ADVERTISEMENT

ನಟರಾಜ್ ಹುಳಿಯಾರ್ ಬರಹ: ಕ್ವಿಟ್ ಇಂಡಿಯಾ ಚಳವಳಿ ಭೂಗತ ಬಾನುಲಿ

ಸ್ವಾತಂತ್ರ್ಯ ಚಳವಳಿಯ ಹಿರಿಯ ನಾಯಕರು ಬಂಧನದಲ್ಲಿದ್ದಾಗ ಕಿರಿಯರ ನಿರ್ಭೀತ ಹೋರಾಟದ ಕತೆ...

ನಟರಾಜ ಹುಳಿಯಾರ್
Published 6 ಆಗಸ್ಟ್ 2021, 21:15 IST
Last Updated 6 ಆಗಸ್ಟ್ 2021, 21:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

1942ರ ಆಗಸ್ಟ್ 8, ಆ ಸಂಜೆ ಗಾಂಧೀಜಿ ಬ್ರಿಟಿಷರಿಗೆ ‘ಕ್ವಿಟ್ ಇಂಡಿಯಾ’ (ಭಾರತ ಬಿಟ್ಟು ತೊಲಗಿ) ಎಂದು ಅಂತಿಮ ಎಚ್ಚರಿಕೆ ಕೊಟ್ಟರು. ಬಾಂಬೆಯ ಗ್ವಾಲಿಯರ್ ಕೆರೆ ಮೈದಾನದ ಸುತ್ತ ಕಾಯುತ್ತಿದ್ದ ಜನಸಮೂಹಕ್ಕೆ ‘ಡೂ ಆರ್ ಡೈ’ (ಮಾಡು ಇಲ್ಲವೇ ಮಡಿ) ಕರೆಯನ್ನೂ ಕೊಟ್ಟರು. ದೇಶದುದ್ದಕ್ಕೂ ಮಿಂಚಿನ ಸಂಚಾರವಾಗಿತ್ತು. ಮಾರನೆಯ ಬೆಳಗಿಗೇ ಗಾಂಧೀಜಿಯ ಬಂಧನವಾಯಿತು. ಕಾಂಗ್ರೆಸ್ಸಿನ ಮುಂಚೂಣಿ ನಾಯಕರಾದ ನೆಹರೂ, ಸರ್ದಾರ್ ಪಟೇಲ್, ಮೌಲಾನ ಆಜಾದ್ ಸೇರಿದಂತೆ ರಾಷ್ಟ್ರದಾದ್ಯಂತ ಹಿರಿಯ, ಕಿರಿಯ ಚಳವಳಿಯ ನಾಯಕರೆಲ್ಲ ಬಂಧನಕ್ಕೆ ಒಳಗಾದರು.

