ADVERTISEMENT

ವಿಶ್ಲೇಷಣೆ: ಸ್ವತಂತ್ರ ಅಸ್ಮಿತೆಗೆ ಬೇಕು ಸಮಾನತೆ

ಸಿ.ಜಿ.ಮಂಜುಳಾ
Published 24 ಸೆಪ್ಟೆಂಬರ್ 2024, 22:22 IST
Last Updated 24 ಸೆಪ್ಟೆಂಬರ್ 2024, 22:22 IST
   

ಲಿಂಗತಾರತಮ್ಯ ಪ್ರದರ್ಶಿಸಿದ್ದಂತಹ ಪಶ್ಚಿಮ ಬಂಗಾಳ ಸರ್ಕಾರದ ಆರೋಗ್ಯ ಇಲಾಖೆಯ ಸುತ್ತೋಲೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಗತಿ ಇತ್ತೀಚೆಗೆ ವರದಿಯಾಯಿತು. ಕೋಲ್ಕತ್ತದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ 10 ದಿನಗಳ ಬಳಿಕ, ವೈದ್ಯೆಯರನ್ನು ರಾತ್ರಿ ಪಾಳಿಯ ಕರ್ತವ್ಯಕ್ಕೆ ನಿಯೋಜಿಸದಿರಲು ಹಾಗೂ ಅವರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಸೀಮಿತಗೊಳಿಸಲು ಸೂಚಿಸಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಆದರೆ, ‘ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಪುರುಷ ವೈದ್ಯರು 36 ಗಂಟೆಗಳ ಕಾಲ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಹಿಳೆಯರ ವಿರುದ್ಧ ಹೇಗೆ ತಾರತಮ್ಯ ಮಾಡುತ್ತೀರಿ?’ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಪ್ರಶ್ನಿಸಿತ್ತು.  

‘ಸುರಕ್ಷತೆಯೊಂದಿಗೆ ಮಹಿಳೆಗೆ ಬೇಕಿರುವುದು ಸಮಾನ ಅವಕಾಶಗಳು. ಮಹಿಳಾ ವೃತ್ತಿಪರರಿಗೆ ರಿಯಾಯಿತಿಗಳು ಬೇಡ. 12 ಗಂಟೆಗಳ ಪಾಳಿ ಇದ್ದಲ್ಲಿ, ಅವರು ಯಾವುದೇ ಜೆಂಡರ್‌ಗೆ ಸೇರಿದ್ದರೂ ಅದು ಎಲ್ಲರಿಗೂ ಅನ್ವಯವಾಗಲಿ’ ಎಂಬಂಥ ಸುಪ್ರೀಂ ಕೋರ್ಟ್ ನಿರ್ದೇಶನ ಮಹಿಳೆಯ ಕೆಲಸದ ಹಕ್ಕು ಹಾಗೂ ಆಕೆಯ ಘನತೆಯನ್ನು ಎತ್ತಿ ಹಿಡಿದಿದೆ. ‘ಮಹಿಳೆಯರು ಪೈಲಟ್‌ಗಳಾಗಿ, ಸಶಸ್ತ್ರ ಪಡೆಗಳ ಭಾಗವಾಗಿ ತಮ್ಮ ಕರ್ತವ್ಯವನ್ನು ರಾತ್ರಿ ವೇಳೆಯೂ ನಿರ್ವಹಿಸುತ್ತಿರುವಾಗ ಮಹಿಳಾ ವೈದ್ಯರ ಮೇಲೆ ಇಂತಹ ನಿರ್ಬಂಧವನ್ನು ಪ್ರಭುತ್ವ ಹೇಗೆ ತಾನೇ ಹೇರಬಹುದು?’ ಎಂಬಂಥ ಸಿಜೆಐ ನೇತೃತ್ವದ ಪೀಠದ ಪ್ರಶ್ನೆ ಸಮಂಜಸವಾದುದು.

