ಭಾರತ ಮತ್ತು ಅರ್ಜೆಂಟೀನಾ ಜನವರಿ ತಿಂಗಳ ಮಧ್ಯಭಾಗದಲ್ಲಿ ಮುಖ್ಯವಾದ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಅದರ ಫಲವಾಗಿ, ನಮ್ಮ ದೇಶದ ಸರ್ಕಾರಿ ಸ್ವಾಮ್ಯದ ‘ಖನಿಜ್ ವಿದೇಶ್ ಇಂಡಿಯಾ ಲಿಮಿಟೆಡ್’ ಸಂಸ್ಥೆ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಅತಿ ಮಹತ್ವದ ಲಿಥಿಯಮ್ ಲೋಹಧಾತುವಿಗಾಗಿ ವ್ಯವಸ್ಥಿತವಾದ ವೈಜ್ಞಾನಿಕ ಅನ್ವೇಷಣೆಯನ್ನು ಪ್ರಾರಂಭಿಸಲಿದೆ.
ದೇಶದ ರಕ್ಷಣಾ ವಲಯ, ಪರಮಾಣು ಶಕ್ತಿ, ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್, ವೈದ್ಯಕೀಯ ಉಪಕರಣಗಳು, ಬ್ಯಾಟರಿಚಾಲಿತ ವಾಹನಗಳು, ಸೌರವಿದ್ಯುತ್ ಪ್ಯಾನೆಲ್‍ಗಳು, ಗಾಳಿಯಂತ್ರದ ಟರ್ಬೈನುಗಳು, ಮೊಬೈಲ್ ಫೋನ್, ಕಂಪ್ಯೂಟರ್‌ನಂತಹ ಕ್ಷೇತ್ರಗಳ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಲಿಥಿಯಮ್‍ಗೆ ‘ಬಿಳಿ ಬಂಗಾರ’ ಎಂಬ ಹೆಸರಿದ್ದು,ಕಚ್ಚಾತೈಲದಷ್ಟೇ ಆರ್ಥಿಕ ಮಹತ್ವವಿದೆ. ಹೀಗಾಗಿ, ಪ್ರಪಂಚದ ಎಲ್ಲ ದೇಶಗಳಿಗೂ ಆದ್ಯತೆಯ ಮೇರೆಗೆ ಲಿಥಿಯಮ್ ಬೇಕೇ ಬೇಕು.
ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಮೂಲದಂತೆ, ಪ್ರಪಂಚದ ಒಟ್ಟು ಲಿಥಿಯಮ್ ನಿಕ್ಷೇಪದ ಪ್ರಮಾಣ 8.07 ಕೋಟಿ ಟನ್‍ಗಳು. ಅದರ ಅರ್ಧಭಾಗ ‘ಲಿಥಿಯಮ್ ತ್ರಿಕೋನ’ ಎಂದೇ ಪ್ರಸಿದ್ಧವಾಗಿರುವ ಬೊಲಿವಿಯಾ, ಅರ್ಜೆಂಟೀನಾ ಮತ್ತು ಚಿಲಿ ದೇಶಗಳಲ್ಲಿದೆ. ಆದರೆ ಗಣಿಗಾರಿಕೆ ಮತ್ತು ಸಂಸ್ಕರಣೆಯ ನಂತರ ವಿವಿಧ ಉಪಯೋಗಗಳಿಗೆ ಬೇಕಿರುವ ಸಿದ್ಧರೂಪದ ಲಿಥಿಯಮ್‍ನ ಜಾಗತಿಕ ಬೇಡಿಕೆಯ
ಶೇ 80ರಷ್ಟು ಚೀನಾದ ಹಿಡಿತದಲ್ಲಿದೆ. 2020-21ರಲ್ಲಿ ನಮ್ಮ ದೇಶದ ವಾರ್ಷಿಕ ಬೇಡಿಕೆಯ ಶೇ 54ರಷ್ಟು ಬಂದದ್ದು ಚೀನಾದಿಂದಲೇ.
