ಇಂದು ನಮ್ಮ ಧಾರ್ಮಿಕ ನಂಬಿಕೆ- ಭಾವನೆಗಳು ಹಿಂದೆಂದಿಗಿಂತಲೂ ದುರ್ಬಲವಾಗಿವೆ. ಒಂದು ಸಣ್ಣ ಪ್ರಚೋದನೆಯಿಂದಲೂ ನಾವು ನಮ್ಮ ನಂಬಿಕೆ- ಭಾವನೆಗಳಿಗೆ ಧಕ್ಕೆ ಉಂಟು ಮಾಡಿಕೊಳ್ಳುವ ಸ್ಥಿತಿಗಿಳಿದಿದ್ದೇವೆ. ಎಲ್ಲಕ್ಕಿಂತ ದುರದೃಷ್ಟಕರ ಸಂಗತಿ ಎಂದರೆ, ಹೀಗೆ ಧಕ್ಕೆ ಉಂಟು ಮಾಡಿಕೊಂಡು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವ ನಮ್ಮ ವ್ಯಗ್ರತೆಯನ್ನು ನಾವು ದೌರ್ಬಲ್ಯವೆಂದು ಮನಗಾಣುವ ಬದಲಾಗಿ ಅದುವೇ ನಮ್ಮ ಶಕ್ತಿ ಎಂದು ಹೆಮ್ಮೆಪಡುತ್ತಿರುವುದು.
ಭಾರತೀಯ ಸಂಸ್ಕೃತಿ ಬೆಳೆದಿರುವುದೇ ಪ್ರಶ್ನಿಸುವ ಮೂಲಕ, ಪ್ರತಿಯೊಂದನ್ನೂ ಅನುಮಾನಿಸುವ ಮೂಲಕ. ಋಗ್ವೇದದ ನಾಸದೀಯ ಸೂಕ್ತದ ಒಂದು ಮಂತ್ರವು ದೈವದ ಸರ್ವಜ್ಞತ್ವ, ಸರ್ವವ್ಯಾಪಿತ್ವಗಳನ್ನೂ ಸಂದೇಹಿಸುತ್ತದೆ. ಆ ಮಂತ್ರವನ್ನು (ಇಯಂ ವಿಸೃಷ್ಟರ್ಯತ ಆ ಬಭೂವ… ಯದಿ ವಾ ನ ವೇದ) ಕುವೆಂಪು ಹೀಗೆ ಅನುವಾದಿಸಿದ್ದಾರೆ: ‘ಎತ್ತಣಿಂದಾದುದೀ ವಿಸೃಷ್ಟಿ? ಅವನಿಂದಲೇ ಮೇಣ್ ಬಂದುದೋ, ಅವನಿಂದಲ್ಲವೋ? ಆರು ಆ ಪರಮ ವ್ಯೋಮದ ಅಧ್ಯಕ್ಷನೋ ಅವನಿಗೆ ಮಾತ್ರವೇ ಅದು ಗೊತ್ತು; ಅಥವಾ ಅವನಿಗೂ ಅದು ಗೊತ್ತಿಲ್ಲವೋ ಏನೋ!’ (ಗುರುವಿನೊಡನೆ ದೇವರಡಿಗೆ). ಈ ಪ್ರಪಂಚದಲ್ಲಿ ದೈವಶಕ್ತಿಯನ್ನೂ ಸಂದೇಹಿಸಬಲ್ಲ ಧರ್ಮಗ್ರಂಥವೇನಾದರೂ ಇದ್ದಲ್ಲಿ ಅದು ಪ್ರಾಯಶಃ ಋಗ್ವೇದವೊಂದೇ ಇರಬೇಕು.
