ADVERTISEMENT

ವಿಶ್ಲೇಷಣೆ | ಮುಸ್ಲಿಮರಿಗೂ ಬೇಕಿದೆ ಉತ್ತಮ ರಾಜಕಾರಣ

ಯೋಗೇಂದ್ರ ಯಾದವ್
Published 13 ನವೆಂಬರ್ 2024, 0:17 IST
Last Updated 13 ನವೆಂಬರ್ 2024, 0:17 IST
   

‘ಕಪ್ಪು ಜನರು ತನಗೆಂದಿಗೂ ಮತ ನೀಡುವುದೇ ಇಲ್ಲ ಎಂದೇ ರಿಪಬ್ಲಿಕನ್‌ ಪಕ್ಷವು ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತೆಯೇ ಕಪ್ಪು ಜನರು ತನಗೇ ಮತ ಹಾಕುತ್ತಾರೆ ಎಂದೇ ಡೆಮಾಕ್ರಟಿಕ್‌ ಪಕ್ಷ ಸಹ ಅವರ ಬಗ್ಗೆ ಯೋಚಿಸುವುದಿಲ್ಲ’. ಅಮೆರಿಕದ ರಾಜಕಾರಣದ ಬಗ್ಗೆ ಜನಜನಿತವಾಗಿರುವ ಈ ಅಣಕವು ಸಮಕಾಲೀನ ಭಾರತದ ಮುಸ್ಲಿಮರ ಪರಿಸ್ಥಿತಿಗೆ ಚೆನ್ನಾಗಿ ಹೊಂದುತ್ತದೆ. 

ದೇಶದಲ್ಲಿನ ಮುಸ್ಲಿಮೇತರ ಪ್ರತಿಯೊಂದು ಸಮುದಾಯವೂ ವಿದ್ಯುತ್, ರಸ್ತೆ, ನೀರು ಅಥವಾ ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ವಿಷಯಗಳ ಆಧಾರದಲ್ಲಿ ಮತವನ್ನು ಹಾಕುತ್ತದೆ. ಆದರೆ ಮುಸ್ಲಿಮರು ಮಾತ್ರ ಬದುಕುಳಿಯಲು, ಗುಂ‍‍ಪುಹಲ್ಲೆ, ಬುಲ್ಡೋಜರ್ ಮತ್ತು ಗಲಭೆಗಳಿಂದ ತಪ್ಪಿಸಿಕೊಳ್ಳಲು ಮತ ಹಾಕಬೇಕಾದ ಶೋಚನೀಯ ಸ್ಥಿತಿಗೆ ಸಿಲುಕಿದ್ದಾರೆ. ತಮ್ಮನ್ನು ತೀರಾ ದ್ವೇಷದಿಂದ, ತಿರಸ್ಕಾರದಿಂದ ನಡೆಸಿಕೊಳ್ಳುವ ಪಕ್ಷಕ್ಕಂತೂ ಅವರು ಮತ ಹಾಕುವುದಿಲ್ಲ. ಅಂತೆಯೇ ಅವರು ಮತ ಹಾಕುವ ಪಕ್ಷವೂ ಅವರನ್ನು ತೀರಾ ಭಿನ್ನವಾಗೇನೂ ನಡೆಸಿಕೊಳ್ಳುವುದಿಲ್ಲ.

ಒತ್ತೆಯಾಳಿನಂತಹ ಈ ಸ್ಥಿತಿಯನ್ನು ಮುಸ್ಲಿಮರೇ ತಂದುಕೊಂಡದ್ದಲ್ಲ. ಮುಸ್ಲಿಂ ವಿರೋಧಿ ನೀತಿ–ನಿಲುವುಗಳನ್ನೇ ಆತುಕೊಂಡು ಬೆಳೆಯುತ್ತಿರುವ ಬಿಜೆಪಿ, ದೇಶದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯವನ್ನು ಇಂತಹದ್ದೊಂದು ಸ್ಥಿತಿಗೆ ದೂಡಿದೆ. ಮುಸ್ಲಿಮರ ಈ ಸ್ಥಿತಿಗೆ, ಮುಸ್ಲಿಂ ರಾಜಕೀಯ ನಾಯಕತ್ವ ಮತ್ತು ‘ಜಾತ್ಯತೀತ’ ಪಕ್ಷಗಳ ಕೊಡುಗೆಯೂ ಕಡಿಮೆಯೇನಿಲ್ಲ. ಮುಸ್ಲಿಮರಿಗೆ ಅಭದ್ರತೆ ಕಾಡುವಂತೆ ಮಾಡಿ ಮತ್ತು ಅವರನ್ನು ದೌರ್ಜನ್ಯಕ್ಕೆ ತುತ್ತಾಗುವಂತೆ ಇರಿಸಿ ಅವರ ಮತಗಳನ್ನು ಸಮೂಹಿಕವಾಗಿ ತಮ್ಮದಾಗಿಸಿಕೊಳ್ಳುವ ರಾಜಕಾರಣವು ಬಿಜೆಪಿಯ ಬೆಳವಣಿಗೆಯ ಜೊತೆಗೇ ಆರಂಭವಾಗಿದ್ದಲ್ಲ.

