ಹಿಂದಿನ ನಾಲ್ಕು ದಶಕಗಳಲ್ಲಿ ಭಾರತೀಯ ಜನತಾ ಪಕ್ಷವು ಜಾಣ್ಮೆಯ ಸೋಷಿಯಲ್ ಎಂಜಿನಿಯರಿಂಗ್ ಮೂಲಕ ತನಗೆ ಅಂಟಿಕೊಂಡಿದ್ದ ‘ಬ್ರಾಹ್ಮಣ– ಬನಿಯಾ’ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಇತ್ತೀಚಿನ ಮೂರು ದಶಕಗಳ ಚುನಾವಣಾ ಸಾಧನೆಯನ್ನು ಗಮನಿಸಿದರೆ ಈ ಪ್ರಯತ್ನದಲ್ಲಿ ಪಕ್ಷಕ್ಕೆ ಯಶಸ್ಸು ಕೂಡಾ ಸಿಕ್ಕಿರುವುದನ್ನು ಗಮನಿಸಬಹುದಾಗಿದೆ.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ತಳಮಳ
ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಬಿಜೆಪಿಯ ಇತಿಹಾಸದ ಚಕ್ರ ಹಿಂದಕ್ಕೆ ಚಲಿಸುತ್ತಿರುವ ಹಾಗೆ ಕಾಣುತ್ತಿದೆ. ರಾಜ್ಯದ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಪ್ರಧಾನ ಪಾತ್ರ ವಹಿಸಿರುವ ನಾಯಕರು ಮತ್ತು ಇದರಿಂದ ಮೂಲೆಗುಂಪಾದವರು, ಅತೃಪ್ತರಾದವರು ಹಾಗೂ ಸಿಡಿದೆದ್ದಿರುವ ನಾಯಕರ ಜಾತಿ ಹಿನ್ನೆಲೆಯನ್ನು ನೋಡಿದರೆ ಈ ಇತಿಹಾಸದ ಚಕ್ರದ ಚಲನೆಯ ದಿಕ್ಕು ಇನ್ನಷ್ಟು ಸ್ಪಷ್ಟವಾಗಬಹುದು.
ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್‌ನ ಇತಿಹಾಸವನ್ನು ಗಮನಿಸಿದರೆ, ಈ ಎರಡೂ ಸಂಘಟನೆಗಳಲ್ಲಿ ಬ್ರಾಹ್ಮಣೇತರ ವ್ಯಕ್ತಿ ಉನ್ನತ ಸ್ಥಾನಕ್ಕೇರುವುದು ಅಸಾಧ್ಯ ಎಂಬ ಅಭಿಪ್ರಾಯ ಇತ್ತೀಚಿನವರೆಗೆ ಇತ್ತು. ಆರ್‌ಎಸ್‌ಎಸ್‌ಗೆ ಸಂಬಂಧಿಸಿದಂತೆ ಈ ಅಲಿಖಿತ ನಿಯಮ ಈಗಲೂ ಅಬಾಧಿತವಾಗಿದ್ದರೂ ಆರ್‌ಎಸ್ಎಸ್‌ನ ರಾಜಕೀಯ ಮುಖವಾದ ಬಿಜೆಪಿಯಲ್ಲಿ ಈ ನಿಯಮ ಮುರಿದುಬಿದ್ದು ಬಹಳ ಕಾಲವಾಗಿದೆ. ಇದಕ್ಕೆ ಕಾರಣ ವಾಜಪೇಯಿ– ಅಡ್ವಾಣಿ ಕಾಲದಲ್ಲಿ ನಡೆದ ಸೋಷಿಯಲ್ ಎಂಜಿನಿಯರಿಂಗ್.
