ADVERTISEMENT

ಸುದೀರ್ಘ ಬರಹ: ಕೊಡಗಿನಲ್ಲಿ ಮೈಮುರಿದ ಭೂಮಿ, ಕಣ್ಮುಂದೆಯೇ ಜಾರಿತು ಕಾಫಿನಾಡು

ಹೀಗಾಗಿದೆ ನೋಡಿ ಕಾವೇರಿ ಮಕ್ಕಳ ಬದುಕು

ಉಷಾ ಪ್ರೀತಮ್
Published 25 ಅಕ್ಟೋಬರ್ 2018, 7:04 IST
Last Updated 25 ಅಕ್ಟೋಬರ್ 2018, 7:04 IST
   

ಮಗುವೊಂದು ತನ್ನ ಕೈಗೆ ಸಿಕ್ಕ ರಬ್ಬರಿನಿಂದ ಕಾಗದದ ಮೇಲಿನ ಕಲಾಕೃತಿಯನ್ನು ಅಮಾಯಕತೆಯಿಂದ ಅಳಿಸಿಹಾಕಿದಷ್ಟೇ ಸರಾಗವಾಗಿ ಮಳೆಯೆಂಬ ರಬ್ಬರಿನಿಂದ ಕೊಡಗಿನ ಚಹರೆಯನ್ನು ಪ್ರಕೃತಿ ಸಾಕಷ್ಟು ಅಳಿಸಿದೆ. ಮಳೆಯನ್ನು ಬದುಕಿನ ಭಾಗ ಎಂದೇ ಭಾವಿಸಿರುವ ಕೊಡವರು, ಮಳೆಯ ಮತ್ತೊಂದು ಮುಖವನ್ನು ಬೆರಗು–ಭಯದಿಂದ ನೋಡುತ್ತಿದ್ದಾರೆ. ‘ಕೊಳಾಯಿಯಲ್ಲಿನ ನೀರಲ್ಲಿ ಕಾವೇರಿಯನ್ನು ಕಾಣುತ್ತ ಪುಲಕಗೊಳ್ಳುವವರು ಕೊಡಗಿನ ಬಗ್ಗೆ ಕಣ್ತೆರೆದು ನೋಡಬೇಕು’ ಎಂದು ಆಗ್ರಹಿಸುತ್ತಿದೆ ಈ ಬರಹ. ಕೊಡಗಿನ ಹೆಣ್ಣುಮಗಳೊಬ್ಬಳು ಬರೆದಿರುವ ಈ ಬರಹ, ತನ್ನ ಬದುಕಿನದೇ ಭಾಗವೊಂದನ್ನು ಕತ್ತರಿಸಿ ಅಕ್ಷರಗಳಾಗಿ ಮೂಡಿಸಿದಷ್ಟು ಜೀವಂತವಾಗಿದೆ. ಮಳೆಯ ಆರ್ದ್ರತೆ ಹಾಗೂ ರೌದ್ರತೆಯನ್ನು ಹಸಿಹಸಿಯಾಗಿ ಹಿಡಿದಿಟ್ಟಿಕೊಂಡಿದೆ. ಕೊರಳು–ಕರುಳು ಇರುವವರೆಲ್ಲರೂ ಕೊಡಗಿನ ಬಗ್ಗೆ ಮಿಡಿಯಲು ಒತ್ತಾಯಿಸುವಂತಿದೆ.

ಈ ಕೊಡಗಿನ ಸ್ಥಿತಿಯನ್ನ ಯಾವ ಕಡೆಯಿಂದ ಶುರು ಮಾಡೋದು ಅನ್ನೋದೇ ದೊಡ್ಡ ಗೊಂದಲ. ಏಕೆಂದರೆ, ಈ ಗುಬ್ಬಿ ಗಾತ್ರದ ಜಿಲ್ಲೆ ತನ್ನ ರೆಕ್ಕೆ, ಕಾಲು, ಕೈ, ಕಣ್ಣು, ಸ್ವಲ್ಪಕಿವಿ, ಸ್ವಲ್ಪಹೊಟ್ಟೆ ಎಲ್ಲವನ್ನು ಕಳೆದುಕೊಂಡು ನಿತ್ರಾಣ ಸ್ಥಿತಿಯಲ್ಲಿದೆ. ಸ್ವಲ್ಪಹೊತ್ತು ಕೋಮಾಗೂ ಜಾರುತ್ತೆ.

ಆದರೆ ಈ ಲೇಖನ ಬರೆಯುವ ಈ ಸರಿಹೊತ್ತಲ್ಲಿ ನನ್ನ ಹೃದಯಬಡಿತ ಕೂಡ ಕೇಳಲಾರದಷ್ಟು ಮಾಡು ಕಿತ್ತು ಹೋಗುವ ಹಾಗೇ ಮಳೆ ಬರುತ್ತಿದೆ. ಆದರೂ ಈ ವರ್ಷದ ಶುರುವಿನಿಂದ ಪ್ರಾರಂಭಿಸಿ ಈಗ ನಮ್ಮ ಜಿಲ್ಲೆ, ಇಲ್ಲಿನ ಜನತೆ, ನೀವೆಲ್ಲರೂ ಹೇಳೋ ಸುಂದರ ಕೊಡಗು, ನಿಮ್ಮ ಕಾವೇರಿ ಎಲ್ಲಿಗೆ ಬಂದು ತಲುಪಿದ್ದೀವಿ ಅಂಥ ಹೇಳಿಬಿಡ್ತೀನಿ. ಏಕೆಂದರೆ, ನಿಮ್ಮ ಗಮನಕ್ಕೆ ಬಾರದೆ, ನಾನು ಸೇರಿದಂತೆ ಎಲ್ಲರೂ ಬಾರದ ಲೋಕಕ್ಕೆ ಹೋದರೆ ಎನ್ನುವ ಆತಂಕದಿಂದ.
ನನ್ನೂರು ವೀರರಾಜೇಂದ್ರಪೇಟೆ (ವಿರಾಜಪೇಟೆ) ತುಂಬಾ ಚೆನ್ನಾಗಿ ಇತ್ತು. ಈಗಷ್ಟೇ ಕಕ್ಕಡ ಹಬ್ಬ ಮುಗಿದಿತ್ತು. 18 ಔಷಧಿ ಗುಣಗಳಿರುವ ಮದ್ದಿನಸೊಪ್ಪಿನ ಪಾಯಸ ತಿಂದು ನಾವೆಲ್ಲರೂ ಬೀಗ್ತಾ ಇದ್ವಿ. ಅದ್ಯಾಕೋ ಈ ವರ್ಷ ಮುಂಗಾರುಮಳೆ ನಮ್ಮ ಕೊಡಗಿಗೆ ಯೋಗರಾಜಭಟ್ಟರ ‘ಮುಂಗಾರುಮಳೆ’ ಸಿನಿಮಾದಷ್ಟು ಮಧುರವಾಗಿ ಬರಲಿಲ್ಲ. ಬರುವಾಗಲೇ ಮುನಿಸಿಕೊಂಡಿತ್ತು.