ಹೆಣ್ಣನ್ನು ಸಮಾನ ಸಹಜೀವಿಯಾಗಿ ಕಾಣದಂತಹ ಸಂಸ್ಕೃತಿ, ಪರಿಭಾಷೆಗಳೇ ಹೆಣ್ಣಿನ ಮೇಲಿನ ಅಪರಾಧಗಳಿಗೆ ಮೂಲ ಕಾರಣ ಎಂಬುದನ್ನು ಮೊದಲು ಗ್ರಹಿಸಬೇಕಿದೆ. ‘ರಾತ್ರಿ ವೇಳೆ ಆಕೆ ಯಾಕೆ ಹೊರಗಿದ್ದಳು? ಅಂತಹ ಬಟ್ಟೆ ಯಾಕೆ ತೊಟ್ಟಿದ್ದಳು?’ ಎಂದೆಲ್ಲಾ ಸಂತ್ರಸ್ತೆಯನ್ನೇ ಪ್ರಶ್ನಿಸಿ ದೂರುವಂತಹ ನಮ್ಮ ಸಮಾಜದಲ್ಲಿ, ಪುರುಷನೊಬ್ಬ ಅತ್ಯಾಚಾರಿಯಾಗುವುದಕ್ಕೂ ತಾಯಿಯೇ ಕಾರಣ ಎಂಬುದನ್ನು ಸೂಚ್ಯವಾಗಿ ಹೇಳುವಂತಹ ವಾಟ್ಸ್‌ಆ್ಯಪ್ ಸಂದೇಶವೊಂದನ್ನು ಕೋಲ್ಕತ್ತ ಅತ್ಯಾಚಾರ ಪ್ರಕರಣದ ನಂತರ ಹರಿಯಬಿಡಲಾಗಿತ್ತು. ‘ಆತ್ಮೀಯ ಪುರುಷರೇ’ ಎಂಬ ಸಂಬೋಧನೆ ಇದ್ದ ಈ ವಾಟ್ಸ್‌ಆ್ಯಪ್ ಸಂದೇಶದಲ್ಲಿ, ‘ಮಹಿಳೆಯೊಬ್ಬಳು ನಿಮ್ಮ ಜೊತೆ ಇದ್ದಾಗ ಸುರಕ್ಷಿತ ಭಾವನೆ ಹೊಂದಿದ್ದಲ್ಲಿ ಅಭಿನಂದನೆ. ನಿಮ್ಮ ಅಮ್ಮ, ಸಭ್ಯ ಪುರುಷನೊಬ್ಬನನ್ನು ಬೆಳೆಸಿದ್ದಾಳೆ’ ಎಂದು ಅತ್ಯಾಚಾರಿ ಸಂತಾನದ ಹುಟ್ಟಿನ ಹೊಣೆಗಾರಿಕೆಯನ್ನೂ ತಾಯಂದಿರಿಗೇ ವಹಿಸಲಾಗಿತ್ತು.

ADVERTISEMENT

ಇಂತಹ ಸಂದೇಶಗಳು ಗಂಡಿನ ಅನಿಯಂತ್ರಿತ ಅಹಮಿಕೆ, ಅಟ್ಟಹಾಸವನ್ನು ಪೋಷಿಸುವ ಮನಃಸ್ಥಿತಿಯನ್ನು ಹೊಂದಿರುತ್ತವೆ ಎಂಬುದನ್ನು ಸಮಾಜ ಅರಿತುಕೊಳ್ಳುವುದು ಯಾವಾಗ? ತಾಯ್ತನವನ್ನು ವೈಭವೀಕರಿಸಿ ಅಟ್ಟದ ಮೇಲಿರಿಸುತ್ತಲೇ ಹೆಣ್ಣಿನ ಸ್ವಂತಿಕೆ, ಸ್ವತಂತ್ರ ಅಸ್ಮಿತೆಗಾಗಿ ಆಕೆಯ ಹುಡುಕಾಟ ಹಾಗೂ ಪ್ರತಿಪಾದನೆಗಳಿಗೆ ತಡೆಯೊಡ್ಡುತ್ತಾ ಗಂಡಾಳಿಕೆಯ ಸಮಾಜವನ್ನು ನಿರಂತರಗೊಳಿಸುವ ಹುನ್ನಾರಗಳು ಇವು. ಅಪಾರ ಪ್ರಗತಿ ಸಾಧಿಸಿದ ಈ 21ನೇ ಶತಮಾನದ ತಂತ್ರಜ್ಞಾನದ ಯುಗದಲ್ಲೂ ಇಂತಹ ಮನಃಸ್ಥಿತಿ ಬದಲಾಗಲೇ ಇಲ್ಲ.

