ಸಚಿವರೊಬ್ಬರು ಇದೀಗ ಮಾಜಿ ಆದರು. ಕೆಲಸ ಕೊಡಿಸುವ ಆಮಿಷ ಒಡ್ಡಿ, ಮಹಿಳೆಯನ್ನು ಬಳಸಿಕೊಂಡರು ಎಂಬುದು ಅವರ ಮೇಲಿನ ಆರೋಪ. ಅದಕ್ಕಾಗಿ ಮಹಿಳೆ ಹಾಗೂ ಅವರ ಕುಟುಂಬದವರು ದೂರು ನೀಡಲೂ ಧೈರ್ಯವಿಲ್ಲದೆ, ಸಾಮಾಜಿಕ ಕಾರ್ಯಕರ್ತರೊಬ್ಬರ ಸಹಾಯ ಪಡೆದಿದ್ದಾರೆ.
ಇಡೀ ಪ್ರಕರಣವನ್ನು ಬದಿಗಿರಿಸಿ, ಈಗ ನಮ್ಮ ಆಲೋಚನಾ ಧಾಟಿಯ ಬಗ್ಗೆ ಚರ್ಚಿಸೋಣ.
ಒಂದು ವೇಳೆ, ಸಚಿವರು ಆಕೆಗೆ ಮಾತು ಕೊಟ್ಟಂತೆ ಕೆಲಸ ನೀಡಿದ್ದರೆ, ಇದು ಅನ್ಯಾಯವಾಗುತ್ತಿರಲಿಲ್ಲವೆ? ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಪಡೆಯಲು ಮಹಿಳೆಯರು ಇಷ್ಟು ದೊಡ್ಡಮಟ್ಟದ ಬೆಲೆ ತೆರಬೇಕೇ?
ಹಾಗೊಂದು ವೇಳೆ ಕೆಲಸ ಕೊಟ್ಟಿದ್ದೇ ಆದರೆ ಅದು ಮಹಾಪರಾಧವಾಗುತ್ತಿರಲಿಲ್ಲವೇ? ನೈತಿಕ ಮತ್ತು ಅನೈತಿಕ ಪ್ರಶ್ನೆಗಳಲ್ಲಿ ಇಲ್ಲಿ ಇಬ್ಬರೂ ಹೊಣೆಗಾರರು ಆಗುತ್ತಿದ್ದರು.
ವ್ಯಕ್ತಿಗಳಿಬ್ಬರು ಪ್ರಕೃತಿ ಸಹಜವಾಗಿ ಸಾಮೀಪ್ಯವನ್ನು ಬಯಸಿದರೆ, ಸಾಂಗತ್ಯವನ್ನು ಸುಖಿಸಿದರೆ ಅಲ್ಲಿ ಸಲುಗೆ ತಾನಾಗಿಯೇ ಮೂಡುತ್ತದೆ. ಅದು ಅವರಿಬ್ಬರ ವೈಯಕ್ತಿಕ ವಿಷಯ. ಅವರಿಬ್ಬರೂ ತಮ್ಮ ಕುಟುಂಬಗಳಿಗೆ, ತಮ್ಮನ್ನು ನಂಬಿದವರಿಗೆ ಉತ್ತರಿಸಲು ಅರ್ಹರಾಗಿರುತ್ತಾರೆ.
ಅವರಿಬ್ಬರಲ್ಲಿ ಒಬ್ಬರಾದರೂ ಸಾರ್ವಜನಿಕ ಜೀವನದಲ್ಲಿದ್ದರೆ ತಮ್ಮ ಆಸೆ, ಆಕಾಂಕ್ಷೆಗಳ ಮೇಲೆ ಕಡಿವಾಣ ಹಾಕಿಕೊಳ್ಳಲೇಬೇಕಾಗುತ್ತದೆ. ಸಂಯಮಿಯಾಗದಿದ್ದಲ್ಲಿ ಸಾರ್ವಜನಿಕ ಜೀವನದಿಂದಾಚೆಯೇ ಉಳಿಯಬೇಕಾಗುತ್ತದೆ.
