ADVERTISEMENT

ವಿಶ್ಲೇಷಣೆ | ಎಳೆಯ ಮನ ಅರಳಲು ಬಿಡಿ

ಮಕ್ಕಳ ಆರೋಗ್ಯ ಕಾಪಾಡದ ಪಠ್ಯಗಳು ಎಳೆಯರನ್ನು ಕೊಲ್ಲುವ ವಿಷಮದ್ದುಗಳಾಗುತ್ತವೆ

ನಟರಾಜ ಹುಳಿಯಾರ್
Published 14 ಜೂನ್ 2022, 20:19 IST
Last Updated 14 ಜೂನ್ 2022, 20:19 IST
   

ಪಠ್ಯಪುಸ್ತಕಗಳಲ್ಲಿ ಅಸಂಬದ್ಧ ಹಾಗೂ ವಿಕೃತ ಸೇರ್ಪಡೆಗಳು, ವಿಚಿತ್ರ ತಿದ್ದುಪಡಿಗಳ ವರದಿಗಳನ್ನು ನೋಡುತ್ತಾ, ಹಲವು ವರ್ಷ ಪಾಠ ಮಾಡಿರುವ ಮೇಡಂ ಹೇಳಿದರು: ‘ಈ ಜನ ಕ್ಲಾಸ್ ರೂಮನ್ನಾಗಲೀ ಟೀಚರುಗಳನ್ನಾಗಲೀ ಮಕ್ಕಳನ್ನಾಗಲೀ ಸರಿಯಾಗಿ ನೋಡಿಯೇ ಇಲ್ಲ! ತರಗತಿಗಳಲ್ಲಿ ಯಾವ ಪಾಠ ಹೇಗೆ ಬೆಳೆಯುತ್ತದೆ, ಹೇಗೆ ತಲುಪುತ್ತದೆ ಎಂಬ ಅಂದಾಜೇ ಪಠ್ಯಪುಸ್ತಕ ರೂಪಿಸುವವರಿಗೆ ಇದ್ದಂತಿಲ್ಲ!’

ಈ ಮಾತು ಕೇಳಿದ ಹಲವು ತಲೆಮಾರುಗಳ ಗೆಳೆಯರು ತಂತಮ್ಮ ಶಾಲಾ ಪಾಠಗಳನ್ನು ನೆನೆಸಿಕೊಳ್ಳ ತೊಡಗಿದರು. ಕೆಲವು ಕತೆ, ಕವಿತೆಗಳು ವಿದ್ಯಾರ್ಥಿ ದೆಸೆ ಯಿಂದಲೂ ತಮ್ಮೊಳಗೆ ಬೆಳೆದು, ತಾವು ಬೋಧಕರಾದ ಮೇಲೆ ಇನ್ನಷ್ಟು ಬೆಳೆದಿದ್ದನ್ನು ಕಂಡ ಮೇಷ್ಟ್ರುಗಳು ಎಲ್ಲ ಕಾಲಕ್ಕೂ ಸ್ಫೂರ್ತಿ ನೀಡುವ ಪಾಠಗಳ ಮೆಲುಕು ಹಾಕತೊಡಗಿದರು. ಎಲ್ಲ ತಲೆಮಾರುಗಳಿಗೂ ಗೋವಿನ ಹಾಡಿನ ಲಯ, ನೀತಿ ಸಂದೇಶಗಳು ನೆನಪಿನಲ್ಲಿದ್ದವು. ಗೋವಿನ ಹಾಡಿನ ಕನ್ನಡ ಛಂದಸ್ಸು ಎಳೆಯ ಮನಸ್ಸುಗಳಲ್ಲಿ ಬೆಳೆದು, ಉಳಿದು ಕೋಟಿಗಟ್ಟಲೆ ಮಕ್ಕಳಲ್ಲಿ ಕಾವ್ಯದ ಲಯಗಳು ಮೊಳೆತಿವೆ; ಕವಿತೆ ಬರೆಯುವ ಆಸೆ, ಕಾತರಗಳು ಹುಟ್ಟಿವೆ. ‘ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ’ ಪದ್ಯ ಇತ್ತೀಚಿನ ಮಗುವಿನಲ್ಲೂ ಪ್ರಾಸದ ಮೋಹ ಹುಟ್ಟಿಸುತ್ತಿರುತ್ತದೆ. ಹುತ್ತರಿ ಹಾಡಿನ ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಅಲ್ಲೆ ಕೊಡಗರ ನಾಡಲಾ’ ಗೇಯತೆದಶಕಗಳುದ್ದಕ್ಕೂ ಮರುದನಿಸುತ್ತಲೇ ಬಂದಿದೆ.

