ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗದಾಗ, ರೈತರು ಬೆಳೆಯನ್ನು ರಸ್ತೆಯಲ್ಲಿ ಸುರಿದು ಆಕ್ರೋಶ ಹೊರಹಾಕುತ್ತಾರೆ. ಕೆಲವರು ತಮ್ಮ ಸಂಕಷ್ಟವನ್ನು ವಿಡಿಯೊ ಮಾಡಿ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡು ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಹಿರಿಯೂರು ತಾಲ್ಲೂಕಿನ ವಸಂತಕುಮಾರಿ ಅವರ ಈರುಳ್ಳಿ ಪ್ರಕರಣ ಇದಕ್ಕೊಂದು ಉದಾಹರಣೆ. ಇವರ ಸಮಸ್ಯೆಗೆ ಮುಖ್ಯಮಂತ್ರಿಯೇ ಸ್ಪಂದಿಸಿದರು. ಆದರೆ, ಹೂಕೋಸು, ಟೊಮೆಟೊ ಬೆಳೆದ ಆನೇಕಲ್‌ನ ನಾಗೇಂದ್ರಬಾಬು, ಸಾವಯವ ವಿಧಾನದಲ್ಲಿ ಶುಂಠಿ ಬೆಳೆದಿದ್ದ ಮೈಸೂರಿನ ಪ್ರಶಾಂತ ಅವರ ಕಷ್ಟವನ್ನು ಯಾರೂ ಕೇಳಲಿಲ್ಲ. ಬೆಂಗಳೂರಿನ ಸಮೀಪವೇ ದ್ರಾಕ್ಷಿ ಬೆಳೆದ ಭೈರೇಗೌಡರು, ಸಮೃದ್ಧವಾಗಿ ಕುಂಬಳಕಾಯಿ ಬೆಳೆದ ಶಿರಾದ ನಾಗಣ್ಣ ಅವರ ನೆರವಿಗೆ ಯಾರೂ ಬರಲಿಲ್ಲ.ಶ್ರೀ
ಇದು ಒಬ್ಬಿಬ್ಬರ ಸಮಸ್ಯೆಯಾಗಿದ್ದರೆ ಮುಖ್ಯ ಮಂತ್ರಿಯೇ ನೇರವಾಗಿ ಮಾತನಾಡಿಸಿ ಮಾರುಕಟ್ಟೆ ಒದಗಿಸಬಹುದು. ಆದರೆ, ಇದು ಕರ್ನಾಟಕದ ಉದ್ದಗಲಕ್ಕೂ 170 ಲಕ್ಷ ಟನ್ ಆಹಾರ ಉತ್ಪನ್ನ, 68 ಲಕ್ಷ ಟನ್ ತರಕಾರಿ, 55 ಲಕ್ಷ ಟನ್ ಹಣ್ಣು ಬೆಳೆಯುತ್ತಿರುವ ಸಾವಿರಾರು ರೈತರ ನಿತ್ಯದ ಕಥೆಯಾಗಿರುವಾಗ, ಎಲ್ಲರಿಗೂ ಸ್ಪಂದನೆ ಸಿಗುವುದು ಅಸಾಧ್ಯವೇ ಸರಿ. ಸರ್ಕಾರವು ಬೀಜ, ಗೊಬ್ಬರ, ನೀರು, ಸಾಲ ಒದಗಿಸಿ ಬೆಳೆಯಲು ಮಾತ್ರ ಪ್ರೋತ್ಸಾಹಿಸಿದರೆ ಸಾಲದು. ರೈತರ ಉತ್ಪನ್ನಕ್ಕೆ ಯೋಗ್ಯ ಮಾರುಕಟ್ಟೆ ಮತ್ತು ಧಾರಣೆ ಕೊಡಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ರೈತರು ಬೆಳೆದ ಫಸಲು ಕಡುಬಡವರಿಗೂ ತಲುಪುವಂತೆ ಸರಿಯಾಗಿ ‘ಹಂಚಿಕೆ’ ಮಾಡಿ, ಆ ಮೂಲಕ ಅವರ ಹಸಿವು, ಅಪೌಷ್ಟಿಕತೆಯನ್ನುದೂರ ಮಾಡಬೇಕು. ಇದಕ್ಕಾಗಿ ಸರ್ಕಾರ ಸಮಗ್ರ ಕಾರ್ಯಕ್ರಮ ರೂಪಿಸಬೇಕು.
