ಜೀವವೈವಿಧ್ಯದ ನಾಶದಿಂದ ಪ್ರಕೃತಿಯಲ್ಲಿ ಹೇಗೆ ಅಸಮತೋಲನ ಉಂಟಾಗುತ್ತದೋ ಹಾಗೆಯೇ ಭಾಷಾ ವೈವಿಧ್ಯದ ನಾಶವೂ ಮಾನವ ಬದುಕಿನಲ್ಲಿ ಕೊರತೆ, ಅಸಮತೋಲನಗಳನ್ನು ಉಂಟು ಮಾಡುತ್ತದೆ. ಒಂದು ಭಾಷೆಯ ಅವಸಾನದಿಂದ ಒಂದು ಜನಾಂಗದ ಅನಾದಿಕಾಲದ ಸಂಚಿತ ವಿವೇಕ, ವೈಚಾರಿಕತೆಗಳೂ ಅವಸಾನವಾಗುತ್ತವೆ.
ಒಂದು ಅಂದಾಜಿನ ಪ್ರಕಾರ, ಕಳೆದ ಶತಮಾನದಲ್ಲಿ ಜಗತ್ತಿನಾದ್ಯಂತ ಸುಮಾರು 400 ಭಾಷೆಗಳು ನಿರ್ನಾಮವಾಗಿ ಹೋಗಿವೆ. ಇಂದು ಜಗತ್ತಿನಲ್ಲಿ ಸುಮಾರು 6,500 ಭಾಷೆಗಳಿದ್ದು, ಈ ಶತಮಾನದ ಅಂತ್ಯದ ವೇಳೆಗೆ ಶೇಕಡ 50ರಷ್ಟು ಜನಭಾಷೆಗಳು ನಿರ್ನಾಮವಾಗಲಿವೆ ಮತ್ತು ಶೇಕಡ 90ಕ್ಕೂ ಹೆಚ್ಚು ಭಾಷೆಗಳು ಸಾವಿನಂಚಿಗೆ ತಲುಪಲಿವೆ ಎಂದು ಭಾಷಾವಿಜ್ಞಾನಿಗಳು ಅಂದಾಜಿಸಿದ್ದಾರೆ. ಅಲಾಸ್ಕಾದಲ್ಲಿ ಎಯಾಕ್ ಎಂಬ ಸ್ಥಳೀಯ ಭಾಷೆಯು ಮೇರಿ ಸ್ಮಿತ್ ಜೋನ್ಸ್ ಎಂಬ ಏಕೈಕ ವ್ಯಕ್ತಿಯ ನಾಲಗೆಯ ಮೇಲೆ ಜೀವಂತವಾಗಿತ್ತು. 2008ರಲ್ಲಿ ಆಕೆಯ ಸಾವಿನೊಂದಿಗೆ ಆ ಭಾಷೆಯೂ ಸತ್ತಿತು.
ಅಲಾಸ್ಕಾದಷ್ಟು ದೂರವೇಕೆ ಹೋಗಬೇಕು, ನಮ್ಮ ನೆರೆ ರಾಜ್ಯವಾದ ಆಂಧ್ರಪ್ರದೇಶದ ವಿದ್ಯಮಾನವನ್ನೇ ಗಮನಿಸೋಣ. ಅಲ್ಲಿನ ಸರ್ಕಾರಕ್ಕೆ ಶಾಲೆಗಳಲ್ಲಿ ತೆಲುಗು ಮಾಧ್ಯಮ ಬೇಡವಾಗಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸುವ ನಿರ್ಧಾರ ಮಾಡಿದೆ. ತೆಲುಗನ್ನು ಒಂದು ವಿಷಯವನ್ನಾಗಿ ಮಾತ್ರ ಓದಲು ಅವಕಾಶ ನೀಡಿದೆ. ಭಾರತದ ಬಹುತೇಕ ಎಲ್ಲ ರಾಜ್ಯಭಾಷೆಗಳ ಸ್ಥಿತಿಯೂ ಹೀಗೆಯೇ ಅತಂತ್ರವಾಗಿದೆ.
