‘ನಮ್ಮಿಂದ ಯಾರ್‍ಗೂ ತೊಂದ್ರೆಯಾಗಬಾರ‍್ದು’ ಎಂದು ಮಾತುಮಾತಿಗೆ ಹಾರೈಸುವ ಸಮಾಜ ನಮ್ಮದು. ಆದರೆ ಮನುಷ್ಯಮಾತ್ರರು ಈ ಪರಿ ಕೇಡಿಗರಾಗಲು ಹೇಗೆ ಸಾಧ್ಯ ಎಂದು ದಿಗ್ಭ್ರಮೆಗೊಳ್ಳುವಂತೆ ಸಾಲುಸಾಲು ದುರ್ಘಟನೆಗಳು ಸಂಭವಿಸುತ್ತಿವೆ. ಕೆಲವು ಅಮಲುಕಾರಕ ವಸ್ತುಗಳ ನಶೆಯು ಹಿಂಸಾಪ್ರವೃತ್ತಿ ಮೇಲುಗೈ ಸಾಧಿಸುವಂತೆ ಮಾಡುತ್ತಿದೆ ಎಂಬ ಅಭಿಪ್ರಾಯ ಇದೆಯಾದರೂ ದುರ್ಗುಣಗಳ ಹೊರಗೆಳೆಯಲು ಅಮಲುಕಾರಕ ವಸ್ತುಗಳೇ ಬೇಕೆಂದಿಲ್ಲ.
ಅಧಿಕಾರ ಎನ್ನುವುದೊಂದು ನಶೆ. ಗಂಡಸುತನ ಎನ್ನುವುದೊಂದು ನಶೆ. ಯೌವನ, ಜಾತಿ, ಮತ, ಪಕ್ಷ, ದೇಶ, ಭಾಷೆಗಳ ಅಂಧಾಭಿಮಾನವೊಂದು ನಶೆ. ಮುತ್ತೈದೆತನ, ತಾಯ್ತನ, ಸಾವಿನಂತಹ ಸಹಜ ಪ್ರಕ್ರಿಯೆಗಳು ಮೆರೆದಾಟವಾದರೆ ಅವೂ ನಶೆಗಳೇ. ಇಂಥ ಒಂದಲ್ಲ ಒಂದು ನಶೆಯೆಂಬ ಎ.ಸಿ. ಕೋಣೆಯಲ್ಲಿ ಕಿಟಕಿ ಬಾಗಿಲುಗಳ ಮುಚ್ಚಿ ಕೂತರೆ, ಹೊರಗಣವು ಉರಿದರೂ ಮುಳುಗಿದರೂ ನಾವು ಹಾಯಾಗಿ ತಂಪಾಗಿರಬಹುದು ಎಂಬ ಭ್ರಮೆಯ ಆಮಿಷವನ್ನು ಕಾಲ ಒಡ್ಡುತ್ತಿದೆ.
ಮನುಷ್ಯರು ಸಮಾಜಕಂಟಕರಾಗದಂತೆ ತಮ್ಮನ್ನು ಕಟೆದುಕೊಳ್ಳುವುದು ಹೇಗೆ? ವಿಯೆಟ್ನಾಮಿನ ಬೌದ್ಧ ಭಿಕ್ಕು ತಿಚ್ ನ್ಹಾತ್ ಹನ್ ಹೇಳುವಂತೆ, ಅದಕ್ಕಿರುವುದು ಒಂದೇ ಸರಳ ಮಾರ್ಗ: ಆಳವಾಗಿ ಯೋಚಿಸುವುದು. ಅಂದರೆ, ನಮ್ಮ ಬಗೆಗೆ ನಾವೇ ಯೋಚಿಸುತ್ತ, ನಮ್ಮ ಕ್ರಿಯೆಗಳಿಗೆ ಸಮಜಾಯಿಷಿ ಕೊಟ್ಟುಕೊಳ್ಳುತ್ತ ಇರುವುದಲ್ಲ. ಬದಲಾಗಿ, ಯಾವುದೇ ಕ್ರಿಯೆಯಲ್ಲಿ ತೊಡಗುವ ಮುನ್ನ ನಮ್ಮನ್ನು, ಸುತ್ತಮುತ್ತಲವರನ್ನು, ವ್ಯವಸ್ಥೆಯನ್ನು, ಕಾರಣ-ಪರಿಣಾಮಗಳನ್ನು ಎಲ್ಲ ದಿಕ್ಕಿನಿಂದ ಪರಿಶೀಲಿಸುವುದು.
