ಸರ್ಕಾರಕ್ಕೆ ಸಡ್ಡು
2006ರಲ್ಲಿ ಶಿವಮೊಗ್ಗದಲ್ಲಿ 73 ನೇ ಸಾಹಿತ್ಯ ಸಮ್ಮೇಳನ ನಡೆದಾಗ ಚಂದ್ರಶೇಖರ ಪಾಟೀಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಪ್ರೊ.ಕೆ.ನಿಸಾರ್ ಅಹಮದ್ ಸಮ್ಮೇಳನದ ಅಧ್ಯಕ್ಷರು. ಆಗ ಜೆಡಿಎಸ್– ಬಿಜೆಪಿ 20:20 ಸರ್ಕಾರ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಮತ್ತು ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದರು. ಗೌರಿಲಂಕೇಶ್ ಮತ್ತು ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಸಮ್ಮೇಳನದ ಗೋಷ್ಠಿಯೊಂದಕ್ಕೆ ಕರೆದ ಬಗ್ಗೆ ಸಂಘಪರಿವಾರ ಮತ್ತು ಬಿಜೆಪಿಯಿಂದ ವಿರೋಧ ವ್ಯಕ್ತವಾಯಿತು. ‘ಸಮ್ಮೇಳನಕ್ಕೆ ಸರ್ಕಾರ ಹಣ ಕೊಟ್ಟಿರುವುದರಿಂದ ಸರ್ಕಾರ ಹೇಳಿದಂತೆ ಕೇಳಬೇಕು. ‘ವಿವಾದಾತ್ಮಕ ವ್ಯಕ್ತಿ’ ಗಳನ್ನು ಸಮ್ಮೇಳನಕ್ಕೆ ಕರೆಯಬಾರದು’ ಎಂದು ಸರ್ಕಾರ ಕಟ್ಟಪ್ಪಣೆ ಮಾಡಿತು. ಆದರೆ ಅದಕ್ಕೆ ಚಂಪಾ ಜಗ್ಗಲಿಲ್ಲ. ‘ಸಮ್ಮೇಳನಕ್ಕೆ ಹಣ ಕೊಡುವುದು ನಿಮ್ಮ ಕರ್ತವ್ಯ, ಕೊಟ್ಟಿದ್ದೀರಿ. ಕನ್ನಡಿಗರ ಹಣವನ್ನು ಕೊಟ್ಟಿದ್ದೀರಿ ಅಷ್ಟೆ. ಹಣ ಕೊಟ್ಟ ಮಾತ್ರಕ್ಕೆ ಇಂತಹವರನ್ನು ಕರೆಯಬೇಕು, ಇಂತಹವರನ್ನು ಕರೆಯಬಾರದು ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರಲ್ಲದೆ ಗೌರಿ ಮತ್ತು ವಿಠಲ ಹೆಗ್ಡೆ ಇಬ್ಬರಿಗೂ ಅವಕಾಶ ನೀಡಿದರು.
ಗೋಕಾಕ್ ಚಳವಳಿಯ ಕಿಡಿ
1980ರಲ್ಲಿ ಪ್ರೊ.ವಿ.ಕೃ.ಗೋಕಾಕ್ ನೇತೃತ್ವದ ಸಮಿತಿ ಶಾಲೆಗಳಲ್ಲಿ ಭಾಷಾ ಕಲಿಕೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಧಾರವಾಡಕ್ಕೆ ಹೋದಾಗ ‘ಗೋಕಾಕ್ ಗೋ ಬ್ಯಾಕ್’ ಎಂಬ ಫಲಕಹಿಡಿದು ಚಂಪಾ ಧರಣಿ ನಡೆಸಿದರು. ಗೋಕಾಕ್ ಭಾಷಾ ಸೂತ್ರವನ್ನು ಅನುಷ್ಠಾನ ಮಾಡಲು ಸರ್ಕಾರ ನಿರಾಸಕ್ತಿ ತೋರಿತ್ತು. ಅದನ್ನು ಪ್ರತಿಭಟಿಸಲು ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ ಬಂದಿತು. ಚಂಪಾ ಇದರ ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಸಮಿತಿ 1982 ರ ಫೆಬ್ರುವರಿ 23ರಂದು ಧಾರವಾಡ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ಧರಣಿ ನಡೆಸಿತು. ಈ ಧರಣಿಯೇ ಗೋಕಾಕ್ ಚಳವಳಿಯಾಯಿತು. ಡಾ.ರಾಜ್‌ಕುಮಾರ್ ಅವರನ್ನು ಈ ಹೋರಾಟಕ್ಕೆ ಎಳೆದು ತರಲು ಚಂಪಾ ಪ್ರಮುಖ ಕಾರಣರಾದರು ಎಂದು ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಖರ್ ನೆನಪಿಸಿಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ
ಚಂಪಾ ಅವರು 2004ರಿಂದ 2008ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅದರ ಹಿಂದಿನ ಅವಧಿಗೂ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಸೋತಿದ್ದರು. ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಅವರು ಸಾಹಿತ್ಯ ಪರಿಷತ್ತನ್ನು ಕನ್ನಡ ಪರ ಹೋರಾಟದ ವೇದಿಕೆಯನ್ನಾಗಿ ರೂಪಿಸಿದರು. ಈ ಸಂದರ್ಭದಲ್ಲೇ ರಾಜ್ಯ ಸರ್ಕಾರ 1ನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ನಿರ್ಧಾರ ಮಾಡಿತು. ಆಗ ಪರಿಷತ್ತಿನ ನೇತೃತ್ವದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಯಿತು.