ಪರಮತತ್ವದ ಜಿಜ್ಞಾಸೆ ಮಾಡುವ ಉಪನಿಷತ್ತುಗಳಿಗೂ ಪ್ರಶ್ನಿಸುವಿಕೆಯೇ ಜೀವಾಳವಾಗಿದೆ. ಪ್ರಶ್ನಿಸುವಾಗ ಕೆಲವು ಸಲ ಜಿಜ್ಞಾಸು ಅಜ್ಞಾನಾಂಧಕಾರದಲ್ಲಿ ಮುಳುಗಿ, ತಪ್ಪು ಧೋರಣೆಯಿಂದ ಪ್ರಶ್ನಿಸಬಹುದು. ಸಭ್ಯತೆ, ಶಿಷ್ಟಾಚಾರಗಳನ್ನು ಮೌಲ್ಯವೆಂದು ಭಾವಿಸುವ ನೈತಿಕವಾದಿಗಳು ಅದನ್ನು ಅಧಿಕಪ್ರಸಂಗತನವೆಂದು ಕರೆದು ಜರಿಯಬಹುದು. ಆದರೆ ಲೌಕಿಕ ಶಿಷ್ಟಾಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದ ನಮ್ಮ ತತ್ವಚಿಂತಕರು ಅದನ್ನು ಹಾಗೆ ಪರಿಭಾವಿಸುವುದಿಲ್ಲ. ದುಃಖ– ವಿಷಾದಗಳಲ್ಲಿ ಮುಳುಗಿದ್ದ ಅರ್ಜುನ ಜ್ಞಾನಿಯಂತೆ ಮಾತನಾಡುತ್ತಲೇ ತನ್ನೊಳಗಿನ ದ್ವಂದ್ವ, ಅಜ್ಞಾನಗಳನ್ನು ಪ್ರದರ್ಶಿಸಿದಾಗ ಶ್ರೀಕೃಷ್ಣ ‘ಮಹಾ ಪ್ರಜ್ಞಾವಂತನಂತೆ ಮಾತನಾಡುತ್ತಿರುವೆಯಲ್ಲ!’ (ಗೀ. 2.11) ಎಂದು ಅರ್ಜುನನನ್ನು ತಮಾಷೆ ಮಾಡಿದನೇ ವಿನಾ ‘ನನ್ನೆದುರು ಮಹಾಜ್ಞಾನಿಯಂತೆ ಮಾತನಾಡುತ್ತಿರುವ ನೀನು ಕ್ಷಮೆ ಕೋರಬೇಕು’ ಎಂದು ಆಗ್ರಹಿಸಲಿಲ್ಲ. ಹಿಂದೂ ಧರ್ಮದಲ್ಲಷ್ಟೇ ಅಲ್ಲ, ಬೌದ್ಧ, ಜೈನ ಮುಂತಾದ ಭಾರತದ ಎಲ್ಲ ಧಾರ್ಮಿಕ ಧಾರೆಗಳಲ್ಲೂ ಈ ಬೌದ್ಧಿಕ ಔದಾರ್ಯವನ್ನು ಕಾಣಬಹುದು.
ಪಂಪನ ಆದಿಪುರಾಣದಲ್ಲಿ ಮಹಾಮತಿ, ಶತಮತಿ, ಸಂಭಿನ್ನಮತಿ ಎಂಬ ಮೂವರು ಯಥಾರ್ಥವಾದಿಗಳು ಆದಿತೀರ್ಥಂಕರನಾಗಲಿದ್ದ ಸ್ವಯಂಬುದ್ಧನ ಜೊತೆ ವಾಗ್ವಾದ ನಡೆಸಿದ ಒಂದು ಪ್ರಸಂಗ ಬರುತ್ತದೆ. ಈ ಮೂವರೂ ಸ್ವಯಂಬುದ್ಧನನ್ನು ನಾನಾ ರೀತಿಗಳಲ್ಲಿ ಪ್ರಚೋದಿಸುತ್ತಾರೆ, ಅವನು ನಂಬಿದ್ದ ಧರ್ಮವನ್ನು ವಿಡಂಬಿಸುತ್ತಾರೆ. ಅವನ ನಂಬಿಕೆಯನ್ನೂ ನಿಂದಿಸಿ ಅವಹೇಳನ ಮಾಡುತ್ತಾರೆ. ಆದರೆ ಅವರ ಅಭಿಪ್ರಾಯಗಳಿಂದ ಸ್ವಯಂಬುದ್ಧನ ಭಾವನೆಗೆ ಧಕ್ಕೆಯಾಗಲಿಲ್ಲ, ಅವರ ವಿಷಯದಲ್ಲಿ ಅವನು ಆಕ್ರಮಣಕಾರಿಯೂ ಆಗಲಿಲ್ಲ. ಬದಲಾಗಿ ಪಂಪನೇ ಹೇಳುವಂತೆ ಅವರೊಂದಿಗೆ ‘ಮೃದುಮಧುರ ಗಂಭೀರ ಧ್ವನಿ’ಯಿಂದ ವಾಗ್ವಾದ ನಡೆಸಿ ಅವರನ್ನು ಪರಾಭವಗೊಳಿಸಿದ (ಆದಿಪುರಾಣ 2.10).