ಕರ್ನಾಟಕದ ಬಿ.ಎಸ್.ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್, ಸೇರಿದಂತೆ ಕಲ್ಯಾಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ, ಉಮಾಭಾರತಿ ಮೊದಲಾದ ಬ್ರಾಹ್ಮಣೇತರ ನಾಯಕರು ಪಕ್ಷದಲ್ಲಿ ಮುಖ್ಯಮಂತ್ರಿಗಳಾಗಿದ್ದು, ಅಂತಿಮವಾಗಿ ಹಿಂದುಳಿದ ಜಾತಿಗೆ ಸೇರಿರುವ ನರೇಂದ್ರ ಮೋದಿಯವರು ಪ್ರಧಾನಿ ಪಟ್ಟಕ್ಕೇರಿದ್ದು ಇದೇ ಸೋಷಿಯಲ್ ಎಂಜಿನಿಯರಿಂಗ್ ಪ್ರಯೋಗದ ಫಲ. ಒಂದು ಹಂತದಲ್ಲಿ ಮೋದಿಯವರ ರಾಜಕೀಯ ಭವಿಷ್ಯವೇ ಅಪಾಯದಲ್ಲಿದ್ದಾಗ ಅವರನ್ನು ಉಳಿಸಿದ್ದು ಲಾಲ್ ಕೃಷ್ಣ ಅಡ್ವಾಣಿ ಎನ್ನುವುದು ಈಗ ಇತಿಹಾಸ.
ಇದೇನು ರಾತ್ರಿಹಗಲಾಗುವುದರೊಳಗೆ ನಡೆದ ಬದಲಾವಣೆ ಅಲ್ಲ. 1984ರ ಚುನಾವಣೆಯಲ್ಲಿ ರಾಜಕೀಯವಾಗಿ ನೆಲ ಕಚ್ಚಿದ್ದ ಬಿಜೆಪಿಯನ್ನು ಮತ್ತೆ ದೂಳಿನಿಂದ ಎದ್ದು ಬರುವಂತೆ ಮಾಡಿದ್ದು ವಾಜಪೇಯಿ–ಅಡ್ವಾಣಿ ಜೋಡಿ. ಇವರಿಬ್ಬರಲ್ಲಿ ವಾಜಪೇಯಿ ಸೂತ್ರಧಾರಿಯಾಗಿದ್ದರೆ, ಪಾತ್ರಧಾರಿಯಾಗಿದ್ದವರು ಲಾಲ್ ಕೃಷ್ಣ ಅಡ್ವಾಣಿ. ಆರ್‌ಎಸ್‌ಎಸ್ ಸ್ವಯಂಸೇವಕರ ಜಾಲವನ್ನು ಬಳಸಿಕೊಂಡು ದೇಶದಾದ್ಯಂತ ಓಡಾಡಿ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಿದವರು ಅಡ್ವಾಣಿ. ಮಂಡಲ್ ವರದಿ ಜಾರಿ ಘೋಷಣೆಯ ನಂತರದ ದಿನಗಳಲ್ಲಿ ಸಂಘಟಿತಗೊಳ್ಳುತ್ತಿದ್ದ ಹಿಂದುಳಿದ ಮತ್ತು ದಲಿತ ಸಮುದಾಯಗಳ ಜಾಗೃತಿಯ ಅಪಾಯವನ್ನು ಗಮನಿಸಿ ಅದಕ್ಕೆ ಇದಿರಾಗಿ ಕಮಂಡಲವನ್ನು ನಿಲ್ಲಿಸಿ ರಾಮಜನ್ಮಭೂಮಿ ಚಳವಳಿಯನ್ನು ಹುಟ್ಟುಹಾಕಿದವರು ಅಡ್ವಾಣಿಯವರು.
