ADVERTISEMENT

PV Web Exclusive: ಕೋವಿಡ್‌ ಕಾಲದಲ್ಲಿ ಸೋಲೊ ಬೈಕಿಂಗ್‌

ಜಯಸಿಂಹ ಆರ್.
Published 13 ಡಿಸೆಂಬರ್ 2020, 11:36 IST
Last Updated 13 ಡಿಸೆಂಬರ್ 2020, 11:36 IST
ಸೋಲೊ ಬೈಕಿಂಗ್
ಸೋಲೊ ಬೈಕಿಂಗ್   

ಬೈಕ್‌ಗಳನ್ನು ಹತ್ತಿ ನೂರಾರು ಕಿ.ಮೀ.ಗಟ್ಟಲೆ ಸವಾರಿ ನಡೆಸುವ ಹವ್ಯಾಸ ತೀರಾ ಹಳೆಯದು. ಇರುವೆ ಸಾಲಿಟ್ಟಂತೆ ಹತ್ತಾರು ಬೈಕ್‌ಗಳ ಗುಂಪು ಹೆದ್ದಾರಿಗಳಲ್ಲಿ ಹೋಗುತ್ತಿದ್ದದ್ದು, ಈಚಿನವರೆಗೂ ವಾರಾಂತ್ಯಗಳಲ್ಲಿ ಕಾಣುತ್ತಿದ್ದ ದೃಶ್ಯಗಳಾಗಿದ್ದವು. ಬೆಂಗಳೂರಿನಿಂದ ಹೊರಹೋಗುವ ಎಲ್ಲಾ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಇಂತಹ ಬೈಕರ್‌ಗಳ ಸವಾರಿಯ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಕೋವಿಡ್ ಎಲ್ಲವನ್ನೂ ಬದಲಿಸಿದೆ. ಬೈಕಿಂಗ್‌ ಬಗ್ಗೆ ಬರೆಯುವುದದಾದರೆ ಕೋವಿಡ್‌ ಬರುವುದಕ್ಕೂ ಮುನ್ನ ಮತ್ತು ಕೋವಿಡ್ ಬಂದ ನಂತರ ಎಂದು ಎರಡು ಪ್ರತ್ಯೇಕ ಅಧ್ಯಾಯಗಳಾಗಿ ವಿಂಗಡಿಸಿಬಿಡಬಹುದು.

ಕೋವಿಡ್‌ ಬರುವುದಕ್ಕೂ ಮೊದಲು ಇದ್ದ ಬೈಂಕಿಂಗ್‌ನ ಚಿತ್ರಣವೇ ಬೇರೆ. ವಾರಾಂತ್ಯದಲ್ಲಿ ನಗರದ ಹೊರವಲಯದಲ್ಲಿರುವ ಟೋಲ್‌ ಪ್ಲಾಜಾಗಳ ಬಳಿ ಹತ್ತಾರು ಬೈಕರ್‌ಗಳು ಒಟ್ಟುಗೂಡಿ, ಸವಾರಿ ಆರಂಭಿಸುತ್ತಿದ್ದರು. ಹತ್ತಾರು ಬೈಕ್‌ಗಳು ಹೆದ್ದಾರಿಗಳಲ್ಲಿ ಒಂದರ ಹಿಂದೆ ಒಂದರಂತೆ ಹೋಗುತ್ತಿದ್ದುದ್ದನ್ನು ನೋಡುವುದೇ ಒಂದು ಚಂದವಾಗಿತ್ತು. ಇರುವೆಗಳ ರೀತಿಯಲ್ಲಿ ಶಿಸ್ತಿನ ಸಿಪಾಯಿಗಳಂತೆ ಒಬ್ಬರ ಹಿಂದೆ ಒಬ್ಬರು ನೂರಾರು ಕಿ.ಮೀ. ಸವಾರಿ ಮಾಡುವುದು ದೊಡ್ಡ ಸವಾಲಿನ ಕೆಲಸವೇ ಆಗಿತ್ತು. ಈ ರೀತಿಯ ಬೈಕಿಂಗ್‌ಗೆ ಹೆಚ್ಚು ಸಂಯಮ ಅಗತ್ಯವಿತ್ತು. ಸಹಬೈಕರ್‌ ಅನ್ನು ಓವರ್‌ಟೇಕ್‌ ಮಾಡದೇ ಇರುವ, ವೇಗದಲ್ಲಿ ಪರಸ್ಪರ ಸ್ಪರ್ಧಿಸದೇ ಇರುವಂತಹ ಸಂಯಮ ಅದು.

