ಮಳೆಯಿಂದಲೇ ಬದುಕುತ್ತಿದ್ದ ಮಲೆನಾಡು, ಎರಡು ವರ್ಷಗಳಿಂದ ಮಳೆಯಿಂದಲೇ ನಲುಗಿಹೋಗಿದೆ. ಮಲೆನಾಡಿನಲ್ಲಿ ಕಂಡು–ಕೇಳದ ಭೂಕುಸಿತವಾಗಿದೆ. ಕಳೆದವರ್ಷ ಕೊಡಗಿನಲ್ಲಿ ಆದ ಹಾನಿ ಈ ವರ್ಷ ಚಿಕ್ಕಮಗಳೂರು ಭಾಗದಲ್ಲಾಗಿದೆ. ಮಳೆಯ ನೀರು ಭೂಮಿಯೊಳಗೆ ಇಳಿಯದೆ, ಪೈಪುಗಳ ಮೂಲಕ ಹರಿದಂತೆ ಹರಿದುಹೋಗಿ, ಹತ್ತಿರದ ಹೇಮಾವತಿ ಡ್ಯಾಂ ಮತ್ತು ದೂರದ ಹೊಸಪೇಟೆಯ ತುಂಗಾಭದ್ರಾ ಡ್ಯಾಂ ತುಂಬಿದವು. ಇದಕ್ಕೆ ಕಾರಣವೇನು ಎಂಬುದು ಇಲ್ಲಿ ಬಹಳ ಮುಖ್ಯವಾದ ಪ್ರಶ್ನೆ.
ಮಳೆಯಿಂದ ಗುರುತರವಾದ ಹಾನಿಯಾಗಿರುವುದು ಈ ಎರಡು ವರ್ಷಗಳಲ್ಲಿ. ಆದರೆ, ಇದಕ್ಕೆ ಕಾರಣ ಮಲೆನಾಡಿನ 20-30 ವರ್ಷಗಳ ಇತಿಹಾಸದಲ್ಲಿದೆ. ಮಳೆಯೂ ಸೇರಿದಂತೆ ಮಲೆನಾಡಿಗೆ ಸ್ಥಳೀಯ ನಿಸರ್ಗ ಸಂಪತ್ತಿದೆ. ಹಿಂದಿನ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಈಗಿನ ಮಳೆ ಏನೇನೂ ಅಲ್ಲ. ಆಗ ದೊಡ್ಡ ಮಳೆ ಬಂದರೆ ‘ದಯ್ಯ (ದೆವ್ವ) ಲೋಕದ ಮಳೆ ಬಂತು’ ಎನ್ನುತ್ತಿದ್ದೆವು. ಇಲ್ಲಿ ಅದೆಷ್ಟೋ ವರ್ಷಗಳಿಂದ ಬೆಳೆದುನಿಂತಿರುವ ನೂರಾರು ಜಾತಿಯ ಮರಗಳಿವೆ. ಇವುಗಳ ಕೆಳಗೆ ತರಾವರಿ ಗಿಡಗಳು, ಬೀಳುಬಳ್ಳಿಗಳು, ಹುಲ್ಲು ಬೆಳೆಯುತ್ತವೆ. ಮಳೆಗಾಲದಲ್ಲಿ ಒದ್ದೆಯಾಗಿ ಕರಗಿದ ಎಲೆಗಳಿಂದ ಜಿಗಣಿ (ಇಂಬಳ) ಆಗುತ್ತವೆ. ಸಣ್ಣಪುಟ್ಟ ಗಿಡಮರ, ಪೊದೆಗಳಲ್ಲಿ ನೂರಾರು ಸಣ್ಣಪುಟ್ಟ ಪ್ರಾಣಿ ಪಕ್ಷಿಗಳು ಬದುಕುತ್ತವೆ. ಸ್ಥಳೀಯ ಜಾತಿಯ ಮರಗಳು ಹೆಚ್ಚು ನೀರು ಮತ್ತು ಹೆಚ್ಚು ಸಾರವನ್ನು ಹೀರಿಕೊಳ್ಳುವುದಿಲ್ಲ. ಇವು ತಾವೂ ಬದುಕಿ, ಇತರ ಸಸ್ಯ, ಪ್ರಾಣಿಪಕ್ಷಿಗಳಿಗೂ ಬದುಕಲು ಬಿಡುತ್ತವೆ. ಇದು ಸಹಬಾಳ್ವೆ.