ADVERTISEMENT

ಕೇರಳ ಕಡೆಯಿಂದ ಪ್ರವೇಶವಾದ ಮುಂಗಾರು ಜೂನ್ ಮಧ್ಯಂತರದಲ್ಲಿ ಒಂದು ರಾತ್ರಿ ಇದ್ದಕಿದ್ದಂತೆ, ಕರ್ನಾಟಕ-ಕೇರಳ ಹೆದ್ದಾರಿಯಲ್ಲಿ ರುದ್ರತಾಂಡವವಾಡ್ತು. ಈ ಹೆದ್ದಾರಿಯಲ್ಲಿ ಇರುವುದು ಒಂದೇ ಹೋಟೆಲ್. ಅದು ಅಂಬುಹೋಟೆಲ್ ಎನ್ನುವ ಚಿಕ್ಕ ಗೂಡಂಗಡಿ ಮಾದರಿಯದ್ದು. ಆ ಹೋಟೆಲಿನ ಐವರು ಕೆಲಸಗಾರರು ಕೆಲಸವೆಲ್ಲ ಮುಗಿಸಿ ಆಗಷ್ಟೆ ನಿದ್ರೆಗೆ ಜಾರಿದ್ದರಂತೆ. ಜೋರಾದ ಸದ್ದಾಯ್ತು, ಮರಗಳು ಲಟಲಟ ಮುರಿದುಬೀಳತೊಡಗಿದವು. ಕಣ್ಬಿಟ್ಟು ನೋಡಿದರೆ ಅರ್ಧ ಹೋಟೆಲ್ ಕೊಚ್ಚಿ ಹೋಗಿದೆ. ಮಾಕುಟ್ಟ ಹೊಳೆ ಅವರ ಕಣ್ಣಿಗೆ ಕಾಣುತ್ತಿದೆ. ಹೋಟೆಲ್‌ ಮುಂಬದಿ ಬಾಗಿಲು ತೆರೆದರೆ ಸೇತುವೆ ಅಡಿ ಹರಿಯಬೇಕಾಗಿದ್ದ ಮಾಕುಟ್ಟ ಹೊಳೆ ರಸ್ತೆ ಮೇಲೆ ಹರಿಯುತ್ತಿದೆ. ಬೆದರಿದ ಕೆಲಸಗಾರರು ಹೇಗೋ ಸಾಹಸ ಮಾಡಿ ಪೊಲೀಸ್ ಔಟ್‍ಪೋಸ್ಟ್‌ ಹತ್ತಿ ಬೆಳಕು ಹರಿಸಿದರು.

ಅಂದು ರಾತ್ರಿ ಆ 26 ಕಿಲೋಮೀಟರ್ ರಸ್ತೆಯುದ್ದಕ್ಕೂ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿಯಿತು. ಸಾಕಷ್ಟು ವಾಹನಗಳು ದಾರಿ ಮಧ್ಯೆ ಸಿಲುಕಿದವು. ಹೀಗೆ ವಾಹನಗಳಲ್ಲಿ ಸಿಕ್ಕಿಹಾಕಿಕೊಂಡವರು ಆ ಭಯಾನಕ ರಾತ್ರಿಯನ್ನು ರಸ್ತೆಯಲ್ಲೇ ಕಳೆದು, ಬೆಳಕು ಹರಿದಮೇಲೆ 15–16 ಮೈಲಿ ನಡೆದೆ ವಿರಾಜಪೇಟೆ ತಲುಪಿದರು.

ಇನ್ನು ವಿ.ಬಾಡಗ ಎನ್ನುವ ಗ್ರಾಮದಲ್ಲಿ ಹಿಂದೆಂದು ಕಂಡುಕೇಳರಿಯದ ಮಾದರಿಯಲ್ಲಿ ಒಂದೇ ರಾತ್ರಿಗೆ 18 ಇಂಚು ಮಳೆ ಸುರಿದು 14 ಮನೆಗಳು, ಹಲವು ಎಕರೆ ತೋಟ ಎಲ್ಲವು ಮಣ್ಣುಪಾಲಾದವು. ಸಾಕಷ್ಟು ಮನೆಗಳು ಬಿದ್ದವು. ಹಲವರ ಬದುಕು ಬೀದಿಗೆ ಬಿತ್ತು. ಇದನ್ನು ಕಾವ್ಯಮಯವಾಗಿ ಮುಂಗಾರಿನ ಅಭಿಷೇಕ ಎನ್ನುವ ಬದಲಿಗೆ ರೌದ್ರಾಭಿಷೇಕ ಎನ್ನೋಣ. ಸ್ವಲ್ಪದಿನ ಬಿರುಸು ಕಡಿಮೆಯಾಗಿತ್ತು. ಮಳೆ ಸುರಿಯುವುದು ನಿಂತಿರಲಿಲ್ಲ. ಆದರೆ ಜನರಿಗೆ ತೊಂದರೆಯಾಗಲಿಲ್ಲ.

ಹೇಗೋ ಜನ ಮಳೆಯ ಆರ್ಭಟ ಕಡಿಮೆಯಾಯ್ತು ಎಂದುಕೊಂಡು ಭತ್ತ ಬಿತ್ತನೆ ಮಾಡಿದರು. ನಾಟಿಮಾಡಿದ ಸಸಿಗಳೆಲ್ಲಾ ಕರಗುವ ಹಾಗೆ ಮಾಡಿತು ಹಾಳು ಮಳೆ. ಆದರೂ ಜನ ಛಲ ಬಿಡಲಿಲ್ಲ. ಎರಡನೇ ಬಾರಿ ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡಿದರು. ಇನ್ನೇನು ತಲೆ ಎತ್ತುತ್ತಿದ್ದ ಸಸಿಮಡುಗಳೆಲ್ಲಾ ನೀರಲ್ಲಿ ತೇಲುವಂತ ಮಳೆ ಬಂತು. ರೈತ ಕಂಗಾಲಾದ. ಇನ್ನೊಂದೆಡೆ ಮಳೆ ಜಾಸ್ತಿ ಆಗಿ ಕಾಫಿ ಕಾಯಿಗಳೆಲ್ಲಾ ಉದುರಲಾರಂಭಿಸಿದವು. ಕಾಫಿಎಲೆಗಳೆಲ್ಲಾ ಉದುರಿ 120 ವರ್ಷದ ಹಳೆಯ ಕಾಫಿಗಿಡಗಳು ಕೂಡ ಎಲೆಗಳಿಲ್ಲದಂತೆ ಬೋಳು ಮಾಡ್ತು ಈ ಮಳೆ.

ಆದರೂ ಏನೋ ಒಂದು ಸರಿ ಆಗಬಹುದು ಎಂದುಕೊಂಡ ಜಿಲ್ಲೆಯ ಜನ ಕಾದುನೋಡುವ ತಂತ್ರಕ್ಕೆ ಮೊರೆ ಹೋದರು. ಈ ರಕ್ಕಸ ಮಳೆಗೆ ಸಮಾಧಾನವೇ ಆಗಲಿಲ್ಲ. ಮನೆಗೋಡೆಗಳಲ್ಲಿ, ನೆಲದಲ್ಲಿ, ಅಂಗಳದಲ್ಲಿ ಜಲ ಒಸರೋಕೆ ಶುರುವಾಯ್ತು. ಜನ ಎಲ್ಲೇ ಎದುರು-ಬದಿರು ಸಿಕ್ಕಿದರೂ, ‘ಎಂಥ ಮಳೆ? ಏನು ಆಗಬಹುದು? ಎಲ್ಲಿ ಹೋಗಿ ಮುಟ್ಟುತ್ತೋ’ ಎನ್ನುತ್ತಾ ರೇನ್‍ಕೋಟ್‍ಗಳ ನಡುವೆ ಮುಖ ಸರಿಸಿ ಮಾತನಾಡಿಕೊಂಡರು. ಆದರೆ ಈ ಮಹಾಮಳೆ ಬೇರೆಯಾಗಿಯೇ ಯೋಚನೆ ಮಾಡಿತ್ತು. ಹಿರಿತಲೆಗಳು ಸೌದೆಒಲೆಯೆ ಮುಂದೆ, ಅಗಿಷ್ಟಿಕೆಯ ಮುಂದೆ ಕೂತು ಇದೆಲ್ಲಾ ಒಂದು ಮಳೆಯಾ, ನಾವೆಲ್ಲಾ ಚಿಕ್ಕವರಿದ್ದಾಗ 200ರಿಂದ 280 ಇಂಚು ಮಳೆಯಾಗುತ್ತಿತ್ತು. ನಮಗೆಲ್ಲಾ ನಾಟಿರಜೆ ಕೊಡ್ತಾ ಇದ್ದರು ಅಂತ ತಮ್ಮ ಕಾಲದ ಮಳೆ ಸೈಕಾಲಜಿ ಹೇಳ್ತಿದ್ರು.

ಆದರೆ, ಕೆಲಸದ ಈರಜ್ಜಿ ಮಾತ್ರ ಮೋಸದ ಮಳೆ ಬಗ್ಗೆ ಸರಿಯಾಗಿ ಒಂದು ಸೂತ್ರ ಹೇಳಿದ್ದಳು. ಅದು ಹಾಗೇ ಆಯ್ತು ಕೂಡ.

‘ಮಳೆ ಬರ್ರ್ ಅಂತ ಎಷ್ಟು ಹುಯ್ದರೂ ಏನೂ ಪ್ರಯೋಜನ ಇಲ್ಲ. ಆ ಮಳೆಗೆ ಏನು ಮಾಡೋ ತಾಕತ್ ಇರಲ್ಲ. ಅಂತ ಮಳೆ ಎಷ್ಟು ಹುಯ್ದರೂ ಆ ವರ್ಷ ಬರಗಾಲ ತಪ್ಪಿದ್ದಲ್ಲ. ಮಳೆ ಹುಯ್ಯುವಾಗ ಅದರ ಜೊತೆ ರಭಸವಾಗಿ ಗಾಳಿ ಬೀಸಬೇಕು. ಆ ಗಾಳಿ ಭೂಮಿ ಮುಟ್ಟಬೇಕು. ಆಗ ಮಾತ್ರ ಭೂಮಿಯಲ್ಲಿ ಜಲ ಬರೋದು. ಭೂಮಿಯಲ್ಲಿ ಜಲ ಬಂತು ಅಂದ್ರೆ ಮಳೆ ನಿಂತು ಆರು ತಿಂಗಳು ಆದ್ರು ನದಿಗಳಲ್ಲಿ ಪ್ರವಾಹ ತಗ್ಗಲ್ಲ. ಏಕೆಂದರೆ, ಆ ನೀರು ನದಿಯ ಆಳದಲ್ಲಿ ಹುಟ್ಟಿ ಬರುವ ನೀರು ಆಗಿರುತ್ತೆ. ಯಾಕೋ ಈ ವರ್ಷ ಮಳೆಗಾಳಿ ಎರಡು ಜೊತೆಗೆ ಸೇರಿ ಬರ್ತಾ ಇದೆ. ಕಷ್ಟದ ಕಾಲ ಬಂತು ಅನ್ನಿಸುತ್ತೆ’ ಅಂತ ಸಗಣಿ ತೆಗೆಯೋ ಕೈಯಲ್ಲಿ ನಮ್ಮ ಟಿವಿ ಜ್ಯೋತಿಷಿಗಳಿಗಿಂತ ಚೆನ್ನಾಗಿ ಮಳೆ ತಂದೊಟ್ಟೋ ಜಲಗಂಡಾಂತರವನ್ನು ಹೇಳಿದ್ದಳು. ಆಗಿದ್ದು ಹಾಗೇ. ನಮ್ಮ ಕೊಡಗಿನ ಮಣ್ಣನ್ನು ನೀವೀಗ ಒಂದು ಕಡ್ಡಿಯಿಂದ ಚುಚ್ಚಿ ನೋಡಿ. ನೀರು ಉಕ್ಕುಕ್ಕಿ ಬರ್ತಾಯಿದೆ.

