಕೊಳ್ಳುವ ಪ್ರಾಣಿಯೆಂದರೆ ನಾಯಿ. ಹಲವರ ಮನೆಯಲ್ಲಿ ನಾಯಿ ಅವರ ಮನೆಯ ಸದಸ್ಯನಂತಿರುತ್ತದೆ. ‘ನಾಯಿಮರಿಯ ಕೆಲವು ಸಾಮಾಜಿಕ ವರ್ತನೆಗಳು ನಮ್ಮನ್ನು ಗೊಂದಲಕ್ಕೆ ದೂಡಬಹುದು. ಆ ವರ್ತನೆಯಿಂದ ನಾವು ಕೋಪಗೊಳ್ಳಬಹುದು. ಅದರ ಬದಲು ನಾಯಿಯ ವರ್ತನೆಗಳನ್ನು ಅರ್ಥಮಾಡಿಕೊಂಡು, ಭಿನ್ನ ಸಂದರ್ಭದಲ್ಲಿ ಅವುಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು’ ಎನ್ನುತ್ತಾರೆ ನಾಯಿ ತರಬೇತುದಾರ ಶಿವಸ್ವಾಮಿ.
ನಾಯಿಮರಿಗಳಿಗೆ ಸಾಮಾನ್ಯವಾಗಿ ಗುಂಪಿನಲ್ಲಿರುವುದು ಇಷ್ಟವಾಗುತ್ತದೆ. ಅವು ಇತರ ನಾಯಿಗಳು, ಜನರು ಹಾಗೂ ಸಾಮಾಜಿಕವಾಗಿ ಅವುಗಳೊಂದಿಗೆ ಸಂವಹನ ನಡೆಸಲು ಸಿದ್ಧವಿರುವ ಯಾವುದೇ ಜೀವಿಗಳೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತವೆ. ಆದರೆ ಕೆಲವೊಮ್ಮೆ ನಾವು ಅದನ್ನು ಗೂಡಿನಲ್ಲಿ ಕೂಡಿ ಹಾಕುತ್ತೇವೆ, ಇದರಿಂದ ಅದರ ವರ್ತನೆಯಲ್ಲಿ ಬದಲಾವಣೆ ಕಾಣಬಹುದು. ನಿಮ್ಮ ಮುದ್ದಿನ ನಾಯಿಮರಿಯ ವರ್ತನೆಯ ಬದಲಾವಣೆಗೆ ಒಂಟಿತನವೇ ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ನಾಯಿಗಳು ವಸ್ತು, ಜೀವಿ ಯಾವುದೇ ಆಗಿರಲಿ ಮೂಸಿ ನೋಡುವ ಮೂಲಕ ಗುರುತು ಹಿಡಿಯುವ ಗುಣವನ್ನು ಹೊಂದಿವೆ. ಮನುಷ್ಯ ದೃಷ್ಟಿಯ ಮೂಲಕ ಗುರುತು ಹಿಡಿಯುವಂತೆ ಅವು ಮೂಸುವ ಮೂಲಕ ಗುರುತು ಹಿಡಿಯುತ್ತವೆ. ಮನುಷ್ಯನಿಗೆ ಒಳಗೇ ಕೂತು ಟಿವಿ ನೋಡುವುದು, ಮೊಬೈಲ್ ಬಳಕೆ ಇಷ್ಟವಾದರೆ ನಾಯಿಗಳಿಗೆ ಪಾರ್ಕ್‌ನಲ್ಲಿ, ಕಡಲ ಬದಿಯಲ್ಲಿ ತಿರುಗಾಡುವುದು ಇಷ್ಟವಾಗಬಹುದು. ‘ಆದರೆ ಗದ್ದಲ ಅವುಗಳಿಗೆ ಇಷ್ಟವಾಗದೇ ಇದ್ದಾಗ ಅವು ತಮ್ಮ ವರ್ತನೆಯಲ್ಲಿ ಬದಲಾವಣೆಯನ್ನು ತೋರುತ್ತವೆ. ಅಂತಹ ಸಂದರ್ಭದಲ್ಲಿ ಗದ್ದಲದಿಂದ ಅವುಗಳನ್ನು ದೂರ ಇರಿಸುವುದು ತುಂಬಾ ಮುಖ್ಯ’ ಎನ್ನುವುದು ಶಿವಸ್ವಾಮಿ ಅಭಿಪ್ರಾಯ.