ಬ್ರಾಹ್ಮಣ–ಬನಿಯಾ ಸಮುದಾಯಗಳಲ್ಲಿ ತನ್ನ ವರ್ಗ ಮತ್ತು ವರ್ಣ ಶತ್ರುಗಳನ್ನು ಕಾಣುತ್ತಿದ್ದ ಬಹುಸಂಖ್ಯಾತ ಹಿಂದುಳಿದ ಮತ್ತು ದಲಿತ ಸಮುದಾಯಕ್ಕೆ ಹಿಂದುತ್ವದ ನಶೆಯೇರಿಸಿ, ಎದುರಾಗಿ ಮುಸ್ಲಿಮರು ಎನ್ನುವ ಶತ್ರುವನ್ನು ನಿಲ್ಲಿಸಿ ದೇಶದ ಸಾಮಾಜಿಕ ಮತ್ತು ರಾಜಕೀಯ ಸಮೀಕರಣವನ್ನೇ ಉಲ್ಟಾಪಲ್ಟಾ ಮಾಡಿದ್ದೇ ವಾಜಪೇಯಿ–ಅಡ್ವಾಣಿ ಜೋಡಿ. ಇದರಿಂದ ಗಳಿಸಿದ ರಾಜಕೀಯ ಅಧಿ
ಕಾರ ಮತ್ತು ಅದನ್ನು ಬಳಸಿಕೊಂಡು ತನ್ನ ನೆಲೆ ವಿಸ್ತರಿಸುವ ಸಾಧ್ಯತೆಯನ್ನು ಕಂಡ ಆರ್‌ಎಸ್‌ಎಸ್ ಕೂಡಾ ತನ್ನ ಮಡಿವಂತಿಕೆಯನ್ನು ಸಡಿಲಗೊಳಿಸಿ ಈ ಪ್ರಯೋಗಕ್ಕೆ ಸಹಕಾರ ನೀಡಿತ್ತು. ಇವೆಲ್ಲದರ ಫಲ ಕಾಂಗ್ರೆಸ್ ಪಕ್ಷದ ಏಕಚಕ್ರಾಧಿಪತ್ಯವನ್ನು ಉರುಳಿಸಿ ಆ ಸ್ಥಾನಕ್ಕೇರಿರುವ ಈಗಿನ ಬಿಜೆಪಿ.
ಹೀಗಿದ್ದರೂ ಕರ್ನಾಟಕ ರಾಜ್ಯವನ್ನು ಹೊರತುಪಡಿಸಿದರೆ ದಕ್ಷಿಣದ ಯಾವ ರಾಜ್ಯಗಳಲ್ಲಿಯೂ ಸ್ವಂತ ಬಲದಿಂದ ನೆಲೆ ಕಂಡುಕೊಳ್ಳಲು ಬಿಜೆಪಿಗೆ ಈವರೆಗೆ ಸಾಧ್ಯವಾಗಲಿಲ್ಲ. ಈ ಸವಾಲಿನ ಜೊತೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯ ದೃಷ್ಟಿಯಿಂದಲೂ ಕರ್ನಾಟಕದ ವಿಧಾನಸಭಾ ಚುನಾವಣೆಯು ಬಿಜೆಪಿಗೆ ಜೀವನ್ಮರಣ ಪ್ರಶ್ನೆಯಷ್ಟೇ ಮಹತ್ವದ್ದು. ಇಲ್ಲಿ ಪಕ್ಷ ಪರಾಭವಗೊಂಡರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ರಾಜಕೀಯವಾಗಿ ಮಾತ್ರವಲ್ಲ ಸೋಲಿಲ್ಲದ ಸರದಾರರೆನಿಸಿಕೊಂಡಿರುವ ಅವರ ವೈಯಕ್ತಿಕ ಪ್ರತಿಷ್ಠೆಗೂ ದೊಡ್ಡ ಹೊಡೆತ.
ಚುನಾವಣಾ ಫಲಿತಾಂಶವೇ ಅಂತಿಮವಾದರೂ ಕರ್ನಾಟಕದಲ್ಲಿ ಟಿಕೆಟ್ ಹಂಚಿಕೆಯಲ್ಲಿನ ಗೊಂದಲ ಮತ್ತು ಅದರಿಂದ ಹುಟ್ಟಿಕೊಂಡಿರುವ ಬಂಡಾಯದ ಚಟುವಟಿಕೆಗಳನ್ನು ಗಮನಿಸಿದರೆ, ಮೋದಿ– ಶಾ ಜೋಡಿ ಇದೇ ಮೊದಲ ಬಾರಿಗೆ ತನ್ನ ಕಾರ್ಯತಂತ್ರದಲ್ಲಿ ಎಡವಿದಂತೆ ಕಾಣುತ್ತಿದೆ. ಈ ಎಡವಟ್ಟುಗಳಲ್ಲಿ ಕರ್ನಾಟಕದ ಇಬ್ಬರು ನಾಯಕರ ಪಾತ್ರ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಬ್ಬರು ಬಿ.ಎಲ್.ಸಂತೋಷ್, ಇನ್ನೊಬ್ಬರು ಪ್ರಲ್ಹಾದ ಜೋಶಿ.
