ಹಳಗನ್ನಡವನ್ನು ಪಂಪ ಈ ರೀತಿ ನಿರ್ವಚಿಸಿದ್ದಾನೆ: ‘ಹಳಗನ್ನಡವನ್ನು ಅನುಸಂಧಾನ ಮಾಡುವವನ ಆಲೋಚನೆ ಹೊಸದಾಗಿರಬೇಕು, ಅಂತಹ ಹೊಸ ಆಲೋಚನೆ ಮೃದುವಾದ ಶಬ್ದಗಳಿಂದ ಕೂಡಿರಬೇಕು. ಹಾಗೆ ಕೂಡಿರುವ ಶಬ್ದ ಜೋಡಣೆ ದೇಸಿ ಅಥವಾ ಅಚ್ಚ ಗನ್ನಡದ್ದಾಗಿರಬೇಕು, ಈ ಅಚ್ಚಗನ್ನಡವು ಮಾರ್ಗವನ್ನು, ಅಂದರೆ ಸಂಸ್ಕೃತವನ್ನೂ ತನ್ನಲ್ಲಿ ಒಳಗೊಂಡಿರಬೇಕು. ಹೀಗೆ ದೇಸಿ- ಮಾರ್ಗಗಳೆರಡನ್ನೂ ಒಳಗೊಂಡ ಕಾವ್ಯಬಂಧ ವಸಂತಮಾಸದ ವೈಭವವನ್ನು ನೆನಪಿಸುತ್ತದೆ. ವಸಂತದಲ್ಲಿ ಅರಳುವ ಮಾವಿನ ಕೆಂದಳಿರಿಗೆ ದುಂಬಿಗಳೂ ಹಾಗೆಯೇ ಕೋಗಿಲೆಗಳೂ ಮುತ್ತಿ ಸೊಗಸನ್ನು ಉಂಟು ಮಾಡುವಂತೆ ದೇಸಿ- ಮಾರ್ಗಗಳೆರಡೂ ಕೂಡಿದಾಗ ಸೊಗಸು ಮೂಡುತ್ತದೆ’ (ಪಂಪಭಾರತಂ 1–8).
ಒಂದು ಭಾಷೆ ಅನ್ಯ ಭಾಷೆಗಳನ್ನು ಧರಿಸಿದಾಗ (ತಳ್ತೊಡೆ) ಮಾತ್ರ ಅದು ಶ್ರೀಮಂತವಾಗಬಲ್ಲದು, ಜೀವಂತವಾಗಬಲ್ಲದು ಎಂದು ಪಂಪ ಇಲ್ಲಿ ಹೇಳಿದ್ದಾನೆ. ನಮ್ಮ ಶೈಕ್ಷಣಿಕ ವಲಯವು ಪ್ರಾಚೀನ ಕನ್ನಡದ ಈ ತಾಳುವ ಗುಣವನ್ನು ಕಾಣುವ ದೃಷ್ಟಿಯನ್ನೇ ಇತ್ತೀಚೆಗೆ ಕಳೆದುಕೊಳ್ಳುತ್ತಿದೆ. ನಾಡಿನ ವಿಶ್ವವಿದ್ಯಾಲಯಗಳು ತನ್ನ ಪಠ್ಯಕ್ರಮದಲ್ಲಿ ಹಳಗನ್ನಡ ವ್ಯಾಪ್ತಿಯನ್ನು ಹಂತ ಹಂತವಾಗಿ ಕಿರಿದುಗೊಳಿಸುತ್ತಿವೆ. ಬೆಂಗಳೂರಿನ ವಿಶ್ವವಿದ್ಯಾಲಯವೊಂದು ಇತ್ತೀಚೆಗೆ ಎನ್‌ಇಪಿ ಪದವಿ ಪಠ್ಯ ಪುಸ್ತಕಗಳನ್ನು ಪ್ರಕಟಿಸಿದ್ದು, ಅದರಲ್ಲಿ ನಮ್ಮ ಹಳಗನ್ನಡ ಪರಂಪರೆಯೇ ಗೈರುಹಾಜರಾಗಿದೆ.
