ADVERTISEMENT

ಇನ್ವೆಸ್ಟ್ ಕರ್ನಾಟಕ–2022: ಕಾಗದ ಬಳಸಿ ಹಾಲಿನ ಪ್ಯಾಕೆಟ್‌!

ಸಚ್ಚಿದಾನಂದ ಕುರಗುಂದ
Published 3 ನವೆಂಬರ್ 2022, 19:45 IST
Last Updated 3 ನವೆಂಬರ್ 2022, 19:45 IST
ಕಾಗದದಿಂದ ತಯಾರಿಸಿದ ಹಾಲಿನ ಪ್ಯಾಕೆಟ್‌
ಕಾಗದದಿಂದ ತಯಾರಿಸಿದ ಹಾಲಿನ ಪ್ಯಾಕೆಟ್‌   

ಬೆಂಗಳೂರು: ಕಾಗದದಿಂದ ತಯಾರಿಸಿದ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್‌, ದಿನನಿತ್ಯ ಬಳಸುವ ಪ್ಲಾಸ್ಟಿಕ್‌ಗೆ ಮುಕ್ತಿ ನೀಡಲಿದೆ.

ತೈವಾನ್‌ ಮೂಲದ ‘ಸ್ಟ್ರಾಂಗ್‌ ಗ್ಲೋಬಲ್‌’ ಕಂಪನಿ ಇಂತಹ ಪ‍್ರಯತ್ನ ಕೈಗೊಂಡಿದೆ. ಕಾಗದದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿರುವ ಈ ಕಂಪನಿ, ಕರ್ನಾಟಕದಲ್ಲೂ ತನ್ನ ಘಟಕ ಸ್ಥಾಪಿಸಲು ಆಸಕ್ತಿ ತೋರಿದೆ.

ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ಉತ್ಪನ್ನಗಳನ್ನು ಪ್ರದರ್ಶಿಸಿದೆ. ‘ಕಾಗದದಿಂದ ತಯಾರಿಸುವ ಹಾಲಿನ ಪ್ಯಾಕೆಟ್‌ ಜೈವಿಕವಾಗಿ ವಿಘಟನೆಯಾಗಲಿದ್ದು, ಮಣ್ಣಿನಲ್ಲಿ ಸಂಪೂರ್ಣವಾಗಿ ಕೊಳೆಯಲಿದೆ. ಇದು ಸುರಕ್ಷಿತ ಮತ್ತು ಸ್ವಚ್ಛ. ಮೈನಸ್‌ 20ರಿಂದ ಮೈನಸ್‌ 100 ಡಿಗ್ರಿ ಸೆಲ್ಸಿಯಸ್‌ನಲ್ಲಿ ಏಳು ದಿನಗಳ ಕಾಲ ಹಾಲನ್ನು ಸುರಕ್ಷಿತವಾಗಿರಿಸಬಹುದು’ ಎಂದು ಕಂಪನಿಯ ಯೋಜನಾ ವ್ಯವಸ್ಥಾಪಕ ರಾಜೀವ್‌ ಕುಮಾರ್‌ ಸಿಂಗ್‌ ವಿವರಿಸುತ್ತಾರೆ.

ADVERTISEMENT

ಬಾಟಲ್‌, ಪೇಪರ್‌ ಟ್ಯೂಬ್‌ಗಳು, ಕಪ್‌ಗಳು, ಸ್ಟ್ರಾ ಸೇರಿದಂತೆ ಹಲವು ಉತ್ಪನ್ನಗಳನ್ನು ಈ ಕಂಪನಿ ತಯಾರಿಸುತ್ತಿದೆ. ಬಿಸಿಯಾಗಿರುವ ಆಹಾರವನ್ನಿರಿಸಲು ಸಹ ಈ ಉತ್ಪನ್ನಗಳನ್ನು ಬಳಸಬಹುದಾಗಿದೆ. ಚೀನಾ, ಐರೋಪ್ಯ ಒಕ್ಕೂಟ, ಅಮೆರಿಕ, ವಿಯೆಟ್ನಾಂ ಮತ್ತು ಭಾರತದಿಂದ ಈ ಉತ್ಪನ್ನಗಳಿಗೆ ಪೇಟೆಂಟ್‌ ಪಡೆಯಲಾಗಿದೆ.

