‘ಶಾಂತಿಗಿಂತ ಹೆಚ್ಚಾಗಿ ಯುದ್ಧವನ್ನು ಬಯಸುವಷ್ಟು ಯಾರೂ ಮೂರ್ಖರಲ್ಲ. ಏಕೆಂದರೆ, ಶಾಂತಿಕಾಲದಲ್ಲಿ ಮಕ್ಕಳು ಅಪ್ಪಂದಿರ ಅಂತ್ಯಸಂಸ್ಕಾರ ನಡೆಸಿದರೆ, ಯುದ್ಧಕಾಲದಲ್ಲಿ ಅಪ್ಪಂದಿರು ಮಕ್ಕಳ ಅಂತ್ಯಸಂಸ್ಕಾರ ನಡೆಸಬೇಕಾಗುತ್ತದೆ’ ಎಂದು ಗ್ರೀಕ್ ಇತಿಹಾಸಕಾರ ಹೆರೊಡೊಟಸ್ 2,500 ವರ್ಷಗಳ ಹಿಂದೆ ಹೇಳಿದ್ದ.
ಆದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರವು ಹೆರೊಡೊಟಸ್‌ನ ಮಾತುಗಳಿಗೆ ವಿರುದ್ಧವಾಗಿ ನಡೆಯುತ್ತಿದೆ. ಈ ಯುದ್ಧದಲ್ಲಿ ಮಕ್ಕಳು ತಮ್ಮ ಅಪ್ಪ–ಅಮ್ಮಂದಿರ, ಅಜ್ಜ–ಅಜ್ಜಿಯರ ಅಂತ್ಯಸಂಸ್ಕಾರ ನಡೆಸುತ್ತಿ ದ್ದಾರೆ; ಅಪ್ಪ–ಅಮ್ಮ ಸೇರಿ ಮಕ್ಕಳ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ; ಪತಿಯು ಪತ್ನಿಯ, ಪತ್ನಿಯು ಪತಿಯ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ಅಂತ್ಯಸಂಸ್ಕಾರದ ಮುಂದಿನ ಪಾಳಿ ಯಾರದ್ದು, ಮುಂದಿನ ದಾಳಿಯಲ್ಲಿ ಅನಾಥರಾಗುವವರು ಯಾರು ಎಂಬ ಭೀತಿಯಲ್ಲಿ ಅಲ್ಲಿನವರು ಇದ್ದಾರೆ.
ಇಸ್ರೇಲಿ ಯಹೂದಿ ಮಾವೋಜ್ ಇನೊನ್ ಅವರು ತಮ್ಮ ತಂದೆ, ತಾಯಿಯ ಅಂತ್ಯಸಂಸ್ಕಾರ ನಡೆಸಿ ದುಃಖದಲ್ಲಿದ್ದಾರೆ. ಇವರಿಬ್ಬರನ್ನು ಹಮಾಸ್ ಬಂಡುಕೋರರು ಹತ್ಯೆ ಮಾಡಿದ್ದರು. ಈಚೆಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಸಂದರ್ಶನ ನೀಡಿದ್ದ ಅವರು, ‘ನಾನು ಅಳುತ್ತಲೇ ಇದ್ದೇನೆ. ನನ್ನ ಅಪ್ಪ–ಅಮ್ಮನಿಗಾಗಿ, ಸ್ನೇಹಿತರಿಗಾಗಿ, ಅಪಹೃತರಿಗಾಗಿ, ಬಲಿಯಾಗಿರುವ ಪ್ಯಾಲೆಸ್ಟೀನ್ ಜನರಿಗಾಗಿ, ಕಷ್ಟ ಅನುಭವಿಸಲಿರುವ ಎಲ್ಲರಿಗಾಗಿ ನಾನು ಅಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಆದರೆ ಕ್ರೋಧದಿಂದ ಕುದಿಯುತ್ತಿರುವ ಜನರ ಸಂಖ್ಯೆಯು ಇನೊನ್ ಅವರಂಥ ವ್ಯಕ್ತಿಗಳಿಗಿಂತ ಹೆಚ್ಚಿದೆ. ‘ನಾವು ಇತಿಹಾಸದಿಂದ ಪಾಠ ಕಲಿಯಬೇಕು. ಮಿಲಿಟರಿ ಪರಿಹಾರವು ನನ್ನ ಅಪ್ಪ–ಅಮ್ಮನನ್ನು ಜೀವಂತ ಉಳಿಸುವಲ್ಲಿ ವಿಫಲವಾಯಿತು. ನಾವು ಈ ಹಿಂದೆ ಮಾಡುತ್ತಿದ್ದುದನ್ನು ಮತ್ತೆ ಮಾಡುವುದನ್ನು ನಿಲ್ಲಿಸಬೇಕು. ಹೊಸ ನೀತಿ ಬೇಕು. ಶತಮಾನದಿಂದ ನಡೆಯುತ್ತಿರುವ ಹಿಂಸೆಯನ್ನು ನಿಲ್ಲಿಸುವ ಧೈರ್ಯವಂತರು ಬೇಕು’ ಎಂದು ಇನೊನ್ ಹೇಳಿದ್ದಾರೆ. ಇದಕ್ಕೆ ನ್ಯೂಯಾರ್ಕ್ ಟೈಮ್ಸ್‌ನ ಪತ್ರಕರ್ತ, ‘ಅಂದರೆ, ಹೀಗೆ ಮಾಡಲು ಗಾಂಧೀಜಿಗೆ ಇದ್ದಂತಹ ಆತ್ಮಸ್ಥೈರ್ಯ ಬೇಕು’ ಎಂದು ತಮ್ಮಲ್ಲೇ ಹೇಳಿಕೊಂಡಿದ್ದಾರೆ.
ಹಮಾಸ್ ಸಂಘಟನೆಯು ಮಹಿಳೆಯರು, ಮಕ್ಕಳು ಸೇರಿದಂತೆ 1,400 ನಾಗರಿಕರನ್ನು ಹತ್ಯೆ ಮಾಡಿದ್ದು ಭಯೋತ್ಪಾದನಾ ಕೃತ್ಯ. ಅದಕ್ಕೆ ಕ್ಷಮೆಯಿಲ್ಲ. ಆದರೆ ಇಸ್ರೇಲ್ ಪ್ರತೀಕಾರದಿಂದ ನಡೆಸುತ್ತಿರುವ ದಾಳಿಯು ಹತ್ಯಾಕಾಂಡಕ್ಕೆ ಸಮ, ಅದು ಸರ್ಕಾರಿ ಭಯೋತ್ಪಾದನೆ. ಅದು ಹಿಟ್ಲರ್ ಅವಧಿಯಲ್ಲಿ ಯಹೂದಿಗಳೇ ಅನುಭವಿಸಿದ ಜನಾಂಗ ನಿರ್ಮೂಲನೆ ಉದ್ದೇಶದ ಹತ್ಯಾಕಾಂಡಕ್ಕೆ ಸಮ. ಇಸ್ರೇಲ್ ಸರ್ಕಾರವು ಹಿಟ್ಲರನ ಜರ್ಮನಿಗಿಂತ ಭಿನ್ನವಾಗಿದೆಯೇ?
ಪ್ಯಾಲೆಸ್ಟೀನ್ ಪ್ರದೇಶಗಳನ್ನು ಇಸ್ರೇಲ್ 75 ವರ್ಷಗಳಿಂದ ತನ್ನ ವಸಾಹತು ಮಾಡಿಕೊಳ್ಳುತ್ತಿದೆ. ಗಾಜಾ ಪಟ್ಟಿಯ ಮೇಲೆ ದಿಗ್ಬಂಧನ ವಿಧಿಸಿ, ಅದನ್ನು ಬಯಲು ಬಂದೀಖಾನೆಯನ್ನಾಗಿಸಿದೆ. ಪೂರ್ವ ಜೆರುಸಲೇಂ ಭಾಗವನ್ನು ಇಸ್ರೇಲ್ ಏಕಪಕ್ಷೀಯವಾಗಿ ವಶಕ್ಕೆ ತೆಗೆದುಕೊಂಡಿದೆ. ಇಸ್ರೇಲ್‌ನಲ್ಲಿಯೂ 25 ಲಕ್ಷ ಮಂದಿ ಪ್ಯಾಲೆಸ್ಟೀನಿಯನ್ನರು ತೃತೀಯ ದರ್ಜೆ ನಾಗರಿಕರಂತೆ ಬದುಕುತ್ತಿದ್ದಾರೆ.
