ಬಿಹಾರದಲ್ಲಿ ಜೆಡಿಯು ಅಲೆಯು ಸೃಷ್ಟಿಸಿರುವ ಪರಿಸ್ಥಿತಿಯನ್ನು ಬಿಜೆಪಿಯ ನೌಕೆಯು ಹೇಗೆ ದಾಟಿ ಬರಲಿದೆ ಎಂಬುದು ಕುತೂಹಲಕರ. ಬಿಜೆಪಿಯ ರಾಷ್ಟ್ರೀಯ ಪ್ರಮುಖರ ಸಮಿತಿಯು ಪಕ್ಷವು ಬಿಹಾರದಲ್ಲಿ 40 ಲೋಕಸಭಾ ಸ್ಥಾನಗಳ ಪೈಕಿ 35ರಲ್ಲಿ ಗೆಲ್ಲಲಿದೆ ಎಂದು ಹೇಳಿದೆಯಾದರೂ ಬಿಹಾರದಲ್ಲಿ ಬಿಜೆಪಿ ಪಾಲಿಗೆ ಏನು ಕಾದಿದೆ ಎಂಬುದನ್ನು ಹೇಳುವುದು ಕಷ್ಟ. ಬಿಜೆಪಿಯ ನೌಕೆಯನ್ನು ಈ ಬಾರಿ ನರೇಂದ್ರ ಮೋದಿ ಅವರೊಬ್ಬರೇ ಮುನ್ನಡೆಸಬೇಕಿದೆ; ಅವರಿಗೆ ಜೊತೆಗಾರರಾಗಿ ನಿತೀಶ್ ಕುಮಾರ್ ಇರುವುದಿಲ್ಲ.
2014ರಲ್ಲಿ ಮೋದಿ ಅವರು ಬಿಹಾರದಲ್ಲಿ ಕಡೆಯ ಬಾರಿ ಏಕಾಂಗಿಯಾಗಿದ್ದರು. ಆಗ ಅವರು ಪಕ್ಷಕ್ಕೆ 22 ಸ್ಥಾನ ಗೆದ್ದುಕೊಟ್ಟರು. ಮತ್ತೆ ಏಕಾಂಗಿಯಾಗಿ ಪಕ್ಷವನ್ನು ಮುನ್ನಡೆಸಿ 35 ಸ್ಥಾನಗಳನ್ನು ಮೋದಿ ಅವರು ಪಕ್ಷಕ್ಕೆ ಗೆದ್ದುಕೊಡುತ್ತಾರೆ ಎಂದು ನಿರೀಕ್ಷಿಸುವುದು ಕಷ್ಟ ವಾಗುತ್ತದೆ. 2014ರಲ್ಲಿ ಗೆದ್ದ 22 ಸ್ಥಾನಗಳು ಮೋದಿ ಅವರೊಬ್ಬರಿಂದಲೇ ದಕ್ಕಿದ್ದು ಎನ್ನಲಾಗದು. ಆಗ ಮೋದಿ ಅವರ ಜೊತೆ ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಮತ್ತು ರಾಷ್ಟ್ರೀಯ ಲೋಕಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ಉಪೇಂದ್ರ ಕುಶ್ವಾಹ ಅವರು ಇದ್ದರು. ದಲಿತ ಹಾಗೂ ಕುಶ್ವಾಹ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಅವರ ನೆರವು ಇಲ್ಲದಿಲ್ಲ.
