ಭಾರತ ತನ್ನ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದ ಸಮಯದಲ್ಲೇ ಚೀನಾ ಯಾವುದೇ ಸದ್ದುಗದ್ದಲವಿಲ್ಲದೆ, ಟಿಬೆಟ್ ಪ್ರದೇಶದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ಕಟ್ಟಿರುವ ‘ಚಿಯಾಚ’ ಹೆಸರಿನ ಎರಡನೆಯ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಿ, ವಿದ್ಯುತ್ ಉತ್ಪಾದನೆ ಯನ್ನು ಪ್ರಾರಂಭಿಸಿದೆ. ಈ ಸುದ್ದಿ ನಮ್ಮ ದೇಶದ ಜಲ ಸಂಪನ್ಮೂಲ ಹಾಗೂ ರಕ್ಷಣಾ ಕ್ಷೇತ್ರದ ಪರಿಣತರಲ್ಲಿ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ.
ಕೈಲಾಸ ಮಾನಸ ಸರೋವರದ ಆಗ್ನೇಯ ದಿಕ್ಕಿನಲ್ಲಿರುವ ಆಂಗ್ಸಿ ಹಿಮಾನಿಯಲ್ಲಿ ಜನ್ಮ ತಳೆಯುವ ‘ಯಾರ್ಲಂಗ್ ಸ್ಯಾಂಗ್‌ಪೊ’ ಟಿಬೆಟಿನ ಮೂಲಕ 1,625 ಕಿ.ಮೀ. ಪ್ರವಹಿಸಿ, ಬ್ರಹ್ಮಪುತ್ರ ನದಿಯಾಗಿ ಭಾರತದಲ್ಲಿ 918 ಕಿ.ಮೀ., ಬಾಂಗ್ಲಾದೇಶದ ಮೂಲಕ 375 ಕಿ.ಮೀ. ಹರಿದು ಕಡೆಗೆ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸಿ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಜೀವನದಿಯಾಗಿ ಕೃಷಿ, ಮೀನುಗಾರಿಕೆ, ನೌಕಾ ಸಂಚಾರದ ಮೂಲಕ ಈ ಭಾಗದ ಆರ್ಥಿಕತೆಯನ್ನು ಪ್ರಭಾವಿಸುವ ಬ್ರಹ್ಮಪುತ್ರ ನದಿಯಲ್ಲಿನ ನೀರಿನ ಪ್ರಮಾಣಕ್ಕೂ ಟಿಬೆಟ್ ಪ್ರಸ್ಥಭೂಮಿಯಲ್ಲಿ ಚೀನಾ ಸಮರೋಪಾದಿಯಲ್ಲಿ ನಿರ್ಮಿಸುತ್ತಿರುವ ಅಣೆಕಟ್ಟೆ, ಜಲವಿದ್ಯುತ್ ಸ್ಥಾವರಗಳಿಗೂ ನಿಕಟ ಸಂಬಂಧ ಇದೆ.
2015ರ ಅಕ್ಟೋಬರ್‌ನಲ್ಲಿ, ಟಿಬೆಟ್‍ನ ರಾಜಧಾನಿ ಲಾಸಾದಿಂದ 140 ಕಿ.ಮೀ. ದೂರದಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ ನಿರ್ಮಿಸಿದ ಮೊದಲನೆಯ ಅಣೆಕಟ್ಟೆಯಿಂದ ಜಾಂಗ್‌ಮ್ಯು ವಿದ್ಯುತ್‍ಸ್ಥಾವರವು ಉತ್ಪಾದನೆಯನ್ನು ಪ್ರಾರಂಭಿಸಿತು. ಇದೀಗ ಎರಡನೆಯ ಸ್ಥಾವರ ಕೆಲಸ ಪ್ರಾರಂಭಿಸಿದೆ. ಅಷ್ಟೇ ಅಲ್ಲ, ಜಾಂಗ್‌ಮ್ಯು ಅಣೆಕಟ್ಟೆಯಿಂದ ನದಿಯ ಮೇಲ್ಭಾಗದಲ್ಲಿ, 11 ಕಿ.