ನೀರು ಹೆಚ್ಚಾಯ್ತು. ಯಾರದೋ ಮನೆಯ ಗೋಡೆ ಬಿರುಕು ಅಂದ್ರು. ಬಿರುಕಿರುವ ಮನೆಗಳು ಊರಿಗೆ ಹತ್ತು ಆದವು. ಕೆಲವು ಮನೆಗಳು ನೋಡನೋಡುತ್ತಲೇ ಬಿದ್ದು ಹೋದವು. ಕೆಲಸಕ್ಕೆ ಹೋದ ಕೂಲಿ ಕಾರ್ಮಿಕರು ಬಂದು ಬಾಗಿಲು ತೆರೆದರೆ ಹಿಂಬದಿಯಲ್ಲಿ ಗೋಡೆಯೇ ಇಲ್ಲ. ಆಕಾಶ ಕಣ್ಣಿಗೆ ಕಾಣ್ತಿದೆ. ಹಾಗೇ ನೇರವಾಗಿ ಆಕಾಶ ನೋಡೋ ಭಾಗ್ಯ ನಮ್ಮ ಜಿಲ್ಲೆಯ ಅರ್ಧದಷ್ಟು ಮಂದಿಗೆ ಈಗಾಗಲೇ ಸಿಕ್ಕಿದೆ. ಇಲ್ಲೇ ಮಲೆತಿರುಕೆಬೆಟ್ಟ ಅಂತಿದೆ. ತುಂಬಾ ಸುಂದರವಾದ ಹಸಿರುಬೆಟ್ಟ. ಬೆಟ್ಟದ ತುದಿಯಲ್ಲಿ ಶಿವನ ದೇವಾಲಯವಿದೆ. ಈ ಬೆಟ್ಟದ ಮೇಲಿಂದ ನಿಂತು ನೋಡಿದರೆ ನಕ್ಷತ್ರಗಳನ್ನು ಬುಟ್ಟಿಯಲ್ಲಿ ತುಂಬಿಟ್ಟ ಹಾಗೇ ಕಾಣುವ ಚೆಂದದ ಬೆಟ್ಟ.

ಇಲ್ಲಿ ಅದೆಷ್ಟೋ ಕೂಲಿಕಾರ್ಮಿಕರು ಈ ಗುಡ್ಡದ ಮೇಲೆ, ಆ ಮಣ್ಣಿನ ನೆತ್ತಿ ಮೇಲೆ ಮನೆ ಕಟ್ಟಿಕೊಂಡಿದ್ದರು. ಅವರಿಗೆಲ್ಲಾ ಪಾಪ ಅಂಗೈ ಅಗಲದ ಜಾಗವನ್ನು ತಮ್ಮದು ಅಂಥ ಹೇಳಿಕೊಳ್ಳೋಕೆ ಹಕ್ಕುಪತ್ರಗಳೂ ಇರಲಿಲ್ಲ. ಹಕ್ಕಿಗೂಡಿನಂಥ ಮನೆಗಳಲ್ಲಿ ವಾಸ ಮಾಡ್ತಾ ಇದ್ದರು. ಆದರೀಗ ಅವರ ಮನೆಗಳಲ್ಲಿ ಹಲವು ಉರುಳಿವೆ. ಇನ್ನು ಹಲವು ಬೀಳಲು ಕಾಯ್ತಾ ಇವೆ. ಈ ಮಳೆ ಹೀಗೇ ಮುಂದುವರೆದರೆ, ಆ ಬೆಟ್ಟ, ಆ ಮನೆ, ಆ ಜನರು ಏನೋ ಆಗ್ತಾರೋ ದೇವರೇ ಬಲ್ಲ.
ಇದ್ದಕ್ಕಿದ್ದಂತೆ ನಾಲ್ಕೈದು ದಿನಗಳ ಹಿಂದೆ ವಾಟ್ಸ್ಯಾಪ್‌ನಲ್ಲಿ, ‘ಕಾಲೂರಿನಲ್ಲಿ ಜನ ಸಿಕ್ಕಿಹಾಕಿಕೊಂಡಿದ್ದಾರೆ, ಅವರನ್ನು ರಕ್ಷಿಸಿ’ ಅನ್ನುವ ಸಂದೇಶಗಳು ಹರಿದಾಡಲಾರಂಭಿಸಿದವು. ಅಷ್ಟಾರಲ್ಲಾಗಲೇ ಮಡಿಕೇರಿ-ಮಂಗಳೂರು ಹೆದ್ದಾರಿ, ಸೋಮವಾರಪೇಟೆ-ಮಡಿಕೇರಿ ರಸ್ತೆ ಎಲ್ಲವು ಹಾಳಾಗಿದ್ದವು. ರಸ್ತೆಗಳಲ್ಲಿ ದೊಡ್ಡಮಟ್ಟದ ಬಿರುಕುಗಳು ಬಂದಿದ್ದವು. ಆದರೆ 11 ಗಂಟೆಯಷ್ಟರಲ್ಲಿ ಸೋಮವಾರಪೇಟೆ ತಾಲ್ಲೂಕಿನ ‘ಮಕ್ಕಂದೂರಿನಲ್ಲಿ ಗುಡ್ಡ ಜರುಗಿದೆ. ಊರು ಕಾಣೆಯಾಗಿದೆ. ಜನ ರಕ್ಷಣೆಗೆ ಗುಡ್ಡ ಏರಿದ್ದಾರೆ’ ಎಂಬ ಮಾಹಿತಿ ಬಂತು.