ಮಲೆನಾಡಿನಲ್ಲಿ ಹೊರಗಿನಿಂದ ತಂದಿರುವ ಕೆಲವು ಮರಗಳನ್ನು ನೆಡಲಾಗಿದೆ. ಕಾಫಿ ತೋಟಗಳಲ್ಲಿ ನೆರಳಿನ ಹೆಸರಿನಲ್ಲಿ ಸಿಲ್ವರ್, ಪಂಗಾರ, ಗೊಬ್ಬರದ ಗಿಡ ನೆಡಲಾಗಿದೆ. ಅರಣ್ಯೀಕರಣದ ಹೆಸರಿನಲ್ಲಿ ಸಾಗುವಾನಿ, ಅಕೇಶಿಯ, ನೀಲಗಿರಿ ನೆಡಲಾಗಿದೆ. ಇತ್ತೀಚೆಗೆ ಕೆಲವರು ಪಲೋಟ (ಮೂರ್ನಾಲ್ಕು ವರ್ಷದಲ್ಲಿ 20-30 ಅಡಿ ಎತ್ತರ ಬೆಳೆಯುವ ಗಿಡ. ಇವು ಹಣ ಗಳಿಸಲು ಮಾರಾಟ ಮಾಡುವಂತಹವು) ನೆಡುತ್ತಿದ್ದಾರೆ. ಈ ಸಸ್ಯಗಳಿಗೆ ತಾಯಿಬೇರಿಲ್ಲ. ಇವುಗಳ ಕೆಳಗೆ ಒಂದು ಸಣ್ಣಹುಲ್ಲೂ ಬೆಳೆಯುವುದಿಲ್ಲ. ಜಿಗಣಿ, ಹುಳುಹುಪ್ಪಟೆಗಳಾವುವೂ ಇವುಗಳ ಕೆಳಗೆ ಆಗುವುದಿಲ್ಲ. ಇವು ಭೂಮಿಯಿಂದ ಹೆಚ್ಚುನೀರು ಮತ್ತು ಹೆಚ್ಚು ಸಾರವನ್ನು ಹೀರಿಕೊಳ್ಳು
ತ್ತವೆ. ಇವು, ತಾವು ಮಾತ್ರ ಬೆಳೆಯುತ್ತವೆ; ಬೇರೆಯವನ್ನು ಬೆಳೆಯಲು ಬಿಡುವುದಿಲ್ಲ. ಇದು ಶೋಷಣೆಯ ಬಾಳ್ವೆ.
ಹಿಂದೆ, ನೀರು ಹರಿಯುವ ಪ್ರದೇಶದಲ್ಲಿ ಮಣ್ಣು ಕುಸಿಯದಂತೆ ತಡೆಯಲು ಬೊಗಸಿ ಮರ, ಮುಂಡುಗ, ಕ್ಯಾದಗೆ, ನೊಜ್ಜೆ ನೆಡುತ್ತಿದ್ದರು. ಪಟ್ಟೆಹುಲ್ಲು, ಶುಂಠಿಹುಲ್ಲು ಎಲ್ಲವೂ ತಮ್ಮ ಬೇರುಗಳ ಮೂಲಕ ಮಣ್ಣು ಸವೆತವನ್ನು ತಡೆಯುತ್ತಿದ್ದವು. 70ರ ದಶಕದಿಂದ ಈಚೆಗೆ ಕಾಂಗ್ರೆಸ್ ಗಿಡ ತಾನಾಗಿಯೇ ಪ್ರತ್ಯಕ್ಷವಾಯಿತು. ಇತ್ತೀಚೆಗೆ ಗೊಬ್ಬರದ ಗಿಡವನ್ನು ಹೋಲುವ ಮತ್ತೊಂದು ಗಿಡ ರಸ್ತೆ ಬದಿಯಲ್ಲಿ ಬೆಳೆಯುತ್ತಿದೆ. ಇವೆರಡೂ ಹೆಚ್ಚು ನೀರು ಮತ್ತು ಹೆಚ್ಚು ಸಾರವನ್ನು ಹೀರಿಕೊಳ್ಳುತ್ತವೆ. ಹಿಂದೆಲ್ಲ ಕಳ್ಳಿನೆಟ್ಟು, ಅದಕ್ಕೆ ಬಿದಿರುದಬ್ಬೆಗಳನ್ನು ಕಟ್ಟಿ ಬೇಲಿ ಮಾಡುತ್ತಿದ್ದರು. ಕಳ್ಳಿ ಹಾಲು ರೋಗನಿರೋಧಕ. ಇದರ ಕಾಯಿ ಆ್ಯಂಟಿಸೆಪ್ಟಿಕ್. ಈಗೆಲ್ಲ ಮುಳ್ಳುತಂತಿಯ ಬೇಲಿ ಮಾಡುತ್ತಿದ್ದಾರೆ. ಇದಕ್ಕೆ ಕಟಿಂಗ್ಸ್ ನೆಡುತ್ತಿದ್ದಾರೆ. ಇದು ಕೂಡ ಮಲೆನಾಡಿಗೆ ಹೊರಗಿನಿಂದ ಬಂದಿರುವ ಸಸ್ಯ.
