ADVERTISEMENT

2+2 ಮಾತುಕತೆಗೇಕೆ ಗ್ರಹಣ?

ಭಾರತ–ಅಮೆರಿಕ ಸಂಬಂಧದಲ್ಲಿ ಬಿರುಕಿನ ಸುಳಿವು?

ಹಮೀದ್ ಕೆ.
Published 30 ಜೂನ್ 2018, 4:51 IST
Last Updated 30 ಜೂನ್ 2018, 4:51 IST
   

ಭಾರತ ಮತ್ತು ಅಮೆರಿಕ ನಡುವಣ ಮೊದಲ ‘2+2 ಮಾತುಕತೆ’ ಆರು ತಿಂಗಳಲ್ಲಿ ಎರಡನೇ ಬಾರಿ ರದ್ದಾಗಿದೆ. ಅನಿವಾರ್ಯ ಕಾರಣಗಳಿಂದ ಮಾತುಕತೆಯನ್ನು ಮುಂದೂಡಲಾಗಿದೆ ಎಂದಷ್ಟೇ ಅಮೆರಿಕ ಹೇಳಿದೆ. ಬೇರೆ ದೇಶಗಳ ಜತೆಗಿನ ಭಾರತದ ವ್ಯಾಪಾರ ಮತ್ತು ಇತರ ಸಂಬಂಧಗಳ ಬಗ್ಗೆ ಅಮೆರಿಕ ಹೊಂದಿರುವ ಅತೃಪ್ತಿಯಿಂದಾಗಿ ಮಾತುಕತೆ ರದ್ದತಿ ಬಗ್ಗೆ ವಿವಿಧ ಅಭಿಪ್ರಾಯಗಳು, ಅನುಮಾನಗಳು ವ್ಯಕ್ತವಾಗಿವೆ.

ಏನಿದು 2+2 ಮಾತುಕತೆ?

ಇದು ದ್ವಿಪಕ್ಷೀಯ ಸಂಬಂಧ ವೃದ್ಧಿಯ ಹೊಸ ಮಾದರಿಯ ಮಾತುಕತೆ. ಎರಡೂ ದೇಶಗಳ ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರು ಜತೆಯಾಗಿ ಚರ್ಚೆ ನಡೆಸುತ್ತಾರೆ. ಭದ್ರತೆ ಮತ್ತು ಸೇನಾ ಸಹಕಾರ ಹಾಗೂ ವಾಣಿಜ್ಯ ವಹಿವಾಟುಗಳೇ ಇಲ್ಲಿ ಮುಖ್ಯ ವಿಷಯವಾಗಿರುತ್ತವೆ. ಜಪಾನ್‍ ಮತ್ತು ಆಸ್ಟ್ರೇಲಿಯಾ ಜತೆಗೆ ಇಂತಹ ಮಾತುಕತೆಯನ್ನು ಭಾರತ ನಡೆಸಿದೆ.

ADVERTISEMENT

2017ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ 2+2 ಮಾತುಕತೆಗೆ ನಿರ್ಧರಿಸಲಾಗಿತ್ತು. ‘ಭಾರತ-ಅಮೆರಿಕ ನಡುವಣ ರಕ್ಷಣೆ ಮತ್ತು ವಾಣಿಜ್ಯ ಮಾತುಕತೆ’ಯ ಬದಲಿಗೆ 2+2 ಮಾತುಕತೆ ನಡೆಸಲು ನಿಶ್ಚಯಿಸಲಾಗಿತ್ತು. ಆದರೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜಿಮ್‌ ಮ್ಯಾಟಿಸ್‌ ನಡುವೆಜುಲೈ 6ರಂದು ನಡೆಯಬೇಕಿದ್ದ ಮಾತುಕತೆಯನ್ನು ರದ್ದು ಮಾಡಲಾಗಿದೆ.