ಇಂದು ಪದವಿ ವಿದ್ಯಾರ್ಥಿಗಳು ಪಂಪ, ರನ್ನ, ಕುಮಾರವ್ಯಾಸಾದಿಗಳ ಮೂಲ ಕಾವ್ಯಭಾಗಗಳನ್ನು ಶೈಕ್ಷಣಿಕ ಶಿಸ್ತಿನೊಂದಿಗೆ ಅಧ್ಯಯಿಸುತ್ತಿಲ್ಲ. ವಿಶ್ವವಿದ್ಯಾಲಯಗಳು ಕಾಟಾಚಾರಕ್ಕೆಂದು ಒಂದೋ ಎರಡೋ ಕಾವ್ಯಭಾಗಗಳನ್ನು– ಅದೂ ಮೂಲ ಪದ್ಯವನ್ನಲ್ಲ; ಹೊಸಗನ್ನಡ ಸರಳಾನುವಾದವನ್ನು– ಪಠ್ಯವನ್ನಾಗಿ ನಿಗದಿಪಡಿಸುವ ಅಭ್ಯಾಸ ರೂಢಿಸಿಕೊಳ್ಳಲಾರಂಭಿಸಿವೆ. ಶೈಕ್ಷಣಿಕ ವಲಯದ ಈ ಹೊಸ ಪ್ರವೃತ್ತಿಯನ್ನು ಗಮನಿಸಿದರೆ, ನಮ್ಮ ಹಳಗನ್ನಡ ಪರಂಪರೆಯನ್ನು ಸದ್ದಿಲ್ಲದಂತೆ ವಿಸ್ಮೃತಿಗೆ ಸರಿಸಿಬಿಡುವ ಒಂದು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆಯೇನೋ ಎಂಬ ಅನುಮಾನ ಕಾಡುತ್ತದೆ.
ಈ ಸಂಬಂಧವಾಗಿ ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿ (ಬಿಒಎಸ್) ಸಭೆಗಳಲ್ಲಿ ಮಂಡಿಸಲಾಗುವ ವಾದಗಳೂ ಹಾಸ್ಯಾಸ್ಪದವಾಗಿರುತ್ತವೆ. ‘ಸಂಸ್ಕೃತ ಭೂಯಿಷ್ಠವಾದ ಹಳಗನ್ನಡ ಕಲಿತರೆ ಯಾರಿಗೆ ಲಾಭ?’ ‘ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಬೇಕು’, ‘ಹಳಗನ್ನಡವನ್ನು ಹೊಸಗನ್ನಡದ ಆವೃತ್ತಿಯಲ್ಲಿ ಕಲಿಸಿದರೆ ತಪ್ಪೇನು?’ ‘ಹಳಗನ್ನಡದ ಪಾಠ ಮಾಡುವುದು ಕಷ್ಟಕರ!’, ‘ತಂತ್ರಜ್ಞಾನ ಕನ್ನಡ, ಅನುವಾದ ಕಲೆ ಇವು ಮುಂದಿನ ತಲೆಮಾರಿನ ಅಗತ್ಯಗಳಾಗಿವೆ’.