ಇವರಿಬ್ಬರೂ ಟಿಕೆಟ್ ಹಂಚಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದವರು. ಅವರು ಪಾತ್ರಧಾರಿಗಳಾಗಿ ತೆರೆಯಮರೆಯಲ್ಲಿಯೇ ಉಳಿದುಬಿಟ್ಟಿದ್ದರೆ ಹೆಚ್ಚು ಅಪಾಯ ಆಗುತ್ತಿರಲಿಲ್ಲವೇನೋ? ಪ್ರಯೋಗದ ಪರಿಣಾಮವನ್ನು ನಿರೀಕ್ಷಿಸದೇ ಇದ್ದ ಜೋಶಿ ಅವರು ಈಶ್ವರಪ್ಪನವರ ರಾಜಕೀಯ ನಿವೃತ್ತಿ ಪತ್ರವನ್ನು ತಕ್ಷಣ ಟ್ವಿಟರ್‌ನಲ್ಲಿ ಹಂಚಿಕೊಂಡು ಶುಭ ಹಾರೈಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ವಿರುದ್ದ ಕ್ರಮವಾಗಿ ವಿ.ಸೋಮಣ್ಣ ಮತ್ತು ಆರ್.ಅಶೋಕ ಅವರನ್ನು ಅಭ್ಯರ್ಥಿಗಳನ್ನಾಗಿ ಮಾಡಿದ್ದು ತಮ್ಮ ಸಾಧನೆ ಎಂದು ಬಿ.ಎಲ್.ಸಂತೋಷ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಇಷ್ಟರಲ್ಲಿ ಟಿಕೆಟ್ ವಂಚಿತರೆಲ್ಲರಿಗೂ ತಮಗೆ ಆಗಿರುವ ಅನ್ಯಾಯಕ್ಕೆ ಇವರಿಬ್ಬರೇ ಕಾರಣಕರ್ತರು ಎನ್ನುವುದು ಮನದಟ್ಟಾಗಿತ್ತು.
ಯಡಿಯೂರಪ್ಪ ಮತ್ತು ಸಂತೋಷ್ ಅವರ ನಡುವಿನ ಶೀತಲ ಸಮರಕ್ಕೆ ದಶಕದ ಇತಿಹಾಸ ಇದೆ. 2013ರಲ್ಲಿ ಯಡಿಯೂರಪ್ಪನವರು ಪಕ್ಷ ತ್ಯಜಿಸಿದಾಗ ತಮ್ಮ ನಿರ್ಧಾರಕ್ಕೆ ಸಂತೋಷ್ ಅವರೇ ಕಾರಣ ಎಂದು ನೇರ ಆರೋಪ ಮಾಡಿದ್ದರು. ಎರಡನೇ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮತ್ತು ತಮ್ಮ ಮಗನನ್ನು ಸಂಪುಟಕ್ಕೆ ಸೇರಿಸಿಕೊಳ್ಳದೇ ಇರಲು ಸಂತೋಷ್ ಅವರೇ ಕಾರಣ ಎನ್ನುವುದು ಯಡಿಯೂರಪ್ಪನವರಿಗೂ ಗೊತ್ತಿತ್ತು. ಆದರೆ ಸಂತೋಷ್ ಅವರು ಇತ್ತೀಚೆಗೆ ದೆಹಲಿ ಹೈಕಮಾಂಡ್ ಜೊತೆ ಸೇರಿಕೊಂಡಿರುವ ಕಾರಣ ಯಡಿಯೂರಪ್ಪ ಕೂಡಾ ದೊಡ್ಡದಾಗಿ ಗುಟುರು ಹಾಕುವ ಸ್ಥಿತಿಯಲ್ಲಿಲ್ಲ. ಇದೇ ರೀತಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ಮತ್ತು ಪ್ರಲ್ಹಾದ ಜೋಶಿ ಅವರ ಸಂಬಂಧದಲ್ಲಿಯೂ ಬಿರುಕು ಕಾಣಿಸಿಕೊಂಡಿತ್ತು.
