ADVERTISEMENT

ನೆಲದ ಭಾಷೆಗೆ ದಕ್ಕಲಿ ‘ನ್ಯಾಯ’

ಕಾನೂನೆಂಬ ಸಾಧನವು ಶೋಷಣೆಯ ಹತಾರವಾಗಿ ಉಳಿಯದಂತೆ ಎಚ್ಚರ ವಹಿಸಬೇಕಿದೆ

ಕೆ.ಬಿ.ಕೆ.ಸ್ವಾಮಿ
Published 30 ಅಕ್ಟೋಬರ್ 2019, 20:22 IST
Last Updated 30 ಅಕ್ಟೋಬರ್ 2019, 20:22 IST
   

ಭಾಷೆಯು ಮನುಷ್ಯನ ಅಭಿವ್ಯಕ್ತಿಯ ಅನನ್ಯ ಸಾಧನ. ವ್ಯಕ್ತಿಯೊಬ್ಬ ತಾನಾಡುವ ಭಾಷೆಯಲ್ಲಿಯೇ ತನ್ನ ನೆಲದ ಕಾನೂನು, ನಿಯಮ, ನ್ಯಾಯಾಲಯದ ತೀರ್ಪುಗಳನ್ನು ಬಯಸುವುದು ಸ್ವಾಭಾವಿಕ. ಜನರ ಒಳಿತಿಗಾಗಿಯೇ ಅಸಂಖ್ಯಾತ ಕಾನೂನುಗಳನ್ನು ರೂಪಿಸಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಬಹುಜನರು ಬಳಸುವ ಭಾಷೆಯಲ್ಲಿ ಕಾನೂನಿನ ವಿಶ್ಲೇಷಣೆ ನಡೆಸದೆ ಕೆಲವೇ ಜನರಿಗೆ ಗೊತ್ತಿರುವ ಭಾಷೆಯನ್ನು ಅವಲಂಬಿಸಿದರೆ, ಅದಕ್ಕಿಂತಲೂ ದೊಡ್ಡ ಅಪಚಾರ ಮತ್ತೊಂದಿಲ್ಲ. ಉನ್ನತ ನ್ಯಾಯಾಲಯಗಳಲ್ಲಿನ ಕಲಾಪಗಳು ಮತ್ತು ತೀರ್ಪುಗಳು ಸ್ಥಳೀಯ ಭಾಷೆಯಲ್ಲಿ ಲಭಿಸದಿರುವುದರಿಂದ ಜನ ಬಹುದೊಡ್ಡ ಮಟ್ಟದಲ್ಲಿ ಕಾನೂನು ಅರಿವಿನ ಪರಿಧಿಯಿಂದ ಹೊರಗೆ ಉಳಿಯುತ್ತಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ನಡೆ–ನುಡಿ ನಿಯಂತ್ರಿಸುವ ಕಾನೂನುಗಳನ್ನು ಸಾಮಾನ್ಯರು ಅರಿಯ
ಲಾಗದಷ್ಟು ಬಿನ್ನಾಣಗಳಿಂದ ಅಲಂಕರಿಸಲಾಗಿದೆ. ಪಾರದರ್ಶಕ, ಉತ್ತರದಾಯಿತ್ವದ ಆಶಯಗಳನ್ನು ಹೊಂದಿರುವ ಯಾವುದೇ ಆಡಳಿತ ವ್ಯವಸ್ಥೆ ತನ್ನ ಜನರಿಗೆ ಸರಳವಾದ ರೀತಿಯಲ್ಲಿ ಕಾನೂನಿನ ಸಾಕ್ಷರತೆಯನ್ನು ಮೂಡಿಸಬೇಕಾದುದು ಮೂಲಭೂತ ಕೆಲಸ. ಯಾವುದೇ ಆರೋಗ್ಯಕರ ವ್ಯವಸ್ಥೆ ತನ್ನ ಪ್ರಜೆಗಳಿಗೆ ಕಾನೂನಿನ ಅರಿವು ಮೂಡಿಸಬೇಕು. ಆಡಳಿತಗಾರರನ್ನು ರಚನಾತ್ಮಕ ನೆಲೆಯಲ್ಲಿ ಪ್ರಶ್ನಿಸುವ ಸಾಮರ್ಥ್ಯ ತುಂಬಿ ಅವರನ್ನು ಸಜ್ಜುಗೊಳಿಸಬೇಕು. ಕಾನೂನು ಸಾಕ್ಷರತೆಯನ್ನು ಬಹುಜನರು ಬಳಸುವ ಭಾಷೆಯಲ್ಲಿ ಬಿತ್ತದೇ ಹೋದರೆ, ಜನತಂತ್ರವು ಕಾಲಾನಂತರದಲ್ಲಿ ದುರ್ಬಲವಾಗುತ್ತದೆ.