ತಾವು ಓದಿದ ಪಠ್ಯಗಳನ್ನು ಮುಂದೊಮ್ಮೆ ತಾವೇ ಪಾಠ ಮಾಡಿದವರಿಗಂತೂ ಕೆಲವು ಪಠ್ಯಗಳ ಎಲ್ಲ ಕಾಲದ ಮಹತ್ವ ಸ್ಪಷ್ಟವಾಗತೊಡಗಿತು. ನಾಲ್ಕನೆಯ ಕ್ಲಾಸಿನಲ್ಲಿ ‘ಮೂಡುವನು ರವಿ ಮೂಡುವನು, ಕತ್ತಲೊಡನೆ ಜಗಳಾಡುವನು’ ಬಣ್ಣನೆಗೆ ಬೆರಗಾಗಿದ್ದ ವಿದ್ಯಾರ್ಥಿಯೊಬ್ಬ ಮುಂದೆ ಮೇಷ್ಟರಾದಾಗ, ಕತ್ತಲೊಡನೆ ಸೂರ್ಯ ಜಗಳಾಡುವ ಚಿತ್ರ ತನ್ನ ವಿದ್ಯಾರ್ಥಿಗಳಲ್ಲೂ ಅಂಥದೇ ಪುಳಕ ಹುಟ್ಟಿಸಿದ್ದನ್ನು ಕಂಡ. ಅದೇ ಶಾಲೆಯಲ್ಲಿ ‘ಸಾಲೊಮನ್ ಗ್ರಂಡಿ, ಬಾರ್ನ್ ಆನ್ ಎ ಮಂಡೇ’ ಇಂಗ್ಲಿಷ್ ಶಿಶುಗೀತ ಸಂಡೇ, ಮಂಡೇಗಳನ್ನು ಹೇಳಿಕೊಟ್ಟ ಪರಿಗೆ ಮಕ್ಕಳು ಅರಳಿದ್ದಾರೆ; ‘ಮಾಲ್ಗುಡಿ ಡೇಸ್’ನ ಸ್ವಾಮಿಯ ಗೊಂದಲ, ಸಂಭ್ರಮಗಳು ತಮ್ಮವೇ ಎಂಬಂತೆ ಮಿಡಿದಿದ್ದಾರೆ; ಹಿಮಾಲಯ ಕುರಿತ ಪಾಠ ಹಳೆಯ ಕಗ್ಗಗಳನ್ನೆಲ್ಲ ಸರಿಸಿ, ವಾಸ್ತವದ ಹಿಮಾಲಯವನ್ನು ಕಾಣಿಸಿದಾಗ ಹೊಸ ಲೋಕ ಕಂಡಂತೆ ಪುಳಕಗೊಂಡಿದ್ದಾರೆ.

