1957ರ ಕಾಲಘಟ್ಟ. ಡಾ. ವಿ.ಕೃ.ಗೋಕಾಕರು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಆಶುಭಾಷಣ ಸ್ಪರ್ಧೆಯ ಹಿಂದಿ ಭಾಷಣದಲ್ಲಿ ನನಗೆ ಮೊದಲ ಬಹುಮಾನ ಬಂದಿತ್ತು. 2ನೇ ಬಹುಮಾನ ಪಡೆದಿದ್ದ ಚಂಪಾ (ಡಾ. ಚಂದ್ರಶೇಖರ ಪಾಟೀಲ) ನನ್ನ ತರಗತಿಯತ್ತ ಬಂದು ಅಭಿನಂದನೆ ಹೇಳಿದ. ನಾನು ನಿನ್ನಷ್ಟು ಚೆಂದ ಮಾತಾಡಲಿಲ್ಲ. ಇನ್ನು ಮುಂದೆ ನಾನು ಹಿಂದಿ ಮಾತನಾಡುವುದಿಲ್ಲ‘ ಎಂದು ತಟ್ಟನೆ ನಿರ್ಧಾರ ತಗೆದುಕೊಂಡಿದ್ದ.
ವಯಸ್ಸಿನಲ್ಲಿ ಆರು ತಿಂಗಳು ದೊಡ್ಡವನಾದ ಚಂಪಾ, ಕಲಿಯುವುದರಲ್ಲಿ ನನಗಿಂತ ಒಂದು ವರ್ಷ ಮುಂದಿದ್ದ. ಆಯ್ಕೆ ಹಾಗೂ ಮೆಚ್ಚುಗೆ ಏಕಕಾಲಕ್ಕೆ ತೆಗೆದುಕೊಳ್ಳುವುದು ಆತನ ಸ್ವಭಾವವಾಗಿತ್ತು. ಕೊನೆಯವರೆಗೂ ನಾವು ಎಷ್ಟೇ ಜಗಳ ಮಾಡಿಕೊಂಡರೂ, ನಮ್ಮ ಸ್ನೇಹವನ್ನು ಎಂದಿಗೂ ಮರೆತಿರಲಿಲ್ಲ.
ಗೋಕಾಕರ ಮನೆಯಲ್ಲಿ ಪ್ರತಿ ಭಾನುವಾರ ಸೇರುತ್ತಿದ್ದ ಚಂಪಾ, ಡಾ.ಗಿರಡ್ಡಿ ಗೋವಿಂದರಾಜ ಹಾಗೂ ಇನ್ನೂ ಅನೇಕರು ಸ್ನೇಹ ಕುಂಜ ಎಂಬ ಗುಂಪು ಕಟ್ಟಿಕೊಂಡು ಅಲ್ಲಿ ನಮ್ಮ ಬರಹಗಳನ್ನು ಓದುವುದು, ಅದನ್ನು ಟೀಕಿಸಿ ವಿಮರ್ಶೆಗೆ ಒಳಪಡಿಸುವ ಚಟುವಟಿಕೆ ಆರಂಭಿಸಿದೆವು. ಆ ಹೊತ್ತಿಗೆ ‘ಬಾನುಲಿ‘ ಎಂಬ ಕವನ ಸಂಕಲನ ಪ್ರಕಟಿಸಿದ್ದ ಚಂಪಾಗೆ ಅಂದಿಗೆ ಅತ್ಯಧಿಕ ₹750 ನಗದು ಪುರಸ್ಕಾರದ ಬಹುಮಾನ ಲಭಿಸಿತ್ತು.