ಕಾನೂನು ತಿಳಿವಳಿಕೆ ಇಲ್ಲ ಎಂದಮಾತ್ರಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದು ಎಂಬ ತತ್ವವನ್ನು ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಂದರೆ, ಜನರು ಸ್ವಯಂಪ್ರೇರಿತರಾಗಿ ಕಾನೂನನ್ನು ಅರಿತು ಬದುಕಬೇಕು. ಜನರು ಸಂವಿಧಾನವನ್ನಾಗಲೀ ಶಾಸನಗಳನ್ನಾಗಲೀ ಅರಿಯಲು ಮುಂದಾಗದೇ ಇರುವುದಕ್ಕೆ ಬಹುಮುಖ್ಯ ಕಾರಣ ಅವುಗಳಲ್ಲಿ ಬಳಸುವ ಭಾಷೆ, ಕಠಿಣ ಪದ, ಜಟಿಲ ವಾಕ್ಯರಚನೆಗಳು. ಶಾಸನಸಭೆಗಳು ರಚಿಸುವ ಶಾಸನಗಳು, ನ್ಯಾಯಾಲಯ ನೀಡುವ ತೀರ್ಪುಗಳು ಬಹುಜನರಿಗೆ ತಿಳಿಯದ ಭಾಷೆಯಲ್ಲಿ ಪ್ರಕಟವಾಗುವುದು ಮತ್ತು ವ್ಯಾಖ್ಯಾನಕ್ಕೆ ಒಳಪಡುತ್ತಿರುವುದು ದೀರ್ಘ ಕಾಲದಿಂದ ನಾವೆಲ್ಲರೂ ಸೇರಿ ಪ್ರಜಾಸತ್ತೆಗೆ ಎಸಗಿದ ಬೌದ್ಧಿಕ ದ್ರೋಹ ಎನ್ನಬಹುದು.

ADVERTISEMENT

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯವೂ ಸ್ಥಳೀಯ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸಿಕೊಂಡಿದೆ ಮತ್ತು ಕೆಳಹಂತದ ನ್ಯಾಯಾಲಯಗಳ ಕಲಾಪದ ಭಾಷೆಯನ್ನಾಗಿಸಿದೆ. ಆದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕಲಾಪಗಳಲ್ಲಿ ಮತ್ತು ತೀರ್ಪುಗಳಲ್ಲಿ ಬಳಕೆಯಾಗುವ ಭಾಷೆಯು ಬಹುಜನರೊಡನೆ ಅಂತರ ಕಾಯ್ದುಕೊಂಡಿದೆ. ಜನರ ದೈನಂದಿನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಗಳನ್ನು ಉಂಟು ಮಾಡಿದ ಉನ್ನತ ನ್ಯಾಯಾಲಯಗಳ ಸಾಂವಿಧಾನಿಕ ಪೀಠಗಳ ತೀರ್ಪುಗಳೂ ಬಹುಜನರು ಆಡುವ ಭಾಷೆಯಲ್ಲಿ ಲಭ್ಯವಿಲ್ಲ. ಬಹುತೇಕ ಪ್ರಕರಣಗಳಲ್ಲಿ ಈ ತೀರ್ಪುಗಳು ಎಷ್ಟು ಕಗ್ಗಂಟಾಗಿರುತ್ತವೆ ಎಂದರೆ, ಶಾಸನಸಭೆಗಳಲ್ಲಿ ನಿಂತು ಶಾಸನಗಳನ್ನು ರಚಿಸಿದವರೇ ಕಾನೂನು ಪರಿಣತರಿಂದ ಸಲಹೆ ಪಡೆದ ಉದಾಹರಣೆಗಳಿವೆ! ಇನ್ನು ಜನಸಾಮಾನ್ಯರ ಪಾಡೇನು?