ADVERTISEMENT

ಇದೊಂದು ಬೌದ್ಧಿಕ ಕಸರತ್ತಿನ ಬಲೆಯ ರೂಪದಲ್ಲಿ ವ್ಯಕ್ತವಾಗುತ್ತದೆ. ಮುಸ್ಲಿಮರ ವಿಷಯಗಳಿಗೆ ಸಂಬಂಧಿಸಿದಂತೆ ‘ಜಾತ್ಯತೀತ’ರ ಪ್ರತಿಕ್ರಿಯೆಯು ಅವರು ವಿರೋಧಿಸುವ ಹಿಂದೂ ಬಹುಸಂಖ್ಯಾತ ಕೋಮುವಾದಿ ರಾಜಕಾರಣದ ಪ್ರತಿಬಿಂಬದಂತೆಯೇ ಇರುತ್ತದೆ. ಆರ್‌ಎಸ್ಎಸ್‌–ಬಿಜೆಪಿ ಒಂದು ಕಾರ್ಯಸೂಚಿಯನ್ನು ರೂಪಿಸುತ್ತವೆ, ಅವರು ಹೇಳಿದ್ದನ್ನೇ ನಾವು ತಲೆಕೆಳಗು ಮಾಡಿ ತೋರಿಸುತ್ತೇವೆ. ಮುಸ್ಲಿಮರನ್ನು ನಕಾರಾತ್ಮಕ ನೆಲೆಯಲ್ಲಿ, ಅವರು ಖಳರು ಎಂಬಂತೆ ಬಿಜೆಪಿ ಚಿತ್ರಿಸುತ್ತದೆ; ಮುಸ್ಲಿಮರದ್ದು ಸಂತ್ರಸ್ತರ ದೊಡ್ಡ ಏಕರೂಪಿ ಸಮುದಾಯ ಎಂದು ನಾವು ಹೇಳುತ್ತೇವೆ. ಮುಸ್ಲಿಮರನ್ನು ಏಕರೂಪಿ ರಾಜಕೀಯ ಗುಂಪು ಎಂದೇ ನಾವು ಮತ್ತು ಅವರು ಬಿಂಬಿಸುತ್ತಿದ್ದೇವೆ.

ಇದೇ ಕಾರ್ಯಸೂಚಿಯ ಭಾಗವಾಗಿ ಬಿಜೆಪಿಯು ಪ್ರತಿಯೊಬ್ಬ ಹಿಂದೂ ಮತದಾರನನ್ನು, ಆತ ಹಿಂದೂ ಅಷ್ಟೇ ಎಂಬಲ್ಲಿಗೆ ಸೀಮಿತಗೊಳಿಸುತ್ತಿದೆ. ನಾವೂ ಮುಸ್ಲಿಮರನ್ನು ಅವರ ಧಾರ್ಮಿಕ ಅಸ್ಮಿತೆಗಷ್ಟೇ ಸೀಮಿತವಾಗಿಸುತ್ತಿದ್ದೇವೆ. ಜಾತ್ಯತೀತ ಎಂಬುದು ಮುಸ್ಲಿಂ ಪರ ನಿಲುವು ಎಂದು ಆರ್‌ಎಸ್‌ಎಸ್‌–ಬಿಜೆಪಿ ಕೂಗುತ್ತವೆ. ನಾವೂ ಜಾತ್ಯತೀತ ನಿಲುವು ಮತ್ತು ಮುಸ್ಲಿಮರ ಪರ ಎಂಬುದರ ಮಧ್ಯೆ ಇರುವ ವ್ಯತ್ಯಾಸವನ್ನು ತೋರಿಸಲು ವಿಫಲವಾಗಿ ಆರ್‌ಎಸ್‌ಎಸ್‌–ಬಿಜೆಪಿ ಪ್ರತಿಪಾದನೆಯನ್ನೇ ಗಟ್ಟಿಗೊಳಿಸುತ್ತಿದ್ದೇವೆ.

