ADVERTISEMENT

ಜಮ್ಮು-ಕಾಶ್ಮೀರ: ನಡೆಯುವುದೇ ಚುನಾವಣೆ?

ಕೇಂದ್ರ ನಾಯಕರ ಕೆಲವು ನಡೆ ಇಂತಹ ಪ್ರಶ್ನೆಯನ್ನು ಹುಟ್ಟುಹಾಕಿದೆ

ಬಿ.ಎಸ್‌.ಅರುಣ್‌
Published 21 ಜುಲೈ 2024, 23:54 IST
Last Updated 21 ಜುಲೈ 2024, 23:54 IST
<div class="paragraphs"><p>ಜಮ್ಮು-ಕಾಶ್ಮೀರ: ನಡೆಯುವುದೇ ಚುನಾವಣೆ?</p></div>

ಜಮ್ಮು-ಕಾಶ್ಮೀರ: ನಡೆಯುವುದೇ ಚುನಾವಣೆ?

   

ಪ್ರಕ್ಷುಬ್ಧ ಸ್ಥಿತಿಯಿಂದ ಬಳಲಿರುವ ಜಮ್ಮು-ಕಾಶ್ಮೀರದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಈ ಸೆಪ್ಟೆಂಬರ್‌ 30ರ ಒಳಗೆ ವಿಧಾನಸಭೆ ಚುನಾವಣೆ ನಡೆಯಬಹುದೇ? ಈ ವಿಷಯದಲ್ಲಿ ಕೇಂದ್ರ ಸರ್ಕಾರ ಒಂದಕ್ಕಿಂತ ಹೆಚ್ಚು ಬಾರಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆಯಾದರೂ ಕೆಲವು ಬೆಳವಣಿಗೆಗಳು ಸದ್ಯದಲ್ಲಿ ಚುನಾವಣೆ ಸಾಧ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ.

ಹಿಂದಿನ 6 ವರ್ಷಗಳಿಂದ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಜನಪ್ರಿಯ ಸರ್ಕಾರ ಆಡಳಿತದಲ್ಲಿಲ್ಲ. ಇಲ್ಲಿ ಕೊನೆಯ ಬಾರಿ ವಿಧಾನಸಭೆ ಚುನಾವಣೆ ನಡೆದದ್ದು 2014ರಲ್ಲಿ, ಅಂದರೆ 10 ವರ್ಷಗಳ ಹಿಂದೆ. ಆ ಚುನಾವಣೆಯ ನಂತರ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಮತ್ತು ಬಿಜೆಪಿ ಒಂದು ಒಪ್ಪಂದಕ್ಕೆ ಬಂದು ಸರ್ಕಾರ ರಚಿಸಿದವು. 2015ರ ಮಾರ್ಚ್‌ನಲ್ಲಿ ಮುಖ್ಯಮಂತ್ರಿಯಾದ ಪಿಡಿಪಿ ನಾಯಕ ಮುಫ್ತಿ ಮಹಮ್ಮದ್‌ ಸಯೀದ್‌ 2016ರ ಜನವರಿಯಲ್ಲಿ ನಿಧನರಾದರು. ನಂತರ ಅವರ ಪುತ್ರಿ ಮೆಹಬೂಬ ಮುಫ್ತಿ ತಂದೆಯ ಸ್ಥಾನ ತುಂಬಿದರು. ಆದರೆ ಮುಂದಿನ 2 ವರ್ಷ 77 ದಿನಗಳಲ್ಲಿ ‘ಭದ್ರತಾ ಪರಿಸ್ಥಿತಿ ಬಿಗಡಾಯಿಸುತ್ತಿದೆ’ ಎಂದು ಹೇಳಿ, 2018ರ ಜೂನ್‌ನಲ್ಲಿ ಬಿಜೆಪಿಯು ರಾಜ್ಯ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ವಾಪಸ್‌ ಪಡೆಯಿತು. ಜೊತೆಗೆ ಇಲ್ಲಿ ಕೇಂದ್ರಾಡಳಿತವನ್ನು ಹೇರಿತು. ಅದು ಈವರೆಗೂ ಜಾರಿಯಲ್ಲಿದೆ.