ADVERTISEMENT

ಹೀಗೆ ಮಕ್ಕಳ ಮನಸ್ಸನ್ನು ಹದಗೊಳಿಸುವ, ಮುದಗೊಳಿಸುವ ಪ್ರಾಥಮಿಕ ಕೆಲಸವನ್ನು ಪಠ್ಯಗಳು ಮಾಡುತ್ತಿರಲೇಬೇಕು. ಆದ್ದರಿಂದಲೇ ಪಠ್ಯಪುಸ್ತಕ ರೂಪಿ ಸುವವರಿಗೆ ಭಾಷೆ, ಸಾಹಿತ್ಯ ಹಾಗೂ ವಿವಿಧ ಜ್ಞಾನಕ್ಷೇತ್ರಗಳ ಆಳವಾದ ಜ್ಞಾನವಿರಲೇಬೇಕು. ಪಠ್ಯಗಳ ಉತ್ತಮ ಪರಿಣಾಮಗಳ ಬಗ್ಗೆ ಮಾತ್ರ ಗಮನವಿರಬೇಕು. ಕ್ಷುಲ್ಲಕ ಉದ್ದೇಶಗಳಿಗಾಗಿ ತಮ್ಮ ತಲೆಯ ಕಸವನ್ನು ಮುಗ್ಧ ಮಕ್ಕಳ ತಲೆಗೆ ತುಂಬಬಾರದು. ಉತ್ತಮ ಭಾಷೆ, ಉತ್ತಮ ಬರವಣಿಗೆಗಳು ಬೋಧಕರ ಹಾಗೂ ಮಕ್ಕಳ ಮನಸ್ಸನ್ನು ಮುಕ್ತವಾಗಿಸುತ್ತವೆ. ಕಣ್ಣು, ಕಿವಿ, ಬುದ್ಧಿಗಳನ್ನು ಚುರುಕಾಗಿಸುತ್ತವೆ. ಲವಲವಿಕೆ ತುಂಬುವ ಕತೆ, ಕವಿತೆಗಳು, ಹುಮ್ಮಸ್ಸು ತುಂಬುವ ಚರಿತ್ರೆಯ ಪಾಠಗಳು ಆನಂತರದ ಪೀರಿಯಡ್ಡುಗಳಲ್ಲಿ ಕಠಿಣವಾದ ವಿಜ್ಞಾನ, ಗಣಿತ ಪಾಠ ಗಳಿಗೆ ಮಕ್ಕಳು ಸಹಜವಾಗಿ ಸಜ್ಜಾಗುವಂತೆ ಮಾಡುತ್ತವೆ.‌

ಪಠ್ಯಪುಸ್ತಕಗಳು ಮಕ್ಕಳ ಮನಸ್ಸನ್ನು, ಅಭಿರುಚಿ ಯನ್ನು ಸದಾ ತಿದ್ದುತ್ತಿರಬೇಕು. ಹಿರಿಯರಿಂದಾಗಿಯೂ ಮಕ್ಕಳಲ್ಲಿ ಮೊಳೆಯುವ ಭೇದಭಾವಗಳನ್ನು ತೊಡೆಯು ತ್ತಿರಬೇಕು. ಆರನೆಯ ತರಗತಿಯಲ್ಲಿ ಓದಿದ ಭಾರತೀ ಪ್ರಿಯರ ‘ಮೋಚಿ’ ಕತೆ ನನ್ನಂಥವರಲ್ಲಿ ಜಾತಿ ಮೀರಿದ ಸಂಬಂಧಗಳ ಬಗ್ಗೆ ಅರಿವು ಮೂಡಿಸಿದ್ದು ನೆನಪಾಗುತ್ತದೆ. ‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’ ಎಂಬ ಹಳಗನ್ನಡದ ಬಣ್ಣನೆ ಈ ಕಾಲದ ಮಕ್ಕಳಿಗೂ ಪ್ರಿಯವಾಗುತ್ತಿದೆ. ಹತ್ತನೆಯ ತರಗತಿಯಲ್ಲಿ ಕನ್ನಡ ಮೇಷ್ಟ್ರು ‘ಕೂಡಲ ಸಂಗಮದೇವಾ, ನಿನ್ನ ಚರಣ
ಕಮಲದೊಳಗಾನು ತುಂಬಿ’ ಎಂದು ಚಣ ನಿಲ್ಲಿಸಿ, ‘ತುಂಬಿ’ ಎಂಬ ಪದಕ್ಕೆ ‘ದುಂಬಿ’ ಹಾಗೂ ‘ತುಂಬುವುದು’ ಎಂಬ ಎರಡು ಅರ್ಥ ಹೇಳಿ, ನಮ್ಮನ್ನೆಲ್ಲ ಅಚ್ಚರಿಗೊಳಿಸಿದ್ದರು. ಅಂದಿನಿಂದ ಕಾವ್ಯದ ಮಾಂತ್ರಿಕ ಸಾಧ್ಯತೆಗಳು ನಮ್ಮೊಳಗೆ ಬೆಳೆಯತೊಡಗಿದವು. ಹಾಡುವ ಮೇಡಂ, ಮೇಷ್ಟ್ರುಗಳಂತೂ ಕವಿತೆಗಳನ್ನು ಕಾಯಮ್ಮಾಗಿ ಮಕ್ಕಳ ನೆನಪಿನಲ್ಲಿ ಉಳಿಸಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮವ’ ಓದಿ, ಹಾಡಿ, ಕುಣಿದ ಮಕ್ಕಳು, ಮೇಷ್ಟ್ರುಗಳಿದ್ದಾರೆ. ‘ಡೊಂಕು ಬಾಲದ ನಾಯಕರೇ’ ಹಾಡಿಗೆ ಮಕ್ಕಳು ಬಿದ್ದು ಬಿದ್ದು ನಕ್ಕಿದ್ದಾರೆ.

