ADVERTISEMENT

ಡಾ. ಶಿವಮೂರ್ತಿ ಮುರುಘಾ ಶರಣರ ಲೇಖನ: ಅಂತಃಕಲಹ, ಅಂತಃಸಾಕ್ಷಿ, ಅಭಿವ್ಯಕ್ತಿ

ಜ್ಞಾನದಿಂದ ಶಾಂತಿ- ಸಮಾಧಾನ, ಅದರ ಒಲುಮೆಯಿಂದ ಮುತ್ಸದ್ದಿತನ

ಡಾ.ಶಿವಮೂರ್ತಿ ಮುರುಘಾ ಶರಣರು
Published 26 ಏಪ್ರಿಲ್ 2022, 13:16 IST
Last Updated 26 ಏಪ್ರಿಲ್ 2022, 13:16 IST
ಅಥಣಿ ಶಿವಯೋಗಿಗಳೊಂದಿಗೆ ಬಾಲಗಂಗಾಧರ ತಿಲಕ್
ಅಥಣಿ ಶಿವಯೋಗಿಗಳೊಂದಿಗೆ ಬಾಲಗಂಗಾಧರ ತಿಲಕ್   

ದ್ವೇಷಾಸೂಯೆಗಳು ಇಂದು ಮುಗಿಲು ಮುಟ್ಟುತ್ತಿವೆ. ಪರಸ್ಪರ ಪ್ರೀತ್ಯಾದರಗಳು ಅಧಿಕ ಆಗಬೇಕಾಗಿರುವ ಸಂದರ್ಭದಲ್ಲಿ ರಾಗ– ದ್ವೇಷಗಳು ನುಸುಳುತ್ತ, ಸಮಾಜ ಹಾಗೂ ಸಂಸ್ಥೆಗಳ ಶಾಂತಿಯನ್ನು ಕದಡುತ್ತಿವೆ. ಇಂತಹ ಸ್ಥಿತಿಗೆ ಯಾವ ಕ್ಷೇತ್ರವೂ ಹೊರತಲ್ಲ. ಎಲ್ಲ ಕ್ಷೇತ್ರಗಳಲ್ಲೂ ರಾಗ– ದ್ವೇಷ ಆವರಿಸಿಕೊಂಡಿದೆ.

ಮತೀಯ ಹಾಗೂ ಜಾತೀಯ ಸಂಘರ್ಷಗಳು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂಬುದು ಸರ್ವರಿಗೂ ತಿಳಿದಿರುವ ಸಂಗತಿ. ಹಾಗಾದರೆ ವೈಯಕ್ತಿಕ ಹಾಗೂ ಸಾಮಾಜಿಕ ಅಶಾಂತಿಗೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.

ಮೊದಲ ಕಾರಣವೆಂದರೆ, ಅನವಶ್ಯಕವಾದ ಟೀಕೆ- ಟಿಪ್ಪಣಿಗಳು, ಆರೋಪ- ಪ್ರತ್ಯಾರೋಪಗಳು, ಕೆಸರೆ ರಚುವ ಆಟದಲ್ಲಿ ಮಗ್ನರಾಗಿರುವುದು, ವಿವೇಚನೆ ಇಲ್ಲದೆ ಅಭಿವ್ಯಕ್ತಿಸುವುದು. ಸ್ವಾತಂತ್ರ್ಯವು ಸರ್ವರಿಗೂ ಇದೆ. ಅಭಿವ್ಯಕ್ತಿಸುವ ಮುನ್ನ ಸಾಧಕ- ಬಾಧಕ ಅರಿತು ಅದನ್ನು ವ್ಯಕ್ತಪಡಿಸಬೇಕಾಗುತ್ತದೆ. ನೂರು ಸಾರಿ ಆಲೋಚಿಸಿ ಪ್ರತಿಪಾದನೆ ಮಾಡುವುದರಿಂದ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು.

