ಮದ್ರಾಸ್‌ಗೆ ಹೋಗಿ ಮೇಕಪ್ ಟೆಸ್ಟ್ ಕೊಟ್ಟು ಬಂದಿದ್ದ ಮುತ್ತುರಾಜ್ ಅವರಿಗೆ ಅದಾಗಲೇ ಮದುವೆ ಆಗಿತ್ತು. ರಂಗಭೂಮಿಯಲ್ಲಿ ಹುಟ್ಟುತ್ತಿದ್ದ ಚಿಕ್ಕಾಸಿನಿಂದ ಸಂಸಾರದ ರಥ ಎಳೆಯುವುದು ಹೇಗೋ ಎಂಬ ಪ್ರಶ್ನೆ. ಮೇಕಪ್ ಟೆಸ್ಟ್ ಕೊಟ್ಟು ಬಂದು, ದಿನಗಳು ಉರುಳಿದರೂ ಅತ್ತಣಿಂದ ಏನೂ ಸಂದೇಶವಿಲ್ಲ. ನಿತ್ಯವೂ ಅಂಚೆಯ ಅಣ್ಣನಿಗಾಗಿ ಕಾಯುವುದೇ ಬಂತು. ಅದೊಂದು ದಿನ ಅವರು ಎಲ್ಲ ಕಷ್ಟಗಳನ್ನು ಕರಗಿಸುವ ಏನಾದರೊಂದು ಆಗಬಾರದೇ ಎಂದುಕೊಂಡು, ಮನಸ್ಸಿನ ತುಂಬಾ ನಿರೀಕ್ಷೆಯ ಹುಳುಗಳನ್ನು ಬಿಟ್ಟುಕೊಂಡು ಅಭ್ಯಂಜನ ಮಾಡುತ್ತಿದ್ದರು. ಆಗ ಹೊರಗಿನಿಂದ ಅಂಚೆಯ ಅಣ್ಣನ ಕೂಗು. ಮೇಕಪ್ ಟೆಸ್ಟ್ ಹಣ್ಣಾದ ರಸಗಳಿಗೆ ಅದು. ಅಂದು ಚಾತಕಪಕ್ಷಿಯಾಗಿದ್ದ ಮುತ್ತುರಾಜ್, ಮುಂದೆ ವರನಟ ಎಂಬ ವಿಶೇಷಣ ಗಳಿಸಿಕೊಂಡ ಶ್ರಮದ ಕಥನ ನಮ್ಮ ಕಣ್ಣೆದುರಲ್ಲಿದೆ.
ಸ್ವಾತಂತ್ರ್ಯಾನಂತರದ ಏಳು ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಒದಗಿಬಂದ ಮುತ್ತು ರಾಜಕುಮಾರ್. ಮೈಸೂರು ರಾಜ್ಯವು ಕರ್ನಾಟಕ ಎಂದು ಹೆಸರಾಗುವ ಹೊತ್ತಿಗೆ ಈ ನಟ ಚಿತ್ರರಂಗಕ್ಕೆ ಕೊಟ್ಟಿದ್ದ ಸ್ಮರಣೀಯ ಸಿನಿಮಾಗಳ ಪಟ್ಟಿ ಬೆಳೆದಿತ್ತು. ‘ಬೇಡರ ಕಣ್ಣಪ್ಪ’ನಾಗಿ ಪ್ರವೇಶಿಸಿದ್ದ ರಾಜಕುಮಾರ್, ‘ಬಂಗಾರದ ಮನುಷ್ಯ’ನಾಗಿ ಕಟ್ಟಿಕೊಟ್ಟ ಒಕ್ಕಲುತನದ ಗಟ್ಟಿ ತೆನೆ ತೂಗಿದ್ದು 1972ರಲ್ಲಿ. ನಿರ್ದೇಶಕ ಎಸ್.ಸಿದ್ದಲಿಂಗಯ್ಯನವರ ಸಾಮಾಜಿಕ ಸೂಕ್ಷ್ಮದ ರುಜು ಇದ್ದ ಈ ಸಿನಿಮಾ ನೋಡಿ ಉಳುವ ಯೋಗಿಗಳಾಗಲು ಹೊರಟ ಪದವೀಧರರ ಸಂಖ್ಯೆ ದೊಡ್ಡದಿತ್ತು. ಕನ್ನಡ ಸಂಸ್ಕೃತಿಯ ‘ಐಕಾನ್’ ಆಗಿ ರಾಜಕುಮಾರ್ ಅವರಿತ್ತ ಪ್ರಭಾವಳಿಯಲ್ಲಿಯೇ ಇಡೀ ಕನ್ನಡ ಚಿತ್ರರಂಗವನ್ನು ‘ಸುವರ್ಣ ಕರ್ನಾಟಕ’ದ ಸಂದರ್ಭದಲ್ಲಿ ನಾವು ನೋಡಬೇಕಿದೆ.
