ಸಮನ್ವಯ, ಸಹಯೋಗ, ಸಹಜೀವನದ ಕೆಲಸ, ಜಂಟಿ ನಿರ್ವಹಣೆ ಇತ್ಯಾದಿಗಳು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಹೇರಳವಾಗಿಲ್ಲ. ಮೂರು ಸಶಸ್ತ್ರ ವಿಭಾಗಗಳನ್ನು ಸಮಗ್ರ ಶಕ್ತಿಯಾಗಿ ಗ್ರಹಿಸಲು ಸರ್ಕಾರದ ಉಪಕ್ರಮದ ಕೊರತೆಯೇ ಇದಕ್ಕೆ ಪ್ರಧಾನ ಕಾರಣ.
2008ರ ಮುಂಬೈ ಭಯೋತ್ಪಾದಕ ದಾಳಿಯಂತಹ ಗಂಭೀರ ಬೆದರಿಕೆಯ ಬಳಿಕವೂ, ಭಾರತದ ಆತ್ಮವಿಶ್ವಾಸ ಮತ್ತು ಆರ್ಥಿಕತೆಯನ್ನು ಅಲುಗಾಡಿಸಲು ಪ್ರಯತ್ನಿಸುವ ನಿರ್ಣಾಯಕ ಶಕ್ತಿಗಳನ್ನು ತಡೆಯಲು ನಮ್ಮಲ್ಲಿ ಲಭ್ಯವಿರುವ ಶಕ್ತಿಗಳನ್ನು ಒಟ್ಟುಗೂಡಿಸುವ ಸಾಮೂಹಿಕ ಪ್ರಯತ್ನದ ಕೊರತೆ ಇದೆ.
ಭಾರತೀಯ ಕೋಸ್ಟ್ ಗಾರ್ಡ್ (ICG) ಅನ್ನು ರಕ್ಷಣೆಯ ನಾಲ್ಕನೇ ಅಥವಾ ವಿಸ್ತೃತ ಶಾಖೆ ಎಂದು ಕರೆಯಲಾಗುತ್ತದೆ. ಅದರಲ್ಲಿ ಲಭ್ಯವಿರುವ ಪಡೆಗಳನ್ನು ಉತ್ಕೃಷ್ಟಗೊಳಿಸಲು ನಾವು ಸಮಗ್ರವಾದ ವಿಧಾನವೊಂದನ್ನು ಹೊಂದಿಲ್ಲದಿರುವುದು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಇದು ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಫೆಬ್ರವರಿ 1ರಂದು, ಭಾರತೀಯ ಕರಾವಳಿ ಕಾವಲು ಪಡೆ (ICG) ತನ್ನ 46ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. ದುರದೃಷ್ಟವಶಾತ್, ಐಕರಾವಳಿ ಕಾವಲು ಪಡೆಯ ಪ್ರಾಮುಖ್ಯ ಮತ್ತು ಅದನ್ನು ಬಲಪಡಿಸುವ ಅಗತ್ಯದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಲೇ ಇಲ್ಲ.
ನಿಯಮಗಳ ಪ್ರಕಾರ ICG ಅಥವಾ ಶಾಟ್ CGಯನ್ನು ಸ್ಥಾಪಿಸುವ ಹಿಂದಿನ ಗುರಿಯು ಸಮುದ್ರದಲ್ಲಿ ಜನರು ಮತ್ತು ಅವರ ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸುವುದು. ಶಾಂತಿಕಾಲದಲ್ಲಿ ಕಾನೂನು ಜಾರಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ನೌಕಾ ಸಿಬ್ಬಂದಿಯನ್ನು ನಿಯೋಜಿಸದಿರುವುದು ಸೂಕ್ತ. ಕರಾವಳಿ ಕಾವಲು ಪಡೆಯನ್ನು ನಿಯಂತ್ರಿಸುವ ಕಾನೂನು 1978ರಲ್ಲಿ ಜಾರಿಗೆ ಬಂದಿತು. ಇದು ರಕ್ಷಣಾ ಸಚಿವಾಲಯದ (MoD) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕಂದಾಯ ಇಲಾಖೆಯಿಂದ (ಕಸ್ಟಮ್ಸ್) ಆರ್ಥಿಕ ಬೆಂಬಲವನ್ನು ಪಡೆ ಯುತ್ತದೆ. ಇದು ಕಡಲಿಗೆ ಸಂಬಂಧಿಸಿದ ಕಾನೂನು ಮತ್ತು ಸಮುದ್ರದ ಸುರಕ್ಷತೆಯನ್ನು ಅನುಷ್ಠಾನಕ್ಕೆ ತರಬೇಕು. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಒಂದೇ ಕ್ಷೇತ್ರದಲ್ಲಿ ಬಹುತೇಕ ಒಂದೇ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದು ವಾಸ್ತವವಾದರೂ ಕಡಲಿನ ರಕ್ಷಣೆಗೆ ಸೇವೆ ಸಲ್ಲಿಸಲು ಕರಾವಳಿ ಕಾವಲು ಪಡೆಗೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಶಾಂತಿಯ ಸಮಯದಲ್ಲಿ, ಈ ಶಕ್ತಿಗಳು ತಮ್ಮ ಪ್ರಯತ್ನಗಳನ್ನು ನಕಲು ಮಾಡುವುದು ಅಥವಾ ಅತಿಕ್ರಮಿಸುವುದು ಸಹಜ.