ADVERTISEMENT

ಸರ್ವಜನಾಂಗದಲ್ಲೂ ಪ್ರತಿಭಾನ್ವಿತರು- ಮೇಧಾವಿ ಗಳು ಇರುತ್ತಾರೆ. ಅವರು ಸಮಾಜದ ಸೊತ್ತು- ಸಂಪತ್ತು. ಮೇಧಾವಿತನ ಅಥವಾ ಮುತ್ಸದ್ದಿತನ ಸುಮ್ಮನೆ ಬರುವು ದಿಲ್ಲ. ಅದಕ್ಕೆ ಅಪಾರ ಅಧ್ಯಯನಬಲ, ಅಧ್ಯಾತ್ಮಬಲ ಮತ್ತು ಅನುಭವಬಲ ಬೇಕು. ಈ ಮೂರನ್ನು ಯಾರು ತಮ್ಮ ಬದುಕಿನಲ್ಲಿ ಸಿದ್ಧಿಸಿಕೊಂಡಿರುತ್ತಾರೋ ಅಂಥ ವರಿಂದ ಸಮಾಜದ ಆರೋಗ್ಯ ಕಾಪಾಡಲ್ಪಡುತ್ತದೆ.

ಹೆಚ್ಚು ಮಾತನಾಡುವುದರಿಂದ ಸಾಮಾಜಿಕ ಆರೋಗ್ಯ ಸುಧಾರಿಸುತ್ತದೆ ಎಂಬುದು ಭ್ರಮೆ. ಈ ಭ್ರಮೆ ಯಿಂದ ಹೊರಬರಲು ಯತ್ನಿಸಬೇಕು. ಆಗಲೇ ಆ ವ್ಯಕ್ತಿಯು ಮುತ್ಸದ್ದಿ ಅನ್ನಿಸಿಕೊಳ್ಳುವುದು. ಹುಂಬತನವು ಸಮಸ್ಯೆಯನ್ನು ಸೃಷ್ಟಿಸಿದರೆ, ಮುತ್ಸದ್ದಿತನವು ಸಮಸ್ಯೆ ಯನ್ನು ನಿಯಂತ್ರಿಸುತ್ತದೆ. ಆಗಾಗ ಮೌನಕ್ಕೆ ಒಳಗಾಗುತ್ತ, ಪ್ರಾರ್ಥನೆ ನೆರವೇರಿಸುತ್ತ ಮುತ್ಸದ್ದಿ ರಾಜಕಾರಣ ಮಾಡಿದವರಲ್ಲಿ ರಾಷ್ಟ್ರಪಿತ ಗಾಂಧೀಜಿ ಒಬ್ಬರು. ಅವರು ಅಷ್ಟೇನೂ ಪರಿಣಾಮಕಾರಿ ಭಾಷಣಕಾರರಲ್ಲ ಎಂಬುದು ಗೊತ್ತಿರುವ ಸಂಗತಿ. ಆದರೆ ಅದರಿಂದ ಅವರು ಯಾವ ಬಗೆಯ ಕೀಳರಿಮೆಗೂ ಒಳಗಾಗುತ್ತಿರಲಿಲ್ಲ. ಸಂದರ್ಭಕ್ಕೆ ಬೇಕಾದಷ್ಟು ಮಾತ್ರ ಮಾತುಕತೆ. ಅನವಶ್ಯಕವಾಗಿ ಮಾತನಾಡುವ ಪ್ರಮೇಯವಿಲ್ಲ. ಮಾತು ಮಿತ, ಸಾಧನೆ ಅಮಿತ. ರಾಷ್ಟ್ರವನ್ನು ಮುನ್ನಡೆಸುವ ಶಕ್ತಿ ಅವರಲ್ಲಿತ್ತು.

ಕೆಲವರ ಆಕರ್ಷಣೆ ಮಾತುಗಾರಿಕೆಯಾದರೆ ಮತ್ತೆ ಕೆಲವರ ಆಕರ್ಷಣೆ ಮೌನ. ಗಾಂಧೀಜಿ ಬಹುತೇಕ ಮೌನಾ ಚರಣೆಗೆ ಒಳಗಾಗುತ್ತಿದ್ದರು. ಕೆಲವರಿಗೆ ಮೌನದ ಮಹತ್ವ ಗೊತ್ತಾಗುವುದಿಲ್ಲ. ಅಂಥವರು ಸದಾ ಬಡಬಡಿಸುತ್ತಿರುತ್ತಾರೆ. ಗಾಂಧೀಜಿಗೆ ಮೌನವು ಸಿದ್ಧಿಸಿತ್ತು.

ಶಿವಮೂರ್ತಿ ಮುರುಘಾ ಶರಣರು

ಮಾತನಾಡಿ ಮಾಡದಿರುವುದಕ್ಕಿಂತ, ಮಾತನಾಡದೆ ಮಾಡುವ ವಿಧಾನ ಹೆಚ್ಚು ಪರಿಣಾಮಕಾರಿ. ಅಂಥವರಲ್ಲಿ ಅಥಣಿ ಮುರುಘೇಂದ್ರ ಶಿವಯೋಗಿಗಳು ಒಬ್ಬರು. ಅವರೊಬ್ಬ ತ್ಯಾಗಿ, ವಿರಾಗಿ. ಅವರ ತಪಃಪ್ರಭಾವ ಅಗಾಧವಾಗಿತ್ತು. ಸೈದ್ಧಾಂತಿಕವಾಗಿ ಅವರು ಬಸವ ತತ್ವ ಪಾಲಿಸಿದರು, ಭಾವನಾತ್ಮಕವಾಗಿ ಶಿವತತ್ವವನ್ನು ಅನುಸರಿಸಿದರು. ಮೌನವಾಗಿ ಬಸವತತ್ವ ಅನುಸರಿಸಿ ದರು. ನೂರಾರು ಸಾಧಕರನ್ನು ಆಶೀರ್ವದಿಸಿದರು. ಅವರಲ್ಲಿ ಚಿತ್ರದುರ್ಗದ ಜಯದೇವ ಶ್ರೀಗಳು, ಜಯ ವಿಭವ ಸ್ವಾಮಿಗಳು, ಮಲ್ಲಿಕಾರ್ಜುನ ಶ್ರೀಗಳು, ವಾಗೀಶ ಪಂಡಿತಾರಾಧ್ಯರು, ಮೃತ್ಯುಂಜಯಪ್ಪಗಳು, ಹಳ್ಯಾಳದ ಸ್ವಾಮಿಗಳು ಮೊದಲಾದವರು ಸೇರಿದ್ದಾರೆ.

ಹರ್ಡೇಕರ್ ಮಂಜಪ್ಪನವರು ದೇವದಾಸಿ ಪುತ್ರರಾ ಗಿದ್ದು, ಅವರಿಗೆ ಶಿವಯೋಗಿಗಳು ಇಷ್ಟಲಿಂಗ ದೀಕ್ಷೆಯನ್ನು ಅನುಗ್ರಹಿಸುತ್ತಾರೆ. ದೀಕ್ಷೆ ಪಡೆದಂತಹ ಮಂಜಪ್ಪನವರು ಮೃತ್ಯುಂಜಯಪ್ಪಗಳೊಡಗೂಡಿ ದಾವಣಗೆರೆಯಲ್ಲಿ 111 ವರ್ಷಗಳ ಹಿಂದೆ ‘ಬಸವ ಜಯಂತಿ’ ಪ್ರಾರಂಭಿಸು
ತ್ತಾರೆ. ಬಸವತತ್ವ ಅನುಷ್ಠಾನದಲ್ಲಿ ಮೌನಕ್ರಾಂತಿ ಮಾಡಿದ ಶಿವಯೋಗಿಗಳು ಪೂಜನೀಯರು, ಮಾರ್ಗದರ್ಶಕರು. ನಡೆ- ನುಡಿಯಲ್ಲಿ ಸಿದ್ಧಹಸ್ತರು.

ಶಿವಯೋಗಿಗಳನ್ನು ಕಾಣಬೇಕೆಂದು ಬಾಲಗಂಗಾಧರ ತಿಲಕರು ಅಥಣಿ ಗಚ್ಚಿನಮಠಕ್ಕೆ ಬರುತ್ತಾರೆ. ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಶಿವಯೋಗಿಗಳು ಅವರನ್ನು ಅಷ್ಟೇ ಅಂತಃಕರಣದಿಂದ ಬರಮಾಡಿಕೊಳ್ಳುತ್ತಾರೆ. ತಿಲಕರು- ದೇಶವು ಬ್ರಿಟಿಷರ ಅಧೀನದಲ್ಲಿದ್ದು, ಗುಲಾಮಗಿರಿಯನ್ನು ಅನುಭವಿಸುತ್ತಿದೆ. ಗಾಂಧೀಜಿ, ಪಟೇಲ್, ಬೋಸ್ ಮುಂತಾದವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದು, ಅದರಲ್ಲಿ ಯಶಸ್ಸು ಸಿಗುವಂತೆ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತಾರೆ.