ಹೀಗೆ ಹೊರಟ ಹತ್ತಾರು ಬೈಕರ್‌ಗಳು ಬಿಡದಿ/ಕುಣಿಗಲ್/ತಮಕೂರು/ಹೊಸೂರು/ನಂದಿ ಬೆಟ್ಟದ ಬಳಿಯ ಹೋಟೆಲ್‌ಗಳಲ್ಲಿ ನಿಲ್ಲಿಸಿ, ಇಡ್ಲಿ-ವಡೆ ಸವಿಯುವುದು ಕಡ್ಡಾಯವೇ ಎಂಬಂತಾಗಿತ್ತು. ಅಲ್ಲಿಂದ ಬೇರೊಂದು ಗಮ್ಯದತ್ತ ಮತ್ತೆ ಸವಾರಿ. ಕಾಡಿಗೆ ಹೊಂದಿಕೊಂಡಿರುವ ಯಾವುದೋ ಒಂದು ರೆಸಾರ್ಟ್‌ನಲ್ಲಿ ಅಥವಾ ಹೋಮ್‌ಸ್ಟೇನಲ್ಲಿ ಉಳಿಯುವುದು. ಹತ್ತಿರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು. ನಂತರ ಮತ್ತೆ ಮನೆಯತ್ತ ಸವಾರಿ. ಹೀಗಿತ್ತು ಬೈಕಿಂಗ್.

ADVERTISEMENT

ಆದರೆ, ಕೋವಿಡ್‌ ಬಂದ ಬಳಿಕದ ಕಾಲದಲ್ಲಿ ಬೈಕಿಂಗ್‌ನ ಸ್ವರೂಪವೇ ಬದಲಾಗಿದೆ. ಬಹಳಷ್ಟು ಮಂದಿ ಈಗ ‘ಸೋಲೊ ಬೈಕಿಂಗ್‌’ನ ಮೊರೆ ಹೋಗುತ್ತಿದ್ದಾರೆ. ಕೋವಿಡ್‌ ಹರಡುತ್ತದೆ ಎಂಬ ಕಾರಣದಿಂದ ಸೋಲೊ ಬೈಕಿಂಗ್‌ ಹೋಗುವವರ ಸಂಖ್ಯೆ ದೊಡ್ಡದಿದೆ. ಬೈಕರ್‌ಗಳು ಈಗ ದೂರದ ಸವಾರಿಗೆ ಅಗತ್ಯವಿರುವ ವಸ್ತುಗಳ ಗಂಟುಕಟ್ಟಿಕೊಂಡು, ಆ ಗಂಟನ್ನು ಬೈಕ್‌ಗೆ ಬಿಗಿದುಕೊಂಡು ಒಬ್ಬರೇ ಬೈಕಿಂಗ್ ಹೊರಡುತ್ತಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಹೊರಗೆ ಬಂದೇ ಇರಲಿಲ್ಲ. ಅದಕ್ಕೂ ಮೊದಲು ಗೆಳೆಯರ ಜೊತೆ ತಿಂಗಳಲ್ಲಿ ಎರಡು ಬೈಕಿಂಗ್ ಆದರೂ ಹೋಗುತ್ತಿದ್ದೆ. ಈಗಕೋವಿಡ್‌ ಎಲ್ಲಿ ಹರಡುತ್ತದೋ ಎಂಬ ಭಯ ಜಾಸ್ತಿ ಇದೆ. ಹೀಗಾಗಿ ಈಗ ಒಬ್ಬಳೇ ಬೈಕಿಂಗ್ ಹೋಗುತ್ತೇನೆ’ ಎನ್ನುತ್ತಾರೆ ಬೆಂಗಳೂರಿನ ನಿವಾಸಿ ಮತ್ತು ಐಟಿ ಉದ್ಯೋಗಿ ನೀಲು.