ನಾಯಿಮರಿಗಳು ಗುಂಪಾಗಿ ಸೇರಿದಾಗ ಅವುಗಳು ಒಂದಾಗಿ ಆಟ ಆಡಲು, ಹೊಡೆದಾಡಿಕೊಳ್ಳಲು ಇಷ್ಟಪಡುತ್ತವೆ. ಇದರಿಂದ ಅವುಗಳ ನಡುವಿನ ಬಾಂಧವ್ಯವು ಹೆಚ್ಚುತ್ತದೆ. ಆದರೆ ಇತರ ನಾಯಿಮರಿಗಳ ಜೊತೆಗೆ ಆಡುವಾಗ ಅವುಗಳ ಮೇಲೆ ಗಮನ ಇಡಬೇಕು. ಯಾಕೆಂದರೆ ಕೆಲವೊಮ್ಮೆ ಅವು ತಮ್ಮ ಚೂಪಾದ ಹಲ್ಲುಗಳಿಂದ ಗಾಯ ಮಾಡುವುದು, ಉಗುರಿನಿಂದ ಪರಚುವುದು ಮಾಡಬಹುದು.
ನಾಯಿಗಳು ಪ್ರೀತಿ ವ್ಯಕ್ತಪಡಿಸುವಾಗ, ಸಂವಹನ ನಡೆಸುವಾಗ ಹೆಚ್ಚಾಗಿ ತಮ್ಮ ಮೂತಿಯನ್ನು ಬಳಸುತ್ತವೆ. ಆದರೆ ಅದನ್ನು ನಾವು ತಡೆಯಬಾರದು. ಜೊತೆಗೆ ಅದು ಅವುಗಳ ವರ್ತನೆ ಎಂದು ತಿಳಿದು ಸುಮ್ಮನಾಗಬೇಕು.
ನಾಯಿಗಳು ಎಲ್ಲೇ ಆಹಾರ ಸಿಕ್ಕರೂ ಅದನ್ನು ತಿನ್ನಲು ಕಾಯುತ್ತಿರುತ್ತವೆ. ಆದರೆ ಸಾಕುನಾಯಿಗಳಿಗೆ ನಾವು ಎಲ್ಲೆಂದರಲ್ಲಿ ಆಹಾರ ತಿನ್ನಲು ಬಿಡುವುದಿಲ್ಲ. ಇದು ಅವುಗಳ ಸ್ವಭಾವಕ್ಕೆ ಅಡ್ಡಿಪಡಿಸಿದಂತಾಗುತ್ತದೆ.
‘ನಾಯಿಮರಿಗಳು ಟೇಬಲ್, ಬೆಂಚ್, ಲಂಚ್‌ಬಾಕ್ಸ್ ಅಥವಾ ಅಡುಗೆಮನೆಯಲ್ಲಿರುವ ಕಸದ ತೊಟ್ಟಿ ಎಲ್ಲಾ ಕಡೆಯಲ್ಲೂ ಇರುವ ಆಹಾರವನ್ನು ಸೇವಿಸಲು ಇಷ್ಟಪಡುತ್ತವೆ. ಆದರೆ ಅದಕ್ಕೆ ಗದರುವುದಕ್ಕಿಂತ ಮೊದಲೇ ಆಹಾರ ಸಿಗುವಂತೆ ಒಂದೆಡೆ ಇರಿಸಿದರೆ ಉತ್ತಮ’ ಎನ್ನುತ್ತಾರೆ ಶಿವಸ್ವಾಮಿ.
ಸಾಮಾನ್ಯವಾಗಿ ನಾಯಿಗಳು ಅಪರಿಚಿತರು ಬಂದಾಗ ಬೊಗಳುತ್ತವೆ, ಕೆಲವೊಮ್ಮೆ ಕಚ್ಚಲು ಪ್ರಯತ್ನಿಸುತ್ತವೆ. ಮನೆಗೆ ಬಂದ ಅಪರಿಚಿತರನ್ನು ಅನುಮಾನದಿಂದ ನೋಡಿದಾಗ ಅಥವಾ ನಾವು ಇತರರ ಮನೆಗಳಿಗೆ ಕರೆತಂದಾಗ ನಮ್ಮ ನಾಯಿಗಳು ಹಗೆತನದಿಂದ ವರ್ತಿಸಿದಾಗ ನಾವು ಆಶ್ಚರ್ಯಪಡಬೇಕಾಗಿಲ್ಲ. ಅದು ಅವುಗಳ ವರ್ತನೆ ಎಂದು ಸುಮ್ಮನಾಗಬೇಕು, ಇಲ್ಲವೇ ಪ್ರೀತಿಯಿಂದ ಅದಕ್ಕೆ ಅರ್ಥ ಮಾಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.