ಈಸ್ಟ್ ಇಂಡಿಯಾ ಕಂಪನಿಯು ಭಾರತವನ್ನು ನಿಶ್ಶಬ್ದ ಗೊಳಿಸಿತ್ತು. ಆ ಕಂಪನಿಯ ವ್ಯಾಪಾರ ಪ್ರಾವೀಣ್ಯದಿಂದಾಗಿ ಭಾರತವು ಮೌನವಾಗಲಿಲ್ಲ, ಬದಲಿಗೆ ಕಂಪನಿಯು ಭಾರತವನ್ನು ಉಸಿರುಗಟ್ಟಿಸಿ, ಮೌನವಾಗುವಂತೆ ಮಾಡಿತು. ನಮ್ಮ ಮಹಾರಾಜರು ಮತ್ತು ನವಾಬರ ಜೊತೆಗೆ ಪಾಲುದಾರಿಕೆ ಕುದುರಿಸಿಕೊಂಡು, ಅವರಿಗೆ ಲಂಚ ಕೊಟ್ಟು ಇಲ್ಲವೇ ಬೆದರಿಸಿ ಕಂಪನಿಯು ಭಾರತವನ್ನು ಉಸಿರುಗಟ್ಟಿಸಿತು. ಕಂಪನಿಯು ನಮ್ಮ ಬ್ಯಾಂಕಿಂಗ್, ಅಧಿಕಾರಿಶಾಹಿ ಮತ್ತು ಮಾಹಿತಿ ಜಾಲಗಳೆಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಂಡಿತು. ಒಂದು ವಿಚಾರ ನೆನಪಿಡಬೇಕು, ನಾವು ನಮ್ಮ ಸ್ವಾತಂತ್ರ್ಯವನ್ನು ಬೇರೊಂದು ದೇಶದಿಂದಾಗಿ ಕಳೆದುಕೊಳ್ಳಲಿಲ್ಲ. ಏಕಸ್ವಾಮ್ಯವಾದಿ ಉದ್ಯಮ ಸಂಸ್ಥೆಯೊಂದು ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿತು.
ವ್ಯಾಪಾರದ ನಿಯಮಗಳನ್ನು ತಾನೇ ರೂಪಿಸಿ, ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿತು ಮತ್ತು ಸ್ಪರ್ಧೆ
ಯನ್ನು ತೊಡೆದುಹಾಕಿತು. ಯಾರು ಮಾರಬೇಕು, ಏನನ್ನು ಮಾರಬೇಕು, ಯಾರಿಗೆ ಮಾರಬೇಕು ಎಂಬು
ದನ್ನೆಲ್ಲ ನಿರ್ದೇಶಿಸಿತು. ನಮ್ಮ ಜವಳಿ ಉದ್ಯಮ ಮತ್ತು ತಯಾರಿಕಾ ಉದ್ಯಮವನ್ನು ನಾಶಗೊಳಿಸಿತು. ಕಂಪನಿಯು ಯಾವುದಾದರೂ ಹೊಸ ಉತ್ಪನ್ನವನ್ನು ಸಂಶೋಧನೆ ಮಾಡಿದ್ದು ಅಥವಾ ಮಾರುಕಟ್ಟೆಯನ್ನು ಬೆಳೆಸಿದ್ದು ನನಗಂತೂ ಗೊತ್ತಿಲ್ಲ. ನನಗೆ ಗೊತ್ತಿರುವ ಒಂದು ವಿಚಾರವೆಂದರೆ, ಒಂದು ಪ್ರದೇಶದಲ್ಲಿ ಅಫೀಮು ಬೆಳೆಯುವ ಏಕಸ್ವಾಮ್ಯವನ್ನು ಸೃಷ್ಟಿಸಿಕೊಂಡು ಬೇರೊಂದು ಕಡೆ ತನ್ನದು ಮಾತ್ರವೇ ಆದ ಮಾರುಕಟ್ಟೆ
ಯನ್ನು ಅಭಿವೃದ್ಧಿಪಡಿಸಿತು. ಕಂಪನಿಯು ಭಾರತವನ್ನು ಕೊಳ್ಳೆ ಹೊಡೆಯುತ್ತಿರಬೇಕಾದರೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇದನ್ನೊಂದು ಮಾದರಿ ಕಂಪನಿ ಎಂದು ಪರಿಗಣಿಸಲಾಗುತ್ತಿತ್ತು. ವಿದೇಶಿ ಪಾಲುದಾರರಿಗೆ ಕಂಪನಿಯ ಮೇಲೆ ಭಾರಿ ಪ್ರೀತಿ ಇತ್ತು.
