ADVERTISEMENT

ವಿಶ್ಲೇಷಣೆ | ಡಿಕೆಶಿ ಕೇಸ್ ವಾಪಸ್: ಇಲ್ಲದ ಅಧಿಕಾರವನ್ನು ಬಳಸಿದ ಸಂಪುಟ

ಕೆ.ವಿ.ಧನಂಜಯ
Published 7 ಡಿಸೆಂಬರ್ 2023, 23:40 IST
Last Updated 7 ಡಿಸೆಂಬರ್ 2023, 23:40 IST
.
.   

ಲಂಚ ಪಡೆಯುವ ಸಾರ್ವಜನಿಕ ಸೇವಕರನ್ನು ಲಂಚ ಪಡೆಯುತ್ತಿರುವ ಸಂದರ್ಭದಲ್ಲಿಯೇ ಹಿಡಿಯುವುದು ಕಷ್ಟ ಎಂಬುದನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ– 1988 ಗುರುತಿಸಿದೆ. ಹೀಗಾಗಿ, ಲಂಚ ಪಡೆದ ವ್ಯಕ್ತಿ ಆ ಹಣವನ್ನೆಲ್ಲ ತನ್ನ ಅಥವಾ ತನ್ನ ಕುಟುಂಬದ ಸದಸ್ಯರ ಸಂಪತ್ತಿಗೆ ಸೇರಿಸುತ್ತಾನೆ, ತನ್ನ ಅಥವಾ ಕುಟುಂಬದ ಸದಸ್ಯರ ಸಂಪತ್ತಿನಲ್ಲಿ ಹೆಚ್ಚಳ ಆಗಿದ್ದು ಹೇಗೆ ಎಂಬುದಕ್ಕೆ ಆತನಿಂದ ಸರಿಯಾದ ವಿವರಣೆ ನೀಡಲು ಸಾಧ್ಯವಾಗುವು ದಿಲ್ಲ ಎಂದು ಕಾಯ್ದೆಯು ಭಾವಿಸುತ್ತದೆ. 2014ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಜೆ. ಜಯಲಲಿತಾ ಅವರನ್ನು ಈ ಕಾಯ್ದೆಯ ಅಡಿಯಲ್ಲಿ ನಾಲ್ಕೂವರೆ ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು, ₹ 100 ಕೋಟಿ ದಂಡ ವಿಧಿಸಲಾಗಿತ್ತು. ತಮ್ಮ ಆಸ್ತಿಯಲ್ಲಿ ಆದ ₹ 54 ಕೋಟಿಯಷ್ಟು ಹೆಚ್ಚಳಕ್ಕೆ ವಿವರಣೆ ನೀಡುವುದಕ್ಕೆ ಜಯಲಲಿತಾ ಅವರಿಗೆ ಸಾಧ್ಯವಾಗಿರಲಿಲ್ಲ.