ಹಾಗೆಯೇ, ವಿಜಯನಗರ ಸಾಮ್ರಾಜ್ಯದ ಚರಿತ್ರೆ ಹಾಗೂ ಟಿಪ್ಪು ಸುಲ್ತಾನ್ ಚರಿತ್ರೆ ಎರಡನ್ನೂ ಮಕ್ಕಳು ಹಲವು ದಶಕಗಳಿಂದ ಇಷ್ಟಪಡುತ್ತಾ ಬಂದಿದ್ದಾರೆ. ಚರಿತ್ರೆಯ ಪಠ್ಯದ ಮಾಹಿತಿಗಳಂತೂ ಶ್ರೇಷ್ಠ ಇತಿಹಾಸತಜ್ಞರಿಂದ ಸಾಧಾರವೆಂದು ಸಿದ್ಧವಾಗಿರಬೇಕು; ಅಧಿಕೃತ ವಾಗಿರಬೇಕು. ಚರಿತ್ರೆಯ ಹೆಸರಿನಲ್ಲಿ ಅಸಂಬದ್ಧವಾದ ಹುಸಿ ಅಂಶಗಳನ್ನು ತುರುಕಿದರೆ ಕರ್ನಾಟಕದ ಮಕ್ಕಳು ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಹಿಡಿದು ಕೆಎಎಸ್, ಐಎಎಸ್ ಪರೀಕ್ಷೆಗಳವರೆಗೂ ಅಂಕಗಳನ್ನು ಕಳೆದುಕೊಳ್ಳು ತ್ತಾರೆ. ವಿಜ್ಞಾನ ಪಠ್ಯದಂತೆಯೇ ಯಾವುದೇ ಪಠ್ಯದಲ್ಲಿ ಸೇರಿಸಬೇಕಾದ ಹೊಸ ವಿವರಗಳು ಅಧಿಕೃತ ಸಂಶೋಧನೆಗಳನ್ನಷ್ಟೇ ಆಧರಿಸಿರಬೇಕು.