ಮೊದಲ ಬಾರಿ 2+2 ಮಾತುಕತೆ ರದ್ದಾಗಲು ಕಾರಣವೇನು?

ಕಳೆದ ಜೂನ್‍ನಲ್ಲಿ ಮಾತುಕತೆ ನಡೆಸಲು ನಿರ್ಧರಿಸಿದ ಬಳಿಕ ಮಾತುಕತೆಗಾಗಿ ದಿನಾಂಕ ನಿಗದಿ ಮಾಡಲು ಹಲವು ಪ್ರಯತ್ನಗಳು ನಡೆದಿದ್ದವು. ಕೊನೆಗೂ, ಮಾರ್ಚ್‌ನಲ್ಲಿ ಮಾತುಕತೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಆಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ರೆಕ್ಸ್ ಟಿಲ್ಲರ್ಸನ್‌ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ವಜಾ ಮಾಡಿದರು. ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ಪಾಂಪಿಯೊ ಅವರ ನೇಮಕ ಇನ್ನೂ ದೃಢಪಟ್ಟಿರಲಿಲ್ಲ. ಹಾಗಾಗಿ ಮಾತುಕತೆ ಮುಂದಕ್ಕೆ ಹೋಯಿತು.

ದ್ವಿಪಕ್ಷೀಯ ಸಂಬಂಧದಲ್ಲಿ ಆಗಿರುವ ಬಿರುಕು ಮಾತುಕತೆ ರದ್ದತಿಗೆ ಕಾರಣವೇ?

ಮಾತುಕತೆಯನ್ನು ಅಮೆರಿಕ ಸ್ಥಗಿತಗೊಳಿಸಿರುವ ಬಗ್ಗೆ ಭಾರತ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ರದ್ದತಿಗೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಂಬಂಧಿಸಿದ ವಿಚಾರಗಳು ಕಾರಣ ಅಲ್ಲ ಎಂದು ಭಾರತ ಭೇಟಿಯಲ್ಲಿರುವ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಸ್ಪಷ್ಟಪಡಿಸಿದ್ದಾರೆ. ‘ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್‍ ಪಾಂಪಿಯೊ ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ರದ್ದಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದು ಹ್ಯಾಲೆ ತಿಳಿಸಿದ್ದಾರೆ. ಜತೆಗೆ, ಇರಾನ್‌ನಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು ಎಂಬ ಸಲಹೆಯನ್ನೂ ಹ್ಯಾಲೆ ನೀಡಿದ್ದಾರೆ.

ಈ ಬಾರಿ ಮಾತುಕತೆ ರದ್ದತಿಯ ಹಿಂದಿನ ಕಾರಣಗಳೇನು?

ಕಾರಣ ಏನು ಎಂಬುದನ್ನು ಅಮೆರಿಕ ಅಧಿಕೃತವಾಗಿ ಹೇಳದೇ ಇದ್ದರೂ ಮೇಲ್ನೋಟಕ್ಕೆ ಕೆಲವು ಕಾರಣಗಳು ಗೋಚರಿಸುತ್ತಿವೆ. ಅಮೆರಿಕದ ವಿದೇಶಾಂಗ ನೀತಿಯಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳು ಮಾತುಕತೆ ರದ್ದತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಟ್ರಂಪ್‍ ಅವರು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‍ ಜಾಂಗ್‍ ಉನ್‍ ಅವರನ್ನು ಇತ್ತೀಚೆಗೆ ಭೇಟಿಯಾಗಿ ಅಣು ನಿಶ್ಶಸ್ತ್ರೀಕರಣ ಒಪ್ಪಂದ ಮಾಡಿಕೊಂಡಿದ್ದಾರೆ. ನಿಶ್ಶಸ್ತ್ರೀಕರಣದ ಮಾತುಕತೆಯನ್ನು ಇನ್ನಷ್ಟು ಮುಂದಕ್ಕೆ ಒಯ್ಯಲು ಅಮೆರಿಕ ಬಯಸಿದೆ. ಅದಕ್ಕಾಗಿ ಪಾಂಪಿಯೊ ಅವರು ಜುಲೈ 6ರಂದು ಉತ್ತರ ಕೊರಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೆರಿಕದ ಪತ್ರಿಕೆ ‘ಫೈನಾನ್ಶಿಯಲ್‍ ಟೈಮ್ಸ್’ ವರದಿ ಮಾಡಿದೆ.