ಲಿಥಿಯಮ್ ಸಾರ್ವಭೌಮತ್ವದ ಈ ಸಾಮರ್ಥ್ಯವನ್ನು ಚೀನಾವು ಒತ್ತಾಯ, ನಿರ್ಬಂಧ, ದಬ್ಬಾಳಿಕೆಯ ರಾಜಕಾರಣ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಪ್ರಬಲ ಅಸ್ತ್ರವನ್ನಾಗಿ ಬಳಸುತ್ತಿದೆ. ಚೀನಾ ದೇಶದ ಈ ಪ್ರಬಲ ಹಿಡಿತದಿಂದ ಪಾರಾಗಿ, ವಿವಿಧ ದೇಶಗಳಿಗೆ ಅಗತ್ಯವಾದ ಅತಿ ಮಹತ್ವದ ಖನಿಜಗಳು ನಿರಂತರವಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ‘ಮಿನರಲ್ಸ್ ಸೆಕ್ಯೂರಿಟಿ ಪಾರ್ಟ್‌ನರ್‌ಷಿಪ್’ ಎಂಬ ಜಾಗತಿಕ ವ್ಯವಸ್ಥೆಯೊಂದು 2022ರ ಜೂನ್‍ನಲ್ಲಿ ಅಸ್ತಿತ್ವಕ್ಕೆ ಬಂದಿತು. ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್, ಕೊರಿಯಾ, ಸ್ವೀಡನ್, ಇಂಗ್ಲೆಂಡ್, ಅಮೆರಿಕ ದೇಶಗಳ ಸಂಘಟನೆಗೆ, ಹಿಂದಿನ ವರ್ಷದ ಜೂನ್‍ನಲ್ಲಿ ಭಾರತವೂ ಸೇರಿದೆ.
2030ರ ವೇಳೆಗೆ ದೇಶದ ಒಟ್ಟು ವಿದ್ಯುತ್ ಬೇಡಿಕೆಯ ಅರ್ಧದಷ್ಟನ್ನು ನವೀಕರಿಸಬಹುದಾದ ಶಕ್ತಿಮೂಲಗಳಿಂದ ಪಡೆಯಬೇಕೆನ್ನುವುದು ಸರ್ಕಾರದ ಗುರಿ. ಅದೇ ವೇಳೆಗೆ, ದೇಶದಲ್ಲಿ ಮಾರಾಟವಾಗುವ ಒಟ್ಟು ಖಾಸಗಿ ಕಾರುಗಳ ಪೈಕಿ ಶೇ 30ರಷ್ಟು, ವಾಣಿಜ್ಯ ವಾಹನಗಳ ಶೇ 70ರಷ್ಟು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ
ಶೇ 80ರಷ್ಟು ಬ್ಯಾಟರಿಚಾಲಿತ ಇ-ವಾಹನಗಳಾಗಿರಬೇಕೆಂಬ
ಗುರಿಯೂ ಇದೆ. ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಬೇಕಾದರೆ ಇ-ವಾಹನಗಳು, ಸೋಲಾರ್ ಪ್ಯಾನೆಲ್‍ಗಳು ಮತ್ತು ಗಾಳಿಯಂತ್ರದ ಟರ್ಬೈನುಗಳಲ್ಲಿ
ಬಳಕೆಯಾಗುವ ಲಿಥಿಯಮ್-ಅಯಾನು ಬ್ಯಾಟರಿ ಕ್ಷೇತ್ರದಲ್ಲಿ ತ್ವರಿತಗತಿಯಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಬೇಕು. ಪ್ರಸ್ತುತ ನಮ್ಮ ದೇಶದ ಲಿಥಿಯಮ್- ಅಯಾನು ಬ್ಯಾಟರಿಗಳ ವಾರ್ಷಿಕ ಬೇಡಿಕೆಯ ಶೇ 70ರಷ್ಟು ಭಾಗ ಚೀನಾದಿಂದ ಆಮದಾಗುತ್ತಿದೆ.