ಪ್ಯಾಲೆಸ್ಟೀನ್ ಜನರನ್ನು ವಿಭಜಿಸಿ, ದುರ್ಬಲರನ್ನಾಗಿಸುವ ಉದ್ದೇಶದಿಂದ, ಪ್ಯಾಲೆಸ್ಟೀನ್ ಲಿಬರೇಷನ್ ಆರ್ಗನೈಸೇಷನ್‌ಗೆ ಪ್ರತಿಸ್ಪರ್ಧಿಯಾಗಿ ಹಮಾಸ್ ಸಂಘಟನೆಯನ್ನು ಬೆಂಜಮಿನ್ ನೆತನ್ಯಾಹು ಅವರಂಥವರ ನಾಯಕತ್ವವು ಪ್ರೋತ್ಸಾಹಿಸಿತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ಯಾಲೆಸ್ಟೀನ್ ಪ್ರದೇಶಗಳ ಮೇಲಿನ ಹಿಡಿತವನ್ನು ಶಾಶ್ವತಗೊಳಿಸುವ, ದ್ವಿರಾಷ್ಟ್ರ ಸೂತ್ರಕ್ಕೆ ಸಂಬಂಧಿಸಿದ ಮಾತುಕತೆಗಳನ್ನು ಮುಂದಕ್ಕೆ ಹಾಕುವ ಉದ್ದೇಶ ಕೂಡ ಇತ್ತು. ಗಾಜಾ ಪ್ರದೇಶವನ್ನು ಆಳುತ್ತಿರುವ ಹಮಾಸ್, ಪ್ಯಾಲೆಸ್ಟೀನ್‌ನಿಂದ ಇಸ್ರೇಲ್ ಅನ್ನು ಹೊರಹಾಕಿ ತಾರತಮ್ಯವನ್ನು ಕೊನೆಗೊಳಿಸುವ ಶಪಥ ಮಾಡಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಇತಿಹಾಸಕಾರ ಪ್ರೊ. ಅವಿ ಶ್ಲೈಮ್ ಅವರು ಯಹೂದಿ, ಇಸ್ರೇಲ್ ಸೇನೆಯಲ್ಲಿದ್ದವರು. ‘ಸಂಘರ್ಷ ಶುರುವಾಗಿದ್ದು ಅಕ್ಟೋಬರ್ 7ರಿಂದ ಅಲ್ಲ. ಪ್ಯಾಲೆಸ್ಟೀನ್ ಮೇಲೆ ಯಹೂದಿಯರ ಹಕ್ಕು ಕೇಳುವಿಕೆಯು ದುರ್ಬಲ ನೆಲೆಗಟ್ಟಿನ ಮೇಲೆ ನಿಂತಿದೆ. ಹಿಂದೆ ಒಂದು ಜಾಣ ಘೋಷಣೆಯನ್ನು ರೂಪಿಸಲಾಯಿತು. ದೇಶವಿಲ್ಲದ ಜನ ಹಾಗೂ ಜನರಿಲ್ಲದ ದೇಶ ಎಂಬುದು ಆ ಘೋಷಣೆ. ಅಂದರೆ, ಯಹೂದಿಯರಿಗೆ ದೇಶ ಇರಲಿಲ್ಲ. ಅದು ನಿಜವೂ ಆಗಿತ್ತು. ಆದರೆ ಪ್ಯಾಲೆಸ್ಟೀನ್‌ನಲ್ಲಿ ಜನರಿಲ್ಲ ಎಂಬುದು ನಿಜವಾಗಿರಲಿಲ್ಲ. ಅಲ್ಲಿ ಅರಬ್ ಸಮಾಜ ಇತ್ತು. ಅರಬರು ಹಲವು ಶತಮಾನಗಳಿಂದ ಪ್ಯಾಲೆಸ್ಟೀನ್‌ನಲ್ಲಿ ವಾಸಿಸುತ್ತಿದ್ದರು’ ಎಂದು ಹೇಳಿದ್ದಾರೆ.