ಒಂದು ಕೆಲಸಕ್ಕಾಗಿ, ಸ್ವಲಾಭಕ್ಕಾಗಿ ಯುವಕನಾಗಲೀ, ಯುವತಿಯಾಗಲೀ ತಮ್ಮ ದೇಹವನ್ನು ಲಂಚದ ರೂಪದಲ್ಲಿ ನೀಡುವುದಾದರೆ ನೈತಿಕ ಪಾಠ ಎಲ್ಲಿಂದ ಆರಂಭಿಸಬೇಕು? ಕೆಲಸ ನೀಡಲಿಲ್ಲವೆಂಬ ಕಾರಣಕ್ಕೆ ಲೈಂಗಿಕ ದೌರ್ಜನ್ಯ ಎಂದು ಪರಿಭಾವಿಸಿದರೆ, ಕೆಲಸ ನೀಡಿದ್ದರೆ ಅದು ನೈತಿಕ ಅಧಃಪತನವಾಗುತ್ತಿರಲಿಲ್ಲವೇ?
ಇಲ್ಲಿ, ನಾಣ್ಯವೊಂದು ಹೇಗೆ ಬಿದ್ದರೂ ತಪ್ಪು ಎನ್ನುವಂಥ ಸನ್ನಿವೇಶವಿದೆ. ಹೀಗಿರುವಾಗ ಜನರೆಲ್ಲರೂ ಈ ಸನ್ನಿವೇಶವನ್ನು ಆಸ್ವಾದಿಸುವ, ರಂಗುರಂಗಿನ ತಲೆಬರಹಗಳನ್ನು ನೀಡುವ, ಮೀಮುಗಳನ್ನು ಸೃಷ್ಟಿಸುವ, ಜೋಕುಗಳನ್ನು ದಾಟಿಸುವ ಕೆಲಸಗಳಲ್ಲಿ ನಿರತರಾಗಿದ್ದಾರೆ.
ಹಾಗಿದ್ದಲ್ಲಿ, ಯಾವ ಮತ್ತು ಯಾರ ವ್ಯಕ್ತಿತ್ವದಲ್ಲಿ ಕುಂದು ಇದೆ? ಇಂಥ ಘಟನೆಗಳು ಜರುಗಿದಾಗ, ನಮ್ಮ ನೆನಪು ಅದೆಷ್ಟು ತಾತ್ಕಾಲಿಕವಾಗಿರುತ್ತದೆಯೆಂದರೆ, ಮುಂದಿನ ಆಡಳಿತ ಅವಧಿಯಲ್ಲಿ ಇದ್ಯಾವುದೂ ಗಣನೆಗೆ ಬಾರದೆ ಅವರು ಆಡಳಿತರೂಢರಾಗಿರುತ್ತಾರೆ.ಸಂತ್ರಸ್ತೆಯರು ಲಾಭಕೋರರಂತೆ ವರ್ತಿಸಿ, ಜನಮಾನಸದಿಂದ ಕಣ್ಮರೆಯಾಗಿರುತ್ತಾರೆ.
ಲೈಂಗಿಕ ಜೀವನ ಅವರವರ ಆಯ್ಕೆಗೆ ಬಿಟ್ಟಿದ್ದು. ಇದನ್ನು ರಂಜನೀಯವಾಗಿ, ಅವಹೇಳನಕಾರಿಯಾಗಿ ಪ್ರತಿಬಿಂಬಿಸಬೇಕಾಗಿಲ್ಲ. ಕೆಲಸಕ್ಕಾಗಿ ತಮ್ಮನ್ನು, ತಮ್ಮ ತನುವನ್ನು ಬಳಸುವುದೇ ಮೊದಲ ಮತ್ತು ಅಂತಿಮ ಕುಕರ್ಮ. ಅದನ್ನು ನೇತಾರರು ವಿರೋಧಿಸಿದ್ದಲ್ಲಿ ನಾಯಕರಾಗುತ್ತಿದ್ದರು. ನಾಯಕರಿಂದ ಅಂಥ ಆಹ್ವಾನವಿದ್ದುದನ್ನು ಮೊದಲಿಗೇ ನಿರಾಕರಿಸಿದ್ದಲ್ಲಿ ಚಳವಳಿಕಾರ್ತಿಯೊಬ್ಬಳು, ಗಟ್ಟಿಗಿತ್ತಿಯೊಬ್ಬಳು ಸಮಾಜದಲ್ಲಿ ತಲೆ ಎತ್ತುವಂತಾಗುತ್ತಿತ್ತು.