ಇವರ ವಾದ– ಕಾಳಜಿಗಳೆಲ್ಲ ಬಿಒಎಸ್ ಸಭೆಗಷ್ಟೇ ಸೀಮಿತವಾಗಿರುತ್ತವೆ. ಸಭೆಯ ನಿರ್ಣಯಗಳನ್ನು ಕಾರ್ಯಗತಗೊಳಿಸಿದ್ದರಿಂದ ಕನ್ನಡ ಎಷ್ಟು ಮಂದಿಗೆ ಅನ್ನದ ಭಾಷೆಯಾಗಿ ಒದಗಿಬಂತು, ತಂತ್ರಜ್ಞಾನ ಕನ್ನಡ, ಅನುವಾದ ಕಲೆಗಳನ್ನು ಕಲಿತು ಎಷ್ಟು ಮಂದಿ ಉದ್ಯೋಗ ಸಂಪಾದಿಸಿಕೊಂಡರು ಇವೇ ಮುಂತಾದವುಗಳ ಬಗ್ಗೆ ಸರ್ವೇಕ್ಷಣೆ ನಡೆಸಿ, ಪತ್ತೆ ಮಾಡುವ ಯಾವ ವ್ಯವಸ್ಥೆಯನ್ನೂ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡಿಲ್ಲ. ಒಂದು ಅಧ್ಯಯನ ವಿಷಯವನ್ನು ಪಠ್ಯದಿಂದ ಕೈಬಿಡಲು ‘ಅರ್ಥ ಮಾಡಿಸುವುದು ಕಷ್ಟ’ ಎಂಬ ವಾದವೇ ಮಾನದಂಡವಾಗುವುದಾದಲ್ಲಿ ಗಣಿತ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್ ಹೀಗೆ ಒಂದೊಂದಾಗಿ ಎಲ್ಲ ವಿಷಯಗಳನ್ನೂ ಕೈಬಿಡುತ್ತಾ ಹೋಗಬೇಕಾಗುತ್ತದೆ.
ಹಿಂದೆ ಕನ್ನಡವನ್ನು ಶ್ರೀಮಂತಗೊಳಿಸಲೆಂದು ಬಿ.ವೆಂಕಟಾಚಾರ್ಯ, ಎ.ಆರ್. ಕೃಷ್ಣಶಾಸ್ತ್ರಿ ಮುಂತಾದವರು ಬಂಗಾಳಿ ಭಾಷೆಯನ್ನು ಕಲಿತು ಅಲ್ಲಿಯ ಅಮೂಲ್ಯ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತಂದರು. ಕ.ವೆಂ. ರಾಘವಾಚಾರ್ ಅವರು ಗ್ರೀಕ್ ಕಲಿತರು, ಡಿ.ಕೆ. ಭೀಮಸೇನರಾವ್ ಉರ್ದು, ಪಾರ್ಸಿ ಕಲಿತರು, ಆ.ನೇ.ಉಪಾಧ್ಯೆ ಮತ್ತು ಜಿ.ಪಿ. ರಾಜರತ್ನಂ ಪಾಳೀ, ಪ್ರಾಕೃತ ಭಾಷೆಗಳಲ್ಲಿ ವಿದ್ವತ್ತನ್ನು ಸಂಪಾದಿಸಿದರು. ಇಂದಿನವರು ಅನ್ಯಭಾಷೆ ಬೇಡ, ತಮ್ಮದೇ ಭಾಷೆಯ ಪ್ರಾಚೀನ ರೂಪ ವೈವಿಧ್ಯಗಳನ್ನು ಪರಿಚಯಿಸಿಕೊಳ್ಳಬಾರದೇ? ಕನ್ನಡ ಎಂ.ಎ ವಿದ್ಯಾರ್ಥಿಗಳು ಹಳಗನ್ನಡವನ್ನು ಸಮರ್ಥವಾಗಿ ಕಲಿಯಬೇಕೆಂಬ ಉದ್ದೇಶದಿಂದ ಹಿಂದೆ ಜಿ.ಎಸ್. ಶಿವ ರುದ್ರಪ್ಪನವರು ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಅದಾಗಲೇ ನಿವೃತ್ತರಾಗಿದ್ದ ಎಸ್.ಆರ್. ಮಳಗಿಯವ ರನ್ನು ಕರೆತಂದು ನಿಯೋಜಿಸಿಕೊಂಡಿದ್ದರು. ಆದರೆ ವಿಶ್ವವಿದ್ಯಾಲಯಗಳಲ್ಲಿ ಜಿಎಸ್‌ಎಸ್ ಕುಳಿತಿದ್ದಂತಹ ಜಾಗದಲ್ಲಿ ಇಂದು ಕುಳಿತಿರುವವರು ಹಳಗನ್ನಡವನ್ನೇ
ಕನ್ನಡ ವಿಭಾಗದಿಂದ ಹೊರಗಟ್ಟುತ್ತಿದ್ದಾರೆ.