ಈಸ್ಟ್ ಇಂಡಿಯಾ ಕಂಪನಿಯನ್ನು ಸುಮಾರು 150 ವರ್ಷಗಳ ಹಿಂದೆ ಮುಚ್ಚಲಾಯಿತು. ಆದರೆ, ಅದು ಆಗ ಸೃಷ್ಟಿಸಿದ್ದ ಭೀತಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ಹೊಸ ತಲೆಮಾರಿನ ಏಕಸ್ವಾಮ್ಯವಾದಿಗಳು ಈ ಜಾಗ
ದಲ್ಲಿ ಬಂದು ಕುಳಿತಿದ್ದಾರೆ. ಅವರು ಅಪಾರವಾದ ಸಂಪತ್ತನ್ನು ಗುಡ್ಡೆ ಹಾಕಿಕೊಂಡಿದ್ದಾರೆ. ಆದರೆ, ಭಾರತವು ಇನ್ನೂ ಹೆಚ್ಚು ಅಸಮಾನ ಆಯಿತು; ಇತರ ಎಲ್ಲರಿಗೂ ನ್ಯಾಯಯುತವಾಗಿ ಸಿಗಬೇಕಾದುದು ಏನೂ ಸಿಗದಂತಾಯಿತು. ನಮ್ಮ ಸಂಸ್ಥೆಗಳು ಈಗ ನಮ್ಮ ಜನರದ್ದಾಗಿ ಉಳಿದಿಲ್ಲ. ಈ ಸಂಸ್ಥೆಗಳು ಈ ಏಕಸ್ವಾಮ್ಯ
ವಾದಿಗಳಿಗಾಗಿ ಬಿಡ್ ಕೂಗುವ ಸ್ಥಿತಿಗೆ ಬಂದಿವೆ. ಲಕ್ಷಾಂತರ ವ್ಯಾಪಾರಗಳು ನಾಶವಾದವು ಮತ್ತು ಭಾರತವು ತನ್ನ ಯುವಜನರಿಗಾಗಿ ಉದ್ಯೋಗ ಸೃಷ್ಟಿಸಲು ಅಸಮರ್ಥವಾಯಿತು. ಭಾರತ ಮಾತೆಯು ಎಲ್ಲ ಮಕ್ಕಳಿಗೂ ತಾಯಿಯೇ. ಆದರೆ, ಆಕೆಯ ಸಂಪನ್ಮೂಲ ಮತ್ತು ಅಧಿಕಾರ ಏಕಸ್ವಾಮ್ಯಗೊಂಡಿವೆ; ಪರಿಣಾಮವಾಗಿ, ಕೆಲವೇ ಕೆಲವರಿಗೆ ಬೇಕಾಗಿದ್ದನ್ನು ಕೊಟ್ಟು, ಇತರ ಎಲ್ಲರಿಗೂ ಎಲ್ಲವನ್ನೂ ಲಜ್ಜಾಹೀನವಾಗಿ ನಿರಾಕರಿಸುವಂತಾಗಿದ್ದು ತಾಯಿಯನ್ನು ಗಾಸಿಗೊಳಿಸಿದೆ.