ADVERTISEMENT

2018ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳು ವಿಧಾನಸಭೆ ಚುನಾವಣೆ ಸೆಪ್ಟೆಂಬರ್‌ ಒಳಗೆ ಆಗುತ್ತದೋ ಇಲ್ಲವೋ ಎನ್ನುವುದರ ಮೇಲೆ ಪರಿಣಾಮ ಉಂಟು ಮಾಡಬಹುದು. ಇವುಗಳಲ್ಲಿ ಕೆಲವೆಂದರೆ, ಅತ್ಯಂತ ಮುಖ್ಯವಾದ, ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದು ಮಾಡಿದ, ಸಂವಿಧಾನದ 370ನೇ ವಿಧಿ. ಇದರ ಜೊತೆಗೆ, ರಾಜ್ಯ ಸ್ಥಾನಮಾನವನ್ನು ತೆಗೆದುಹಾಕಿ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲಾಯಿತು. ಆವರೆಗೂ ರಾಜ್ಯದ ಭಾಗವಾಗಿದ್ದ ಲಡಾಕ್‌ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಯಿತು. ನಂತರದ ಪ್ರಮುಖ ವಿದ್ಯಮಾನ ವಿಧಾನಸಭಾ ಚುನಾವಣಾ ಕ್ಷೇತ್ರಗಳ ಗಡಿನಿರ್ಣಯ. ಡಿಲಿಮಿಟೇಶನ್‌ ಆಯೋಗ 2022ರಲ್ಲಿ 87 ಇದ್ದ (4 ಲಡಾಕ್‌ ಕ್ಷೇತ್ರಗಳೂ ಸೇರಿದಂತೆ) ರಾಜ್ಯದ ಒಟ್ಟು ಕ್ಷೇತ್ರಗಳನ್ನು ಪುನರ್ವಿಂಗಡಿಸಿ 90 ಮಾಡಿತು (ಲಡಾಕ್‌ ಬಿಟ್ಟು). ಇದರಲ್ಲಿ 6 ಕ್ಷೇತ್ರಗಳು ಹೊಸದಾಗಿ ಹಿಂದೂಗಳೇ ಹೆಚ್ಚಾಗಿರುವ ಜಮ್ಮು ಪ್ರದೇಶ ಹಾಗೂ 1 ಕ್ಷೇತ್ರವು ಮುಸ್ಲಿಮರು ಹೆಚ್ಚಿರುವ ಕಾಶ್ಮೀರ ಕಣಿವೆಗೂ ಸೇರಿವೆ. ಇದರಿಂದ, 37 ಇದ್ದ ಜಮ್ಮು 43 ಹಾಗೂ 46 ಇದ್ದ ಕಣಿವೆ 47 ಕ್ಷೇತ್ರಗಳನ್ನು ಹೊಂದಲಿವೆ.

ಕೇಂದ್ರವು ಜುಲೈ 12ರಂದು ತೆಗೆದುಕೊಂಡ ವಿವಾದಾತ್ಮಕ ನಿರ್ಧಾರದಲ್ಲಿ ಜಮ್ಮು-ಕಾಶ್ಮೀರ ಪುನರ್ವಿಂಗಡಣೆ ಕಾಯ್ದೆಗೆ ತಿದ್ದುಪಡಿ ತಂದು, ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿದೆ. ಈಗ ನವದೆಹಲಿಯಲ್ಲಿರುವ ರೀತಿಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ (ಅಖಿಲ ಭಾರತೀಯ ಸೇವೆ)‌ ನೇಮಕಾತಿ ಮತ್ತು ವರ್ಗಾವಣೆ ಹಾಗೂ ಅಡ್ವೊಕೇಟ್‌ ಜನರಲ್‌ ನೇಮಕಾತಿಯನ್ನು ಅವರು ಮಾಡಬಹುದು. ಈ ತಿದ್ದುಪಡಿ ಎಲ್‌ಜಿಯವರಿಗೆ ಪೊಲೀಸ್‌ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ತ ಅಧಿಕಾರವನ್ನೂ ಕೊಡುತ್ತದೆ.

