ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳಿಗೆ ಇದೇ 13 ಮತ್ತು 20ರಂದು ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್, ಆರ್‌ಜೆಡಿ ಒಳಗೊಂಡ ‘ಇಂಡಿಯಾ’ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಗಣಿ ಸಂಪತ್ತು ಹೆಚ್ಚಾಗಿರುವ ಪೂರ್ವ ಭಾರತದ ಈ ರಾಜ್ಯದಲ್ಲಿ, ಹಿಂದಿನ ಚುನಾವಣೆಯಲ್ಲಿ ಜಯ ಗಳಿಸಿದ ಜೆಎಂಎಂ– ಕಾಂಗ್ರೆಸ್ ಮೈತ್ರಿಕೂಟ ತನ್ನ 5 ವರ್ಷಗಳ ‘ಸಾಧನೆ’ಗಳನ್ನು ಮುಂದಿಟ್ಟು ಹಾಗೂ ‘ಪ್ರತಿಪಕ್ಷಗಳ ಸರ್ಕಾರವಿರುವ ರಾಜ್ಯಗಳ ವಿರುದ್ಧ ಕೇಂದ್ರದ ತಾರತಮ್ಯ ಧೋರಣೆ’ ವಿರೋಧಿಸಿ ಪ್ರಚಾರದಲ್ಲಿ ತೊಡಗಿದೆ. ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಸಹಿತ ಆರೋಪಗಳ ಸುರಿಮಳೆ ಸುರಿಸುತ್ತಿದೆ. ‘ಈ ಬಾರಿ ಬದಲಾವಣೆ ತರುತ್ತೇವೆ’ ಎಂದು ಹೊರಟಿರುವ ಬಿಜೆಪಿ, ರಾಜ್ಯದಾದ್ಯಂತ ‘ಪರಿವರ್ತನ ಯಾತ್ರೆ’ ನಡೆಸಿದೆ. ಇದಕ್ಕೆ ಪ್ರತಿಯಾಗಿ ಜೆಎಂಎಂ ‘ನಾವು ಜಾರ್ಖಂಡ್ ಅಸ್ಮಿತೆಯನ್ನು ಪ್ರತಿಬಿಂಬಿಸುತ್ತೇವೆ’ ಎಂದು ಹೇಳಿಕೊಂಡಿದೆ.
2000ನೇ ಇಸವಿಯಲ್ಲಿ ಬಿಹಾರದಿಂದ ಬೇರ್ಪಟ್ಟು ಈ ರಾಜ್ಯವು ಜನ್ಮತಾಳಿದ ನಂತರ ಯಾವುದೇ ಪಕ್ಷ ಇಲ್ಲಿ ಬಹುಮತ ಗಳಿಸಿಲ್ಲ. 2019ರ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ 30, ಕಾಂಗ್ರೆಸ್ 16 ಹಾಗೂ ಆರ್‌ಜೆಡಿ 1 (ಒಟ್ಟು 47) ಸ್ಥಾನ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದವು. ಬಿಜೆಪಿ 25 ಸ್ಥಾನ ಗಳಿಸಿತ್ತು. ಆಗ ಕೇಸರಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿತ್ತು ಹಾಗೂ ಶೇ 33.37ರಷ್ಟು ಮತ ಗಳಿಸಿ, ಅತಿ ಹೆಚ್ಚು ಮತ ಗಳಿಸಿದ ಪಕ್ಷವಾಗಿ ಹೊರಹೊಮ್ಮಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಉತ್ತಮ ಪ್ರದರ್ಶನ ತೋರಿ, ರಾಜ್ಯದ 14 ಕ್ಷೇತ್ರಗಳ ಪೈಕಿ 8ರಲ್ಲಿ (ಶೇ 44.6) ಜಯ ಗಳಿಸಿತು. ಇಂಡಿಯಾ ಮೈತ್ರಿಕೂಟವು 5 (ಶೇ 38.97) ಕ್ಷೇತ್ರಗಳಿಗೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು.
