ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್‌ಡೌನ್ ಆದಾಗ– ಅದೊಂದು ತಾತ್ಕಾಲಿಕ ಕಷ್ಟಕಾಲ ಅನ್ನಿಸಿತ್ತು ಹಾಗೂ ಕೋವಿಡ್-19 ಮಹಾಮಾರಿಯ ಭಯದಿಂದ ಲಾಕ್‌ಡೌನ್ ಹೇರಲಾಗಿತ್ತು. ಆದರೆ ಅದು ಆರೋಗ್ಯ ಸೇವೆಗಳಿಗಿಂತ ಹೆಚ್ಚಾಗಿ ಜೀವನೋಪಾಯಕ್ಕೆ ಸಂಬಂಧಿಸಿದ ಆರ್ಥಿಕ ಬಿಕ್ಕಟ್ಟಾಯಿತು. ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಯಂತ್ರಿಸಿ ಸೀಮಿತ ಮಟ್ಟದಲ್ಲಾದರೂ ಪ್ರತಿಸ್ಪಂದಿಸುತ್ತಿದ್ದಂತೆ ಕಾಣುತ್ತಿತ್ತು. ಆ ಪರಿಸ್ಥಿತಿಯಿಂದ ಬೇಗ ಹೊರಬರುವ ಒಂದು ವಿಚಿತ್ರ ನಂಬಿಕೆಯೂ ಇತ್ತು. ಆದರೆ ಈಗ ಎದುರಾಗಿರುವುದು ಆರೋಗ್ಯ ಸೇವೆ ಮತ್ತು ಆರ್ಥಿಕತೆಗಳೆರಡನ್ನೂ ಏಕಕಾಲಕ್ಕೆ ಬಿಕ್ಕಟ್ಟಿಗೆ ಸಿಲುಕಿಸಿರುವ ಮಹಾಮಾರಿ.
ಎರಡೂ ಕ್ಷೇತ್ರಗಳ ವಿಷಯದಲ್ಲಿ ಸರ್ಕಾರ ಸ್ಪಂದಿಸುತ್ತಿಲ್ಲ. ಆ ಬಗ್ಗೆ ಭರವಸೆ ಹುಟ್ಟಿಸುವ, ರಾಷ್ಟ್ರಕ್ಕೊಂದು ಸಂದೇಶ ನೀಡುವ ಪರಿಸ್ಥಿತಿಯಲ್ಲೂ ನಮ್ಮ ಪ್ರಧಾನಿಯಿಲ್ಲ.
ನಾಳಿನ ಬಗೆಗೆ ನಂಬಿಕೆಯೇ ನಮ್ಮ ವ್ಯಾಪಾರಗಳನ್ನು ಮುಂದುವರಿಸುವ ಉಮೇದನ್ನು ನೀಡುತ್ತದೆ. ಆದರೀಗ ಇರುವುದು ಅನಿರ್ದಿಷ್ಟಾವಧಿಯ ರಜಾಕಾಲ. ಆರೋಗ್ಯದ ದೃಷ್ಟಿಯಿಂದ ಈ ಮಹಾಮಾರಿ ಎಲ್ಲರನ್ನೂ ಸಮಾನವಾಗಿ ತಟ್ಟಿದೆಯಾದರೂ ಆರ್ಥಿಕವಾಗಿ ಇದರ ದೊಡ್ಡ ಪೆಟ್ಟು ಬಿದ್ದಿರುವುದು ಬಡವರಿಗೆ. ಈ ದೃಷ್ಟಿಯಲ್ಲಿ ಮಹಾಮಾರಿಯ ಬಗೆಗಿನ ಸರ್ಕಾರದ ಮೌನ ಒಂದೆಡೆಯಾದರೆ, ಕೌಟುಂಬಿಕ ಮಟ್ಟದಲ್ಲಿ ಆಗುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗೆಗಿನ ಮೌನವಂತೂ ನಮ್ಮ ಕಿವಿಗಳಲ್ಲಿ ಅನುರಣಿಸುತ್ತಿದೆ. ಮೌನ ಇಷ್ಟು ಭೀಕರವಾಗಿ, ನಿರ್ದಯಿಯಾಗಿ, ನಿರ್ಮಮಕಾರದಿಂದ ಕೂಡಿದ್ದನ್ನು ನಾವು ಮೊದಲ ಬಾರಿಗೆ ಕಾಣುತ್ತಿದ್ದೇವೆ.