ಶಿವಯೋಗಿಗಳು ಒಂದುಕ್ಷಣ ಆಲೋಚಿಸುತ್ತ- ದೇಶಕ್ಕೆ ಸ್ವಾತಂತ್ರ್ಯ ದೊರಕುತ್ತದೆ. ಸ್ವಾತಂತ್ರ್ಯವನ್ನು ನೋಡುವ ಅವಕಾಶವು ನಿ(ನ)ಮಗೆ ದೊರೆಯುವುದಿಲ್ಲ ಎನ್ನುತ್ತಾರೆ. ಆಗ ತಿಲಕರು, ನಾ(ನೀ)ವು ಅದನ್ನು ಅನುಭವಿಸದಿದ್ದರೂ ತೊಂದರೆಯಿಲ್ಲ, ಮುಂದಿನ ಪೀಳಿಗೆಯಾದರೂ ಅದನ್ನು ಅನುಭವಿಸುವಂತೆ ಆಗಲೆಂದು ಕೇಳಿಕೊಳ್ಳುತ್ತಾರೆ. ಅರವಿಂದ ಘೋಷ್, ಪರಮಹಂಸ, ವಿವೇಕಾನಂದರಷ್ಟೇ ಶಿವಯೋಗಿಗಳು ಮಹಾನ್ ಸಾಧಕರಾಗಿದ್ದರು, ತ್ರಿಕಾಲಜ್ಞಾನಿಗಳಾಗಿದ್ದರು. ಅವರ ಆಶೀರ್ವಾದದಂತೆ ಭಾರತವು ಸ್ವಾತಂತ್ರ್ಯ ಪಡೆಯುತ್ತದೆ. ತಿಲಕರು 1920ರಲ್ಲಿ ನಿಧನರಾಗುತ್ತಾರೆ. 1921ರಲ್ಲಿ ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾಗುತ್ತಾರೆ.

ಶಿವಯೋಗಿಗಳಿಗೆ ಪಂಚಪರುಷಗಳು ಸಿದ್ಧಿಸಿದ್ದವು. ಅವೆಂದರೆ ವಾಕ್‍ಪರುಷ, ನೇತ್ರಪರುಷ, ಹಸ್ತಪರುಷ, ಪಾದಪರುಷ ಮತ್ತು ನಡೆಪರುಷ. ಆ ದಿನಗಳಲ್ಲಿ ವಾಹನದ ಅನುಕೂಲ ಇರುತ್ತಿರಲಿಲ್ಲ. ಅಥಣಿಯಿಂದ ಹೊರಗಡೆ ಕಮಾನು ಬಂಡಿಯಲ್ಲಿ ಪ್ರಯಾಣಿಸುತ್ತಿದ್ದರು. ಅದರಲ್ಲೂ ಬಸವ ಪುರಾಣ ಕೇಳುವಲ್ಲಿ ಎಲ್ಲಿಲ್ಲದ ಉತ್ಸುಕತೆ. ಮಠ ಬಿಟ್ಟು ಎಲ್ಲಿಯೂ ಹೋಗದಿರುವಾಗ, ಬಸವ ಪುರಾಣ ಎಂದಾಕ್ಷಣ ಒಪ್ಪುತ್ತಿದ್ದರು. ಜನರಾದರೂ ಬಸವ ಪುರಾಣ ಏರ್ಪಡಿಸಿ, ತಿಂಗಳಾನುಗಟ್ಟಲೆ ನಡೆಸಿ, ಅದರ ಮಂಗಲೋತ್ಸವಕ್ಕೆ ಶಿವಯೋಗಿಗಳನ್ನು ಬರ ಮಾಡಿಕೊಳ್ಳುತ್ತಿದ್ದರು.

ಮುರುಘೇಂದ್ರ ಶಿವಯೋಗಿಗಳು ನುಡಿಪ್ರಿಯರಲ್ಲ, ನಡೆ ಧೀರರು. ಗಚ್ಚಿನಮಠದಲ್ಲಿ ಬಸವ ಪುರಾಣ ನಡೆಯುತ್ತಿದ್ದರೂ ರಾತ್ರಿ 8 ಗಂಟೆ ಆಗುತ್ತಲೆ ಶಿವಪೂಜೆಗೆ ಎದ್ದುಹೋಗುತ್ತಿದ್ದರು. ವೇದಿಕೆಯಲ್ಲಿ ಆಶೀರ್ವಚನ ನೀಡಿ ದವರಲ್ಲ. ನುಡಿಯಿಂದ ದೂರ, ನಡೆಗೆ ಹತ್ತಿರ. ಅವರ ನುಡಿಗಳು ಕೇವಲ ನುಡಿಗಳಲ್ಲ, ಲಿಂಗದ ನುಡಿಗಳು.