ಪ್ರತಿವರ್ಷ ಪಠ್ಯಗಳನ್ನು ಕುರಿತು ಬೋಧಕ, ಬೋಧಕಿಯರ, ಮಕ್ಕಳ, ಪೋಷಕರ ಸ್ವತಂತ್ರ ಅಭಿಪ್ರಾಯಗಳನ್ನು ತಪ್ಪದೇ ದಾಖಲು ಮಾಡುತ್ತಿರಬೇಕು. ಹಿಂದೆಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಣೆಯರಿತ ಅಧಿಕಾರಿಗಳು ಈ ಕೆಲಸವನ್ನು ಅಪಾರ ಶ್ರದ್ಧೆಯಿಂದ ಮಾಡುತ್ತಿದ್ದರು. ಈ ಅಧಿಕಾರಿಗಳು ಎಲ್ಲರ ಅಭಿಪ್ರಾಯ ಗಳನ್ನು ಒಗ್ಗೂಡಿಸಿ ತಜ್ಞರ ಸಮಿತಿಯ ಮುಂದಿಟ್ಟು ಪಠ್ಯ ಗಳನ್ನು ಮರುಪರಿಶೀಲಿಸಲು ಅನುವು ಮಾಡಿಕೊಡುತ್ತಿದ್ದರು. ಹಿಂದೊಮ್ಮೆ, ಮೊದಲನೆಯ ಪಿಯುಸಿ ಓದುತ್ತಿದ್ದ ಜಾಣ ಹುಡುಗಿಯೊಬ್ಬಳ ಅಭಿಪ್ರಾಯ ಕೇಳಿದ ಮೇಲೆ, ಎರಡನೇ ಪಿಯುಸಿಯ ಇಂಗ್ಲಿಷ್ ಪಠ್ಯಕ್ಕೆ ಷೇಕ್‌ಸ್ಪಿಯರ್‌ನ ಲವಲವಿಕೆಯ ಪಠ್ಯಭಾಗವನ್ನೂ ಪುಸ್ತಕಗಳ ಮಹತ್ವ ಕುರಿತು ಪ್ರಖ್ಯಾತ ಲೇಖಕ ಬೋರ್ಹೆಸ್ ಸಂದರ್ಶನವನ್ನೂ ಸೇರಿಸಲು ನಾನೇ ಪಠ್ಯಪುಸ್ತಕ ಸಮಿತಿಗೆ ಸಲಹೆ ಕೊಟ್ಟಿದ್ದು ನೆನಪಾಗುತ್ತದೆ.

ಪಠ್ಯವೊಂದು ಮಕ್ಕಳ ಮನೋಲೋಕಕ್ಕೆ ಉತ್ತಮ ವಾದ, ಆರೋಗ್ಯಕರವಾದ ಹೊಸ ಜ್ಞಾನವನ್ನು ಸೇರಿಸುತ್ತಿರಬೇಕು ಎಂಬ ಪ್ರಜ್ಞೆ ತಜ್ಞರಿಗಿರಬೇಕು. ಈ ದೃಷ್ಟಿಯಿಂದ ಪಠ್ಯಪುಸ್ತಕ ರೂಪಿಸುವವರು ಸದಾ ನೆನಪಿಡಬೇಕಾದ ಕೆಲವು ಆಂಶಗಳನ್ನು ಪಟ್ಟಿ ಮಾಡಬಹುದು:

ಪಠ್ಯಗಳು ಪಾಠ ಮಾಡುವವರಲ್ಲೂ ಮಕ್ಕಳಲ್ಲೂ ನವಚೈತನ್ಯ ಹುಟ್ಟಿಸುತ್ತಿರಬೇಕು. ಬೋಧನೆಯ ಸಂದರ್ಭ ದಲ್ಲಿ ಒಳ್ಳೊಳ್ಳೆಯ ವ್ಯಾಖ್ಯಾನಗಳನ್ನು ಮೂಡಿಸಬಲ್ಲ ಪಠ್ಯಗಳಿರಬೇಕು. ಭಾಷೆಯನ್ನು ದಕ್ಷವಾಗಿ, ಸೃಜನಶೀಲವಾಗಿ ಬಳಸಿರಬೇಕು. ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಓದುವ, ಬರೆಯುವ ಆಸೆ, ಸಾಧ್ಯತೆಗಳನ್ನು ಮೂಡಿಸುವಂತಿರ ಬೇಕು. ಪದ್ಯ, ಗದ್ಯಗಳ ಅನುಕರಣೆಯನ್ನಾದರೂ ಮಾಡಿ ಮಕ್ಕಳು ಬರವಣಿಗೆ ಕಲಿಯುವಂತಿರಬೇಕು. ಎರಡು, ಮೂರು ಭಾಷೆಗಳನ್ನು ಬಲ್ಲ ಮಕ್ಕಳು ಪಠ್ಯಗಳನ್ನು ಅನುವಾದಿಸಲು ಆಹ್ವಾನಿಸುವಂತಿರಬೇಕು. ಮನೆಮಂದಿಯ ಜೊತೆ ಹಂಚಿಕೊಳ್ಳುವಂಥ ಕುತೂಹಲಕರ, ಆರೋಗ್ಯಕರ ಸಂಗತಿಗಳು ಪಠ್ಯದಲ್ಲಿರಬೇಕು. ಮೈ-ಮನಗಳ ಆರೋಗ್ಯಕ್ಕೆ ಸಂಬಂಧಿಸಿದ ಪಾಠಗಳಿರಬೇಕು. ಮಕ್ಕಳಲ್ಲಿ ವಿಮರ್ಶಾ ಪ್ರಜ್ಞೆಯನ್ನು, ಸಮಾನತೆಯ ಪ್ರಜ್ಞೆಯನ್ನು, ಉದಾರ ಮನೋಭಾವವನ್ನು ಬೆಳೆಸುವಂತಿರಬೇಕು.