ಮೀ. ಮತ್ತು 18 ಕಿ.ಮೀ. ದೂರದಲ್ಲಿ ಚಿಯೆಕ್ಯ್ಸು ಮತ್ತು ಡಾಗು ಎಂಬ ಎರಡು ಅಣೆಕಟ್ಟುಗಳ ಕೆಲಸ ಮುಕ್ತಾಯದ ಹಂತದಲ್ಲಿದೆ. ಅಂದರೆ ಜಾಂಗ್‌ಮ್ಯು ಅಣೆಕಟ್ಟೆಯೂ ಸೇರಿದಂತೆ, ಬ್ರಹ್ಮಪುತ್ರ ನದಿಯ 24 ಕಿ.ಮೀ.ಗಳ ದೂರದಲ್ಲಿ ನಾಲ್ಕು ಅಣೆಕಟ್ಟೆಗಳು ಇರಲಿವೆ. ಇವುಗಳೊಡನೆ ಮುಂದಿನ 10 ವರ್ಷಗಳಲ್ಲಿ ಬೆಯು, ಜಿಕ್ಸಿ, ಡಾಕ್ಪಾ, ನಾಂಗ್, ಡೆಮೋ, ನಾಮ್ಚ, ಮೆಟಾಕ್ ಮತ್ತು ಲಾಂಗ್ಟಾ ಎಂಬ ಜಾಗಗಳಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡವಾಗಿ 8 ಅಣೆಕಟ್ಟೆಗಳು ನಿರ್ಮಾಣವಾಗಲಿವೆ. ಇವುಗಳಲ್ಲಿ 6, ಅರುಣಾಚಲ ಪ್ರದೇಶದಲ್ಲಿ ಭಾರತ-ಚೀನಾ ಗಡಿ ಪ್ರದೇಶದಿಂದ ಅನತಿ ದೂರದಲ್ಲಿರುವ, ಬ್ರಹ್ಮಪುತ್ರ ನದಿಯ ಗ್ರೇಟ್‍ಬೆಂಡ್ ಪ್ರದೇಶದಲ್ಲಿ ಬರಲಿವೆ. ಇದು, ಭೌಗೋಳಿಕ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾದ ಭೂಕಂಪ ವಲಯ ಪ್ರದೇಶ.
ಭಾರತದ ಆತಂಕ, ಕಳವಳಕ್ಕೆ ಮುಖ್ಯವಾಗಿ ಮೂರು ಕಾರಣಗಳಿವೆ. ಚೀನಾ ನಿರ್ಮಿಸುತ್ತಿರುವ ಅಣೆಕಟ್ಟೆ, ಜಲಾಶಯಗಳಿಂದ ಬ್ರಹ್ಮಪುತ್ರ ನದಿಯಲ್ಲಿನ ನೀರಿನ ಪ್ರಮಾಣ ಇಳಿಯಬಹುದೆಂಬ ಭೀತಿ ಮೊದಲನೆಯದು. ಚೀನಾದ ಉತ್ತರ ಭಾಗ ಎದುರಿಸುತ್ತಿರುವ ತೀವ್ರವಾದ ನೀರಿನ ಕೊರತೆಯನ್ನು ಎದುರಿಸಲು ಬ್ರಹ್ಮಪುತ್ರ ನದಿಯ ನೀರನ್ನು ಉತ್ತರದೆಡೆಗೆ ತಿರುಗಿಸಲು ಚೀನಾ ನಡೆಸಿರುವ ಚಿಂತನೆಯು ಎರಡನೆಯ ಕಾರಣ. ಭಾರತಕ್ಕೆ ಹರಿದು ಬರುವ ನೀರನ್ನು ಅಣೆಕಟ್ಟೆಗಳ ಮೂಲಕ ನಿಯಂತ್ರಿಸಿ, ನದಿಯ ನೀರನ್ನು ರಾಜಕೀಯ ಸೆಣಸಾಟದ ಪ್ರಬಲ ಅಸ್ತ್ರವನ್ನಾಗಿ ಚೀನಾ ಬಳಸಬಹುದಾದ ಸಾಧ್ಯತೆಯು ಭಾರತದ ಆತಂಕಕ್ಕೆ ಮೂರನೆಯ ಕಾರಣ.