ಭಾಷೆಯೊಂದು ಸಹಜವಾಗಿ ಲುಪ್ತವಾದರೆ ಅದು ಬೇರೆ ಮಾತು. ಆದರೆ ಇಂದು ಭಾರತದ ಸ್ಥಳೀಯ ಭಾಷೆಗಳಿಗೆ ಒದಗಿ ಬಂದಿರುವುದು ಸಹಜ ಸಾವಲ್ಲ. ರಾಷ್ಟ್ರೀಯತೆ ಮತ್ತು ಜಾಗತೀಕರಣವು ಭಾಷಿಕ, ಜನಾಂಗೀಯ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಎಂದಿಗೂ ಶತ್ರುವಿನಂತೆ ನೋಡುತ್ತವೆ. ಏಕಭಾಷೆ, ಏಕ ಜನಾಂಗ, ಏಕ ಸಂಸ್ಕೃತಿಗಳನ್ನು ಸ್ಥಾಪಿಸಲು ವೈವಿಧ್ಯವನ್ನು ಬಲಿಕೊಡಲೂ ಅವು ಹಿಂಜರಿಯುವುದಿಲ್ಲ.
ಈ ವರ್ಷದ ಜನವರಿ ತಿಂಗಳಲ್ಲಿ ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕದ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಸಮಾರಂಭದಲ್ಲಿ ಕನ್ನಡ ಕಡೆಗಣನೆಗೆ ಒಳಗಾಗಿತ್ತು. ಫಲಕಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆಮಾತ್ರ ಸ್ಥಾನ ದೊರೆತಿದ್ದುದು ವ್ಯಾಪಕ ಟೀಕೆಗೆ ಗುರಿಯಾಯಿತು. ಇದು ಪ್ರಜ್ಞಾಪೂರ್ವಕ ನಿರ್ಲಕ್ಷ್ಯವಲ್ಲ, ಏನೋ ಕಣ್ತಪ್ಪಿನಿಂದಾಗಿದೆ ಎಂದು ಆಡಳಿತಾರೂಢ ಪಕ್ಷದಬೆಂಬಲಿಗರು ಸಮ ಜಾಯಿಷಿ ನೀಡಬಹುದು. ಆದರೆ ವೈವಿಧ್ಯಗಳನ್ನು ಇಲ್ಲ ವಾಗಿಸಿ ಏಕರೂಪತೆಯನ್ನು ಸ್ಥಾಪಿಸಲೆಳಸುವ ಶಕ್ತಿಗಳ ಉದ್ದೇಶ ಎಂದಿಗೂ ಕಣ್ಣಿಗೆ ಕಾಣಿಸುವಂತೆ ವ್ಯಕ್ತವಾಗುವು ದಿಲ್ಲ. ಅವು ಎಂದಿಗೂ ಅಪ್ರಜ್ಞಾ ನೆಲೆಯಲ್ಲೇ ಕೆಲಸ ಮಾಡುವುದು.
ಆಳುವ ಸರ್ಕಾರಗಳು ಯಾವ ಕಾಲದಲ್ಲೂ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪ್ರವರ್ಧನೆಯನ್ನು ತಮ್ಮ ಆದ್ಯತೆಯ ವಲಯವೆಂದು ಪರಿಗಣಿಸಿಲ್ಲ. ಸರ್ಕಾರದ ಈ ಉದಾಸೀನ ಧೋರಣೆ ಖಂಡನೀಯ ಸರಿ. ಆದರೆ ಜನಭಾಷೆಗಳು ಜನಸಾಮಾನ್ಯರ ಕಾಳಜಿ-ಕಳಕಳಿಯಿಂದ ದೂರವಾಗುತ್ತಿರುವುದು ಅದಕ್ಕಿಂತಲೂ ಮಿಗಿಲಿನ ದುರಂತವಾಗಿದೆ. ಕಳೆದ ರಾಜ್ಯೋತ್ಸವದಂದು ನಮ್ಮ ಮುಖ್ಯಮಂತ್ರಿ ಇಡೀ ವರ್ಷವನ್ನು ‘ಕನ್ನಡ ಕಾಯಕ ವರ್ಷ’ವನ್ನಾಗಿ ಆಚರಿಸೋಣವೆಂದು ಕರೆ ನೀಡಿದ್ದರು. ಆದರೆ ಈ ಸಲದ ಬಜೆಟ್‌ನಲ್ಲಿ ಕನ್ನಡದ ಪ್ರವರ್ಧನೆಗೆ, ಅಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಮುಂತಾದ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಗಳಿಗೆ ತೀರಾ ನಿರಾಶಾದಾಯಕವಾದ ಅನುದಾನದ ಮೊತ್ತವನ್ನು ತೆಗೆದಿರಿಸಿದ್ದಾರೆ. ಈ ಬಗ್ಗೆ ಕೆಲವು ಸಾಹಿತ್ಯ ಜೀವಿಗಳು, ಸರ್ಕಾರಿ ಅನುದಾನದ ಫಲಾ ನುಭವಿಗಳಾದ ಕವಿ-ಕಲಾವಿದರು ಹಾಗೂ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಗಳ ಅಧಿಕಾರಸ್ಥಾನದಲ್ಲಿರುವ ಕೆಲವು ಪದಾಧಿಕಾರಿಗಳು ಆಕ್ಷೇಪವನ್ನು -ಅದೂ ಬಹಳ ಮೃದು ವಾಗಿ- ವ್ಯಕ್ತಪಡಿಸಿರುವರೇ ವಿನಾ ಜನಸಾಮಾನ್ಯರಾರೂ ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.
ಏಕೀಕರಣದ ನಂತರ ನಡೆದ ಬಹುತೇಕ ಚಳವಳಿ ಗಳು ಜನಸಾಮಾನ್ಯರಿಂದಲೇ ನಡೆದ ಚಳವಳಿಗಳಾಗಿದ್ದವು. ಕೇಂದ್ರ ಸರ್ಕಾರದ ಸೇವೆಗಳ ಕೆಲವು ನೇಮಕಾತಿ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆ ಉಳಿದಿದೆ ಎಂದರೆ ಅದಕ್ಕೆ ಜನಸಾಮಾನ್ಯರ ಪ್ರಾದೇಶಿಕ ಭಾಷಾಪರ ಕಾಳಜಿ ಮತ್ತು ಹೋರಾಟಗಳೇ ಕಾರಣ. ಎಂಬತ್ತರ ದಶಕದಲ್ಲಿ ಕನ್ನಡದ ಉಳಿವಿಗಾಗಿ ನಡೆದ ಗೋಕಾಕ್ ಚಳವಳಿಯಂತೂ ರಾಜ್ಯದಾದ್ಯಂತ ಸಂಚಲನವನ್ನೇ ಸೃಷ್ಟಿಸಿತ್ತು. ನಾಡಿನ ಮೂಲೆಮೂಲೆಯಲ್ಲೂ ಕನ್ನಡ ಪ್ರಜ್ಞೆ ಜಾಗೃತವಾಗಿತ್ತು. ಆದರೆ ಇಂದು ಕನ್ನಡ ಸಾಯುತ್ತಿದೆ ಎಂದು ಕೂಗಿ ಹೇಳಿದರೂ ಕೇಳಿಸಿಕೊಳ್ಳುವವರು ಇಲ್ಲವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡಿಗರು ಅಭಿಮಾನಶೂನ್ಯರಾಗಿದ್ದಾರೆ ಎಂದು ತೀರ್ಮಾನಿಸಿದರೆ ಅದು ಸಿನಿಕತನವಾಗುತ್ತದೆ.ಸರ್ಕಾರವು ಮುತುವರ್ಜಿಯಿಂದ ಕನ್ನಡವನ್ನು ಕಟ್ಟುವ ಕೆಲಸ ಮಾಡಲು ಮುಂದಾದರೆ ಅದಕ್ಕೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಹಾಗೆ ಬೆಳೆಸುವ ಮಾರ್ಗೋಪಾಯಗಳನ್ನು ಶೋಧಿಸುವ ಕೆಲಸವನ್ನು ನಾವಿಂದು ಪ್ರಾರಂಭಿಸಬೇಕಾಗಿದೆ. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸಬೇಕೆಂದು ಭಾಷಣ ಮಾಡುತ್ತೇವೆ. ಆದರೆ, ಈ ದಿಸೆಯಲ್ಲಿ ಪ್ರಯತ್ನ ಮಾಡುವುದನ್ನೇ ಮರೆತಿದ್ದೇವೆ.ಕನ್ನಡಿಗರಿಗೆ ಅನ್ನದ ದಾರಿಯನ್ನು ಸೃಷ್ಟಿಸಬೇಕಾಗಿದೆ. ಕನ್ನಡ ಪ್ರೇಮ ಬರಿದೇ ಘೋಷಣೆ, ಪ್ರಚಾರ, ಪ್ರದರ್ಶನಗಳಿಗೆ ಸೀಮಿತವಾದರೆ ಸಹಜವಾಗಿಯೇ ಜನಸಾಮಾನ್ಯರು ಕನ್ನಡ ಕಾಯಕದ ವಿಷಯದಲ್ಲಿ ಉತ್ಸಾಹಶೂನ್ಯರಾಗುತ್ತಾರೆ. ನಾಡು–ನುಡಿ, ಸಂಸ್ಕೃತಿ ಪೋಷಣೆಗೆ ಸರ್ಕಾರವು ಅನುದಾನ ಕಡಿತ ಮಾಡುವುದು ಸರ್ವಥಾ ಸಮರ್ಥನೀಯವಲ್ಲ. ಆದರೆ ಈ ಬಗ್ಗೆ ಜನಸಾಮಾನ್ಯರು, ನಿಜವಾದ ಕನ್ನಡ ಪ್ರೀತಿಯುಳ್ಳವರು ಏಕೆ ಸೊಲ್ಲೆತ್ತುತ್ತಿಲ್ಲ ಎಂಬುದರ ಕುರಿತು ಸಹ ನಾವು ವಿವೇಚಿಸಬೇಕಾಗಿದೆ.
ಕನ್ನಡದ ಪ್ರವರ್ಧನೆಗೆ ಸರ್ಕಾರದಿಂದ ಪ್ರಾಯೋಜಿತ ವಾಗುವ ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳಬೇಕು. ನೀಡುವ ಅನುದಾನವು ಸದ್ಬಳಕೆಯಾಗಬೇಕು. ಕೊಡಮಾಡುವಪ್ರಶಸ್ತಿ– ಪುರಸ್ಕಾರಗಳು ನ್ಯಾಯೋಚಿತವಾಗಿರಬೇಕು. ರಾಜಕಾರಣಿಗಳಿಗೆ ಮಣೆ ಹಾಕುವ, ಅಧಿಕಾರಸ್ಥರಿಗೆ ಡೊಗ್ಗು ಸಲಾಮು ಹೊಡೆಯುವ ಸಾಹಿತಿಗಳು ಸುಲಭ ಮಾರ್ಗದಲ್ಲಿ ಸಮ್ಮೇಳನ, ಪ್ರಾಧಿಕಾರ, ಅಕಾಡೆಮಿ ಮುಂತಾದವುಗಳ ಅಧ್ಯಕ್ಷ ಸ್ಥಾನ ಅಲಂಕರಿಸುವುದನ್ನು ನಾವು ಕಾಣುತ್ತಾ ಬಂದಿದ್ದೇವೆ. ಇಂದು ಕುರಿತೋದದೆಯೂ ಸಾಹಿತ್ಯ ರಚನೆ ಮಾಡುವ ಪ್ರಭಾವಿಗಳು ತಮ್ಮ ಸಾಹಿತ್ಯ ಸಾಧನೆಯ ಕುರಿತು ವಿಶ್ವವಿದ್ಯಾಲಯಗಳಲ್ಲಿ ಸೆಮಿನಾರುಗಳನ್ನು ಆಯೋಜಿಸಬಲ್ಲರು, ತಮ್ಮ ಸಾಹಿತ್ಯಕೃತಿಗಳಿಗೆ ಪ್ರಶಸ್ತಿ ಗಿಟ್ಟಿಸಿಕೊಂಡು ತಮ್ಮ ಪ್ರಭಾವಳಿಯನ್ನು ಹೆಚ್ಚಿಸಿಕೊಳ್ಳಬಲ್ಲರು. ಇಂತಹ ಬೆಳವಣಿಗೆಗಳನ್ನು ಪ್ರತಿರೋಧಿಸಬೇಕಾದ, ತಡೆಗಟ್ಟಬೇಕಾದ ವಿಮರ್ಶಕರು ಮತ್ತು ಬುದ್ಧಿಜೀವಿಗಳು ತಮ್ಮ ಕರಣೇಂದ್ರಿಯಗಳ ಸಂವೇದನೆಯನ್ನೇ ಕಳೆದುಕೊಂಡಂತೆ ಜಾಣ ಮರೆವಿಗೆ ಜಾರಿದ್ದಾರೆ.
ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಕುವೆಂಪು, ಕಾರಂತ, ಬಿಎಂಶ್ರೀ ಮುಂತಾದ ಆ ಕಾಲದ ಸಾಹಿತಿಗಳು ಕನ್ನಡವನ್ನು ಕಟ್ಟಿ ಬೆಳೆಸಿದರು. ಜನಮನದಲ್ಲಿ ಕನ್ನಡ ಪ್ರೇಮವನ್ನು ಬಿತ್ತಿದರು. ಇಂದು ಈ ಕಾಲದ ಸಾಹಿತಿಗಳು ಅಂದಿನವರ ಕಾಯಕಕ್ಕೆ ವ್ಯತಿರಿಕ್ತವಾದ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಯಾವ ಸಾಹಿತಿಗಳ ಶ್ರಮದ ಫಲವಾಗಿ ಹಿಂದೆ ಕನ್ನಡಿಗರಲ್ಲಿ ಸಾಹಿತ್ಯಾಭಿಮಾನ ಮತ್ತು ಭಾಷಾಪ್ರೇಮ ಮೂಡಿತ್ತೋ, ಇಂದು ಅದೇ ಸಾಹಿತಿಗಳ, ಬುದ್ಧಿಜೀವಿಗಳ, ಸಂಸ್ಕೃತಿ ಪ್ರತಿನಿಧಿಗಳೆನಿಸಿಕೊಂಡವರ ಮೇಲಾಟದಿಂದ ಕನ್ನಡಿಗರಲ್ಲಿ ಸಾಹಿತ್ಯ ವಲಯದ ಬಗ್ಗೆ ಜುಗುಪ್ಸೆ ಮೂಡುತ್ತಿದೆ.
ಸಾಹಿತಿಗಳಿಗೆ ಪ್ರಶಸ್ತಿ ಅಥವಾ ಅಧಿಕಾರಗಳನ್ನು ನೀಡುವುದರಿಂದ ಕನ್ನಡದ ಕಾಯಕಲ್ಪವಾಗುವುದಿಲ್ಲ. ಸರ್ಕಾರಗಳು ಪ್ರಶಸ್ತಿ, ಅನುದಾನ, ಪುರಸ್ಕಾರಗಳನ್ನು ಕೊಡುವುದರ ಆಚೆಗೆ ಕನ್ನಡದ ಕಾಯಕವನ್ನು ಕೈಗೆತ್ತಿ ಕೊಳ್ಳುವ ದಿಸೆಯಲ್ಲಿ ಆಲೋಚಿಸಬೇಕಾಗಿದೆ. ಇಲ್ಲಿ ವಾಸಿಸುವ ಜನ ತಮ್ಮ ದೈನಂದಿನ ಬದುಕಿನಲ್ಲಿ ಎಲ್ಲ ಹಂತಗಳಲ್ಲೂ ಕನ್ನಡವನ್ನು ಪ್ರೀತಿಸುವ, ಕಲಿಯುವ ಮತ್ತು ಕನ್ನಡವನ್ನು ಬಳಸುವ ಅವಕಾಶವನ್ನು ಸೃಷ್ಟಿಸಿ ಕೊಡಬೇಕಾಗಿದೆ. ಪ್ರಭುತ್ವಕ್ಕೆ ಇಚ್ಛಾಶಕ್ತಿಯಿದ್ದರೆ ಇವೆಲ್ಲ ಅಸಾಧ್ಯದ ಕೆಲಸಗಳೇನಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.