ಸಂಪನ್ಮೂಲದ ಕೊರತೆ ಸೇನೆಯು ಎದುರಿಸುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಕಡಲಿನ ಭದ್ರತೆಗಾಗಿ ಜವಾಬ್ದಾರಿಗಳ ಸಂಖ್ಯೆಯು ಹೆಚ್ಚಾದಾಗ, ನಿಧಿಗಳು ವಿರಳವಾಗುತ್ತವೆ. ಸಮುದ್ರ ಮಾರ್ಗಗಳ ಮೂಲಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ನಿಷೇಧಿತ ವಸ್ತುಗಳ ಕಳ್ಳಸಾಗಣೆ ಹೆಚ್ಚುತ್ತಿದೆ. ಕೆಲವೊಮ್ಮೆ, ಈ ಸಮಸ್ಯೆ ಕಡಿಮೆ ಮಟ್ಟದಲ್ಲಿರಬಹುದು, ಇನ್ನೂ ಕೆಲವೊಮ್ಮೆ ಇದು ದೊಡ್ಡ ಘರ್ಷಣೆಗೆ ಕಾರಣವಾಗಬಹುದು. ಭಯೋತ್ಪಾದಕರು ಭಾರತಕ್ಕೆ ಪ್ರವೇಶಿಸಲು ಸಮುದ್ರವೂ ಮಾರ್ಗವಾಗುತ್ತಿದೆ. ಸಮುದ್ರದಲ್ಲಿ ಕಟ್ಟೆಚ್ಚರವನ್ನು ಹೆಚ್ಚಿಸುವುದನ್ನು ಬಿಟ್ಟು ಭಾರತಕ್ಕೆ ಬೇರೆ ದಾರಿಯಿಲ್ಲ. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಸಮನ್ವಯದಿಂದ ಪ್ರಯತ್ನ ನಡೆಸಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಆದರೆ, ಹಿಂಜರಿಕೆಯ ಮನಃಸ್ಥಿತಿ ಚಾಲ್ತಿಯಲ್ಲಿದೆ. ಯಾವುದೇ ವಿಚಾರಗಳ ವಿನಿಮಯ ಆಗುತ್ತಿಲ್ಲ ಅಥವಾ ತರಬೇತಿಗಳೂ ನಡೆಯುತ್ತಿಲ್ಲ. ಎರಡು ಸೇವೆಗಳಿಗೆ ವೇತನಗಳು ಮತ್ತು ಪರಿಹಾರಗಳು ವಿಭಿನ್ನವಾಗಿವೆ. ಸುರಕ್ಷತೆಯು ಸಮಸ್ಯೆಯಾದಾಗ ಜಂಟಿ ಕಾರ್ಯಾಚರಣೆಗಳನ್ನು ನಡೆಸಲು ಸಹಾಯ ಮಾಡುವ ಯಾವುದೇ ತರಬೇತಿ ಈವರೆಗೂ ನಡೆದಿಲ್ಲ. ಬಿಕ್ಕಟ್ಟಿನ ಸಮಯದಲ್ಲಿ ಪಡೆಗಳನ್ನು ನಿಯೋಜಿಸಲು ಸಮನ್ವಯವನ್ನು ಸಾಧಿಸುವ ಒಬ್ಬ ಕಮಾಂಡರ್ ಕೂಡ ಇಲ್ಲ. ಶಸ್ತ್ರಾಸ್ತ್ರಗಳ ವಿಷಯದಲ್ಲಿ ಕರಾವಳಿ ಕಾವಲು ಪಡೆಯನ್ನು ಬಲಪಡಿಸದ ಹೊರತು, ಅದು ನೌಕಾಪಡೆಗೆ ಸಮನಾಗಿರಲು ಸಾಧ್ಯವಿಲ್ಲ.