ಹೀಗಾಗಿಯೇ ಮಹಿಳಾ ಮುಖ್ಯಮಂತ್ರಿಯನ್ನು ಹೊಂದಿರುವ ಪಶ್ಚಿಮ ಬಂಗಾಳದಂತಹ ಸರ್ಕಾರವೂ ಲಿಂಗ ಅಸಮಾನತೆಯನ್ನು ಪ್ರಚುರಗೊಳಿಸುತ್ತಾ ಮಹಿಳೆಗೆ ಅನುಗ್ರಹಪೂರ್ವಕವೆನಿಸುವ ಸುತ್ತೋಲೆಯನ್ನು ಹೊರಡಿಸುತ್ತದೆ. ಆದರೆ, ಮಹಿಳೆಗೆ ಬೇಕಿರುವುದು ಸುರಕ್ಷತೆ. ಅಂದರೆ ಇದು ಮನುಧರ್ಮ ಶಾಸ್ತ್ರ ಹೇಳುವಂತಹ ರಕ್ಷಣೆಯಲ್ಲ. ಗಂಡಾಳಿಕೆಯ ಮನೋಧರ್ಮದಿಂದ ಕಾಪಾಡುವಂತಹ ಸುರಕ್ಷತೆ ಹಾಗೂ ಸಮಾನತೆ.

ಗಂಡಾಳಿಕೆಯ ಸೊಕ್ಕು, ಹೆಣ್ಣಿನ ಅಸ್ಮಿತೆಯನ್ನು ತುಳಿಯುತ್ತಲೇ ಬಂದಿರುವಂತಹ ಕಥಾನಕಗಳು ಮೌನದ ಪದರಗಳಲ್ಲಿ ಹೂತುಹೋಗಿವೆ. ಹೆಣ್ಣಿನ ಅಸ್ಮಿತೆಯನ್ನು ಹೊಸಕಿಹಾಕಿ ಅಧೀನ ನೆಲೆಗೆ ಹೆಣ್ಣನ್ನು ದೂಡುವಂತಹ ಕಥಾನಕಗಳು ಎಷ್ಟೋ ವರ್ಷಗಳ ನಂತರ ಮೌನದ ಚಿಪ್ಪಿನಿಂದ ಮಾತುಗಳಾಗಿ ಹೊರಹೊಮ್ಮಲು, ಮಲಯಾಳಂ ಸಿನಿಮಾರಂಗದಲ್ಲಿ ಹೆಣ್ಣಿನ ಶೋಷಣೆ ಕುರಿತ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ನೆರವಾಗಿದೆ. ರಾಷ್ಟ್ರದ ಮನರಂಜನಾ ಉದ್ಯಮದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟುಮಾಡಿರುವ ಈ ವರದಿಯು ಬಹಿರಂಗಪಡಿಸಿರುವುದು ಸಹ ಹೆಣ್ಣನ್ನು ವೃತ್ತಿಪರ ವ್ಯಕ್ತಿಗಳನ್ನಾಗಿ ಕಾಣದ ಗಂಡಾಳಿಕೆಯ ಮನಃಸ್ಥಿತಿಯನ್ನೇ.

ಇಂತಹ ಗಂಡಾಳಿಕೆಯ ಮನಃಸ್ಥಿತಿಯು ತಮಾಷೆ, ವ್ಯಂಗ್ಯ, ಲಘು ಮಾತು, ಮೆಚ್ಚುಗೆ, ಮೂದಲಿಕೆ, ನಿಂದನೆಯಲ್ಲಿ ದಿನನಿತ್ಯ ಗೋಚರವಾಗುತ್ತಲೇ ಇರುತ್ತದೆ. ಇದಕ್ಕೀಗ ಮತ್ತೊಂದು ತಾಜಾ ಉದಾಹರಣೆ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರು ಮಹಿಳಾ ವಕೀಲರನ್ನು ಉದ್ದೇಶಿಸಿ ಹೇಳಿದ ಮಾತು. ಈ ವಿಚಾರವು ಸುಪ್ರೀಂ ಕೋರ್ಟ್ ಗಮನಕ್ಕೆ ಬಂದ ನಂತರ ಈಗ ಆ ನ್ಯಾಯಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಅನಿಷ್ಟ ಸಂಪ್ರದಾಯಗಳಾಚೆಗೆ, ಸಂವಿಧಾನಬದ್ಧವಾದ ಸಮಾನತೆಯ ತತ್ವವನ್ನು ದಿನನಿತ್ಯದ ಅನುಭವವನ್ನಾಗಿಸಲು ನಮ್ಮ ನ್ಯಾಯಾಂಗ ವಹಿಸಬೇಕಾಗಿರುವ ಪಾತ್ರ ದೊಡ್ಡದು. ಹೀಗಾಗಿಯೇ, ಸಾಂವಿಧಾನಿಕ ಮೌಲ್ಯಗಳು, ಆಶಯಗಳಿಗೆ ತದ್ವಿರುದ್ಧವಾದಂತಹ, ಚಾಲ್ತಿಯಲ್ಲಿರುವ ಲಿಂಗತಾರತಮ್ಯದ ಅಥವಾ ಲಿಂಗತ್ವ ಪೂರ್ವಗ್ರಹದ ನುಡಿಗಟ್ಟುಗಳ ಬಳಕೆಯ ವಿರುದ್ಧ ನ್ಯಾಯಾಧೀಶರು ಹಾಗೂ ಕಾನೂನು ವೃತ್ತಿಪರರಿಗೆ ಅರಿವು ಮೂಡಿಸುವಂತಹ 30 ಪುಟಗಳ ಕೈಪಿಡಿಯನ್ನೂ ಹೋದ ವರ್ಷ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು.

