ADVERTISEMENT

ಚಂಪಾ: ಸಹಜ ಬಂಡುಕೋರ ಕವಿ

ನಟರಾಜ ಹುಳಿಯಾರ್
Published 10 ಜನವರಿ 2022, 19:31 IST
Last Updated 10 ಜನವರಿ 2022, 19:31 IST
‍‍‍ಪ್ರೊ. ಚಂಪಾ ಅಭಿಮಾನ ಬಳಗ ಆಯೋಜಿಸಿದ್ದ ‘ಚಂದ್ರಶೇಖರ ಪಾಟೀಲ 80’ ಅಭಿನಂದನಾ ಸಮಾರಂಭದಲ್ಲಿ ತಮ್ಮ ಪತ್ನಿ ನೀಲಾ ಪಾಟೀಲ ಜತೆ ಚಂಪಾ.
‍‍‍ಪ್ರೊ. ಚಂಪಾ ಅಭಿಮಾನ ಬಳಗ ಆಯೋಜಿಸಿದ್ದ ‘ಚಂದ್ರಶೇಖರ ಪಾಟೀಲ 80’ ಅಭಿನಂದನಾ ಸಮಾರಂಭದಲ್ಲಿ ತಮ್ಮ ಪತ್ನಿ ನೀಲಾ ಪಾಟೀಲ ಜತೆ ಚಂಪಾ.   

ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಲೋಹಿಯಾವಾದಿ ಸಮಾಜವಾದಿ ಚಿಂತನೆಯಿಂದ ರೂಪುಗೊಂಡ ಸ್ವತಂತ್ರ ಪ್ರಜ್ಞೆಯ, ನಿರ್ಭೀತ ಲೇಖಕರಲ್ಲಿ ಚಂದ್ರಶೇಖರ ಪಾಟೀಲರೂ ಒಬ್ಬರು. ಸಮಾಜವಾದಿ ನೋಟ, ಇಂಗ್ಲಿಷ್ ಸಾಹಿತ್ಯದಿಂದ ಪಡೆದ ಆಧುನಿಕ ಚಿಂತನೆಗಳಿಂದ ತೀವ್ರ ವ್ಯಂಗ್ಯವನ್ನು ಬಳಸಬಲ್ಲ ಕವಿ-ನಾಟಕಕಾರರಾಗಿ ರೂಪುಗೊಂಡ ಇಂಗ್ಲಿಷ್ ಪ್ರೊಫೆಸರ್ ಚಂಪಾ, ತುರ್ತುಪರಿಸ್ಥಿತಿಯಲ್ಲಿ ಜೈಲಿನಲ್ಲಿದ್ದ ಕಾಲದಲ್ಲಿ ‘ಗಾಂಧೀ ಸ್ಮರಣೆ’ ಸಂಕಲನದ ಪದ್ಯಗಳನ್ನು ಬರೆದರು. ಈ ಕವನಗಳಲ್ಲಿ ಇಂದಿರಾಗಾಂಧಿಯವರ ಸರ್ವಾಧಿಕಾರದ ವಿರುದ್ಧ-ಚಂಪಾ ಮಾತಿನಲ್ಲೇ ಹೇಳುವುದಾದರೆ ‘ದುಶ್ಶಾಸನ ಪರ್ವ’ದ ವಿರುದ್ಧ-ಕಟಕಿ; ಗಾಂಧಿ ಮಾರ್ಗಕ್ಕೆ ಹಿನ್ನಡೆಯಾದದ್ದರ ಬಗ್ಗೆ ಗಾಢ ವಿಷಾದ; ಕವಿಯ ಗಂಭೀರ ಪ್ರತಿಭಟನೆ ಎಲ್ಲವೂ ಹಬ್ಬಿದ್ದವು: ‘ಹಿಂದಿಬ್ಬರು ಮುಂದಿಬ್ಬರು ರಾಜಭಟರ ನಡುವೆ/ ನಡೆದಾಗ ದೊಡ್ಡ ಗೇಟು ಕಿರುಗುಡುತ್ತದೆ./ ಒಂದು ಮೂಲೆಗೆ ಗಾಂಧಿ. ಇನ್ನೊಂದು ಮೂಲೆಗೆ ನೆಹರೂ./ಗೋಡೆಯ ತುಂಬ ಮತ್ತೊಬ್ಬ ಗಾಂಧಿಯ ಅಮರ ಸಂದೇಶ.’ ಇಂಥದೇ ತುರ್ತುಸ್ಥಿತಿ ಈಗಲೂ ಎರಗುತ್ತಿರುವುದರ ಬಗ್ಗೆ ಎಚ್ಚರಿಸುತ್ತಲೇ ಇದ್ದ ಚಂಪಾರ 1976ರ ಕವನಗಳಲ್ಲಿರುವ ರಾಜಕೀಯ ವಿಮರ್ಶೆ, ಮತ್ತೆ ದುಶ್ಶಾಸನ ಪರ್ವ ಮುತ್ತುತ್ತಿರುವ ಕಾಲಘಟ್ಟದಲ್ಲಿ ಹೊಸ ದನಿ ಪಡೆಯುತ್ತದೆ: ‘ಸರಕಾರದ ಕೆಲಸ ದೇವರ ಕೆಲಸವಾಗಿ/ ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ./ ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ/ ಜಿಟಿ ಜಿಟಿ ಮಳೆ ಹಿಡಿದಿದೆ/…ಹೆದ್ದಾರಿಯ ಮೇಲೆ
ಕೆಟ್ಟು ನಿಂತ ಟ್ರಕ್ಕು ಕೂಡ/
ನಾಡು ಮುನ್ನಡೆದಿದೆ ಎಂಬ ಸಂದೇಶ ಹೊತ್ತಿದೆ.’