ಈಗ ಕುಶ್ವಾಹ ಅವರು ನಿತೀಶ್ ಜೊತೆ ಇದ್ದಾರೆ. ಅವರ ಪಕ್ಷವು ಜೆಡಿಯು ಜೊತೆ ವಿಲೀನಗೊಂಡಿದೆ. ರಾಮ್ ವಿಲಾಸ್ ಪಾಸ್ವಾನ್ ಸಾವಿನ ನಂತರ ಅವರ ಪಕ್ಷವು ಹೋಳಾಗಿದೆ. ಒಂದು ಗುಂಪನ್ನು ಅವರ ಸಹೋದರ ಪಶುಪತಿ ಪರಾಸ್, ಇನ್ನೊಂದು ಗುಂಪನ್ನು ಮಗ ಚಿರಾಗ್ ಪಾಸ್ವಾನ್ ಮುನ್ನಡೆಸುತ್ತಿದ್ದಾರೆ. 2024ರಲ್ಲಿ ಬಿಜೆಪಿಯು ಈ ಎರಡು ಗುಂಪುಗಳ ಪೈಕಿ ಯಾವುದರ ಜೊತೆ ಕೈಜೋಡಿಸಿದರೂ ಇನ್ನೊಂದು ಗುಂಪು ಬಿಜೆಪಿಯ ವಿರುದ್ಧ ಕೆಲಸ ಮಾಡಲಿದೆ. ಆಗ ರಾಮ್ ವಿಲಾಸ್ ಪಾಸ್ವಾನ್ ಕಟ್ಟಿದ ದಲಿತ ಮತಬ್ಯಾಂಕ್ ಒಡೆಯುತ್ತದೆ. ಕುಶ್ವಾಹ ಮತಗಳು ಇಲ್ಲದಿದ್ದರೆ, ದಲಿತರ ಮತಗಳು ಕಡಿಮೆ ಬಂದರೆ ಮೋದಿ ಅವರು 2024ರಲ್ಲಿ ಪಕ್ಷಕ್ಕೆ 35 ಸ್ಥಾನಗಳನ್ನು ಗೆದ್ದುಕೊಡುವುದು ಹೇಗೆ? ಬಿಜೆಪಿ ವಿರೋಧಿಗಳು ಬಲಿಷ್ಠ ಮೈತ್ರಿಕೂಟ ರಚಿಸಿಕೊಳ್ಳಬಹುದು. ಅವರ ಒಟ್ಟು ಮತಗಳಿಕೆ ಪ್ರಮಾಣವು ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣಕ್ಕಿಂತ ಜಾಸ್ತಿ ಆಗಬಹುದು.
ಈಗ ಮಹಾಘಟಬಂಧನದಲ್ಲಿ ಇರುವ ಪಕ್ಷಗಳ (ಜೆಡಿಯು, ಆರ್‌ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ಸಿಪಿಐಎಂಎಲ್, ಹಿಂದುಸ್ತಾನಿ ಅವಾಮ್ ಮೋರ್ಚಾ–ಜಾತ್ಯತೀತ) ಒಟ್ಟು ಮತಗಳಿಕೆಯು 2014ರಲ್ಲಿ ಬಿಜೆಪಿಯ ಮತಗಳಿಕೆಗಿಂತ ಒಂದು ಲಕ್ಷಕ್ಕಿಂತ ಜಾಸ್ತಿ ಇದ್ದ ಸ್ಥಾನಗಳ ಸಂಖ್ಯೆ 17. ಐದು ಕ್ಷೇತ್ರಗಳಲ್ಲಿ ಅಂತರವು 60 ಸಾವಿರದಿಂದ 1 ಲಕ್ಷದ ನಡುವೆ ಇತ್ತು. ಆರು ಕ್ಷೇತ್ರ
ಗಳಲ್ಲಿ ಅಂತರವು 30 ಸಾವಿರದಿಂದ 60 ಸಾವಿರದ ನಡುವೆ ಇತ್ತು. 2014ರ ಫಲಿತಾಂಶವನ್ನು ಗಮನಿಸಿ ಹೇಳುವುದಾದರೆ, ಪೂರ್ವ ಬಿಹಾರ್‌ನಲ್ಲಿ ಬಿಜೆಪಿ ದುರ್ಬಲವಾಗಿದೆ. ಇಲ್ಲಿನ 12 ಲೋಕಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳು ಮಹಾ ಘಟಬಂಧನದ ಪಕ್ಷಗಳ ಒಟ್ಟು ಮತಗಳಿಗಿಂತ
1 ಲಕ್ಷದಷ್ಟು ಕಡಿಮೆ ಮತ ಪಡೆದಿವೆ, ಮುಂಗೇರ್ ಕ್ಷೇತ್ರದಲ್ಲಿ ಮಹಾ ಘಟಬಂಧನದ ಪಕ್ಷಗಳ ಒಟ್ಟು ಮತಗಳಿಗಿಂತ 74 ಸಾವಿರದಷ್ಟು ಮತಗಳನ್ನು ಕಡಿಮೆ ಪಡೆದಿವೆ. ಇವನ್ನು ಪರಿಗಣನೆಗೆ ತೆಗೆದುಕೊಂಡರೆ, ಪೂರ್ವ ಭಾಗದಲ್ಲಿ ಬಿಜೆಪಿಗೆ ಒಂದೂ ಸ್ಥಾನ ಇರುವುದಿಲ್ಲ.
