ADVERTISEMENT

Explainer | ನೀಚ ಅನುಸಂಧಾನಕ್ಕೆ ಕಪಾಳ ಮೋಕ್ಷ: ಸುಪ್ರೀಂಕೋರ್ಟ್‌ ತೀರ್ಪು

ಎ.ಎಸ್‌.ಪೊನ್ನಣ್ಣ
Published 14 ನವೆಂಬರ್ 2019, 2:29 IST
Last Updated 14 ನವೆಂಬರ್ 2019, 2:29 IST
   

ಭಾರತದ ಜನತಂತ್ರ ವ್ಯವಸ್ಥೆಯೊಳಗೆ ಇವತ್ತು ಕಾರ್ಪೊರೇಟ್‌ ಸಂಸ್ಕೃತಿ ಗಾಢವಾಗಿ ನುಸುಳಿದ್ದು; ಚುನಾವಣೆಗೆ ಅಕ್ರಮ ಹಣ ಬಳಕೆಯಾಗುವುದನ್ನು ಸಲೀಸುಗೊಳಿಸಿದೆ. ಇದರಿಂದ ನಮ್ಮ ರಾಜಕಾರಣ, ಆಡಳಿತ ವ್ಯವಸ್ಥೆ ಅಪವಿತ್ರ ಸಿದ್ಧಾಂತ ಮತ್ತು ನೀಚ ಅನುಸಂಧಾನಗಳ ಬುನಾದಿಯಲ್ಲಿ ಬೆಳೆಯುತ್ತಿದೆ. ಜನತಂತ್ರಕ್ಕೆ ಬಂದೆರಗಿರುವ ಈ ಅಪಾಯವನ್ನು ಸುಪ್ರೀಂ ಕೋರ್ಟ್‌ ಅತ್ಯಂತ ಸೂಕ್ಷ್ಮವಾಗಿ ಗಮನಿಸಿದೆ. ಅಂತೆಯೇ, ಸಮಯ ಬಂದಾಗ ಇಂತಹ ಅಪಾಯಗಳ ಕುತ್ತಿಗೆಪಟ್ಟಿ ಮೇಲೆ ಹೇಗೆ ಪೆಟ್ಟು ಹಾಕಬೇಕು ಎಂಬುದು ತನಗೆ ಚೆನ್ನಾಗಿ ಗೊತ್ತು ಎಂಬುದನ್ನು ಅನರ್ಹ ಶಾಸಕರ ಪ್ರಕರಣದಲ್ಲಿ ಢಾಳಾಗಿ ತೆರೆದಿಟ್ಟಿದೆ.

ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದಡಿ ರಾಜ್ಯದ 15 ನೇ ವಿಧಾನಸಭೆಯಿಂದ 17 ಶಾಸಕರನ್ನು ಅನರ್ಹಗೊಳಿಸಿದ ಪ್ರಕರಣ ಇತ್ತೀಚಿನ ರಾಜ್ಯ ರಾಜಕಾರಣದಲ್ಲಿ ದೊಡ್ಡದೊಂದು ತುಮುಲವನ್ನೇ ಸೃಷ್ಟಿಸಿತ್ತು. ಈ ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್, ಆರೋಪಿ ಶಾಸಕರನ್ನು ಅನರ್ಹಗೊಳಿಸಿ, ಇನ್ನುಳಿದ ಅವಧಿಗೆ ಮರು ಆಯ್ಕೆಯಾಗದಂತೆ ನಿರ್ಬಂಧ ಹೇರಿದ್ದರು. ವಿಧಾನಸಭಾಧ್ಯಕ್ಷರ ಆದೇಶದಲ್ಲಿನ ಒಂದು ಭಾಗವಾದ; ಶಾಸಕರ ಅನರ್ಹತೆಯ ಅಂಶವನ್ನು ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಇದೀಗ ಎತ್ತಿಹಿಡಿದಿದೆ. ಅನರ್ಹಗೊಂಡ ಶಾಸಕರು ಮರು ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸದಂತೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.

ಪ್ರಸಕ್ತ ದಿನಮಾನಗಳಲ್ಲಿ ಸಭಾಧ್ಯಕ್ಷರ ಹುದ್ದೆ ಎಷ್ಟು ಎತ್ತರದ ಹುದ್ದೆ ಎಂಬುದೇ ಮರೆತು ಹೋದಂತಿತ್ತು. ಸಭಾಧ್ಯಕ್ಷರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ತಾವು ಆಯ್ಕೆಯಾಗಿ ಬಂದಂತಹ ಪಕ್ಷದ ಸಿದ್ಧಾಂತಗಳನ್ನು ದೂರವಿರಿಸಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು ಎಂಬ ಸರಳ ಚೌಕಟ್ಟೇ ಮೂರಾಬಟ್ಟೆಯಾಗಿದೆಯೇನೊ ಎಂದೆನಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಅರೆನ್ಯಾಯಿಕ ಅಧಿಕಾರಿಯ ಹುದ್ದೆ ಹೊಂದಿದ ವಿಧಾನಸಭಾಧ್ಯಕ್ಷರು 17 ಶಾಸಕರನ್ನು ಅನರ್ಹಗೊಳಿಸಿದಾಗ ಪ್ರಜಾತಂತ್ರದ ನೈತಿಕತೆ ಗೆಲುವು ಸಾಧಿಸಿತ್ತು.