ಇವೆಲ್ಲವುಗಳನ್ನು ಅರ್ಥಮಾಡಿಕೊಳ್ಳದೇ ಇರುವುದು ಮತ್ತು ಅಶಕ್ತ ರಾಜಕಾರಣದ ಕಾರಣದಿಂದ ಇಂದಿನ ಭಾರತದಲ್ಲಿ ಮುಸ್ಲಿಮರಿಗಾಗಿ ಒಂದು ಸುಸಂಬದ್ಧ ಕಾರ್ಯಸೂಚಿ ಅಥವಾ ಪರಿಣಮಕಾರಿಯಾಗಿ ಕೆಲಸಮಾಡಬಲ್ಲ ಶಕ್ತಿ ರೂಪುಗೊಂಡಿಲ್ಲ. ಇದರಾಚೆಗೆ ಮುಸ್ಲಿಮರ ಎದುರು ಈಗ ಇರುವುದು ಮೂರು ಆಯ್ಕೆಗಳು ಮಾತ್ರ: ತಾವು ಅಂಚಿನಲ್ಲಿರುವ ಅಲ್ಪಸಂಖ್ಯಾತರು ಎಂಬುದನ್ನು ಸಿಟ್ಟಿನಿಂದಾದರೂ ಒಪ್ಪಿಕೊಳ್ಳುವುದು ಅಥವಾ ಆಳುತ್ತಿರುವವರೊಂದಿಗೆ ಮುಜುಗರದಿಂದಲೇ ಕೈಜೋಡಿಸುವುದು ಅಥವಾ ವ್ಯಗ್ರ ಸಂತ್ರಸ್ತರಂತಾಗುವುದು, ಇದರಿಂದಲಂತೂ ಅವರು ಸಮಾಜದಲ್ಲಿ ಇನ್ನಷ್ಟು ಪರಕೀಯರಾಗುತ್ತಾರೆ. ಈ ಮೂರರಲ್ಲಿ ಯಾವುದೂ ಘನತೆಯ ಆಯ್ಕೆಯಲ್ಲ. 

ಮುಸ್ಲಿಮರಲ್ಲಿ ನಾಯಕತ್ವಕ್ಕೆ, ಸೃಜನಾತ್ಮಕ ಚಿಂತನೆಗಳಿಗೆ ಮತ್ತು ಹೋರಾಡುವ ಸಾಮರ್ಥ್ಯಕ್ಕೆ ಬರವಿಲ್ಲ ಎಂಬುದನ್ನು ಶಾಹೀನ್‌ ಬಾಗ್‌ ಚಳವಳಿ ನಮಗೆ ತೋರಿಸಿಕೊಟ್ಟಿದೆ. ಆದರೆ ಅವ್ಯಾವುವೂ ಮುಖ್ಯವಾಹಿನಿಯ ರಾಜಕೀಯದೊಂದಿಗೆ ನಂಟು ಹೊಂದಿಲ್ಲ. ಮುಸ್ಲಿಮರಿಗಾಗಿ ಒಂದು ಸುಸಂಬದ್ಧ ಮತ್ತು ಪರಿಣಾಮಕಾರಿ ರಾಜಕಾರಣವನ್ನು ರೂಪಿಸುವುದು ಈ ಹೊತ್ತಿನ ಅಗತ್ಯ ಮತ್ತು ಅತ್ಯಂತ ಕಠಿಣ ಗುರಿಗಳಲ್ಲಿ ಒಂದು.

