ADVERTISEMENT

ವಿಶ್ಲೇಷಣೆ | ಮಡಿಲಿನ ಮಮತೆಯ ಅನುದಿನದ ಸ್ವಾತಂತ್ರ್ಯ

ಹೆಣ್ಣು ಕಟ್ಟಿದ ಹಾದಿಯೇಕೆ ಬಹುಜನರ ಕಣ್ಣು ತೆರೆಸುತ್ತಿಲ್ಲ? ಹೆಣ್ಣು ಕೂಡಾ ಇದನ್ನು ಮರೆಯುತ್ತಿರುವಳೇ?

ಸಬಿತಾ ಬನ್ನಾಡಿ
Published 18 ಆಗಸ್ಟ್ 2022, 22:25 IST
Last Updated 18 ಆಗಸ್ಟ್ 2022, 22:25 IST
   

ಸ್ವಾತಂತ್ರ್ಯ ಎನ್ನುವುದು ಒಂದು ಕಲ್ಪನೆಯೋ ವಾಸ್ತವವೋ ಎಂಬುದೇ ಒಂದು ಸೋಜಿಗದ ಸಂಗತಿ. ಭಾರತವೆಂದರೆ ಅದರ ಗಡಿಗಳು ಮಾತ್ರವಲ್ಲದೆ ಅಲ್ಲಿ ವಾಸಿಸುವ ಜನರೂ ಆಗಿರುತ್ತಾರಾದ್ದರಿಂದ ಅಲ್ಲಿನ ಜನರ ಅನುಭವಗಳೇನು? ಸ್ವಾತಂತ್ರ್ಯವು ವಾಸ್ತವಿಕ ಅನುಭವಗಳಾಗುವಲ್ಲಿ ಹೆಂಗಸರು ಜಗತ್ತಿಗೆ ತೋರಿದ ದಾರಿ ಯಾವುದು? ಅದನ್ನು ಸ್ವತಃ ಈ ಕಾಲದ ಹೆಂಗಸರು ಕಂಡುಕೊಳ್ಳಲು ಸಾಧ್ಯವಾಗಿದೆಯೇ? ಹೆಂಗಸರು ಮತ್ತು ಗಂಡಸರು ಇದನ್ನು ಸ್ವೀಕರಿಸಲು ಸಾಧ್ಯವಿಲ್ಲವೇ? ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಈ ಸಂದರ್ಭದಲ್ಲಿ ಈ ಬಗ್ಗೆ ನಾವು ಚಿಂತಿಸಬೇಕಿರುವುದು ಇಂದಿನ ತುರ್ತು ಕೂಡಾ ಹೌದು.

ತೋಳ್ಬಲದ ಆಡಳಿತದ ಮಾದರಿಗೆ ಭಿನ್ನವಾಗಿ ಹೆಣ್ಣು ರೂಪಿಸಿಕೊಟ್ಟ, ಹೆಣ್ಣು ಆಚರಿಸಿದ, ಇಂದಿಗೂ ಆಚರಿಸುತ್ತಿರುವ, ಆದರೆ ಮುನ್ನೆಲೆಗೇ ಬರದ, ಮೌಲ್ಯವಾಗಿ ರೂಪುಗೊಳ್ಳದ, ಗಂಡು ಹೆಣ್ಣುಗಳೆಲ್ಲರೂ ಅಳವಡಿಸಿಕೊಳ್ಳಬೇಕಾದ ಎಲ್ಲರ ಬದುಕಿನ ಕ್ರಮವೊಂದನ್ನು ಅಧಿಕೃತಗೊಳಿಸುವುದರ ಬಗೆಗೊಂದು ಖಚಿತತೆಯನ್ನು ಹೆಂಗಸರೂ ಗಂಡಸರೂ ಬೆಳೆಸಿಕೊಳ್ಳಬೇಕಿದೆ. ಇದು ಮಾನವ ಬದುಕಿಗೆ ಹೆಣ್ಣು ತೋರುವ ದಾರಿ ಮತ್ತು ಜಗತ್ತು ಸ್ವೀಕರಿಸಬೇಕಾದ ದಾರಿಯೇ ವಿನಾ ಹೆಣ್ಣಿನ ದಾರಿ ಮಾತ್ರವೆಂಬ ಸೀಮಿತತೆಯನ್ನು ಆರೋಪಿಸಿ ಅಪಮೌಲ್ಯಗೊಳಿಸುವುದನ್ನು ತಡೆಯಬೇಕಿದೆ.