ಭಾರತದ ನೂರಾರು ಮಂದಿ ಪ್ರತಿಭಾವಂತ ಹಾಗೂ ಚಲನಶೀಲ ಉದ್ಯಮ ನಾಯಕರು ಈ ಏಕಸ್ವಾಮ್ಯ
ವಾದಿಗಳಿಂದಾಗಿ ದಿಗಿಲುಗೊಂಡಿದ್ದಾರೆ. ನೀವೂ ಅವರಲ್ಲಿ ಒಬ್ಬರೇ? ಫೋನ್‌ನಲ್ಲಿ ಮಾತನಾಡುವುದಕ್ಕೂ ಭಯವಾಗುತ್ತಿದೆಯೇ? ಈ ಏಕಸ್ವಾಮ್ಯವಾದಿಗಳು ಸರ್ಕಾರದ ಜೊತೆಗೆ ಶಾಮೀಲಾಗಿ ನಿಮ್ಮ ಉದ್ಯಮ ಕ್ಷೇತ್ರ ಪ್ರವೇಶಿಸಿ ನಿಮ್ಮನ್ನು ದಮನಿಸಬಹುದು ಎಂಬ ಭೀತಿಯೇ? ಸಿಬಿಐ, ಐಟಿ ಅಥವಾ ಜಾರಿ ನಿರ್ದೇಶನಾಲಯವು ನಿಮ್ಮ ಮೇಲೆ ದಾಳಿ ನಡೆಸಿ ನಿಮ್ಮ ಉದ್ಯಮವನ್ನು ಇವರಿಗೆ ಮಾರುವಂತೆ ಬಲವಂತ ಮಾಡಬಹುದು ಎಂಬ ಭಯವೇ? ನಿಮಗೆ ಅತ್ಯಂತ ಅಗತ್ಯವಾಗಿ ಬಂಡವಾಳ ಬೇಕಾಗಿದ್ದಾಗ ಅದು ಸಿಗದಂತೆ ಮಾಡಬಹುದು ಎಂಬ ಆತಂಕವೇ? ನಿಮ್ಮ ಮೇಲೆ ಆಕ್ರಮಣ ಮಾಡುವುದಕ್ಕಾಗಿ ಆಟದ ಮಧ್ಯದಲ್ಲಿಯೇ ಅವರು ನಿಯಮಗಳನ್ನು ಬದಲಾಯಿಸಬಹುದು ಎಂಬ ಭೀತಿ ನಿಮ್ಮಲ್ಲಿದೆಯೇ?
ಈ ಏಕಸ್ವಾಮ್ಯವಾದಿ ಗುಂಪುಗಳ ಚಟುವಟಿಕೆಯನ್ನು ವ್ಯಾಪಾರ ಎಂದು ಬಣ್ಣಿಸಿದರೆ ದಾರಿ ತಪ್ಪಿಸಿದಂತಾಗುತ್ತದೆ. ನೀವು ಅವರ ಜೊತೆಗೆ ಸ್ಪರ್ಧೆಗೆ ಇಳಿಯುತ್ತೀರಿ ಎಂದಾದರೆ, ನೀವು ಒಂದು ಕಂಪನಿಯೊಂದಿಗೆ ಸ್ಪರ್ಧಿಸುತ್ತಿಲ್ಲ; ಬದಲಿಗೆ ಭಾರತ ಸರ್ಕಾರದ ವ್ಯವಸ್ಥೆಯೊಂದಿಗೆ ಸ್ಪರ್ಧಿಸುತ್ತಿದ್ದೀರಿ ಎಂದೇ ಅರ್ಥ. ಅವರ ಪ್ರಧಾನ ಸಾಮರ್ಥ್ಯ ಉತ್ಪನ್ನ, ಗ್ರಾಹಕರು ಅಥವಾ ಯೋಚನೆಗಳಲ್ಲ; ಬದಲಿಗೆ ಭಾರತದ ಆಡಳಿತ ನಡೆಸುವ ಸಂಸ್ಥೆಗಳು ಮತ್ತು ಅದರ ನಿಯಂತ್ರಕರನ್ನು ನಿಯಂತ್ರಿಸುವ ಶಕ್ತಿ ಹಾಗೂ ಕಣ್ಗಾವಲು ನಡೆಸುವ ತಾಕತ್ತು. ಇವರು ನಿಮ್ಮಂತೆ ಅಲ್ಲ, ಬದಲಿಗೆ ಭಾರತೀಯರು