ಮುಸ್ಲಿಮರ ಈ ಪ್ರಶ್ನೆ ಮತ್ತು ಸವಾಲುಗಳ ಕುರಿತು, ಸಿಎಸ್‌ಡಿಎಸ್‌ನಲ್ಲಿ ಸಹೋದ್ಯೋಗಿಯಾಗಿದ್ದ ಮತ್ತು ನನ್ನ ಸ್ನೇಹಿತರಾದ ಹಿಲಾಲ್‌ ಅಹಮದ್ ಕಟುವಾಗೇ ಬರೆಯುತ್ತಾರೆ. ಅವರ ಈಚಿನ, ‘ಎ ಬ್ರೀಫ್‌ ಹಿಸ್ಟರಿ ಆಫ್‌ ದಿ ಪ್ರಸೆಂಟ್‌: ಮುಸ್ಲಿಂ ಇನ್‌ ನ್ಯೂ ಇಂಡಿಯಾ’, ‘ಅಲ್ಲಾ ನಾಮ್‌ ಕಿ ಸಿಯಾಸತ್‌’ ಎಂಬ ಪುಸ್ತಕಗಳು 2014ರ ನಂತರದ ‘ನವ ಭಾರತ’ದಲ್ಲಿ ಮುಸ್ಲಿಮರ ಸ್ಥಿತಿಯನ್ನೇ ಚರ್ಚಿಸುತ್ತವೆ. 

ಈ ಪ್ರಶ್ನೆಗಳನ್ನು ಎದುರಿಸಲು ಅಹಮದ್‌ ಒಂದು ವಿಶಿಷ್ಟವಾದ ನೆಲೆಯನ್ನು ಕಂಡುಕೊಂಡಿದ್ದಾರೆ. ಸಿಎಸ್‌ಡಿಎಸ್‌ ಕಚೇರಿಯಲ್ಲಿನ ಅವರ ಕ್ಯಾಬಿನ್‌ನಲ್ಲಿ ಪವಿತ್ರ ಕಾಬಾ, ಮಹಾತ್ಮ ಗಾಂಧಿ ಮತ್ತು ಚೆ ಗುವೆರಾ ಅವರ ಚಿತ್ರಗಳಿದ್ದವು. ಪರಸ್ಪರ ತೀರಾ ಭಿನ್ನವಾದ ಸಿದ್ಧಾಂತಗಳನ್ನು ಒಂದುಗೂಡಿಸುವ ಯತ್ನವಾಗಿ ಅವರ ಕ್ಯಾಬಿನ್‌ ಕಾಣುತ್ತದೆ. ಪ್ರತಿದಿನ ಐದು ಪ್ರಾರ್ಥನೆಗಳನ್ನು ಮಾಡುವ ಮತ್ತು ರಂಜಾನ್‌ ಮಾಸದ ಎಲ್ಲ ದಿನಗಳಲ್ಲೂ ಉಪವಾಸವಿರುವ ಆಸ್ತಿಕ ಮುಸ್ಲಿಂ ಆತ. ಅದೇ ಸಂದರ್ಭದಲ್ಲಿ ಮಾರ್ಕ್ಸ್‌ವಾದ ಪ್ರೇರಿತವಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಕ್ರಾಂತಿಕಾರಿಯೂ ಹೌದು. ಇವಿಷ್ಟು ಸಾಲದೆಂಬಂತೆ ಆತ, ಮಹಾತ್ಮ ಗಾಂಧಿ ಅವರ ಸರ್ವಧರ್ಮಗಳೂ ಸಮಾನ ಎನ್ನುವ ಮತ್ತು ಸತ್ಯಾಗ್ರಹದ ಅಹಿಂಸಾ ರಾಜಕಾರಣದ ಕಡುಪಾಲಕರೂ ಹೌದು.