ಕೊನೆಯದಾಗಿ, 2020ರಿಂದ ಈಚೆಗೆ ಕಡಿಮೆಯಾಗುತ್ತಿವೆ ಎಂದೆನಿಸಿದ್ದ ಭಯೋತ್ಪಾದಕ ಕೃತ್ಯಗಳು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಾಗಿವೆ. ‘ಸೌತ್‌ ಏಷ್ಯಾ ಟೆರರಿಸಂ ಪೋರ್ಟಲ್‌’ನ ಪ್ರಕಾರ, ಜಮ್ಮು-ಕಾಶ್ಮೀರದಲ್ಲಿ 2020ರಲ್ಲಿ 47, 2021ರಲ್ಲಿ 35, 2022ರಲ್ಲಿ 23 ಹಾಗೂ 2023ರಲ್ಲಿ 14 ಭಯೋತ್ಪಾದಕ ಕೃತ್ಯಗಳು ಸಂಭವಿಸಿದ್ದವು. 2020ರಲ್ಲಿ ನಡೆದ ಭಯೋತ್ಪಾದಕ ಘಟನೆಗಳಲ್ಲಿ 140 ಜನ ಸಾವನ್ನಪ್ಪಿದ್ದರು ಹಾಗೂ 2021ರಲ್ಲಿ 150, 2022ರಲ್ಲಿ 151 ಮತ್ತು 2023ರಲ್ಲಿ 72 ಮಂದಿ ಅಸುನೀಗಿದ್ದರು. 2024ರಲ್ಲಿ ಇಲ್ಲಿಯವರೆಗೆ 28 ಘಟನೆಗಳಲ್ಲಿ 21 ಜನ ಮೃತಪಟ್ಟಿದ್ದಾರೆ.

ಕ್ಷೋಭೆಗೊಳಗಾದ ಇಲ್ಲಿ ಹೆಚ್ಚಿನ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದದ್ದು ಕಾಶ್ಮೀರ ಕಣಿವೆಯಲ್ಲಿ. ಆದರೆ ಇತ್ತೀಚಿನ ದಿನಗಳಲ್ಲಿ, ಹೆಚ್ಚು ಶಾಂತಿಯುತವಾದ ಜಮ್ಮು ಪ್ರದೇಶದಲ್ಲಿ ಕೃತ್ಯಗಳು ಆಗುತ್ತಿರುವುದು ಕಳವಳಕಾರಿ ಅಂಶ. ಈ ವರ್ಷದಲ್ಲಿ ಈಗಾಗಲೇ 6 ದಾಳಿಗಳು ಜರುಗಿದ್ದು 11 ಜನರು ಹತರಾಗಿದ್ದಾರೆ. ಜಮ್ಮು ವಿಭಾಗದ ಪೂಂಚ್‌, ರಜೌರಿ, ಕಠುವಾ, ರಿಯಾಸಿ, ದೋಡ ಹಾಗೂ ಉಧಾಂಪುರ್‌ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಸಂಭವಿಸಿವೆ.

ಈ ಚಟುವಟಿಕೆಗಳು ಜಮ್ಮುವಿಗೆ ಸ್ಥಳಾಂತರಗೊಂಡಿದ್ದಾದರೂ ಏಕೆ? 2020ರಲ್ಲಿ ಚೀನಾ ಗಡಿ ಗಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹತರಾದ ನಂತರ, ಬಹುಮಟ್ಟಿನ ಪಡೆಯನ್ನು ಜಮ್ಮು ಪ್ರದೇಶದಿಂದ ತೆಗೆದು ಪೂರ್ವ ಲಡಾಕ್‌ಗೆ ವರ್ಗಾಯಿಸಲಾಗಿತ್ತು. ಜಮ್ಮು-ಕಾಶ್ಮೀರಕ್ಕೆ ಇನ್ನೂ ಪೂರ್ಣಾವಧಿಯ ಪೊಲೀಸ್‌ ಮುಖ್ಯಸ್ಥರನ್ನು ನೇಮಿಸಿಲ್ಲ. ‘ಪ್ರಭಾರಿ’ ಡಿಜಿಪಿಯಾಗಿ ಆರ್‌.ಆರ್‌.ಸ್ವೇನ್‌ ಮುಂದುವರಿದಿದ್ದಾರೆ. ಗುಪ್ತಚರ ವಿಭಾಗದ ಮುಖ್ಯಸ್ಥರ ಜವಾಬ್ದಾರಿ ಕೂಡ ಇವರ ಮೇಲಿದೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಾಣೆ ಬಹುತೇಕ ಶಾಂತಿಯುತವಾಗಿತ್ತು. ಆದರೆ ಬಿಜೆಪಿಯು ಕಣಿವೆ ಪ್ರದೇಶದಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಬಹುಶಃ ತಳಮಟ್ಟದ ಬೆಂಬಲ ಇಲ್ಲದ ಕಾರಣ ಮತ್ತು ಕಾರ್ಯಕರ್ತರ ಅಭಾವದಿಂದ ಅದು ಸ್ಪರ್ಧಿಸದಿರಲು ನಿರ್ಧರಿಸಿದ್ದಿರಬಹುದು. ಕೇಂದ್ರಾಡಳಿತ ಪ್ರದೇಶದ 5 ಕ್ಟೇತ್ರಗಳಲ್ಲಿ ಬಿಜೆಪಿ 2 (ಜಮ್ಮು ವಿಭಾಗ), ಫರೂಕ್‌ ಅಬ್ದುಲ್ಲಾ ಅವರ ನ್ಯಾಷನಲ್‌ ಕಾನ್ಫರೆನ್ಸ್‌ 2 (ಕಣಿವೆ ಪ್ರದೇಶ) ಹಾಗೂ ಭಯೋತ್ಪಾದನೆಗೆ ಹಣಕಾಸು ಸಹಾಯ ನೀಡಿದ ಸಂಬಂಧ ಸೆರೆಮನೆಯಲ್ಲಿರುವ ಪಕ್ಷೇತರ ಅಭ್ಯರ್ಥಿ ಎಂಜಿನಿಯರ್‌ ರಶೀದ್‌ ಅವರಿಗೆ ಜಯ ಲಭಿಸಿತು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ, ಕೋರ್ಟ್‌ ಆದೇಶದ ಪ್ರಕಾರವೇ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದರು. ಚುನಾವಣಾ ಆಯೋಗ ಹೋದ ತಿಂಗಳು ಪೂರ್ವಭಾವಿ ಸಭೆಗಳನ್ನು ನಡೆಸಿದೆ. ಆದರೂ, ಮೋದಿ ಅವರು ಸಂಸತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯಲ್ಲಿ ಉತ್ತರಿಸುವಾಗ ಈ ಚುನಾವಣೆಯ ಬಗ್ಗೆ ಮಾತನಾಡದೇ ಇದ್ದದ್ದು, ಅಮಿತ್‌ ಶಾ ತಾವು ಕರೆದಿದ್ದ, ಮುಂಬರುವ ವಿಧಾನಸಭಾ ಚುನಾವಣೆ ನಡೆಯುವ ರಾಜ್ಯಗಳ ಬಿಜೆಪಿ ನಾಯಕರ ಜೊತೆಗಿನ ಪೂರ್ವಭಾವಿ ಚರ್ಚೆಯಲ್ಲಿ ಜಮ್ಮು-ಕಾಶ್ಮೀರವನ್ನು ಹೊರಗಿಟ್ಟಿದ್ದು– ಈ ಎಲ್ಲ ಕಾರಣಗಳು ಇಲ್ಲಿ ಚುನಾವಣೆ ನಡೆಯುವುದೇ ಎನ್ನುವ ಅನುಮಾನವನ್ನು ಜೀವಂತವಾಗಿ ಇಟ್ಟಿವೆ.