ADVERTISEMENT

ಹಾಗಾಗಿಯೇ ರಾಷ್ಟ್ರವಾದಿಗಳು, ಸ್ವಚ್ಛ ರಾಜಕಾರಣದ ಪ್ರತಿಪಾದಕರು ಈ ಪ್ರಕರಣದಲ್ಲಿ ವಿಧಾನಸಭಾಧ್ಯಕ್ಷರು ಕೈಗೊಂಡ ತೀರ್ಮಾನಕ್ಕೆ ಶಹಬ್ಬಾಸ್‌ಗಿರಿ ನೀಡಿದ್ದರು. ಸಭಾಧ್ಯಕ್ಷರ ಆದೇಶ ಈಗ ನ್ಯಾಯಾಂಗ ಪರಾಮರ್ಶೆಯ ವ್ಯಾಪ್ತಿಯಲ್ಲೂ ಭಾಗಶಃ ಸೈ ಎನಿಸಿಕೊಂಡಿದೆ. ಯಾರೇ ಆಗಲಿ ಸಂವಿಧಾನಕ್ಕೆ ಅಗೌರವ ತರುವ ರೀತಿಯಲ್ಲಿ ನಡೆದುಕೊಂಡರೆ, ಅಪಚಾರ ಎಸಗಿದರೆ ತಕ್ಕ ಶಾಸ್ತಿಯಾಗುತ್ತದೆ ಎಂಬುದನ್ನು ನ್ಯಾಯಪೀಠ ಕಪಾಳಕ್ಕೆ ಬಾರಿಸಿ ಎಚ್ಚರಿಸಿದೆ. ಸಂವಿಧಾನದ ಆಶಯಗಳನ್ನು ದೃಢವಾಗಿ ಎತ್ತಿಹಿಡಿಯುವ ಮೂಲಕ ಜನರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಭಾಧ್ಯಕ್ಷರಿಗೂ ಖಡಕ್‌ ಸಂದೇಶವನ್ನೇ ರವಾನಿಸಿದೆ.

‘ಅನರ್ಹ ಶಾಸಕರು ಮರು ಆಯ್ಕೆ ಬಯಸಲು ಸಂವಿಧಾನದ ಹತ್ತನೇ ಶೆಡ್ಯೂಲ್‌ನಲ್ಲಿ ಯಾವುದೇ ನಿರ್ಬಂಧವಿಲ್ಲ’ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಪೀಠ, ‘ಸಂವಿಧಾನದ 164 (1B) ಮತ್ತು 361 (B) ವಿಧಿಯಲ್ಲಿ ಪ್ರತಿಪಾದಿಸಿರುವ ಅಂಶಗಳ ಆಧಾರದಲ್ಲಿ ಅನರ್ಹಗೊಂಡ ಶಾಸನ ಸಭೆಯ ಸದಸ್ಯರು ಸಚಿವ ಪದವಿಯನ್ನಾಗಲಿ ಅಥವಾ ಯಾವುದೇ ರಾಜಕೀಯ ಹುದ್ದೆಗಳನ್ನು ಪಡೆಯಲು ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ, ಭ್ರಷ್ಟಾಚಾರ ಆರೋಪದಲ್ಲಿ ಶಿಕ್ಷೆಗೆ ಒಳಗಾದ, ಆರ್ಥಿಕವಾಗಿ ದಿವಾಳಿಯಾಗಿದ್ದಾರೆ ಎಂದು ಘೋಷಿಸ ಲಾದ ಶಾಸನಸಭೆಯ ಸದಸ್ಯ ರನ್ನು ಜನಪ್ರತಿನಿಧಿ ಕಾಯ್ದೆ–1951ರಲ್ಲಿನ 3ನೇ ಅಧ್ಯಾಯದ 8 ಮತ್ತು 8 ‘A’ ಕಲಂ ಅಡಿಯಲ್ಲಿ ವಿಸ್ತೃತವಾಗಿ ಉಲ್ಲೇಖಿಸಲಾದ ಕಾರಣಗಳಿಗೆ ಅನರ್ಹಗೊಳಿಸಲು ಅವಕಾಶವಿದೆ. ನಿರ್ದಿಷ್ಟ ಅವಧಿಗೆ ಅಂತಹ ಸದಸ್ಯರು ಮರು ಆಯ್ಕೆಯಾಗದಂತೆ ನಿರ್ಬಂಧ ಹೇರುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಆದರೆ, ಸಂವಿಧಾನದ ಹತ್ತನೇ ಶೆಡ್ಯೂಲ್‌ನ ಅಡಿಯಲ್ಲಿ ಅನರ್ಹರಾದ ಶಾಸನಸಭೆಯ ಸದಸ್ಯರನ್ನು ಇಂತಿಷ್ಟೇ ಕಾಲದವರೆಗೆ ಮರು ಆಯ್ಕೆಯಾಗದಂತೆ ತಡೆಯುವ ಬಗ್ಗೆ ಸಂವಿಧಾನದಲ್ಲಾಗಲಿ, ಜನಪ್ರತಿನಿಧಿ ಕಾಯ್ದೆಯಲ್ಲಾಗಲಿ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ವಿಧಾನಸಭಾಧ್ಯಕ್ಷರು ತಮ್ಮ ಅಧಿಕಾರದ ವ್ಯಾಪ್ತಿಯನ್ನು ಅರಿಯುವಲ್ಲಿ ಎಡವಿದ್ದಾರೆ ಎಂಬ ಅಂಶವನ್ನು ತೀರ್ಪಿನಲ್ಲಿ
ಪ್ರಸ್ತಾಪಿಸಲಾಗಿದೆ.