ಇತಿಹಾಸದಲ್ಲಿ ಈ ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಅಳವಡಿಸಿಕೊಂಡವರು ಗಾಂಧೀಜಿ. ಭಾರತದಾದ್ಯಂತದ ಪ್ರಾಂತೀಯ ರಾಜರುಗಳನ್ನು ಆಡಳಿತದಿಂದ ಕೆಳಗಿಳಿಸಿ, ತಮ್ಮ ಆಣತಿಯಂತೆ ಆಳುವವರನ್ನು ಕೂರಿಸಿ, ಸಾಮ, ದಾನ, ಭೇದ, ದಂಡಗಳಿಂದ ತಮ್ಮಂತೆ ಆಗಿಸಿಕೊಂಡು ಆನೆಯಂತೆ ಬಲಿಷ್ಠರಾಗಿದ್ದ ಬ್ರಿಟಿಷರ ವಿರುದ್ಧ ಇರುವೆಯಂತೆ ಹೋರಾಟವನ್ನು ಯೋಜಿಸಿದ, ದೈಹಿಕವಾಗಿ ಅತಿ ದುರ್ಬಲರಾಗಿದ್ದ ಗಾಂಧೀಜಿ, ಆರಂಭದಲ್ಲಿ ಎಲ್ಲ ಗಂಡಸರಂತೆ ಹೆಂಗಸರ ಬಗೆಗೆ ಸಾಂಪ್ರದಾಯಿಕವಾಗಿದ್ದತಮ್ಮ ಚಿಂತನೆಗಳನ್ನು ಕ್ರಮೇಣ ಬದಲಿಸಿಕೊಂಡರು ಹಾಗೂ ಪೊರೆಯುವ ಹೆಣ್ಣುನೋಟಗಳನ್ನು ಸ್ವಾತಂತ್ರ್ಯ ಹೋರಾಟದ ತಂತ್ರಗಾರಿಕೆಯಾಗಿ ಚಲಾಯಿಸಿದರು.