ಇಂಥ ಉತ್ತಮ ಗುರಿಗಳನ್ನು ತಲುಪಬೇಕೆಂದರೆ ಆಯಾ ಕ್ಷೇತ್ರಗಳಲ್ಲಿ ಹಲವು ವರ್ಷ ಕೆಲಸ ಮಾಡಿರುವ ಆರೋಗ್ಯಕರ ಮನಸ್ಸಿನ ವಿಷಯತಜ್ಞರು ಪಠ್ಯಪುಸ್ತಕಗಳನ್ನು ರೂಪಿಸಬೇಕು. ಸಮಿತಿಗಳಲ್ಲಿ ವೈವಿಧ್ಯಮಯ ಸಾಮಾಜಿಕ ವರ್ಗಗಳನ್ನು ಪ್ರತಿನಿಧಿಸುವ ವಿಷಯತಜ್ಞ- ತಜ್ಞೆಯರಿರಬೇಕು. ಎಲ್ಲ ಪಠ್ಯಗಳಲ್ಲೂ ಹಿರಿಯರ ಶ್ರೇಷ್ಠ ಕೃತಿಗಳ ಭಾಗಗಳಿರಲೇಬೇಕು; ಹೊಸ ತಲೆಮಾರುಗಳ ಉತ್ತಮ ಬರಹಗಳಿರಬೇಕು. ಕರ್ನಾಟಕದ ಬಹುತೇಕ ಮಕ್ಕಳು, ಅದರಲ್ಲೂ ಬಡ ಮಕ್ಕಳು ಓದುತ್ತಿರುವ ಸರ್ಕಾರಿ, ಅನುದಾನಿತ ಶಾಲೆಗಳ ಪಠ್ಯಗಳಲ್ಲಿ ವಿಷ ಬೆರೆಸಿ ತಲೆಮಾರುಗಳನ್ನು ಕೊಲ್ಲುವುದು ಹೀನ ಕೆಲಸ. ಪಠ್ಯಪುಸ್ತಕಗಳು ವಿಕೃತ ಸಿದ್ಧಾಂತಗಳ ಸಂಕುಚಿತತೆ ಮೀರುವ, ವಿಶಾಲ ಮನಸ್ಸನ್ನು ಬೆಳೆಸುವ ತಾಣಗಳಾಗಬೇಕು.

ಕನ್ನಡ ಮಕ್ಕಳ ಇಂಥ ಜೀವನ್ಮರಣದ ಪ್ರಶ್ನೆಗಳ ಕುರಿತು ಗಂಭೀರವಾಗಿ ಯೋಚಿಸಬೇಕಾಗಿರುವುದು ಯಾವುದೇ ಜವಾಬ್ದಾರಿಯುತ ಸರ್ಕಾರದ ಆದ್ಯ ಕರ್ತವ್ಯ. ಕೊನೇ ಪಕ್ಷ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ತಾವು ಶಾಲೆಗಳಲ್ಲಿ ಓದಿರಬಹುದಾದ ಒಳ್ಳೆಯ ಪಠ್ಯಗಳನ್ನಾದರೂ ನೆನೆದು, ಆತ್ಮಾವಲೋಕನ ಮಾಡಿಕೊಂಡು ಮುಂದಿನ ಹೆಜ್ಜೆ ಇಡಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.