ಇದೇ ಕಾನೂನಿನ ಅಡಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ. ಅವರು ಘೋಷಿತ ಆದಾಯಕ್ಕಿಂತ ಹೆಚ್ಚುವರಿಯಾಗಿ ಸಂಪಾದಿಸಿರುವ ಆಸ್ತಿಯ ಮೌಲ್ಯ ₹ 75 ಕೋಟಿ ಎಂದು ಸಿಬಿಐ ಆರೋಪಿಸಿದೆ. ಈ ಆರೋಪಕ್ಕೆ ಸಂಬಂಧಿಸಿದ ತನಿಖೆಯು ಕೆಲವು ತಿಂಗಳುಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಈ ಸಂದರ್ಭದಲ್ಲಿ, ಶಿವಕುಮಾರ್ ವಿರುದ್ಧದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸಚಿವ ಸಂಪುಟವು ಹಿಂಪಡೆಯಲು ತೀರ್ಮಾನಿಸಿದೆ ಎಂದು ವರದಿಯಾಗಿದೆ. ತನಿಖೆಯನ್ನು ರಾಜ್ಯ ಪೊಲೀಸರಿಗೆ ವರ್ಗಾಯಿಸಬೇಕು ಎಂಬುದು ಸಂಪುಟದ ಇಚ್ಛೆ. ಇಂಥದ್ದು ಹಿಂದೆಂದೂ ಆಗಿರಲಿಲ್ಲ. ಕಾನೂನಿನ ದೃಷ್ಟಿಯಿಂದ ಇದು ತರ್ಕಹೀನ. ಪೊಲೀಸ್ ವ್ಯವಸ್ಥೆ ಮತ್ತು ಕಾನೂನು ಸುವ್ಯವಸ್ಥೆಯ ಹೊಣೆ ರಾಜ್ಯಗಳ ವ್ಯಾಪ್ತಿ ಯಲ್ಲಿದೆ. ಆದರೆ ಇದಕ್ಕೆ ಕೆಲವು ವಿನಾಯಿತಿಗಳೂ ಇವೆ. ಶಿವಕುಮಾರ್ ಅವರು ಕರ್ನಾಟಕ ಸರ್ಕಾರದ ಅಧೀನದ ಸಾರ್ವಜನಿಕ ಸೇವಕ ಆಗಿದ್ದ ಕಾರಣ, ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ವಿಚಾರವಾಗಿ ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕಿದ್ದರೆ, ಅದಕ್ಕೆ ಸಂಬಂಧಿಸಿದ ಮೂಲ ಅಧಿಕಾರ ಇರುವುದು ಕರ್ನಾಟಕ ಪೊಲೀಸರಿಗೆ ಮಾತ್ರ. ಆದರೆ ಪೊಲೀಸರು ತನಿಖೆ ನಡೆಸಬಹುದಾದ ಅಪರಾಧಗಳನ್ನು ರಾಜ್ಯ ಸರ್ಕಾರವು ಬಯಸಿದಲ್ಲಿ ಸಿಬಿಐಗೆ ವರ್ಗಾವಣೆ ಮಾಡಬಹುದು. ಶಿವಕುಮಾರ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರವು 2019ರ
ಸೆಪ್ಟೆಂಬರ್‌ನಲ್ಲಿ ಒಪ್ಪಿಗೆ ನೀಡಿತು. ಆದರೆ ಆ ಒಪ್ಪಿಗೆಯು ಕಾನೂನುಬಾಹಿರವಾಗಿತ್ತು ಎಂದು ಸರ್ಕಾರ ಈಗ ಹೇಳುತ್ತಿದೆ.

ADVERTISEMENT

ಒಪ್ಪಿಗೆ ನೀಡುವ ಅಧಿಕಾರವು ರಾಜ್ಯ ಸರ್ಕಾರಕ್ಕೆ ಇದೆ ಎಂದಾದರೆ, ಅದಾಗಲೇ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯುವ ಅಧಿಕಾರವೂ ಸರ್ಕಾರಕ್ಕೆ ಇರುತ್ತದೆ ಎಂದು ಸಂಪುಟ ಹೇಳುತ್ತಿದೆ. ನಿರ್ದಿಷ್ಟ ಕೆಲಸವೊಂದನ್ನು ಮಾಡುವ ಅಧಿಕಾರ ಇದೆ ಎಂದಾದರೆ, ಅದಾಗಲೇ ಮಾಡಿರುವ ಕೆಲಸದ ವಿಚಾರವಾಗಿ ಹಿಂದಡಿ ಇರಿಸುವ ಅಧಿಕಾರವೂ ಇರುತ್ತದೆ ಎಂಬುದು ಕಾನೂನಿನ ಮೂಲ ತತ್ವ ಎಂದು ಸಂಪುಟದ ತೀರ್ಮಾನದ ಪರವಾಗಿ
ಇರುವವರು ಹೇಳುತ್ತಿದ್ದಾರೆ. ಇದು ಸರಿಯೇ?

