ದೇಶದಲ್ಲಿಯೇ ಅತಿಹೆಚ್ಚು ನಗರೀಕರಣಗೊಂಡಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡ 45ಕ್ಕಿಂತ ಹೆಚ್ಚು ಮಂದಿ ಬೆಂಗಳೂರು ಸೇರಿದಂತೆ 315 ದೊಡ್ಡ, ಸಣ್ಣ ನಗರ ಮತ್ತು ಪಟ್ಟಣಗಳಲ್ಲಿ ನೆಲೆಸಿದ್ದಾರೆ. ಒಂದು ರಾಜ್ಯವು ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹಾಗೂ ಜಾಗತಿಕವಾಗಿ ಯಶಸ್ಸು ಪಡೆಯುವಲ್ಲಿ ನಗರಗಳು ವಿಶೇಷ ಪಾತ್ರ ವಹಿಸುತ್ತವೆ. ನಗರಗಳನ್ನು ಆರ್ಥಿಕತೆಯ ‘ಎಂಜಿನ್’ಗಳು ಎಂದೇ ಗುರುತಿಸಲಾಗುತ್ತದೆ. ನಗರಗಳಿಂದ ಅತಿಹೆಚ್ಚು ತೆರಿಗೆ ಕೂಡ ಸಂಗ್ರಹ ವಾಗುತ್ತದೆ. ಅವು ರಾಜ್ಯದ ಸಂಸ್ಕೃತಿಯ ಕೇಂದ್ರಗಳೂ ಹೌದು. ಆದ್ದರಿಂದ, ಉತ್ಕೃಷ್ಟ ಮೂಲಸೌಕರ್ಯ ಹಾಗೂ ನಾಗರಿಕ ಸೇವೆಗಳನ್ನು ಕಲ್ಪಿಸುವ ಮೂಲಕ ನಗರಗಳ ಜೀವನಮಟ್ಟವನ್ನು ಸುಧಾರಿಸಲು ಹೆಚ್ಚಿನ ಆಸ್ಥೆಯಿಂದ ಕ್ರಮ ಕೈಗೊಳ್ಳುವುದು ಅತಿ ಅವಶ್ಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ನಗರಗಳ ಸ್ಥಿತಿ ದಯನೀಯವಾಗುತ್ತಿದೆ. ಬಹುತೇಕ ನಗರಗಳು ಹದಗೆಟ್ಟ ರಸ್ತೆ, ನೀರಿನ ಕೊರತೆ, ಒಳಚರಂಡಿ ವ್ಯವಸ್ಥೆಯ ದುಃಸ್ಥಿತಿ, ಕಸದ ಅಸಮರ್ಪಕ ವಿಲೇವಾರಿ, ಉದ್ಯಾನ, ಆಟದ ಮೈದಾನ ಹಾಗೂ ಸರ್ಕಾರಿ ಜಮೀನು ಒತ್ತುವರಿಯಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಇದರೊಂದಿಗೆ, ದಿನೇದಿನೇ ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದ ಪ್ರತಿಕೂಲ ಪರಿಣಾಮಗಳು ನಗರಗಳನ್ನು ಕಾಡುತ್ತಿವೆ. ಈ ಎಲ್ಲ ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ನಗರ, ಪಟ್ಟಣಗಳನ್ನು ಅಭಿವೃದ್ಧಿಪಡಿಸಿ ರಾಜ್ಯದ ಜನರ ಜೀವನಮಟ್ಟವನ್ನು ಏರಿಸಬೇಕಾದರೆ, ಸರ್ಕಾರವು ಸ್ಥಳೀಯ ಮತ್ತು ನೆರೆಹೊರೆಯ ಮಟ್ಟದಲ್ಲಿ ವಿಕೇಂದ್ರೀಕೃತ ಪಾಲ್ಗೊಳ್ಳುವಿಕೆ ಆಡಳಿತ (ಪಾರ್ಟಿಸಿಪೇಟರಿ ಗವರ್ನೆನ್ಸ್) ಮಾದರಿಯನ್ನು ಅನುಸರಿಸುವ ಅವಶ್ಯಕತೆ ಇದೆ.