ಬಡತನಕ್ಕೆ ಜಾರುವ ಪ್ರಕ್ರಿಯೆಗೆ ಮುಖ್ಯ ಕಾರಣ ಆರೋಗ್ಯಕ್ಕೆ ಸಂಬಂಧಿಸಿದ ಘಟನೆಗಳೆಂದು ಮಾಜಿ ಐಎಎಸ್ ಅಧಿಕಾರಿ ಮತ್ತು ಡ್ಯೂಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅನಿರುದ್ಧ ಕೃಷ್ಣ ಅವರ ಅಧ್ಯಯನಗಳು ತೋರಿಸಿವೆ. ಅವರ ಪುಸ್ತಕದ ಹೆಸರೇ ‘ಒನ್ ಇಲ್‌ನೆಸ್ ಅವೇ’. ಇದು ಸಾಮಾನ್ಯ ಪರಿಸ್ಥಿತಿಯ ಕಥೆ.
ಲಾಕ್‌ಡೌನ್‌ನಿಂದಾಗಿ ಯಾವುದೇ ಆದಾಯವಿಲ್ಲದಿದ್ದರೆ ಅಂದಂದಿನ ಸಂಪಾದನೆಯಿಂದ ಬದುಕುವವರ ಗತಿ ಏನು? ಇದನ್ನು ನಾವು ಹೋದವರ್ಷ ತಕ್ಕಮಟ್ಟಿಗೆ ನಿಭಾಯಿಸಲು ಪ್ರಯತ್ನಿಸಿದರೂ ಈ ಬಾರಿಯ ಮೌನ ಸಹಿಸಲು ಅಸಾಧ್ಯ. ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳು ಜನರ ಕೌಟುಂಬಿಕ ಆರ್ಥಿಕತೆಯನ್ನು ಧ್ವಂಸ ಮಾಡುವುದಕ್ಕೆ ಮುಖ್ಯ ಕಾರಣವೆಂದರೆ, ಆ ಖರ್ಚುಗಳ ಸ್ವರೂಪ ಹೇಗಿರುತ್ತದೆ ಮತ್ತು ಯಾವ ಮಟ್ಟದ್ದಾಗಿರುತ್ತದೆ ಎಂಬುದು ಊಹಾತೀತ. ಆರೋಗ್ಯ ಬಿಗಡಾಯಿಸಿ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ ಯಾವ ಚೌಕಾಸಿಗೂ ಎಡೆಯಿಲ್ಲ. ಸಿಕ್ಕ ವಾಹನವನ್ನು ಏರಬೇಕು, ಸಿಕ್ಕ ವೈದ್ಯರನ್ನು ಕಾಣಬೇಕು, ಅವರು ಹೇಳಿದ್ದನ್ನು ಮಾಡಬೇಕು. ಹೆಚ್ಚು ಪ್ರಶ್ನಿಸುವ ಅಥವಾ ಮತ್ತೊಬ್ಬ ವೈದ್ಯರ ಬಳಿಗೆ ಹೋಗುವ ಸಾಧ್ಯತೆ ಕಡಿಮೆ. ಒಂದು ಅಸಹಾಯಕ ಪರಿಸ್ಥಿತಿಯಲ್ಲಿ ಯಾವ ತಪಾಸಣೆ ಹೇಳಿದರೆ ಅದು, ಯಾವ ಮದ್ದು ಹೇಳಿದರೆ ಅದು ಎಂದು ಓಡಾಡುವ– ಆಗುವ ಖರ್ಚನ್ನು ಪರಿಗಣಿಸದಿರುವ ಪರಿಸ್ಥಿತಿಯಲ್ಲಿ ನಾವಿರುತ್ತೇವೆ.