ಉತ್ಪಾದನೆ ಹೊರತಾಗಿ ಬೇರೇನೂ ಮಾಡಲು ಅಶಕ್ತರಾಗಿರುವ ರೈತರಿಗೆ ಸರ್ಕಾರವೇ ಖರೀದಿ, ಮಾರುಕಟ್ಟೆ, ಶೇಖರಣೆ, ಸಂಸ್ಕರಣೆ ಹೀಗೆ ಎಲ್ಲಾ ಕೊಯ್ಲೋತ್ತರ ಸೇವೆಗಳನ್ನು ಒದಗಿಸಬೇಕಿದೆ. ಹಾಲಿನ ಸಂಗ್ರಹ ಮತ್ತು ವಿತರಣೆಯಲ್ಲಿ ಸಹಕಾರಿ ಮಾರುಕಟ್ಟೆ ವ್ಯವಸ್ಥೆಯಾದ ಕೆಎಂಎಫ್ ಯಶಸ್ವಿಯಾಗಿದ್ದರೆ, ಹಣ್ಣು-ತರಕಾರಿ ವಿಚಾರದಲ್ಲಿ ಹಾಪ್‌ಕಾಮ್ಸ್ ಸೋತಿರುವುದೇಕೆ ಎಂದು ಯೋಚಿಸಬೇಕು. ಈ ಎರಡು ಸಹಕಾರ ಸಂಸ್ಧೆಗಳ ನಡುವೆ ಸಮನ್ವಯ ತಂದು, ಮುಂಜಾನೆ ಗ್ರಾಹಕರಿಗೆ ಹಾಲಿನ ಜೊತೆಗೆ ಹಣ್ಣು– ತರಕಾರಿ ಸಿಗುವಂತೆ ಮಾಡುವುದೇನೂ ಕಷ್ಟವಲ್ಲ. ಜತೆಗೆ ರೈತ ಉತ್ಪಾದಕ ಸಂಘಗಳನ್ನು ರಚಿಸಿ ಇವುಗಳಿಗೆ ಹೋಟೆಲ್, ಅಪಾರ್ಟ್‌ಮೆಂಟ್ ಮುಂತಾದ ದೊಡ್ಡ ಖರೀದಿದಾರರೊಡನೆ ‘ಡಿಜಿಟಲ್ ಸಹಕಾರಿ ಮಾರಾಟ ವೇದಿಕೆ’ಯೊಂದರ ಮೂಲಕ ನೇರ ಸಂಪರ್ಕ ಏರ್ಪಡಿಸುವುದು ಅತ್ಯಗತ್ಯವಾಗಿದೆ.
ಆಹಾರ, ಹಣ್ಣು, ಹಾಲು, ತರಕಾರಿ ಹೀಗೆ ಎಲ್ಲವನ್ನೂ ರೈತರು ಉತ್ಪಾದಿಸುತ್ತಾರೆ. ಆದರೆ ಇವುಗಳ ಮಾರುಕಟ್ಟೆ ಮತ್ತು ಹಂಚಿಕೆ ವಿಚಾರಕ್ಕೆ ಬಂದಾಗ, ಸರ್ಕಾರದ ಮಟ್ಟದಲ್ಲಿ ಇರುವ ಹಲವು ಇಲಾಖೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತದೆ. ಕೃಷಿ, ತೋಟಗಾರಿಕೆ, ಮಾರುಕಟ್ಟೆ, ರೇಷ್ಮೆ, ಆಹಾರ, ಹೈನುಗಾರಿಕೆ ಮುಂತಾದ ಇಲಾಖೆಗಳನ್ನು ಒಂದೇ ಸೂರಿನಡಿ ತಂದು, ಮಾರುಕಟ್ಟೆ ಮತ್ತು ಹಂಚಿಕೆಗೆ ಪ್ರತ್ಯೇಕ ‘ಸಚಿವಾಲಯ’ವೊಂದು ರಚನೆಯಾಗಬೇಕು. ಹಾಗೆ, ರೈತರ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ಹಾಪ್‌ಕಾಮ್ಸ್, ಮಾರಾಟ ಮಹಾಮಂಡಳ, ಸಂಸ್ಕರಣೆ ಮತ್ತು ರಫ್ತಿನ ‘ಕಪ್ಪೆಕ್’ (ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ– ಕೆಎಪಿಪಿಇಸಿ) ಮುಂತಾದವುಗಳನ್ನು ಮಾರುಕಟ್ಟೆ ಇಲಾಖೆ ವ್ಯಾಪ್ತಿಗೆ ತಂದರೆ ಸೂಕ್ತ. ಮುಖ್ಯವಾಗಿ, ಕೃಷಿ ಬೆಲೆ ಆಯೋಗ ಪ್ರಸ್ತಾಪಿಸಿರುವಂತೆ, ರೈತರ ಉತ್ಪನ್ನಗಳಿಗೆ ಲಾಭದಾಯಕ ಧಾರಣೆ ಖಾತರಿಗೊಳಿಸಲು ಕಾಯ್ದೆ, ಕಾನೂನುಗಳ ನೆರವು ಕೂಡ ಅವಶ್ಯವಾಗಿದೆ.