1964ರ ಮೇನಲ್ಲಿ ಗೋಕಾಕರನ್ನು ನೋಡಲು ಮೊದಲ ಸಲ ಬೆಂಗಳೂರಿಗೆ ಹೋಗಿದ್ದೆವು. ಅಂದುನರಸಿಂಹಸ್ವಾಮಿ, ವಿ.ಸೀತಾರಾಮಯ್ಯ, ಡಿವಿಜಿ ಅವರನ್ನು ಭೇಟಿಯಾದೆವು. ಅಲ್ಲಿಂದ ಮೈಸೂರಿಗೆ ತೆರಳಿ ಅಡಿಗರನ್ನು ಭೇಟಿಯಾದೆವು. ಕುವೆಂಪು ಹಾಗೂ ತೇಜಸ್ವಿ ಭೇಟಿ ಸಾಧ್ಯವಾಗಲಿಲ್ಲ. ಆದರೆ ಅವರ ಲಹರಿ ಪತ್ರಿಕೆ ನೋಡಬೇಕೆಂಬ ನಮ್ಮ ಹಂಬಲ ಈಡೇರದಿದ್ದರೂ, ಸಂಕ್ರಮಣ ಆರಂಭ ಅಲ್ಲಿಯೇ ಆಯಿತು.
ಧಾರವಾಡಕ್ಕೆ ಮರಳಿ ಈ ಕುರಿತು ಚರ್ಚೆನಡೆಸುತ್ತಿದ್ದ ಸಂದರ್ಭದಲ್ಲಿ ಬಂದ ಗಿರಡ್ಡಿ, ನಾನೂ ನಿಮ್ಮ ಕೂಡ ಸೇರ್ಕೋತೀನಿ ಅಂದ. ಎಲ್ಲರೂ ತಲಾ ₹10 ಹಾಕಿ ‘ಸಂಕ್ರಮಣ’ ಆರಂಭಿಸಿದೆವು.ಸಂಕ್ರಮಣದಲ್ಲಿ ಕವಿತೆ ನನ್ನ ಕ್ಷೇತ್ರ, ಗಿರಡ್ಡಿ ಕಥೆ ಹಾಗೂ ವಿಮರ್ಶೆಗಳ್ನು ನೋಡಿಕೊಳ್ಳುತ್ತಿದ್ದ. ಚಂಪಾ ನಾಟಕ, ವಿಮರ್ಶೆ ಹಾಗೂ ವ್ಯಂಗ್ಯ ಬರಹಗಳತ್ತ ಒಲವು ತೋರಿದ. ಯು.ಆರ್.ಅನಂತಮೂರ್ತಿ ಸೇರಿದಂತೆ ಹಲವರನ್ನು ಟೀಕಿಸಿ ಚಂಪಾ ಲೇಖನ ಬರೆದಿದ್ದ. ಗಿರಡ್ಡಿ ಹಾಗೂ ಚಂಪಾ ಅವರ ಬರಹದ ಒಲವು ನಂತರ ಈ ಕ್ಷೇತ್ರಗಳತ್ತಲೇ ವಾಲಿತು. ಸಂಕ್ರಮಣದ 11ನೇ ವರ್ಷ ನಡೆಯುತ್ತಿದ್ದ ಸಂದರ್ಭದಲ್ಲಿ ‘ಮನೋಹರ’ವಾಗುತ್ತಿದ್ದ ಗಿರಡ್ಡಿ ವರ್ತನೆ ಕುರಿತೇ ಚಂಪಾ ಲೇಖನ ಬರೆದ. ಅದರಿಂದ ಬೇಸರಗೊಂಡ ಗಿರಡ್ಡಿ, ಪತ್ರಿಕೆಯಿಂದ ಹೊರ ನಡೆದ.