1970–80ರ ದಶಕದಲ್ಲಿ ತಾರಾ ನಟರಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರ್‌ನಾಗ್ ಎಲ್ಲರೂ ವರ್ಷಕ್ಕೆ ಏಳೆಂಟು ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಅವುಗಳಲ್ಲಿ ಬಹುತೇಕವು ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯೂ ಆಗುತ್ತಿದ್ದವು. ಶಂಕರ್‌ನಾಗ್ ಮೂರು ಶಿಫ್ಟ್‌ಗಳಲ್ಲಿ ಅಭಿನಯಿಸುತ್ತಿದ್ದುದೇ ಅಲ್ಲದೆ, ಮಹತ್ವಾಕಾಂಕ್ಷಿ ನಿರ್ದೇಶಕರೂ ಆಗಿದ್ದರು. ಶಿವರಾಜಕುಮಾರ್ ಅವರ ಆರಂಭದ ದಿನಗಳೂ ಹಾಗೆಯೇ ಇದ್ದವು. ರವಿಚಂದ್ರನ್, ಜಗ್ಗೇಶ್, ರಾಘವೇಂದ್ರ ರಾಜಕುಮಾರ್, ರಮೇಶ್, ಸುನಿಲ್, ಶಶಿಕುಮಾರ್, ಸುದೀಪ್, ದರ್ಶನ್, ಉಪೇಂದ್ರ, ಪುನೀತ್ ರಾಜಕುಮಾರ್, ವಿಜಯ್ ರಾಘವೇಂದ್ರ, ಗಣೇಶ್, ದುನಿಯಾ ವಿಜಯ್, ಶ್ರೀಮುರಳಿ, ದಿಗಂತ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಡಾಲಿ ಧನಂಜಯ... ಈ ನಟರು ಏಕಕಾಲದಲ್ಲಿ ತೊಡಗುತ್ತಿರುವ ಸಿನಿಮಾಗಳ ಸಂಖ್ಯೆಯನ್ನು ಹಳೆಯ ತಾರಾನಟರ ಜೊತೆಗೆ ಹೋಲಿಸಲು ಸಾಧ್ಯವೇ ಇಲ್ಲ. ಪುನೀತ್ ಅವರು ಒಮ್ಮೆಗೆ ಒಂದೇ ಸಿನಿಮಾ ಎನ್ನುವ ಬದ್ಧತೆಯನ್ನು ತಮ್ಮದಾಗಿಸಿಕೊಂಡಿದ್ದರು.