ಇದರಿಂದ ಸಿಟ್ಟಿಗೆದ್ದ ಜನ ತಂತಾವೇ ನಾಯಕರಾದರು. ತಮಗೆ ತೋಚಿದಂತೆ ‘ಮಾಡು ಇಲ್ಲವೇ ಮಡಿ’ ಕರೆಯನ್ನು ಜಾರಿಗೊಳಿಸತೊಡಗಿದರು. ಪೊಲೀಸ್ ಠಾಣೆಗಳು, ಅಂಚೆ ಕಚೇರಿಗಳು, ಟೆಲಿಫೋನ್ ವೈರುಗಳು, ರೈಲ್ವೆ ಹಳಿಗಳು... ಮುಂತಾಗಿ ಸರ್ಕಾರಿ ಆಸ್ತಿಯನ್ನು ಧ್ವಂಸ ಮಾಡತೊಡಗಿದರು. ಆಗಸ್ಟ್ 9ರ ರಾತ್ರಿ 32 ವರ್ಷದ ರಾಮಮನೋಹರ ಲೋಹಿಯಾ ಸಮಾಜವಾದಿ ಸಂಗಾತಿಗಳಾದ ಅಚ್ಯುತ್ ಪಟವರ್ಧನ್, ಅರುಣಾ ಅಸಫ್ ಆಲಿ, ಸುಚೇತಾ ಕೃಪಲಾನಿ ಮೊದಲಾದವರ ಜೊತೆಗೆ ಭೂಗತರಾದರು. ಈ ವಿವರಗಳೆಲ್ಲ ಚರಿತ್ರೆಯ ಪುಸ್ತಕಗಳಲ್ಲಿವೆ; ಆದರೆ ಲೋಹಿಯಾರ ಪುಟ್ಟ ತಂಡ ಕಾಂಗ್ರೆಸ್ ರೇಡಿಯೊ ಮೂಲಕ ಆಗಸ್ಟ್ ಕ್ರಾಂತಿಯ ಚೈತನ್ಯವನ್ನು ಕಾಯ್ದಿಟ್ಟುಕೊಂಡು ಚಳವಳಿಯನ್ನು ಮುನ್ನಡೆಸಿದ ರೋಮಾಂಚಕಾರಿ ಸಾಹಸದ ವಿವರಗಳು ಹಿನ್ನೆಲೆಗೆ ಸರಿದುಬಿಟ್ಟಿವೆ; ‘ಡೂ ಆರ್ ಡೈ’ ಘೋಷಣೆ ರೂಪಿಸಿದವರು ಸೋಷಲಿಸ್ಟ್ ಯೂಸುಫ್ ಮೆಹರಾಲಿ ಎಂಬ ಸತ್ಯವೂ ಹುದುಗಿಹೋಗಿದೆ!

‘ಕಾಂಗ್ರೆಸ್ಸಿನ ಮುಂಚೂಣಿ ನಾಯಕರು ಜೈಲಿನಲ್ಲಿರುವಾಗ ಜನ ಹಿಂಸೆಗಿಳಿಯುತ್ತಾರೆ, ಹಿಂಸೆಗಿಳಿದ ತಕ್ಷಣ ಸ್ವಾತಂತ್ರ್ಯ ಚಳವಳಿಯನ್ನು ಬಗ್ಗು ಬಡಿಯುವುದು ಸುಲಭ’ ಎಂದು ಬ್ರಿಟಿಷ್ ಆಡಳಿತವು ಭಾರತೀಯ ಪೊಲೀಸರನ್ನೇ ಭಾರತೀಯರ ಮೇಲೆ ಛೂಬಿಟ್ಟಿತ್ತು. ಜನರನ್ನು ಜೈಲಿಗಟ್ಟಿದ ಮೇಲೆ ಚಳವಳಿಯ ಕತೆ ಮುಗಿಯಿತು ಎಂದುಕೊಂಡಿದ್ದ ಬ್ರಿಟಿಷ್ ಸರ್ಕಾರ ‘ಇದು ಕಾಂಗ್ರೆಸ್ ರೇಡಿಯೊ! ಭಾರತದ ಯಾವುದೋ ಭಾಗದಿಂದ ನಾವು ಮಾತಾಡುತ್ತಿದ್ದೇವೆ! ತರಂಗಾಂತರ 41.42’ ಎಂದು ಬಾನುಲಿಯಲ್ಲಿ ಹೆಣ್ಣು ದನಿಯೊಂದು ಘೋಷಿಸಿದಾಗ ಬೆಚ್ಚಿತು. ಮರುಗಳಿಗೆಗೆ ಗಂಡಿನ ದನಿಯಲ್ಲಿ ಸ್ವಾತಂತ್ರ್ಯ ಚಳವಳಿಗೆ ಮಾರ್ಗದರ್ಶನ, ಬ್ರಿಟಿಷ್ ಹಿಂಸೆಗಳ ವರದಿಗಳು ಬಿತ್ತರವಾಗತೊಡಗಿದವು. ಪ್ರತಿರಾತ್ರಿ 8.30ರ ಸುಮಾರಿಗೆ ಇಕ್ಬಾಲರ ‘ಸಾರೆ ಜಹಾಂ ಸೆ ಅಚ್ಛಾ’ ಹಾಡು ಮೊಳಗುತ್ತಿತ್ತು; ಹಿಂದೂಸ್ತಾನಿ ಅಥವಾ ಇಂಗ್ಲಿಷಿನಲ್ಲಿ ಶುರುವಾಗುತ್ತಿದ್ದ ಪ್ರಸಾರ ‘ವಂದೇ ಮಾತರಂ’ನೊಂದಿಗೆ ಮುಗಿಯುತ್ತಿತ್ತು.