‘ಕಾಗದದಿಂದ ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆಯೂ ದೊರೆಯುತ್ತಿದ್ದು, ಅಪಾರ ಬೇಡಿಕೆ ಇದೆ. ಡಾಬರ್ ಇಂಡಿಯಾ ಸೇರಿದಂತೆ ವಿವಿಧ ಕಂಪನಿಗಳಿಗೆ ನಮ್ಮ ಕಂಪನಿಯ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ’ ಎಂದು ರಾಜೀವ್‌ ಕುಮಾರ್‌ ಸಿಂಗ್‌ ಹೇಳುತ್ತಾರೆ.

ಗಾಯಕ್ಕೆ ರೇಷ್ಮೆಯ ಮುಲಾಮು!

ರೇಷ್ಮೆಗೂಡುಗಳು ಈಗ ಗಾಯಕ್ಕೆ ಚಿಕಿತ್ಸೆಯ ಸ್ಪರ್ಶ ನೀಡುತ್ತಿವೆ. ರೇಷ್ಮೆಗೂಡುಗಳ ನೂಲಿನಿಂದ ತಯಾರಿಸಿದ ಉತ್ಪನ್ನಗಳನ್ನು ವಿವಿಧ ರೀತಿಯ ಗಾಯಗಳ ನಿವಾರಣೆಯಲ್ಲಿ ಬಳಸಲಾಗುತ್ತಿದೆ. ಇಂತಹ ವಿನೂತನ ಕಾರ್ಯದಲ್ಲಿ ಯಲಹಂಕ ನ್ಯೂಟೌನ್‌ನ ‘ಫೈಬ್ರೊಹೀಲ್‌’ ಕಂಪನಿ ತೊಡಗಿದೆ.

‘ದೇಶದಾದ್ಯಂತ 100ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕಂಪನಿಯ ಉತ್ಪನ್ನಗಳನ್ನು ಪೂರೈಸಲಾಗಿದ್ದು, ಒಂದು ಲಕ್ಷ ರೋಗಿಗಳ ಮೇಲೆ ಕೈಗೊಂಡ ಪ್ರಯೋಗವು ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಗಾಯ, ಸುಟ್ಟ ಗಾಯ ಸೇರಿದಂತೆ ವಿವಿಧ ಗಾಯಗಳಿಗೆ ರೇಷ್ಮೆ ಗೂಡಿನಿಂದ ತಯಾರಿಸಿದ ಪ್ಲಾಸ್ಟರ್‌ಗಳು ಪರಿಣಾಮಕಾರಿಯಾಗಿದ್ದು ಬೇಗ ಗುಣವಾಗುತ್ತದೆ’ ಎಂದು ಕಂಪನಿಯ ಪ್ರೊಡಕ್ಷನ್‌ ಮ್ಯಾನೇಜರ್‌ ಎಂ.ಆರ್‌. ಶಕ್ತಿ ಪ್ರಕಾಶ್‌ ವಿವರಿಸುತ್ತಾರೆ. ‘ರೇಷ್ಮೆ ಗೂಡಿನ ಪ್ರೊಟೀನ್‌ ಬಳಸಿ ಪ್ಲಾಸ್ಟರ್‌ಗಳನ್ನು ತಯಾರಿಸಲಾಗುತ್ತಿದ್ದು, ನೀರು ನಿರೋಧಕವಾಗಿದೆ. ದೇಶದಲ್ಲಿ ಮೊದಲ ಬಾರಿ ರೇಷ್ಮೆ ಗೂಡಿನಿಂದ ಪ್ಲಾಸ್ಟರ್‌ಗಳನ್ನು ತಯಾರಿಸಲಾಗುತ್ತಿದೆ. ರಾಮನಗರ ಹಾಗೂ ಶಿಡ್ಲಘಟ್ಟದಿಂದ ರೇಷ್ಮೆ ಗೂಡುಗಳನ್ನು ಖರೀದಿಸುತ್ತೇವೆ. ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕಂಪನಿಯಲ್ಲಿ 35 ಉದ್ಯೋಗಿಗಳಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