ಜಾಗತಿಕ ಮಟ್ಟದಲ್ಲಿ ಪ್ರಪಂಚದ ಅತಿದೊಡ್ಡ 10 ಲಿಥಿಯಮ್–ಅಯಾನು ಬ್ಯಾಟರಿ ಉತ್ಪಾದಕ ಕಂಪನಿಗಳಲ್ಲಿ ಆರು ಚೀನಾದಲ್ಲಿವೆ. ಜಾಗತಿಕ ಬೇಡಿಕೆಯ ಶೇ 77ರಷ್ಟನ್ನು ಅವು ಪೂರೈಸುತ್ತಿವೆ. ಈ ಪರಿಸ್ಥಿತಿಯಲ್ಲಿ,ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ 1.5ರಿಂದ 100 ಆ್ಯಂಪಿಯರ್ ಸಾಮರ್ಥ್ಯದ ಲಿಥಿಯಮ್ ಅಯಾನು ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಿ, ಪರೀಕ್ಷಿಸಿ, ಅತ್ಯಂತ ಯಶಸ್ವಿಯಾಗಿ ಅನೇಕ ಉಪಗ್ರಹ ಮತ್ತು ಉಡಾವಣಾ ವಾಹನಗಳಲ್ಲಿ ಬಳಸಿರುವುದು ಅತ್ಯುತ್ತಮ ಬೆಳವಣಿಗೆ. ಇದೀಗ ಈ ತಂತ್ರಜ್ಞಾನವನ್ನು ದೇಶದ ಖಾಸಗಿ ಉತ್ಪಾದಕರಿಗೆ ವರ್ಗಾಯಿಸಲಾಗಿದೆ.
‘ಖನಿಜ್ ವಿದೇಶ್ ಇಂಡಿಯಾ ಲಿಮಿಟೆಡ್’- ನ್ಯಾಷನಲ್ ಅಲ್ಯೂಮಿನಿಯಮ್ ಕಂಪನಿ, ಹಿಂದೂಸ್ಥಾನ್ ಕಾಪರ್ ಲಿಮಿಟೆಡ್ ಮತ್ತು ಮಿನರಲ್ ಎಕ್ಸ್‌ಪ್ಲೊರೇಷನ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳ ಸಹಭಾಗಿತ್ವದಲ್ಲಿ, ವಿದೇಶಗಳಲ್ಲಿ ಅತಿ ಮಹತ್ವದ ಖನಿಜಗಳ ಶೋಧನೆ ಮತ್ತು ಗಣಿಗಾರಿಕೆಯ ಉದ್ದೇಶದಿಂದ 2019ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆ. ಈ ಸಂಸ್ಥೆ ಇದೀಗ ಅರ್ಜೆಂಟೀನಾದ ಮೂರು ಸರ್ಕಾರಿ ಕಂಪನಿಗಳೊಡನೆ ಮಾಡಿಕೊಂಡಿರುವ ಒಪ್ಪಂದದ ಮೂಲಕವಾಗಿ ಅಲ್ಲಿನ ಕ್ಯಾಟಾಮಾರ್ಕಾ ಪ್ರಾಂತ್ಯದ ಒಟ್ಟು 15,703 ಹೆಕ್ಟೇರ್ ವಿಸ್ತೀರ್ಣದ ಐದು ಲಿಥಿಯಮ್ ಲವಣ ಕ್ಷೇತ್ರಗಳಲ್ಲಿ ಲಿಥಿಯಮ್‍ಗಾಗಿ ಅನ್ವೇಷಣೆ ನಡೆಸಿ, ವಾಣಿಜ್ಯೋದ್ಯಮದ ದೃಷ್ಟಿಯಿಂದ ಗಣಿಗಾರಿಕೆ ನಡೆಸಲು ಸಂಪೂರ್ಣ ಹಕ್ಕನ್ನು ಪಡೆದುಕೊಂಡಿದೆ. ಇದರಿಂದಾಗಿ ಲಿಥಿಯಮ್ ಗಣಿಗಾರಿಕೆಗೆ ಸಂಬಂಧಿಸಿದ ತಾಂತ್ರಿಕ ಜ್ಞಾನ ಹಾಗೂ ಕಾರ್ಯಾಚರಣೆಯ ಅನುಭವಗಳು ಉನ್ನತೀಕರಣಗೊಂಡು, ದೇಶದ ಗಣಿಗಾರಿಕಾ ಕ್ಷೇತ್ರದಲ್ಲಿ ತ್ವರಿತಗತಿಯ ಮುನ್ನಡೆ ಸಾಧ್ಯವಾಗುವ ನಿರೀಕ್ಷೆಯಿದೆ.