ADVERTISEMENT

ಅಹಿಂಸೆ, ಉಪವಾಸ, ನೂಲುವುದು, ಚಳವಳಿಯಲ್ಲಿ ಹೆಂಗಸರನ್ನು ಜೊತೆಗಾರರನ್ನಾಗಿಸಿಕೊಂಡಿದ್ದು, ಆಶ್ರಮಗಳಲ್ಲಿಯೂ ಹೆಂಗಸರಿಗೆ ಸಮಾನ ಪಾಲ್ಗೊಳ್ಳುವಿಕೆ ಇವೆಲ್ಲವೂ ಮಹಿಳೆಯರಿಂದ ಪಡೆದ ಮಾದರಿ. ಇದನ್ನು ಪಡೆಯಲು ಮೊದಲು, ಮನೆಯೊಳಗೆ ಅವಳು ಆಡಳಿತವನ್ನು ನಿರ್ವಹಿಸಿದ ಕ್ರಮವನ್ನು ಸ್ವತಃ ಆಚರಿಸಿ ನೋಡುವ ಗಾಂಧಿ, ಕಸ್ತೂರಬಾ ಅವರ ಎರಡು ಬಾಣಂತನಗಳ ಎಲ್ಲಾ ಕೆಲಸಗಳನ್ನು ತಾವೇ ಮಾಡುವುದಲ್ಲದೆ ಉಳಿದ ಮಕ್ಕಳ ಪಾಲನೆ, ಅಡುಗೆ, ಸ್ವಚ್ಛತೆ ಎಲ್ಲವನ್ನೂ ಮಾಡುತ್ತಾರೆ. ಇದು ಬಯಸುವ ಶ್ರಮ, ತಾಳ್ಮೆಯು‌ ಜವಾಬ್ದಾರಿಯ ಅರಿವನ್ನು ಮೂಡಿಸುವುದರೊಂದಿಗೆ, ಗಂಡಸಿಗೆ– ಅವನ ಪ್ರತಿಷ್ಠೆಗೆ ತೊಡಕು ಎಂದು ತಪ್ಪಾಗಿ ಬೋಧಿಸಿದ ಅಹಂಕಾರದಿಂದ ಬಿಡುಗಡೆಯನ್ನೂ ನೀಡುತ್ತದೆ. ದೇಶದ ಸ್ವಾತಂತ್ರ್ಯದ ಯಶಸ್ಸಿಗೆ ಇದು ಕೊಡುಗೆಯಾದಂತೆಯೇ ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ, ಧಾರ್ಮಿಕ ಸಂಸ್ಥೆಗಳ ನಿರ್ಮಾಣ ಮತ್ತು ಬೆಳವಣಿಗೆಗಳಲ್ಲಿ ಹೆಣ್ಣಿನ ಕಣ್ನೋಟ ಮತ್ತು ಸಾಧ್ಯತೆಗಳು ಅಂತರ್ಗತವಾಗಬೇಕಿತ್ತು.

ಅಂಬೇಡ್ಕರ್ ನೇತೃತ್ವದ, 14 ಜನ ಹೆಂಗಸರೂ ಸದಸ್ಯರಾಗಿದ್ದ ಸಮಿತಿ ರೂಪಿಸಿದ ಸಂವಿಧಾನದಲ್ಲಿಇದರ ಸಾಧ್ಯತೆಯ ಹೆಜ್ಜೆಗಳಿದ್ದವು. ಗಾಂಧಿಯದು ಮಾನಸಿಕ ತಯಾರಿಯ ಮಧ್ಯಮವರ್ಗದ ದಾರಿಯಾಗಿತ್ತು. ಆದರೆ ಅಂಬೇಡ್ಕರ್‌ ಅವರದ್ದು ಸಂಪೂರ್ಣ ಪ್ರಾಯೋಗಿಕ ದಾರಿ. ಹೆಂಗಸರು ಒಳಹೊರಗೆ ದುಡಿಯುವುದು ಅತ್ಯಂತ ಸಹಜ ಸಂಗತಿಯಾಗಿರುವ ದಲಿತ ಅನುಭವದಿಂದ ಬಂದ ಅಂಬೇಡ್ಕರ್, ಮಹಿಳೆಯರಿಗೆ ಅವಶ್ಯಕವಾಗಿರುವ ಆರ್ಥಿಕ ಸ್ವಾವಲಂಬನೆಯ ಮೂಲಕ ಯೋಚನೆ ಮಾಡುತ್ತಾ ದೃಢ ಹೆಜ್ಜೆ ಇಟ್ಟಿದ್ದು ಸಮಾಜದ ಬೇರು ಮಟ್ಟದಲ್ಲಿ ಬದಲಾವಣೆ ಮಾಡಬೇಕಿತ್ತು.