ಎರಡೂ ಕಡೆಯಿಂದ ಅಂಥ ನಿರಾಕರಣಗಳನ್ನು ಕಾಣುತ್ತಿಲ್ಲ. ಹಾಗಿದ್ದಲ್ಲಿ ಸೋತಿರುವುದು ಎಲ್ಲಿ? ಯಾವಾಗ ಸಂತ್ರಸ್ತರು, ಆರೋಪಿಗಳಾಗುತ್ತಾರೋ, ಆರೋಪಿಗಳು ಬಲಿಪಶುಗಳಂತೆ ಬದಲಾಗುವುದರಲ್ಲಿ ತುಂಬ ಹೊತ್ತು ಬೇಕಾಗುವುದಿಲ್ಲ.
ಯಾಕೀ ತಹತಹ?
ಲೈಂಗಿಕ ಕಾಮನೆಗಳು ಅತಿ ಸಹಜ. ಪ್ರೀತಿ ಇದ್ದಲ್ಲಿ ಚಿತ್ರಗಳ ವಿನಿಮಯವೂ ಅತಿಸಹಜ. ಆದರೆ ಅವುಗಳನ್ನು ಜಗಜ್ಜಾಹೀರುಗೊಳಿಸುವ ಮನಃಸ್ಥಿತಿ ಹತಾಶೆಯಿಂದ ಕೂಡಿರುತ್ತದೆ. ಇಲ್ಲವೇ ಲಾಭಕೋರಿ ಮನೋಭಾವದಿಂದ ಕೂಡಿರುತ್ತದೆ. ಯಾರು ಎಂಥ ಮಾನಸಿಕ ಸ್ಥಿತಿಯುಳ್ಳವರು? ಅವರು ಈ ಹಾದಿಯಲ್ಲಿ ನಡೆಯಲು ಕಾರಣಗಳೇನು? ಎಂಬುದನ್ನು ಅವರೊಂದಿಗೆ ಮಾತನಾಡಿದಾಗ ಮಾತ್ರ ಸಾಧ್ಯ.
ಇನ್ನು ಅಧಿಕಾರ, ಜಾಣ್ಮೆ ಹೊಂದಿದವರಿಗೆ ಲೈಂಗಿಕ ಕ್ರಿಯೆಯೊಂದು ಸಮಯಾಲಾಪನೆ ಹಾಗೂ ದೈಹಿಕ ಅಗತ್ಯ ಅಷ್ಟೆ. ಅಲ್ಲಿ ಯಾವ ಮಾನಸಿಕ ಅಥವಾ ಭಾವನಾತ್ಮಕ ಬಾಂಧವ್ಯಗಳು ಹುಟ್ಟಿರುವುದಿಲ್ಲ. ತಮ್ಮ ಅಧಿಕಾರ ಸ್ಥಾಪನೆಗಾಗಿ ಅವರು ಏನನ್ನಾದರೂ ಬಯಸಬಹುದು. ಹೇಗಾದರೂ ಪಡೆಯಬಹುದು. ಮನ ಒಲಿಸಿ, ಅನಿವಾರ್ಯ ಸೃಷ್ಟಿಸಿ, ಬಲವಂತದಿಂದ ಅಥವಾ ಆಮಿಷವೊಡ್ಡಿ ಪಡೆಯುತ್ತಾರೆ. ಪಡೆಯುವುದು ಎನ್ನುವುದಕ್ಕಿಂತಲೂ ವಿಜ್ರಂಭಿಸುತ್ತಾರೆ. ಅನುಭವಿಸುವುದನ್ನೂ, ಅನುಭೂತಿಯನ್ನೂ ಅಧಿಕಾರ ಅಂದುಕೊಳ್ಳುತ್ತಾರೆ. ಅದೇ ದುರಂತ.
ಇಂಥ ಸನ್ನಿವೇಶಗಳು ಎದುರಾದಾಗ ನಾವೆಲ್ಲರೂ ಅದನ್ನು ಸಂಭ್ರಮಿಸುವುದು, ಇಡೀ ದಿನ ಅದರಲ್ಲಿಯೇ ಕಳೆದುಹೋಗುವುದು, ಆ ವಿಕೃತಿಯನ್ನು ಆಡಿಕೊಳ್ಳುವುದು, ಇನ್ನೂ ದೊಡ್ಡ ವಿಕೃತಿ. ವ್ಯವಸ್ಥೆಯ ಸುಧಾರಣೆಯಾಗಬೇಕು ಎಂದು ಬೊಬ್ಬಿರಿಯುವ ನಾವು, ನಾವೇ ಈ ವ್ಯವಸ್ಥೆ ಎಂದರಿತುಕೊಳ್ಳುವುದು ಯಾವಾಗ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.