ಎರಡು ಪ್ರಕರಣಗಳ ಬಗೆಗೆ ಹೀಗೇ ಯೋಚಿಸಿ:
1. ಒಂದುವೇಳೆ, ನೂರಾರು ಹೆಣ್ಣುಗಳ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ಸಾವಿರಾರು ವಿಡಿಯೊಗಳಾಗಿ ಚಿತ್ರೀಕರಿಸುವ ಮುನ್ನ, ಹಾಸನ ಪ್ರಕರಣದ ಆರೋಪಿ ಸ್ಥಾನದಲ್ಲಿ ಇರುವ ವ್ಯಕ್ತಿ ಆಳವಾಗಿ ಯೋಚಿಸಿದ್ದರೆ? ತಾನೇಕೆ ಹೀಗೆ ಮಾಡುತ್ತಿದ್ದೇನೆ, ತಾನು ಮಾಡುತ್ತಿರುವುದು ಸರಿಯೇ, ರಾಜಕಾರಣಿಗಳ ಕುಟುಂಬದಿಂದ ಬಂದಿರುವ ತಾನು ಈ ರೀತಿ ನಡೆದುಕೊಂಡರೆ ಭವಿಷ್ಯದ ಮೇಲೆ, ಕುಟುಂಬದ ಮೇಲೆ ಆಗುವ ಪರಿಣಾಮಗಳೇನು, ತನ್ನ ಪಕ್ಷಕ್ಕೊದಗುವ ಗತಿಯೇನು, ಭರವಸೆಯ ನಾಯಕನೆಂಬಂತೆ ತಾನಾಡಿದ ಮಾತುಗಳ ಗತಿಯೇನು, ತನಗೆ ಮತ ನೀಡಿದ ಲಕ್ಷಾಂತರ ಜನರಿಗೆ ಯಾವ ಸಂದೇಶ ಹೋದೀತು?
ಆತ ಕನಿಷ್ಠ ಇಷ್ಟಾದರೂ ಯೋಚಿಸಿದ್ದರೆ, ಇಂದು ಆತನಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಯಜ್ಞಯಾಗ, ಜ್ಯೋತಿಷಿಗಳ ಮಾತಿನ ಬದಲು ಎದೆಯ ದನಿಯನ್ನು ಕೇಳಿಸಿಕೊಂಡಿದ್ದರೆ, ಜನಪ್ರತಿನಿಧಿಯಾಗಿ ಮಾಡಲು ಸಾಧ್ಯವಿದ್ದ ನೂರಾರು ಕೆಲಸಗಳ ಮರೆತು, ಈಗ ಕೇಳಿಬಂದಿರುವ ಆರೋಪಗಳಿಗೆ ಪೂರಕವಾದ ಕೃತ್ಯಗಳಲ್ಲಿ ಮೈಮರೆಯುತ್ತಿರಲಿಲ್ಲ.
2. ಒಂದುವೇಳೆ, ಬೇರೆ ಧರ್ಮದ ಯುವತಿಯನ್ನು ಪ್ರೇಮಿಸಿ, ದೂರವಾದಳೆಂದು ಇರಿದು ಕೊಂದ ಹುಬ್ಬಳ್ಳಿಯ ಹುಡುಗ ಆಳವಾಗಿ ಯೋಚಿಸಿದ್ದರೆ? ತಾಯ್ತಂದೆ ಬೇರ್ಪಟ್ಟಿರುವ ಮುರಿದ ಕುಟುಂಬದಲ್ಲಿ ತನ್ನ ಜವಾಬ್ದಾರಿಯೇನು, ಶಿಕ್ಷಕಿಯಾಗಿರುವ ತಾಯಿ ತನ್ನ ಮೇಲಿಟ್ಟ ಕನಸುಗಳೇನು, ಪ್ರೀತಿಸಿದವಳೇಕೆ ಒಲ್ಲೆ
ನೆನ್ನುತ್ತಿದ್ದಾಳೆ, ತನ್ನವರ ಬಿಟ್ಟು ಬರಲೊಲ್ಲದವಳ ಜೊತೆ ಮುಂದಾದರೂ ಬದುಕು ಸಾಧ್ಯವೇ, ಪ್ರೇಮ ನಿರಾಕರಣೆ ತಂದೊಡ್ಡಿದ ಆಘಾತವು ಕೊಲೆ ಮಾಡುವುದರಿಂದ ಶಮನವಾಗುವುದೇ, ಕೊಲೆಯಂತಹ ಹೀನ
ಕೃತ್ಯವೆಸಗಿದರೆ ಕುಟುಂಬ, ಊರು, ಸಮಾಜ ತನ್ನನ್ನು, ತನ್ನ ಸಮುದಾಯವನ್ನು ಹೇಗೆ ಸ್ವೀಕರಿಸಬಹುದು?