ಆದರೆ ಈ ಪ್ರವಾಸ ಕಾರ್ಯಕ್ರಮವನ್ನು ಅಮೆರಿಕ ದೃಢಪಡಿಸಿಲ್ಲ. ಪಾಂಪಿಯೊ ಅವರಿಗೆ ಜುಲೈ ಮೊದಲ ವಾರದಲ್ಲಿ ಯಾವುದೇ ಪ್ರವಾಸ ಕಾರ್ಯಕ್ರಮ ಇಲ್ಲ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಮಧ್ಯೆ, ಟ್ರಂಪ್‍ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ ನಡುವೆ ಶೃಂಗಸಭೆ ನಡೆಯಲಿದೆ ಎಂಬ ಸುದ್ದಿ ಇದೆ. ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕ ಮತ್ತು ರಷ್ಯಾ ನಡುವಣ ಸಂಬಂಧ ತೀರಾ ಹದಗೆಟ್ಟಿದೆ. ಇದನ್ನು ಸರಿಪಡಿಸುವುದಕ್ಕಾಗಿ ಶೃಂಗಸಭೆ ನಡೆಸಲು ಎರಡೂ ದೇಶಗಳು ಮುಂದಾಗಿವೆ ಎನ್ನಲಾಗಿದೆ. ಈ ಸಭೆ ಜುಲೈ ಮಧ್ಯ ಭಾಗದಲ್ಲಿ ನಡೆಯಲಿದೆ ಎಂಬ ವರದಿಗಳಿವೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ ಅಮೆರಿಕದ ಎಲ್ಲ ಪ್ರಮುಖ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಈ ವಿಚಾರಕ್ಕೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಅದರ ಮಧ್ಯೆ ಭಾರತದ ಜತೆಗೆ 2+2 ಮಾತುಕತೆಗೆ ಸಮಯ ಸಿಗದು ಎಂಬ ಕಾರಣಕ್ಕೆ ಮಾತುಕತೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಭಾರತ-ಅಮೆರಿಕ ಸಂಬಂಧದಲ್ಲಿ ಆಗಿರುವ ಏರುಪೇರು ಕಾರಣ ಆಗಿರಬಹುದೇ?

ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ನಡುವಣ ಸೌಹಾರ್ದ ಸ್ವಲ್ಪಮಟ್ಟಿಗೆ ಕಹಿಯಾಗಿರುವ ಸಂದರ್ಭದಲ್ಲಿಯೇ 2+2 ಮಾತುಕತೆ ರದ್ದಾಗಿದೆ. ಹಾಗಾಗಿ ಈ ಕೆಳಗಿನ ವಿಚಾರಗಳನ್ನೇ ಮುಂದಿಟ್ಟುಕೊಂಡು ಟ್ರಂಪ್‍ ಅವರು ಮಾತುಕತೆ ರದ್ದತಿಗೆ ಸೂಚಿಸಿರಬಹುದು ಎಂಬ ಅನುಮಾನ ಇದೆ.

ಉಕ್ಕು ಮತ್ತು ಅಲ್ಯುಮಿನಿಯಂ ಆಮದು ಸುಂಕವನ್ನು ಹೆಚ್ಚಿಸಬೇಕಾದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಅಮೆರಿಕ ಸೇರಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಭಾರತ, ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ 29 ಸಾಮಗ್ರಿಗಳ ಮೇಲೆ ಹೆಚ್ಚು ತೆರಿಗೆ ವಿಧಿಸಲು ಯೋಜನೆ ಸಿದ್ಧಪಡಿಸಿದೆ.