ಪ್ರಸ್ತುತ ಎರಡೂ ಕೂಟಗಳಲ್ಲಿ ಸೀಟು ಹಂಚಿಕೆ ಹೆಚ್ಚಿನ ಮನಸ್ತಾಪವಿಲ್ಲದೇ ನಡೆದಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಜೆಎಂಎಂ 41, ಕಾಂಗ್ರೆಸ್ 30, ಆರ್‌ಜೆಡಿ 6, ಸಿಪಿಐ (ಎಂಎಲ್) 4 ಸ್ಥಾನಗಳಲ್ಲಿ ಹಾಗೂ ಎನ್‌ಡಿಎ ಕಡೆಯಿಂದ ಬಿಜೆಪಿ 68, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) 10, ಜೆಡಿಯು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಎಲ್‌ಜೆಪಿ 1 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಜಾರ್ಖಂಡ್‌ನಲ್ಲಿ ಆದಿವಾಸಿ ಮತಗಳು ಬಹಳ ಮಹತ್ವ ಪಡೆದುಕೊಂಡಿವೆ. 2024ರ ಲೋಕಸಭೆ ಚುನಾವಣೆಯಲ್ಲಿ, ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಿರುವ ಎಲ್ಲಾ 5 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಜಯಭೇರಿ ಬಾರಿಸಿತು. ಬಿಜೆಪಿಯು 2019ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಇಲ್ಲಿ ಹಿನ್ನಡೆ ಅನುಭವಿಸಿತ್ತು- ಪರಿಶಿಷ್ಟ ಪಂಗಡದ (ಎಸ್‌ಟಿ) 28 ಮೀಸಲು ಕ್ಷೇತ್ರಗಳ ಪೈಕಿ ಜೆಎಂಎಂ 25ರಲ್ಲಿ ಗೆದ್ದರೆ (ಶೇ 43ರಷ್ಟು ಮತ ಗಳಿಕೆ), ಬಿಜೆಪಿ ಬರೀ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು (ಶೇ 34). ಒಡಿಶಾಗೆ ಹೊಂದಿಕೊಂಡಿರುವ, ಕೊಲ್ಹಾನ್ ಎಂದು ಕರೆಯಲಾಗುವ, ಜಾರ್ಖಂಡ್‌ನ ದಕ್ಷಿಣಕ್ಕಿರುವ ಪ್ರದೇಶಗಳು ಹಾಗೂ ಪಶ್ಚಿಮ ಬಂಗಾಳಕ್ಕೆ ಹೊಂದಿಕೊಂಡಿರುವ ಸಂಥಾಲ್ ಪರಗಣಾಸ್ ಪ್ರದೇಶ– ಈ ಎರಡು ವಿಭಾಗಗಳಲ್ಲಿ ರಾಜ್ಯದ ಶೇ 75ರಷ್ಟು ಎಸ್‌ಟಿ ಮೀಸಲು ಕ್ಷೇತ್ರಗಳಿವೆ.
ಈ ಮೀಸಲು ಕ್ಷೇತ್ರಗಳಲ್ಲಿ ಈ ಬಾರಿ ಹೆಚ್ಚಿನ ಕಡೆ ಗೆಲ್ಲಲು ಎರಡೂ ಬಣಗಳು ಭಾರಿ ಕಸರತ್ತು ನಡೆಸಿವೆ. ಅದರಲ್ಲೂ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಎಸ್‌ಟಿ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ ಕಾರಣಕ್ಕಾಗಿ ಈ ಸಲ ಅನೇಕ ತಂತ್ರಗಳನ್ನು ಹೆಣೆಯುತ್ತಿದೆ. ಎಜೆಎಸ್‌ಯು ಜೊತೆಗಿನ ಅದರ ಮೈತ್ರಿ ಮಹತ್ವಪೂರ್ಣವಾದದ್ದು. ಈ ಮೈತ್ರಿಯಿಂದ ಬಿಜೆಪಿಗೆ ಆದಿವಾಸಿ ಕ್ಷೇತ್ರಗಳಲ್ಲಿ ಸಹಾಯ
ವಾಗಲಿದೆ ಎಂಬ ವಿಶ್ಲೇಷಣೆಗಳಿವೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಜೈಲುವಾಸ ಅನುಭವಿಸುತ್ತಿದ್ದಾಗ, ಆ ಗದ್ದುಗೆ ಏರಿದ್ದ ಚಂಪೈ ಸೊರೇನ್ ಅವರನ್ನು ಬಿಜೆಪಿ ತನ್ನೆಡೆಗೆ ಸೆಳೆದುಕೊಂಡಿತು. ಇದೀಗ ಪಕ್ಷವು ಅವರ ಜನಪ್ರಿಯತೆಯನ್ನು ಬಳಸಿಕೊಂಡು ಆದಿವಾಸಿ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ. ಚಂಪೈ ಅಲ್ಲದೆ ಅವರ ಪುತ್ರ ಬಾಬುಲಾಲ್ ಅವರಿಗೂ ಟಿಕೆಟ್ ಘೋಷಿಸಿದೆ. ಪರಿಶಿಷ್ಟ ಪಂಗಡಗಳಿಗೆ ಅನೇಕ ಸವಲತ್ತುಗಳ ಭರವಸೆ ನೀಡಿದೆ.