ಆ ಹುಡುಗ ಕನಿಷ್ಠ ಇಷ್ಟಾದರೂ ಯೋಚಿಸಿದ್ದರೆ, ಪ್ರೀತಿ ಹುಟ್ಟುವುದು ಬದುಕಿಸಲೆಂದೇ ವಿನಾ
ಕೊಲ್ಲುವುದಕ್ಕಲ್ಲ ಎನ್ನುವುದು ತಿಳಿಯುತ್ತಿತ್ತು. ತನಗಾಗಿ ಅಳುವವರಿಲ್ಲದೆ ಶಿಕ್ಷೆಯನ್ನು ಎದುರು ನೋಡುತ್ತಾ ಜೈಲಿನಲ್ಲಿ ಕೊಳೆಯುವುದು ತಪ್ಪುತ್ತಿತ್ತು.
ಹೌದು, ಫಯಾಜ್ ಇರಲಿ, ಪ್ರಜ್ವಲ್ ರೇವಣ್ಣ ಇರಲಿ- ಆಳವಾಗಿ ಎಲ್ಲ ದಿಕ್ಕುಗಳಿಂದ ಯೋಚಿಸಿದ್ದರೆ ಇಂತಹ ಪ್ರಮಾದಗಳು ಸಂಭವಿಸುತ್ತಿರಲಿಲ್ಲ. ಇದನ್ನು ವ್ಯಕ್ತಿಗತವಾಗಿಯಷ್ಟೇ ಅಲ್ಲ, ಸಮೂಹಪ್ರಜ್ಞೆಗೂ ಅನ್ವಯಿಸಿ
ಕೊಳ್ಳಬಹುದು. ಒಂದುವೇಳೆ ಖೈರ್ಲಾಂಜಿಯೆಂಬ ಊರು ಆಳವಾಗಿ ಯೋಚಿಸಿದ್ದರೆ, ಭೋತಮಾಂಗೆ ಕುಟುಂಬ ಅನ್ಯಾಯವಾಗಿ, ಭೀಕರವಾಗಿ ಕೊಲೆಯಾಗುತ್ತಿರಲಿಲ್ಲ. ಇಂತಹ ಪ್ರಜ್ಞೆ ಇದ್ದಿದ್ದರೆ ನಿರ್ಭಯಾ, ಸೌಜನ್ಯಾಳಂತಹ ಅಸಂಖ್ಯ ಸೋದರಿಯರ ಹತ್ಯೆ ಆಗುತ್ತಿರಲಿಲ್ಲ. ಮಣಿಪುರದ ಸೋದರಿಯರು ಬೆತ್ತಲೆ ನಡೆದು ಗುಂಪು ಅತ್ಯಾಚಾರಕ್ಕೆ ಒಳಗಾಗುತ್ತಿರಲಿಲ್ಲ. ಆದರೆ ಒಂದು ತಪ್ಪು ಸಂಭವಿಸಿದ ನಂತರವಾದರೂ ವ್ಯಕ್ತಿಗಳು, ಸಮಾಜ ಎಚ್ಚೆತ್ತುಕೊಳ್ಳಬೇಕಲ್ಲವೇ? ದೇವರು, ಧರ್ಮ, ಗುರುಸಂತರು ನೈತಿಕಪ್ರಜ್ಞೆಯನ್ನು ಜಾಗೃತಗೊಳಿಸಬೇಕಲ್ಲವೇ? ಹಾಗೇಕೆ ಆಗುತ್ತಿಲ್ಲ? ಇದು ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಪ್ರೇಮರಾಹಿತ್ಯ, ಕೇಡಿಗತನ, ಉದಾತ್ತತೆ ಎಲ್ಲರೊಳಗೂ ಇರುತ್ತವೆ. ಅವುಗಳಲ್ಲಿ ಯಾವುದು ಮೇಲುಗೈ ಸಾಧಿಸುತ್ತದೆ ಎನ್ನುವುದು ಆಯಾ ವ್ಯಕ್ತಿತ್ವ, ಸಾಮಾಜಿಕ ಪರಿಸರ, ಕಾಲಮಾನವನ್ನು ಅವಲಂಬಿಸಿದೆ. ಈ ಕಾಲದ ಮೌಲ್ಯ, ಮಾದರಿಗಳಾದರೂ ಹೇಗಿವೆ? ತುಳಿದಾದರೂ ಸರಿ, ನೀನು ಮೇಲೇರು ಎಂಬ ದುಷ್ಟ ಹುಮ್ಮಸ್ಸು ತುಂಬುವ ‘ನಾ ಲೋಕ’, ಮಾಡಿದ್ದೆಲ್ಲವನ್ನೂ ‘ಜಯಿಸಿಕೊಳ್ಳುವೆ’ ಎಂಬ ಹಮ್ಮಿನ ನಾಯಕರು, ಕುಟುಂಬದಿಂದ ಹಿಡಿದು ಸಂಸತ್ತಿನವರೆಗೆ, ಸೆರೆಮನೆಯಿಂದ ಗುರುಮನೆಯವರೆಗೆ ‘ಹೇಳುವುದು ಒಂದು ಮಾಡುವುದು ಇನ್ನೊಂದು’ ಆಗಿರುವ ಹುಸಿತನ, ಉದಾತ್ತ ಕಾರ್ಯಗಳ ಬಗೆಗಿನ ಅಸಡ್ಡೆ, ತಿರಸ್ಕಾರ, ಯಾವುದು ಮೌಲ್ಯವೆಂದು ಬದುಕಿ ತೋರಿಸುವ ಪಾಲಕರು- ಗುರುಗಳು ಇಲ್ಲದ ಕಲಿಕೆಯ ವ್ಯವಸ್ಥೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮರಾಹಿತ್ಯ- ಇವು ಸಮಾಜದ ಇಂದಿನ ಪರಿಸ್ಥಿತಿಗೆ ಕಾರಣಗಳಾಗಿವೆ.
ಸಂಘಜೀವಿ ಮನುಷ್ಯರು ಒಂಟಿಜೀವಿಗಳಾಗಿರುವುದು, ಗುಂಪುಹಿತ ಕಾಯುವುದಕ್ಕಿಂತ ಸ್ವಹಿತವೇ ಮುಖ್ಯ
ವಾಗಿರುವುದು, ಪ್ರಕೃತಿಸಹಜ ಬದುಕಿನಿಂದ ಬಲುದೂರ ಬಂದಿರುವುದು ಮನುಷ್ಯಸಮಾಜವು ಕೇಡುಗಳ ಪ್ರವಾಹದಲ್ಲಿ ಸಿಲುಕಿಕೊಂಡಿರುವುದರ ಕಾರಣಗಳಾಗಿವೆ. ಹಿಂದೆಂದೂ ಇಲ್ಲದಂತೆ ಪ್ರಬಲ ಪ್ರಭೇದವೊಂದರ 750 ಕೋಟಿ ಜನರು ಭೂಮಿಯನ್ನು ತುಂಬಿದ್ದಾರೆ. ತಂತ್ರಜ್ಞಾನದಿಂದ ಅವರ ನಡುವಿನ ಗಡಿಗೆರೆ, ಅಂತರ ಕಡಿಮೆಯಾಗಿದೆ. ಆದರೂ ಭಾರಿ ಸಂಖ್ಯೆಯ ಜೀವಿಗಳು ಒಂದು ವ್ಯವಸ್ಥೆಯೊಳಗೆ ನಿಯಮಬದ್ಧವಾಗಿ ಬದುಕುವಂತೆ ಮಾಡಲು ಹಿಂಸೆ ಬಳಕೆಯಾಗಲೇಬೇಕಾಗುತ್ತದೆ. ಈ ವಿದ್ಯಮಾನವು ಮನುಷ್ಯರಲ್ಲಿ ಒಂದುತನದ ಭಾವ ಹುಟ್ಟಿಸುವ ಬದಲು ಜಂಗುಳಿಯಲ್ಲಿ ಕಳೆದುಹೋದ ಮಗುವಿನ ಭಯಗ್ರಸ್ತ ಸ್ಥಿತಿಯನ್ನು ಸೃಷ್ಟಿಸಿದೆ. ಅಭದ್ರ ಮನಃಸ್ಥಿತಿಯು ತಮ್ಮನ್ನು ಮರಿಗುಂಪುಗಳಾಗಿ, ಉಪಗುಂಪುಗಳಾಗಿ ಒಡೆದುಕೊಳ್ಳಲು, ಜನರ ನಡುವಿದ್ದೂ ಒಂಟಿಯಾಗಿ ಉಳಿಯಲು, ಪ್ರೇಮರಾಹಿತ್ಯದ ಬಾಯಾರಿಕೆಯಿಂದ, ಹಸಿವಿನಿಂದ ಮನುಷ್ಯಸಮಾಜ ಜರ್ಝರಿತವಾಗಲು ಕಾರಣವಾಗಿದೆ.