ಕಾನೂನಿನ ಅರಿವು ಹೆಚ್ಚಾದಂತೆ ಅದರ ಬಗ್ಗೆ ಜನ ರಚನಾತ್ಮಕವಾಗಿ ಆಲೋಚಿಸುತ್ತಾರೆ ಮತ್ತು ಕಾನೂನಿನ ಉಲ್ಲಂಘನೆ ಕಡಿಮೆಯಾಗುತ್ತದೆ ಎಂಬ ವಾದವೂ ಇದೆ. ಅರಿವು ಹೆಚ್ಚಾದಂತೆ ಜನರು ಹೆಚ್ಚು ತಾರ್ಕಿಕವಾಗಿ ಆಲೋಚಿಸುತ್ತಾರೆ. ಅಲ್ಲದೆ ಕಾನೂನು ಉಲ್ಲಂಘಿಸಿದವರನ್ನು ಪ್ರಶ್ನಿಸಲು ತೊಡಗುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳಮಟ್ಟದಿಂದಲೇ ಗಟ್ಟಿಗೊಳಿಸುತ್ತದೆ.

ಸಾಮಾಜಿಕ ಆಯಾಮಗಳನ್ನು ಬದಿಗಿಟ್ಟು ನೋಡುವುದಾದರೆ, ಕಕ್ಷಿದಾರ ಮತ್ತು ವಕೀಲರ ನಡುವೆ ಇರುವುದು ಗ್ರಾಹಕ ಮತ್ತು ಸೇವಾ ಪೂರೈಕೆದಾರನ ಸಂಬಂಧ. ಒಬ್ಬ ಗ್ರಾಹಕನಿಗೆ ತಾನು ಕೊಳ್ಳುವ ಸರಕು ಮತ್ತು ಸೇವೆಗಳ ಕುರಿತಾದ ಮಾಹಿತಿಯನ್ನು ತನಗೆ ಗೊತ್ತಿರುವ ಭಾಷೆಯಲ್ಲಿಯೇ ಕೇಳಿ ಪಡೆಯಲು ಸಾಧ್ಯವಿರುವಾಗ, ಆ ಹಕ್ಕು ಕಕ್ಷಿದಾರನಿಗೆ ಲಭಿಸದೇ ಹೋಗುವುದು ನ್ಯಾಯವೇ? ವ್ಯಾಜ್ಯಕಾರಣದ ಸುತ್ತ ತಳಕು ಹಾಕಿಕೊಂಡಿರುವ ಕಾನೂನು ಮತ್ತು ತೀರ್ಪುಗಳ ಮಾಹಿತಿಯನ್ನು ತನ್ನ ಭಾಷೆಯಲ್ಲಿಯೇ ಪಡೆಯಲು ಪೂರಕವಾದ ಹಕ್ಕುಗಳು ಕಕ್ಷಿದಾರನಿಗೆ ಸಹಜವಾಗಿಯೇ ದೊರೆಯುತ್ತವೆ. ಕಕ್ಷಿದಾರನು ತನ್ನ ಆಲೋಚನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಸರಳವಾಗಿ ಪ್ರಕಟಪಡಿಸಲು ಸಂವಿಧಾನದ ವಿಧಿ 19(1)(ಎ)ಯಲ್ಲಿನ ವಾಕ್‌ ಸ್ವಾತಂತ್ರ್ಯದ ಹಕ್ಕು ಮತ್ತು 21ನೇ ವಿಧಿಯಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅವಕಾಶ ಕೊಡುತ್ತವೆ. ರಾಜ್ಯಪಾಲರು, ರಾಷ್ಟ್ರಪತಿಯವರ ಪೂರ್ವಾನುಮತಿಯೊಂದಿಗೆ ಆ ರಾಜ್ಯದ ಭಾಷೆಯನ್ನು ಅಲ್ಲಿನ ಹೈಕೋರ್ಟ್‌ನ ಆಡಳಿತ ಭಾಷೆಯನ್ನಾಗಿಸಬಹುದು. ಇದಕ್ಕೆ ಸಂವಿಧಾನದ ವಿಧಿ 348(2) ಅವಕಾಶ ಕಲ್ಪಿಸಿದೆ. ಇದನ್ನು ಬಳಸಿ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಛತ್ತೀಸಗಡ ಹಾಗೂ ಇನ್ನಿತರ ಹಿಂದಿ ಭಾಷಿಕ ರಾಜ್ಯಗಳಲ್ಲಿನ ಹೈಕೋರ್ಟ್‌
ಗಳಲ್ಲಿ ಹಿಂದಿಯನ್ನು ಅಧಿಕೃತವಾಗಿ ಬಳಸಲು ಅವಕಾಶ ಮಾಡಿಕೊಡಲಾಗಿದೆ. ಹಿಂದಿ ಭಾಷಿಕರ ರಾಜ್ಯದಲ್ಲಿ ಹಿಂದಿಯಲ್ಲಿಯೇ ಹೈಕೋರ್ಟ್ ಕಲಾಪಗಳು ನಡೆಯಲು ಮತ್ತು ತೀರ್ಪು ನೀಡಲು ಸಾಧ್ಯವಾಗುವುದಾದರೆ ನಮ್ಮ ನಾಡಿನಲ್ಲೂ ಅದು ಸಾಧ್ಯವಿದೆ.