ಜೆಎಂಎಂ ನಾಯಕ ಹೇಮಂತ್ ಸೊರೇನ್ ತಮ್ಮ ನೇತೃತ್ವದ ಸರ್ಕಾರವು ಆದಿವಾಸಿಗಳ ಕಲ್ಯಾಣಕ್ಕಾಗಿ ಏನೇನು ಮಾಡಿದೆ ಎನ್ನುವುದನ್ನು ಒತ್ತಿ ಹೇಳುವುದರ ಜೊತೆಗೆ, ಕೇಂದ್ರದಲ್ಲಿನ ಅಧಿಕಾರಾರೂಢ ಬಿಜೆಪಿಯು ‘ಸುಳ್ಳು’ ಮೊಕದ್ದಮೆ ಹೂಡಿ ತಮ್ಮನ್ನು ಜೈಲಿಗಟ್ಟಿತ್ತು ಎಂದು ಪ್ರಚಾರ ಭಾಷಣದಲ್ಲಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿಯು ಇದು ಸಹಾನುಭೂತಿ ಗಿಟ್ಟಿಸುವ ತಂತ್ರ ಎಂದಿದೆ. ಆದಿವಾಸಿ ಅಲ್ಲದ ರಘುವರ ದಾಸ್ ಅವರನ್ನು ಬಿಜೆಪಿಯು 2014ರಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಆದಿವಾಸಿಗಳು ಪಕ್ಷದಿಂದ ದೂರವಾಗಲು ಒಂದು ಪ್ರಮುಖ ಕಾರಣ ಎನ್ನಲಾಗಿದೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸೋತಿದ್ದಷ್ಟೇ ಅಲ್ಲ, ‘ಸ್ಟೀಲ್ ಸಿಟಿ’ ಎಂದೇ ಹೆಗ್ಗಳಿಕೆಯಿರುವ ಜೆಮ್‌ಶೆಡ್‌ಪುರದಲ್ಲಿ (ಪೂರ್ವ) ಬಿಜೆಪಿಯ ಬಂಡಾಯ ಅಭ್ಯರ್ಥಿ ವಿರುದ್ಧ ದಾಸ್ ಹೀನಾಯ ಸೋಲು ಅನುಭವಿಸಿದರು.
ಬೇರೆ ರಾಜ್ಯಗಳಂತೆ ಇಲ್ಲಿ ಕೂಡ ಪ್ರಮುಖ ರಾಜಕಾರಣಿಗಳ ಸಂಬಂಧಿಗಳಿಗೆ ಎಲ್ಲ ಪಕ್ಷಗಳೂ ಮಣೆ ಹಾಕಿವೆ. ‘ಕುಟುಂಬ ರಾಜಕಾರಣ’ ಮಾಡುತ್ತವೆ ಎಂದು ಇತರ ಪಕ್ಷಗಳನ್ನು ದೂರುವ ಬಿಜೆಪಿ, ತಾನೂ ಈ ವಿಷಯದಲ್ಲಿ ಏನೂ ಕಡಿಮೆಯಿಲ್ಲ ಎಂದು ತೋರಿಸಿದೆ. ಮುಖ್ಯಮಂತ್ರಿಗಳಾಗಿದ್ದ ಅರ್ಜುನ್ ಮುಂಡಾ ಅವರ ಪತ್ನಿ ಮೀರಾ, ಚಂಪೈ ಸೊರೇನ್ ಅವರ ಪುತ್ರ ಬಾಬುಲಾಲ್, ರಘುವರ ದಾಸ್ ಅವರ ಸೊಸೆ ಪೂರ್ಣಿಮಾ, ಜೆಎಂಎಂ ಸ್ಥಾಪಕ ಶಿಬು ಸೊರೇನ್ ಅವರ ಸೊಸೆ ಸೀತಾ ಸೊರೇನ್, ಮಧು ಕೋಡಾ ಅವರ ಪತ್ನಿ ಗೀತಾ, ಸಂಸದ ಡುಲ್ಲು ಮಹತೊ ಅವರ ಸಹೋದರ ಶತ್ರುಘ್ನ ಮತ್ತಿತರರು ಬಿಜೆಪಿಯಿಂದ ಕಣದಲ್ಲಿದ್ದಾರೆ. ಜೆಎಂಎಂ ಹಾಗೂ ಕಾಂಗ್ರೆಸ್ ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಜೆಎಂಎಂನಿಂದ ಹೇಮಂತ್, ಅವರ ಪತ್ನಿ ಕಲ್ಪನಾ, ಸಹೋದರ ಬಸಂತ್ ಮತ್ತಿತರರಿಗೆ ಟಿಕೆಟ್ ನೀಡಲಾಗಿದೆ.