ಮೊದಲ ವಿಶ್ವಯುದ್ಧದ ಅಂತ್ಯಕ್ಕೂ ಮೊದಲು ಬಾಲ್ಫರ್ ಘೋಷಣೆಯನ್ನು ಬ್ರಿಟಿಷರು ಹೊರಡಿಸಿದರು. ಪ್ಯಾಲೆಸ್ಟೀನ್‌ನಲ್ಲಿ ಯಹೂದಿಯರಿಗೆ ನೆಲೆ ಸೃಷ್ಟಿಸಿಕೊಡು ವುದಾಗಿ ಹೇಳಿದರು. ‘ಪ್ಯಾಲೆಸ್ಟೀನ್‌ನಲ್ಲಿ ಇರುವ ಯಹೂದೇತರ ನಾಗರಿಕರು ಮತ್ತು ಅವರ ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ಬರಬಾರದು’ ಎಂದೂ ಬ್ರಿಟಿಷರು ಹೇಳಿದ್ದರು. ಆದರೆ ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷರು ಅರಬರನ್ನು ವಂಚಿಸಿದರು. ಪ್ಯಾಲೆಸ್ಟೀನ್‌ನಲ್ಲಿ ಯಹೂದಿಯರ ನೆಲೆಗಳನ್ನು ಸ್ಥಾಪಿಸಲು ಮುಂದಾದರು. ಅರಬ್ ಪ್ಯಾಲೆಸ್ಟೀನಿಯನ್ನರು ಹಾಗೂ ಯಹೂದಿ ವಲಸಿಗರ ನಡುವೆ ಸಂಘರ್ಷದ ಬೀಜ ಬಿತ್ತಿದರು. ಆ ಸಂದರ್ಭದಲ್ಲಿ ಅರಬರ ಜನಸಂಖ್ಯೆಯು ಅಲ್ಲಿ ಶೇಕಡ 95ರಷ್ಟು ಆಗಿತ್ತು, ಯಹೂದಿಯರ ಜನಸಂಖ್ಯೆಯ ಪ್ರಮಾಣವು ನಗಣ್ಯವಾಗಿತ್ತು.
ಎರಡನೆಯ ವಿಶ್ವಯುದ್ಧದ ನಂತರದಲ್ಲಿ ಯಹೂದಿ ಯರ ರಾಷ್ಟ್ರದ ಸೃಷ್ಟಿಯ ಕೆಲಸದ ಮೇಲ್ವಿಚಾರಣೆಯನ್ನು ಬ್ರಿಟನ್ ನಡೆಸಿತು. ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಪ್ಯಾಲೆಸ್ಟೀನಿಯನ್ನರ ನೆಲ ವನ್ನು ಬಲವಂತವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಕೆಲಸಕ್ಕೆ ನೆರವು ನೀಡಿದವು. ಪ್ಯಾಲೆಸ್ಟೀನ್‌ನ ಲಕ್ಷಾಂತರ ಮಂದಿ ತಮ್ಮದೇ ನೆಲದಲ್ಲಿ ನಿರಾಶ್ರಿತರಾದರು. ಪ್ಯಾಲೆಸ್ಟೀನ್ ನೆಲವನ್ನು ಶತಮಾನಗಳ ಹಿಂದೆ ತೊರೆದು, ಯುರೋಪ್ ಮತ್ತು ಅಮೆರಿಕದಲ್ಲಿ ನೆಲೆ ಕಂಡುಕೊಂಡಿದ್ದ ಯಹೂದಿಗಳು ಹತ್ಯಾಕಾಂಡವನ್ನು ಎದುರಿಸಿದ ನಂತರದಲ್ಲಿ ತಮ್ಮದೇ ಆದ ಒಂದು ದೇಶಕ್ಕಾಗಿ ಹಂಬಲಿಸಿದ್ದು ಸಮರ್ಥನೀಯ ಹೌದು. ಆದರೆ, ಪ್ಯಾಲೆಸ್ಟೀನ್ ನಾಗರಿಕರನ್ನು ಸ್ಥಳಾಂತರಿಸಿ, ಅವರ ಶವದ ಮೇಲೆ ಸೌಧ ಕಟ್ಟುವುದು ಸಾಧ್ಯವೇ? ಆ ಕೆಲಸವನ್ನು ಸದಾಶಯದಿಂದ ಹಾಗೂ ಪ್ಯಾಲೆಸ್ಟೀನ್ ನಾಗರಿಕರ ಸ್ವಯಂ ಆಡಳಿತದ ಹಕ್ಕನ್ನು ಗೌರವಿಸುವ ಮೂಲಕ ಮಾಡಬೇಕಿತ್ತಲ್ಲವೇ?