2013ರಲ್ಲಿ ಜಾರಿಗೆ ಬಂದಿರುವ ಮಹತ್ವದ ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ಯು ಆಹಾರ ಉತ್ಪನ್ನಗಳನ್ನು ಸಮಗ್ರವಾಗಿ ಹಂಚಿಕೆ ಮಾಡುವ ಎಲ್ಲ ಸಾಧ್ಯತೆಯನ್ನು ಮುಂದಿಟ್ಟಿದೆ. ರಾಜ್ಯದ ಈ ಹಿಂದಿನ ಸರ್ಕಾರವು ಪಡಿತರದ ಅಡಿಯಲ್ಲಿ ಸಿರಿಧಾನ್ಯಗಳಾದ ರಾಗಿ ಮತ್ತು ಜೋಳದ ಜೊತೆಗೆ ತೊಗರಿಯನ್ನೂ ವಿತರಿಸಿದೆ. ಇವುಗಳ ಜೊತೆಗೆ ಸಜ್ಜೆ, ಖಾದ್ಯತೈಲ, ಇತರ ದ್ವಿದಳಧಾನ್ಯಗಳು, ತೆಂಗು, ಅಷ್ಟೇಕೆ ಆಲೂಗಡ್ಡೆ, ಈರುಳ್ಳಿ, ಸಂಸ್ಕರಿಸಿದ ಟೊಮೆಟೊದಂತಹ ತರಕಾರಿಗಳನ್ನೂ ವಿತರಿಸಲು ಅವಕಾಶವಿದೆ. ಅಷ್ಟೇ ಅಲ್ಲ, ಅಂಗನವಾಡಿ, ವಿದ್ಯಾರ್ಥಿಗಳ ವಸತಿನಿಲಯಗಳು, ಸಮಗ್ರ ಶಿಶು ಅಭಿವೃದ್ಧಿ ಕೇಂದ್ರಗಳು, ಶಾಲಾ ಮಕ್ಕಳಿಗೆ ಬಿಸಿಯೂಟ ಹಾಗೂ ಇಂದಿರಾ ಕ್ಯಾಂಟೀನ್‌ನಂಥ ಯೋಜನೆಗಳ ಮೂಲಕ ಆಹಾರ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಸರ್ಕಾರಕ್ಕೆ ಅವಕಾಶವಿದೆ. ಈ ವಿಚಾರದಲ್ಲಿ ‘ಕರ್ನಾಟಕ ಆಹಾರ ಆಯೋಗ’ ರಚನಾತ್ಮಕ ಪಾತ್ರ ನಿರ್ವಹಿಸಬೇಕು. ಈ ಕಾರ್ಯಕ್ರಮಗಳಿಗೆ ರೈತರಿಂದಲೇ ನೇರವಾಗಿ ದವಸ–ಧಾನ್ಯ, ಹಾಲು, ಹಣ್ಣು, ತರಕಾರಿ ಖರೀದಿಸುವ ನಿಟ್ಟಿನಲ್ಲಿ ಕೂಡ ಒಂದು ಶಾಸನ ರೂಪಿಸಬೇಕು.
ರೈತರು ಸುಸ್ಥಿರ ಕೃಷಿ ಪದ್ಧತಿಯಲ್ಲಿ ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ಆಹಾರ ಉತ್ಪನ್ನ, ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಬೆಳೆದುಕೊಡಬೇಕು. ಇದಕ್ಕಾಗಿ ಸೂಕ್ತ ಉತ್ಪಾದನಾ ನೀತಿ ಜಾರಿಗೆ ತರಬೇಕಾಗಿದೆ. ರೈತರು ತಾವು ಬೆಳೆದ ಬೆಳೆ ಪೂರ್ತಿ ಮಾರಾಟವಾಗಿ ಒಳ್ಳೆಯ ಬೆಲೆ ಸಿಗಬೇಕಾದರೆ, ಪಂಚಾಯಿತಿ ಮಟ್ಟದಲ್ಲಿ ಸೂಕ್ತ ಬೆಳೆ ಯೋಜನೆ ರೂಪಿಸಿ, ತಾಲ್ಲೂಕು ಮತ್ತು ಜಿಲ್ಲಾವಾರು ವಿಸ್ತರಿಸಬೇಕು. ಯಾವ ಬೆಳೆ, ಎಷ್ಟು ಬೆಳೆಯಬೇಕು, ಮಾರುಕಟ್ಟೆ ವ್ಯವಸ್ಥೆ ಹೇಗೆ ಎಂಬ ತೀರ್ಮಾನಗಳ ಬಗ್ಗೆ ಆಯಾ ಹಂತದ ಮುಖ್ಯಸ್ಥರು ಜವಾಬ್ದಾರಿ ತೆಗೆದುಕೊಳ್ಳಬೇಕು. ವಿವಿಧ ಹಂತದಲ್ಲಿ ಬೆಳೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರಾಜ್ಯ ಯೋಜನಾ ಮಂಡಳಿಗೆ ವಹಿಸಬೇಕು.