ನಂತರ ಮೈಸೂರಿನಲ್ಲಿ ನಡೆದ ಬರಹಗಾರರ ಒಕ್ಕೂಟದ ಸಭೆಯಲ್ಲಿ ಬ್ರಾಹ್ಮಣರ ಪತ್ರಿಕೆಗೆ ಬರೆಯುವುದು ಹಾಗೂ ತರಿಸುವುದನ್ನು ನಿಲ್ಲಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಪ್ರೊ. ನಂಜುಂಡಸ್ವಾಮಿ, ತೇಜಸ್ವಿ, ಲಂಕೇಶರದ್ದು ಮುಖ್ಯಧ್ವನಿ. ಜಿ.ಎಸ್.ಶಿವರುದ್ರಪ್ಪ ಅವರ ಅಧ್ಯಕ್ಷರಾಗಿ, ಚಂಪಾ ಕಾರ್ಯದರ್ಶಿಯಾಗಿದ್ದರು ಆ ಒಕ್ಕೂಟಕ್ಕೆ. ಇದಕ್ಕೆ ನಮ್ಮ ‘ಸಂಕ್ರಮಣ’ ಬಳಸಿಕೊಳ್ಳುವ ನಿರ್ಧಾರಕ್ಕೆ ನನ್ನ ವಿರೋಧವಿತ್ತು. ಇವ‘ಬಿಡುವುದಾದರೆ ಬಿಟ್ಟುಬಿಡು. ನಾನೇ ಪತ್ರಿಕೆಯನ್ನು ನೋಡಿಕೊಳ್ಳುತ್ತೇನೆ’ ಎಂದು ಚಂಪಾ ಹೇಳಿದ. ನಂತರ ಪತ್ರಿಕೆಯನ್ನು ತಾನೊಬ್ಬನೇನಡೆಸಿದ.
ರಾಜಕೀಯ ಒಲವು ಹೊಂದಿದ್ದ ಚಂಪಾ ಜೆ.ಪಿ.ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ. ಜೆ.ಪಿ. ಚಳವಳಿಯಲ್ಲಿ ಚಂಪಾ ಬಂಧನವೂ ಆಯಿತು. ಜನರನ್ನು ಬಳಸಿಕೊಳ್ಳುವ ಹಾಗೂ ತನ್ನನ್ನು ಬೆಳೆಸಿಕೊಳ್ಳುವ ಚಾತುರ್ಯ ಆತನಲ್ಲಿತ್ತು. ಮೈಸೂರಿನ ಒಕ್ಕೂಟದಿಂದ ಜಾತಿ ಒಕ್ಕೂಟದತ್ತ, ನಂತರ ಬಂಡಾಯದತ್ತ ವಾಲಿದ.
ನನ್ನ ‘ಧಾರವಾಡದಲ್ಲಿ ಇನ್ನೂ ಕತ್ತಲೆ ಇತ್ತು’ ಎಂಬ ಕವಿತೆಗೆ ಪತ್ರ ಬರೆದು ಪ್ರತಿಕ್ರಿಯಿಸಿದ ಚಂಪಾ, ‘ಶೆಟ್ಟಿ. ನೀನು ನೀಚ. ತಾಯಿಗಂಡ‘ ಎಂದು ಬರೆದ. ಆದರೆ ಮುಂದೆ ಒಂದು ದಿನ 'ಏನೂ ತಪ್ಪು ತಿಳಿಬ್ಯಾಡ. ಒಮ್ಮೊಮ್ಮೆ ಕೆಟ್ಟದ್ದು ಬರೆದಿರುತ್ತೇನೆ‘ ಎಂದ. ಇತರರಿಗೆ ಬೈಯ್ಯುವಾಗ ಬಹಿರಂಗವಾಗಿ ಹೇಳುತ್ತಿದ್ದ ಚಂಪಾ, ತನ್ನ ತಪ್ಪು ಇದ್ದಾಗ, ಯಾರಿಗೆ ಹೇಳಬೇಕೋ ಅವರಿಗಷ್ಟೇ ಹೇಳಿ ನಿರಾಳನಾಗುತ್ತಿದ್ದ.
ಗೋಕಾಕ್ ವರದಿ ಇನ್ನೂ ಸಲ್ಲಿಸದ ಸಂದರ್ಭದಲ್ಲೇ ತನ್ನ ಗುರುಗಳಾದ ವಿ.ಕೃ. ಗೋಕಾಕರ ವಿರುದ್ಧ ‘ಗೋಕಾಕ್ ಗೋಬ್ಯಾಕ್‘ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದ. ಆ ಸಂದರ್ಭದಲ್ಲಿ ಇಂಗ್ಲಿಷ್ ಫಲಕಗಳಿಗೆ ವಿದ್ಯಾರ್ಥಿಗಳ ಜತೆಗೂಡಿ ಕಪ್ಪುಮಸಿ ಬಳಿದ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಕಚೇರಿಗೆ ತೆರಳಿ ಇಂಗ್ಲಿಷ್ ಟೈಪ್‌ರೈಟರ್ ಅನ್ನು ತಂದು ಜಿಲ್ಲಾಧಿಕಾರಿ ಕಚೇರಿಗೆ ಹಾಕಿದ್ದ. ಇಂಥ ದಿಟ್ಟ ಹೆಜ್ಜೆಯನ್ನು ಇಟ್ಟ ಯಾವ ಅಧ್ಯಕ್ಷರು ಹಿಂದೆಯೂ ಇರಲಿಲ್ಲ, ಮುಂದೆಯೂ ಬರಲಿಲ್ಲ.