ಉತ್ತರ ಬಿಹಾರದಲ್ಲಿ ಮಹಾಘಟಬಂಧನದ ಪಕ್ಷಗಳು ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಪಡೆದ ಮತಕ್ಕಿಂತ ಒಂದು ಲಕ್ಷಕ್ಕಿಂತ ಹೆಚ್ಚು ಮತಗಳನ್ನು ಪಡೆದಿವೆ. ಎರಡು ಕ್ಷೇತ್ರಗಳಲ್ಲಿ ಮತಗಳಿಕೆ ವ್ಯತ್ಯಾಸವು 60 ಸಾವಿರದಿಂದ 1 ಲಕ್ಷದ ನಡುವೆ ಇದೆ. ನಾಲ್ಕು ಕ್ಷೇತ್ರಗಳಲ್ಲಿ ವ್ಯತ್ಯಾಸವು 30 ಸಾವಿರದಿಂದ 60 ಸಾವಿರದ ನಡುವೆ ಇದೆ. ಉತ್ತರ ಬಿಹಾರದ 17 ಲೋಕಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರ ಗಳಲ್ಲಿ ಚಿತ್ರಣ ಹೀಗಿತ್ತು. ಇನ್ನುಳಿದ ಏಳು ಸ್ಥಾನಗಳಲ್ಲಿ ಬಿಜೆಪಿಯ ಮತಗಳಿಕೆಯು ಮಹಾಘಟಬಂಧನದ ಪಕ್ಷಗಳ ಒಟ್ಟು ಮತಗಳಿಗಿಂತ ಜಾಸ್ತಿ ಇತ್ತು. ಇಲ್ಲಿ, ಮೂರು ಕ್ಷೇತ್ರಗಳಲ್ಲಿ ಬಿಜೆಪಿಯ ಮತಗಳಿಕೆಯು ವಿರೋಧ ಪಕ್ಷಗಳ ಒಟ್ಟು ಮತಗಳಿಗಿಂತ 1 ಲಕ್ಷಕ್ಕೂ ಅಧಿಕವಾಗಿತ್ತು. ಇನ್ನೂ ಮೂರು ಕ್ಷೇತ್ರಗಳಲ್ಲಿ ಪಕ್ಷದ ಮತಗಳಿಕೆಯು ವಿರೋಧ ಪಕ್ಷಗಳ ಒಟ್ಟು ಮತಗಳಿಕೆಗಿಂತ 50 ಸಾವಿರಕ್ಕೂ ಅಧಿಕವಾಗಿತ್ತು. ಒಂದು ಸ್ಥಾನದಲ್ಲಿ ಬಿಜೆಪಿಯು ವಿರೋಧ ಪಕ್ಷಗಳ ಮತಗಳಿಗಿಂತ 23 ಸಾವಿರ ಹೆಚ್ಚು ಮತಗಳನ್ನು ಪಡೆದಿದೆ.