ADVERTISEMENT

ಕಾಂಗ್ರೆಸ್ ರೇಡಿಯೊ, ಫ್ರೀಡಂ ರೇಡಿಯೊ, ಆಜಾದಿ ರೇಡಿಯೊ ಎಂದು ಕರೆಯಲಾಗುತ್ತಿದ್ದ ಈ ರೇಡಿಯೊವನ್ನು ಬ್ರಿಟಿಷ್ ಪೊಲೀಸರು ‘Illegal ಕಾಂಗ್ರೆಸ್ ರೇಡಿಯೊ’ ಎನ್ನುತ್ತಿದ್ದರು! ಈ ಪ್ರಸಾರದ ಕೆಲವು ಮಾದರಿಗಳು ಹೀಗಿದ್ದವು: ‘ಬ್ರಿಟಿಷರು ಸ್ವಾತಂತ್ರ್ಯ ಚಳವಳಿಯನ್ನು ತುಳಿಯಲು ಏನೆಲ್ಲಾ ಮಾಡುತ್ತಿದ್ದಾರೆ. ಆದರೆ ಭಾರತೀಯರು ಜಗ್ಗದೆ ಎದುರಾಳಿಯನ್ನು ಎದುರಿಸುತ್ತಿದ್ದಾರೆ ಹಾಗೂ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಿಡಲೂ ತಯಾರಾಗಿದ್ದಾರೆ ಎಂಬುದು ಬ್ರಿಟಿಷರಿಗೆ ಅರಿವಾಗತೊಡಗಿದೆ... ದಬ್ಬಾಳಿಕೆಯ ಆಳ್ವಿಕೆಯನ್ನು ಮೂಕ ಪ್ರಾಣಿಗಳಂತೆ ಸಹಿಸಲು ಭಾರತೀಯರು ಸಿದ್ಧರಿಲ್ಲ ಎಂಬುದನ್ನು ಚಳವಳಿ ಸಿದ್ಧ ಮಾಡಿ ತೋರಿಸಿದೆ... ಬ್ರಿಟಿಷ್ ಆಡಳಿತ ಕೊನೆಗೊಂಡು ಭಾರತೀಯರ ಆಳ್ವಿಕೆ ಬರುವ ತನಕ ಚಳವಳಿ ಮುಂದುವರಿಯುತ್ತಲೇ ಇರುತ್ತದೆ...’

‘ಹಿಂದೂಗಳು, ಮಹಮ್ಮದೀಯರು, ಕ್ರಿಶ್ಚಿಯನ್ನರು, ಪಾರ್ಸಿಗಳು ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದಾರೆ. ಆದರೆ ಈ ಕಾಲದಲ್ಲಿ ಸುಳ್ಳು ಹೇಳುವುದು ಕಾನೂನುಬದ್ಧವಾಗಿಬಿಟ್ಟಿದೆ! ಉದಾಹರಣೆಗೆ, ‘ಈಗ ಭಾರತೀಯರನ್ನು ಭಾರತೀಯರೇ ಆಳುತ್ತಿದ್ದಾರೆ’ ಎಂದು ಹೇಳಲಾಗುತ್ತಿದೆ; ಇದಕ್ಕಿಂತ ದೊಡ್ಡ ಸುಳ್ಳೆಂದರೆ ‘ಕೆಲವೇ ಮಂದಿ ಮಾತ್ರ ಸ್ವಾತಂತ್ರ್ಯ ಕೇಳುತ್ತಿದ್ದಾರೆ; ಆದರೆ ಒಂಬತ್ತು ಕೋಟಿ ಮಹಮ್ಮದೀಯರು ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದಾರೆ’ ಎನ್ನುವುದು. ಇಂಥ ಸುಳ್ಳನ್ನು ಬ್ರಿಟಿಷರನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಹೇಳಲು ಸಾಧ್ಯವಿಲ್ಲ! ಲಕ್ಷಗಟ್ಟಲೆ, ಕೋಟಿಗಟ್ಟಲೆ ಮುಸ್ಲಿಮರು ನಮಗೆ ಹೆಗಲೆಣೆಯಾಗಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ಬಂದಿದ್ದಾರೆ ಎಂಬುದನ್ನು ಚರಿತ್ರೆ ಸಾರಿ ಹೇಳುತ್ತಿದೆ...’