ಬೆಂಗಳೂರಿಗೆ ಹೋದಮೇಲಂತೂ ಆತ ಮತ್ತು ಸಂಕ್ರಮಣ ಸಂಪೂರ್ಣ ಬದಲಾಯಿತು. ಆದರೆ ಅವನ ಕುಟುಂಬದೊಂದಿಗಿನ ನಮ್ಮ ಸ್ನೇಹ ಎಂದಿಗೂ ಮಾಸಲಿಲ್ಲ. ಆತನೂ ಅದನ್ನು ಎಂದಿಗೂ ಮರೆಯಲಿಲ್ಲ. ಚಿಂತನೆಯ ಸ್ವರೂಪ ಬದಲಾದಂತೆ ನನ್ನ ಅವನ ಒಡನಾಟವೂ ಕಡಿಮೆಯಾಯಿತು.
ಅಧಿಕಾರ, ಪ್ರಚಾರ ಹಾಗೂ ಹಣದ ಲೋಭ ಆತನನ್ನು ಹಾಳು ಮಾಡಿತು. ನಮ್ಮಲ್ಲಿನ ಅಕ್ಷರಬಂಧುಗಳು ಹಾಗೂ ಸಾಹಿತಿಗಳು ಸ್ವತಃ ಅಪನಂಬಿಕೆಯವರು, ಬೇರೆಯರನ್ನೂ ಅದೇ ದೃಷ್ಟಿಕೋನದಿಂದ ನೋಡುವವರು. ಹೀಗಾಗಿ ಚಂಪಾ ನಡೆಸುತ್ತಿದ್ದ ಸಂಕ್ರಮಣವನ್ನೂ ಕಡೆಗೆ ಕೈಬಿಟ್ಟರು. ಅದು ನಿಂತಿತು.
ಒಳಗೊಳಗೆ ಆತನಿಗೂ ತಾನು ಎಂಥ ವೈರುಧ್ಯದಲ್ಲಿ ಬದುಕುತ್ತಿದ್ದೇನೆ ಎಂದೆನಿಸುತ್ತಿತ್ತು. ಪ್ರತಿಭಾವಂತನಾಗಿದ್ದ ಚಂಪಾ ದೊಡ್ಡ ಕವಿ ಆಗಬಹುದಾಗಿತ್ತು. ತನ್ನ ವ್ಯಂಗ್ಯ ಹಾಗೂ ಬರವಣಿಗೆ ಮೂಲಕ ದೊಡ್ಡ ನಾಟಕಕಾರನಾಗಬಹುದಾಗಿತ್ತು. ಶ್ರೀರಂಗರ ನಂತರ ಚಂಪಾ ಆ ಸ್ಥಾನವನ್ನು ತುಂಬುವ ಸಾಧ್ಯತೆಯನ್ನು ತಾನೇ ಕೈಚೆಲ್ಲಿದ.
