ನ್ಯೂಜಿಲೆಂಡ್ ದೇಶದ ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯದ ದಿನವೆಂದರೆ ಈ ವರ್ಷದ ಅಕ್ಟೋಬರ್ 20. ಆ ದೇಶದ ಪುರುಷರ ತಂಡವು 36 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಪಂದ್ಯ ಜಯಿಸಿದ್ದು ಮತ್ತು ಮಹಿಳೆಯರ ತಂಡವು ಟಿ20 ವಿಶ್ವಕಪ್ ಗೆದ್ದ ದಿನ ಇದು. ಒಂದು ಕೋಟಿಗೂ ಕಡಿಮೆ ಜನಸಂಖ್ಯೆ ಇರುವ ನ್ಯೂಜಿಲೆಂಡ್‌ನಲ್ಲಿ ಸಂಭ್ರಮದ ಹೊಳೆಯೇ ಹರಿಯುತ್ತಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟಾಮ್ ಲೇಥಮ್ ಬಳಗವು ಭಾರತ ತಂಡದ ದಿಟ್ಟ ಹೋರಾಟವನ್ನು ಎದುರಿಸಿ ನಿಂತಿತು. ಅತ್ತ ಸೋಫಿ ಡಿವೈನ್ ನಾಯಕತ್ವದ ಮಹಿಳಾ ತಂಡವೂ ಪ್ರತಿ ಹಂತದಲ್ಲಿಯೂ ಕಠಿಣ ಸವಾಲು ಎದುರಿಸಿತು. ಆರು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ಪಾರಮ್ಯವನ್ನು ಸೆಮಿಫೈನಲ್‌ನಲ್ಲಿ ಅಂತ್ಯಗೊಳಿಸಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಕಿವೀಸ್ ಮಹಿಳೆಯರು ಫೈನಲ್‌ನಲ್ಲಿ ಸೋಲಿಸಿದರು.
ಆದರೆ, ಬೆಂಗಳೂರಿನ ಟೆಸ್ಟ್ ಪಂದ್ಯ ಹಾಗೂ ಮಹಿಳಾ ವಿಶ್ವಕಪ್‌ನಲ್ಲಿ ಸೋತವರ ಛಲದ ಮನೋಭಾವ ಮತ್ತು ದಿಟ್ಟ ಹೋರಾಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರು ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆಗಿದ್ದ ರೋಹಿತ್ ಶರ್ಮಾ ಪಡೆ, ಎರಡನೇ ಇನಿಂಗ್ಸ್‌ನಲ್ಲಿ 462 ರನ್ ಗಳಿಸಿ, ದಿಟ್ಟ ಹೋರಾಟ ನಡೆಸಿದ್ದು ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಆಟದ ಕುರಿತು ಚರ್ಚೆ ನಡೆಯುತ್ತಿದೆ. ಕೊನೆಯ ಕ್ಷಣದವರೆಗೂ ಹೋರಾಡುವ ಛಲದ ಗುಣದಿಂದಾಗಿಯೇ ಸೋತ ತಂಡಗಳಿಗೂ ಮನ್ನಣೆ ಸಿಗುತ್ತದೆ.
ಈ ಬಾರಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡದ ವೈಫಲ್ಯ (ಗುಂಪು ಹಂತದಲ್ಲಿ ನಿರ್ಗಮನ) ಮಾತ್ರ ಸಹನೀಯವಲ್ಲವೆಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಅವರೇ ತಂಡದ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಈಗಿನಿಂದಲೇ ಸಿದ್ಧತೆ ಆಗಬೇಕು, 35 ವರ್ಷ ವಯಸ್ಸಿನ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಬದಲಾಗಬೇಕು, ಯುವ ಆಟಗಾರ್ತಿ ಯೊಬ್ಬರಿಗೆ ನಾಯಕಿಯ ಪಟ್ಟ ಕಟ್ಟಬೇಕು ಎಂದು ಪ್ರತಿಪಾದಿಸಿದ್ದಾರೆ. ಆದರೆ ಮುಂಬರುವ ನ್ಯೂಜಿಲೆಂಡ್ ಎದುರಿನ ಸರಣಿಗೆ ಹರ್ಮನ್ ಅವರನ್ನೇ ನಾಯಕಿಯನ್ನಾಗಿ ಮುಂದುವರಿಸಲಾಗಿದೆ. ಲೋಪಗಳನ್ನು ತಿದ್ದಿಕೊಳ್ಳಲು ಅವರಿಗೆ ಅವಕಾಶ ಕೊಡಲಾಗಿದೆ.