ಕೋರ್ಟ್ ಕಲಾಪಗಳ ಮಧ್ಯದ ‘ಕಥೆ- ಉಪಕಥೆ’ಗಳಲ್ಲಷ್ಟೇ ಇಂತಹ ಲಘು ಧಾಟಿಯ ಲಿಂಗತ್ವ ಅಸೂಕ್ಷ್ಮತೆಯ ಮಾತುಗಳಿರುವುದಿಲ್ಲ. ದ್ವಂದ್ವಾರ್ಥದ ಮಾತುಗಳನ್ನಂತೂ ನಮ್ಮ ಮನರಂಜನೆ ಉದ್ಯಮವು ಜನಪ್ರಿಯ ಸಂಸ್ಕೃತಿಯ ಭಾಗವಾಗಿಸಿಬಿಟ್ಟಿದೆ. ಹೀಗೆ, ಸಂವಿಧಾನಬದ್ಧವಾಗಿ ಹೆಣ್ಣಿಗೆ ನೀಡಲಾಗಿರುವ ಸ್ವಾತಂತ್ರ್ಯ ಹಾಗೂ ಘನತೆಯ ಬದುಕಿನ ಹಕ್ಕು ಎಂಬುದು ಮನೆ ಹಾಗೂ ಸಾರ್ವಜನಿಕ ವಲಯಗಳಲ್ಲಿ ಉಲ್ಲಂಘನೆಯಾಗುತ್ತಲೇ ಸಾಗುತ್ತಿರುವುದಕ್ಕೆ ತಡೆ ಹೇಗೆ ಎಂಬುದು ಪ್ರಶ್ನೆ.

‘ನೀನು ಹೆಣ್ಣು, ಅವನು ಗಂಡು... ಏನು ಬೇಕಾದರೂ ಮಾಡಬಹುದು’ ಎಂಬಂಥ ಭಾಷೆ ಮೊದಲು ಬದಲಾಗಬೇಕಿದೆ. ‘ಹೆಣ್ಣು ಎಂದರೆ ಹೀಗಿರಬೇಕು…’ ಎಂದು ನಮ್ಮ ಜನಪ್ರಿಯ ಸಿನಿಮಾಗಳು ಅಥವಾ ಈಗಿನ ಜನಪ್ರಿಯ ಡಿಜಿಟಲ್ ಪ್ರಪಂಚ ಕಟ್ಟಿಕೊಡುತ್ತಿರುವಂತಹ ಚಿತ್ರಣವನ್ನು ಮುರಿದು, ಗಂಡು- ಹೆಣ್ಣು ಸಮಾನ ಸಹಜೀವಿಗಳಾಗಿರುವಂತಹ ಮಾನವೀಯ ಮೌಲ್ಯಗಳ ಕಟ್ಟುವಿಕೆ ಇಂದಿನ ಆದರ್ಶವಾಗಬೇಕಿದೆ ಎಂಬ ಮಾತು ಸವಕಲಾಗಿ ಬಿಡುತ್ತಿದೆಯೇ?