ನಮ್ಮ ದೇಶದಲ್ಲಿಯೇ ಈ ಅಮೂಲ್ಯ ಖನಿಜ ನಿಕ್ಷೇಪಕ್ಕಾಗಿ ವ್ಯವಸ್ಥಿತವಾದ ಅನ್ವೇಷಣೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ನೇತೃತ್ವದಲ್ಲಿ ಭರದಿಂದ ಸಾಗಿದೆ. ಜಮ್ಮು ಮತ್ತು ಕಾಶ್ಮೀರದ ರೆಸೈ ಜಿಲ್ಲೆಯ ಸಲಾಲ್ ಹೈಮಾನ್ ಪ್ರದೇಶದಲ್ಲಿ ಹೋದ ವರ್ಷದ ಜನವರಿಯಲ್ಲಿ ಲಿಥಿಯಮ್ ನಿಕ್ಷೇಪವನ್ನು ಸಂಸ್ಥೆ ಪತ್ತೆ ಮಾಡಿದೆ. ಈ ನಿಕ್ಷೇಪದ ಪ್ರಮಾಣ ಸುಮಾರು 59 ಲಕ್ಷ ಟನ್‍ಗಳಿರಬಹುದೆಂಬ ಅಂದಾಜು ದೊರೆತಿದೆ. ಇದು ಭಾರತದ ಅತಿ ದೊಡ್ಡ ಪ್ರಮಾಣದ ಲಿಥಿಯಮ್ ನಿಕ್ಷೇಪವಾಗುವುದರ ಜೊತೆಗೆ, ನಮ್ಮ ದೇಶವನ್ನು ಜಗತ್ತಿನ ಲಿಥಿಯಮ್ ನಿಕ್ಷೇಪದ ಪ್ರಮುಖ ದೇಶಗಳಾದ ಬೊಲಿವಿಯಾ (3.90 ಕೋಟಿ ಟನ್), ಚಿಲಿ (1.99 ಕೋಟಿ ಟನ್), ಆಸ್ಟ್ರೇಲಿಯಾ (77 ಲಕ್ಷ ಟನ್), ಚೀನಾ (67 ಲಕ್ಷ ಟನ್) ಮತ್ತು ಅರ್ಜೆಂಟೀನಾ (57 ಲಕ್ಷ ಟನ್) ಸಾಲಿನಲ್ಲಿ ನಿಲ್ಲಿಸುವ ನಿರೀಕ್ಷೆಯಿದೆ.
ಇದರ ಜೊತೆಗೆ ಹಿಂದಿನ ವರ್ಷದ ನವೆಂಬರ್‌ನಲ್ಲಿ ಜಾರ್ಖಂಡ್‍ನ ಕೊಡೆರ್ಮಾ ಜಿಲ್ಲೆಯಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆಯಾಗಿದ್ದು, ಅದರ ಪ್ರಮಾಣವನ್ನು ಅಂದಾಜು ಮಾಡಲಾಗುತ್ತಿದೆ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಮಹಾನಿರ್ದೇಶಕರು ತಿಳಿಸಿದ್ದಾರೆ. ಪರಮಾಣು ಶಕ್ತಿ ಇಲಾಖೆಯ ಭಾಗವಾದ ‘ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೊರೇಷನ್ ಆ್ಯಂಡ್ ರಿಸರ್ಚ್’ ಸಂಸ್ಥೆಯು ಕರ್ನಾಟಕದ ಮಂಡ್ಯ ಜಿಲ್ಲೆಯ ಮರಳಗಾಲ ಮತ್ತು ಅಲ್ಲಪಟ್ಟಣ ಪ್ರದೇಶಗಳಲ್ಲಿ ನಡೆಸಿದ ಪ್ರಾರಂಭಿಕ ಸಮೀಕ್ಷೆಯಿಂದ, ಸುಮಾರು 1,600 ಟನ್‍ಗಳಷ್ಟು ಲಿಥಿಯಮ್ ನಿಕ್ಷೇಪದ ಬಗ್ಗೆ ಸೂಚನೆ ದೊರೆತಿದೆ. ಯಾದಗಿರಿ ಜಿಲ್ಲೆಯಲ್ಲಿಯೂ ಇಂತಹ ಸಮೀಕ್ಷೆಗಳು ನಡೆದಿವೆ.