ಇಂಥ ಜನಸ್ನೇಹಿ ಬದಲಾವಣೆಯನ್ನು ಆಹ್ವಾನಿಸಲು ನಮ್ಮೊಳಗಿನ ತಪ್ಪುಗ್ರಹಿಕೆಗಳನ್ನು ನಿವಾರಿಸಬೇಕು. ಹೊರ ರಾಜ್ಯಗಳಿಂದ ವರ್ಗವಾಗಿ ಬರುವ ಬೆರಳೆಣಿಕೆಯಷ್ಟು ನ್ಯಾಯಮೂರ್ತಿಗಳಿಗೆ ಇಲ್ಲಿನ ಆಡಳಿತ ಭಾಷೆ ಬಾರದೆಂಬ ನೆಪವೊಡ್ಡಿ, ಬಹುಜನರು ಅರಿಯದ ಭಾಷೆಯಲ್ಲಿ ತೀರ್ಪು ನೀಡುವುದು ನ್ಯಾಯವೇ? ಇಂತಹ ತಾಂತ್ರಿಕ ತೊಡಕುಗಳಿಗೆ ಪರಿಹಾರಗಳೂ ಇವೆ. ಅಮೋಘ ತಂತ್ರಜ್ಞಾನದ ಯುಗದಲ್ಲಿ ಕ್ಷಣಾರ್ಧದಲ್ಲೇ ಭಾಷಾಂತರಿಸುವ ಪರಿಕರಗಳನ್ನು ಬಳಸಿ ಕಲಾಪ ನಡೆಸಬಹುದು. ಕೇಂದ್ರ ನಾಗರಿಕ ಸೇವೆ ಅಧಿಕಾರಿಗಳು ಸ್ಥಳೀಯ ಭಾಷೆ ಕಲಿಯಲು ಇರುವ ನಿಯಮವನ್ನು ನ್ಯಾಯಮೂರ್ತಿಗಳಿಗೂ ವಿಸ್ತರಿಸಬಹುದು. ಇಂಗ್ಲಿಷ್ ಬಿಟ್ಟರೆ ಬೇರೆ ಭಾಷೆ
ಗಳಲ್ಲಿ ಪರಿಣಾಮಕಾರಿ ವಾದ ಮಂಡನೆ ಅಸಾಧ್ಯ ಎಂಬಂಥ ತಪ್ಪುಗ್ರಹಿಕೆ ನೆಲದ ಪ್ರತಿಭೆಗಳನ್ನು ಹೊಸಕಿ ಹಾಕುತ್ತದೆ.

