ADVERTISEMENT

ಬಿಜೆಪಿ ಊರು ಭಂಗ: ಗಟ್ಟಿಯಾಯ್ತು ಮಿತ್ರರ ಸಂಗ

ವೈ.ಗ.ಜಗದೀಶ್‌
Published 6 ನವೆಂಬರ್ 2018, 10:12 IST
Last Updated 6 ನವೆಂಬರ್ 2018, 10:12 IST
ಉಪಚುನಾವಣೆ ವಿಜೇತರು... ಅನಿತಾ ಕುಮಾರಸ್ವಾಮಿ, ಆನಂದ್ ನ್ಯಾಮಗೌಡ, ಶಿವರಾಮೇಗೌಡ, ರಾಘವೇಂದ್ರ ಮತ್ತು ಉಗ್ರಪ್ಪ
ಉಪಚುನಾವಣೆ ವಿಜೇತರು... ಅನಿತಾ ಕುಮಾರಸ್ವಾಮಿ, ಆನಂದ್ ನ್ಯಾಮಗೌಡ, ಶಿವರಾಮೇಗೌಡ, ರಾಘವೇಂದ್ರ ಮತ್ತು ಉಗ್ರಪ್ಪ   

ಬೆಂಗಳೂರು: ರಾಜಕೀಯ ನಾಯಕರ ಲೆಕ್ಕಾಚಾರಗಳನ್ನು ಪುಡಿಗಟ್ಟುವ ರೀತಿಯೊಳಗೆ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್-ಕಾಂಗ್ರೆಸ್ ಮಿತ್ರಕೂಟದ ನಾಯಕರು ವಿರೋಧ ಪಕ್ಷ ಬಿಜೆಪಿಯ ತೊಡೆ ಮುರಿದಿದ್ದಾರೆ. ಲೋಕಸಭೆ ಚುನಾವಣೆಗೆ ಈ ಉಪ ಕಣ ‘ದಿಕ್ಸೂಚಿ’ ಎಂದು ಪ್ರತಿಪಾದಿಸುತ್ತಿದ್ದವರಿಗೆ ತಮ್ಮ ಒಲುವು-ನಿಲುವು ಏನೆಂದು ಮತದಾರರು ತೋರಿಸಿದ್ದಾರೆ.

ನಿರೀಕ್ಷೆಯಂತೆ ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಬೇರಿ ಬಾರಿಸಿದೆ. ಆದರೆ, ಕಾಂಗ್ರೆಸ್-ಬಿಜೆಪಿ ನಾಯಕರ ಭವಿಷ್ಯಕ್ಕೆ ಭಾಷ್ಯ ಬರೆಯಲಿರುವ ಬಳ್ಳಾರಿ, ಶಿವಮೊಗ್ಗ, ಜಮಖಂಡಿ ಕ್ಷೇತ್ರದ ಫಲಿತಾಂಶ ಎರಡು ಮಾತ್ರವಲ್ಲ; ಮೂರು ಪಕ್ಷಗಳ ನಾಯಕರಿಗೆ ತಮ್ಮ ‘ಶಕ್ತಿ’ ಏನು ಎಂಬುದನ್ನು ಬಿಚ್ಚು ತೋರಿಸಿದೆ. ಗೆಲುವಿನ ಅಂತರಗಳು ಹೆಚ್ಚು-ಕಡಿಮೆಯಾಗಿರುವುದು ಮೈತ್ರಿ ಕೂಟದ ನಾಯಕರ ವಿಶ್ವಾಸವನ್ನು ನೂರ್ಮಡಿಗೊಳಿಸಿದ್ದರೆ, ಬಿಜೆಪಿ ನಾಯಕರ ಜಂಘಾಬಲವನ್ನೇ ಉಡುಗಿಸಿದೆ.