ಬಹಳ ಅಚ್ಚರಿಯಾಗುತ್ತದೆ. 1910ರ ಹೊತ್ತಿಗೇ ಸರಳಾದೇವಿ ಚೌಧುರಾಣಿ ನೇತೃತ್ವದಲ್ಲಿ ರಾಷ್ಟ್ರೀಯ ಮಹಿಳಾ ಸಂಘಟನೆ ಆರಂಭವಾಗುತ್ತದೆ. ನಂತರ ನಿರಂತರವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರು ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ತನಕ ಹೋರಾಟದ ಭಾಗವಾಗುತ್ತಾರೆ. ಆಂದೋಲನದಲ್ಲಿ ಅಂಬೇಡ್ಕರ್ ಸಕ್ರಿಯವಾಗಿ ಭಾಗವಹಿಸುತ್ತಾರೆ. ಮುಂದೆ ಮಹಿಳೆಯ ಆಸ್ತಿ, ವಿವಾಹ, ವಿಚ್ಛೇದನ ಮೊದಲಾದ ಹಕ್ಕುಗಳನ್ನು ಮಂಡಿಸುವ ಹಿಂದೂ ಕೋಡ್ ಬಿಲ್‍ ಅನ್ನು ಅಂಬೇಡ್ಕರ್ ಮಂಡಿಸಿದಾಗ ವಿರೋಧಿಸುವ ಹಿಂದೂ ಪುರುಷರ ಜೊತೆಗೆ ಕೆಲವು ಹೆಂಗಸರೂ ಸೇರಿಕೊಳ್ಳು ತ್ತಾರೆ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಲಕ್ಷಾಂತರ ಮಹಿಳೆಯರು ಈ ಕಾನೂನನ್ನು ಬೆಂಬಲಿಸಿ ಒಂದು ಅಲೆಯಂತೆ ಹೊರಹೊಮ್ಮಲು ಯಾಕೆ ಸಾಧ್ಯವಾಗಲಿಲ್ಲ? ಸ್ತ್ರೀಯರು ತಮ್ಮ ಕರ್ತೃತ್ವಶಕ್ತಿ, ಕಾರ್ಯವಿಧಾನ, ತಾವು ಮುನ್ನೆಲೆಗೆ ತರಬಯಸುವ ಸಾಮಾಜಿಕ ಮಾದರಿಯ ಬಗೆಗೆ ಯಾವ ಮುನ್ನೋಟವನ್ನಾಗಲೀ ಅರಿವನ್ನಾಗಲೀ ಬೆಳೆಸಿಕೊಳ್ಳುವೆಡೆಗೆ, ಹಂಚುವೆಡೆಗೆ ಗಮನ ನೀಡದೆ ಪೂರಕ ಪಾತ್ರಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದೇಕೆ? ಸಾಮಾಜಿಕ ಶಾಸನವಾಗಿ ಗಂಡಾಳಿಕೆಯು ಸ್ಥಾಪಿಸಿದ ಕಣ್ಕಟ್ಟುಗಳನ್ನೇ ಕಣ್ಣಿಗೊತ್ತಿಕೊಂಡು,ಪ್ರತಿನಿಧಿತ್ವವನ್ನಷ್ಟೇ ಸಮಾನತೆ ಎಂದು ಭಾವಿಸಿದ್ದರ ಪರಿಣಾಮವಾಗಿ ಈ ಚಲನೆ ಮುಂದುವರಿಯಿತು.