ಆದರೆ ಇಲ್ಲಿ ನಾಯಕಿ ಮಾತ್ರವಲ್ಲ, ತಂಡದ ಉಳಿದ ಆಟಗಾರ್ತಿಯರು ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಆತ್ಮಾವಲೋಕನ ಮಾಡಿ ಕೊಳ್ಳಬೇಕಾದ ಅಗತ್ಯವಿದೆ. ವಿಶ್ವಕಪ್ ಟೂರ್ನಿಯಲ್ಲಿ ಅನುಭವಿಸಿದ ಸೋಲಿನಿಂದ ಕಲಿಯಬೇಕಾದ ಪಾಠಗಳು ಹಲವಾರು ಇವೆ.
ಈ ಟೂರ್ನಿಯಲ್ಲಿ ಭಾರತ ತಂಡವು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಶ್ರೀಲಂಕಾ ಕೂಡ ಇದೇ ಗುಂಪಿನಲ್ಲಿದ್ದವು. ಕಠಿಣ ಸವಾಲು ಒಡ್ಡುವ ತಂಡಗಳು ಇವು. ಆದರೆ ಈ ಸವಾಲನ್ನು ಎದುರಿಸುವ ಪೂರ್ವತಯಾರಿಯಲ್ಲಿ ತಂಡ ಎಡವಿತು. ಆಗಸ್ಟ್‌ನಲ್ಲಿ ನಡೆದಿದ್ದ ಏಷ್ಯಾ ಕಪ್ ಟೂರ್ನಿಯ ನಂತರ ಹರ್ಮನ್‌ಪ್ರೀತ್ ಬಳಗವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲಿಲ್ಲ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ಒಂದೂವರೆ ತಿಂಗಳು ಸಿದ್ಧತೆ ನಡೆಸಿತು. ಆದರೆ ನ್ಯೂಜಿಲೆಂಡ್ ಸೇರಿದಂತೆ ಕೆಲವು ತಂಡಗಳು ದ್ವಿಪಕ್ಷೀಯ ಸರಣಿಗಳಲ್ಲಿ ಆಡಿ ವಿಶ್ವಕಪ್ ಟೂರ್ನಿಗೆ ಬಂದಿದ್ದವು. ‘ಮ್ಯಾಚ್ ಟೈಮ್’ ಅನುಭವದ ಕೊರತೆಯಿಂದಾಗಿ ಟೂರ್ನಿಯಲ್ಲಿ ಹೊಂದಿಕೊಳ್ಳಲು ಭಾರತ ತಂಡಕ್ಕೆ ಕಷ್ಟವಾಯಿತು. ಮಹಿಳೆಯರಿಗೆ ಭಾರತದಲ್ಲಿ ದೇಶಿ ಟೂರ್ನಿಗಳೂ (ಪುರುಷರ ಕ್ರಿಕೆಟ್‌ನಷ್ಟು) ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿಲ್ಲ. ಬಿಸಿಸಿಐ ಅಂತರರಾಷ್ಟ್ರೀಯ ವೇಳಾಪಟ್ಟಿ ಸಿದ್ಧಪಡಿಸುವಾಗ ವಿಶ್ವಕಪ್ ಟೂರ್ನಿಗೂ ಮುನ್ನದ ಸಿದ್ಧತೆಯನ್ನು ನಿರ್ಲಕ್ಷಿಸಿತು.