‘ನಮ್ಮ ಅಹವಾಲು ಆಲಿಸಲು ವಿಧಾನಸಭಾಧ್ಯಕ್ಷರು ತಕ್ಕಷ್ಟು ಸಮಯಾವಕಾಶ ನೀಡಲಿಲ್ಲ’ ಎಂಬ ಅರ್ಜಿದಾರರ ಆಕ್ಷೇಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಸಭಾಧ್ಯಕ್ಷರು ಮೂರು ದಿನ ಅವಕಾಶ ನೀಡಿರುವುದು ಸಾಕಷ್ಟು ತೃಪ್ತಿಕರವಾಗಿಯೇ ಇದೆ’ ಎಂದು ಹೇಳಿದೆ. ‘ಇಂತಹ ಪ್ರಕರಣಗಳನ್ನು ಸಂವಿಧಾನದ 226 ಮತ್ತು 227ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್‌ನಲ್ಲೇ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಅರ್ಜಿದಾರರು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ನೇರವಾಗಿ ಸುಪ್ರೀಂ ಕೋರ್ಟ್‌ ಕದ ಬಡಿದಿರುವುದು ಸೂಕ್ತವಾಗಿಯೇ ಇದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯಬೇಕಾದ ಶಾಸಕಾಂಗವು ಆಗಾಗ್ಗೆ ನ್ಯಾಯಾಲಯದಿಂದ ಚಾರಿತ್ರ್ಯದ ಪಾಠ ಹೇಳಿಸಿಕೊಳ್ಳುವುದು ಅತ್ಯಂತ ದುರುದೃಷ್ಟಕರ. ಶಾಸನ ನಿರ್ಮಾತೃಗಳು ಸುಪ್ರೀಂ ಕೋರ್ಟ್‌ನಿಂದ ನೈತಿಕತೆಯ ಪಾಠ ಹೇಳಿಸಿಕೊಳ್ಳುವ ಮಟ್ಟಕ್ಕೆ ತಲುಪಿರುವುದು ಇಂದಿನ ರಾಜಕಾರಣ ಎತ್ತ ಸಾಗುತ್ತಿದೆ ಎಂಬುದರ ದಿಕ್ಸೂಚಿ.

‘ಹುಣ್ಣು ಮಾದರೂ ಕಲೆ ಮಾಯಲಿಲ್ಲ’ ಎಂಬ ಗಾದೆ ಮಾತಿನಂತೆ ಅನರ್ಹ ಶಾಸಕರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಗೆದ್ದುಬಂದರೂ ಅನರ್ಹತೆಯ ಶಾಶ್ವತ ಕಳಂಕಕ್ಕೆ ಗುರಿಯಾಗಿಯೇ ಇರಬೇಕಾಗುತ್ತದೆ. ರಾಜಕೀಯ ಇತಿಹಾಸ ಇವರನ್ನು ಸದಾ ಅಣಕಿಸುತ್ತಲೇ ಇರುತ್ತದೆ..!

ಎ.ಎಸ್.ಪೊನ್ನಣ್ಣ

ಲೇಖಕ: ಹೈಕೋರ್ಟ್‌ನ ಹಿರಿಯ ವಕೀಲ

ನಿರೂಪಣೆ: ಬಿ.ಎಸ್‌. ಷಣ್ಮುಖಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.