ರಾಜಕೀಯಕ್ಕೂ ಪ್ರವೇಶ
ರಾಜಕೀಯ ಪಕ್ಷಗಳ ಜತೆಗೂ ನಂಟು ಹೊಂದಿದ್ದರು. ಜನತಾಪಕ್ಷದ ಸರ್ಕಾರ ಇದ್ದಾಗ ಆ ಪಕ್ಷದ ಸಂಚಾಲಕರಾಗಿದ್ದರು. ಕನ್ನಡನಾಡು ಪಕ್ಷ, ಕೆಜೆಪಿ ಜತೆಗೂ ಚಂಪಾ ನಂಟು ಹೊಂದಿದ್ದರು. ಕೆಜೆಪಿಯ ಪ್ರಣಾಳಿಕೆ ರಚನೆಯಲ್ಲೂ ಪ್ರಮುಖ ಪಾತ್ರವಹಿಸಿದ್ದರು.
ಇಂಗ್ಲಿಷ್ ಫಲಕ ಇಳಿಸಿದರು
ಚಂಪಾ ಯಾವುದೇ ಹುದ್ದೆಯಲ್ಲಿ ಇದ್ದರೂ ಕನ್ನಡ ಪರ ಹೋರಾಟ ಮರೆತವರಲ್ಲ. ಬಂಡಾಯ ಮತ್ತು ಕನ್ನಡ ಪರ ಹೋರಾಟದ ಆಯ್ಕೆಯ ವಿಚಾರ ಬಂದಾಗ, ಕನ್ನಡ ಪರ ಹೋರಾಟವನ್ನೇ ಆಯ್ಕೆ ಮಾಡಿಕೊಂಡರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆಯಲ್ಲಿ ಕನ್ನಡೇತರ ನಾಮಫಲಕಗಳನ್ನು ಕೆಳಗಿಳಿಸಿದ್ದರು.
ಸಾಹಿತಿಗಳ ಮಕ್ಕಳ ಇಂಗ್ಲಿಷ್ ಮಾಧ್ಯಮ
ಕನ್ನಡ ಚಳವಳಿಯ ನೇತಾರರೇ ತಮ್ಮ ಮಕ್ಕಳನ್ನು ಕಾನ್ವೆಂಟ್( ಇಂಗ್ಲಿಷ್ ಮಾಧ್ಯಮ ) ಶಾಲೆಗಳಿಗೆ ಕಳುಹಿಸುತ್ತಾರೆ ಎಂಬ ವ್ಯಾಪಕ ಟೀಕೆಗಳು ಬಂದಾಗ, ‘ಕನ್ನಡ ಹೋರಾಟಗಾರರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವುದು ವಾಸ್ತವ. ಇದು ದ್ವಂದ್ವ ನೀತಿ, ಗೋಸುಂಬೆತನ ಅಷ್ಟೆ’ ಎಂದು ಚಂಪಾ ಕುಟುಕಿದ್ದರು. ಚಂಪಾ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾರೆ. ತಮ್ಮ ಮೊಮ್ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುವಂತೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.