ಭಾರತೀಯ ತತ್ವಚಿಂತಕರು ಇಂತಹ ಟೀಕೆ– ನಿಂದನೆಗಳನ್ನು ‘ಪೂರ್ವಪಕ್ಷ’ ಎಂದು ಕರೆಯುತ್ತಾರೆ. ತಮ್ಮ ವಿಚಾರವನ್ನು ಮಂಡಿಸಲು ಇದನ್ನೊಂದು ಹಿನ್ನೆಲೆಯಂತೆ ಬಳಸಿಕೊಳ್ಳುತ್ತಾರೆ. ಆದಿಶಂಕರ, ಅಲ್ಲಮ, ಗೋರಕ್ಷ ಮುಂತಾದ ಅನುಭಾವಿಗಳು ಇಂತಹ ಪೂರ್ವಪಕ್ಷಿಗಳನ್ನು ಹುಡುಕುತ್ತಾ ದೇಶದುದ್ದಗಲಕ್ಕೂ ಸಂಚರಿಸಿದ್ದರು. ಅಂತಹ ಪೂರ್ವಪಕ್ಷಿಗಳು ದೊರೆತಾಗ ಅವರೊಡನೆ ವಾರಗಟ್ಟಲೆ, ತಿಂಗಳುಗಟ್ಟಲೆ ಉತ್ಸಾಹದಿಂದ ವಾಕ್ಯಾರ್ಥ ನಡೆಸುತ್ತಿದ್ದರು. ಮಾಹಿಷ್ಮತೀ ನಗರದಲ್ಲಿ ಮಂಡನಮಿಶ್ರನೆಂಬ ಹೆಸರಿನ ವೈದಿಕನೊಂದಿಗೆ ಆದಿಶಂಕರರು ವಾರಗಟ್ಟಲೆ ವಾಗ್ವಾದ ನಡೆಸಿದ್ದರು. ಹೀಗೆ ವಾಗ್ವಾದ ನಡೆಸುವಾಗಲೂ ಅವರಿಬ್ಬರೂ ಪರಸ್ಪರರನ್ನು ವೈರಿಗಳಂತೆ ಕಾಣುತ್ತಿರಲಿಲ್ಲ. ವಾಗ್ವಾದಕ್ಕೆ ತನ್ನ ಮನೆಬಾಗಿಲಿಗೆ ಬಂದಿದ್ದ ಶಂಕರರು ಮತ್ತು ಅವರ ಶಿಷ್ಯರಿಗೆ ಸಂಸಾರವಂದಿಗನಾದ ಮಂಡನಮಿಶ್ರ ಅನ್ನ- ಆಶ್ರಯ ಕೊಟ್ಟು ಸಲಹಿದ್ದ.
ಪೂರ್ವಮೀಮಾಂಸಕಾರನಾದ ಕುಮಾರಿಲಭಟ್ಟ ತನ್ನ ಬೌದ್ಧಗುರು ಧರ್ಮಕೀರ್ತಿಯನ್ನು ವಾಗ್ವಾದದಲ್ಲಿ ಸೋಲಿಸಿದ್ದ. ಶಿಷ್ಯನಿಂದ ಸೋತೆನೆಂಬ ಖೇದದಿಂದ ಧರ್ಮಕೀರ್ತಿ ಆತ್ಮಹತ್ಯೆ ಮಾಡಿಕೊಂಡಾಗ, ಗುರುಹತ್ಯೆಗೆ ಕಾರಣನಾದೆನಲ್ಲ ಎಂಬ ವಿಷಾದದಿಂದ ಕುಮಾರಿಲನೂ ಅಗ್ನಿಪ್ರವೇಶ ಮಾಡಿದ್ದ. ಶಿಷ್ಯನಿಂದ (ಅಥವಾ ಯಾರಿಂದಲೇ ಆಗಲಿ) ವಾಕ್ಯಾರ್ಥದಲ್ಲಿ ಸೋಲುಣ್ಣುವುದು ಅವಮಾನವಲ್ಲ. ಗುರು ಸತ್ತನೆಂದು ಶಿಷ್ಯನೂ ಗುರುವಿನ ಹಾದಿ ಹಿಡಿಯುವುದು ಸಮರ್ಥನೀಯವಲ್ಲ; ನಿಜ. ಆದರೆ ನಮ್ಮ ತತ್ವಜ್ಞಾನಿಗಳ ನಡುವೆ ನೂರೆಂಟು ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕವಾಗಿ ಅವರ ನಡುವೆ ಗೌರವ, ಸಹಾನುಭೂತಿ ಮತ್ತು ಸೌಹಾರ್ದಯುತವಾದ ಸಂಬಂಧವಿತ್ತು ಎಂಬುದು ಇಂತಹ ನಿದರ್ಶನಗಳಿಂದ ವ್ಯಕ್ತವಾಗುತ್ತದೆ.