ಇದು ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರವಾದರೆ, ಜಾಗತಿಕ ಸಹಕಾರದ ವಿಚಾರದಲ್ಲಿಯೂ ಭಾರತದ ಕೆಲವು ನಿರ್ಧಾರಗಳ ಬಗ್ಗೆ ಅಮೆರಿಕ ಅತೃಪ್ತಿ ಹೊಂದಿದೆ. ಇರಾನ್‍ ಜತೆಗಿನ ಅಣು ಒಪ್ಪಂದವನ್ನು ಅಮೆರಿಕ ರದ್ದು ಮಾಡಿದೆ. ಅಷ್ಟೇ ಅಲ್ಲ, ಇರಾನ್‍ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ಆ ದೇಶದಿಂದ ತೈಲ ಆಮದು ಮಾಡಿಕೊಳ್ಳದಂತೆ ಇತರ ದೇಶಗಳ ಮೇಲೆ ಒತ್ತಡ ಹೇರುತ್ತಿದೆ. ಇರಾನ್‍ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳ ಮೇಲೆಯೂ ನಿರ್ಬಂಧ ಹೇರುವುದಾಗಿ ಬೆದರಿಸುತ್ತಿದೆ. ಇರಾನ್‍ನಿಂದ ತೈಲ ಆಮದು ಸ್ಥಗಿತಗೊಳಿಸಲು ನವೆಂಬರ್ 4ರ ಗಡುವು ವಿಧಿಸಲಾಗಿದೆ.

ಆದರೆ, ಇದನ್ನು ಒಪ್ಪಿಕೊಳ್ಳಲು ಭಾರತ ಸಿದ್ಧವಿಲ್ಲ. ಭಾರತಕ್ಕೆ ತೈಲ ಪೂರೈಸುತ್ತಿರುವ ಮೂರನೇ ಅತಿ ದೊಡ್ಡ ದೇಶ ಇರಾನ್‍. ಹಾಗಾಗಿ, ಆ ದೇಶದಿಂದ ತೈಲ ಆಮದು ನಿಲ್ಲಿಸುವುದು ಸುಲಭವಲ್ಲ. ಯಾವುದೇ ದೇಶ ವಿಧಿಸುವ ನಿರ್ಬಂಧಗಳನ್ನು ಭಾರತ ಪಾಲಿಸುವುದಿಲ್ಲ, ವಿಶ್ವಸಂಸ್ಥೆಯ ನಿರ್ಬಂಧಗಳಿಗೆ ಮಾತ್ರ ಬದ್ಧ ಎಂದು ಸುಷ್ಮಾ ಸ್ವರಾಜ್‍ ಅವರು ಮೇ ತಿಂಗಳಲ್ಲಿ ಹೇಳಿಕೆ ನೀಡಿದ್ದರು.

ಇರಾನ್‍ ಜತೆಗಿನ ಸಂಬಂಧ ಕಡಿದುಕೊಳ್ಳದಿರಲು ಭಾರತಕ್ಕೆ ಇನ್ನೂ ಒಂದು ಮುಖ್ಯವಾದ ಕಾರಣವಿದೆ. ಪಾಕಿಸ್ತಾನವನ್ನು ಹಾದು ಹೋಗದೆಯೇ ಮಧ್ಯ ಏಷ್ಯಾ ಜತೆಗೆ ಸಂಪರ್ಕ ಸಾಧಿಸಲು ಭಾರತಕ್ಕೆ ಇರಾನ್‍ ಬೇಕೇ ಬೇಕು.