ಆದರೆ ಚಾರ್ಜ್ ಇಲ್ಲದ ಮೊಬೈಲ್‍ಗಳು ಅದರಲ್ಲೇ ಸಂಬಂಧಿಕರ ಫೋನ್‍ಗಳು ಇದರಿಂದ ಗೊತ್ತಾಗಿದ್ದು, ಏನೆಂದರೆ, ಅಲ್ಲಿಯ ಪ್ರಭಾ ಮತ್ತು ಅವರ ಪತಿ ಮಕ್ಕಂದೂರಿನ ನಿವಾಸಿಗಳು. ಅಂದು ಶಾಪಿಂಗ್ ನಿಮಿತ್ತ ಕುಟುಂಬ ಸಮೇತ ಕುಶಾಲನಗರಕ್ಕೆ ಬಂದಿದ್ದರು. ಹಿಂದಿರುಗಿ ಹೋಗಿ ನೋಡಿದರೆ, ಅವರ ಎಂಟು ಎಕರೆ ತೋಟ, ಮನೆ ಯಾವುದೂ ಇಲ್ಲ. ಇಂಥ ಪರಿಸ್ಥಿತಿ ಇಂದು ಕೊಡಗಿನಲ್ಲಿ ಹಲವರದ್ದಾಗಿದೆ. ಗೃಹಪ್ರವೇಶ ಮಾಡಿ ಮೂರು ದಿನವಾಗಿತ್ತು. ಈಗ ನೋಡಲು ಅವರ ಮನೆಯ ಒಂದು ಇಟ್ಟಿಗೆ ಕೂಡ ಅಲ್ಲಿ ಉಳಿದಿಲ್ಲ.

ಅಜ್ಜಮುತ್ತಾತರ ಕಾಲದಿಂದ ಬಾಳಿದ ಮನೆಗಳು, ನಡೆದಾಡುವ ಕಾಲುದಾರಿಗಳು, ಅವರ ಪ್ರೀತಿಯ ಜೀಪು-ಕಾರುಗಳು, ಶತಮಾನಗಳಷ್ಟು ಹಳೆಯದಾದ ನೂರಾರು ಎಕರೆ ಕಾಫಿತೋಟಗಳು, ಪ್ರೀತಿಯ ಸಾಕುಪ್ರಾಣಿಗಳು, ಕೈತೋಟಗಳು ನೋಡನೋಡುತ್ತಲೇ ಕರಗಿ ಹೋಗಿವೆ. ಅವನ್ನೇ ನಂಬಿದ್ದ ಹಲವರ ಬದುಕು ಇಂದು ಏನೂ ಇಲ್ಲದ ಸ್ಥಿತಿ ಮುಟ್ಟಿದೆ. ಈ ಮಳೆ ಬಿಟ್ಟುಬಿಡದೆ ಕೊಡಗು ಮಾಯವಾಗುವವರೆಗೂ ಸುರಿಯುತ್ತಲೇ ಇರುತ್ತದೆಯೇನೋ. ಸಾಧಾರಣವಾಗಿ ಇಲ್ಲಿನವರ ತೋಟಗಳಲ್ಲಿ, ಕಾಡುಗಳ ಮಧ್ಯದಲ್ಲಿ, ಇಲ್ಲಿನ ಕುಟುಂಬದವರ, ಗ್ರಾಮದವರ ದೈವಗಳಿರುತ್ತವೆ. ಆ ದೈವಗಳನ್ನು ಈ ಮಳೆ ಹೊತ್ತೊಯ್ದಿದೆ. ಎಲ್ಲಿಗೆ ಅಂತ ಮಾತ್ರ ಗೊತ್ತಿಲ್ಲ. ಎಷ್ಟಾದರೂ ಕೊಡಗು ಪ್ರವಾಸಿಗರ ಸ್ವರ್ಗ ಅಲ್ವಾ? ಬಹುಶಃ ಈ ಮಳೆ ಎಲ್ಲರನ್ನು ಖುದ್ದು ಸ್ವರ್ಗಕ್ಕೆ ಕೊಂಡೊಯ್ದಿರಬಹುದು.