ರಾಜ್ಯದಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಸುಮಾರು 25 ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಬೀಳು ಬಿಡಲಾಗಿದೆ. ಜೊತೆಗೆ ಪ್ರತೀ ಸಾಲಿನಲ್ಲಿ ಕನಿಷ್ಠ ಒಂದೂವರೆ ಲಕ್ಷ ಎಕರೆಯಷ್ಟು ಕೃಷಿಭೂಮಿ ರೈತರ ಕೈತಪ್ಪಿ ಇತರ ಉದ್ದೇಶಗಳಿಗೆ ಪರಿವರ್ತನೆಯಾಗುತ್ತಿದೆ. ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ಅತಿಕ್ಷಾರ, ಲವಣ, ಫಲವತ್ತತೆ ನಾಶದಿಂದ ನಿರುಪಯುಕ್ತವಾಗುತ್ತಿದೆ. ಬೀಳುಭೂಮಿ ಸದ್ಬಳಕೆಗೆ, ಕೃಷಿ ಬೆಲೆ ಆಯೋಗ ನೀಡಿರುವ ವರದಿಯ ಅನ್ವಯ ಗುಂಪುಕೃಷಿಗೆ ಆದ್ಯತೆ ನೀಡಬೇಕು. ಕೇರಳದಲ್ಲಿ ಬಡ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಸಂಘಟಿಸಿರುವ ‘ಕುಡುಂಬಶ್ರೀ’ ಮಾದರಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಗುಂಪುಕೃಷಿಯನ್ನು ಪ್ರೋತ್ಸಾಹಿಸಿದರೆ ಅದು ಕ್ರಾಂತಿಕಾರಿ ನಡೆ ಆಗಲಿದೆ. ಈ ಎಲ್ಲಾ ಕ್ರಮಗಳ ಮೂಲಕ ರಾಜ್ಯವನ್ನು ಭೂಸುಧಾರಣೆಯ ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು. ರಾಜ್ಯದಲ್ಲಿ ಕೃಷಿಭೂಮಿ ಸದ್ಬಳಕೆ ಆಯೋಗವೊಂದು ಈಗ ತುರ್ತು ಅಗತ್ಯವಾಗಿದೆ.
ಕೃಷಿ ವಲಯದ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಶೀಘ್ರದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು. ನಗರಕ್ಕೆ ವಲಸೆ ಹೋಗಿರುವ ಕಾರ್ಮಿಕರು ಈಗ ಹಳ್ಳಿಗಳಿಗೆ ಮರಳಿದ್ದಾರೆ. ಅಂಥವರಿಗೆ ಕೃಷಿ ಯಂತ್ರಗಳ ಬಳಕೆ, ರಿಪೇರಿ, ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಕುರಿತು ತರಬೇತಿ ನೀಡಿ, ಗ್ರಾಮೀಣ ಕೈಗಾರಿಕೆಗಳ ಆರಂಭಕ್ಕೆ ನಾಂದಿ ಹಾಡಬಹುದು. ನಗರದಲ್ಲಿ ಉನ್ನತ ಹುದ್ದೆಗಳಲ್ಲಿರುವ ಕೆಲ ಯುವಕರು ಹಳ್ಳಿಗಳಲ್ಲಿ ನೆಲೆಸಿ ಅರ್ಥಪೂರ್ಣ ಬದುಕು ಕಂಡುಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಇವರನ್ನು ಗ್ರಾಮೀಣ ಪುನಶ್ಚೇತನಕ್ಕೆ ಪೂರಕವಾದ ನವೋದ್ಯಮದಲ್ಲಿ ತೊಡಗಿಸಿಕೊಳ್ಳಬಹುದು. ಈ ಎಲ್ಲ ಬಾಬತ್ತುಗಳಿಗೆ ಆಯವ್ಯಯದಲ್ಲಿ ಶೇ 50ರಷ್ಟನ್ನು ಮೀಸಲಿಡಬೇಕು. ಲಾಕ್‌ಡೌನ್ ಹೊಡೆತದಿಂದ ತತ್ತರಿಸಿರುವ ರೈತರಿಗೆ ಭರವಸೆ ನೀಡಿ, ಕೃಷಿ ವಲಯವನ್ನು ಮುನ್ನಡೆಸುವ ಸವಾಲು ಸರ್ಕಾರದ ಮೇಲಿದೆ.
(ಲೇಖಕ: ಕೃಷಿ ಆರ್ಥಿಕ ತಜ್ಞ ಮತ್ತು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ)
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.