ಕರಾವಳಿ ಕಾವಲು ಪಡೆಯು ನೌಕಾಪಡೆಯ ಪ್ರತಿರೂಪವಾಗಬೇಕಾಗಿಲ್ಲ, ಆದರೆ ಅದು ನೌಕಾಪಡೆಯ ಕಾರ್ಯಕ್ಕೆ ಪೂರಕವಾಗಿರಬೇಕು. ನೌಕಾಪಡೆಯ ಅಗತ್ಯವಿಲ್ಲದ ಸ್ಥಳಗಳಲ್ಲಿ ಕರಾವಳಿ ಕಾವಲು ಪಡೆ ಹೆಜ್ಜೆಯಿಡಲು ಸಾಧ್ಯವಾಗಬೇಕು. ನೌಕಾಪಡೆ ಯಂತೆ ಕರಾವಳಿ ಕಾವಲು ಪಡೆ ಹೈಟೆಕ್ ಗ್ಯಾಜೆಟ್‌ಗಳು, ಶಸ್ತ್ರಾಸ್ತ್ರಗಳು ಅಥವಾ ದುಬಾರಿ ಹಡಗುಗಳನ್ನು ಹೊಂದಿಲ್ಲ. ಆದ್ದರಿಂದ, ಭಾರತದ ಕರಾವಳಿಯಿಂದ ಸುಮಾರು 12 ನಾಟಿಕಲ್ ಮೈಲುಗಳವರೆಗೆ ಕರಾವಳಿ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ಕರಾವಳಿ ಕಾವಲು ಪಡೆಗೆ ವಹಿಸಲಾಗಿದೆ. ಈ ಮೂಲಕ ಅದು ಸುಮಾರು 7,500 ಕಿ.ಮೀ. ಕರಾವಳಿಯನ್ನು ರಕ್ಷಿಸಬೇಕಾಗಿದೆ. ಕಡಲ ಸುರಕ್ಷತೆಯಲ್ಲದೆ, ಸಮುದ್ರದಲ್ಲಿ ಪರಿಸರ ಸಂರಕ್ಷಣೆ, ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆಗೆ ಧಾವಿಸುವುದು, ಮುಳುಗುತ್ತಿರುವ ದೋಣಿಗಳು ಅಥವಾ ಹಡಗುಗಳ ರಕ್ಷಣೆ ಇವೆಲ್ಲ ಕರಾವಳಿ ಕಾವಲು ಪಡೆಯ ಪ್ರಮುಖ ಕರ್ತವ್ಯಗಳಾಗಿವೆ. ಸುನಾಮಿ ಮತ್ತು ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಇದರ ಪಾತ್ರವು ಬಹುಪಾಲು ಹೆಚ್ಚುತ್ತದೆ.
ಇದರ ಅರ್ಥ, ಕರಾವಳಿ ಕಾವಲು ಪಡೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದಲ್ಲ. ಆರಂಭಿಕ ವರ್ಷಗಳಲ್ಲಿ, ಇದು ಕೇವಲ ಒಂದು ಅಥವಾ ಎರಡು ಹಡಗುಗಳು ಅಥವಾ ವಿಮಾನಗಳನ್ನು ಹೊಂದಿತ್ತು. ಈಗ ಇದು ತನ್ನ ಕಾರ್ಯಾಚರಣೆಗಳನ್ನು ಕೈಗೊಳ್ಳಲು 150 ಹಡಗುಗಳು ಮತ್ತು 70 ವಿಮಾನಗಳನ್ನು (ಮುಖ್ಯವಾಗಿ ಹೆಲಿಕಾಪ್ಟರ್‌ಗಳು) ಹೊಂದಿದೆ. ಇದು ಡೋರ್ನಿಯರ್ಸ್ ಅನ್ನೂ ಹೊಂದಿದೆ. ಇದು 2023ರ ವೇಳೆಗೆ 190 ಹಡಗುಗಳು ಮತ್ತು 100 ವಿಮಾನಗಳನ್ನು ಹೊಂದುವ ಸಾಧ್ಯತೆ ಇದೆ. ಕರಾವಳಿ ಕಾವಲು ಪಡೆಯ ಗಾತ್ರವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅನೇಕ ನೌಕಾಪಡೆ ಗಳಿಗಿಂತ ದೊಡ್ಡದಾಗಿದೆ. ಆದರೆ, ಸಾಕಷ್ಟು ಯೋಧರು ಮತ್ತು ಯಂತ್ರಗಳೊಂದಿಗೆ ಉತ್ತಮವಾಗಿ ಸಜ್ಜುಗೊಂಡಿಲ್ಲ. ಕರಾವಳಿ ಕಾವಲು ಪಡೆಯು ನಿರ್ವಹಿಸಬೇಕಾದ ಹಲವು ಕಾರ್ಯಗಳಿವೆ. ಜತೆಗೆ, 2.3 ಮಿಲಿಯನ್‌ಗೆ ಕಡಿಮೆಯಿಲ್ಲದ ಸಂಖ್ಯೆಯ ವಿಶೇಷ ಆರ್ಥಿಕ ವಲಯಗಳು (EEZs) ಅದರ ವ್ಯಾಪ್ತಿಯಲ್ಲಿ ಬರುತ್ತವೆ.