ಅಭಿವೃದ್ಧಿ ಹೊಂದಿದ ಸ್ವೀಡನ್, ಆಸ್ಟ್ರೇಲಿಯಾ, ಅಮೆರಿಕ, ಕೆನಡಾದಂತಹ ರಾಷ್ಟ್ರಗಳಲ್ಲಿ ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ನಾಗರಿಕರ ಸಹಭಾಗಿತ್ವದ ಮೂಲಕವೇ ಕೈಗೊಳ್ಳಲಾಗುತ್ತದೆ. ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಸ್ಥಳೀಯರ ಪಾಲ್ಗೊಳ್ಳುವಿಕೆ ಒಳಗೊಂಡ ವಿಕೇಂದ್ರೀಕೃತ ವೇದಿಕೆಗಳು ಅಗತ್ಯ. ರಾಜ್ಯ ಸರ್ಕಾರವು ವಿವಿಧ ಕಾರ್ಯಕ್ರಮಗಳ ಮೂಲಕ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ವಿಶೇಷ ಕಾಳಜಿ ವಹಿಸುತ್ತಿದ್ದು, ಈ ದಿಸೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಇತ್ತೀಚೆಗೆ ನಡೆದ ಮೊದಲ ‘ಜನತಾದರ್ಶನ’ ಗಮನಾರ್ಹ. ಅಲ್ಲಿ ಸ್ವೀಕೃತವಾದ ಅಹವಾಲುಗಳ ಪೈಕಿ ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳದ್ದೇ ದೊಡ್ಡ ಪಾಲು ಎಂದು ವರದಿಯಾಗಿದೆ. ಇವುಗಳಿಗೆ ಹಳ್ಳಿಗಳಲ್ಲಿ ಗ್ರಾಮಸಭೆ, ನಗರಗಳಲ್ಲಿ ವಾರ್ಡ್ ಸಮಿತಿ ಮತ್ತು ಪ್ರದೇಶ (ಏರಿಯಾ) ಸಮಿತಿಯಂತಹ ವಿಕೇಂದ್ರೀಕೃತ ಸಾಂಸ್ಥಿಕ ವೇದಿಕೆಗಳ ಮೂಲಕ ಪರಿಹಾರ ಒದಗಿಸುವುದು ಪರಿಣಾಮಕಾರಿ, ಪಾರದರ್ಶಕ ಹಾಗೂ ಸುಸ್ಥಿರ ವಿಧಾನವಾಗುವುದು.
ರಾಜ್ಯದ ನಗರಗಳಲ್ಲಿರುವ 7,000ಕ್ಕೂ ಹೆಚ್ಚು ವಾರ್ಡ್‌ಗಳು ನಗರ ಸ್ಥಳೀಯ ಆಡಳಿತದ ವಿಕೇಂದ್ರೀಕೃತ ಘಟಕಗಳಾಗಿವೆ. 1993ರಲ್ಲಿ ಸಂವಿಧಾನಕ್ಕೆ 74ನೇ ತಿದ್ದುಪಡಿ ತಂದು ಜಾರಿಗೊಳಿಸಲಾದ 243ಎಸ್ ವಿಧಿ ಮತ್ತು ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ– 1976ರ ಪ್ರಕಾರ, ಎಲ್ಲ ಮಹಾನಗರಗಳ ಪ್ರತಿಯೊಂದು ವಾರ್ಡಿನಲ್ಲೂ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ಸ್ಥಳೀಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಹಿಳೆಯರು, ಹಿಂದುಳಿದ ವರ್ಗದವರು, ಸಾಮಾನ್ಯ ವರ್ಗದವರನ್ನು ಪ್ರತಿನಿಧಿಸುವ ಸಕ್ರಿಯ ನಾಗರಿಕರನ್ನು ಒಳಗೊಂಡ ವಾರ್ಡ್ ಸಮಿತಿಯ ರಚನೆ ಕಡ್ಡಾಯವಾಗಿದೆ.
ಅದೇರೀತಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮತಗಟ್ಟೆ ವ್ಯಾಪ್ತಿಯ ಎಲ್ಲ ಮನೆಗಳನ್ನೂ ಒಳಗೊಂಡ ಪ್ರದೇಶ ಸಮಿತಿಗಳ ರಚನೆ ಕೂಡ ಕಾನೂನಾತ್ಮಕವಾಗಿ ಕಡ್ಡಾಯವಾಗಿದೆ. ಈ ವೇದಿಕೆಗಳು ಸ್ಥಳೀಯರ ಕುಂದುಕೊರತೆಗಳಿಗೆ ಪರಿಹಾರದ ಜೊತೆಗೆ, ರಸ್ತೆ, ಪಾದಚಾರಿ ಮಾರ್ಗ, ಬೀದಿದೀಪ ನಿರ್ವಹಣೆ ಮತ್ತು ದುರಸ್ತಿ, ಉದ್ಯಾನ, ಸಾರ್ವಜನಿಕ ಶೌಚಾಲಯ, ಬಸ್ ನಿಲ್ದಾಣ ನಿರ್ಮಾಣದಂತಹ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ತರುತ್ತವೆ. ಅಲ್ಲದೆ, ಕಾರ್ಯವಿಳಂಬ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ವಾರ್ಡ್ ಸಮಿತಿಗಳ ಮೂಲಕ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಮತ್ತು ಹಣಕಾಸಿನ ವಿವರ ಕಾಲಕಾಲಕ್ಕೆ ಪ್ರಕಟಗೊಳ್ಳುವ ವ್ಯವಸ್ಥೆ ಇದೆ. ಹೀಗಾಗಿ ಅವು ಸರ್ಕಾರ, ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸಲು ಅವಕಾಶ ಮಾಡಿಕೊಡುತ್ತವೆ. ವಾರ್ಡ್ ಸಮಿತಿ ಮತ್ತು ಪ್ರದೇಶ ಸಮಿತಿಗಳ ಮಾಸಿಕ, ತ್ರೈಮಾಸಿಕ ಸಭೆಗಳು ನಿಯಮಿತವಾಗಿ ನೆರವೇರಿದರೆ, ವರ್ಷಕ್ಕೆ ಸರಿಸುಮಾರು 1.5 ಲಕ್ಷ ಸಭೆಗಳನ್ನು ನಡೆಸಿದಂತೆ ಆಗುತ್ತದೆ. ಈ ಮೂಲಕ ಸರ್ಕಾರವನ್ನು ನಗರ ಪ್ರದೇಶಗಳಲ್ಲಿರುವ ಬಡಾವಣೆ- ಓಣಿಗಳ ಹೊಸಿಲಿಗೆ ಕೊಂಡೊಯ್ದು, ನಾಗರಿಕರಿಗೆ ನಿಜವಾದ ಸ್ವರಾಜ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ.
ಹೀಗೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಅನಿವಾರ್ಯಗೊಳಿಸುವುದಕ್ಕೆ ಪೂರಕವಾದ ಸಂವಿಧಾನ ತಿದ್ದುಪಡಿ ಜಾರಿಗೆ ಬಂದು ಮೂರು ದಶಕಗಳೇ ಆಗಿವೆ. ಆದರೆ, ವಾರ್ಡ್ ಮತ್ತು ಪ್ರದೇಶ ಸಮಿತಿಗಳ ರಚನೆ ಹಾಗೂ ಅವುಗಳಿಗೆ ಸಂಬಂಧಿಸಿದ ಕಾನೂನಿನ ಅನುಷ್ಠಾನದ ಸ್ಥಿತಿಗತಿ ಕುರಿತು ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಆ್ಯಂಡ್ ಡೆಮಾಕ್ರಸಿ ಸಂಸ್ಥೆ ಕೈಗೊಂಡಿದ್ದ ಅಧ್ಯಯನದ ಫಲಿತಾಂಶಗಳು ಬೆಚ್ಚಿಬೀಳಿಸುವಂತಿವೆ. ಬೆಂಗಳೂರು ಮತ್ತು ಮಂಗಳೂರು ಮಹಾನಗರಗಳನ್ನು ಹೊರತುಪಡಿಸಿ, ರಾಜ್ಯದ ಉಳಿದ ಒಂಬತ್ತು ಮಹಾನಗರಗಳಲ್ಲಿ ಇನ್ನೂ ವಾರ್ಡ್ ಸಮಿತಿಗಳ ರಚನೆಯಾಗಿಲ್ಲ. ಕರ್ನಾಟಕ ವಾರ್ಡ್ ಸಮಿತಿ ಬಳಗ ಮತ್ತು ಅನೇಕ ನಾಗರಿಕ ಸೇವಾ ಸಂಸ್ಥೆಗಳ ತೀವ್ರ ಒತ್ತಾಯಕ್ಕೆ ಸ್ಪಂದಿಸಿ, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿಯಂತಹ ಮಹಾನಗರಗಳಲ್ಲಿ ಒಂದೂವರೆ ವರ್ಷದ ಹಿಂದೆ ವಾರ್ಡ್ ಸಮಿತಿ ಸದಸ್ಯತ್ವಕ್ಕೆ ಮಹಾನಗರ ಪಾಲಿಕೆಗಳು ಅರ್ಜಿಗಳನ್ನು ಆಹ್ವಾನಿಸಿದ್ದವು. ಸಾವಿರಾರು ಜನ ಅಧಿಕೃತವಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಅಲ್ಲಿ ಈವರೆಗೆ ಸಮಿತಿಗಳು ಮಾತ್ರ ರಚನೆಗೊಂಡಿಲ್ಲ.