ಹೀಗೆ ಖರ್ಚಿಗೆ ಕಡಿವಾಣವಿಲ್ಲದ ಅಸಹಾಯಕ ಪರಿಸ್ಥಿತಿಗೆ ಸಿಲುಕುವವರು ಮನೆಯ ಅನ್ನ ಗಳಿಸುವವರೇ ಆಗಿರುತ್ತಾರೆ. ಯಾಕೆಂದರೆ ಅವರು ಸಂಪಾದನೆಗಾಗಿ ಮನೆಯಿಂದ ಆಚೆ ಹೋಗಿರುತ್ತಾರೆ. ಇದೇ ಕಾರಣಕ್ಕಾಗಿಯೇ ಜನರ ಸಂಪರ್ಕಕ್ಕೆ ಬಂದಿರುತ್ತಾರೆ. ಬೀದಿಯಲ್ಲಿ ತರಕಾರಿ ಮಾರುವವರಿಗೆ, ರಸ್ತೆಯಂಚಿನಲ್ಲಿ ಪಾನಿಪೂರಿ ಮಾರುವವರಿಗೆ, ಮನೆಗೆಲಸ, ಬಟ್ಟೆಗಳಿಗೆ ಇಸ್ತ್ರಿ ಹಾಕುವ, ಆಟೊರಿಕ್ಷಾ ಚಲಾಯಿಸುವ ಮತ್ತು ದಿನಗೂಲಿಗೆ ಕೆಲಸ ಮಾಡುವ ಅನೇಕರಿಗೆ ವರ್ಕ್ ಫ್ರಂ ಹೋಂ ಸವಲತ್ತಿರುವುದಿಲ್ಲ.
ಲಾಕ್‌ಡೌನ್‌ನಿಂದಾಗಿ ನಾವು ದಿನಸಿ ಮತ್ತು ತರಕಾರಿ ಖರೀದಿಸುವ ವಿಧಾನ ಹೇಗೆ ಬದಲಾಗಿದೆ ಎಂಬುದನ್ನು ನೋಡೋಣ. ಬೆಳಿಗ್ಗೆ ಮನೆಗೇ ಸರಬರಾಜಾಗುವ ಹಾಲು, ಪೇಪರು ಮತ್ತು ಹತ್ತು ಗಂಟೆಯ ಒಳಗಾಗಿ ರಸ್ತೆಬದಿಯ ತಳ್ಳುಗಾಡಿಗಳಿಂದ ಕೊಳ್ಳಬಹುದಾದ ತರಕಾರಿ ಬಿಟ್ಟರೆ ಮಿಕ್ಕದ್ದು ಆನ್‌ಲೈನ್ ಖರೀದಿಯೇ. ಆನ್‌ಲೈನ್ ಖರೀದಿ ಮಾಡುವವರಿಗೆ (ಹಾಗೂ ಮಾರಾಟ ಮಾಡುವವರಿಗೆ) ಒಂದು ಇಂಟರ್‌ನೆಟ್ ಸಂಪರ್ಕವಿರಬೇಕು. ಆನ್‌ಲೈನಿನಲ್ಲಿ ವ್ಯವಹರಿಸಲು ಹಣಕಾಸನ್ನು ವರ್ಗಾಯಿಸುವ ಆ್ಯಪ್ ಅಥವಾ ಬ್ಯಾಂಕಿನ ಖಾತೆಯಿರಬೇಕು. ಇದಕ್ಕೊಂದು ಕಂಪ್ಯೂಟರೋ ಅಥವಾ ಸ್ಮಾರ್ಟ್ ಫೋನೋ ಬೇಕು. ಎಷ್ಟು ಜನರಿಗೆ ಈ ಸವಲತ್ತಿವೆ?