ಶಿವಮೊಗ್ಗದಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಮತ್ತು ಪಕ್ಷದ ನಾಯಕ ಬಿ.ಎಸ್ .ಯಡಿಯೂರಪ್ಪ ಪಾರಾಗಿದ್ದಾರೆ. ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಉಳಿದ ಏಳೂ ಕಡೆ ಬಿಜೆಪಿ ಶಾಸಕರಿದ್ದಾರೆ. ಹಾಗಿದ್ದರೂ ಇಷ್ಟು ತಿಣುಕಾಟ ನಡೆಸಿ, ಅಹೋರಾತ್ರಿ ನಿದ್ದೆಗೆಟ್ಟು ಗೆಲುವನ್ನು ಪಡೆದಿರುವುದು ಬಿಜೆಪಿ ಬಲ ಅಪೂಟು ಕುಗ್ಗಿರುವುದರ ಹಾಗೂ ಮಿತ್ರರ ಜೋಡಿಗೆ ಜನಬಲ ಇರುವುದರ ಸಂಕೇತದಂತಿದೆ.

ADVERTISEMENT
ಶಿವಮೊಗ್ಗದಲ್ಲಿ ಬಿಜೆಪಿಗೆ ಪ್ರಯಾಸದ ಗೆಲುವು

ಮೈತ್ರಿಕೂಟ ಗಟ್ಟಿ

ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸರ್ಕಾರ ರಚಿಸುವ ವಿಫಲ ಯತ್ನ ನಡೆಸಿ ವಿಫಲವಾಯಿತು. ಬಳಿಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಐದು ತಿಂಗಳಿನಲ್ಲಿ ಸುಮಾರು 3 ತಿಂಗಳ ಕಾಲ ಸರ್ಕಾರ ಆಗ ಬೀಳುತ್ತದೆ, ಈಗ ಬೀಳುತ್ತದೆ ಎಂಬ ಆತಂಕದ ವಾತಾವರಣವೇ ಇತ್ತು. ಬಿಜೆಪಿ ಹಲವು ಬಾರಿ ಆಪರೇಷನ್ ಕಮಲದ ಯತ್ನ ನಡೆಸಿ, ಮುಗ್ಗರಿಸಿತು. ಅಷ್ಟರಲ್ಲಿ ಐದು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಯಿತು. ಹೀಗಾಗಿ, ಎಲ್ಲರ ದೃಷ್ಟಿ ಚುನಾವಣೆ ಮೇಲೆ ಬಿದ್ದು,ಸರ್ಕಾರದ ಪತನದ ಯತ್ನಕ್ಕೆ ತಾತ್ಕಾಲಿಕ ತಡೆಯಾಯಿತು.

‘ತಮಗೆ ಜನಾದೇಶ ಇದ್ದರೂ ಅಧಿಕಾರದ ಆಸೆಯಿಂದ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್-ಕಾಂಗ್ರೆಸ್ ನಾಯಕರು ಆಳ್ವಿಕೆ ನಡೆಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ’ಎಂದು ಬಿಜೆಪಿ ನಾಯಕರು ಆಡಿಕೊಂಡರು.

ಚುನಾವಣೆ ಫಲಿತಾಂಶದ ದಿನವೇ ಸರ್ಕಾರ ಪತನವಾಗಲಿದೆ ಎಂದು ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಭವಿಷ್ಯವನ್ನೂ ನುಡಿದರು. ಮೈತ್ರಿಗೆ ಜನರ ಸಹಮತವಿಲ್ಲ ಎಂಬುದು ಇವರ ಬಲವಾದ ಅಭಿಪ್ರಾಯವಾಗಿತ್ತು. ಆದರೆ, ಚುನಾವಣೆ ಫಲಿತಾಂಶವನ್ನು ಆಮೂಲಾಗ್ರ ಪರಿಶೀಲಿಸಿದರೆ ಮೈತ್ರಿ ಸರ್ಕಾರಕ್ಕೆ ಜನರ ವಿರೋಧವಿಲ್ಲ ಎಂಬುದು ತೋರುತ್ತದೆ.