ಮುಂಗಾರು ಮಳೆಯು ಗುಡುಗು, ಸಿಡಿಲು, ಮಿಂಚು, ಗಾಳಿಯೊಟ್ಟಿಗೆ ಬರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇವು ಯಾವುವೂ ಒಂದರೊಡನೆ ಒಂದು ಬೆರೆತು ಬರುತ್ತಿಲ್ಲ. ಮಳೆ ಒಂಟಿಯಾಗಿ ಬಂದು, ಅದೂ ಎಲ್ಲೆಲ್ಲೋ ಅಬ್ಬೇಪಾರಿಯಾಗಿ ದಿಕ್ಕುತಪ್ಪಿದಂತೆ ಬೀಳುತ್ತಿದೆ. ಗುಡುಗು, ಸಿಡಿಲು, ಗಾಳಿ ಬಂದಾಗ ನೆಲ ಅದುರಿದಾಗ ಅವೆಷ್ಟೋ ಬೀಳುಬಳ್ಳಿಗಳು ನೆಲದೊಳಗಿಂದ ಮೂಡಿಬರುತ್ತಿದ್ದವು. ಹುಳುಹುಪ್ಪಟೆಗಳು ಎದ್ದು ಬರುತ್ತಿದ್ದವು. ನೀರಿರುವ ಸ್ಥಳಗಳಲ್ಲಿ ಹುಲ್ಲೇಡಿ, ಮುಂಡೇಡಿ, ತರಾವರಿ ಮೀನು, ಗೊದಮಟ್ಟೆ, ದೋಂಕರಕಪ್ಪೆಗಳು ಹೊರಬರುತ್ತಿದ್ದವು. ಬಗೆಬಗೆಯ ಅಣಬೆಗಳು ಏಳುತ್ತಿದ್ದವು. ಬಿದಿರುಹಿಂಡಿಲುಗಳಲ್ಲಿ ಕಳಲೆ ಹುಟ್ಟುತ್ತಿದ್ದವು. ಇನ್ನೂ ಏನೇನೋ.
ಮುಂಗಾರು ಮಳೆಯ ಅದ್ಭುತವೇ ಹಾಗೆ. ಒಂದೆರಡು ಮಳೆ ಆದನಂತರ ಅನೇಕ ಕಡೆ ನಿರಂತರವಾಗಿ ನೀರಿನ ಬುಗ್ಗೆಗಳು ಪುಟಿದೇಳುತ್ತಿದ್ದವು. ಇದರಿಂದ ಗದ್ದೆಗಳಿಗೂ, ಹಳ್ಳಕೊಳ್ಳ, ನದಿಗಳಿಗೂ ನೀರು ಆಗುತ್ತಿತ್ತು. ಆದರೆ ಈಚೆಗಿನ ಆತಂಕಕಾರಿ ಸಂಗತಿಯೇನೆಂದರೆ, ನೆಲದೊಳಗಿಂದ ಈ ಜಲವೇ ಬರುತ್ತಿಲ್ಲ. ಈ ನೆಲ ಈಗ ತನ್ನ ಫಲವಂತಿಕೆಯನ್ನೇ ಕಳೆದುಕೊಂಡಿದೆ.