ಸ್ವತಂತ್ರಭಾರತದಲ್ಲಿ ಕುಟುಂಬವಿರಲಿ, ಸಾರ್ವಜನಿಕ ಕ್ಷೇತ್ರವಿರಲಿ, ದುಡಿಮೆಯ ಭಾಗವಾಗಿ ಹೆಣ್ಣನ್ನುಪ್ರತಿನಿಧೀಕರಿಸಲಾಗಿದೆಯೇ ವಿನಾ ಸಹಭಾಗಿತ್ವದ, ಸಮಾನ ಮೌಲ್ಯದ ನೆಲೆಯಲ್ಲಿ ಕಂಡಿಲ್ಲ. ಎಲ್ಲ ಸಂಸ್ಥೆಗಳ ತಳಪಾಯವು ಪಿತೃಪರ ಚಿಂತನೆಗಳಿಂದಲೇ ನಿರ್ಮಾಣವಾಗಿರುವಾಗ ಅಧಿಕಾರ ಸ್ಥಾನದಲ್ಲಿ ಹೆಣ್ಣು ಹೋಗಿ ಕುಳಿತ ತಕ್ಷಣ ಬದಲಾವಣೆ ಸಾಧ್ಯವಿಲ್ಲ. ಮಾತ್ರವಲ್ಲ, ಹೆಣ್ಣೂ ಕೂಡ ಪಿತೃಸತ್ತೆಯನ್ನೇ ನಂಬಿ ಸ್ಥಾಪಿಸಲು ತೊಡಗುತ್ತಾಳೆ. ಇದನ್ನು ನಾವು ಸ್ಪಷ್ಟವಾಗಿ ಅರಿಯಲು ಟ್ರಾನ್ಸ್‌ಜೆಂಡರ್ ಮಹಿಳೆಯರ ಅನುಭವಗಳನ್ನು ಗಮನಿಸಬಹುದು. ಬಹುಸಂಖ್ಯಾತ ಸಮಾಜದ ಬೆಂಬಲವಿಲ್ಲದ ಅಲ್ಲಿನ ಹೆಂಗಸರು ತಮ್ಮದೇ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಅಲ್ಲಿರುವುದು ಹೆಂಗಸರು ಮಾತ್ರ. ಅವರ ದುಡಿಮೆಗಾಗಿ ಮಾತ್ರ ಅವರು ಅದರಾಚೆಯ ಗಂಡಸರನ್ನು ಸಂಪರ್ಕಿಸುತ್ತಾರೆ. ಹೀಗಿದ್ದ ಲಿಂಗಾಂತರಿ ಸಮುದಾಯದ ಕೆಲವರು ಹಲವು ಹೋರಾಟಗಳ ನಂತರದಲ್ಲಿ ಈಗತಾವು ಹುಟ್ಟಿದ ಕುಟುಂಬದ ಜೊತೆ ಇಲ್ಲವೇ ತಾವೇ ಒಂದು ಬಾಡಿಗೆ ಮನೆ ಮಾಡಿಕೊಂಡು ಬದುಕತೊಡಗಿದ್ದಾರೆ. ಇವರೂ ನಮ್ಮಂತೆಯೇ ಬದುಕಹೊರಟಾಗ ಆಗುವ ಅನುಭವಗಳೇನು?

ಅಕ್ಕಯ್ ಪದ್ಮಶಾಲಿ ಅವರ ಆತ್ಮಚರಿತ್ರೆ ‘ಅಕ್ಕಯ್’ಯಲ್ಲಿನ ಕೆಲವು ವಿವರಗಳು ಕುತೂಹಲಕಾರಿಯಾಗಿವೆ. ಅವರು ಟ್ರಾನ್ಸ್‌ಜೆಂಡರ್‌ ಪುರುಷನ ಜೊತೆಗೆ ಸಹಬಾಳ್ವೆ ಮಾಡಬಯಸುತ್ತಾರೆ. ಹೆಣ್ಣಾಗಿದ್ದು ಈಗ ಗಂಡಾಗಿರುವ ಆತನೂ ಇವರ ಮೇಲೆ ಮತ್ತದೇ ಗಂಡುದರ್ಪ, ದೈಹಿಕ ನ್ಯೂನತೆಗಳ ಅವಹೇಳನ, ಆರೋಪಗಳನ್ನೇ ಮಾಡುತ್ತಾನೆ! ಹೆಣ್ಣು ಗಂಡುಗಳೆಲ್ಲರ ಮನೋಭಿತ್ತಿಯಲ್ಲಿ ಇದು ಎಷ್ಟು ಆಳವಾಗಿ ಅವಿತಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲವೇನೋ. ಯಾಕೆಂದರೆ, ಮುಂದೆ ಅಕ್ಕಯ್ ಗಂಡಾಗಿ ಹುಟ್ಟಿದವರನ್ನೇ ಮದುವೆಯಾದಾಗಲೂ ಮತ್ತದೇ ಕುಡಿತ, ಬಡಿತ, ದುಡ್ಡಿಗೆ ಪೀಡನೆ, ದೈಹಿಕ ಸೌಂದರ್ಯದ ಬಗೆಗೆ ಅವಹೇಳನಗಳ ಭಯಭೀತ ಅನುಭವ. ಜೊತೆಗೆ ಅವನ ಕುಟುಂಬವೂ ಸೇರಿ ಹಿಂಸೆ ದುಪ್ಪಟ್ಟಾಗುತ್ತದೆ.