ಈ ಮೂರು ಭಿನ್ನ ಎಳೆಗಳನ್ನು ಪರಸ್ಪರ ಹೆಣೆಯುವುದು ಕಷ್ಟಕರ ಮತ್ತು ಆತ ಆ ಕೆಲಸವನ್ನು ಮುಂದುವರಿಸಿದ್ದಾರೆ. ಆದರೆ ಈ ಯತ್ನದಲ್ಲಿ ಅವರಿಗೊಂದು ವಿಶಿಷ್ಟ ದೃಷ್ಟಿಕೋನ ದತ್ತವಾಗಿದೆ: ನಾನು ಮುಸ್ಲಿಂ ಎಂಬ ಅಸ್ಮಿತೆಯನ್ನು ಬಿಟ್ಟುಕೊಡುವುದಿಲ್ಲ. ಅದೇ ಸಮಯದಲ್ಲಿ, ನಾನು ಮುಸ್ಲಿಮನಾಗಿಯಷ್ಟೇ ದನಿ ಎತ್ತುವುದಿಲ್ಲ. ಮುಸ್ಲಿಂ ಸಮುದಾಯದ ಕುರಿತಾಗಿ ಮನಸ್ಸಿಗೆ ನಾಟುವ ದೃಷ್ಟಿಕೋನವಾದ ‘ಮುಸ್ಲಿಮರು ಎಂಬುದಕ್ಕಿಂತಲೂ ಹೆಚ್ಚು’ ಎಂಬ ರಾಜಕಾರಣದ ಬಗ್ಗೆ ಚಿಂತಿಸಲು ಅವರ ಈ ನಿಲುವು ಉದ್ದೀಪಿಸುತ್ತದೆ.

ಈ ನಿಲುವು ಜಾತ್ಯತೀತ ರಾಜಕಾರಣಕ್ಕೆ ಒಂದು ಒಳ್ಳೆಯ ನೆಲೆ. ಇಲ್ಲಿ ಒಂದು ಕಾಲು ಸಮುದಾಯ ಹಾಗೂ ಸಂಪ್ರದಾಯದಲ್ಲಿ ಭದ್ರವಾಗಿ ಇದ್ದರೆ, ಮತ್ತೊಂದು ಕಾಲು ಅದರ ಆಚೆ ಇರುತ್ತದೆ. ಮುಸ್ಲಿಮರ ಮೇಲೆ ಪ್ರತಿದಿನ ನಡೆಯುತ್ತಿರುವ ಭೌತಿಕ ಮತ್ತು ಸಾಂಕೇತಿಕ ಹಲ್ಲೆಗಳ ಬಗ್ಗೆ ಅಹಮದ್‌ ಕಳವಳ ಹೊಂದಿದ್ದರೂ, ಆ ಬಗೆಗಿನ ಆತಂಕ ತಮ್ಮ ನಿಲುವನ್ನು ಪ್ರಭಾವಿಸಲು ಅವರು ಆಸ್ಪದ ಕೊಡುವುದಿಲ್ಲ. 

ಈ ಎಲ್ಲವುಗಳ ಮಧ್ಯೆಯೇ ಅವರು, ‘ಮುಸ್ಲಿಮರು ಎಂಬುದಕ್ಕಿಂತಲೂ ಹೆಚ್ಚು’ ಎಂಬ ರಾಜಕಾರಣ ಹೇಗಿರುತ್ತದೆ ಎಂಬ ಯೋಚನೆಯಲ್ಲಿ ನಮ್ಮನ್ನು ಬಿಡುತ್ತಾರೆ. ಏಕರೂಪಿ ಮುಸ್ಲಿಂ ರಾಜಕಾರಣ ಎಂಬುದು ಕಾರ್ಯಸಾಧುವಲ್ಲ, ಒಪ್ಪಿತವೂ ಅಲ್ಲ ಮತ್ತು ಅದರಿಂದ ನಿರೀಕ್ಷೆಗೆ ವಿರುದ್ಧವಾದ ಫಲವೇ ಸಿಗುತ್ತದೆ ಎಂಬುದಂತೂ ಸ್ಪಷ್ಟ. ಒಂದು ಆರೋಗ್ಯಕರ ಮುಸ್ಲಿಂ ರಾಜಕಾರಣವು ಎಲ್ಲ ಮುಸ್ಲಿಮರನ್ನು ಒಳಗೊಳ್ಳಬೇಕು ಮತ್ತು ಅವರೆಲ್ಲರಿಗೂ ಭಿನ್ನ ರಾಜಕೀಯ ಆಯ್ಕೆಗಳನ್ನು ಒದಗಿಸಬೇಕು. ಹಿಂದೂ ಎಂಬುದು ಒಂದೇ ಏಕರೂಪಿ ಸಮುದಾಯ ಅಲ್ಲ. ಅದೇ ರೀತಿಯಲ್ಲಿ ಭಾರತದ ಮುಸ್ಲಿಮರದ್ದು ಏಕರೂಪಿ ಗುಂಪು ಅಲ್ಲ. ಅದು ಭಿನ್ನ ಸಂಪ್ರದಾಯ, ಸಂಸ್ಕೃತಿ, ಭಾಷೆ, ಸಾಮಾಜಿಕ–ಆರ್ಥಿಕ ಸ್ಥಿತಿ ಮತ್ತು ಧಾರ್ಮಿಕ ಆಚರಣೆಗಳನ್ನು ಒಳಗೊಂಡ ಅನೇಕ ಸಮುದಾಯಗಳ ಒಂದು ಗುಚ್ಛ. ಮುಸ್ಲಿಮರನ್ನು ಏಕರೂಪಗೊಳಿಸುವ ಯತ್ನವು ಬಿಜೆಪಿಯ ಏಕರೂಪಿ ಹಿಂದೂ ಎಂಬ ಸಂಕಥನವನ್ನು ಉದ್ದೀಪಿಸುತ್ತದೆ.