‘ಕೆಜಿಎಫ್’ ಸರಣಿ ಸಿನಿಮಾಗಳಿಂದ ನಟ ಯಶ್ ಪ್ಯಾನ್–ಇಂಡಿಯಾ ಎನ್ನುವ ಮಾದರಿಯನ್ನು ತೇಲಿಬಿಟ್ಟ ನಂತರ ಚಿತ್ರ ನಿರ್ಮಾಪಕರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಕಾರ್ಪೊರೇಟ್–ಕಂಪನಿ ಸಂಸ್ಕೃತಿಯ ರೀತಿಯಲ್ಲಿ ದೊಡ್ಡ ಬಜೆಟ್‌ನ ಚಿತ್ರಗಳದ್ದು ಈಗ ಪ್ರತ್ಯೇಕ ಪ್ರಭೇದ. ಕನ್ನಡ ಚಿತ್ರಗಳನ್ನು ಮೂಸದ ಒಟಿಟಿ ವೇದಿಕೆಗಳಿಗೆ ಶಾಪ ಹಾಕುತ್ತಲೇ, ಹೊಸ ಪ್ರಯತ್ನಗಳನ್ನು ಬೆಂಬಲಿಸಲು ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲವಲ್ಲ ಎಂಬ ನಿಟ್ಟುಸಿರನ್ನೂ ಅನೇಕ ಉತ್ಸಾಹಿಗಳು ದಾಟಿಸುತ್ತಿರುವ ಹೊತ್ತಿದು.
ಗತದಿಂದ ಈ ಪಥದವರೆಗೆ...
ಗುಬ್ಬಿ ವೀರಣ್ಣ, ಆರ್.ನಾಗೇಂದ್ರ ರಾವ್, ಸುಬ್ಬಯ್ಯ ನಾಯ್ಡು, ಬಿ.ಆರ್.ಪಂತುಲು ಅವರಂತಹ ದಿಗ್ಗಜರು ಹಾಕಿಕೊಟ್ಟ ಬುನಾದಿಯ ಮೇಲೆ ರಾಜಕುಮಾರ್ ಅವರದ್ದಷ್ಟೇ ಅಲ್ಲ, ಉದಯಕುಮಾರ್, ಕಲ್ಯಾಣಕುಮಾರ್, ನರಸಿಂಹರಾಜು, ಟಿ.ಎನ್. ಬಾಲಕೃಷ್ಣ ತರಹದ ಪ್ರತಿಭಾವಂತ ನಟರ ಯಶೋ ಮೆರವಣಿಗೆ ನಡೆದಿತ್ತು. ಜಿ.ವಿ. ಅಯ್ಯರ್, ಪುಟ್ಟಣ್ಣ ಕಣಗಾಲ್, ದೊರೈ–ಭಗವಾನ್ ರೀತಿಯ ಭಿನ್ನ ಜಾಯಮಾನದ ಸಿನಿಮಾಗಳನ್ನು ಕೊಡಬಲ್ಲ ಮನಸ್ಸುಗಳು ಅರಳಿದ್ದಾಗಿತ್ತು. ‘ನಾಂದಿ’ ಚಿತ್ರದ ಮೂಲಕ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ 1964ರಲ್ಲಿಯೇ ಹೊಸ ಅಲೆಯ ಚಿತ್ರಗಳ ಫಸಲಿಗೆ ಕಾರಣವಾಗಬಲ್ಲ ಬೀಜ ಚೆಲ್ಲಿದ್ದರು.1970ರ ಹೊತ್ತಿಗೆ ‘ಸಂಸ್ಕಾರ’ ಚಿತ್ರವು ಹೊಸ ಅಲೆಯ ಉಬ್ಬರಕ್ಕೆ ಮುನ್ನುಡಿಯಾಯಿತು.
ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ‘ಸಂಸ್ಕಾರ’ ಯು.ಆರ್. ಅನಂತಮೂರ್ತಿ ಅವರ ಕಥೆಯನ್ನು ಆಧರಿಸಿತ್ತು. ಕನ್ನಡಕ್ಕೆ ಮೊದಲ ಸ್ವರ್ಣ ಕಮಲವನ್ನು ಈ ಸಿನಿಮಾ ತಂದು ಕೊಟ್ಟಿತು. ‘ವಂಶವೃಕ್ಷ’, ‘ಚೋಮನ ದುಡಿ’, ‘ಘಟಶ್ರಾದ್ಧ’, ‘ಅಬಚೂರಿನ ಪೋಸ್ಟಾಫೀಸು’, ‘ಸಂಕಲ್ಪ’ ಇವೆಲ್ಲವೂ ಹೊಸ ಅಲೆಯ ಮೂಲಕ ದಕ್ಕಿದ ಸ್ಮರಣೀಯ ಚಿತ್ರಗಳು. ಆಮೇಲೆ ಇದೇ ನೆಲೆಗಟ್ಟಿನಲ್ಲಿ ಗಿರೀಶ ಕಾಸರವಳ್ಳಿಯವರು ತಮ್ಮದೇ ವೈಯಾಕರಣದ ಭಿನ್ನ ಚಿತ್ರಗಳನ್ನು ಕಾಣ್ಕೆಯಾಗಿ ಕೊಟ್ಟರು. ‘ಘಟಶ್ರಾದ್ಧ’ ಅವರ ಮೊದಲ ಚಿತ್ರವಾದರೂ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಅವರ ನಿರ್ದೇಶನದ ‘ತಬರನ ಕಥೆ’, ‘ತಾಯಿಸಾಹೇಬ’, ‘ದ್ವೀಪ’, ‘ಹಸೀನಾ’, ‘ಗುಲಾಬಿ ಟಾಕೀಸ್’ ‘ಕನಸೆಂಬೋ ಕುದುರೆಯನೇರಿ’, ‘ಕೂರ್ಮಾವತಾರ’ ಇವುಗಳೆಲ್ಲ ಕಥಾವೈವಿಧ್ಯ ಅಷ್ಟೇ ಅಲ್ಲದೆ ನಿರೂಪಣಾ ತಂತ್ರ, ಹಲವು ಕನ್ನಡಗಳ ಪ್ರಯೋಗಗಳಿಗೂ ಸಾಕ್ಷ್ಯಗಳಾಗಿ ಉಳಿದಿವೆ. ನಾಲ್ಕು ‘ಸ್ವರ್ಣ ಕಮಲ’ಗಳನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟ ಪ್ರತಿಭೆ ಅವರು. ಪಿ.ಲಂಕೇಶ್, ಟಿ.ಎನ್. ಸೀತಾರಾಂ, ಕೋಟಿಗಾನಹಳ್ಳಿ ರಾಮಯ್ಯ ಅವರಂತಹ ಸಾಹಿತಿಗಳಿಗೂ ಸಿನಿಮಾ ನಂಟು ಸಂದುದು ಈ ಮಾಧ್ಯಮದ ಚುಂಬಕಶಕ್ತಿಗೆ ಸಾಕ್ಷಿ.
ಬಿ.ವಿ. ಕಾರಂತರ ‘ಚೋಮನದುಡಿ’ ಪಾತ್ರಧಾರಿ ವಾಸುದೇವ ರಾವ್ ಅವರಿಗೆ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಸಂದಿತು. ಅದಾದಮೇಲೆ ‘ತಬರನ ಕಥೆ’ಯ ನಟನೆಗಾಗಿ ಚಾರುಹಾಸನ್, ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ‘ಸಂಚಾರಿ’ ವಿಜಯ್ ಹಾಗೂ ‘ಕಾಂತಾರ’ ನಟನೆಗಾಗಿ ರಿಷಬ್ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾದರು.