ದಕ್ಷಿಣ ಬಿಹಾರದಲ್ಲಿ ಬಿಜೆಪಿಯು 11 ಸ್ಥಾನಗಳ ಪೈಕಿ ಎಂಟರಲ್ಲಿ ವಿರೋಧ ಪಕ್ಷಗಳ ಒಟ್ಟು ಮತಗಳಿಗಿಂತ ಕಡಿಮೆ ಮತ ಪಡೆದಿದೆ. ಬಿಜೆಪಿ ಪಡೆದ ಮತಗಳು ಹಾಗೂ ವಿರೋಧ ಪಕ್ಷಗಳು ಪಡೆದಿರುವ ಒಟ್ಟು ಮತಗಳ ಅಂತರವು ಎರಡು ಸ್ಥಾನಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು, ಇನ್ನೂ ಎರಡು ಕ್ಷೇತ್ರಗಳಲ್ಲಿ ಇದು 60 ಸಾವಿರದಿಂದ 1 ಲಕ್ಷದ ನಡುವೆ ಇದೆ. ದಕ್ಷಿಣ ಬಿಹಾರದಲ್ಲಿ ಬಿಜೆಪಿ ಅಥವಾ ಅದರ ಮಿತ್ರಪಕ್ಷವು ವಿರೋಧ ಪಕ್ಷಗಳ ಒಟ್ಟು ಮತಗಳಿಗಿಂತ ಹೆಚ್ಚು ಪಡೆದಿರುವುದು ಮೂರು ಕ್ಷೇತ್ರ
ಗಳಲ್ಲಿ. ಈ ಪೈಕಿ ಒಂದು ಕ್ಷೇತ್ರದಲ್ಲಿ ಬಿಜೆಪಿಯು ತೀರಾ ಸಣ್ಣ ಅಂತರದಿಂದ ಗೆಲುವು ಕಂಡಿದೆ.
ಪೂರ್ವ ಬಿಹಾರದಲ್ಲಿ ಯಾವ ಕ್ಷೇತ್ರದಲ್ಲಿಯೂ ಮುನ್ನಡೆ ಇಲ್ಲದೆ, ಉತ್ತರ ಬಿಹಾರದಲ್ಲಿ ಏಳು ಸ್ಥಾನಗಳಲ್ಲಿ ಹಾಗೂ ದಕ್ಷಿಣ ಬಿಹಾರದಲ್ಲಿ ಮೂರು ಸ್ಥಾನಗಳಲ್ಲಿ ಮಾತ್ರ 2014ರಲ್ಲಿ ಮುನ್ನಡೆ ಕಂಡಿದ್ದ ಬಿಜೆಪಿಯು (ಒಟ್ಟು 10 ಸ್ಥಾನಗಳು) 2024ರಲ್ಲಿ 35 ಸ್ಥಾನಗಳನ್ನು ಗೆದ್ದುಕೊಳ್ಳುವ ಆಶಾಭಾವನೆ ಹೊಂದಿರಬೇಕೇ?
ಇನ್ನೂ ಮೂರು ಅಂಶಗಳನ್ನು ನಾವು ಇಲ್ಲಿ ಪರಿಗಣಿಸಿಲ್ಲ. ಮತದಾರರು ಎರಡು ಅವಧಿಗಳ ಕೊನೆಯಲ್ಲಿ ಮೋದಿ ಅವರ ಸಾಧನೆ ಏನಿತ್ತು ಎಂಬುದನ್ನು ಪರಿಶೀಲಿಸಲಿದ್ದಾರೆ. ಹಣದುಬ್ಬರ, ನಿರುದ್ಯೋಗ ಹಾಗೂ ಕಡಿಮೆ ಆದಾಯದಂತಹ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಎಲ್ಲವೂ ಪೂರಕವಾಗಿ ಕೆಲಸ ಮಾಡುವುದಿಲ್ಲ. ಮೋದಿ ಅವರಿಗೆ ಬೆಂಬಲ ಕಡಿಮೆ ಆಗಲೂಬಹುದು. ರಾಜ್ಯದಲ್ಲಿ ಬಡತನ ತೀವ್ರವಾಗಿದೆ. ಹಿಟ್ಟು, ಧಾನ್ಯ, ಅಡುಗೆ ಎಣ್ಣೆಯಂತಹ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಳದಿಂದ ಆಗಿರುವ ಸಂಕಷ್ಟಗಳ ಬಗ್ಗೆ ಜನ ಮಾತನಾಡುತ್ತಿದ್ದಾರೆ ಎಂಬ ವರದಿಗಳು ಇವೆ. ರೈಲ್ವೆ ನೇಮಕಾತಿ ಹಗರಣ ಹಾಗೂ ಅಗ್ನಿಪಥ ವಿರುದ್ಧ ಬಿಹಾರದಲ್ಲಿ ನಡೆದ ಯುವಕರ ಪ್ರತಿಭಟನೆಯು ಇತರ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳಿಗಿಂತ ಹೆಚ್ಚು ಹಿಂಸಾತ್ಮಕವಾಗಿತ್ತು.