ಕಾನೂನಿನ ಅಡಿ, ಅಧಿಕಾರ ಚಲಾಯಿಸುವ ಸ್ವಾತಂತ್ರ್ಯದ ಭಾಗವಾಗಿ ಇರುವುದು ಆ ಅಧಿಕಾರವನ್ನು ಚಲಾಯಿಸದೇ ಇರುವ ಸ್ವಾತಂತ್ರ್ಯ ಮಾತ್ರ. ಅಂದರೆ, 2019ರ ಸೆಪ್ಟೆಂಬರ್‌ನಲ್ಲಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡುವ ಮೊದಲು, ಒಪ್ಪಿಗೆ ನೀಡದಿರುವ ಸ್ವಾತಂತ್ರ್ಯವೂ ಸರ್ಕಾರಕ್ಕೆ ಇತ್ತು. ಆಡಳಿತಾತ್ಮಕ ಕಾನೂನಿನ ಈ ಮೂಲ ತತ್ವವನ್ನು ಸಂಪುಟವು ಸಂಪೂರ್ಣವಾಗಿ ತಪ್ಪಾಗಿ ಅರ್ಥಮಾಡಿಕೊಂಡಿದೆ. ಒಮ್ಮೆ ಒಂದು ತೀರ್ಮಾನ ಕೈಗೊಂಡಾದ ನಂತರ, ಅದಕ್ಕೆ ಸಂಬಂಧಿಸಿದ ಶಾಸನಾ ತ್ಮಕ ಪರಿಣಾಮಗಳು ಇರುತ್ತವೆ. ತೀರ್ಮಾನ ಕೈಗೊಂಡ ವ್ಯಕ್ತಿಗೆ, ತನ್ನ ತೀರ್ಮಾನ ಹಿಂಪಡೆಯುವ ಅಧಿಕಾರ ಉಳಿದಿರುವುದಿಲ್ಲ. ಶಿವಕುಮಾರ್ ವಿರುದ್ಧ ಸಿಬಿಐ ಆರಂಭಿಸಿರುವ ತನಿಖೆ ನಿಲ್ಲಿಸಲು ಸರ್ಕಾರಕ್ಕೆ ಅಧಿಕಾರ ಇಲ್ಲ. ಏಕೆಂದರೆ, ದೇಶದ ಅಪರಾಧ ದಂಡಪ್ರಕ್ರಿಯೆಯು ಆ ರೀತಿ ನಿಲ್ಲಿಸುವುದಕ್ಕೆ ಮಾನ್ಯತೆ ನೀಡುವುದಿಲ್ಲ.

ವ್ಯಕ್ತಿಯೊಬ್ಬ ಸಂಕೀರ್ಣ ಶಸ್ತ್ರಚಿಕಿತ್ಸೆಯೊಂದಕ್ಕೆ ಒಪ್ಪಿಗೆ ನೀಡಿ, ಶಸ್ತ್ರಚಿಕಿತ್ಸೆಯ ನಡುವಿನಲ್ಲಿ ತಾನು ಸಮ್ಮತಿಯನ್ನು ಹಿಂಪಡೆಯುತ್ತಿದ್ದೇನೆ ಎಂದು ಹೇಳುವಂತಹ ಕೆಲಸವನ್ನು ಸರ್ಕಾರ ಈಗ ಮಾಡಿದೆ. ಸಿಬಿಐಗೆ ನೀಡಿದ್ದ ಸಮ್ಮತಿಯನ್ನು ಹಿಂದಕ್ಕೆ ಪಡೆದಿರುವುದಕ್ಕೆ ಸಂಪುಟವು ಮುಂದಿರಿಸಿರುವ ವಾದಗಳು ಸಾರ್ವಜನಿಕ ಚರ್ಚೆಗೂ ಅರ್ಹವಾಗಿಲ್ಲ. ಸಂಪುಟದ ಸದಸ್ಯರೊಬ್ಬರ ರಕ್ಷಣೆಗೆ ಬೇರೆ ಯಾವುದೇ ಸಂಪುಟವು ಇಂತಹ ಕೆಲಸವೊಂದನ್ನು ಮಾಡಿದಂತೆ ಕಾಣುತ್ತಿಲ್ಲ. ಇದು ಒಳ್ಳೆಯ ಆಡಳಿತಕ್ಕೆ ಒಂದು ಪೆಟ್ಟು.