‘ಶುಕ್ರವಾರ ಮಧ್ಯಾಹ್ನ ಕೆಲಸ ಮುಗಿಯುತ್ತದೆ. ಸೋಮವಾರ ಬೆಳಿಗ್ಗೆವರೆಗೂ ಸಮಯವಿರುತ್ತದೆ. ಗೆಳೆಯರು ಯಾರೂ ಬೆಂಗಳೂರಿನಲ್ಲಿ ಇಲ್ಲ. ಮನೆಯಲ್ಲಿ ಸುಮ್ಮನೆ ಕೂರಲು ಆಗುವುದಿಲ್ಲ. ಹೀಗಾಗಿ ಶುಕ್ರವಾರ ಸಂಜೆಯೇ ಬೈಕ್ ಹತ್ತಿ ಹೊರಟುಬಿಡುತ್ತೇನೆ. ತಲುಪಬೇಕಾದ ಸ್ಥಳವನ್ನು ತಡರಾತ್ರಿಯ ಹೊತ್ತಿಗೆ ಮುಟ್ಟಿಯಾಗುತ್ತದೆ. ರೆಸಾರ್ಟ್‌ನಲ್ಲೋ/ಹೋಂಸ್ಟೇನಲ್ಲೋ ಉಳಿದುಕೊಂಡು ಬೆಳಿಗ್ಗೆ ಮತ್ತೆ ಸವಾರಿ ಮುಂದುವರಿಸುತ್ತೇನೆ’ ಎನ್ನುತ್ತಾರೆ ನೀಲು.

ಗುಂಪು ಬೈಕಿಂಗ್ ಆಯೋಜಿಸುವುದು ಕೋವಿಡ್‌ಪೂರ್ವ ಕಾಲದಲ್ಲಿ ಒಂದು ಉದ್ಯೋಗವಾಗಿತ್ತು. ಇದು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿತ್ತು. ಬೈಕಿಂಗ್‌ಗೆ ಬರುವವರು ನೀಡುವ ನೋಂದಣಿ ಶುಲ್ಕದಲ್ಲಿ ಆಯೋಜಕರಿಗೆ ಹಣ ಉಳಿಯುತ್ತಿತ್ತು. ಆದರೆ ಈಗ ಅದೆಲ್ಲವೂ ಬಂದ್ ಆಗಿದೆ.

‘ಮೊದಲು ಪ್ರತಿವಾರ 30-40 ಬೈಕರ್‌ಗಳು ಬರುತ್ತಿದ್ದರು. ನೋಂದಣಿ ಶುಲ್ಕದಲ್ಲಿ ನಮಗೆ ದುಡ್ಡು ಉಳಿಯುತ್ತಿತ್ತು. ಆಯೋಜಕರ ತಂಡದಲ್ಲಿ ಮೂವರು ಇದ್ದೇವೆ. ಮೂವರಿಗೂ ಒಳ್ಳೆಯ ಮೊತ್ತದ ದುಡ್ಡು ದೊರೆಯುತ್ತಿತ್ತು. ಜತೆಗೆ ಒಬ್ಬ ಮೆಕ್ಯಾನಿಕ್ ಸಹ ನಮ್ಮ ಜತೆ ಇರುತ್ತಿದ್ದ. ಅವನಿಗೂ ಒಳ್ಳೆಯ ದುಡಿಮೆ ಆಗುತ್ತಿತ್ತು. ಆದರೆ ಈಗ ಬೈಕರ್‌ಗಳೇ ಇಲ್ಲ. ಬೈಕಿಂಗ್ ಒಂದಕ್ಕೆ 3-4 ಮಂದಿ ಬಂದರೆ ಹೆಚ್ಚು’ ಎನ್ನುತ್ತಾರೆ ಶ್ರೀಪ್ರಸಾದ್ (ಹೆಸರು ಬದಲಿಸಲಾಗಿದೆ). ಶ್ರೀಪ್ರಸಾದ್ ಅವರ ಬೈಕಿಂಗ್ ತಂಡವು, ಬೆಂಗಳೂರಿನ ಬೈಕಿಂಗ್ ತಂಡಗಳಲ್ಲಿ ಅತ್ಯಂತ ಹಳೆಯದರಲ್ಲಿ ಒಂದು.