ಮುಂಬೈ 26/11 ದಾಳಿ ಸಂಭವಿಸಿದ ಬಳಿಕ ಭಾರತವು ಕರಾವಳಿ ಕಾವಲು ಪಡೆಯ ಅಸ್ತಿತ್ವದ ಉಪಯುಕ್ತತೆಯನ್ನು ಮೊದಲ ಬಾರಿಗೆ ಅರಿತುಕೊಂಡಿತು. ಸುಮಾರು 12 ನಾಟಿಕಲ್ ಮೈಲುಗಳ ಆಚೆಗೂ, ಎತ್ತರದ ಸಮುದ್ರಗಳು ಮತ್ತು ದೂರದ ಪ್ರದೇಶಗಳಲ್ಲೂ ರಕ್ಷಣೆಯ ಅಗತ್ಯವಿತ್ತು. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯು ಮೆರೈನ್ ಪೊಲೀಸರೊಂದಿಗೆ ಉತ್ತಮವಾಗಿ ಹೊಂದಾಣಿಕೆ ಮಾಡಿಕೊಂಡರೆ, ಕರಾವಳಿಯುದ್ದಕ್ಕೂ ರಾಜ್ಯಗಳು ಉತ್ತಮ ಭದ್ರತೆಯನ್ನು ಪಡೆ ಯಬಹುದು. ಮಾದಕವಸ್ತು ಕಳ್ಳಸಾಗಣೆದಾರರು ಅಥವಾ ಉನ್ನತ ವ್ಯಕ್ತಿಗಳು ಹಡಗುಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತ ಸಿಕ್ಕಿಬಿದ್ದಾಗ ಮಾತ್ರ ಕರಾವಳಿ ಕಾವಲು ಪಡೆ ಸುದ್ದಿ ಮಾಡುತ್ತದೆ.
ಕರಾವಳಿ ಕಾವಲು ಪಡೆಯು ಸಮುದ್ರದ ಮೇಲೆ ಮತ್ತು ಹೊರಗಡೆ ಪೊಲೀಸರಂತೆ ಕರ್ತವ್ಯ ನಿಭಾಯಿಸಬೇಕೇ ಮತ್ತು ಅಷ್ಟಕ್ಕೇ ತೃಪ್ತಿ ಹೊಂದಬೇಕೇ? ಇಲ್ಲವೇ ಇಲ್ಲ. ಕೆಲಸವು ಸಂಕೀರ್ಣವಾಗಿದೆ, ಇದಕ್ಕೆ ಮುಖ್ಯ ಕಾರಣ, ಸಂಪನ್ಮೂಲಗಳ ಕೊರತೆಯೇ ಆಗಿದೆ. ಹೆಚ್ಚುವರಿಯಾಗಿ, ಕರಾವಳಿ ಕಾವಲು ಪಡೆಯು ತನಗೆ ನಿಯೋಜಿಸಲಾದ ಕೆಲಸಗಳನ್ನು ನಿರ್ವಹಿಸಲು ಒಂದು ಡಜನ್ ಸಚಿವಾಲಯಗಳು/ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಒಂದೆರಡು ವರ್ಷಗಳ ಹಿಂದೆ ಕರಾವಳಿ ಕಾವಲು ಪಡೆಯಲ್ಲಿ ಮಂಜೂರಾದ ಹುದ್ದೆಗಳು 13,482 ಆಗಿದ್ದವು. ಆದರೆ, ಇತ್ತೀಚಿನ ಅಂದಾಜಿನ ಪ್ರಕಾರ ಅದು 20,000 ಮುಟ್ಟಿರಬೇಕು. ಕರಾವಳಿ ಕಾವಲು ಪಡೆಯ ಕಾರ್ಯವನ್ನು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಸೇರಿದಂತೆ ಐದು ಕಡಲ ವಲಯಗಳಲ್ಲಿ ವಿಂಗಡಿಸಲಾಗಿದೆ.
