ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರ ಹುದ್ದೆಗೆ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ವಿಷಯ ತಜ್ಞನಾಗಿ ಪಾಲ್ಗೊಂಡಿದ್ದೆ. ನನ್ನ ಸಂಗಡ ಇನ್ನಿಬ್ಬರು ತಜ್ಞರಿದ್ದರು. ಹಾಗೆಯೇ ಯುಜಿಸಿ ನಿಯಮಾವಳಿಯಂತೆ ಒಂದು ತಂಡ ಕೂಡ ಜೊತೆಗಿತ್ತು. ಪ್ರತಿದಿನ ಸುಮಾರು 50 ಮಂದಿ ಉದ್ಯೋಗ ಆಕಾಂಕ್ಷಿಗಳನ್ನು ಸಂದರ್ಶಿಸುತ್ತಿದ್ದೆವು. ಬೀದರ್‌ನಿಂದ ಚಾಮರಾಜನಗರದವರೆಗೆ ಮತ್ತು ಬೆಳಗಾವಿಯಿಂದ ಕೋಲಾರ ತನಕದ ವೈವಿಧ್ಯಮಯ ಭಾಷಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯ ಅಭ್ಯರ್ಥಿಗಳಿದ್ದರು. ಎಂ.ಫಿಲ್, ಪಿಎಚ್.ಡಿ ಪದವೀಧರರೂ ಬಂದಿದ್ದರು. ಹತ್ತಾರು ವರ್ಷಗಳ ಬೋಧನಾ ಅನುಭವ ಹೊಂದಿರುವ ಅಭ್ಯರ್ಥಿಗಳಿದ್ದರು. ಅವರಲ್ಲಿ ಹೆಚ್ಚಿನವರಿಗೆ ಆತ್ಮವಿಶ್ವಾಸವೇ ಇರಲಿಲ್ಲ. ಸ್ಪಷ್ಟತೆಯೂ ಇರಲಿಲ್ಲ. ಎಲ್ಲರಿಗೂ ಅಂಕಗಳಿದ್ದವು. ಆದರೆ, ಒಳನೋಟಗಳ ಹರವು ಇರಲಿಲ್ಲ. ಅನುಭವ ಹಂಚಿಕೊಂಡರು. ಆದರೆ ಅವರು ನೀಡಿದ ಐದು– ಹತ್ತು ನಿಮಿಷಗಳ ಪ್ರಾತ್ಯಕ್ಷಿಕೆಯಲ್ಲಿ ಕೆಲವನ್ನು ಹೊರತುಪಡಿಸಿ ಉಳಿದವುಗಳಲ್ಲಿ ಸತ್ವವೇ ಇರಲಿಲ್ಲ.
ಸ್ನಾತಕೋತ್ತರ ಪದವೀಧರರಾದರೂ ಕೆಲವರ ಓದು, ಬರಹ ಮಾತ್ರ ಪದವಿ ಹಂತದಲ್ಲೇ ನಿಂತುಹೋಗಿತ್ತು. ಬಹಳಷ್ಟು ಅಭ್ಯರ್ಥಿಗಳಿಗೆ ಒಂದು ಸ್ಪಷ್ಟತೆ ಇರಲಿಲ್ಲ. ಹಿಂದಿನವರ ಸಾಹಿತ್ಯ ಒತ್ತಟ್ಟಿಗಿರಲಿ; ಸಮಕಾಲೀನ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆಯೂ ಸ್ಪಷ್ಟ ಅಭಿಪ್ರಾಯಗಳು ಹೊರಬರಲಿಲ್ಲ. ‘ಕಾಡುವ ದೇವರ ಕಾಟ ಕಳೆಯಲು’ ಬಂದಂತಿದ್ದರು. ಪಿಎಚ್.ಡಿ ಪಡೆದ ಒಬ್ಬ ಅಭ್ಯರ್ಥಿಯಂತೂ ನಮ್ಮನ್ನು ದಂಗುಬಡಿಸಿದರು! ಬಗಲಲ್ಲಿ ಮಹಾಪ್ರಬಂಧ ಹಿಡಿದು ಬಂದರು. ತಮ್ಮ ಪರಿಚಯವನ್ನು ಸಂಕ್ಷಿಪ್ತವಾಗಿ ಮಾಡಿಕೊಳ್ಳಲು ಹಾಗೂ ಯಾವುದಾದರೂ ಆಯ್ದ ವಿಷಯದ ಕುರಿತು ಮಾತನಾಡಲು ಅವರಿಗೆ ಹೇಳಿದ್ದೆವು. ಅಲ್ಲೇ ಇದ್ದ ಫಲಕದಲ್ಲಿಯೂ ಅದನ್ನು ಬರೆಯಬೇಕಿತ್ತು. ಆಗ ಅವರು ತಮ್ಮ ಮಹಾಪ್ರಬಂಧದ ವಿಷಯ ಬರೆಯಲು ಹೋಗಿ ‘ಅದ್ಯಾಯನ’ ಎಂದು ಬರೆದರು. ‘ನೀವು ಬರೆದದ್ದು ಸರಿಯಿದೆಯೇ, ನೋಡಿ’ ಎಂದರೆ, ‘ಸರಿಯಾಗಿಯೇ ಇದೆ’ ಎಂದರು. ನಾವೆಲ್ಲ ಒಬ್ಬರ ಮುಖ ಒಬ್ಬರು ನೋಡಿಕೊಂಡು ಸುಮ್ಮನಾದೆವು. ರಾಜ್ಯದ ದಕ್ಷಿಣ ಭಾಗದ ವಿಶ್ವವಿದ್ಯಾಲಯಗಳಲ್ಲಿ ಪದವಿ ಪೂರೈಸಿದ ಮಹಿಳಾ ಅಭ್ಯರ್ಥಿಗಳು ಕೆಲವರು ಆಶಾಕಿರಣವಾಗಿ ಕಂಡರು. ಅಷ್ಟೇ ಅಲ್ಲ, ನವಪೀಳಿಗೆಯ ವಾರಸುದಾರರಂತೆಯೂ ಗೋಚರಿಸಿದರು. ಉತ್ತರ ಭಾಗದವರಲ್ಲಿಯೂ ಕೆಲವರು ಗುಣಮಟ್ಟ ಕಾಯ್ದುಕೊಂಡಿದ್ದರು. ಇದು ಕನ್ನಡದಇಂದಿನ ಸ್ಥಿತಿಯನ್ನು ಹೇಳುತ್ತಿದೆ.
ಬೌದ್ಧಿಕ ಗುಣಮಟ್ಟ ರೂಪಿಸುವಲ್ಲಿ ಆಯಾ ಪ್ರದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಂಶಗಳ ಪ್ರಭಾವವೂ ಇರುತ್ತದೆ. ದಕ್ಷಿಣ ಮತ್ತು ಉತ್ತರದ ವಿಶ್ವವಿದ್ಯಾಲಯಗಳಲ್ಲಿ ವಿಶೇಷವಾಗಿ ಕನ್ನಡ ಕಲಿಕೆಯಲ್ಲಿ ವ್ಯತ್ಯಾಸಗಳು ಗೋಚರವಾಗಲು ಇಂತಹ ಅಂಶಗಳೂ ಕಾರಣವಾಗಿರಬಹುದು. ದಕ್ಷಿಣದಲ್ಲಿ ಮೇಷ್ಟ್ರುಗಳ ಉತ್ತಮ ಪರಂಪರೆಯೊಂದನ್ನು ಹಲವು ಧೀಮಂತರು ರೂಪಿಸಿದ್ದಾರೆ. ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಕಿ.ರಂ. ಅಂತಹವರು ಈ ಪರಂಪರೆಯನ್ನು ಮುಂದುವರಿಸಿದರು. ಇದು, ವಿದ್ಯಾರ್ಥಿಗಳಿಗೆ ಒಂದು ಗಟ್ಟಿ ನೆಲೆ ಒದಗಿಸಿತು. ಇಂತಹ ಪರಂಪರೆ ಉತ್ತರದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಆರ್.ಸಿ.ಹಿರೇಮಠ,
ಎಂ.ಎಂ.ಕಲಬುರ್ಗಿ ಅವರಂತಹ ಮೇಷ್ಟ್ರುಗಳು ಉತ್ತರದಲ್ಲೂ ಇದ್ದರು. ಪ್ರತಿಭೆಯನ್ನೂ ಮೆರೆದರು. ಆದರೆ, ಇವರು ವಚನ ಸಾಹಿತ್ಯ ಮತ್ತು ಸಂಶೋಧನೆಗಷ್ಟೇ ಒತ್ತು ಕೊಟ್ಟರು. ದಕ್ಷಿಣದಲ್ಲಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಒತ್ತು ದೊರೆಯಿತು. ಆ ಗುರು ಪರಂಪರೆಯನ್ನು ನೆನೆಯುವ ಮನಸ್ಸುಗಳು ಈಗಲೂ ಇವೆ. ಕಿ.ರಂ. ಶಿಷ್ಯಂದಿರು ಪ್ರತಿವರ್ಷ ಅವರ ಸ್ಮರಣೆಯ ಸಾಹಿತ್ಯದ ಕಾರ್ಯಕ್ರಮಗಳನ್ನು ಅಹೋರಾತ್ರಿ ಹಮ್ಮಿಕೊಳ್ಳುವುದನ್ನು ಅದರ ಕುರುಹಾಗಿ ಗುರುತಿಸಬಹುದು. ರಂಗಭೂಮಿಯಲ್ಲಿ ಸಿಜಿಕೆಯವರು ದೊಡ್ಡ ಶಿಷ್ಯಗಣವನ್ನು ಸೃಷ್ಟಿಸಿದರು. ಅವರ ಶಿಷ್ಯಂದಿರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಿಜಿಕೆ ಹೆಸರಿನಲ್ಲಿ ರಾಷ್ಟ್ರೀಯ ನಾಟಕೋತ್ಸವವನ್ನು ಪ್ರತಿವರ್ಷ ನಡೆಸುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಪರಸ್ಪರ ಚರ್ಚಿಸುವ, ಸಂವಾದಿಸುವ ಅವಕಾಶವೂ ದೊರೆಯುತ್ತದೆ. ವ್ಯಕ್ತಿತ್ವ ಬೆಳವಣಿಗೆಗೆ ಹಾಗೂ ಬರಹ ಹದಗೊಳ್ಳಲು ಇಂತಹವು ನೀರೆರೆಯುತ್ತವೆ. ಇಂತಹ ಉದಾಹರಣೆಗಳು, ಪರಂಪರೆಯು ಉತ್ತರ ಕರ್ನಾಟಕದಲ್ಲಿ ವಿರಳ. ಈ ಮೇಷ್ಟ್ರು ಪರಂಪರೆಯ ಅಗತ್ಯವು ನಮ್ಮ ಉತ್ತರ ಭಾಗಕ್ಕೆ ಇದೆ. ಸಮಾಜವು ಬಹುಭಾಷಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ವೈಶ್ವಿಕ ಕಾಲದಲ್ಲಿದ್ದೇವೆ. ನಮ್ಮ ನುಡಿಯನ್ನು ಜತನಗೊಳಿಸಬೇಕಾದ ಎಚ್ಚರ ಇಂದಿನ ಅಗತ್ಯವೂ ಹೌದು.
ಹಲವು ವಿಶ್ವವಿದ್ಯಾಲಯಗಳ ಸಂಶೋಧನಾ ಮಹಾಪ್ರಬಂಧಗಳ ಗುಣಮಟ್ಟ ಕುರಿತು ಅಪಸ್ವರ
ಗಳಿವೆ. ಕನ್ನಡ ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ಕೇಂದ್ರಗಳ ಹಲವು ಸಂಶೋಧನಾ ಪ್ರಬಂಧಗಳು ರೂಪುಗೊಂಡಿದ್ದರ ಹಿಂದೆ ‘ಮುಲಾಜಿನ’ ಹಂಗು ಇದೆ ಎಂಬ ಆರೋಪಗಳು ಇವೆ.ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಜನ್ಮ ತಾಳಿದಾಗ ಈ ಭಾಗದ ಜನರಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿದ್ದವು. ಅದರಲ್ಲೂ ಕನ್ನಡವನ್ನು ಹೊಸ ಮನ್ವಂತರದಲ್ಲಿ ಕಟ್ಟುವ ಬಗೆಯ ಕನಸುಗಳನ್ನು ಇಲ್ಲಿಯ ಕನ್ನಡಿಗರು ಕಂಡಿದ್ದರು. ಆದರೆ, ಅದು ಹುಸಿಯಾಗತೊಡಗಿದೆ. ಶಂಬಾ, ಆ.ನೇ.ಉಪಾಧ್ಯೆ, ಕುಂದಣಗಾರ, ಚಂದ್ರಶೇಖರ ಕಂಬಾರ ಅಂಥವರು ಹುಟ್ಟಿದ ಮಣ್ಣಲ್ಲಿ ಕನ್ನಡ ವಿದ್ವತ್ತಿನ ಹೊಸ ಪ್ರಯತ್ನಗಳು ಟಿಸಿಲೊಡೆಯಲಿ ಎಂಬ ಹಾರೈಕೆಗಳಿಗೆ ಕೊರತೆ ಇಲ್ಲ. ಆದರೆ, ಅವು ಮೂಡುವ ಯಾವ ಕುರುಹುಗಳೂ ಕಾಣುತ್ತಿಲ್ಲ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ರಾಜ್ಯದಲ್ಲಿಯೇ ದೊಡ್ಡದು. ಅತ್ಯಧಿಕ ಕಾಲೇಜುಗಳನ್ನು ಹೊಂದಿದೆ. ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಇಲ್ಲಿ ಗುಣಮಟ್ಟಕ್ಕೂ ಆದ್ಯತೆ ದೊರೆತು, ಅದು ಫಲಿಸಿದರೆ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆ ಸಾಧ್ಯವಾಗುತ್ತದೆ.