ಇಲ್ಲಿ ಅಮೆರಿಕದ ಕೈಗಳು ರಕ್ತಸಿಕ್ತವಾಗಿವೆ. ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಬೇಷರತ್ತಾಗಿ ಘೋಷಿಸಿದ್ದಾರೆ. ಅಮೆರಿಕದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ. ಹೀಗಾಗಿ ಹಿಂದಿನ ಅಧ್ಯಕ್ಷರಂತೆಯೇ ಬೈಡನ್ ಅವರೂ ಶಕ್ತಿಯುತ ಯಹೂದಿ ಲಾಬಿಗೆ ಮಣಿದಿದ್ದಾರೆ.
ಬೇರೊಬ್ಬರ ನೆಲವನ್ನು ಸ್ವಾಧೀನದಲ್ಲಿ ಇರಿಸಿಕೊಂಡಾಗ ಹಿಂಸೆ ಸೃಷ್ಟಿಯಾಗುತ್ತದೆ. ಅರಬ್ ನೆಲದ ಮೇಲೆ ದಾಳಿ ನಡೆಸಿದ ಎಲ್ಲ ಸೇನೆಗಳೂ ನಂತರದಲ್ಲಿ ನಾಶವಾಗಿವೆ. ಥಾಮಸ್ ಫ್ರೀಡ್ಮನ್ ಅವರು ಬರೆದಿರುವಂತೆ, ‘ತಾಲಿಬಾನ್, ಹಮಾಸ್, ಐಎಸ್‌ಐಎಸ್, ಅಲ್ ಕೈದಾ, ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್, ಹಿಜ್ಬುಲ್ಲಾ ಇವೆಲ್ಲ ಇಂದಿಗೂ ಸಂಪೂರ್ಣವಾಗಿ ನಾಶವಾಗಿಲ್ಲ. ಈ ಸಂಘಟನೆಗಳು ತಮ್ಮ ಸಮಾಜದಲ್ಲಿ ಆಳವಾದ ಸಾಂಸ್ಕೃತಿಕ ಬೇರುಗಳನ್ನು ಹೊಂದಿವೆ. ಅವಮಾನಕ್ಕೆ ಗುರಿಯಾದ ಯುವಕರು ಅವರಿಗೆ ಸಿಗುತ್ತಾರೆ. ಈ ಯುವಕರಲ್ಲಿ ಹಲವರು ಉದ್ಯೋಗ ಕಂಡವರಲ್ಲ, ಅಧಿಕಾರ ನೋಡಿದವರಲ್ಲ, ಪ್ರೇಮ ಸಂಬಂಧವನ್ನು ಅನುಭವಿಸಿದವರಲ್ಲ. ಹಿಂಸೆಯ ಕೆಲಸಕ್ಕೆ ಇವರನ್ನು ಒಗ್ಗೂಡಿಸುವುದು ಸುಲಭ’.
ಇಸ್ರೇಲ್ ನಡೆಸಿರುವ ದಾಳಿಗೆ ಪ್ರತಿದಾಳಿ ಇದ್ದೇ ಇದೆ. ಈ ವಾಸ್ತವವನ್ನು ಉಪೇಕ್ಷಿಸುವುದು ಮೂರ್ಖತನದ ಕೆಲಸ. ಇಸ್ರೇಲಿನ ಲೇಖಕ ಎತ್ಗರ್ ಕೆರೆಟ್ ಅವರು ಹೇಳಿದ್ದು ಹೀಗೆ: ‘ನಾವು ಇರಾನ್ ಮತ್ತು ಅಮೆರಿಕದ ನಡುವಿನ ಛಾಯಾಸಮರದಲ್ಲಿ ಸಿಲುಕಿದ್ದೇವೆ. ನಮಗೆ ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್‌ನಲ್ಲಿ ಅರ್ಧ ಡಜನ್‌ನಷ್ಟು ಮಹಾತ್ಮ ಗಾಂಧೀಜಿ ಬೇಕಿದೆ’.
ಗಾಂಧೀಜಿ, ನೀವು ಈ ಹೊತ್ತಿನಲ್ಲಿ ಬದುಕಿಲ್ಲದಿರಬಹುದು. ಆದರೆ, ಜಗತ್ತಿಗೆ ನಿಮ್ಮ ಅಗತ್ಯ ಇದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.