ಅನೇಕ ಪ್ರಾಯೋಗಿಕ ಸಮಸ್ಯೆಗಳ ಹೊರತಾಗಿಯೂ, ಕರಾವಳಿ ಕಾವಲು ಪಡೆ ಪ್ರಭಾವಶಾಲಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೂ ಸರ್ಕಾರ ಅದನ್ನು ಶಸ್ತ್ರಾಸ್ತ್ರ ಮತ್ತು ನೌಕೆಗಳೊಂದಿಗೆ ಏಕೆ ಆಧುನೀಕರಿಸುತ್ತಿಲ್ಲ? ಕರಾವಳಿ ಭದ್ರತೆಯ ಹೊಣೆಯನ್ನು ಕರಾವಳಿ ಕಾವಲು ಪಡೆಗೆ ಕಾಯ್ದಿರಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ. ಇದು ಸಂಭವಿಸಬೇಕಾದರೆ, ಅದನ್ನು ರಕ್ಷಣಾ ಇಲಾಖೆ (MoD)ಯಿಂದ ಗೃಹ ಸಚಿವಾಲಯಕ್ಕೆ (MHA) ವರ್ಗಾಯಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ, ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಜನ ಸಮುದಾಯದ ನಡುವೆ ಸಮನ್ವಯದ ಕೊರತೆಯಿದೆ. ಇದು ಭೂಮಿ ಮತ್ತು ಸಮುದ್ರ ಎರಡರಲ್ಲೂ ಏಕಕಾಲದಲ್ಲಿ ಗಸ್ತು ತಿರುಗುವುದಕ್ಕೆ ಅಡ್ಡಿಯಾಗುತ್ತಿದೆ. ಭಾರತವು ನೆರೆಯ ಪಾಕಿಸ್ತಾನ ಮತ್ತು ಚೀನಾದಂತಹ ಶತ್ರು ರಾಷ್ಟ್ರಗಳನ್ನು ನಿರಂತರವಾಗಿ ಎದುರಿಸುತ್ತಿರುವಾಗ ಇಂತಹ ದುಬಾರಿ ಲೋಪವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದರೊಂದಿಗೆ, ಭಯೋತ್ಪಾದಕರ ಕಾರ್ಯವೈಖರಿಯೂ ಬದಲಾಗುತ್ತಿದೆ. ಸಾಂಪ್ರದಾಯಿಕವಲ್ಲದ ವಿಧಾನಗಳನ್ನು ಭಯೋತ್ಪಾದಕರು ಅಳವಡಿಸಿಕೊಂಡಿದ್ದಾರೆ.
ದೇಶದ ಒಟ್ಟು 226 ಸಣ್ಣ ಬಂದರುಗಳ ಪೈಕಿ 187ರಲ್ಲಿ ಸರಿಯಾದ ಭದ್ರತಾ ಕ್ರಮಗಳನ್ನು ಹೊಂದಿಲ್ಲ ಎಂಬುದನ್ನು 2016ರಲ್ಲಿ ಇಂಟೆಲಿಜೆನ್ಸ್ ಬ್ಯೂರೋ ಆಡಿಟ್ ಎತ್ತಿ ತೋರಿಸಿದೆ. ಬಂದರುಗಳನ್ನು ಸುಸಜ್ಜಿತಗೊಳಿಸದಿದ್ದರೆ ಕಣ್ಗಾವಲು ಹೇಗೆ ಸಮರ್ಪಕವಾಗಿರುತ್ತದೆ?