ಇನ್ನು ಕುಶಾಲನಗರ ಕೊಡಗಿನ ಕೈಗಾರಿಕಾಪ್ರದೇಶ. ಹಾರಂಗಿಗೆ ಅನತಿ ದೂರದಲ್ಲಿರುವ ಈ ಕುಶಾಲನಗರಕ್ಕೆ ಹಾರಂಗಿ ಹೊಳೆಯ ನೀರನ್ನು ಹಿಡಿದಿಡಲಾಗುತ್ತಿಲ್ಲ. ನೀರು ಹಿಡಿದಿಟ್ಟರೆ ಡ್ಯಾಂಗೆ ಅಪಾಯ. ಇಲ್ಲಿನ ಬಡಾವಣೆಗಳು ತೇಲಲಾರಂಭಿಸುತ್ತವೆ. ಇಲ್ಲಿರುವ ಜನರು ಈಗಾಗಲೇ ಊರುಬಿಡುತ್ತಿದ್ದಾರೆ. ನಮ್ಮ ಸರ್ಕಾರ ಅಪಾಯ ಮನಗಂಡು ಇವರನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಈ ಮಹಾಮಳೆಗೆ ಮುಂಚೆ ಸ್ಥಳಾಂತರ ಮಾಡಬೇಕಿತ್ತು, ಮಾಡಲಿಲ್ಲ. ಸರ್ಕಾರಕ್ಕೆ ವಿಪತ್ತು ನಿರ್ವಹಣೆ ಮಾಡೋದು ಗೊತ್ತಿದ್ರೆ ಪ್ರವಾಹದ ಹೊಡೆತಕ್ಕೆ ಸಿಕ್ಕ ನಮ್ಮ ಉತ್ತರ ಕರ್ನಾಟಕದ ಮಂದಿ ಊರು ಬಿಟ್ಟು ಬೆಂಗಳೂರಿನ ಕಟ್ಟಡಗಳಲ್ಲಿ ಯಾಕೆ ಇನ್ನು ಗಾರೆ ಹೊರ್ತಾ ಇದ್ರು ಬಿಡಿ. ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ನಮ್ಮ ಸರ್ಕಾರಗಳಿಗೆ ಗೊತ್ತಿದ್ರೆ ಕೊಡಗಿನಲ್ಲಿ ಇಷ್ಟು ವಿಪತ್ತು ಆಗ್ತಾ ಇರಲಿಲ್ಲ.

ಎಲ್ಲಿ ಬೆಟ್ಟಗಳಿವೆಯೋ ಅವುಗಳು ಕುಸಿಯುತ್ತಿವೆ. ರಸ್ತೆಗಳು ಬರ್ತ್‍ಡೇ ಕೇಕ್ ಕತ್ತರಿಸಿದ ಮಾದರಿಯಲ್ಲಿ ಕತ್ತರಿಸಿ ಹೋಗಿವೆ. ಗ್ರಾಮೀಣ ರಸ್ತೆಯಿಂದ ಹಿಡಿದು ರಾಜ್ಯ ಹೆದ್ದಾರಿ ತನಕ ನೂರರಷ್ಟು ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿ ಉಳಿದಿಲ್ಲ. ಮಡಿಕೇರಿಯಂತೂ ಯಾವ ಕಡೆಯಿಂದಲೂ ಸಂಪರ್ಕಿಸಲಾಗದಂಥ ದ್ವೀಪವಾಗಿ ಹೋಗಿದೆ. ಮಡಿಕೇರಿಯ ಹಳೇ ಖಾಸಗಿ ಬಸ್‌ನಿಲ್ದಾಣ ನಾಮಾವಶೇಷವಾಗಿದೆ. ಮಡಿಕೇರಿ ಆಕಾಶವಾಣಿಯ ಟವರ್ ನೆಲಮುಟ್ಟಲು ಒಂದುಸ್ವಲ್ಪ ಬಾಕಿ ಉಳಿದಿದೆ. ಮಡಿಕೇರಿಯ ಪ್ರಸಿದ್ಧ ರಾಜಾಸೀಟು ಜರುಗುತ್ತಿದೆ. ಅದರ ಅಕ್ಕಪಕ್ಕದವರನ್ನು ಸ್ಥಳಾಂತರ ಮಾಡಿದ್ದಾರೆ. ಹಲವು ಮಡಿಕೇರಿಯ ಸರ್ಕಾರಿ ಕಟ್ಟಡಗಳು, ಮನೆಗಳು ಲೆಕ್ಕವಿಲ್ಲದ್ದಷ್ಟು ಉರುಳಿ, ಜಾರಿ ಬಿದ್ದಿವೆ. ಅರ್ಧ ಮಡಿಕೇರಿ ಸರಿಪಡಿಸಲಾಗದಂತೆ ಬದಲಾಗಿದೆ. ಅದಕ್ಕಿದ್ದ ಪಾರಂಪರಿಕ ಇತಿಹಾಸ, ಚೆಲುವು, ಸೊಬಗು ಇನ್ನು ನೆನಪಷ್ಟೇ ಆಗಬಹುದೇನೋ. ಸೋಮವಾರಪೇಟೆ ತಾಲ್ಲೂಕಿನ ಹಲವು ಗ್ರಾಮಗಳು ಇತಿಹಾಸದ ಪುಟ ಸೇರಿಹೋಗಿವೆ. ಇನ್ನು ಮಣ್ಣಿನಡಿ ಉತ್ಖನನ ಮಾಡಿದಾಗ ಸಿಗಬಹುದು. ಸೋಮವಾರಪೇಟೆಯ ಹಾಸನ ಗಡಿಭಾಗದ ಗ್ರಾಮಗಳು ಇದ್ದುದರಲ್ಲಿ ಸ್ವಲ್ಪ ಸುರಕ್ಷಿತ.