ಭಾರತೀಯ ಪರಂಪರೆಯಲ್ಲಿ ಎಲ್ಲವೂ ಸರಿಯಿತ್ತು, ಎಲ್ಲವೂ ಉದಾತ್ತವಾದುದೇ ಆಗಿತ್ತು ಎಂದೇನೂ ಅಲ್ಲ. ತನ್ನ ಶಿಷ್ಯ ಶ್ರೀರಾಮಾನುಜ ಪ್ರಭಾವಶಾಲಿಯಾಗಿ, ಮಹಾ ಮೇಧಾವಿಯಾಗಿ ಬೆಳೆಯುತ್ತಿದ್ದಾನೆಂಬ ಕಾರಣಕ್ಕೆ ಶಿಷ್ಯನನ್ನು ಕೊಲ್ಲುವ ಹುನ್ನಾರ ಮಾಡಿದ ಯಾದವ ಪ್ರಕಾಶನಂತಹ ಗುರುವಿನ ಪರಂಪರೆಯೂ ನಮ್ಮಲ್ಲುಂಟು. ಶೈವರು ವೈಷ್ಣವರನ್ನು, ವೈಷ್ಣವರು ಮತ್ತೊಂದು ಪಂಥದವರನ್ನು ಕೊಂದ, ಒಬ್ಬರ ಪ್ರಾರ್ಥನಾ ಮಂದಿರವನ್ನು ಮತ್ತೊಬ್ಬರು ಧ್ವಂಸಗೊಳಿಸಿದ ಕೆಟ್ಟ ನಿದರ್ಶನಗಳೂ ಹೇರಳವಾಗಿ ನಮ್ಮಲ್ಲಿ ಸಿಗುತ್ತವೆ. ಆದರೆ ನಾನಾ ಜಾತಿ, ಧರ್ಮ, ನಂಬಿಕೆಗಳ ನಡುವೆ ಸಂಘರ್ಷ ಏರ್ಪಟ್ಟಿರುವ ಕಾಲಮಾನದಲ್ಲಿ ಬದುಕುತ್ತಿರುವ ನಮಗೆ ನಮ್ಮ ಪರಂಪರೆಯ ಉದಾತ್ತವಾದ ಮುಖ ಆದರ್ಶವಾಗಬೇಕಲ್ಲದೇ ಅದರ ನೀಚತನ ಪ್ರೇರಣೆಯಾಗಬಾರದು.
ನಮ್ಮ ನಂಬಿಕೆ, ವಿಚಾರಗಳನ್ನು ಪ್ರಶ್ನಿಸುವ ಶಕ್ತಿಗಳು ವಿಜೃಂಭಿಸುವಾಗ- ಈ ಹಿಂದೆ ಹೇಳಿದಂತೆ- ಶಂಕರ, ಅಲ್ಲಮ, ಗೋರಕ್ಷರಂತೆ ‘ಕೊನೆಗೂ ಒಬ್ಬ ಪೂರ್ವಪಕ್ಷಿ ದೊರೆತನಲ್ಲ’ ಎಂದು ಸಂಭ್ರಮಿಸಬೇಕಲ್ಲದೇ ಭಾವನೆಗೆ ವೃಥಾ ಧಕ್ಕೆ ಉಂಟುಮಾಡಿಕೊಳ್ಳಬಾರದು. ಭಾವನೆಗೆ ಧಕ್ಕೆ ಉಂಟು ಮಾಡಿಕೊಳ್ಳುವವನು ಅಥವಾ ತನ್ನನ್ನು ಪ್ರಶ್ನಿಸಿದವನು ತನ್ನಲ್ಲಿ ಕ್ಷಮಾಪಣೆ ಯಾಚಿಸಬೇಕೆಂದು ಆಗ್ರಹಿಸುವವನು ತಾನು ಪೂರ್ವಪಕ್ಷಿಗೆ ತಕ್ಕುದಾದ ಪ್ರತಿವಾದವನ್ನು ಹೂಡುವಷ್ಟು ಬೌದ್ಧಿಕ ಸಾಮರ್ಥ್ಯ ಹೊಂದಿಲ್ಲವೆಂದು ಸಾಬೀತು ಪಡಿಸುತ್ತಿರುತ್ತಾನೆ.