1987ರಲ್ಲಿ ಸಿಕ್ಕಿಂ ಮುಖ್ಯಮಂತ್ರಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಸಿಬಿಐ ತನಿಖೆ ಎದುರಿಸುತ್ತಿದ್ದರು. ತಮ್ಮನ್ನು ರಕ್ಷಿಸಿಕೊಳ್ಳಲು ಅವರು ಬಯಸಿದರು. ಆದರೆ ಅವರ ನೇತೃತ್ವದ ಸರ್ಕಾರವು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲಾಗುತ್ತದೆ ಎಂದು ಹೇಳಲಿಲ್ಲ. ಅದರ ಬದಲಿಗೆ, 1979ರ ನಂತರದಲ್ಲಿ ಸಿಬಿಐಗೆ ವಹಿಸಿದ್ದ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದ ಅನುಮತಿಯನ್ನು ಹಿಂಪಡೆಯಲಾಗುತ್ತಿದೆ ಎಂದು ಹೇಳಿತು. ತನ್ನ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಒಪ್ಪಿಗೆ ನೀಡುವ ಸ್ವಾತಂತ್ರ್ಯವಿರುವ ಸರ್ಕಾರಕ್ಕೆ, ಒಪ್ಪಿಗೆ ನೀಡದಿರುವ ಸ್ವಾತಂತ್ರ್ಯವೂ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿತು. ಆದರೆ, ಒಪ್ಪಿಗೆಯನ್ನು ಹಿಂದಕ್ಕೆ ಪಡೆಯುವ ಸ್ವಾತಂತ್ರ್ಯ ಇಲ್ಲ ಎಂದು ಹೇಳಿತು. ಏಕೆಂದರೆ, ಒಮ್ಮೆ ಒಪ್ಪಿಗೆ ಕೊಟ್ಟ ನಂತರದಲ್ಲಿ ಅದರ ಶಾಸನಾತ್ಮಕ ಪರಿಣಾಮಗಳನ್ನು ಎದುರಿಸಲೇಬೇಕಾಗುತ್ತದೆ. ಅನುಮತಿ ಹಿಂಪಡೆದ ಸರ್ಕಾರದ ಆದೇಶದ ಅರ್ಥವನ್ನು ಕಿರಿದು ಮಾಡಿದ ಸುಪ್ರೀಂ ಕೋರ್ಟ್‌, ಭವಿಷ್ಯದಲ್ಲಿ ಸಿಬಿಐ ನಡೆಸುವ ತನಿಖೆಗಳಿಗೆ ಅನುಮತಿ ಇರುವುದಿಲ್ಲ ಎಂಬ ಅರ್ಥವನ್ನಷ್ಟೇ ಆ ಆದೇಶವು ನೀಡಬಹುದು ಎಂದು ಹೇಳಿತು. ಇದರಿಂದ, ಮುಖ್ಯಮಂತ್ರಿ ವಿರುದ್ಧದ ತನಿಖೆಯನ್ನು ಸಿಬಿಐ ಯಾವ ಅಡ್ಡಿಯೂ ಇಲ್ಲದೆ ಮುಂದುವರಿಸಿತು.

1998ರಲ್ಲಿ ಕೇರಳ ಸರ್ಕಾರವು ನಿರ್ದಿಷ್ಟ ಪ್ರಕರಣವೊಂದರಲ್ಲಿ ಸಿಬಿಐಗೆ ನೀಡಿದ್ದ ಅನುಮತಿಯನ್ನು ತಾನು ಹಿಂದಕ್ಕೆ ಪಡೆಯಬೇಕಿದೆ, ಆಗ ರಾಜ್ಯ ಪೊಲೀಸರು ಇನ್ನೂ ಪರಿಣಾಮಕಾರಿಯಾಗಿ ತನಿಖೆ ನಡೆಸಲು ಸಾಧ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಂದೆ ವಾದಿಸಿತು. ಒಪ್ಪಿಗೆ ನೀಡಿದ್ದನ್ನು ಹಿಂದಕ್ಕೆ ಪಡೆಯುವ ಅಧಿಕಾರವು ರಾಜ್ಯಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು. ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಕೇರಳ ಸರ್ಕಾರದ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಲಕ್ಷಾಂತರ ರೂಪಾಯಿ ದಂಡ ವಿಧಿಸಿತು.

ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ತೀರ್ಮಾನವನ್ನು ಸಂಪುಟ ಕೈಗೊಂಡಿದ್ದೇಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಿರ್ದಿಷ್ಟ ಪ್ರಕ್ರಿಯೆಯೊಂದನ್ನು ಪಾಲಿಸದೇ ಇದ್ದ ಕಾರಣಕ್ಕೆ ಹಿಂದಿನ ಮುಖ್ಯ ಕಾರ್ಯದರ್ಶಿ ನೀಡಿದ್ದ ಅನುಮತಿ ಲೋಪದಿಂದ ಕೂಡಿತ್ತು ಎಂದು ಸರ್ಕಾರ ಹೇಳಿದೆ. ಶಿವಕುಮಾರ್ ವಿರುದ್ಧ ತನಿಖೆ ಆರಂಭಕ್ಕೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕಿತ್ತು ಎಂದು ಕೂಡ ಹೇಳಿದೆ. ಇವೆರಡೂ ವಾದ ಸರಿ ಎಂದು ಒಪ್ಪಿಕೊಂಡರೂ ಅವು ಪ್ರಕ್ರಿಯೆಯ ಪಾಲನೆಯಲ್ಲಿ ಲೋಪವೊಂದಕ್ಕೆ ಸಂಬಂಧಿ ಸಿದವಾಗುತ್ತವೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿ ತನಿಖೆಯೊಂದನ್ನು ಇಂತಹ ಲೋಪಕ್ಕಾಗಿ ನಿಲ್ಲಿಸಲು ಆಗುವುದಿಲ್ಲ. ಇಂತಹ ಲೋಪದಿಂದ ನ್ಯಾಯದಾನದಲ್ಲಿ ವೈಫಲ್ಯ ಆಗಿದೆ, ಅಂದರೆ ಅಮಾಯಕ ವ್ಯಕ್ತಿಯೊಬ್ಬ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಕೋರ್ಟ್‌ಗೆ ಅನ್ನಿಸಿದರೆ ಮಾತ್ರ ತನಿಖೆ ನಿಲ್ಲಿಸಬಹುದು. 

ವಾಸ್ತವದಲ್ಲಿ, ರಾಜ್ಯ ಸರ್ಕಾರವು ತನಿಖೆಗೆ ಅನುಮತಿ ನೀಡುವುದಕ್ಕೆ ನಿರ್ದಿಷ್ಟ ‍ಪ್ರಕ್ರಿಯೆಯನ್ನು ಪಾಲಿಸಬೇಕು ಎಂದು ಕಾನೂನಿನಲ್ಲಿ ಹೇಳಿಲ್ಲ. ರಾಜ್ಯ ಸರ್ಕಾರದ ಸಂಬಂಧಪಟ್ಟ ಅಧಿಕಾರಿಯು ಒಂದು ಒಪ್ಪಿಗೆ ಪತ್ರ ನೀಡಿದರೆ ಸಾಕಾಗುತ್ತದೆ. ಶಿವಕುಮಾರ್ ವಿರುದ್ಧ ತನಿಖೆಗೆ ಸ್ಪೀಕರ್ ಅನುಮತಿಯ ಅಗತ್ಯ ಇರುವುದಿಲ್ಲ. ರಾಜ್ಯದ ಸಂಪುಟವು ಕಾನೂನಿನ ದೃಷ್ಟಿಯಿಂದ ತರ್ಕರಹಿತ ಕೆಲಸವೊಂದನ್ನು ಮಾಡಿದೆ. ಕಾನೂನಿನ ಅಡಿಯಲ್ಲಿ ತನಗೆ ಇಲ್ಲದಿರುವ ಅಧಿಕಾರ ಬಳಸಿ, ಸಂಪುಟದ ಸದಸ್ಯರೊಬ್ಬರನ್ನು ಭ್ರಷ್ಟಾಚಾರದ ಪ್ರಕರಣದಲ್ಲಿ ರಕ್ಷಿಸಲು ಮುಂದಾಗಿರುವುದು ಆಡಳಿತಾತ್ಮಕ ಅಧಿಕಾರದ ದುರ್ಬಳಕೆ ಮತ್ತು ಸಂಪುಟದ ಮೇಲೆ ಸಾರ್ವಜನಿಕರು ಇರಿಸಿರುವ ನಂಬಿಕೆಗೆ ಧಕ್ಕೆ ತರುವಂಥದ್ದು.

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.