ಅನಿರೀಕ್ಷಿತವಾಗಿ ಬಂದೆರಗಿದ ಲೋಕಸಭೆ ಚುನಾವಣೆಗೆ ಯಾವ ಪಕ್ಷಗಳೂ ಸಿದ್ದವಿರಲಿಲ್ಲ. ಚುನಾವಣೆ ಘೋಷಣೆಯಾಗಿ ಇನ್ನೇನು ನಾಮಪತ್ರ ಸಲ್ಲಿಸುವ ಹಿಂದಿನ ದಿನವಷ್ಟೇ ಅಭ್ಯರ್ಥಿ ಯಾರೆಂದು ನಿಕ್ಕಿಯಾಯಿತು. ಹಾಗಿದ್ದರೂ ಬಿಜೆಪಿ ಭದ್ರಕೋಟೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ನೀಡಿದ ಪೈಪೋಟಿಯನ್ನು ಅವಲೋಕಿಸಿದರೆ, ಜನರ ಅಭಿಮತದ ಅಲೆ ಬಿಜೆಪಿ ಮತ್ತು ಅದರ ನಾಯಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ಧವಾಗಿರುವಂತೆ ಗೋಚರಿಸುತ್ತದೆ.

ಅನುಕಂಪದ ಅಲೆಯಲ್ಲಿ ದಡ ಸೇರಿದಆನಂದ್ ನ್ಯಾಮಗೌಡ

ಈ ಫಲಿತಾಂಶವು ರಾಜ್ಯದ ಮೈತ್ರಿ ಸರ್ಕಾರದ ಭಾಗಿದಾರರಾಗಿರುವ ಜೆಡಿಎಸ್-ಕಾಂಗ್ರೆಸ್ ನಾಯಕರನ್ನು ಸದ್ಯಕ್ಕಂತೂ ಮೇಲ್ನೋಟಕ್ಕೆ ಒಂದುಗೂಡಿಸಿದೆ. ಪ್ರಧಾನಿ ಮೋದಿ ಅವರನ್ನು ಪಟ್ಟದಿಂದ ಕೆಳಕ್ಕಿಳಿಸಿ, ಪರ್ಯಾಯ ಶಕ್ತಿಯೊಂದನ್ನು ಅಧಿಕಾರಕ್ಕೆ ತರಬೇಕು ಎನ್ನುವ ಮೋದಿ ವಿರೋಧಿಗಳಿಗೆ ಬಲವನ್ನೂ ನೀಡಿದೆ. ಸಿದ್ದರಾಮಯ್ಯ-ಕುಮಾರಸ್ವಾಮಿ ಅವರ ಮಧ್ಯೆ ಇರುವ ಭಿನ್ನಮತ-ಹಗೆತನವನ್ನು ಲೋಕಸಭೆ ಚುನಾವಣೆವರೆಗೆ ಹೋಗಲಾಡಿಸಲು ಇದು ದಾರಿ ಮಾಡಿಕೊಡಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫರ್ಮಾನಿನಂತೆ ಇಬ್ಬರೂ ಹೆಗಲಿಗೆ ಹೆಗಲುಕೊಟ್ಟು ದುಡಿಯಲು ಪ್ರೇರಣೆ ಒದಗಿಸಬಹುದಾದ ಸಾಧ್ಯತೆಯನ್ನೂ ಹೆಚ್ಚಿಸಿದೆ.