ಒಂದು ರೀತಿಯಲ್ಲಿ ಇಲ್ಲಿಯವರೆಗೆ ಯಡಿಯೂರಪ್ಪ ಮತ್ತು ಸಂತೋಷ್ ಅವರ ನಡುವಿನ ಶೀತಲ ಸಮರ ಈಗ ಪಕ್ಷದಲ್ಲಿ ಎರಡು ಪ್ರತ್ಯೇಕ ಗುಂಪುಗಳಾಗುವ ಮಟ್ಟಕ್ಕೆ ಬೆಳೆಯುತ್ತಿದೆ. ಈ ಭಿನ್ನಮತವನ್ನು ಶಮನಗೊಳಿಸುವ ಸಾಮರ್ಥ್ಯ ಸಂತೋಷ್– ಜೋಶಿ ಜೋಡಿಗಾಗಲೀ ಮುಖ್ಯ
ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಲೀ ಇಲ್ಲ. ನಾಯಕರು ಮತ್ತು ಕಾರ್ಯಕರ್ತರ ಜೊತೆಗಿನ ತಮ್ಮ ದೀರ್ಘ ಸಂಬಂಧದಿಂದಾಗಿ ಈಗಿನ ಬಂಡಾಯವನ್ನು ಶಮನಗೊಳಿಸುವ ಸಾಮರ್ಥ್ಯ ಹೊಂದಿರುವವರು ಯಡಿಯೂರಪ್ಪ ಮಾತ್ರ. ಆದರೆ ತಮ್ಮವರೇ ಬಲಿಪಶುಗಳಾಗಿರುವ ಕಾರಣದಿಂದಾಗಿ ಅವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ.
ಇಂತಹ ಸಂದರ್ಭಗಳಲ್ಲಿ ಹಿಂದೆಲ್ಲ ಮಧ್ಯಪ್ರವೇಶಿಸಿ ಬಿಕ್ಕಟ್ಟುಗಳನ್ನು ನಿವಾರಿಸುತ್ತಿದ್ದವರು ದಿವಂಗತ ಅನಂತ ಕುಮಾರ್. ಯಡಿಯೂರಪ್ಪ ಮತ್ತು ಅನಂತಕುಮಾರ್ ನಡುವೆ ರಾಜಕೀಯ ಪೈಪೋಟಿ ಇದ್ದರೂ ಅದನ್ನು ಮೀರಿದ ವೈಯಕ್ತಿಕ ಸಂಬಂಧ ಇತ್ತು. ಕರ್ನಾಟಕದ ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆಯವರ ಸ್ಥಾನ ತುಂಬುವ ಪ್ರಯತ್ನದಲ್ಲಿದ್ದ ಅನಂತಕುಮಾರ್ ಅವರಿಗೆ ಒಕ್ಕಲಿಗ ಮತ್ತು ಲಿಂಗಾಯತ ಸ್ವಾಮಿಗಳ ಜೊತೆ ಆತ್ಮೀಯವಾದ ಮತ್ತು ಅಷ್ಟೇ ಗಟ್ಟಿಯಾದ ಸಂಬಂಧ ಇತ್ತು. ಆದರೆ ಅನಂತಕುಮಾರ್ ಅವರ ಜಾಗಕ್ಕೆ ಬಂದಿರುವ ಸಂತೋಷ್ ಮತ್ತು ಜೋಶಿ ತಮ್ಮನ್ನು ಬ್ರಾಹ್ಮಣ ನಾಯಕರೆಂದು ಬಿಂಬಿಸಿಕೊಂಡು ಬಂದರೇ ವಿನಾ ಲಿಂಗಾಯತ-ಒಕ್ಕಲಿಗ ಸಮಾಜದ ಸ್ವಾಮಿಗಳು ಹಾಗೂ ನಾಯಕರೊಂದಿಗೆ ಹೆಚ್ಚು ಬೆರೆತವರೇ ಅಲ್ಲ. ಆ ಸಮುದಾಯಗಳ ಮೇಲೆ ಪ್ರಭಾವ ಬೀರುವಷ್ಟು ಅವರು ಶಕ್ತರೂ ಆಗಿಲ್ಲ. ಇಬ್ಬರೂ ಒಂದು ಗುಂಪಿನ ನಾಯಕರಾಗಿದ್ದಾರೆ ಅಷ್ಟೆ.
ಇದರಿಂದಾಗಿ ರಾಜ್ಯ ಬಿಜೆಪಿ ಒಡೆದ ಮನೆ ಮಾತ್ರವಲ್ಲ, ಹಿರಿಯರಿಲ್ಲದ ಮನೆಯೂ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.