ಆದರೆ ಆತನೊಳಗೆ ಅವನ್ನನ್ನು ಕೊರೆಯುತ್ತಿದ್ದ ಹೇಳಲಾರದ ನೋವೊಂದಿತ್ತು. ಧಾರವಾಡದಲ್ಲೇ ಮೊಳಕೆಯೊಡೆದು, ಬೇರು ಬಿಟ್ಟ ಆ ಸಂಗತಿಯನ್ನು ಚಂಪಾ ಕೊನೆಯವರೆಗೂ ಮರೆಯಲು ಸಾಧ್ಯವಾಗಲಿಲ್ಲ.ತನ್ನ ಮೂಲ ವ್ಯಕ್ತಿತ್ವದ ಕಾವು ಹಾಗೂ ಕಾವ್ಯವನ್ನು ಕಳೆದುಕೊಂಡ ವ್ಯಕ್ತಿ, ಅದನ್ನೇ ಬಿಟ್ಟು ದೂರ ಹೋದ. ಗುಲಬರ್ಗಾದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಸಂದರ್ಭದಲ್ಲಿ ಕಾಲು ಪೆಟ್ಟು ಮಾಡಿಕೊಂಡ. ಅದರ ಆಘಾತದಿಂದಲೂ ಆತ ಹೊರಬರಲಿಲ್ಲ. ಪತ್ನಿ ನೀಲವ್ವ ಚೆನ್ನಾಗಿ ಆರೈಕೆ ಮಾಡಿದಳು. ಡಿ. 25ರಂದು ಬೆಂಗಳೂರಿಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ. ಅಂದು ನಮ್ಮೊಂದಿಗೆ ಮಾತನಾಡಿದ್ದ.
ಬೈಯ್ಯುತ್ತಿದ್ದ, ಸಿಟ್ಟಿಗೇಳುತ್ತಿದ್ದ. ಅದು ಅವನ ಸ್ವಭಾವ. ಆದರೆ ಉಪಕಾರವನ್ನು ಎಂದಿಗೂ ಮರೆಯುವ ಸ್ವಭಾವ ಅವನದ್ದಾಗಿರಲಿಲ್ಲ.ಗಿರಡ್ಡಿ ಹೋದಾಗ ಮುಂದಿನಪಾಳಿ ಯಾರದಪ್ಪಾ ಎಂದು ಕೇಳಿದ್ದೆ. ಆಗ ಅದೇಕೋ ಚಂಪಾ ಅತ್ತುಬಿಟ್ಟ.
ಧಾರವಾಡದ ಅನೇಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆದರೆ ಧಾರವಾಡದ ಕನ್ನಡ ಸೊಗಡು, ಪ್ರತಿಷ್ಠೆ ಹಾಗೂ ಗೌರವದ ಗುಡಿಯನ್ನು ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸಿದ್ದು ಚಂಪಾ ಮಾತ್ರ ಎಂಬ ಹೆಮ್ಮೆ ನನ್ನದು.
ನಾಟಕಕ್ಕೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಬಹುಮಾನ
ಚಂಪಾ ಬರೆದಿದ್ದ ಏಕಾಂಕ ನಾಟಕ‘ಗುರ‍್ತಿನವರು’ ಗೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಮೊದಲ ಬಹುಮಾನ ಲಭಿಸಿತ್ತು. ದೆಹಲಿಯಿಂದ ಕರ್ನಾಟಕಕ್ಕೆ ಮರಳಿದ ಬಿ.ವಿ.ಕಾರಂತರು ಮಾಡಿದ ಮೊದಲ ನಾಟಕ ಅದಾಗಿತ್ತು. ಇಂಗ್ಲೆಂಡಿಗೆ ಹೋದ ಚಂಪಾ ಅಲ್ಲಿಂದಲೇ‘ಗೋಕರ್ಣದ ಗೌಡಶಾಣಿ‘ ನಾಟಕವನ್ನು ಬರೆದು ನನಗೆ ಅಂಚೆ ಮೂಲಕ ಕಳುಹಿಸಿದ್ದ.ಅದರಲ್ಲಿ ಗಿರೀಶ ಕಾರ್ನಾಡ ಹಾಗೂ ಶ್ರೀರಂಗರನ್ನು ಟೀಕಿಸಿದ್ದ. ಅದನ್ನೂ ನಾಟಕ ಮಾಡಿ ಪ್ರದರ್ಶಿಸಲಾಯಿತು. ಸಾಕಷ್ಟು ಮೆಚ್ಚುಗೆಯೂ ಲಭಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.