12ನೇ ಪಂಚವಾರ್ಷಿಕ ಯೋಜನೆಯಡಿ ದೇಶದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳ ಕಂಪ್ಯೂಟರೀಕರಣವನ್ನು ಇ– ಕೋರ್ಟ್‌ ಯೋಜನೆಯಡಿ ಕೈಗೊಳ್ಳಲಾಗಿದೆ. ಇದಕ್ಕಾಗಿ ₹ 1,670 ಕೋಟಿ ಹೂಡಿಯೂ ಕಂಪ್ಯೂಟರ್ ಕಿಯೋಸ್ಕ್‌ಗಳು, ನ್ಯಾಯಾಲಯದ ಟಿ.ವಿ ಪರದೆಗಳು, ಮೊಬೈಲ್ ಆ್ಯಪ್‌ಗಳಲ್ಲಿನ ಮಾಹಿತಿಯು ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಗಳಲ್ಲಿ ಲಭ್ಯವಿಲ್ಲ. ಕರ್ನಾಟಕದ ಅಧೀನ ನ್ಯಾಯಾಲಯಗಳ ಅಧಿಕೃತ ಮಾಹಿತಿ ಜಾಲಗಳಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲ. ಇದು ಅಸಂಖ್ಯಾತ ನಾಗರಿಕರನ್ನು ಮಾಹಿತಿಯ ಜಾಲದಿಂದ ಹೊರಗಿಟ್ಟಿದೆ. ಕೆಳಹಂತದ ನ್ಯಾಯಾಲಯಗಳಲ್ಲಿಯೇ ಕನ್ನಡದ ಸ್ಥಿತಿ ಹೀಗಿರುವಾಗ, ಇನ್ನು ಸಂಪೂರ್ಣ ಇಂಗ್ಲಿಷ್‌ಯವಾಗಿರುವ ಹೈಕೋರ್ಟ್‌ನ ಅಧಿಕೃತ ಮಾಹಿತಿ ಜಾಲತಾಣದ ಕುರಿತು ಹೇಳದಿರುವುದೇ ಒಳಿತು. ಜನ ಮತ್ತು ನ್ಯಾಯಾಲಯದ ನಡುವಿನ ಸಂವಹನವು ನೆಲದ ಭಾಷೆಯಲ್ಲಿಯೇ ನಡೆದಾಗ ಅನಗತ್ಯ ಕಾಲಹರಣಕ್ಕೂ ಅಪಾರ ಸಂಪನ್ಮೂಲಗಳ ವೆಚ್ಚಕ್ಕೂ ಕಡಿವಾಣ ಬೀಳುತ್ತದೆ.

ಯಾವುದೇ ರಾಜ್ಯ ಸರ್ಕಾರವು ಅಧೀನ ನ್ಯಾಯಾಲಯಗಳ ಕಲಾಪಗಳಲ್ಲಿ ರಾಜ್ಯಭಾಷೆಯನ್ನು ನಿಗದಿಗೊಳಿಸಲು ಅವಕಾಶವಿದೆ. ಇಂತಹದ್ದೊಂದು ಸರಳವಾದ ಮಾದರಿಯನ್ನು ಹೈಕೋರ್ಟ್‌ ಕಲಾಪಗಳಲ್ಲಿಯೂ ಅಳವಡಿಸಬಹುದು. ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಮತ್ತು ಸಾಮಾಜಿಕ ಬದಲಾವಣೆಗೆ ಕಾನೂನು ಒಂದು ಸಾಧನವೆಂದು ಭಾವಿಸಲಾಗಿದೆ. ಆದರೆ ಅಂತಹ ಸಾಧನವು ನೆಲದ ಭಾಷೆಯಲ್ಲಿ ಲಭಿಸದೇ ಹೋದರೆ ಅದು ಮಂದಿಯನ್ನು ಶೋಷಿಸುವ ಅಸದೃಶ ಹತಾರವಾಗಿಯೇ ಉಳಿದುಬಿಡಬಹುದು!

ಲೇಖಕ: ಹೈಕೋರ್ಟ್‌ನಲ್ಲಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.