‘ಚಳವಳಿಗಾರರನ್ನು ಬಂಧಿಸಲು ಪೊಲೀಸ್ ಅಧಿಕಾರಿಯೊಬ್ಬ ಪೊಲೀಸ್ ತಂಡದೊಂದಿಗೆ ಹಳ್ಳಿಯೊಂದಕ್ಕೆ ಬಂದ; ಆದರೆ ಹಳ್ಳಿಯ ಜನ ಅಲ್ಲಿ ಹೇಗೆ ಮುತ್ತಿಕೊಂಡರೆಂದರೆ, ಪೊಲೀಸರು ಕಂಗಾಲಾಗಿ ಯಾರನ್ನೂ ಬಂಧಿಸಲಾಗದೆ ಅಲ್ಲಿಂದ ಹೊರಟರು. ಡಾರ್ಜಿಲಿಂಗ್ ಗೋಲಿಬಾರಿನಲ್ಲಿ ಹಲವರು ಗಾಯಗೊಂಡರು, ಮೂವರು ಮೃತಪಟ್ಟರು. ಭಾರತೀಯರು ಇದನ್ನೆಲ್ಲ ಸಹಿಸುವುದಿಲ್ಲ’.

‘ವಿದೇಶಿ ವಸ್ತುಗಳ ಫ್ಯಾಕ್ಟರಿ, ಕಚೇರಿಗಳೆದುರು ಶಾಂತಿಯುತವಾಗಿ ಪಿಕೆಟಿಂಗ್ ನಡೆಸಿ. ಸರ್ಕಾರಿ ನೌಕರಿ ಬಿಟ್ಟುಬನ್ನಿ. ಮನೆಮನೆಗಳಲ್ಲಿ ಚರಕಾ ಇರಲಿ. ಹಳ್ಳಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ. ಹಿಂದೂ-ಮುಸ್ಲಿಂ ಸಾಮರಸ್ಯ ಕಾಪಾಡಿ’.

ಈ ಪ್ರಸಾರಗಳಲ್ಲಿ ಪತ್ರಿಕೆಗಳಲ್ಲಿ ವರದಿಯಾಗದ ಪೊಲೀಸ್ ಹಿಂಸೆ, ಜನರ ಹೋರಾಟಗಳ ವಿವರಗಳಿರುತ್ತಿದ್ದವು. ಬಾಂಬೆ, ನಾಸಿಕ್, ಕಲ್ಕತ್ತಾದ ಗುಪ್ತ ಕೇಂದ್ರಗಳಿಂದ ಕಾಂಗ್ರೆಸ್ ರೇಡಿಯೊ ಬಿತ್ತರವಾಗುತ್ತಿತ್ತು.

