ಕೆಲವು ವರ್ಷಗಳ ಹಿಂದೆ ಹೋರಾಟಗಾರರೊಬ್ಬರು ಗ್ರಾನೈಟ್ ದಂಧೆಯ ವಿರುದ್ಧ ಹೋರಾಟಕ್ಕಿಳಿದಿದ್ದರು. ಪರಿಹಾರ ಸಿಗದಿದ್ದಾಗ ಎತ್ತರದ ಮರ ಏರಿ ಕುಳಿತುಬಿಟ್ಟಿದ್ದರು. ನಾನು ಸೇರಿದಂತೆ ಉಳಿದವರು, ಅಧಿಕಾರಿಗಳು, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಆತ ಕೆಳಗೆ ಇಳಿಯಲು ಒಪ್ಪಿರಲಿಲ್ಲ. ಕೊನೆಗೆ ನನಗೆ ಹೊಳೆದದ್ದು ದೊರೆಸ್ವಾಮಿ. ಬಹುಶಃ ಅವರ ಮಾತಿಗೆ ಮನ್ನಣೆ ನೀಡಬಹುದು ಎಂದು ತಕ್ಷಣ ಅವರ ಮನೆಗೆ ಧಾವಿಸಿದೆ.
ಆರೋಗ್ಯ ಸರಿ ಇಲ್ಲದೇ ಮಲಗಿದ್ದ ಅವರು ನನ್ನ ನೋಡಿ ಎದ್ದು ಕುಳಿತರು. ಇಂತಹ ಸಮಯದಲ್ಲಿ ಅವರನ್ನು ಕರೆದುಕೊಂಡು ಹೋಗುವುದು ಬೇಡ ಎಂದು ನಿರ್ಧರಿಸಿದೆ. ಒತ್ತಾಯ ಮಾಡಿದಾಗ ವಿಷಯ ಹೇಳಿದೆ. ತಕ್ಷಣ ಪತ್ನಿಯ ಬಳಿ ಸ್ವಲ್ಪ ಮೊಸರನ್ನು ತರಿಸಿಕೊಂಡು ತಿಂದು, ಅಂಗಿ ಹಾಕಿಕೊಂಡು ಹೊರಟೇ ಬಿಟ್ಟರು. ನಮ್ಮನ್ನು ಸತಾಯಿಸಿದ್ದ ನಮ್ಮ ಹೋರಾಟಗಾರ ಅವರು ಬರುತ್ತಿದ್ದಂತೆ ಮರು ಮಾತನಾಡದೇ ಕೆಳಗೆ ಇಳಿದು ಬಂದ. ಅದು ದೊರೆಸ್ವಾಮಿ ಅವರ ತಾಕತ್ತು.
ಹೋರಾಟಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅವರ ಸಲಹೆ ಎಂದೂ ತಳ್ಳಿಹಾಕಿಲ್ಲ. ಅವರಿದ್ದಾರೆ ಎಂದರೆ ಅದೇನೋ ಆನೆಬಲ. ಅವರ ಮಾತು ಅಷ್ಟೆ ತೂಕ. ಅವರ ಜತೆ ಹಲವು ಹೋರಾಟಗಳಲ್ಲದೆ ಮಂತ್ರಮಾಂಗಲ್ಯ, ಪುಸ್ತಕ ಬಿಡುಗಡೆಗೆ ಜತೆಯಾಗಿದ್ದೆ. ಬೆಂಗಳೂರಿಗೆ ಹೋದರೆ ಅವರ ಮನೆಯಲ್ಲೇ ಉಳಿಯುತ್ತಿದ್ದೆವು. ಪತ್ನಿ ಹೋದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು. ಅವರಿಲ್ಲದ ನಮ್ಮ ಹೋರಾಟ ಕಲ್ಪಿಸಿಕೊಳ್ಳಲೂ ಆಗದು. ಅಂಥವರು ಇಂದಿನ ಕಾಲಘಟ್ಟದಲ್ಲಿ ಅಪರೂಪ. ಭದ್ರಾವತಿ ತಾಲ್ಲೂಕಿನ ಭಗವತಿ ಕೆರೆಯ ನಮ್ಮ ಮನೆಗೆ ಪ್ರತಿಸಾರಿ ಕರೆದಾಗಲೂ ಮತ್ತೊಮ್ಮೆ ಬರುವೆ ಎನ್ನುತ್ತಿದ್ದರು. ಕೊನೆಗೂ ‘ದೊರೆ’ ಬರಲಿಲ್ಲ. ಆ ಕೊರಗು ಕೊನೆಯವರೆಗೂ ಉಳಿಯಲಿದೆ.
-ಕಡಿದಾಳು ಶಾಮಣ್ಣ, ರೈತ
ಇವನ್ನೂ ಓದಿ
*ಎಚ್.ಎಸ್. ದೊರೆಸ್ವಾಮಿ: ಧರೆಯ ಮಡಿಲಿಗೆ ಹೋರಾಟದ ದೊರೆ
*ನುಡಿ-ನಮನ: ಹೋರಾಟನಿರತರ ಬೆಸೆಯುುವ ಚುಂಬಕ ಶಕ್ತಿ
*ನುಡಿ ನಮನ: ತಾತನ ಸರಳತೆಯೇ ನಮಗೆ ಶಿಕ್ಷಣ -ಮೀನಾಕ್ಷಿ ಶೇಷಾದ್ರಿ
*ನುಡಿ ನಮನ: ಯಾರನ್ನೂ ಮೆಚ್ಚಿಸುವ ಕೆಲಸ ಮಾಡುತ್ತಿರಲಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.