ಕಾಸರವಳ್ಳಿಯವರಿಂದ ಸ್ಫೂರ್ತಿ ಪಡೆದೂ ತಮ್ಮತನದ ಸಿನಿಮಾಗಳನ್ನು ಮಾಡಿದ ಪಿ. ಶೇಷಾದ್ರಿ, ಬಿ.ಎಸ್. ಲಿಂಗದೇವರು ಕೂಡ ಹೊಸತೇ ಉದಾಹರಣೆಗಳನ್ನು ಉಳಿಸಿದ್ದಾರೆ. ಸಾಮಾಜಿಕ ಸಂದೇಶದ ಮಾಧ್ಯಮವನ್ನಾಗಿ ಜನಪ್ರಿಯ ಸಿನಿಮಾ ಹಾಗೂ ಪರ್ಯಾಯ ಸಿನಿಮಾ ಎರಡನ್ನೂ ದುಡಿಸಿಕೊಂಡು ಅದನ್ನು ‘ಬ್ರಿಜ್’ ಪ್ರಕಾರ ಎಂದೇ ಕರೆದವರು ಬರಗೂರು ರಾಮಚಂದ್ರಪ್ಪ. ತಾಲ್ಲೂಕು ಮಟ್ಟದಲ್ಲಿ ತಮ್ಮ ಚಿತ್ರಗಳ ಪ್ರದರ್ಶನ ಆಯೋಜಿಸುವಂತಹ ಪ್ರಯೋಗಕ್ಕೂ ಅವರು ನೀರೆರೆದರು.
‘ನಾಗಮಂಡಲ’, ‘ಮೈಸೂರು ಮಲ್ಲಿಗೆ’, ‘ಜನುಮದ ಜೋಡಿ’ ರೀತಿಯ ಸಿನಿ ಹೂಗಳನ್ನು ಕಟ್ಟಿದ ಟಿ.ಎಸ್. ನಾಗಾಭರಣ ಅವರದ್ದು ಇನ್ನೊಂದು ಫಾರ್ಮ್. ನಾಗತಿಹಳ್ಳಿ ಚಂದ್ರಶೇಖರ್ ‘ಅಮೆರಿಕ ಅಮೆರಿಕ’ ರೀತಿಯ ಸಾಗರದಾಚೆಗೆ ಹೋಗಿ ಚಿತ್ರೀಕರಣ ನಡೆಸುವ ಸಾಹಸವನ್ನು ಮೈಮೇಲೆ ಎಳೆದುಕೊಂಡರು. ಉಮಾಶಂಕರ ಸ್ವಾಮಿ,
ಕೆ. ಶಿವರುದ್ರಯ್ಯ, ರಾಮ್ ರೆಡ್ಡಿ, ಸತ್ಯಪ್ರಕಾಶ್, ಅಭಯಸಿಂಹ, ಮಂಸೋರೆ, ನಟೇಶ್ ಹೆಗಡೆ, ಉತ್ಸವ್ ಗೋನವಾರ್, ಪೃಥ್ವಿ ಕೊಣನೂರು ಇವರೆಲ್ಲ ಆಯಾ ಕಾಲಘಟ್ಟದಲ್ಲಿ ನೆನಪಿನಲ್ಲಿ ಇಡುವಂತಹ ಸಿನಿಪ್ರಯೋಗಗಳಿಗೆ ಕೈಹಾಕಿದವರು.
ರಾಜಕುಮಾರ್ ಅದಾಗಲೇ ಭೂಮಿಕೆಯ ರೂಪದಲ್ಲಿ ಹಾಕಿಕೊಟ್ಟಿದ್ದ ಜನಪ್ರಿಯ ಸಿನಿಮಾ ಮಾದರಿಯಲ್ಲಿಯೇ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಭಾರ್ಗವ, ಜಿ.ರಾಜಶೇಖರ್, ಗೀತಪ್ರಿಯ, ಎಸ್.ನಾರಾಯಣ್, ರಾಜೇಂದ್ರ ಬಾಬು, ವಿಜಯ್ ಅವರಂತಹ ನಿರ್ದೇಶಕರು ಛಾಪು ಮೂಡಿಸಿದರು.