ಒಂದಾಗಿ ದುಡಿದರೆ ಬಿಜೆಪಿಯನ್ನು ಮಣಿಸಬಹುದು ಎಂಬ ಲೆಕ್ಕಾಚಾರಕ್ಕೆ ಇದು ಸಾಕ್ಷಿಯೂ ಆಗಿದೆ. ಹೀಗಾಗಿ, ಏನೇ ಭಿನ್ನಾಭಿಪ್ರಾಯ, ವೈಮನಸ್ಸುಗಳಿದ್ದರೂ ಲೋಕಸಭೆ ಚುನಾವಣೆಯವರೆಗೂ ಮರೆತು ದುಡಿಯೋಣ ಎಂಬ ಸಂಕಲ್ಪ ಮಾಡಲು ಉಭಯ ಪಕ್ಷದ ನಾಯಕರಿಗೆ ಇದು ಅವಕಾಶವನ್ನೂ ಒದಗಿಸಿದೆ. ಇನ್ನು ಆರು ತಿಂಗಳ ಮಟ್ಟಿಗಾದರೂ ಸ್ಥಿರ ಸರ್ಕಾರ ಇರಲಿದೆ ಎಂಬ ಆಶಾಭಾವಕ್ಕೂ ಇದು ಕಾರಣವಾಗಿದೆ.

ಉಪ ಚುನಾವಣೆಗೆ ಬಿಜೆಪಿ ಕೂಡ ಸಜ್ಜಾಗಿರಲಿಲ್ಲ; ಕರ್ನಾಟಕದಲ್ಲಿ ಪಕ್ಷದ ಸಾಮರ್ಥ್ಯ ಹೇಗಿದೆ ಎಂಬ ಕುಟುಕು ಪರೀಕ್ಷೆ ನಡೆಸಲು ಅಮಿತ್ ಶಾಗೆ ಇದು ಅವಕಾಶ ಒದಗಿಸಿತು. ಈ ಚುನಾವಣೆಯ ಹಿನ್ನಡೆಯು ಬಿಜೆಪಿಗೆ ಪಾಠವಾಗಿದೆ. ಹೀಗಾಗಿ, ಲೋಕಸಭೆಯ ಮಹಾ ಚುನಾವಣೆಗೆ ತಂತ್ರಗಳನ್ನು ಬದಲಿಸಲು ಇದು ಕಾರಣವಾಗಲೂಬಹುದು.

ಬಳ್ಳಾರಿಯಲ್ಲಿ ದಾಖಲೆ ಬರೆದ ಉಗ್ರಪ್ಪ

ತರ್ಕಕ್ಕೆ ನಿಲುಕದ ಮತದಾರರ ಮನದಾಳ

ಬಳ್ಳಾರಿ ಲೋಕಸಭೆ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಜೆ. ಶಾಂತ ಅಥವಾ ಎನ್.ವೈ. ಹನುಮಂತಪ್ಪ ಕಣದಲ್ಲಿ ಇಳಿಯುವ ಅಂದಾಜಿತ್ತು. ಆದರೆ, ಎದುರಾಳಿ ಕಾಂಗ್ರೆಸ್ ನಿಂದ ಯಾರು ಅಭ್ಯರ್ಥಿ ಎಂಬುದು ಖಚಿತವಾಗಿರಲಿಲ್ಲ. ಬಳ್ಳಾರಿ ಗ್ರಾಮೀಣ ಭಾಗದ ಶಾಸಕ ಬಿ. ನಾಗೇಂದ್ರ ಅವರ ಸೋದರ ವೆಂಕಟೇಶ್ ಪ್ರಸಾದ್ ಅವರನ್ನು ಕಣಕ್ಕೆ ಇಳಿಸುವ ಚಿಂತನೆ ನಡೆದಿತ್ತು. ಆದರೆ, ನಾಗೇಂದ್ರ ವಿರೋಧಿ ಬಣದ ಶಾಸಕರು ಕೈ ಕೊಡಲಿದ್ದಾರೆ ಎಂಬ ತರ್ಕದಲ್ಲಿ ಕೊನೆಕ್ಷಣದಲ್ಲಿ ತಂತ್ರ ಬದಲಾಯಿತು . ಸಿದ್ದರಾಮಯ್ಯನವರ ಆಪ್ತರೂ ಆಗಿರುವ ವಿ.ಎಸ್. ಉಗ್ರಪ್ಪ ಅವರನ್ನು ಕಣಕ್ಕೆ ಇಳಿಸುವ ಚಿಂತನೆ ಮೊಳತಿದ್ದೇ ತಡ, ಚುನಾವಣಾ ಉಸ್ತುವಾರಿಯನ್ನು ಸಚಿವ ಡಿ.ಕೆ. ಶಿವಕುಮಾರ್ ಹೆಗಲಿಗೆ ಹಾಕಲಾಯಿತು.ಸಿದ್ದರಾಮಯ್ಯ-ಶಿವಕುಮಾರ್ ಜೋಡಿ ರಂಗಕ್ಕೆ ಇಳಿದುದಲ್ಲದೇ, ಎಲ್ಲ ಭಿನ್ನಮತವನ್ನೂ ಹೋಗಲಾಡಿಸಿ ಒಂದು ಶಕ್ತಿಯಾಗಿ ದುಡಿಯಲು ಅಣಿಯಾಯಿತು.