‘ಹಳಗನ್ನಡ ಕಷ್ಟ’ವೆಂಬ ಇವರ ವಾದವನ್ನು ಒಪ್ಪಬಹುದು. ಆದರೆ ಹಳಗನ್ನಡದ ಸರಳ ಗದ್ಯಾನು ವಾದವನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಸರ್ವಥಾ ಸಮ್ಮತವಲ್ಲ. ಡಿ.ಎಲ್. ನರಸಿಂಹಾಚಾರ್ ಅವರಿಂದ ಹಿಡಿದು ಜಿ.ಪಿ.ರಾಜರತ್ನಂ, ಎಲ್. ಬಸವರಾಜು ಮತ್ತು ಇತ್ತೀಚಿನ ಪಿ.ವಿ. ನಾರಾಯಣ, ಎಚ್.ಎಸ್. ವೆಂಕಟೇಶಮೂರ್ತಿ ಅವರವರೆಗೆ ನಾಡಿನ ಹಲವು ವಿದ್ವಾಂಸರು ಪ್ರಾಚೀನ ಕಾವ್ಯಗಳನ್ನು ಸರಳಗನ್ನಡದಲ್ಲಿ ಪರಿಚಯಿಸುತ್ತ ಬಂದಿದ್ದಾರೆ. ಆದರೆ ಈ ಪ್ರಯೋಗಗಳು -ಬಿಒಎಸ್ ಭಾವಿಸಿರುವಂತೆ- ಆ ಅಭಿಜಾತ ಕಾವ್ಯಗಳಿಗೆ ಪರ್ಯಾಯವಲ್ಲ, ಪರ್ಯಾಯ ಆಗಲೂಬಾರದು. ಹಿಂದಿನ ವಿದ್ವಾಂಸರ ಆಶಯವೂ ಅದಾಗಿರಲಿಲ್ಲ. ಉನ್ನತ ಶಿಕ್ಷಣ ಕಲಿಯದ, ಆದರೆ ಸಾಹಿತ್ಯಾಸಕ್ತಿಯುಳ್ಳ ಸಾಮಾನ್ಯ ಓದುಗರಿಗೆ ಅನುಕೂಲವಾಗಲೆಂದು ಅವರು ಆ ಪ್ರಯತ್ನ ಮಾಡಿದ್ದು. ಷೇಕ್ಸ್‌ಪಿಯರ್ ನಾಟಕಗಳ ಸರಳ ಇಂಗ್ಲಿಷ್ ಆವೃತ್ತಿಗೆ ಮಾರುಕಟ್ಟೆಯಲ್ಲಿ ಕ್ಷಾಮವಿದೆಯೇ? ಅದೇಕೆ ಈಗಲೂ ಇಂಗ್ಲಿಷ್ ವಿಭಾಗದವರು ಷೇಕ್ಸ್‌ಪಿಯರ್ ಮೂಲದಲ್ಲಿ ಬಳಸಿದ್ದ ಇಂಗ್ಲಿಷ್ ರೂಪವನ್ನೇ ಕಲಿಸುತ್ತಿದ್ದಾರೆ ಎಂಬುದರ ಕುರಿತು ನಮ್ಮವರು ಪರ್ಯಾಲೋಚಿಸಬೇಕಾಗಿದೆ.
ಈ ಹಳಗನ್ನಡ ಎಂಬ ಪದವೇ ದಾರಿ ತಪ್ಪಿಸುವಂತಹುದಾಗಿದೆ- ಅದು ನಿರುಪಯುಕ್ತ, ಕೆಲಸಕ್ಕೆ ಬಾರದ ಎಂಬ ಅರ್ಥ ಕೊಡುತ್ತದೆ. ಆದರೆ ಪಂಪ ಅದನ್ನು ಹಾಗೆ ಭಾವಿಸಿರಲಿಲ್ಲ. ತನ್ನ ಕವಿತ್ವದ ಶೈಲಿಯನ್ನು ‘ಇದು ನಿಚ್ಚಂ ಪೊಸತು ಅರ್ಣವಂಬೊಲ್ ಅತಿ ಗಂಭೀರಂ’ ಎಂದು ವರ್ಣಿಸಿದ್ದ. ಇಂದಿನ ಬೆಳವಣಿಗೆಗಳನ್ನು ಗಮನಿಸಿದರೆ ಪಂಪಾದಿಗಳ ಕನ್ನಡವನ್ನು ‘ಹಳಗನ್ನಡ’ವೆನ್ನುವ ಬದಲು ‘ಅಭಿಜಾತ ಕನ್ನಡ’ ಎಂದು ಕರೆಯುವುದೇ ಸೂಕ್ತವೆನಿಸುತ್ತದೆ. ಏಕೆಂದರೆ ಹಳಗನ್ನಡವು ಕಾವ್ಯ– ನಾಟಕಗಳಿಗಷ್ಟೇ ಸೀಮಿತವಾದುದಲ್ಲ. ಹಳಗನ್ನಡದ ಸರಿಯಾದ ತಿಳಿವಳಿಕೆಯಿಂದ ಕನ್ನಡದ ಸಮಸ್ತ ಜ್ಞಾನಪರಂಪರೆಯ ಪರಿಚಯ ನಮಗಾಗುತ್ತದೆ. ಇಂದು ಜಗತ್ತಿನೆಲ್ಲೆಡೆ ಯಾವೆಲ್ಲ ಕ್ಷೇತ್ರಗಳಲ್ಲಿ ಜಿಜ್ಞಾಸೆ, ಸಂಶೋಧನೆಗಳು ನಡೆಯುತ್ತಿವೆಯೋ ಆ ಎಲ್ಲ ಜ್ಞಾನ ಪ್ರಸ್ಥಾನದ ಮೂಲಧಾತುಗಳು ನಮ್ಮ ಹಳಗನ್ನಡದಲ್ಲಿ ಅಡಕಗೊಂಡಿವೆ. ಅದು ಕಳಲೆ ವೀರರಾಜೇಂದ್ರರ ವೈದ್ಯಶಾಸ್ತ್ರವಿರಬಹುದು, ಮಂಗರಸನ ಸೂಪಶಾಸ್ತ್ರ ವಿರಬಹುದು, ಪದ್ಮಣಪಂಡಿತ, ಬಾಚರಸ ಮುಂತಾದವರ ಅಶ್ವವೈದ್ಯ, ಸ್ತ್ರೀವೈದ್ಯ, ಪಶುವೈದ್ಯ, ಖಗೇಂದ್ರಮಣಿದರ್ಪಣ, ರತ್ನಶಾಸ್ತ್ರ, ಗಣಿತಶಾಸ್ತ್ರ, ಕಾಮಶಾಸ್ತ್ರ, ಸಂಗೀತಶಾಸ್ತ್ರ, ಸಿಂಹಭೂಪಾಲನ ನಾಟ್ಯಶಾಸ್ತ್ರ... ಹೀಗೆ ಪಟ್ಟಿ ಮಾಡುತ್ತ ಹೋಗಬಹುದು.