ಇದಕ್ಕಿಂತ ಭಿನ್ನವಾಗಿ ಲಿಂಗಾಂತರಿ ಸಮುದಾಯ ಕಟ್ಟಿಕೊಂಡ ಪ್ರತ್ಯೇಕ ವ್ಯವಸ್ಥೆಯಲ್ಲಿ, ಅವರೆಲ್ಲಾ ಕಷ್ಟಗಳ ನಡುವೆ ಜಾತಿ, ಧರ್ಮಗಳ ಭೇದವಿಲ್ಲ. ನಾನಿ, ಅಮ್ಮ, ಮಗಳು ಎಂಬ ಬಂಧದಲ್ಲಿ ಒಬ್ಬರಿಗೊಬ್ಬರು ಆಧಾರವಾಗಿದ್ದಾರೆ. ಯಾರದೋ ಹೊಟ್ಟೆಯಲ್ಲಿ ಹುಟ್ಟಿದವ ರನ್ನು ತಮ್ಮವರೆಂದು ಅಪ್ಪಿಕೊಳ್ಳುತ್ತಾರೆ. ‘ಒಳಗೊಳ್ಳುವಿಕೆಯ’ ಸುವ್ಯವಸ್ಥೆಯನ್ನು- ಶಿಸ್ತು, ಶಿಕ್ಷೆಗಳನ್ನೊಳಗೊಂಡ ತಾಯ್ತನದ ಮಾದರಿಯಲ್ಲಿ ಕಟ್ಟಿಕೊಂಡಿದ್ದಾರೆ. ಆಸೆ, ಆಮಿಷ, ಅಧಿಕಾರಗಳ ಮೇಲಾಟದಲ್ಲಿ ಛಿದ್ರವಾಗಿರುವ ಬಹುಸಂಖ್ಯಾತರ ಲೋಕಕ್ಕಿಂತ ಇವರಿಂದ ಕಲಿಯುವುದೇ ಬಹಳವಿದೆ.

ಸ್ವಾತಂತ್ರ್ಯವು ವಾಸ್ತವದ ಅನುಭವವಾಗಬೇಕಿದ್ದಲ್ಲಿ ಹತ್ಯೆ ಮತ್ತು ಆತ್ಮಹತ್ಯೆಯ ಪಥ ಬಿಟ್ಟು, ಮಮತೆಯ ಮಡಿಲುಗಳ ನಿರ್ಮಾಣ ಮಾಡಬೇಕು. ಉರಿಯುವ ಸಾಮಾಜಿಕ ಸತ್ತೆಗಳ ಬೆಂಕಿಯನ್ನೇ ಬೆಳಕೆಂದು ನಂಬಿ ನಾನೂ ಒಂದು ಕೊಳ್ಳಿಯಾಗುವೆ ಎಂಬ ಭ್ರಮೆಗೆ ಬೀಳುತ್ತಿರುವ ಹೆಂಗಸರಿಗೂ ಈ ಹೆಂಗಸರ ದಾರಿಯನ್ನು ನೆನಪಿಸಿ ನಿರ್ಭೀತ ಸಮಾಜ ಕಟ್ಟಬೇಕು. ಇಲ್ಲದಿದ್ದಲ್ಲಿ ಸ್ವಾತಂತ್ರ್ಯ ಎಂಬುದು ಕೇವಲ ಹಾರಿಸುವ ತೋರಿಕೆಯ ಬಾವುಟವಾದೀತು ಅಷ್ಟೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.