ಏನನ್ನು ಓದಬೇಕು ಮತ್ತು ವೀಕ್ಷಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಭಾರತೀಯರು ಹೇಗೆ ಯೋಚಿಸಬೇಕು ಮತ್ತು ಏನನ್ನು ಮಾತನಾಡಬೇಕು ಎಂಬುದರ ಮೇಲೆಯೂ ಪ್ರಭಾವ ಬೀರುತ್ತಾರೆ. ಇಂದು, ಯಶಸ್ಸನ್ನು ನಿರ್ಣಯಿಸುವುದು ಮಾರುಕಟ್ಟೆ ಶಕ್ತಿಗಳಲ್ಲ, ಬದಲಿಗೆ ಅಧಿಕಾರ ಸಂಬಂಧಗಳು.
ನಿಮ್ಮ ಮನಸ್ಸಿನಲ್ಲಿ ಭೀತಿ ಇದೆ. ಆದರೆ, ಆಶಾಕಿರಣವೂ ಇದೆ.
‘ಮ್ಯಾಚ್ ಫಿಕ್ಸಿಂಗ್’ನ ಈ ಏಕಸ್ವಾಮ್ಯದ ಗುಂಪುಗಳಿಗೆ ವ್ಯತಿರಿಕ್ತವಾಗಿ, ‘ನ್ಯಾಯಸಮ್ಮತ’ವಾಗಿ ಹಾಗೂ ನಮ್ಮನ್ನು ಚಕಿತಗೊಳಿಸುವಂತೆ ಉದ್ಯಮ ನಡೆಸುವವರೂ ಬಹಳ ಮಂದಿ ಇದ್ದಾರೆ. ಸಣ್ಣ ವ್ಯಾಪಾರದಿಂದ ಭಾರಿ ಉದ್ಯಮದವರೆಗೆ ಇದು ವ್ಯಾಪಿಸಿದೆ. ಆದರೆ ನೀವು ಮೌನವಾಗಿದ್ದೀರಿ. ದಮನಕಾರಿ ವ್ಯವಸ್ಥೆಯಲ್ಲಿ ಕೂಡ ನೀವು ಹೋರಾಟ ನಡೆಸುತ್ತಿದ್ದೀರಿ. ಪೀಯೂಷ್ ಬನ್ಸಲ್ ಅವರನ್ನೇ ನೋಡಿ– ರಾಜಕೀಯದ ಯಾವುದೇ ನಂಟು ಇಲ್ಲದ ಮೊದಲ ತಲೆಮಾರಿನ ಈ ಉದ್ಯಮಿ ತಮ್ಮ 22ನೇ ವಯಸ್ಸಿನಲ್ಲಿ ಉದ್ಯಮವೊಂದನ್ನು ಆರಂಭಿಸಿದರು. 2010ರಲ್ಲಿ ಇತರರ ಜೊತೆ ಸೇರಿ ಲೆನ್ಸ್‌ಕಾರ್ಟ್
ಕಂಪನಿ ಆರಂಭಿಸಿದರು. ಕನ್ನಡಕ ಉದ್ಯಮದ ಚಹರೆಯನ್ನೇ ಇದು ಬದಲಿಸಿತು. ಇಂದು, ಲೆನ್ಸ್‌ಕಾರ್ಟ್ ಭಾರತದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟಿದೆ. ಫಕೀರ್ ಚಂದ್ ಕೊಹ್ಲಿ ಮ್ಯಾನೇಜರ್ ಆಗಿ 1970ರ ದಶಕದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಅನ್ನು ಕಟ್ಟಿ ಬೆಳೆಸಿದರು. ಇದು ಭೀತಿಯ ಎದುರು ಮಹತ್ವಾಕಾಂಕ್ಷೆಯ ವಿಜಯ. ಐಬಿಎಂ ಮತ್ತು ಎಕ್ಸೆಂಚರ್‌ನಂತಹ ದೈತ್ಯ ಕಂಪನಿಗಳನ್ನು ಅವರದೇ ಅಂಗಳದಲ್ಲಿ ಎದುರಿಸುವ ದಿಟ್ಟತನ. ಟಿಸಿಎಸ್ ಮತ್ತು ಇತರ ಕೆಲವು ಕಂಪನಿಗಳು ಐಟಿ ಸೇವೆಯನ್ನು ಸಣ್ಣ ವ್ಯಾಪಾರದಿಂದ ದೊಡ್ಡ ಉದ್ಯಮವಾಗಿ ಬೆಳೆಸಿದವು. ಪೀಯೂಷ್ ಅವರಾಗಲಿ, ಕೊಹ್ಲಿ ಅವರಾಗಲಿ ನನಗೆ ವೈಯಕ್ತಿಕವಾಗಿ ಗೊತ್ತಿಲ್ಲ. ಬಹುಶಃ ಅವರ ರಾಜಕೀಯ ಆದ್ಯತೆಗಳು ನನಗಿಂತ ಭಿನ್ನವಾಗಿರಬಹುದು. ಹಾಗಿದ್ದರೇನು? ಟೈನೊರ್, ಇನ್‌ಮೊಬಿ, ಮಾನ್ಯವರ್, ಜೊಮಾಟೊ, ಫ್ರಾಕ್ಟಲ್ ಅನಲಿಟಿಕ್ಸ್, ಅರಕು ಕಾಫಿ, ಟ್ರೆಡೆನ್ಸ್, ಅಮಾಗಿ, ಐಡಿ ಫೂಡ್ಸ್, ಫೋನ್‌ಪೇ, ಮೊಗ್ಲಿಕ್ಸ್, ಸುಲಾ ವೈನ್ಸ್, ಜಸ್‌ಪೇ, ಝೆರೋದಾ, ವೆರಿಟಸ್, ಆಕ್ಸಿಜೊ, ಅವೆಂಡಸ್‌ನಂತಹ ಹೊಸ ತಲೆಮಾರಿನ ಕಂಪನಿಗಳು, ಎಲ್ ಆ್ಯಂಡ್ ಟಿ, ಹಲ್ದಿರಾಮ್, ಅರವಿಂದ ಐ ಹಾಸ್ಪಿಟಲ್, ಇಂಡಿಗೊ, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಗ್ರೂಪ್, ಬಜಾಜ್ ಆಟೊ, ಸಿಪ್ಲಾ, ಮಹೀಂದ್ರ ಆಟೊ, ಟೈಟನ್‌ನಂತಹ ಹಳೆಯ ಕಂಪನಿಗಳು ಇಲ್ಲಿಯೇ ಹುಟ್ಟಿ ಬೆಳೆದು ನ್ಯಾಯಸಮ್ಮತವಾಗಿ ವ್ಯಾಪಾರ ನಡೆಸುವುದನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಸಣ್ಣ ಉದಾಹರಣೆ. ಇವರಲ್ಲಿ ಹೆಚ್ಚಿನವರು ನನಗೆ ವೈಯಕ್ತಿಕವಾಗಿ ಗೊತ್ತಿಲ್ಲ. ಇಲ್ಲಿಗೆ ಹೊಂದಿಕೆಯಾಗುವ ಮತ್ತು ಇನ್ನೂ ಉತ್ತಮವಾದ ನೂರಾರು ಕಂಪನಿಗಳು ಇರಬಹುದು. ಆದರೆ, ನಾನು ಏನನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಅರ್ಥವಾಗಿರುತ್ತದೆ.