‘ಗಾಂಧೀ ಸ್ಮರಣೆ’ಯ ಕಾಲದಲ್ಲಿ ಘೋಷಣೆಗಳಿಲ್ಲದ ಗಾಢ ವಿಷಾದ, ಚೂಪುತಿವಿತಗಳ ರಾಜಕೀಯ ಕವಿತೆಗಳನ್ನು ಕೊಟ್ಟಿದ್ದ ಚಂಪಾ ಮುಂದೆ ಬಂಡಾಯ ಕವಿಯಾಗಿದ್ದು, ಬಂಡಾಯ ಸಂಘಟನೆಯ ಭಾಗವಾಗಿದ್ದು ಸಹಜವಾಗಿತ್ತು. ಬಂಡಾಯದ ಕಾಲಕ್ಕಾಗಲೇ ‘ಸಂಕ್ರಮಣ’ದ ಸಂಪಾದಕತ್ವ ಚಂಪಾ ಕೈಗೆ ಬಂದಿತ್ತು. ‘ಸಂಕ್ರಮಣ’ ಬಂಡಾಯ ಮಾರ್ಗದ ತಾತ್ವಿಕತೆಯ ಸಮರ್ಥನೆ, ಬಂಡಾಯ ಕಾವ್ಯತತ್ವದ ಪ್ರತಿಪಾದನೆ, ದಲಿತ, ಬಂಡಾಯ ಹಾಗೂ ಸ್ತ್ರೀವಾದಿ ಕವಿತೆ, ಕತೆಗಳ ಪ್ರಕಟಣೆ, ವೈಚಾರಿಕ ಚರ್ಚೆಗಳ ಮೂಲಕ ಕನ್ನಡದ ಪ್ರಗತಿಪರ ದನಿಗಳನ್ನು ಗಟ್ಟಿಗೊಳಿಸಿತು. ಚೂಪುಭಾಷೆಯ ಅಸಂಗತ ನಾಟಕಗಳನ್ನು ಬರೆದಿದ್ದ ಚಂಪಾ, ‘ಲಂಕೇಶ್ ಪತ್ರಿಕೆ’ಯಲ್ಲಿ ವ್ಯಂಗ್ಯ, ವಿಡಂಬನೆಗಳ ಚುರುಕಾದ ರಾಜಕೀಯ ಬರವಣಿಗೆಯನ್ನು ವಿಸ್ತರಿಸಿಕೊಂಡರು.