ನಟ–ತಂತ್ರಜ್ಞರ ಹುಲ್ಲುಗಾವಲು
ರವಿಚಂದ್ರನ್ ಕನ್ನಡ ಚಿತ್ರರಂಗದ ತಾಂತ್ರಿಕ ಶ್ರೀಮಂತಿಕೆಗೆ ‘ಪ್ರೇಮಲೋಕ’, ‘ರಣಧೀರ’ ಮೂಲಕ ಕಾಣ್ಕೆ ನೀಡಿದರೆ, ಜಗ್ಗೇಶ್ ನಗೆರುಜುವಿನ ಮೂಲಕ ಗುರುತಾದರು. ಶಿವರಾಜಕುಮಾರ್ ಪಥದಲ್ಲಿಯೇ ಹೆಜ್ಜೆ ಹಾಕಿದ ಸುದೀಪ್, ದರ್ಶನ್ ಕನ್ನಡ ಸಿನಿಮಾಗಳಲ್ಲಿ ತೆಲುಗಿನ ಜಾಯಮಾನದ ರೌಡಿಸಂ ಸಿನಿಮಾಗಳ ಪ್ರಭೇದದ ಪರೀಕ್ಷೆಗೂ ಒಡ್ಡಿಕೊಂಡರು. ಸುದೀಪ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಿರ್ದೇಶನಕ್ಕೂ ಇಳಿದು ಪ್ರಯೋಗಮುಖಿ ಆದರು. ನಟ ದುನಿಯಾ ವಿಜಯ್ ಕೂಡ ನಿರ್ದೇಶಕನಾಗಿ ಎರಡು ಗೆಲುವುಗಳನ್ನು ದಾಖಲಿಸಿದ್ದಾರೆ.
ಬೇರೆ ಚಿತ್ರರಂಗದವರಿಗೂ ಕನ್ನಡ ಸಿನಿಮಾ ಪ್ರಯೋಗಶಾಲೆಯಾಗಿದ್ದಕ್ಕೆ ಕೆಲವು ಉದಾಹರಣೆಗಳಿವೆ.
ಕೆ. ಬಾಲಚಂದರ್, ಸಿಂಗೀತಂ ಶ್ರೀನಿವಾಸ್, ಪೂರಿ ಜಗನ್ನಾಥ್ ಇದಕ್ಕೆ ಕೆಲವು ಉದಾಹರಣೆಗಳಷ್ಟೆ.
ಹೊಸ ಸಹಸ್ರಮಾನದಲ್ಲಿ ‘ಮುಂಗಾರು ಮಳೆ’ ಸುರಿಯಿತು. ನಿರ್ದೇಶಕ–ಚಿತ್ರ ಸಾಹಿತಿ ಯೋಗರಾಜ ಭಟ್ಟರು ಮಧುರಕಾವ್ಯವನ್ನೂ, ತ್ಯಾಗರಾಜನಂತಹ ನಾಯಕನ ಹುಟ್ಟಿಗೆ ಕಾರಣವಾದ ಬರವಣಿಗೆಯನ್ನೂ ಮೂಡಿಸಿದರು. ನಿರ್ದೇಶಕ ಸೂರಿ ‘ದುನಿಯಾ’ದಂತಹ ಕಚ್ಚಾ ಮಾದರಿಯ ಸಿನಿಮಾದಿಂದ ತಮ್ಮದೇ ವ್ಯಾಕರಣವೊಂದನ್ನು ಮೂಡಿಸಿದರು. ರಂಗಕರ್ಮಿ ಸೂರಿ ಜೊತೆಗೂಡಿ ಅವರು ಕೆಲವು ಚಿತ್ರಗಳ ಬರವಣಿಗೆಯ ಪ್ರಯೋಗ ಮಾಡಿದ್ದು ಇನ್ನೊಂದು ಗಮನಾರ್ಹ ಅಂಶ. ನಿರ್ದೇಶಕ ಶಶಾಂಕ್ ಕೂಡ ಸ್ತ್ರೀ ಪಾತ್ರಗಳಿಗೆ ಜೀವ ತುಂಬಿ ಕೆಲವು ಚಿತ್ರಗಳನ್ನು ಕೊಟ್ಟರು. ಹೊಸತನವನ್ನು ಅನುಭವಿಸುವ ಜಾಯಮಾನದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಒಂದು ರೀತಿಯಲ್ಲಿ ಮುಷ್ಟಿಗೆ ಸುರಿದ ತಾರೆಗಳ ಬೆಳಕನ್ನು ಹೊತ್ತು ಇದೀಗ ಮುನ್ನಡೆಯುತ್ತಿದ್ದಾರೆ.