ಅತ್ಯಾಚಾರಿ ಎಲ್ಲೆಡೆ ಇದ್ದಾನೆ. ಹೊತ್ತು-ಗೊತ್ತಿಲ್ಲ. ಮನೆ, ಶಾಲೆ, ಕಚೇರಿ, ಸಾರ್ವಜನಿಕ ಸ್ಥಳ- ಅತ್ಯಾಚಾರಗಳ ನೆಲೆಗಳಾಗುತ್ತಿವೆ. ಅಪ್ಪ, ಸಹೋದರ, ಗೆಳೆಯ, ಗಂಡ, ಸಹೋದ್ಯೋಗಿ, ಬೀದಿಯಲ್ಲಿನ ಅಪರಿಚಿತರು, ಧರ್ಮಗುರುಗಳು, ರಾಜಕಾರಣಿಗಳು, ಕಡೆಗೆ ಕಾಯಬೇಕಾದ ಪೊಲೀಸರೂ ಅತ್ಯಾಚಾರಿಗಳಾಗಿ ಪರಿಣಮಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇನ್ನು, ಸ್ವತಃ ಕಾನೂನು ರೂಪಿಸುವವರಾಗಿ ಸಂವಿಧಾನದತ್ತ ಹಕ್ಕುಗಳನ್ನು ರಕ್ಷಿಸಬೇಕಾದ ಶಾಸಕರೂ ಹೆಣ್ಣುಮಕ್ಕಳನ್ನು ಕಾಮದ ಆಟಿಕೆಗಳಾಗಿ ಬಳಸಿರುವಂತಹ ಹೀನ ವಿಕೃತಿಗಳ ಆರೋಪಗಳಂತೂ ಅಕ್ಷಮ್ಯ.

ಸ್ವತಂತ್ರ ಚಿಂತನೆ, ನಡವಳಿಕೆ, ಧೋರಣೆಗಳಿರುವ ಹೆಣ್ಣುಮಕ್ಕಳನ್ನು ಅವಮಾನಿಸಿ, ಅವಗಣನೆಗೆ ಒಳಪಡಿಸಿ ಆಕೆಯನ್ನು ಒಂಟಿಯಾಗಿಸುವ ಮೌಲ್ಯಗಳೂ ಗಂಡಾಳಿಕೆಯ ವಿಜೃಂಭಣೆಯೇ. ಈ ಮೌಲ್ಯಗಳನ್ನೇ ಮಹಿಳೆಯರೂ ತಮ್ಮದಾಗಿಸಿಕೊಂಡಿರುವುದು ಸ್ವತಃ ಅನೇಕ ಮಹಿಳೆಯರ ಅರಿವಿಗೂ ನಿಲುಕಿರುವುದಿಲ್ಲ. 2018ರಲ್ಲಿ ಭಾರತದಲ್ಲಿ ಅಲೆಯೆಬ್ಬಿಸಿದ #ಮೀಟೂ ಆಂದೋಲನದಲ್ಲಿ ಅನುಭವಗಳನ್ನು ಹಂಚಿಕೊಂಡ ಮಹಿಳೆಯರು ತಂತಮ್ಮ ವೃತ್ತಿಗಳಲ್ಲಿ ಅವಕಾಶಗಳನ್ನೇ ಕಳೆದುಕೊಳ್ಳಬೇಕಾದದ್ದು ಇಂತಹ ಗಂಡಾಳಿಕೆಯ ಮನಃಸ್ಥಿತಿಯಿಂದಾಗಿಯೇ. ಈ ಬಗೆಯ ಸಾಮಾಜಿಕ ಧೋರಣೆಗಳು ಪಲ್ಲಟವಾಗಿ  ಸ್ತ್ರೀಪರವಾದ ಸ್ವತಂತ್ರ ತಾತ್ವಿಕತೆಯನ್ನು ಸಾರ್ವಜನಿಕ ಮೌಲ್ಯವಾಗಿಸಬೇಕಾದುದು ಇಂದಿನ ತುರ್ತು. ಇಲ್ಲದಿದ್ದಲ್ಲಿ ಕುಸ್ತಿಪಟುಗಳ ಕಣ್ಣೀರು, ಚಿತ್ರರಂಗದ ತಾರೆಯರ ಅಸಹಾಯಕತೆಯಂತಹ ಕಥಾನಕಗಳು ಮುಂದುವರಿಯುತ್ತವೆ. ‘ನಿರ್ಭಯಾ’ - ‘ಅಭಯಾ’, ‘ಖೈರ್ಲಾಂಜಿ’- ‘ಹಾಥರಸ್’ , ‘ಶ್ರದ್ಧಾ’ - ‘ಮಹಾಲಕ್ಷ್ಮಿ’ಯಂತಹ  ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.