ಇದರ ಫಲವಾಗಿ, ಜೆ. ಶಾಂತಾಎದುರು ಉಗ್ರಪ್ಪ ಅವರು ಸುಮಾರು 2 ಲಕ್ಷ ಮತಗಳ ಅಂತರದಿಂದ ಭರ್ಜರಿ ವಿಜಯ ಸಾಧಿಸಿದ್ದಾರೆ. ಶಾಂತ ಸುಮಾರು 3 ಲಕ್ಷ ಮತಗಳನ್ನು ಪಡೆದಿದ್ದಾರೆ. ವಾಲ್ಮೀಕಿ ಸಮುದಾಯದ ನಾಯಕ ತಾನೆಂಬ ಶ್ರೀರಾಮುಲು ಹಮ್ಮಿಗೆ ಅದೇ ಸಮುದಾಯದ ವಿ.ಎಸ್. ಉಗ್ರಪ್ಪ ಛಡಿಯೇಟು ಕೊಟ್ಟಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಮತ್ತೆ ಹಸ್ತ ರಾರಾಜಿಸಿದೆ.

ಮಂಡ್ಯದಲ್ಲಿ ಶಿವರಾಮೇಗೌಡ ಗೆಲುವಿನ ನಗು

ಇನ್ನು ಶಿವಮೊಗ್ಗಕ್ಕೆ ಬಂದರೆ ಸುಮಾರು 52 ಸಾವಿರ ಮತಗಳ ಅಂತರದಿಂದ ಬಿಜೆಪಿಯ ಬಿ.ವೈ. ರಾಘವೇಂದ್ರ ಗೆದ್ದಿದ್ದಾರೆ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಯಡಿಯೂರಪ್ಪ 3.60 ಲಕ್ಷ ಮತಗಳ ಅಂತರದಿಂದ ವಿಜೇತರಾಗಿದ್ದರು. ಆದರೆ, 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿಯಿಂದ ಯಡಿಯೂರಪ್ಪ ಗೆದ್ದಿದ್ದು ಬಿಟ್ಟರೆ, ಯಾರೊಬ್ಬರೂ ಬಿಜೆಪಿ ಶಾಸಕರಿರಲಿಲ್ಲ. ಉಳಿದ ಏಳು ಕ್ಷೇತ್ರಗಳಲ್ಲಿ 4 ಕಾಂಗ್ರೆಸ್ ‍ಹಾಗೂ 3 ಜೆಡಿಎಸ್ ಶಾಸಕರಿದ್ದರು. ಹಾಗಿದ್ದರೂ ಅಭೂತಪೂರ್ವ ಗೆಲುವು ಸಾಧಿಸುವಲ್ಲಿ ಯಡಿಯೂರಪ್ಪ ಯಶ ಕಂಡಿದ್ದರು.