ಶ್ರೀನಗರದ ಕೆಲವು ರಾಜಕೀಯ ಪರಿಣತರು ಹೇಳುವುದೇನೆಂದರೆ, ‘ಈ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲು ಪಂಚಾಯಿತಿ ಹಾಗೂ ಮುನಿಸಿಪಲ್‌ ಚುನಾವಣೆಗಳು ನಡೆಯುತ್ತವೆ. ಇದನ್ನು ಈಗ ನಡೆಯುತ್ತಿರುವ ಹಾಗೂ ಆಗಸ್ಟ್‌ 19ರಂದು ಮುಗಿಯುವ ಅಮರನಾಥ ಯಾತ್ರೆಯ ನಂತರ ಘೋಷಿಸಲಾಗುತ್ತದೆ. ನಂತರ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಜರುಗುತ್ತದೆ’.

2024ರ ಲೋಕಸಭೆ ಚುನಾವಣೆಯಲ್ಲಿ ಶೇ 58.46ರಷ್ಟು ಮತದಾನವಾಗಿದ್ದು, ಇದನ್ನು ವಿಧಾನಸಭಾ ಚುನಾವಣೆ ನಡೆಸುವ ಸಂಬಂಧದ ಜನಮನ್ನಣೆಯೆಂದೇ ಪರಿಗಣಿಸಲಾಗಿದೆ. ಆದರೆ, ಬಿಜೆಪಿಯ ‘ಪ್ರಾಕ್ಸಿ’ (ಬದಲಿ ಪ್ರತಿನಿಧಿ) ಪಕ್ಷವೆಂದೇ ಪರಿಗಣಿಸಲಾಗುವ ಅಪ್ನಿ ಪಾರ್ಟಿ, ಗುಲಾಮ್‌ ನಬಿ ಆಜಾದ್‌ ಅವರ ಪಕ್ಷ, ಸಜದ್‌ ಲೋನ್‌ ಅವರ ಪೀಪಲ್ಸ್‌ ಪಾರ್ಟಿ ಚುನಾವಣೆಯಲ್ಲಿ ನೆಲಕಚ್ಚಿದವು. ಬಿಜೆಪಿಯು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೋ ಇಲ್ಲವೋ ಎನ್ನುವುದರ ಬಗ್ಗೆ ಸದ್ಯ ಸ್ಪಷ್ಟತೆ ಇಲ್ಲ. ಆದರೆ, ಅದರ ಪ್ರಾಕ್ಸಿ ಪಕ್ಷಗಳ ನಿರಾಶಾದಾಯಕ ಪ್ರದರ್ಶನದಿಂದ ಬಿಜೆಪಿಗೆ ಮುಖಭಂಗವಾಗಿದೆ ಎಂಬುದಂತೂ ನಿಜ.

ತಾನು ಕಳೆದ ವರ್ಷಗಳಲ್ಲಿ ಜಮ್ಮು-ಕಾಶ್ಮೀರದ ಬಗ್ಗೆ ತೆಗೆದುಕೊಂಡ ನಿರ್ಧಾರಗಳನ್ನು ತನ್ನ ಪ್ರಮುಖ ‘ಸಾಧನೆ’ಗಳೆಂದೇ ಬಿಜೆಪಿ ಬಿಂಬಿಸುತ್ತದೆ. ಹಾಗಾಗಿ, ಇಂತಹ ಸನ್ನಿವೇಶದಲ್ಲಿ ತಾನು ಅಧಿಕಾರದ ಚುಕ್ಕಾಣಿ ಹಿಡಿಯದೇ ಹೋದರೆ ಅಥವಾ ಅಲ್ಲಿ ಚುನಾವಣೆಯ ಮೂಲಕ ಹೊಸದಾಗಿ ಏನೂ ದಕ್ಕದಿದ್ದರೆ, ಇಷ್ಟೆಲ್ಲಾ ಮಾಡಿ ಏನು ಸಾಧಿಸಿದಂತಾಯಿತು ಎಂದೂ ಪಕ್ಷದ ನಾಯಕರು ಪ್ರಶ್ನೆ ಮಾಡಿಕೊಳ್ಳಬಹುದು. ಇದು ಹಾಗೂ ಮೇಲಿನ ಎಲ್ಲಾ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಹೇಗೆ ನೋಡುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆ.

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.