ಹೋಮ್ ಡೆಲಿವರಿಗೆ ಲಾಕ್‌ಡೌನ್ ನಿಯಮಗಳು ಅನ್ವಯಿಸುವುದಿಲ್ಲ. ಅವು ಅತ್ಯವಶ್ಯಕ ಸೇವೆಗಳು. ಅದರಿಂದಾಗಿ ಕೆಲವರಿಗೆ ನೌಕರಿ– ಆದಾಯ ಸಿಕ್ಕರೂ, ಅಸಂಘಟಿತ ಕ್ಷೇತ್ರದಲ್ಲಿ ಆದಾಯ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು. ಆದರೆ ಅದಕ್ಕಿಂತ ಮಹತ್ವದ ವಿಷಯವೊಂದಿದೆ– ವ್ಯಾಪಾರವೊಂದು ಸ್ಥಳೀಯ ಕಿರಾಣಿ ಅಂಗಡಿಯಿಂದ ಬಹುರಾಷ್ಟ್ರೀಯ ಅಮೆಜಾನ್‌ಗೆ
ವರ್ಗಾವಣೆಯಾದಾಗ ದೊಡ್ಡ ಮಟ್ಟದಲ್ಲಿ ಈ ಅಸಮಾನತೆ ಹೇಗೆ ಬೆಳೆಯುತ್ತದೆ ಎನ್ನುವುದನ್ನು ಗಮನಿಸಿ. ಅಸಂಘಟಿತ ಕ್ಷೇತ್ರದಿಂದ ಉಂಟಾಗುತ್ತಿದ್ದ ಪ್ರತೀ ವ್ಯವಹಾರವೂ ಅಮೆಜಾನ್‌ಗೇ (ಆ ರೀತಿಯ ಕೈಬೆರಳೆಣಿಕೆಯ ಕೆಲ ಸಂಸ್ಥೆಗಳಿಗೆ) ಹೋಗುತ್ತದೆ ಎಂದು ಕ್ಷಣದ ಮಟ್ಟಿಗೆ ನಂಬೋಣ. ಅಂದರೆ ಲಕ್ಷಾಂತರ ಸಣ್ಣ ವ್ಯಾಪಾರಿಗಳಿಗೆ ದಿನನಿತ್ಯದ ವ್ಯಾಪಾರ ಇಲ್ಲವಾಗಿ, ಆ ಸಂಬಂಧದ ಆದಾಯದ ಹೆಚ್ಚು ಭಾಗ ದೊಡ್ಡ ಸಂಸ್ಥೆಗಳಿಗೆ ವರ್ಗಾಂತರವಾಗುತ್ತದೆ. ಹೀಗಾಗಿ ಮೊದಲೇ ಬಡವರಾಗಿ
ದ್ದವರು ಇನ್ನಷ್ಟು ಬಡವರಾದರೆ, ಈಗಾಗಲೇ ಶ್ರೀಮಂತರಾಗಿರುವವರು ಮತ್ತಷ್ಟು ಶ್ರೀಮಂತರಾಗುತ್ತಾರೆ. ಒಂದು ಮಟ್ಟದಲ್ಲಿ ಇದು ಅನ್ಯಾಯವಲ್ಲ.
ಸೋಂಕು ಹಬ್ಬದಿರಲು ಲಾಕ್‌ಡೌನ್ ಬೇಕು. ಲಾಕ್‌ಡೌನ್ ಕಾಲದಲ್ಲಿ ದಿನಸಿಯ ಸರಬರಾಜೂ ಆಗಬೇಕು. ಜನರ ಮನೆಗೇ ದಿನಸಿ ತಲುಪುವ ವ್ಯವಸ್ಥೆಯು ಉತ್ತಮ. ಆ ವ್ಯವಸ್ಥೆಯನ್ನು ಏರ್ಪಾಟು ಮಾಡಬಹುದಾದವರು ಹೂಡಿಕೆಯಿಟ್ಟ ದೊಡ್ಡ ವ್ಯಾಪಾರಿಗಳು. ಆ ಲಾಭ ಅವರಿಗೇ ಹೋಗುತ್ತದೆ. ನ್ಯಾಯವೇ... ಆದರೂ ಇದು ಅಸಮಾನತೆಯನ್ನು ಬೆಳೆಸುತ್ತಿಲ್ಲವೇ... ದೇಶವೇ
ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ ಷೇರು ಮಾರುಕಟ್ಟೆಯಲ್ಲಿ ಹಲವೇ ಕಂಪನಿಗಳು ಉತ್ತಮ ಪ್ರದರ್ಶನ ಮತ್ತು ಅಧಿಕ ಲಾಭ ತೋರಿಸುತ್ತಿರುವುದರಲ್ಲಿ ಆಶ್ಚರ್ಯವೇನು?