ಮಠದಲ್ಲಿ ಮೊಕ್ಕಾಂ ಇದ್ದಾಗ್ಯೂ ಅವರು ಇದ್ದಾರೆ ಎಂಬುದು ಅವರಾಡುವ ಮಾತುಗಳಿಂದ ಗೊತ್ತಾಗುತ್ತಿ ರಲಿಲ್ಲ. ಅವರ ದೈನಂದಿನ ಶಿವಪೂಜೆ, ಮಧ್ಯಾಹ್ನ ಒಂದು ಗಂಟೆಯ ವಚನ ಪಾರಾಯಣ (ಅನುಸಂಧಾನ) ಇತ್ಯಾದಿಗಳಿಂದ ಅವರ ಇರುವಿಕೆಯನ್ನು ತಿಳಿಯಬಹುದಾಗಿತ್ತು. ಯಾರಾದರೂ ಭೇಟಿಗೆ ಬಂದರೆ ಅಷ್ಟೇ ಮಿತವಾಗಿ, ತಿಳಿಯಾಗಿ, ಹೃದಯಪೂರ್ವಕವಾಗಿ ಮಾತನಾಡುವ ವಿಧಾನವನ್ನು ರೂಢಿಸಿಕೊಂಡಿರುತ್ತಾರೆ. ಬಸವಣ್ಣನವರ ವಚನ-

ನುಡಿದಡೆ ಮುತ್ತಿನ ಹಾರದಂತಿರಬೇಕು
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತೊಲಿವನಯ್ಯಾ?

ಲಿಂಗಮೆಚ್ಚಿ ಅನ್ನುವುದರ ಜತೆಗೆ ಅಂತಃಸಾಕ್ಷಿ ಒಪ್ಪುವಂತೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಮಾತುಗಳು ಅಂತಃಸಾಕ್ಷಿ ಮೂಲಕ ಹೊರಬಂದಾಗ ಯಾವ ಗೊಂದಲವಿಲ್ಲ. ಹಾಗೆ ಬರದ ಮಾತುಗಳು ಅಂತಃಕಲಹ ಸೃಷ್ಟಿಸುತ್ತವೆ. ಕಲಹ ಸಾಕು, ಶಾಂತಿ ಬೇಕು. ಶಾಂತಿ ಮತ್ತು ಸೌಹಾರ್ದ ಸ್ಥಾಪನೆಯಲ್ಲಿ ಮೌನವು ಇನ್ನಿಲ್ಲದ ಪಾತ್ರ ವಹಿಸುತ್ತದೆ. ಧ್ಯಾನಯುಕ್ತ ಮೌನ. ಮೌನದಿಂದ ಜ್ಞಾನ. ಜ್ಞಾನದಿಂದ ಶಾಂತಿ- ಸಮಾಧಾನ. ಇವುಗಳ ಒಲುಮೆಯಿಂದಾಗಿ ಮುತ್ಸದ್ದಿತನ. ಮುತ್ಸದ್ದಿ ರಾಜಕಾರಣ ಎಲ್ಲ ಕಾಲಕ್ಕೂ ಆದರ್ಶ, ಅನುಕರಣೀಯ.

ಮಾತೇ ಬೇಡವೆಂದವರು ಸಮಾಜದಲ್ಲಿ ಶಿವಯೋಗಿಗಳು ಎಂಬ ಅಭಿಧಾನಕ್ಕೆ ಪಾತ್ರರಾಗುತ್ತಾರೆ. ಮಿತಭಾಷಿಗಳು ಮತ್ತು ಸತ್ಯ ಪರಿಪಾಲಕರು ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸುತ್ತಾರೆ. ಮುರುಘೇಂದ್ರ ಶಿವಯೋಗಿಗಳು ಲಿಂಗೈಕ್ಯರಾಗಿ ನೂರು ವರ್ಷ ತುಂಬುತ್ತಿದೆ. ಶತ ಮಾನೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಮೇ 21ರಿಂದ 24ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಅಲ್ಲಿನ ಚರಮೂರ್ತಿಗಳಾದ ಶಿವಬಸವ ಸ್ವಾಮಿಗಳೊಟ್ಟಿಗೆ ಮಹೋತ್ಸವ ಸಮಿತಿಯವರು ಆಯೋಜಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.