ನೀವೆಲ್ಲರೂ ಮುಗಿಬಿದ್ದು ನೋಡಲು ಬರುತ್ತಿದ್ದ ಮಲ್ಲಳ್ಳಿ, ಅಬ್ಬಿ, ಇರ್ಫು ಜಲಪಾತಗಳು ಕೆಂಪು ಕೆನ್ನೀರು ಸೂಸುತ್ತಾ ಭೋರ್ಗರೆಯುತ್ತಾ ಇವೆ. ನಿಮ್ಮ ದುಬಾರಿ ಮೊಬೈಲ್‍ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಹಸಿರುಗುಡ್ಡಗಳಿಗೆ ಅದೇನು ಭೂತ ಬಂದಿದೆಯೋ ಕೆಂಪುನೀರು, ಕೆಮ್ಮಣ್ಣು ಸೂಸುತ್ತಾ ಹರಹರ ಮಹಾದೇವ್ ಎನ್ನುತ್ತಾ ಕುಸಿಯುತ್ತಿವೆ. ಬರೇ ಕುಸಿಯುತ್ತಿಲ್ಲ, ಒಂದು ಗುಡ್ಡ ಕನಿಷ್ಠ ಒಂದು ಊರನ್ನಾದರೂ ತನ್ನ ಜೊತೆಯಲ್ಲೇ ಕರೆದುಕೊಂಡು ಕುಸಿದುಬೀಳ್ತಾ ಇದೆ. ಮೈಯಲ್ಲಿರುವ ಮೂಳೆಗಳೆಲ್ಲಾ ನೋಯುವಷ್ಟು ಚಳಿ, ಕಿವಿಯನ್ನು ತಣ್ಣಗೆ ಕೊರೆಯುವ ಗಾಳಿ, ಒಂದು ನಿಮಿಷವೂ ಬಿಡುವಿಲ್ಲದಂತೆ ಸುರಿಯುವ ಮಳೆ. ನಿಮಿಷಾರ್ಧದಲ್ಲಿ ನಿಂತ ನೆಲ–ಮನೆ ಎಲ್ಲ ಹೋಗಿ ಗಂಜಿಕೇಂದ್ರದ ಮೆಟ್ಟಿಲು ಹತ್ತುತ್ತಿರುವ ಜನತೆ, ‘ನಾನು ಹುಟ್ಟಿ ಬೆಳೆದ ಮನೆ ಬಿಟ್ಟು ಬರಲ್ಲ, ಸತ್ತರೆ ಇಲ್ಲೇ ಸಾಯ್ತೀವಿ’ ಎಂದು ದ್ವೀಪ ಸಿನಿಮಾದ ಅಜ್ಜನ ಥರ ಹಟ ಹಿಡಿದು ಕೂರುತ್ತಿರುವ ಹಿರಿಯರು.

ಆದರೂ ಮಳೆರಾಯ ನೀನು ಯಾಕೆ ಸಾಯುವ ಮಳೆ ಆದೆ ಅಂಥ ಯಾರು ಕೇಳ್ತಿಲ್ಲಾ. ಯಾಕೆ ಗೊತ್ತಾ? ಇಲ್ಲಿನ ಜನರು ಮಳೆಯನ್ನು ತಮ್ಮ ಜೀವನದಿಂದ ಎಂದು ಬೇರೆಯಾಗಿ ನೋಡಿದ್ದೇ ಇಲ್ಲ. ಮಳೆಗಾಲವನ್ನು ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪ್ರೀತಿಯಿಂದ ಸ್ವಾಗತಿಸಿದವರೆ. ಕೆಲವರು ಹೋಗಿ ಕೊಡೆ ಕೊಂಡರೆ, ಮತ್ತೆ ಕೆಲವರು ಮನೆ ಸುತ್ತ ಪ್ಲಾಸ್ಟಿಕ್ ಕಟ್ಟಿ ಎರಚಲು ಹೊಡೆಯದಂತೆ ನೋಡಿಕೊಂಡರೆ, ಕೆಲವರು ಬಗೆಬಗೆಯ ವೈನ್ ರೆಡಿ ಮಾಡಿ ಮಳೆಗಾಲಕ್ಕೆ ಇಡುತ್ತಿದ್ದರು, ಶಾಲೆಗೆ ಹೋಗುವ ಮಕ್ಕಳು ಮಳೆರಜೆ ಸಿಗುತ್ತಲ್ಲ ಅಂಥ ಜೋರು ಮಳೆಗೆ ಕಾಯ್ದರೆ, ಇನ್ನು ಕೆಸರುಗದ್ದೆ ಓಟ... ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಮಳೆ ಒಬ್ಬ ಗೆಳೆಯನಂತೆ ಇಲ್ಲಿ. ಆದರೆ, ಮಳೆರಾಯ ಮಾತ್ರ ಯಾಕೆ ಹೀಗೆ ಮಾಡಿದ? ಆ ತಾಯಿ ಕಾವೇರಿಯೇ ಹೇಳಬೇಕು.

ಪಂಜೆಮಂಗೇಶರಾಯರ ‘ಹುತ್ತರಿಹಾಡು’ ಕವನ ಸಂಕಲನದ ಸಾಲುಗಳು ಹೀಗಿವೆ... ‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ, ಅಲ್ಲೇ ಆ ಕಡೆ ನೋಡಲಾ, ಅಲ್ಲೇ ಕೊಡವರ ನಾಡಲಾ, ಅಲ್ಲೇ ಕೊಡವರ ಬೀಡಲಾ...’ ಇನ್ನೆಲ್ಲಿದೆ ಕೊಡವರ ಆ ನಾಡು? ಇನ್ನೆಲ್ಲಿ ಕೊಡವರ ಆ ಬೀಡು? ಕೊಡಗಿನ ಶತಮಾನದ ಮಹಾಮಳೆ ಕೊಡಗನ್ನು ಅಳಿಸಿ ಹಾಕಿದೆ. ಇಲ್ಲಿನ ಈ ಮಣ್ಣಿನ, ಈ ಜಿಲ್ಲೆಯ ಚಿತ್ರಣವೇ ತಲೆಕೆಳಕಾಗಿದೆ. ಕೆಸರಿನ ಪಾಯಸ, ಮಣ್ಣಿನ ರಾಶಿ, ಬೇರು ಮೇಲೆ ಮಾಡಿ ಮಗುಚಿಬಿದ್ದ ಮರಗಳು, ಕುಸಿದ ಕಟ್ಟಡಗಳು. ಚೆಂದವಾದ, ಚೊಕ್ಕವಾದ ಬೆಟ್ಟದ ಮೇಲಿನ ಮನೆಗಳು ಮಣ್ಣಿನಡಿ ಹೋಗಿವೆ. ಕರುನಾಡಿನ ಮುಕುಟಮಣಿ ನೆಲಕ್ಕೆ ಬಿದ್ದಿದೆ. ಇಷ್ಟು ವರ್ಷ ಮೈಸೂರು, ಬೆಂಗಳೂರು, ತಮಿಳುನಾಡಿನ ಜನತೆಯನ್ನು ಕಾವೇರಿನದಿಯ ಮೂಲಕ ಸಮೃದ್ಧವಾಗಿಟ್ಟ ಕೊಡಗು ಇಂದು ಅದೇ ಕಾವೇರಿಯ ಸೆಳೆತಕ್ಕೆ ಸಿಕ್ಕಿದೆ. ನೀವೆಲ್ಲಾ ನೀರು ಬೇಕು ಅಂದಾಗ ನೀರು ಕೊಟ್ಟಿದೆ. ಆ ನೀರು ನಿಮ್ಮ ಹೊಟ್ಟೆ, ಬಟ್ಟೆ, ದೇವರು, ಮಕ್ಕಳು ಎಲ್ಲರನ್ನು ಕಾಪಾಡಿದೆ. ಇನ್ನು ಮುಂದೆಯು ಕಾಪಾಡಲಿದೆ.