ಬಾಂಬೆ ಬ್ರಿಟಿಷ್ ಸರ್ಕಾರದ ಅಡಿಶನಲ್ ಸೆಕ್ರೆಟರಿ ಎಚ್.ವಿ.ಆರ್. ಅಯ್ಯಂಗಾರ್ ಕಾಂಗ್ರೆಸ್ ರೇಡಿಯೊ ಪ್ರಸಾರಗಳನ್ನು ಕೇಳಿಸಿಕೊಳ್ಳುತ್ತಾ, ಆ ಮಾತುಗಳ ವಿಷಯ, ಭಾಷೆ, ಧೋರಣೆಗಳನ್ನೆಲ್ಲ ‘ಸ್ಟಡಿ’ ಮಾಡುತ್ತಿದ್ದ; ಬ್ರಿಟಿಷ್ ಅಧಿಕಾರಿ ಸ್ಕಾಟ್ ತಯಾರಿಸಿದ ವರದಿಗಳನ್ನೂ ಆಧರಿಸಿ, ‘ಈ ಪ್ರಸಾರದಲ್ಲಿ ಕಾಂಗ್ರೆಸ್ ಸೋಷಲಿಸ್ಟ್ ಫಿಲಾಸಫಿ ಇದೆ; ಭೂಗತವಾಗಿರುವ ಲೋಹಿಯಾ ಈ ಪ್ರಸಾರಗಳ ಹಿನ್ನೆಲೆಯಲ್ಲಿದ್ದಂತಿದೆ’ ಎಂದು ತೀರ್ಮಾನಿಸಿದ. ‘ಸ್ವತಂತ್ರ ಇಂಡಿಯಾ ರೈತರ, ಕಾರ್ಮಿಕರ, ಕೂಲಿಕಾರರದಾಗಿರುತ್ತದೆ’; ‘ಸ್ವಾತಂತ್ರ್ಯಕ್ಕೋಸ್ಕರ ಕ್ರಾಂತಿ ಎಂದರೆ ಬಡವರಿಗಾಗಿ ಕ್ರಾಂತಿ…’ ಇಂಥ ವಾಕ್ಯಗಳನ್ನು ಅಯ್ಯಂಗಾರ್ ಹೆಕ್ಕಿ ತೋರಿಸಿದ. ‘ಇದು ಸೋಷಲಿಸ್ಟರ ಕ್ರಾಂತಿಕಾರಿ ಚಳವಳಿ’ ಎಂದು ಬ್ರಿಟಿಷ್ ಸರ್ಕಾರ ತೀರ್ಮಾನಿಸಿತು.

ಇಂದುಮತಿ ಕೇಳ್ಕರ್ ಬರಹಗಳಲ್ಲಿ, ಗೌತಮ್ ಚಟರ್ಜಿ ಸಂಗ್ರಹಿಸಿದ ಪತ್ರಾಗಾರದ ದಾಖಲೆಗಳಲ್ಲಿ ಈ ಕುರಿತ ಹೆಚ್ಚಿನ ವಿವರಗಳಿವೆ: ರೇಡಿಯೊದ ಐಡಿಯಾ ಕೊಟ್ಟ ಲೋಹಿಯಾ ಹಣಕಾಸನ್ನೂ ಕಲೆ ಹಾಕಿದ್ದರು; ಪ್ರಸಾರಕ್ಕಾಗಿ ವರದಿ, ವಿಶ್ಲೇಷಣೆಗಳನ್ನು ಸಿದ್ಧಪಡಿಸುತ್ತಿದ್ದರು. ವಿಠಲದಾಸ್ ಮಾಧವಜೀ, ಚಂದ್ರಕಾಂತ ಬಾಬುರಾವ್ ಜವೇರಿ ಮೊದಲಾದವರ ಜೊತೆಗೆ 22 ವರ್ಷದ ದಿಟ್ಟ ವಿದ್ಯಾರ್ಥಿನಿ ಉಷಾ ಮೆಹ್ತಾ ‘ಕಾಂಗ್ರೆಸ್ ರೇಡಿಯೊ’ದ ನಿತ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. 90 ದಿನಗಳ ನಂತರ ಈ ಅಲೆಮಾರಿ ರೇಡಿಯೊ ಸ್ಟೇಶನ್ನಿನ ಮೇಲೆ ಪೊಲೀಸರ ದಾಳಿಯಾಯಿತು;ಲೋಹಿಯಾ ಮಾರುವೇಷಗಳಲ್ಲಿ, ಯಾವಯಾವುದೋ ಹೆಸರುಗಳಲ್ಲಿ ದೇಶದ ಯಾವುದೋ ಮೂಲೆಯಲ್ಲಿದ್ದರು. ವಿಠಲದಾಸ್, ಜವೇರಿ, ಉಷಾ ಮೆಹ್ತಾ ಜೈಲು ಶಿಕ್ಷೆಗೊಳಗಾದರು. ಸ್ವತಂತ್ರ ಭಾರತದಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆದ ಉಷಾ ಮೆಹ್ತಾ ಇಂಡಿಯಾದ ಸಾರ್ವಜನಿಕ ಜೀವನದ ಪತನ ಕಂಡು ‘ಇದಕ್ಕಾಗಿ ನಾವು ಅಂದು ಹೋರಾಡಬೇಕಿತ್ತೇ?’ ಎಂದು ನೊಂದು
ಕೊಳ್ಳುತ್ತಿದ್ದರು; 2010ರಲ್ಲಿ ತೀರಿಕೊಂಡರು.