ಹಿಂದಿನ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕಲ್ಪನಾ, ಹೇಮಂತ್ ಜೈಲಿಗೆ ಹೋಗಿದ್ದಾಗ ಮಾಡಿದ ತಮ್ಮ ಭಾಷಣಗಳಿಂದ ಭಾರಿ ಜನಪ್ರಿಯತೆ ಗಳಿಸಿ ಈಗ ‘ಸ್ಟಾರ್ ಪ್ರಚಾರಕಿ’ ಆಗಿದ್ದಾರೆ. ಇವರನ್ನು ‘ಯೂತ್ ಐಕಾನ್’ ಎಂದೇ ಕರೆಯಲಾಗುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಾಬುಲಾಲ್ ಮರಂಡಿ ಅವರು ಧನ್‌ವರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇವರು ಹಿಂದೆ ಬಿಜೆಪಿಯನ್ನು ತ್ಯಜಿಸಿ ತಮ್ಮದೇ ಪಕ್ಷ ಕಟ್ಟಿ, ಬಳಿಕ ಅದನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು. ಗೀತಾ ಹಾಗೂ ಸೀತಾ ಈ ಬಾರಿಯ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಿ, ಸ್ಪರ್ಧಿಸಿ ಸೋತಿದ್ದರು. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕೂಡ ‘ಆಯಾ ರಾಮ್- ಗಯಾ ರಾಮ್’ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಹಾಗೂ ಇವರಲ್ಲಿ ಅನೇಕರು ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಲ್ಲ. ಇಂಡಿಯಾ ಕೂಟ ಗೆದ್ದರೆ, ಹೇಮಂತ್ ಸೊರೇನ್ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಜಾರ್ಖಂಡ್ ಚುನಾವಣೆಯ ಒಂದು ವೈಶಿಷ್ಟ್ಯ ವೆಂದರೆ, ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಗೆಲ್ಲುವುದು. 2019ರಲ್ಲಿ 9 ಕ್ಷೇತ್ರಗಳಲ್ಲಿ (2014ರಲ್ಲಿ ಈ ಸಂಖ್ಯೆ 19 ಇತ್ತು) ಗೆಲುವಿನ ಅಂತರ 5,000 ಮತಗಳಿಗೂ ಕಡಿಮೆಯಿತ್ತು. ಅತ್ಯಂತ ಕಡಿಮೆ ಅಂತರ ಇದ್ದದ್ದು ಸಿಮ್‌ಡೆಗ ಎನ್ನುವ ಕ್ಷೇತ್ರದಲ್ಲಿ– ಬರೀ 285 ಮತಗಳು. ಹಾಗಾಗಿ, ಈ ಎಲ್ಲೆಡೆ ಪ್ರತಿ ಮತಕ್ಕೂ ಸೆಣಸಾಟ ಇರುತ್ತದೆ. ರಾಜ್ಯದ 2.60 ಕೋಟಿ ಮತದಾರರಲ್ಲಿ 1.31 ಕೋಟಿ ಪುರುಷರು, 1.29 ಕೋಟಿ ಮಹಿಳೆಯರಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿದೆ. ಹೀಗಾಗಿ, ಮಹಿಳಾ ಮತಗಳನ್ನು ಸೆಳೆಯಲು ಎರಡೂ ಮೈತ್ರಿಕೂಟಗಳು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿವೆ. ರಾಜ್ಯ ಸರ್ಕಾರದ ‘ಮೈಯಾ ಸಮ್ಮಾನ್ ಯೋಜನಾ’ ಮೂಲಕ 50 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ₹ 1,000 ನೀಡಲಾಗುತ್ತಿದೆ. ಆಡಳಿತಾರೂಢ ಜೆಎಂಎಂ ಇದನ್ನು ₹ 2,500ಕ್ಕೆ ಏರಿಸುವ ಭರವಸೆ ನೀಡಿದ್ದರೆ, ಬಿಜೆಪಿಯು ಮಹಿಳೆಯರ ಖಾತೆಗೆ
₹ 2,100 ಜಮಾ ಮಾಡುವ ಭರವಸೆ ಇತ್ತಿದೆ.
ಐದಾರು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೈ ಮೇಲಾಗಿದ್ದರೂ ಪ್ರಸಕ್ತ ವಿಧಾನಸಭೆ ಚುನಾವಣಾ ಕಣದಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ನಡುವೆ ತೀವ್ರ ಸೆಣಸಾಟ ನಡೆಯುವ ಸಂಭವವಿದೆ.
ಲೇಖಕ: ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.