ಒಂದು ಆಪ್ತನಗೆ, ಸ್ಪರ್ಶ, ಸಂತೈಕೆಯ ಅರಸುತ್ತ ಬಡವ, ಸಿರಿವಂತರೆಲ್ಲ ಅಲೆಯುತ್ತಿದ್ದಾರೆ. ತಮ್ಮದೇ ಸುರಕ್ಷಿತ ಪ್ರೇಮವಲಯ ಕಟ್ಟಿಕೊಳ್ಳುವುದರಲ್ಲಿ ಹತಾಶರಾಗುತ್ತಿದ್ದಾರೆ. ಹುಟ್ಟುತ್ತಾ ವಿಶ್ವಮಾನವರಂತಿರುವ ಮಕ್ಕಳನ್ನು ಬೆಳೆಯುತ್ತಾ ಹೆಣ್ಣುಗಂಡೆಂಬ, ಜಾತಿಮತವೆಂಬ, ದೇಶಭಾಷೆಯವರೆಂಬ ಅಸ್ಮಿತೆಗಳೊಳಗೆ ಬಂಧಿಸಿ ಅಲ್ಪಮಾನವರನ್ನಾಗಿಸುತ್ತಿದ್ದೇವೆ.
ಇದನ್ನು ದಾಟುವುದು ಹೇಗೆ? ಲೋಕದೊಳ ಗೊಂದಾಗಿ ಸುರಕ್ಷಿತ ಭಾವ ಅನುಭವಿಸಲು ಮನುಷ್ಯರಿಗೆ ಆಧ್ಯಾತ್ಮಿಕ ಬದುಕು ಅಗತ್ಯ. ನಿಲ್ಲಿ, ಅಧ್ಯಾತ್ಮದ ಬದುಕೆಂದರೆ ಡಂಬಾಚರಣೆಯಲ್ಲ. ದಾರ, ಯಂತ್ರ, ಉಂಗುರ, ತಾಯಿತ ಧರಿಸಿ, ವ್ರತಾಚರಣೆಗಳಲ್ಲಿ ಮುಳುಗಿ ಆರಾಧನಾ ಸ್ಥಳಗಳನ್ನು ಸಂದರ್ಶಿಸುವುದಲ್ಲ. ಆಧ್ಯಾತ್ಮಿಕ ಬದುಕೆಂದರೆ ನ್ಯಾಯಾನ್ಯಾಯಗಳ ಗುರುತು ಹಚ್ಚಲು ಸಾಧ್ಯವಾಗುವಂತಹ ಒಳಪಯಣ. ಸ್ವ ಅವಲೋಕನ. ಸತ್ಯದ ಹಾದಿಯ ನಡಿಗೆ. ಬುದ್ಧ ಹೇಳುವಂತೆ, ಹೊರಗಣ ದುಃಖವನ್ನೂ ಒಳಗಣ ದುಃಖವನ್ನೂ ಅರಿತು ಪರಿಹಾರ ಮಾರ್ಗ ಅರಸುವ, ವಿಶ್ವಚೇತನರಾಗುವ ಚಲನೆ.
ಅದಕ್ಕಾಗಿ ಉದಾತ್ತ ಮಾದರಿಗಳನ್ನು ಕಣ್ಣೆದುರು ಇಟ್ಟುಕೊಳ್ಳುವುದು, ತಪ್ಪುಸರಿಗಳ ಬಗೆಗೆ ಆಳವಾಗಿ ಎಲ್ಲ ದಿಕ್ಕಿನಿಂದಲೂ ಯೋಚಿಸುವುದು, ನ್ಯಾಯಾನ್ಯಾಯಗಳ ಗುರುತಿಸುವ ವಿವೇಕವನ್ನು ನಮ್ಮಲ್ಲಿ ಬೆಳೆಸಿಕೊಂಡು ಮಕ್ಕಳಿಗೂ ಕಲಿಸುವುದು ಅಗತ್ಯವಾಗಿದೆ. ಆಗಮಾತ್ರ ನಿನ್ನೆ, ನಾಳೆಯ ನಡುವಿನ ಕಾಲದ ಕೊಂಡಿಯಂತೆ ಲೋಕಹಿತಕಾರಿಯಾಗಿ ಮನುಷ್ಯರು ಬಾಳಲು ಸಾಧ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.