ಈ ಅಸಹಾಯಕ ಪರಿಸ್ಥಿತಿಯಲ್ಲಿ ಸರ್ಕಾರ ಮಾಡಬೇಕಾದ್ದೇನು? ಈಗ ಏರ್ಪಟ್ಟಿರುವ ಬಿಕ್ಕಟ್ಟಿನಿಂದಾಗಿ ಹೆಚ್ಚಿನ ಆದಾಯ ಪಡೆಯುತ್ತಿರುವ ದೊಡ್ಡ ವ್ಯಾಪಾರಿಗಳ ಮೇಲೆ ತೆರಿಗೆಯನ್ನು ಹೆಚ್ಚಿಸುವುದು ಅಥವಾ ಅವರೊಂದಿಗೆ ಮಾತನಾಡಿ ಹೆಚ್ಚಿನ ದೇಣಿಗೆಯನ್ನು ಪಡೆಯುವುದು. ಆದರೆ ಕೋವಿಡ್ ಸೋಂಕಿನ ಬಗ್ಗೆ ನಮ್ಮ ನಾಯಕರು ಎಷ್ಟು ಮೌನ ವಹಿಸಿದ್ದಾರೋ ಅದಕ್ಕಿಂತ ಹೆಚ್ಚಿನ ಮೌನವನ್ನು ಆರ್ಥಿಕತೆಯ ಬಗ್ಗೆ ವಹಿಸಿದ್ದಾರೆ. ಮೌನದಲ್ಲೂ ಲಘು ಮತ್ತು ಗಾಢ ಮೌನ ಇರಬಹುದೆಂದು ಸಾಬೀತುಪಡಿಸಿದ್ದಾರೆ.
ಈ ಲೇಖನವನ್ನು ಬರೆಯುತ್ತಿರುವಾಗ ನನಗೆ ಬಹಳ ಭಯವೂ ಆಗುತ್ತಿದೆ. ಇದರಲ್ಲಿನ ಸೂಚನೆಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿ ಶ್ರೀಮಂತರ ದೇಣಿಗೆಯನ್ನು ಪಿ.ಎಂ. ಕೇರ್ಸ್‌ನಲ್ಲಿ ಪಡೆದು– ಕೆಲವು ರಾಜ್ಯಗಳ ಮತ್ತು ಕೆಲವೇ ಯೋಜನೆಗಳಿಗೆ ಮಾತ್ರ ಅಪಾರದರ್ಶಕವಾಗಿ ಹಂಚುವ ಅಪಾಯವಿದೆ. ಅಲ್ಲೂ ಅದರಲ್ಲೂ ಒಂದು ಮೌನವಿದೆ. ಅಪಾಯಕಾರಿ ಮೌನ.
ಮಜಕೂರು ಇಷ್ಟೇ. ಈ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬಹುದು. ಜನರ ಪರಿಸ್ಥಿತಿಯನ್ನು
ಪರಿಗಣಿಸಿ ಮಾನವೀಯವಾಗಿ ಸ್ಪಂದಿಸಬಹುದು. ಸಾಂತ್ವನದ ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಯಶಸ್ಸು ನನ್ನದು ವೈಫಲ್ಯ ನಿನ್ನದು. ನನ್ನ ಮನೆ ಸ್ವಚ್ಛವಾಗಿದೆ ಎಂದು ಬೀಗುತ್ತಲೇ ಗುಡಿಸಿದ ಕಸವನ್ನು ರಾಜ್ಯಗಳೆಡೆ ಎಸೆಯುತ್ತಿರುವ ಈ ನಿರ್ಮಮಕಾರಿ ಕೇಂದ್ರದ ಕಿವಿಯಲ್ಲಿ ಕಟು ಸತ್ಯಗಳನ್ನು ಹೇಳುವುದಾದರೂ ಹೇಗೆ?
ಮೌನ ಒಂದೆಡೆಯಾದರೆ, ಕಷ್ಟ ಕಾಣದ ಕುರುಡೂ ಆಕ್ರಂದನ ಕೇಳದ ಕಿವುಡೂ ಇದೇ ಸರ್ಕಾರಕ್ಕಿದೆ. ಡುಂಡಿರಾಜರ ಹಳೇ ಹನಿಗವನ ಇಷ್ಟು ಕಟುಸತ್ಯ ಆಗಬಹುದೆಂದು ಅನ್ನಿಸಿರಲಿಲ್ಲ.
ಅಕ್ಟೋಬರ್ 2ರ ಪ್ರತಿಜ್ಞೆ
‘ಮಹಾತ್ಮಾ, ನೀನು
ಹೇಳಿದಂತೆಯೇ
ಮಾಡುತ್ತೇವೆ
ಕೆಟ್ಟದ್ದನ್ನು ಕೇಳುವುದಿಲ್ಲ
ನೋಡುವುದಿಲ್ಲ
ಆಡುವುದಿಲ್ಲ
ಮಾಡುತ್ತೇವೆ’.
ಎಂ.ಎಸ್.ಶ್ರೀರಾಮ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.