ಬಗೆ ಬಗೆ ಸಂವೇದನೆ
ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಹೊಸತನದ ಚುಚ್ಚುಮದ್ದನ್ನು ಕೊಟ್ಟವರಲ್ಲಿ ಮುಖ್ಯರಾದವರು. ಬೇರೆ ಬಗೆಯ ಸಂವೇದನೆಯನ್ನು, ತಾಂತ್ರಿಕ ಪರಿಭಾಷೆಯನ್ನು ಅವರು ಚಿತ್ರರಂಗಕ್ಕೆ ನೆಲದನಿಯ ಸಹಿತ ತಂದರು. ಪ್ರೇಮ್, ಆರ್. ಚಂದ್ರು, ಕೆ.ಎಂ.ಚೈತನ್ಯ, ಜಯತೀರ್ಥ, ತರುಣ್ ಸುಧೀರ್, ಹೇಮಂತ್ ಎಂ. ರಾವ್, ನೂತನ್, ಶಶಾಂಕ್ ಸೋಗಲ್ ಮೊದಲಾದ ನಿರ್ದೇಶಕರು ಕನಸುಗಳನ್ನು ಮಾರಲು ಈಗಲೂ ಸಿನಿಮಾ ಮಾರುಕಟ್ಟೆಯಲ್ಲಿ ನಿಂತಿದ್ದಾರೆ.
ಸಿನಿಮಾ ಅಭಿನಯದಲ್ಲಿ ಛಾಪು ಮೂಡಿಸಿದ ನಟಿಯರ ಯಾದಿ ದೊಡ್ಡದಿದೆ. ಬಿ.ಸರೋಜಾದೇವಿ, ಲೀಲಾವತಿ, ಭಾರತಿ, ಕಲ್ಪನಾ, ಲಕ್ಷ್ಮೀ, ಆರತಿ, ಜಯಮಾಲಾ, ಸುಧಾರಾಣಿ, ಶ್ರುತಿ, ಮಾಲಾಶ್ರೀ, ಸೌಂದರ್ಯ, ಪ್ರೇಮಾ, ಉಮಾಶ್ರೀ, ರಾಧಿಕಾ ಪಂಡಿತ್ ಅವರಿಂದ ಈಗಿನ ಆಶಿಕಾ ರಂಗನಾಥ್, ಅದಿತಿ ಪ್ರಭುದೇವ, ರಚಿತಾ ರಾಮ್, ಚೈತ್ರಾ ರಾವ್, ರುಕ್ಮಿಣಿ ವಸಂತ್ ಅವರವರೆಗೆ ಈ ಕ್ಷೇತ್ರದಲ್ಲಿ ಹೊಳೆದ ತಾರೆಗಳು ಕಾಣುತ್ತವೆ. ಆದರೆ, ನಿರ್ದೇಶನದ ಕುರ್ಚಿ ಮೇಲೆ ಕುಳಿತವರು ಬೆರಳೆಣಿಕೆಯಷ್ಟು. ಪ್ರೇಮಾ ಕಾರಂತ ಅವರು ‘ಫಣಿಯಮ್ಮ’ ಸಿನಿಮಾ ನಿರ್ದೇಶಿಸಿದರು. ಹೊಸಕಾಲದಲ್ಲಿ ವಿಜಯಲಕ್ಷ್ಮಿ ಸಿಂಗ್, ಸುಮನ್ ಕಿತ್ತೂರು, ಚಂಪಾ ಶೆಟ್ಟಿ, ರೂಪಾ ರಾವ್, ಸಿಂಧು ಶ್ರೀನಿವಾಸಮೂರ್ತಿ ಅವರಂತಹ ಕೆಲವರು ನಿರ್ದೇಶನದ ಹೊಣೆಗಾರಿಕೆ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.