‘ಜ್ಞಾನವು ವಿಶ್ವದ ಎಲ್ಲ ದಿಕ್ಕುಗಳಿಂದಲೂ ತನ್ನತ್ತ ಹರಿದು ಬರಲಿ’ ಎಂಬ ಋಗ್ವೇದ ಮಂತ್ರವನ್ನು ಪಠಿಸುವವರು ಜಗತ್ತಿನ ಯಾವ ಮೂಲೆಯಿಂದ ಎಂತಹುದೇ ಸವಾಲು ಬಂದರೂ ಅದನ್ನು ಎದುರಿಸಬಲ್ಲೆವೆಂಬ ಛಾತಿಯನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಬೌದ್ಧಿಕ ದಿವಾಳಿತನ ಹೊಂದಿ ತನಗರಿವಿಲ್ಲದೆಯೇ ಹಿಂಸಾಪ್ರವೃತ್ತಿಯ ಸೆಳೆತಕ್ಕೆ ಒಳಗಾಗಬೇಕಾಗುತ್ತದೆ.
ಘನತೆಯಿಲ್ಲದ ಪ್ರಶ್ನೆ ಕೇಳುವ, ವೈಯಕ್ತಿಕ ದಾಳಿಗೆ ಮುಂದಾಗುವ ಪೂರ್ವಪಕ್ಷಿಯು ತನ್ನ ಸೋಲನ್ನು ತಾನೇ ಒಪ್ಪಿಕೊಂಡಿರುತ್ತಾನೆ, ತನ್ನ ಬೌದ್ಧಿಕ ಕ್ಷಾಮವನ್ನು ಅದಾಗಲೇ ಬಯಲು ಮಾಡಿಕೊಂಡಿರುತ್ತಾನೆ. ಅಂತಹವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗುವವರಿಗೆ ಅಥವಾ ತನ್ನ ಬದಲಾಗಿ ದೇವರೇ ಸೇಡು ತೀರಿಸಿಕೊಳ್ಳಲಿ ಎಂದು ಬಯಸುವವರಿಗೆ ಎದುರಾಳಿಯ ಸೋಲನ್ನು ಕಾಣುವ ದೃಷ್ಟಿ ಇರುವುದಿಲ್ಲ; ಬದಲಾಗಿ ಎದುರಾಳಿಯಂತೆಯೇ ತಾವು ಸಹ ಬೌದ್ಧಿಕವಾಗಿ- ಜೊತೆಗೆ ನೈತಿಕವಾಗಿ ಸಹ- ದಿವಾಳಿಯಾಗಿದ್ದೇವೆ ಎಂದು ಜಗಜ್ಜಾಹೀರು ಮಾಡುತ್ತಿರುತ್ತಾರೆ.
ವೈವಿಧ್ಯಮಯ ಜಾತಿ, ಜನಾಂಗ, ಧರ್ಮ, ಆಚರಣೆಗಳನ್ನು ನಂಬಿರುವ ಜನರ ಮಧ್ಯೆ ಬದುಕುತ್ತಿರುವವನು ತನ್ನ ಜೊತೆಗಾರ ಅಡ್ಡಹಾದಿ ಹಿಡಿಯದಂತೆ ಕಾಳಜಿ ವಹಿಸಬೇಕಾಗುತ್ತದೆ. ಅವನು ಅಡ್ಡಹಾದಿ ಹಿಡಿದೇ ತೀರಿದಲ್ಲಿ ವಿಷಾದ ಪಡಬೇಕಾಗುತ್ತದೆ. ಅವನು ಅಡ್ಡಹಾದಿ ಹಿಡಿದನೆಂದು ಅವನನ್ನು ದ್ವೇಷಿಸಿದರೆ, ಅಪಹಾಸ್ಯ ಮಾಡಿದರೆ ಅಥವಾ ಅವನ ಸರ್ವನಾಶವನ್ನು ಬಯಸಿದರೆ ಅದು ಮನುಷ್ಯತ್ವಹೀನ ವರ್ತನೆಯಾಗುತ್ತದೆ.
ಲೇಖಕ: ಸಹಾಯಕ ಪ್ರಾಧ್ಯಾಪಕ , ಜ್ಯೋತಿನಿವಾಸ್ ಕಾಲೇಜ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.