ಸಮುದ್ರಕ್ಕೆ-ಸಂಬಂಧಿಸಿದ ಸವಾಲುಗಳನ್ನು ಚೆನ್ನಾಗಿ ತಿಳಿದಿರುವ ಕರಾವಳಿ ಕಾವಲು ಪಡೆ, ಗೃಹ ಸಚಿವಾಲಯದ (MHA) ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ರಕ್ಷಣಾ ತಜ್ಞರು ವಾದಿಸುತ್ತಿದ್ದಾರೆ. ಯಾವುದಾದರೂ ಬಿಕ್ಕಟ್ಟುಗಳನ್ನು ನಿಭಾಯಿಸುವ ಸಂದರ್ಭದಲ್ಲಿ ಇದು ರಕ್ಷಣಾ ಸಚಿವಾಲಯ (MoD) ಮತ್ತು ಗೃಹ ಸಚಿವಾಲಯ (MHA)ದ ನಡುವಿನ ಸಮನ್ವಯವನ್ನು ಸ್ವಾಭಾವಿಕವಾಗಿಯೇ ಹೆಚ್ಚಿಸುತ್ತದೆ. ಎಲ್ಲ ರಾಜ್ಯಗಳಲ್ಲೂ ಕರಾವಳಿಯ ಸಮಸ್ಯೆಗಳನ್ನು ನಿಭಾಯಿಸುವ ಏಕೈಕ ಶಕ್ತಿಶಾಲಿ ಪಡೆ ಇರುವುದು ಉತ್ತಮ ಎಂಬುದು ತಜ್ಞರ ವಾದ. ಆದರೆ, ರಕ್ಷಣಾ ಸಚಿವಾಲಯ (MoD) ಇದನ್ನು ಒಪ್ಪಿಕೊಳ್ಳಲಿಲ್ಲ.
1978ರ ಕೋಸ್ಟ್ ಗಾರ್ಡ್ ಕಾಯ್ದೆಯಲ್ಲಿರುವ ಅಸ್ಪಷ್ಟತೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಆದರೆ ಭದ್ರತಾ ಏಜೆನ್ಸಿಗಳಿಗೆ ಅಧಿಕಾರ ನೀಡಲು, ಅವುಗಳನ್ನು ಸರಿಪಡಿಸುವ ಕುರಿತು ಅದು ಚಿಂತಿಸಿಲ್ಲ. ನೌಕಾಪಡೆಗೆ ಗುಣಮಟ್ಟದ-ತರಬೇತಿ ಪಡೆದ ಅಧಿಕಾರಿಗಳನ್ನು ಒದಗಿಸುವುದಕ್ಕೆ ಕರಾವಳಿ ಕಾವಲು ಪಡೆಯು ಉತ್ತಮ ಮೂಲವಾಗಿದೆ. ಇದನ್ನು ರಕ್ಷಣಾ ಸಚಿವಾಲಯ (MoD) ಅನ್ವೇಷಿಸಿಲ್ಲ. ಕರಾವಳಿ ಕಾವಲು ಪಡೆಯ ಸಿಬ್ಬಂದಿಗೆ ನೌಕಾಪಡೆಯ ಕಮಾಂಡೆಂಟ್‌ಗಳಿಗೆ ಸಮಾನವಾಗಿ ವೇತನವನ್ನು ನೀಡಬೇಕು. ಇಲ್ಲದಿದ್ದರೆ, ನೌಕಾಪಡೆಯು ಯಾವಾಗಲೂ ಕರಾವಳಿ ಕಾವಲು ಪಡೆಯನ್ನು ಅದರ ಅಧೀನ ಎಂದೇ ಪರಿಗಣಿಸುತ್ತದೆ. ತುರ್ತು ಸಂದರ್ಭಗಳಲ್ಲಿ, ಒಂದು ಸಮಗ್ರ ವಿಧಾನವನ್ನು ಅಳವಡಿಸಿಕೊಂಡರೆ, ಮುಂದೆ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಎಲ್ಲಿಯವರೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಸಶಸ್ತ್ರ ಪಡೆಗಳ ವಿಭಾಗೀಕರಣವು ಮುಂದುವರಿಯುತ್ತದೆ. ಅಷ್ಟೊಂದು ಪ್ರಬಲವಲ್ಲದ ಗಡಿಗಳನ್ನು ಮತ್ತು ಅಷ್ಟೊಂದು ಸುರಕ್ಷಿತವಲ್ಲದ ಕರಾವಳಿ ಪ್ರದೇಶಗಳನ್ನು ಹೊಂದಿರುವ ದೇಶಕ್ಕೆ ಇದು ಒಳ್ಳೆಯದಲ್ಲ.
ಲೇಖಕರು:ಕೈಗಾರಿಕೋದ್ಯಮಿ ಮತ್ತು ರಕ್ಷಣಾ ವಿಷಯಗಳ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.