‘ಬಹಳ ಜನ ಕೋವಿಡ್ ಭಯದಿಂದ ಬೈಕಿಂಗ್‌ಗೆ ಬರುತ್ತಿಲ್ಲ. ಅದಕ್ಕಿಂತಲೂ ಹೆಚ್ಚಿನ ಜನ ತಮ್ಮ ಊರುಗಳಿಗೆ ಮರಳಿದ್ದಾರೆ. ವರ್ಕ್‌ ಫ್ರಂ ಹೋಂ ಇರುವುದರಿಂದ ಬಹಳ ಜನ ಬೆಂಗಳೂರು ಬಿಟ್ಟಿದ್ದಾರೆ. ಹೀಗಾಗಿ ಬೈಕಿಂಗ್‌ಗೆ ಬರುವವರು ಇಲ್ಲವೇ ಇಲ್ಲ. ಹೊಡೆತ ಬಿದ್ದಿರುವುದು ನಮ್ಮ ದುಡಿಮೆಗೆ ಮಾತ್ರವಲ್ಲ. ಬೆಂಗಳೂರಿನಿಂದ ಹೊರವಲಯದಲ್ಲಿ ಇರುವ ಇಡ್ಲಿ ಹೋಟೆಲ್‌ನವರಿಗೂ ಹೊಡೆತ ಬಿದ್ದಿದೆ. ಪ್ರತಿ ವಾರಾಂತ್ಯದಲ್ಲಿ ಈ ಹೋಟೆಲ್‌ಗಳ ಬಳಿ ನೂರಾರು ಬೈಕರ್‌ಗಳು ಸೇರಿರುತ್ತಿದ್ದರು. ಇಡೀ ವಾರದಲ್ಲಿ ಆಗುವುದಕ್ಕಿಂತ ಹೆಚ್ಚು ವ್ಯಾಪಾರ ಶನಿವಾರ ಮತ್ತು ಭಾನುವಾರದಲ್ಲಿ ಆಗುತ್ತಿತ್ತು. ಆದರೆ ಈಗ ಈ ಹೋಟೆಲ್‌ಗಳ ಬಳಿ ಜನರೇ ಇರುವುದಿಲ್ಲ’ ಎನ್ನುತ್ತಾರೆ ಶ್ರೀಪ್ರಸಾದ್.

ಸೋಲೊ ಬೈಕಿಂಗ್‌ ಉತ್ತಮ ಅನುಭವವನ್ನು ಕೊಡುತ್ತದೆ. ಗುಂಪಿನಲ್ಲಿ ಹೋಗುವುದಕ್ಕಿಂತ ಸೋಲೊ ಬೈಕಿಂಗ್‌ನಲ್ಲಿ ಸವಾರಿಯನ್ನು ಹೆಚ್ಚು ಅನುಭವಿಸಲು ಸಾಧ್ಯವಾಗುತ್ತದೆ. ಅಜ್ಞಾತ ಸ್ಥಳಗಳನ್ನು ಏಕಾಂಗಿಯಾಗಿ ಹುಡುಕುವುದೂ ಸಾಹಸದ ಅನುಭವ ಕೊಡುತ್ತದೆ. ಹತ್ತಾರು ಕಿ.ಮೀ. ಅಂತರದ ಕಾಡು ದಾರಿಗಳನ್ನು ಮೊಬೈಲ್ ನೆಟ್‌ವರ್ಕ್ ಇಲ್ಲದೇ, ಜಿಪಿಎಸ್‌ ಇಲ್ಲದೇ, ಜತೆಗೆ ಒಂದು ನರಪಿಳ್ಳೆಯೂ ಇಲ್ಲದೆ ಏಕಾಂಗಿಯಾಗಿ ಹಾದು ಹೋಗುವುದು ರೋಮಾಂಚನವನ್ನು ನೀಡುತ್ತದೆ. ಆದರೆ ಅದರ ಜತೆಯಲ್ಲಿ ಅಪಾಯವೂ ಇದೆ. ಬೈಕ್‌ ಪಂಚರ್ ಆದರೆ, ಬೈಕ್ ಕೈಕೊಟ್ಟರೆ, ಅಥವಾ ಸಣ್ಣ ಅಪಘಾತಗಳಾದರೆ, ರಸ್ತೆಗಳ್ಳರು ಎದುರಾದರೆ... ಹೀಗೆ ಅಪಾಯಗಳ ಪಟ್ಟಿ ದೊಡ್ಡದಿದೆ. ಆದರೆ ಕೋವಿಡ್‌ನ ಭಯ ಮತ್ತು ಜತೆಗಾರರಿಲ್ಲದಿದ್ದರೂ, ಸವಾರಿ ಮಾಡಲೇಬೇಕು ಎಂಬ ತುಡಿತವು ‘ಸೋಲೊ ಬೈಕಿಂಗ್‌’ನ ಅನಿವಾರ್ಯವನ್ನು ತಂದೊಡ್ಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.