ಪುಡಿ ರೂಪದಲ್ಲೂ ಬಂತು ಎಳನೀರು

ಸುಲಭವಾಗಿ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ ಎಳನೀರು ಪುಡಿ ತಯಾರಿಸುವ ಕಾರ್ಯದಲ್ಲಿ ‘ಫುಡಿಯೊ.ಫಿಟ್‌’ ನವೋದ್ಯಮ ಕಂಪನಿ ತೊಡಗಿದೆ. ಎಳನೀರಿನ ಜತೆಗೆ ಕಬ್ಬಿನ ಹಾಲಿನ ಪುಡಿಯನ್ನು ಸಹ ಉತ್ಪಾದಿಸುತ್ತಿದೆ. ಕನಿಷ್ಠ 15 ಗ್ರಾಂನಿಂದ 200 ಗ್ರಾಂಗಳ ವಿವಿಧ ಗಾತ್ರಗಳ ಪ್ಯಾಕ್‌ಗಳನ್ನು ಮಾಡಿ ಮಾರಾಟ ಮಾಡಲಾಗುತ್ತಿದೆ. ಈ ಪುಡಿಗೆ ನೀರು ಮಿಶ್ರಣ ಮಾಡಿದರೆ, ತಕ್ಷಣವೇ ಕುಡಿಯಲು ಸಿದ್ಧವಾಗುತ್ತದೆ ಎನ್ನುತ್ತಾರೆ ಕಂಪನಿಯ ಮುಖ್ಯಸ್ಥೆ ಅಪೂರ್ವ.

‘ಫ್ರೀಸ್‌ಡ್ರೈನ್‌’ ತಂತ್ರಜ್ಞಾನ ಬಳಸಿ ಈಗಾಗಲೇ ವಿವಿಧ ಹಣ್ಣು, ತರಕಾರಿ, ಕಾಫಿ ಪುಡಿ ತಯಾರಿಸಲಾಗುತ್ತಿದೆ. ಆದರೆ, ಎಳನೀರು ಮತ್ತು ಕಬ್ಬಿನ ಹಾಲಿನ ಪುಡಿ ತಯಾರಿಸುತ್ತಿರುವುದು ಇದೇ ಮೊದಲು. ಈ ತಂತ್ರಜ್ಞಾನದ ಮೂಲಕ ಎಳನೀರಿನಲ್ಲಿನ ನೀರಿನ ಅಂಶ ತೆಗೆದು ಉಳಿದಿರುವ ಸೋಡಿಯಂ, ಪೊಟಾಷಿಯಂ, ಉಪ್ಪಿನ ಅಂಶಗಳನ್ನು ಹಾಗೆಯೇ ಉಳಿಸಿ ಪ್ಯಾಕ್‌ ಮಾಡಲಾಗುತ್ತದೆ. ಒಂದು ಎಳನೀರನ್ನು ಈ ತಂತ್ರಜ್ಞಾನದ ಮೂಲಕ ಸಂಸ್ಕರಿಸಿದಾಗ ಸುಮಾರು 15 ಗ್ರಾಂ ಪುಡಿ ದೊರೆಯಲಿದೆ’ ಎಂದು ವಿವರಿಸುತ್ತಾರೆ.

’ಈ ಉತ್ಪನ್ನಗಳನ್ನು ಒಂದು ವರ್ಷದಿಂದ ತಯಾರಿಸಲಾಗುತ್ತಿದೆ. ಭಾರತ, ಅಮೆರಿಕ ಮತ್ತು ಬ್ರಿಟನ್‌ ದೇಶಗಳಿಗೆ ಪೂರೈಸಲಾಗುತ್ತಿದೆ. ಪ್ರತಿ ದಿನ 2ಟನ್‌ ಪುಡಿ ತಯಾರಿಸಲಾಗುತ್ತಿದೆ. ಸುಮಾರು 17 ಸಾವಿರ ಅಂಗಡಿಗಳಲ್ಲಿ ಲಭ್ಯವಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.