ಕೊಡಗಿಗೆ ರೈಲು ಬೇಡ, ಅದರಿಂದ ಪ್ರಕೃತಿ ನಾಶವಾಗುತ್ತೆ ಅಂತ ಕೊಡಗಿನ ಜನತೆ ಹೋರಾಟ ಮಾಡಿದರೆ, ಬೆಂಗಳೂರಿನ, ಮೈಸೂರು ಜನರು ಮೂಕ-ಕಿವುಡರ ಹಾಗೇ ಸುಮ್ಮನೆ ಕೂರುತ್ತೀರಿ. ಕೊಡಗಿಗೆ ಹೈಟೆನೆಷನ್ ಕರೆಂಟ್ ಬೇಡ ಅಂದ್ರೆ ಆಗಲೂ ಮಾತನಾಡಲ್ಲ ನೀವು. ಕೊಡಗಿಗೆ ರೈಲು ಬಂದರೆ ಕಾವೇರಿಯ ಉಪನದಿಗಳು ಹಾಳಾಗ್ತವೆ. ನದಿಯ ಜಲದಕಣ್ಣು ಹೋಗುತ್ತವೆ ಅಂದರೆ ಆಗಲೂ ನಿಮ್ಮದು ದಿವ್ಯಮೌನ. ನೀವು ಯಾವತ್ತು ಈ ಕೊಡಗಿನ ಪರ ನಿಮ್ಮನ್ನು ಜೀವಂತ ಇಟ್ಟಿರುವ ಕಾವೇರಿನದಿಯ ಬಗ್ಗೆ ಯೋಚಿಸೇ ಇಲ್ಲ. ನಿಮಗೆ ನಿಮ್ಮ ನಲ್ಲಿಯಲ್ಲಿ ನೀರು ಬಂದರೆ ಆಯ್ತು. ಆದರ ಮೂಲ ಎಲ್ಲಿ? ಅದರ ರಕ್ಷಣೆ ಹೇಗೆ ನಿಮಗೆ ಬೇಡ.

ನಿಮ್ಮನ್ನು ಕಾಪಾಡುತ್ತಿರುವ ಕಾವೇರಿತಾಯಿಯ ತವರು ಮುಳುಗಿದೆ. ಜಿಲ್ಲೆ ಅಳಿವಿನಂಚಿನಲ್ಲಿದೆ. ನಿಮ್ಮ ಸ್ಮಾರ್ಟ್‍ಫೋನ್ ಜಗತ್ತಿನಿಂದ ಬೆಂಗಳೂರೆಂಬ ಭ್ರಮಾ ಜಗತ್ತಿನಿಂದ ಹೊರಗೆ ಬನ್ನಿ, ಕೊಡಗನ್ನು ಉಳಿಸಿ. ಕಳೆದುಹೋಗಿರುವ ಇಲ್ಲಿನವರ ಬದುಕು ಕಟ್ಟಿಕೊಡಿ. ಇಷ್ಟುವರ್ಷ ನಿಮ್ಮನ್ನು ಚೆನ್ನಾಗೇ ಇಡೋಕೆ ಕೊಡಗಿನವರು ಮಳೆಯಲ್ಲಿ ತೇಲಿದ್ದಾರೆ, ಮುಳುಗಿದ್ದಾರೆ, ಜೀವವನ್ನೇ ಮಳೆಗಾಗಿ ಅರ್ಪಣೆ ಮಾಡಿದ್ದಾರೆ. ಇವತ್ತು ಏಳಲಾರದಷ್ಟು ಮುಳುಗಿದ್ದಾರೆ. ನೀವೆಲ್ಲರೂ ಸಂಖ್ಯೆಯಲ್ಲಿ, ವಿಸ್ತಾರದಲ್ಲಿ ಎಷ್ಟೊಂದು ದೊಡ್ಡವರು. ಗುಬ್ಬಿಯಂಥ ಕೊಡಗಿಗೆ ನಿಮ್ಮ ಬೆರಳತುದಿಯಲ್ಲಿ ಸಹಾಯ ಮಾಡಿದ್ರು ಉಳಿಯುತ್ತೇವೆ.

ಕಾವೇರಿ ಈಗಾಗಲೇ ನಿಮ್ಮ ಮನೆ ಕೊಳಾಯಿಗಳಲ್ಲಿ ಇದ್ದಾಳೆ. ನಿಮ್ಮ ಸಹಾಯ ಕೇಳ್ತಾ ಇದ್ದಾಳೆ. ನನ್ನ ಮಕ್ಕಳು ಕಷ್ಟದಲ್ಲಿದ್ದಾರೆ ಅಂತ. ನಿಮ್ಮ ಟೀವಿ ಸದ್ದು ತಗ್ಗಿಸಿದರೆ ಕೇಳಬಹುದು.

---

ಲೇಖಕಿ ಉಷಾ ಪ್ರೀತಮ್ ಕೊಡಗು ಜಿಲ್ಲೆ ವಿರಾಜಪೇಟೆಯ ಮಗ್ಗುಲು ಗ್ರಾಮದವರು. ಪತ್ರಿಕೋದ್ಯಮ ಪದವೀಧರೆ. ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ವಿವಾಹವಾದ ನಂತರ ತವರು ಜಿಲ್ಲೆಯಲ್ಲೇ ನೆಲೆಸಿದ್ದಾರೆ. ಸದ್ಯಕ್ಕೆ ಕೊಡಗು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.