ಟ್ರಯಂಫ್‍ ಎಸ್‍-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಲು ಭಾರತ ಮುಂದಾಗಿರುವುದು ಕೂಡ ಟ್ರಂಪ್‍ ಕಣ್ಣು ಕೆಂಪಾಗಿಸಿದೆ. ಈ ಖರೀದಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದರೆ, ಅಮೆರಿಕಕ್ಕೆ ಪ್ರತಿಕೂಲವಾಗಿ ವರ್ತಿಸುವವರ ಮೇಲೆ ನಿರ್ಬಂಧ ಹೇರುವ ಕಾಯ್ದೆಯ ಅಡಿ ಭಾರತದ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇದೆ. ಅಮೆರಿಕದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಕಾರಣಕ್ಕೆ ರಷ್ಯಾದ ಮೇಲೆ ಈಗಾಗಲೇ ನಿರ್ಬಂಧ ಹೇರಲಾಗಿದೆ.

ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆ ಆಗಿದೆಯೇ?

ಚೀನಾದ ಆಕ್ರಮಣಕಾರಿ ಮನೋಭಾವ, ದೋಕಲಾ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಹೆಚ್ಚು ಪ್ರಬಲವಾದ ದೇಶವೊಂದರ ಜತೆಗಿನ ಮೈತ್ರಿ ಅಗತ್ಯವಾಗಿತ್ತು. ಏಷ್ಯಾದಲ್ಲಿ ಚೀನಾಕ್ಕೆ ಸಡ್ಡು ಹೊಡೆದು ಭಾರತ ನಿಲ್ಲುವುದು ಅಮೆರಿಕದ ಅಗತ್ಯವೂ ಆಗಿತ್ತು. ಹಾಗಾಗಿ ಎರಡೂ ದೇಶಗಳು ಹತ್ತಿರವಾಗಿದ್ದವು.

ಈಗ, ದೋಕಲಾ ಬಿಕ್ಕಟ್ಟು ಪರಿಹಾರವಾಗಿದೆ. ಚೀನಾದ ಜತೆಗಿನ ವಿಷಮ ಸಂಬಂಧವನ್ನು ಸರಿಪಡಿಸಲು ಭಾರತ ಪ್ರಯತ್ನಗಳನ್ನು ನಡೆಸಿದೆ. ಚೀನಾ ಅಧ್ಯಕ್ಷ ಷಿ ಜಿನ್‍ಪಿಂಗ್‍ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವುಹಾನ್‍ನಲ್ಲಿ ಮೇ ತಿಂಗಳಲ್ಲಿ ಅನೌಪಚಾರಿಕ ಸಭೆಯನ್ನೂ ನಡೆಸಿದ್ದಾರೆ.

ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಪ್ರಾಬಲ್ಯ ಹೊಂದುವ ಇರಾದೆಯನ್ನು ಭಾರತ ಬಿಟ್ಟಿಲ್ಲ. ಆದರೆ, ಇದು ಚೀನಾದ ಜತೆಗಿನ ಮುಖಾಮುಖಿ ಎಂಬಂತೆ ಬಿಂಬಿಸುವ ಇಚ್ಛೆ ಭಾರತಕ್ಕೆ ಇಲ್ಲ. ಯಾಕೆಂದರೆ ಹೆಚ್ಚು ಪ್ರಬಲವಾಗಿರುವ ಚೀನಾದ ಜತೆಗೆ ಸಂಘರ್ಷಕ್ಕೆ ಇಳಿಯುವುದರಿಂದ ಯಾವುದೇ ಲಾಭ ಇಲ್ಲ ಎಂಬುದು ಭಾರತಕ್ಕೆ ಮನವರಿಕೆ ಆಗಿದೆ. ಜತೆಗೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಅನಗತ್ಯ ಕಿರಿಕಿರಿ ಸೃಷ್ಟಿ ಸರ್ಕಾರಕ್ಕೆ ಇಷ್ಟ ಇಲ್ಲ ಎಂದು ವಿದೇಶಾಂಗ ನೀತಿ ವಿಶ್ಲೇಷಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.