ಈ ವಿಶ್ವವಿದ್ಯಾಲಯವು ಪದವಿ ತರಗತಿಗಳಿಗೆ ರೂಪಿಸಿದ ಕನ್ನಡ ಪಠ್ಯಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳಿವೆ. ಅದಕ್ಕೆ, ‘ನಿನ್ನ ಬೆನ್ನನು ನಾನು ಕೆರೆವೆ, ನನ್ನ ಬೆನ್ನನು ನೀ ಕೆರೆ...’ ಎನ್ನುವಂತಹ ಸ್ವಾರ್ಥ ಮನೋಭಾವವೇ ಕಾರಣ ಎಂಬ ಮಾತಿದೆ. ಒಳಒಪ್ಪಂದದ ರೀತಿಯಲ್ಲಿ ಇವರ ಕೃತಿಯನ್ನು ಅವರು, ಅವರ ಕೃತಿಯನ್ನು ಇವರು ಪಠ್ಯದಲ್ಲಿ ಅಳವಡಿಸುವುದು ನಡೆದಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲದೇ ಇಲ್ಲ. ಈ ಪರಿಪಾಟ ತರವಲ್ಲ. ಆಯ್ಕೆಯ ಮಾನದಂಡಗಳಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಇಂತಹವುಗಳೆಲ್ಲ ನುಸುಳುತ್ತವೆ. ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸುವುದರ ಜೊತೆಗೆ ಅವರನ್ನು ಸ್ಪರ್ಧಾತ್ಮಕವಾಗಿ ಅಣಿಗೊಳಿಸುವ ಕೆಲಸವೂ ಆಗಬೇಕು. ಆ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಬಹಳ ಜತನದಿಂದ ಮಾಡಬೇಕಾದ ಅಗತ್ಯ ಇದೆ. ಇವೆಲ್ಲವುಗಳನ್ನು ಸಂಬಂಧಿಸಿದವರು ಗಂಭೀರವಾಗಿ ಸ್ವೀಕರಿಸಬೇಕು. ಇದರೊಂದಿಗೆ ಶಿಷ್ಯವತ್ಸಲ ‘ಮಾಸ್ತರ’ ಪರಂಪರೆಯನ್ನು ರೂಪಿಸುವ ಪ್ರಯತ್ನಗಳೂ ಆಗಬೇಕು.
ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಾಟಕ ವಿಭಾಗ ಇಲ್ಲ. ಉತ್ತರ ಕರ್ನಾಟಕದ ಇನ್ನೂ ಎರಡು ವಿಶ್ವವಿದ್ಯಾಲಯಗಳಲ್ಲೂ ಇಲ್ಲ. ಮುಂಬೈ ಮತ್ತು ಪುಣೆ ವಿಶ್ವವಿದ್ಯಾಲಯ
ಗಳಲ್ಲಿ ಇರುವಂತೆ ಡ್ರಾಮಾ ಡಿಪಾರ್ಟ್‌ಮೆಂಟ್‌ನ ಅಗತ್ಯವಿದೆ. ಇದು, ಬಹುದಿನಗಳ ಬೇಡಿಕೆ. ಜಿಲ್ಲೆಯ
ಲ್ಲಿಯೇ ಹುಟ್ಟಿದ ರಾಧಾನಾಟ, ಸಂಗ್ಯಾ ಬಾಳ್ಯಾ ಮತ್ತು ಶ್ರೀಕೃಷ್ಣ ಪಾರಿಜಾತ ಸಣ್ಣಾಟಗಳಿಗೆ ಕಾಯಕಲ್ಪದ ಅವಶ್ಯಕತೆ ಇದೆ. ಇವುಗಳತ್ತ ನಮ್ಮ ಕಾರ್ಯತತ್ಪರತೆ ತೀವ್ರವಾಗಬೇಕು.
ಲೇಖಕ: ಪ್ರಾಧ್ಯಾಪಕ,
ಭಾವುರಾವ ಕಾಕತಕರ ಕಾಲೇಜು, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.