ಈಗಿನ ಪರಿಸ್ಥಿತಿ ಹಾಗಿಲ್ಲ; ಎಂಟು ಕ್ಷೇತ್ರಗಳ ಪೈಕಿ 1 ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಜೆಡಿಎಸ್‌ನಒಬ್ಬರೂ ಶಾಸಕರಿಲ್ಲ. ಏಳು ಬಿಜೆಪಿ ಶಾಸಕರು, ಯಡಿಯೂರಪ್ಪ, ಈಶ್ವರಪ್ಪ, ಆಯನೂರು ಮಂಜುನಾಥರಂತಹ ನಾಯಕರೂ ಇದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ಹಿಂದಿನ ದಿನ ಮಧ್ಯರಾತ್ರಿಯವರೆಗೂ ಇಲ್ಲಿ ಅಭ್ಯರ್ಥಿ ಯಾರೆಂದು ನಿಗದಿಯಾಗಿರಲಿಲ್ಲ. ವಿದೇಶ ಪ್ರವಾಸದಲ್ಲಿದ್ದ ಮಧು ಬಂಗಾರಪ್ಪ ಅವರನ್ನು ಕರೆಯಿಸಿಕೊಂಡ ಜೆಡಿಎಸ್ ವರಿಷ್ಠ ದೇವೇಗೌಡರು, ಬಿ ಫಾರಂ ನೀಡಿ ಚುನಾವಣಾ ಕಣಕ್ಕೆ ತಳ್ಳಿದರು.ನಾಮಪತ್ರ ಸಲ್ಲಿಸಿದ ಬಳಿಕವಷ್ಟೇ ಮಧು ರಂಗಕ್ಕೆ ಧುಮುಕಿದರು. ಹಾಗಿದ್ದರೂ ತೀವ್ರ ಪೈಪೋಟಿ ನೀಡಿ ಸೋಲು ಕಂಡಿದ್ದಾರೆ. ಯಡಿಯೂರಪ್ಪನವರು ಗೆದ್ದ ಅಂತರಕ್ಕೆ ಹಾಗೂ ಆಗಿನ ಪರಿಸ್ಥಿತಿಗೆ ಹೋಲಿಸಿದರೆ ಮಧು ಸೋಲು, ಸೋಲಲ್ಲ. ತಿಂಗಳ ಮೊದಲು ಅಭ್ಯರ್ಥಿಖಚಿತವಾಗಿದ್ದರೆ ಬಿಜೆಪಿಯ ಕಮಲ ಮುದುಡುವ ಸಾಧ್ಯತೆಯೂ ಇತ್ತು.

ತೀವ್ರ ಪೈಪೋಟಿ ಇದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. 2018ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಸಿದ್ದು ನ್ಯಾಮಗೌಡ, ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಮಧ್ಯೆ ಸ್ಪರ್ಧೆ ನಡೆದಿತ್ತು. ಬಿಜೆಪಿ ಶಾಸಕ ಮುರುಗೇಶ ನಿರಾಣಿ ಸೋದರ, ಸಂಗಮೇಶ ನಿರಾಣಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಆ ಚುನಾವಣೆಯಲ್ಲಿ ತೀವ್ರ ಹಣಾಹಣಿ ಮಧ್ಯೆ 2795 ರಷ್ಟು ಅಲ್ಪಮತಗಳಿಂದ ಸಿದ್ದು ನ್ಯಾಮಗೌಡ ಗೆದ್ದಿದ್ದರು. ಆದರೆ, ಅಪಘಾತದಲ್ಲಿ ಅವರು ಮರಣ ಹೊಂದಿದ್ದರಿಂದಾಗಿ ಇಲ್ಲಿ ಉಪ ಚುನಾವಣೆ ನಡೆಯಿತು.

ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲುವಿನ ಅಂತರ ಕುಸಿತ

ಈ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದ ಎಲ್ಲ ಗೊಂದಲಗಳನ್ನೂ ಪಕ್ಷದ ನಾಯಕರು ನಿವಾರಿಸಿದ್ದರು. ಸಂಗಮೇಶ ನಿರಾಣಿ ಅವರು ಶ್ರೀಕಾಂತ ಕುಲಕರ್ಣಿ ಪರ ಓಡಾಡುವುದಾಗಿ ವಾಗ್ದಾನ ಮಾಡಿದ್ದರು. ಆಕಾಂಕ್ಷಿಗಳಾಗಿದ್ದ ಇನ್ನಿಬ್ಬರು ಬಿಜೆಪಿ ಅಭ್ಯರ್ಥಿಗಳನ್ನೂ ಓಲೈಸಲಾಗಿತ್ತು. ಈ ಎಲ್ಲ ಒಳ ಹೊಂದಾಣಿಕೆಯಿಂದಾಗಿ ಈಗಿನ ಕಾಂಗ್ರೆಸ್ ಅಭ್ಯರ್ಥಿ, ಸಿದ್ದು ನ್ಯಾಮಗೌಡರ ಪುತ್ರ ಆನಂದ್ ಗೆಲ್ಲುವುದೇ ಕಷ್ಟ ಎಂಬ ವಾತಾವರಣ ಇತ್ತು. ಆದರೆ 36 ಸಾವಿರ ಮತಗಳಿಂದ ಅವರು ಗೆದ್ದಿದ್ದಾರೆ. ಸುತ್ತಮುತ್ತಲ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವಿದ್ದು, ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆಯಿದ್ದರೂ ಶ್ರೀಕಾಂತ ಕುಲಕರ್ಣಿ ಅವರ ಕೈಯನ್ನು ಮತದಾರ ಹಿಡಿಯಲಿಲ್ಲ. ತಂದೆಯ ಸಾವಿನ ಅನುಕಂಪದ ಅಲೆ ಹಾಗೂ ಕಾಂಗ್ರೆಸ್ ನಾಯಕರ ಒಗ್ಗಟ್ಟು ಈ ಚುನಾವಣೆಯಲ್ಲಿ ಕೆಲಸ ಮಾಡಿದೆ. ಇದು ಬಿಜೆಪಿಗೆ ಪಾಠವೂ ಆಗಿದೆ.

ಮಂಡ್ಯ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಜೆಡಿಎಸ್‌ನಎಲ್.ಆರ್. ಶಿವರಾಮೇಗೌಡ ಗೆದ್ದಿದ್ದಾರೆ. ಆದರೆ, ಕೊನೆಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ, ಕ್ಷೇತ್ರದಲ್ಲಿ ಅಪರಿಚಿತರೇ ಆಗಿದ್ದ ಡಾ. ಸಿದ್ದರಾಮಯ್ಯ 2 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದಾರೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಇದ್ದಾರೆ. ಹಾಗಿದ್ದರೂ ಇಷ್ಟು ದೊಡ್ಡ ಮಟ್ಟದಮತ ಬಿಜೆಪಿ ಪಾಲಾಗಿರುವುದು, ಬಿಜೆಪಿ ಬಗೆಗಿನ ಒಲವು ಇಲ್ಲಿ ಹೆಚ್ಚುತ್ತಿರುವುದರ ದ್ಯೋತಕವಾಗಿದೆ. ಜೆಡಿಎಸ್‌ನಏಳು ಸುತ್ತಿನ ಕೋಟೆಯೊಳಗೆ ಬಿಜೆಪಿ ಕಾಲಿಟ್ಟು, ಸಡ್ಡು ಹೊಡೆದಿದೆ. ಇದು ಹಳೆ ಮೈಸೂರು ಭಾಗದಲ್ಲಿ ಕಮಲದ ಪ್ರಭಾವ ಬೆಳೆಯುತ್ತಿರುವುದರ ಸೂಚನೆಯೂ ಹೌದು.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕಣದಿಂದ ನಿವೃತ್ತರಾದರೂ 10 ಸಾವಿರಕ್ಕೂ ಹೆಚ್ಚು ಮತ ಪಡೆದಿರುವುದು ವಿಶೇಷ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪತಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ. ಇದು ಕೈ-ತೆನೆಯ ಫಲ. ಆದರೆ, ಬಿಜೆಪಿ ಮೊಳೆತಿರುವುದು ಹೊಸ ಬೆಳವಣಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.