ದುರ್ಬಲರು ಮತ್ತು ಧ್ವನಿರಹಿತರನ್ನು ರಕ್ಷಿಸುವುದೇ ನನ್ನ ರಾಜಕಾರಣ. ಧ್ವನಿಯಿಲ್ಲದ ಕೊನೆಯ ಸಾಲಿನ ವ್ಯಕ್ತಿಯನ್ನು ರಕ್ಷಿಸಬೇಕು ಎಂಬ ಗಾಂಧೀಜಿಯ ಮಾತು ನನಗೆ ಸ್ಫೂರ್ತಿ. ಈ ನಂಬಿಕೆಯೇ ನರೇಗಾ, ಆಹಾರ ಭದ್ರತೆ ಕಾಯ್ದೆ ಮತ್ತು ಭೂಸ್ವಾಧೀನ ಕಾಯ್ದೆಯನ್ನು ನಾನು ಬೆಂಬಲಿಸುವಂತೆ ಮಾಡಿತು. ನಿಯಾಮಗಿರಿ ಸಂಘರ್ಷದಲ್ಲಿ ನಾನು ಆದಿವಾಸಿಗಳ ಜೊತೆಗೆ ನಿಲ್ಲುವುದಕ್ಕೂ ಇದೇ ಕಾರಣ. ಕೃಷಿಗೆ ಸಂಬಂಧಿಸಿದ ಮೂರು ಕರಾಳ ಕಾಯ್ದೆಗಳ ವಿರುದ್ಧದ ಸಂಘರ್ಷದಲ್ಲಿ ನಾನು ರೈತರನ್ನು ಬೆಂಬಲಿಸಿದೆ. ಮಣಿಪುರ ಜನರ ವೇದನೆಯನ್ನೂ ಆಲಿಸಿದ್ದೇನೆ.
ಗಾಂಧೀಜಿಯ ಮಾತುಗಳ ಗಾಢ ಅರ್ಥವನ್ನು ನಾನು ಪೂರ್ಣವಾಗಿ ಗ್ರಹಿಸಿಕೊಂಡಿಲ್ಲ ಎಂಬುದು ಈಗ, ನಾನು ಇದನ್ನು ಬರೆಯುತ್ತಿರುವಾಗ ಮನದಟ್ಟಾಗುತ್ತಿದೆ. ಸಾಲು ಎಂಬುದು ಇಲ್ಲಿ ಒಂದು ರೂಪಕ. ಹಾಗೆ ನೋಡಿದರೆ, ಭಿನ್ನವಾದ ಹಲವು ಸಾಲುಗಳು ಇವೆ. ನೀವು ಈಗ ಇರುವ ಸಾಲು ಉದ್ಯಮವಾಗಿದ್ದರೆ, ಶೋಷಣೆಗೆ ಒಳಗಾಗುತ್ತಿದ್ದೀರಿ, ಅನನುಕೂಲಕರ ಸ್ಥಿತಿಯಲ್ಲಿದ್ದೀರಿ ಎಂದು ಅರ್ಥ. ನಿಮಗೆ ನಿರಾಕರಿಸಲಾಗಿರುವ ನ್ಯಾಯಸಮ್ಮತತೆ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದೇ ನನ್ನ ರಾಜಕಾರಣ.