ಕೇಂದ್ರ ಜಲ ಆಯೋಗದ ಮೂಲಗಳಂತೆ, ಬ್ರಹ್ಮಪುತ್ರ ನದಿಯ ಒಟ್ಟು ಜಲಾನಯನ ಪ್ರದೇಶ 5.80 ಲಕ್ಷ ಚದರ ಕಿ.ಮೀ. ಇದರಲ್ಲಿ ಶೇ 50ರಷ್ಟು ಭಾಗ ಟಿಬೆಟ್‍ನಲ್ಲಿದ್ದು, ಶೇ 34ರಷ್ಟು ಭಾಗ ಭಾರತದಲ್ಲಿದೆ. ಉಳಿದ ಶೇ 16ರಷ್ಟು ಭಾಗ ಭೂತಾನ್, ಬಾಂಗ್ಲಾದೇಶ ದಲ್ಲಿದೆ. ಇದರಿಂದ, ಬ್ರಹ್ಮಪುತ್ರ ನದಿಯ ನೀರಿನ ಶೇ 40ರಷ್ಟು ಭಾಗ ಚೀನಾದಿಂದ ಬರುತ್ತಿದೆ ಎಂಬ ಅಂಶ ಈಗ ಖಚಿತವಾಗಿದೆ. ಈ ಪ್ರಮಾಣದಲ್ಲಿ ಶೇ 10ರಷ್ಟು ಕಡಿಮೆಯಾದರೂ ಸಮಸ್ಯೆಗಳು ಉದ್ಭವಿಸುತ್ತವೆ ಎಂಬ ಎಚ್ಚರಿಕೆಯನ್ನು ಕೇಂದ್ರ ಜಲ ಆಯೋಗ ನೀಡಿದೆ. ಟಿಬೆಟಿನ ಅಣೆಕಟ್ಟೆಗಳಲ್ಲಿ ನೀರನ್ನು ಹಿಡಿದಿಡುವುದರಿಂದ ಬಹುತೇಕ ಪೋಷಕಾಂಶಗಳು ಮಡ್ಡಿಯ ರೂಪ ದಲ್ಲಿ ಅಲ್ಲಿಯೇ ಸಂಗ್ರಹವಾಗುತ್ತವೆ. ನಮ್ಮ ದೇಶಕ್ಕೆ ನೀರು ಹರಿದು ಬಂದರೂ ಅದರಲ್ಲಿ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುವುದರಿಂದ ಕೃಷಿ ಮತ್ತು ಮೀನುಗಾರಿಕೆಗೆ ತೊಂದರೆಯಾಗಲಿದೆ.4,350 ಕಿ.ಮೀ. ಉದ್ದದ ಮೆಕಾಂಗ್ ನದಿಗೆ ಚೀನಾ ನಿರ್ಮಿಸಿರುವ 11 ಅಣೆಕಟ್ಟೆ ಗಳಿಂದ ಮ್ಯಾನ್ಮಾರ್, ಲಾವೋಸ್, ಥಾಯ್ಲೆಂಡ್, ಕಾಂಬೋಡಿಯ ಮತ್ತು ವಿಯೆಟ್ನಾಂ ಮೂಲಕ ಹರಿ ಯುವ ಈ ನದಿ ಬಡವಾಗಿ ಹೋಗಿರುವುದನ್ನು ನಾವು ಗಮನಿಸಬೇಕು. ಒಂದು ಕಾಲದಲ್ಲಿ ‘ಆಗ್ನೇಯ ಏಷ್ಯಾದ ಅನ್ನದ ಬಟ್ಟಲು’ ಎಂಬ ಹೆಗ್ಗಳಿಕೆಯಿದ್ದ ಈ ಐದು ದೇಶಗಳು ಈ ಹಿಂದಿನ 50 ವರ್ಷಗಳಲ್ಲಿ ಕಂಡಿರದಂತಹ ಬರಗಾಲಕ್ಕೆ 2019ರಲ್ಲಿ ಈಡಾಗಿವೆ.