ಈ ಸಲವೂ ಎಂದಿನಂತೆ ಕ್ವಿಟ್ ಇಂಡಿಯಾ ಚಳವಳಿಯ ಯಾಂತ್ರಿಕ ಆಚರಣೆಗಳು ನಡೆಯಲಿವೆ; ಈ ಚಳವಳಿಯ ವಾರಸುದಾರರು ತಾವೇ ಎಂದು ಬಣ್ಣಿಸಿಕೊಳ್ಳುವ ಬೂಟಾಟಿಕೆ ದಾಸರೂ ಮೆರೆಯಲಿದ್ದಾರೆ. ಈ ಅಬ್ಬರಗಳ ನಡುವೆ, ನಿಜಕ್ಕೂ ಕ್ವಿಟ್ ಇಂಡಿಯಾ ಚಳವಳಿಯನ್ನು ಮುನ್ನಡೆಸಿದ ಅಜ್ಞಾತ ಗುಂಪುಗಳು; ಪೊಲೀಸರ ಹಿಂಸೆಗೆ ಬಲಿಯಾದ ಜನರ ತ್ಯಾಗ; ರಾತ್ರೋರಾತ್ರಿ ಕರಪತ್ರಗಳನ್ನು ಹಂಚುತ್ತಿದ್ದ ನಿರ್ಭೀತ ತರುಣ ತರುಣಿಯರು; ಭೂಗತ ಬಾನುಲಿಯ ಮೂಲಕ ದೇಶವನ್ನು ಎಚ್ಚರದಲ್ಲಿಟ್ಟ ಧೀರರು… ಇಂಥ ಸ್ಫೂರ್ತಿದಾಯಕ ಸತ್ಯಗಳು ಕಣ್ಮರೆಯಾಗಬಾರದು. ಜಗತ್ತಿನ ಸ್ವಾತಂತ್ರ್ಯ ಹೋರಾಟಗಳ ಚರಿತ್ರೆಯಲ್ಲೇ ಅನನ್ಯವಾದ ‘ಕ್ವಿಟ್ ಇಂಡಿಯಾ’ ಚಳವಳಿ ನಮ್ಮ ನಾಯಕರು ಹಾಗೂ ಜನಸಾಮಾನ್ಯರು ತ್ಯಾಗ, ಬಲಿದಾನಗಳ ಮೂಲಕ ಗಳಿಸಿಕೊಟ್ಟಿರುವ ಸ್ವಾತಂತ್ರ್ಯ ಎಷ್ಟು ಅಮೂಲ್ಯವಾದುದು, ಯಾಕೆ ಅದನ್ನು ನಾವು ರಕ್ಷಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ ಎಂಬುದನ್ನು ಎಲ್ಲರಿಗೂ ನೆನಪು ಮಾಡುತ್ತಿರಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.