‘ಸಂಕ್ರಮಣ’ ವಾರಪತ್ರಿಕೆ ಮಾಡಲು ಹೋಗಿ ಸೋತ ಚಂಪಾ, ಕಳೆದ ಕೆಲವು ವರ್ಷಗಳವರೆಗೂ ‘ಸಂಕ್ರಮಣ’ ಸಂಸ್ಕೃತಿ ಪತ್ರಿಕೆಯನ್ನು ಛಲ ಬಿಡದೆ ಹೊರತರುತ್ತಾ ಹೊಸ ಲೇಖಕ, ಲೇಖಕಿಯರನ್ನು ರೂಪಿಸುತ್ತಿದ್ದರು. ಕಹಿವ್ಯಂಗ್ಯ ವಿಜೃಂಭಿಸುತ್ತಿರುವಾಗಲೂ ಆಕರ್ಷಕ ಶೈಲಿಯಿದ್ದ ‘ಚಂಪಾದಕೀಯ’ದ ಮೂಲಕ ತಮ್ಮ ಒಗರನ್ನು ಉಳಿಸಿಕೊಂಡಿದ್ದರು.

ADVERTISEMENT

ಯಾರನ್ನಾದರೂ ಗೇಲಿ ಮಾಡಬಲ್ಲ ಸ್ವಾತಂತ್ರ್ಯ ಗಳಿಸಿಕೊಂಡಿದ್ದ ಚಂಪಾ, ಲಂಕೇಶ್, ಗಿರೀಶ ಕಾರ್ನಾಡ, ಅನಂತಮೂರ್ತಿ, ರಾಮಕೃಷ್ಣ ಹೆಗಡೆ... ಎಲ್ಲರನ್ನೂ ಟೀಕಿಸುತ್ತಿದ್ದರು; ಈ ಮೂರ್ತಿಭಂಜನೆಯಲ್ಲಿ ವಿಚಿತ್ರ ಸತ್ಯಗಳನ್ನೂ ಹೊರಡಿಸುತ್ತಿದ್ದರು.

ಧಾರವಾಡದ ನೆಲದಲ್ಲಿ ಅಂತರಗಂಗೆಯಂತೆ ಹರಿಯುವ ಶಾಲ್ಮಲಾ ನದಿ ಅವರ ‘ಶಾಲ್ಮಲಾ ನನ್ನ ಶಾಲ್ಮಲಾ’ ಕವನದ ಗಾಢಪ್ರತಿಮೆಯಾಗಿ ಕನ್ನಡದ ಆಕರ್ಷಕ ಕವಿತೆಗಳಲ್ಲೊಂದಾಯಿತು. ಚಂಪಾ ಕಾವ್ಯ ವ್ಯಂಗ್ಯ, ವಿರೋಧಾಭಾಸಗಳಿಂದ ಒಳಧ್ಯಾನಕ್ಕೆ ತಿರುಗಿದಾಗಲೂ, ಆ ಧ್ಯಾನದ ಪ್ರಭಾವ ಅವರ ವ್ಯಕ್ತಿತ್ವದ ಮೇಲೇನೂ ಆದಂತಿರಲಿಲ್ಲ! ಕೊನೆಕೊನೆಗೆ ಹಾಸಿಗೆ ಹಿಡಿಯುವವರೆಗೂ, ಕಟು ಸತ್ಯ ನುಡಿಯುವ, ವ್ಯವಸ್ಥೆಯ ವಿರುದ್ಧ ದಿಟ್ವವಾಗಿ ಮಾತಾಡುವ ಖಡಕ್ ವ್ಯಕ್ತಿಯಾಗಿದ್ದ ಚಂಪಾ ಎಪ್ಪತ್ತರ ದಶಕದ ಬಂಡುಕೋರತನವನ್ನು ಕೊನೆವರೆಗೂ ಕಾಯ್ದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.