ಹದಿನೈದು ವರ್ಷಗಳಿಂದ ಚೀನಾ ನಿರಂತರವಾಗಿ ಅಲ್ಲಗಳೆಯುತ್ತಿರುವ ಯೋಜನೆಯೆಂದರೆ ಭಾರತದ ಗಡಿಗೆ ಸಮೀಪವಾಗಿ, ದಕ್ಷಿಣ ಚೀನಾದ ಸಾಂಗ್ರಿ ಪ್ರಾಂತ್ಯದಿಂದ, ಬ್ರಹ್ಮಪುತ್ರ ನದಿಯ ನೀರನ್ನು ಚೀನಾದ ಉತ್ತರ ಭಾಗದ ಶಿನ್‍ಜಿಯಾಂಗ್ ಪ್ರದೇಶದ ಟಾಕ್ಲಮಕಾನ್ ಮರುಭೂಮಿಗೆ ಹರಿಸುವುದು. 1,000 ಕಿ.ಮೀ. ಉದ್ದದ ಸುರಂಗದ ಮೂಲಕ ಪ್ರತಿವರ್ಷ ಬ್ರಹ್ಮಪುತ್ರದ ಅಪಾರ ಪ್ರಮಾಣದ ನೀರನ್ನು ಸಾಗಿಸುವ ಈ ಯೋಜನೆಯ ನೀಲನಕ್ಷೆಯನ್ನು 2017ರಲ್ಲಿ ಅಲ್ಲಿನ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂಬ ಮಾಹಿತಿಯಿದೆ. ಚೀನಾ ಸರ್ಕಾರ ಇದನ್ನು ಸಾರಾಸಗಟಾಗಿ ನಿರಾಕರಿಸಿದೆ. ಆದರೆ ಈ ಮಧ್ಯೆ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಮಧ್ಯ ಚೀನಾದ ಯುನಾನ್ ಪ್ರಾಂತ್ಯದ ನಗರಗಳಿಗೆ 600 ಕಿ.ಮೀ. ದೂರದಿಂದ ಸುರಂಗ ಮಾರ್ಗದ ಮೂಲಕ ನೀರು ತರುವ ಯೋಜನೆಯು ಮೂರು ವರ್ಷಗಳಿಂದ ಪ್ರಗತಿಯಲ್ಲಿದೆ. ಈ ಯೋಜನೆಯಲ್ಲಿ ಪಡೆದ ಅನುಭವ, ಅಭಿವೃದ್ಧಿಪಡಿಸಿದ ತಂತ್ರಜ್ಞಾನ, ಕೌಶಲಗಳು ಮುಂದಿನ 1,000 ಕಿ.ಮೀ. ಉದ್ದದ ಯೋಜನೆಯಲ್ಲಿ ಬಳಕೆಯಾಗಲಿವೆ ಎಂಬ ಅಭಿಪ್ರಾಯವಿದೆ.
ಬ್ರಹ್ಮಪುತ್ರ ನದಿಯ ಜಲವಿದ್ಯುತ್ ಯೋಜನೆಗಳ ಬಗ್ಗೆ ಯಾವ ಮಾಹಿತಿಯನ್ನೂ ಭಾರತದೊಂದಿಗೆ ಚೀನಾ ಹಂಚಿಕೊಳ್ಳುವುದಿಲ್ಲ ಎಂಬುದು ಭಾರತದ ತೀವ್ರ ಆತಂಕಕ್ಕೆ ಮುಖ್ಯ ಕಾರಣ. ಅಷ್ಟೇ ಅಲ್ಲ, ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಯಾವ ಒಂದು ದೇಶದ ಜೊತೆಗೂ ಅದು ಒಪ್ಪಂದ ಮಾಡಿಕೊಂಡಿಲ್ಲ. ಜಾಗತಿಕ ಮಟ್ಟದಲ್ಲಿ ನಾಗರಿಕ ಸಮಾಜದ, ನ್ಯಾಯ, ನೀತಿ, ಸಮಾನತೆಯನ್ನು ಆಧರಿಸಿದ ನದಿ ನೀರಿನ ಹಂಚಿಕೆಯ ಯಾವ ಒಪ್ಪಂದ, ಒಡಂಬಡಿಕೆಗಳನ್ನೂ ಅದು ಒಪ್ಪಿಲ್ಲ, ಗೌರವಿಸಿಲ್ಲ. ಅಂತರರಾಷ್ಟ್ರೀಯವಾಗಿ ಹರಿಯುವ ಯಾವುದೇ ನದಿಗೆ ಅಣೆಕಟ್ಟೆಯನ್ನು ಕಟ್ಟಬೇಕಾದಾಗ ನದಿ ಕೆಳಗಿನ ದೇಶಗಳೊಡನೆ ಸಮಾಲೋಚಿಸಬೇಕು ಎಂಬ ನೀತಿಸಂಹಿತೆಯನ್ನು ಅದು ಪಾಲಿಸಿಲ್ಲ. ಧನಬಲ, ಸೇನಾಬಲ, ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದ ಪ್ರೇರಿತವಾದ ಚೀನಾದ ಸ್ವಾರ್ಥಪರ ಏಕಪಕ್ಷೀಯ ನಿರ್ಧಾರ, ಧೋರಣೆಗಳು ಎಲ್ಲ ದೇಶಗಳಿಗೆ ಸಮಸ್ಯೆಯಾಗಿವೆ.