ಮುಸ್ಲಿಮರದ್ದು ಏಕರೂಪಿ ಸಮುದಾಯ ಅಲ್ಲ ಎಂದು ಹೇಳುವುದು ಅವರನ್ನು ವಿಭಜಿಸುವ ಕೆಲಸ ಅಲ್ಲ. ಅವರನ್ನು ಆರ್ಥಿಕ ಮತ್ತು ಸಾಮಾಜಿಕ ಸಂಬಂಧ ಹೊಂದಿರುವ ಇತರ ಸ್ಥಳೀಯ ಮುಸ್ಲಿಮೇತರ ಸಮುದಾಯಗಳೊಟ್ಟಿಗೆ ಸೇರಿಸುವ ಯತ್ನ ಇದು. ಮುಸ್ಲಿಮರು ರೈತರು, ನೇಕಾರರು, ಕರಕುಶಲಿಗಳು, ಸಂಘಟಿತ ಕಾರ್ಮಿಕರು, ನಿರುದ್ಯೋಗಿಗಳೂ ಹೌದು. ಪರಿಣಾಮವಾಗಿ ಮುಸ್ಲಿಂ ರಾಜಕಾರಣವು ದಲಿತ, ಆದಿವಾಸಿ ಮತ್ತು ಬಹುಜನ ರಾಜಕಾರಣದೊಂದಿಗೆ ಬೆರೆಯುತ್ತದೆ. ಮುಸ್ಲಿಂ ರಾಜಕಾರಣದ ನಿಲುವು ಎಲ್ಲ ವರ್ಗಗಳ ಮುಸ್ಲಿಮರನ್ನೂ, ಮುಸ್ಲಿಮೇತರರನ್ನೂ ಒಳಗೊಳ್ಳುವಂಥದ್ದಾಗಿರಬೇಕು. 

‘ಮುಸ್ಲಿಮರು ಎಂಬುದಕ್ಕಿಂತಲೂ ಹೆಚ್ಚು’ ಎಂಬ ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಯಜಮಾನನಂತೆ ಎಲ್ಲವನ್ನೂ ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಬಿಜೆಪಿಯು ಈ ವಿಷಯವನ್ನು ಪ್ರಧಾನ ನೆಲೆಗೆ ತರಲು ಬಿಡುತ್ತದೆಯೇ? ಮುಖ್ಯವಾಹಿನಿಯ ಬಿಜೆಪಿಯೇತರ ರಾಜಕೀಯ ಪಕ್ಷಗಳು ಇದನ್ನು ಕೈಗೆತ್ತಿಕೊಳ್ಳುತ್ತವೆಯೇ? ಅವರಲ್ಲದಿದ್ದರೆ ಮತ್ಯಾರು ಇದನ್ನು ಕೈಗೆತ್ತಿಕೊಳ್ಳಬಹುದು? ಬೇರೆಲ್ಲಾ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸುವ ಹಿಲಾಲ್‌ ಅಹಮದ್‌ ಬಳಿಯೂ ಇದಕ್ಕೆ ತೃಪ್ತಿಕರ ಉತ್ತರವಿಲ್ಲ. ಇತರರ ಬಳಿಯೂ ಇಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.