ಪಕ್ಷಗಳನ್ನು ಆಪೋಶನ ತೆಗೆದುಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿರುವ ಕಾರಣ ಬಿಜೆಪಿಗೆ ಈಗ ಬಿಹಾರದಲ್ಲಿ ಮಿತ್ರರೇ ಇಲ್ಲ. ಬಿಜೆಪಿ ಅಭ್ಯರ್ಥಿಗಳಿಗೆ 2014ರಲ್ಲಿ ಸಿಕ್ಕ ಮತಕ್ಕಿಂತ 2019ರಲ್ಲಿ ಹೆಚ್ಚು ಮತಗಳನ್ನು ಗಳಿಸಿಕೊಳ್ಳಲು ನೆರವಾದ ಜೆಡಿಯು, ಈಗ ಬಿಜೆಪಿ ಜೊತೆಗಿನ ಗೆಳೆತನ ಕಡಿದುಕೊಂಡಿದೆ. ಮೂವರು ಶಾಸಕರನ್ನು ಬಿಜೆಪಿಯು ಆಪೋಶನ ತೆಗೆದುಕೊಂಡ ಕಾರಣಕ್ಕಾಗಿ ವಿಕಾಸಶೀಲ ಇನ್ಸಾನ್ ಪಕ್ಷವು ಬಿಜೆಪಿ ಜೊತೆಗಿನ ನಂಟು ಕಡಿದುಕೊಂಡಿದೆ.
ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳು ಬಿಜೆಪಿಯ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ವಿರೋಧ ಪಕ್ಷಗಳ ಒಕ್ಕೂಟಕ್ಕೆ ಬಲಿಷ್ಠ, ದೂರದೃಷ್ಟಿಯುಳ್ಳ ಹಾಗೂ ವಿಶ್ವಾಸಾರ್ಹ ನಾಯಕ ದೊರೆತರೆ, ಬೇರೆ ಯಾವ ಪರ್ಯಾಯವೂ ಇಲ್ಲದೆ ಮೋದಿ ಅವರಿಗೆ ಮತ ಚಲಾಯಿಸಿದ್ದ ಬಿಹಾರಿಗಳ ಮತವು ವಿಭಜನೆ ಆಗಬಹುದು. ನಿತೀಶ್ ಕುಮಾರ್ ಅವರು ಮೋದಿ ಅವರಿಗೆ ಗಂಭೀರ ಸವಾಲು ಒಡ್ಡುವಂತೆ ಬೆಳೆಯುವ ಸಾಧ್ಯತೆಗಳು ಇವೆ. ಆದರೆ, ಈ ಸಾಧ್ಯತೆಗಳಿಗೆ ವಿರುದ್ಧವಾಗಿರುವ ಅಂಶಗಳೂ ಹಲವು ಇವೆ. ನಿತೀಶ್ ಕುಮಾರ್ ಅವರು ಒಂದು ವೇಳೆ ಆ ರೀತಿ ಬೆಳೆಯದಿದ್ದರೂ, ವಿರೋಧ ಪಕ್ಷಗಳ ಒಕ್ಕೂಟದ ಪಾಲಿಗೆ ಅವರು ಪ್ರಮುಖ ನಾಯಕ ಆಗಿರಲಿದ್ದಾರೆ. ಆಗ ಅದು ಬಿಹಾರದ ಸಾಮಾನ್ಯ ಮತದಾರರಿಗೆ ವಿರೋಧ ಪಕ್ಷಗಳ ಕಡೆ ಮುಖ ಮಾಡಲು ಒಂದು ಆಕರ್ಷಣೆ ಆಗಲಿದೆ.
ಲೇಖಕ: ಪತ್ರಕರ್ತ, ‘ದಿ ಬ್ಯಾಟಲ್ ಫಾರ್ ಬಿಹಾರ್’ ಕೃತಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.