ಗಡಿ ಘರ್ಷಣೆಯ ಸಂದರ್ಭದಲ್ಲಿ, ಬ್ರಹ್ಮಪುತ್ರ ನದಿಯ ನೀರನ್ನು ಚೀನಾ ಹೊಸ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯನ್ನು ರಕ್ಷಣಾ ಪರಿಣತರು ತಳ್ಳಿಹಾಕುವುದಿಲ್ಲ. ಇದರ ಅನುಭವ ನಮಗಾಗಿದ್ದು 2017ರ ದೋಕಲಾ ಸಂಘರ್ಷದ ಸಮಯದಲ್ಲಿ. ಭಾರತದ ದಿಟ್ಟ ನಿಲುವಿಗೆ ಉತ್ತರವಾಗಿ ಚೀನಾ ಮೊದಲ ಬಾರಿಗೆ, ಬ್ರಹ್ಮಪುತ್ರ ನದಿಯ ಮಳೆಗಾಲದ ನೀರಿನ ಮಾಹಿತಿಯನ್ನು ನೀಡಲು ನಿರಾಕರಿಸಿತು. ಇದರಿಂದ, ಪೂರ್ವಸೂಚನೆಯಿಲ್ಲದೇ ಮಳೆಗಾಲದಲ್ಲಿ ಬಂದ ಪ್ರವಾಹದಿಂದ ಅಸ್ಸಾಂ ತತ್ತರಿಸಿಹೋಯಿತು. ಇತ್ತೀಚೆಗೆ ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದ ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡಿರುವ ರಕ್ಷಣಾ ಪರಿಣತರು, ಭಾರತದೊಳಗೆ ಪ್ರವೇಶಿಸುವ ಗಾಲ್ವನ್ ನದಿಯ ನೀರನ್ನು ಪ್ರತಿಬಂಧಿಸುವ ಯೋಚನೆ ಚೀನಾಗಿತ್ತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಟಿಬೆಟಿನಲ್ಲಿ ನಿರ್ಮಿಸಿರುವ ಅಣೆಕಟ್ಟೆಗಳಲ್ಲಿ ಬೇಸಿಗೆಯ ಸಮಯದಲ್ಲಿ ಉದ್ದೇಶಪೂರ್ವಕವಾಗಿ 15 ದಿನಗಳ ಕಾಲ ನೀರನ್ನು ಹಿಡಿದಿಡುವುದರಿಂದ ಭಾರತದಲ್ಲಿ ಬ್ರಹ್ಮಪುತ್ರ ನದಿಯ ನೀರನ್ನು ಒಣಗಿಸುವ ಸಾಧ್ಯತೆಯಿದೆ.
ಯುದ್ಧ ಮಾಡದೇ ಪರೋಕ್ಷ ಮಾರ್ಗಗಳಿಂದ ವಿರೋಧಿಗಳನ್ನು ಮಣಿಸುವ ಚೀನಾದ ಬತ್ತಳಿಕೆಯಲ್ಲಿ ನದಿಯ ನೀರು ಈಗ ಹೊಸ ಅಸ್ತ್ರವಾಗಿ ಸೇರಿದಂತಿದೆ. ಆ ದೇಶದ ಧೋರಣೆ, ನಿರ್ಧಾರಗಳಿಂದ ತೊಂದರೆಗೀಡಾಗಿರುವ, ಈಡಾಗುವ ಸಾಧ್ಯತೆಯಿರುವ ಎಲ್ಲ ದೇಶಗಳೂ ಒಟ್ಟಾಗಿ ಸೇರಿ ತಮ್ಮ ಒಳಿತನ್ನು ಸಾಧಿಸಬೇಕಾಗಿರುವುದು ಅನಿವಾರ್ಯ.
ಡಾ. ಎಚ್.ಆರ್.ಕೃಷ್ಣಮೂರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.