ಇದರ ಪರಿಣಾಮ ಮೊದಲ ಪಂದ್ಯದಲ್ಲಿ ಕಂಡಿತು. ನ್ಯೂಜಿಲೆಂಡ್ ವಿರುದ್ಧ ಸೋತಿತು. ಆದರೆ ನಂತರದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಜಯಿಸಿತು. ಇದು ಸ್ವಲ್ಪ ಭರವಸೆ ಮೂಡಿಸಿತ್ತು. ಆದರೆ ಭಾರತ ತಂಡಕ್ಕೆ ಹೋಲಿಕೆ ಮಾಡಿದರೆ ಪಾಕಿಸ್ತಾನ ತಂಡವು ಅಷ್ಟೇನೂ ಬಲಾಢ್ಯವಲ್ಲ. ಶ್ರೀಲಂಕಾ ಎದುರು ಜಯಿಸಿದ ಹರ್ಮನ್‌ಪ್ರೀತ್ ಬಳಗವು ಆಸ್ಟ್ರೇಲಿಯಾ ಎದುರು ಸೋಲುವುದರೊಂದಿಗೆ ಸೆಮಿಫೈನಲ್ ಹಾದಿ ಕಠಿಣವಾಯಿತು. ಆ ಪಂದ್ಯದ ಕೊನೆಯ ಓವರ್‌ನಲ್ಲಿ ನಾಯಕಿ ಹರ್ಮನ್ ಅವರು ಆಡಿದ ರೀತಿ ಚರ್ಚೆಗೆ ಗ್ರಾಸವಾಯಿತು. ಭಾರತದ ಗೆಲುವಿಗೆ ಕೊನೆಯ ಓವರ್‌ನಲ್ಲಿ 14 ರನ್‌ಗಳ ಅಗತ್ಯವಿತ್ತು. ತಂಡ 5 ವಿಕೆಟ್ ಕಳೆದುಕೊಂಡಿತ್ತು. ಆದ್ದರಿಂದ ಅನುಭವಿ ಹರ್ಮನ್‌ಪ್ರೀತ್ ಅವರ ಮೇಲೆ ಹೆಚ್ಚಿನ ಹೊಣೆ ಇತ್ತು. ಆದರೆ ಈ ಓವರ್‌ನಲ್ಲಿ ಕೌರ್ ಗಳಿಸಿದ್ದು ಎರಡು ಒಂಟಿ ರನ್‌ಗಳನ್ನು ಮಾತ್ರ. ಈ ಓವರ್‌ನಲ್ಲಿ ಕೆಳಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಔಟಾದರು. ಇದೇ ಪಂದ್ಯದಲ್ಲಿ ಭಾರತದ ಫೀಲ್ಡರ್‌ಗಳು 5 ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದು ಕೂಡ ಸೋಲಿಗೆ ಕಾರಣವಾಯಿತು.
ಇಡೀ ಟೂರ್ನಿಯಲ್ಲಿ ಭಾರತಕ್ಕೆ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ದೊರೆಯಲಿಲ್ಲ. 19 ವರ್ಷದೊಳಗಿನವರ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿಯಾಗಿದ್ದ ಶಫಾಲಿ ವರ್ಮಾ ಹಾಗೂ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಜೋಡಿಯು ಉತ್ತಮ ಆರಂಭ ನೀಡಲಿಲ್ಲ. ಸ್ಮೃತಿ ಈ ಟೂರ್ನಿಯಲ್ಲಿ ಒಂದು ಅರ್ಧಶತಕ ಸಹಿತ ಗಳಿಸಿದ್ದು 75 ರನ್ ಮಾತ್ರ. ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಅವರು ಕೆಲವು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರು. ಆದರೆ ಅವರೂ ಸ್ಥಿರ ಪ್ರದರ್ಶನ ನೀಡಲಿಲ್ಲ. ಹರ್ಮನ್ ಅವರು 4 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 150 ರನ್ ಗಳಿಸಿದರು. ಹೇಮಲತಾ ದಯಾಳನ್, ಯಷ್ಟಿಕಾ ಭಾಟಿಯಾ ಗಾಯಗೊಂಡಿದ್ದರಿಂದ ಮೂರನೇ ಕ್ರಮಾಂಕದಲ್ಲಿ ಆಡುವ ಅನುಭವಿಯ ಕೊರತೆ ಕಾಡಿತು.
ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ತಮ್ಮ ಮೇಲಿನ ನಿರೀಕ್ಷೆಯನ್ನು ತಕ್ಕಮಟ್ಟಿಗೆ ಈಡೇರಿಸಿದರು. ಆದರೆ ಸ್ಪಿನ್ ವಿಭಾಗದಲ್ಲಿ ದೀಪ್ತಿ ಶರ್ಮಾ, ಪೂಜಾ ಮತ್ತು ಶ್ರೇಯಾಂಕಾ ಪಾಟೀಲ ಅವರು ದೊಡ್ಡ ಸವಾಲು ಎದುರಿಸಲು ಪಕ್ವಗೊಳ್ಳಬೇಕಿದೆ. ಫೀಲ್ಡಿಂಗ್ ವಿಭಾಗದಲ್ಲಿ ಸುಧಾರಣೆ ಅಗತ್ಯವಿದೆ. ಫಿಟ್‌ನೆಸ್ ಕೂಡ ಹೆಚ್ಚಬೇಕಿದೆ.
‘ಪುರುಷರ ತಂಡವು ಮಹತ್ವದ ಸರಣಿ ಅಥವಾ ಟೂರ್ನಿಯಲ್ಲಿ ಆಡಿ ಬಂದ ನಂತರ ಪ್ರಮುಖರಿಗೆ ವಿಶ್ರಾಂತಿ ನೀಡಲಾಗುತ್ತದೆ. ನಂತರದ ಸರಣಿಗೆ ಯುವಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತದೆ. ಇದರಿಂದಾಗಿ ಯುವ ಆಟಗಾರರು ಬೆಳೆಯುತ್ತಾರೆ. ಆದರೆ ಮಹಿಳಾ ಕ್ರಿಕೆಟ್ ನಲ್ಲಿ ಈ ರೀತಿಯಾಗುತ್ತಿಲ್ಲ. ಹೊಸ ಪ್ರತಿಭೆಗಳಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶಗಳನ್ನು ಹೆಚ್ಚು ಕೊಡಬೇಕು. ಆಗ ಮಾತ್ರ ಅವರಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ’ ಎಂದು ಮಿಥಾಲಿ ರಾಜ್ ಹೇಳುತ್ತಾರೆ.
ಶಾಂತಾ ರಂಗಸ್ವಾಮಿ, ಕಲ್ಪನಾ, ಡಯಾನಾ ಎಡುಲ್ಜಿ, ಇತ್ತೀಚೆಗೆ ಐಸಿಸಿ ಹಾಲ್ ಆಫ್ ಫೇಮ್ ಸೇರಿದ ನೀತು ಡೇವಿಡ್, ಜೂಲನ್ ಗೋಸ್ವಾಮಿ ಆಡುವ ಕಾಲಘಟ್ಟದಲ್ಲಿ ಮಹಿಳಾ ಕ್ರಿಕೆಟ್‌ಗೆ ಹೆಚ್ಚು ಸೌಲಭ್ಯಗಳಿರಲಿಲ್ಲ. ಆದರೂ ಅವರೆಲ್ಲ ಗಮನಾರ್ಹ ಸಾಧನೆ ಮಾಡಿದರು. ಈಗ ಸಾಕಷ್ಟು ಸೌಲಭ್ಯ, ಸಮಾನ ವೇತನ ಸಿಗುತ್ತಿವೆ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದ ಮಟ್ಟಕ್ಕೆ ಏರಲು ಬೇಕಾದ ಸಿದ್ಧತೆ ಮತ್ತು ಬದ್ಧತೆಯನ್ನು ಇಂದಿನ ಆಟಗಾರ್ತಿಯರು ರೂಢಿಸಿಕೊಳ್ಳಬೇಕಿದೆ. ತಂಡದ ಕೋಚ್ ಅಮೋಲ್ ಮಜುಂದಾರ್ ಅವರ ಮುಂದೆ ಹೊಸ ತಂತ್ರಗಾರಿಕೆ ರೂಪಿಸುವ ಸವಾಲು ಕೂಡ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.