ಸದ್ಯಕ್ಕೆ ಹಳಗನ್ನಡ ಕಾವ್ಯವನ್ನು ನಿರಾಕರಿಸುವವರಿಗೆ ತಾವು ಹಳಗನ್ನಡದಲ್ಲಿ ಅಂತರ್ನಿಹಿತವಾದ ಸ್ವಂತಿಕೆ ಮತ್ತು ಬಂಡಾಯದ ಗುಣವನ್ನೂ ನಿರಾಕರಿಸುತ್ತಿದ್ದೇವೆಂಬ ಪರಿವೆ ಇದ್ದಂತಿಲ್ಲ. ಹಳಗನ್ನಡ ಕವಿಗಳಲ್ಲಿ ಅಗಾಧವಾದ ವಿಮರ್ಶಾಶಕ್ತಿ ಇತ್ತು. ‘ಕುಲಂ ಕುಲಮಲ್ತು’ ಎಂಬ ಪಂಪನ ಕುಲವ್ಯಾಖ್ಯಾನ ಲೋಕಪ್ರಸಿದ್ಧವಾದುದು.
ತನ್ನ ಕಾವ್ಯದುದ್ದಕ್ಕೂ ಕೃಷ್ಣನ ಭಜನೆ ಮಾಡುವ ಕುಮಾರವ್ಯಾಸ, ಶ್ರೀಕೃಷ್ಣ ತಪ್ಪು ಮಾಡಿದಾಗ ಅದನ್ನು ಸಮರ್ಥಿಸಿಕೊಳ್ಳದೆ ಕೆರಳುತ್ತಾನೆ. ದುರ್ಯೋಧನನ ತೊಡೆಗೆ ಗದೆ ಬೀಸು ಎಂದು ಭೀಮನಿಗೆ ಕಣ್ಸನ್ನೆ ಮಾಡಿದಾಗ, ಕೇವಲ ಲಿಪಿಕಾರನಾದ ಕುಮಾರವ್ಯಾಸ ಬರೆವುದನ್ನು ನಿಲ್ಲಿಸಿ ‘ಇದಾವ ನ್ಯಾಯ, ಏನನ್ಯಾಯ! ಕೃಷ್ಣನ ಕುಹಕವ ನೋಡಲ್ಲಿ!’ ಎಂದು ಉದ್ಗರಿಸುತ್ತ ತನ್ನ ಆರಾಧ್ಯದೈವವನ್ನೂ ಖಂಡಿಸುತ್ತಾನೆ.
ಇಂದು ನಾವು ಶ್ರದ್ಧೆ, ಗೌರವಗಳನ್ನು ಉಳಿಸಿಕೊಂಡೇ ಹಿಂದಿನ ಧಾರ್ಮಿಕ ಪುರುಷರ ದೋಷ, ಅಚಾತುರ್ಯ ಗಳನ್ನು ಪ್ರಶ್ನಿಸುವ, ವಿಮರ್ಶಿಸುವ ಧೈರ್ಯ-ವಿವೇಕವನ್ನು ಪೋಷಿಸಿಕೊಳ್ಳಬೇಕಾದ ಅಗತ್ಯವಿದೆ. ಅಂತಹ ಪೋಷಣೆ ಪ್ರಾಚೀನ ಕಾವ್ಯಪ್ರತಿಭೆಯಿಂದ ಸಿಗುತ್ತದೆ. ನಮ್ಮ ಪ್ರಾಚೀನ ಕಾವ್ಯಗಳಲ್ಲಿ ಹಾಸುಹೊಕ್ಕಾಗಿರುವ ಇಂತಹ ಹಲವು ಸೂಕ್ಷ್ಮವಿವೇಕಗಳಿಗೆ, ಜ್ಞಾನಪರಂಪರೆಗೆ ಕುರುಡಾದವರು ಮಾತ್ರ ಹಳಗನ್ನಡವನ್ನು ಪಠ್ಯದಿಂದ ಹೊರಗಿಡಬಲ್ಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.