1970-80ರ ದಶಕದಲ್ಲಿ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸಲಾಯಿತು. 1992ರಲ್ಲಿ ಜಾಗತೀಕರಣದ ನೀತಿಗಳನ್ನು ಜಾರಿಗೊಳಿಸಲಾಯಿತು. ಮಲೆನಾಡಿನ ಮುಖ್ಯ ಬೆಳೆಗಳು ಭತ್ತ ಮತ್ತು ಕಾಫಿ. ಕಾಫಿಗೆ ಮುಕ್ತ ಮಾರುಕಟ್ಟೆ ಬಂದು, ದರ ಐದಾರು ಪಟ್ಟು ಜಾಸ್ತಿಯಾಯಿತು. ಮಳೆ ಕಡಿಮೆಯಾಯಿತು. ಭತ್ತದ ಉತ್ಪಾದನಾ ವೆಚ್ಚ ಹೆಚ್ಚಾಯಿತು. ಹಾಗಾಗಿ ಗದ್ದೆಗಳಿಗೆ ಕಾಫಿ, ಅಡಿಕೆ ಹಾಕಿದರು. ಈ ತೋಟಗಳಿಗೆ ಬೇಸಿಗೆಯಲ್ಲಿ ನೀರುಣಿಸಲು, ಅಕ್ಕಪಕ್ಕದ ಹಳ್ಳಕೊಳ್ಳಗಳಿಂದ ಪಂಪ್‍ಸೆಟ್ ಮೂಲಕ ನೀರು ಎತ್ತಿದರು. ಪರಿಣಾಮವಾಗಿ ಅವೆಲ್ಲ ಬತ್ತಿಹೋದವು. ಕಾಫಿ, ಅಡಿಕೆ, ಶುಂಠಿಯಿಂದ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಯಿತು. ಗದ್ದೆಗಳಲ್ಲಿ ಭತ್ತ ಬೆಳೆಯಲು ನೀರು ನಿಲ್ಲಿಸುತ್ತಿದ್ದುದು ನಿಂತಿದ್ದರಿಂದ ಅಂತರ್ಜಲ ಕಡಿಮೆಯಾಯಿತು. ಬೆಳೆಗೆ ತರಾವರಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿದರು. ಇದರಿಂದ ನೂರಾರು ಬಗೆಯ ಗಿಡಬಳ್ಳಿ ಬೀಳುಗಳು, ಹತ್ತಾರು ಜಾತಿಯ ಹುಲ್ಲು ನಾಶವಾದವು. ನೆಲದೊಳಗಿಂದಲೇ ಹುಟ್ಟಿಬರುತ್ತಿದ್ದ ಹತ್ತಾರು ಜಾತಿಯ ಹುಳಹುಪ್ಪಟೆಗಳು ಬರದಂತೆ ಆಯಿತು.
ಕಟ್ಟಡ, ಹೋಮ್‍ಸ್ಟೇ, ರೆಸಾರ್ಟ್, ನರ್ಸರಿ, ರಸ್ತೆ ಮುಂತಾದವುಗಳನ್ನು ಮಾಡಲು ಮಲೆನಾಡಿನ ಭೂಮಿಯನ್ನು ಜೆ.ಸಿ.ಬಿ. ಯಂತ್ರಗಳಿಂದ ಧ್ವಂಸ ಮಾಡಿದರು. ಕಟ್ಟಡ ಮತ್ತಿತರ ಅಗತ್ಯಗಳಿಗೆ ಕಲ್ಲುಬಂಡೆಗಳನ್ನು ಪುಡಿಮಾಡಿದರು. ಕಾಫಿ ತೋಟಗಳ ಮಾಲೀಕರು ಸ್ಥಳೀಯ ಜಾತಿಯ ಮರಗಳನ್ನು ಕಡಿಕಡಿದು ಮಾರಿದರು. ಕಾಡಿನಲ್ಲಿದ್ದ ಬಹುತೇಕ ಮರಗಳನ್ನು ಲೂಟಿಕೋರರು ಸಾಗಿಸಿದರು. ಮಲೆನಾಡನ್ನು ಹೀಗೆ ಬರಡು ಮಾಡಿದ ಮೇಲೆ, 1992ರ ನಂತರ ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನ, ವಿಶೇಷ ಆರ್ಥಿಕ ವಲಯಗಳ ಹೆಸರಿನಲ್ಲಿ ಈ ಪ್ರದೇಶದ ಆದಿವಾಸಿ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸುವ ಕೆಲಸ ಭರದಿಂದ ಸಾಗಿದೆ. ಮಲೆನಾಡಿನ ಪರಿಸರ ಜನಸಾಮಾನ್ಯರಿಂದ ನಾಶವಾಗಿಲ್ಲ. ಅಭಿವೃದ್ಧಿ ಹೆಸರಿನ ಯೋಜನೆಗಳಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಬಂದ ಬೇಡಿಕೆಯಿಂದಾಗಿ ಈ ದುಃಸ್ಥಿತಿ ಬಂದಿದೆ.