ಸರ್ಕಾರವು ಬಹುಪಾಲು ಮಂದಿಯ ಹಿತ ಬಲಿ ಕೊಟ್ಟು, ಒಂದೇ ಉದ್ಯಮ ಸಂಸ್ಥೆಯನ್ನು ಬೆಂಬಲಿ ಸಲು ಮತ್ತು ವ್ಯಾಪಾರ ವ್ಯವಸ್ಥೆಯಲ್ಲಿ ಬೇನಾಮಿ ಸಮೀಕರಣಗಳನ್ನು ಬೆಂಬಲಿಸಲು ಅವಕಾಶ ಕೊಡ
ಬಾರದು. ಉದ್ಯಮ ಸಂಸ್ಥೆಗಳನ್ನು ಬೆದರಿಸಲು ಮತ್ತು ದಾಳಿ ಮಾಡಲು ಸರ್ಕಾರದ ಸಂಸ್ಥೆಗಳನ್ನು ಆಯುಧ
ವಾಗಿ ಬಳಸಬಾರದು. ನಿಮ್ಮಲ್ಲಿರುವ ಭೀತಿಯು ದೊಡ್ಡ ಉದ್ಯಮದ ಏಕಸ್ವಾಮ್ಯವಾದಿಗಳಿಗೆ ವರ್ಗಾವಣೆ
ಆಗುವುದನ್ನೂ ನಾನು ಬೆಂಬಲಿಸುವುದಿಲ್ಲ. ಅವರು ಕೆಡುಕಿನ ವ್ಯಕ್ತಿಗಳಲ್ಲ; ಬದಲಿಗೆ, ನಮ್ಮ ಸಮಾಜ ಹಾಗೂ ರಾಜಕೀಯ ಪರಿಸರದಲ್ಲಿನ ಹುಳುಕುಗಳ ಫಲಿತಾಂಶ. ಅವರಿಗೂ ಅವಕಾಶ ಇರಬೇಕು, ನಿಮಗೂ ಅವಕಾಶ ಸಿಗಬೇಕು.
ಇದು ನಮ್ಮೆಲ್ಲರಿಗಾಗಿ ಇರುವ ದೇಶ. ಸುಸ್ತಿ ಸಾಲ ಇದ್ದಾಗಲೂ ಅತಿ ದೊಡ್ಡ ಮತ್ತು ಹೆಚ್ಚು ಸಂಪರ್ಕ
ಗಳನ್ನು ಹೊಂದಿರುವ 100 ಕಂಪನಿಗಳಿಗೆ ಮಾತ್ರ ಸಾಲ ನೀಡುವ ಮೋಹವನ್ನು ನಮ್ಮ ಬ್ಯಾಂಕುಗಳು ಬಿಡಬೇಕು. ನ್ಯಾಯಯುತವಾಗಿ ವ್ಯಾಪಾರ ನಡೆಸುವ ಸಂಸ್ಥೆಗಳಿಗೆ ಸಾಲ ನೀಡುವ ಮೂಲಕವೂ ಲಾಭ ಮಾಡಿಕೊಳ್ಳಬಹುದು ಎಂಬುದನ್ನು ಕಂಡುಕೊಳ್ಳಬೇಕು. ಕೊನೆಯದಾಗಿ, ರಾಜಕೀಯ ವರ್ತನೆಯನ್ನು ರೂಪಿಸುವಲ್ಲಿ ಸಾಮಾಜಿಕ ಒತ್ತಡ ಮತ್ತು ಪ್ರತಿರೋಧದ ಶಕ್ತಿಯನ್ನು ನಾವು ಕಡೆಗಣಿಸಲೇಬಾರದು. ಇದಕ್ಕಾಗಿ ಅವತಾರ ಪುರುಷನ ಅಗತ್ಯವೇನೂ ಇಲ್ಲ. ಸಂಪತ್ತು ಸೃಷ್ಟಿಸುವ ಮತ್ತು ಎಲ್ಲರಿಗೂ ಉದ್ಯೋಗ ಕೊಡುವ ಆ ಬದಲಾವಣೆ ನೀವೇ ಆಗಬಹುದು.
ಪ್ರಗತಿಪರ ಭಾರತದ ಉದ್ಯಮಕ್ಕೆ ಹೊಸ ದಿಕ್ಕು ತೋರುವ ಆ ಕಾಲ ಈಗ ಬಂದಿದೆ ಎಂದು ನಾನು ನಂಬಿದ್ದೇನೆ.
ಲೇಖಕ: ಲೋಕಸಭೆಯ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.