ಇನ್ನು ತುಮಕೂರು, ದಾವಣಗೆರೆ, ಮೈಸೂರಿನಂತಹ ಮಹಾನಗರಗಳಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸದೆ, ಪಾಲಿಕೆ ಸದಸ್ಯರ ಮೂಲಕ ವಾರ್ಡ್ ಸಮಿತಿ ಸದಸ್ಯರ ಪಟ್ಟಿಯನ್ನು ಅತ್ಯಂತ ಗೋಪ್ಯವಾಗಿ ಸಿದ್ಧಪಡಿಸಿ ಅನುಮೋದನೆ ನೀಡಲಾಗಿದೆ. ವರ್ಷಗಳೇ ಕಳೆದಿದ್ದರೂ ಅಲ್ಲಿ ಇನ್ನೂ ವಾರ್ಡ್ ಸಮಿತಿ ಸಭೆಗಳು ಪ್ರಾರಂಭವಾಗಿಯೇ ಇಲ್ಲ. ಮಹಾನಗರಗಳ ಸ್ಥಿತಿಯೇ ಹೀಗಿರುವಾಗ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಸ್ಥಿತಿ ಎಷ್ಟು ಕೆಟ್ಟದ್ದಾಗಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ.
ರಾಜ್ಯದ ಮಧ್ಯಮ ಮತ್ತು ಸಣ್ಣ ನಗರಗಳಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗೆ ಅನುವು ಮಾಡಿಕೊಡಲು 2020ರಲ್ಲಿ ಕರ್ನಾಟಕ ಪೌರ ಸಂಸ್ಥೆಗಳ ಅಧಿನಿಯಮ– 1964ಕ್ಕೆ ತಿದ್ದುಪಡಿ ತರಲಾಗಿದೆ. ಆದರೆ, ಮೂರು ವರ್ಷ ಕಳೆದರೂ ಈ ಸಾಂಸ್ಥಿಕ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ನಿಯಮಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಇಂತಹ ಉದಾಸೀನ ಧೋರಣೆಯಿಂದ, ರಾಜ್ಯದ 3 ಕೋಟಿ ಪ್ರಜೆಗಳಿಗೆ ಅಭಿವೃದ್ಧಿ ಯೋಜನೆಗಳಲ್ಲಿ ಜನಪ್ರತಿನಿಧಿಗಳು ಮತ್ತು ಸರ್ಕಾರದ ಜೊತೆಗೂಡಿ ಕೆಲಸ ಮಾಡಲು, ತಮ್ಮ ಸಮಸ್ಯೆಗಳನ್ನು ಅಡಚಣೆಗಳಿಲ್ಲದೆ ಪರಿಹರಿಸಿಕೊಳ್ಳಲು ಔಪಚಾರಿಕ ವೇದಿಕೆ ಇದ್ದರೂ ಇಲ್ಲದಂತಾಗಿದೆ.
ವಾರ್ಡ್ ಸಮಿತಿ ಮತ್ತು ಪ್ರದೇಶ ಸಮಿತಿ ಸಭೆಗಳಿಗೆ ಅಗತ್ಯವಿರುವ ಆಡಳಿತಾತ್ಮಕ ಹಾಗೂ ಆರ್ಥಿಕ ನೆರವು ನೀಡಿ, ಅವುಗಳನ್ನು ಸದೃಢಗೊಳಿಸಿ ಪೋಷಿಸುವುದು ರಾಜ್ಯ ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಇರಬೇಕು. ಈ ದಿಸೆಯಲ್ಲಿ, ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಗಳಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಿರುವ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಕೂಡಲೇ ಲಭ್ಯವಾಗಿಸಬೇಕು. ಈ ಮೂಲಕ, ನಗರ ಪ್ರದೇಶಗಳಲ್ಲಿ ವಾಸವಾಗಿರುವ ರಾಜ್ಯದ ಅರ್ಧಭಾಗದಷ್ಟು ಜನಸಂಖ್ಯೆ ಯನ್ನು ಆಡಳಿತ ವ್ಯವಸ್ಥೆಯ ಜೊತೆಗೆ ಜೋಡಿಸುವ ಸಾರ್ವಜನಿಕ ಸಹಭಾಗಿತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಕರ್ನಾಟಕವನ್ನು ಪಾಲ್ಗೊಳ್ಳುವಿಕೆಯ ಮಾದರಿ ರಾಜ್ಯವನ್ನಾಗಿ ಬೆಳೆಸಲು ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಕ್ರಮ ಜರುಗಿಸಬೇಕು.
ಲೇಖಕ: ಮುಖ್ಯಸ್ಥ, ನಾಗರಿಕ ಸಹಭಾಗಿತ್ವ ವಿಭಾಗ, ಜನಾಗ್ರಹ ಸೆಂಟರ್ ಫಾರ್ ಸಿಟಿಜನ್‌ಶಿಪ್ ಆ್ಯಂಡ್ ಡೆಮಾಕ್ರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.