ಕೃಷಿಗೆ ಒಗ್ಗದ ಪ್ರದೇಶದಲ್ಲೂ ಕೃಷಿ ಮಾಡಿರುವ ಕಡೆ, ಮರಗಳನ್ನು ಕಡಿದಿರುವ ಕಡೆ, ಕಲ್ಲು ಬಂಡೆಗಳನ್ನು ಸಿಡಿಸಿರುವ ಕಡೆ ಭೂಕುಸಿತ ಆಗಿದೆ. ಮಲೆನಾಡಿಗೆ ಈಗ ಆಗಿರುವ ಹಾನಿ, ಮುಂದೆ ಸಂಭವಿಸಲಿರುವ ಭಯಾನಕ ಹಾನಿಯೊಂದರ ಗಂಭೀರ ಮುನ್ಸೂಚನೆಯಂತೆ ಕಾಣುತ್ತಿದೆ ಮತ್ತು ಈಗಿನ ಹಾನಿಯ ಪರಿಹಾರಕ್ಕೆ ಅನೇಕ ವರ್ಷಗಳು ಬೇಕಾಗುತ್ತವೆ. ಸ್ಥಳೀಯ ಮರಗಳನ್ನು ಬೆಳೆಸುವುದು, ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆ ಕಡಿಮೆ ಮಾಡುವುದು, ಗದ್ದೆಗಳ ಪ್ರಮಾಣವನ್ನು ಹೆಚ್ಚಿಸಿ ಭತ್ತ ಬೆಳೆಯುವುದು, ನೆಲದೊಳಗೆ ಮಳೆ ನೀರು ಇಳಿಯುವಂತೆ ಮಾಡಲು ಕಾಫಿ ತೋಟಗಳಲ್ಲಿ ತೊಟ್ಟಿಲುಗುಂಡಿಗಳನ್ನು ಕಡ್ಡಾಯವಾಗಿ ಮಾಡಬೇಕು. ಬೋರ್‌ವೆಲ್ ತೆಗೆಸುವುದನ್ನು, ಭೂಮಿ ಅಗೆಯುವುದನ್ನು ಕಡಿಮೆ ಮಾಡಬೇಕು.
ಮಲೆನಾಡಿನಲ್ಲಿ ಒಂದು ಮಾತಿದೆ. ‘ಸಾಲಾಗಿರುವ ಮನೆಗಳಿಗೆ ಬೆಂಕಿಬಿದ್ದರೆ ಸಂಪಾನನ ಮನೆ (ತಾನು ಮಾತ್ರ ಒಳ್ಳೆಯವನೆಂದು ತಾನೇ ಘೋಷಿಸಿಕೊಂಡಿರುವವನು) ಉಳಿಯುವುದಿಲ್ಲ’ ಎಂದು. ಹೋದ ವರ್ಷ ಕೊಡಗು, ಈ ವರ್ಷ ಮಲೆನಾಡಿನ ಕೆಲವು ಭಾಗ. ಮುಂದಿನ ವರ್ಷ? ಇದು ಹೀಗೇ ಸಾಗುತ್ತದೆ. ಮುಂದುವರಿದು ಇದು ಇಡೀ ಪಶ್ಚಿಮಘಟ್ಟವನ್ನೇ ಆಪೋಶನ ತೆಗೆದುಕೊಳ್ಳಬಹುದು. ಅದಕ್ಕಿಂತ ಮೊದಲೇ ಎಚ್ಚರ ವಹಿಸುವುದು ಅಗತ್ಯ.
ಲೇಖಕ: ಪ್ರಾಧ್ಯಾಪಕ, ಹಂಪಿ ಕನ್ನಡ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.