ಯಾವುದೇ ಖನಿಜ ನಿಕ್ಷೇಪವನ್ನು ಪತ್ತೆ ಮಾಡುವ ಕಾರ್ಯಾಚರಣೆಯು ವೈಜ್ಞಾನಿಕವಾಗಿ ಪೂರ್ವಭಾವಿ ಸ್ಥಳಾನ್ವೇಷಣೆ (ಜಿ4), ಪ್ರಾರಂಭಿಕ ಸಮೀಕ್ಷೆ (ಜಿ3), ಶಿಲಾವೈಜ್ಞಾನಿಕ ಅನ್ವೇಷಣೆ, ಅಧ್ಯಯನ (ಜಿ2) ಮತ್ತು ವಿಸ್ತೃತ ಅನ್ವೇಷಣೆ (ಜಿ1) ಎಂಬ ನಾಲ್ಕು ಮುಖ್ಯ ಹಂತಗಳಲ್ಲಿ ನಡೆಯುತ್ತದೆ. ಈ ಹಂತಗಳ ನಂತರ ಗಣಿಗಾರಿಕೆಯ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಜಿ4 ಮತ್ತು ಜಿ3 ಹಂತಗಳಲ್ಲಿ ಖನಿಜದ ದರ್ಜೆ, ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ದೊರೆಯುವ ಮಾಹಿತಿ ನಿಖರವಲ್ಲದ ಒಂದು ಸ್ಥೂಲ ಅಂದಾಜು ಮಾತ್ರ. ಜಿ2 ಹಂತದಲ್ಲಿ ಬಹಳಷ್ಟು ವಿಶ್ವಾಸಾರ್ಹವಾದ ಮಾಹಿತಿ ದೊರೆತು, ಅಂತಿಮವಾಗಿ ಜಿ1 ಹಂತದಲ್ಲಿ ಗಣಿಗಾರಿಕೆಗೆ ಬೇಕಾದ ಬಹುತೇಕ ಖಚಿತ ಮಾಹಿತಿ ದೊರೆಯುತ್ತದೆ.
ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕದಲ್ಲಿಲಿಥಿಯಮ್ ನಿಕ್ಷೇಪದ ಬಗ್ಗೆ ಜಿ4 ಮತ್ತು ಜಿ3 ಹಂತದ ಮಾಹಿತಿಗಳು ಮಾತ್ರ ಲಭ್ಯವಿವೆ. ಹೀಗಾಗಿ, ಬರೀ ಈ ಹಂತದ ಮಾಹಿತಿಗಳ ಆಧಾರದ ಮೇಲೆ, ಲಿಥಿಯಮ್ ಕೊರತೆ ಕೊನೆಗಾಣಲಿದೆ ಎಂಬ ನಿರ್ಧಾರಕ್ಕೆ ಬರುವುದು ಜಾಣತನವಲ್ಲ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಈ ನಾಲ್ಕೂ ಹಂತಗಳು ಮುಗಿದು ಲಿಥಿಯಮ್ ಉತ್ಪಾದನೆ ಪ್ರಾರಂಭವಾಗಲು ಸರಾಸರಿ ಎಂಟರಿಂದ ಹತ್ತು ವರ್ಷಗಳು ಅಗತ್ಯ. ಸತತ ಪ್ರಯತ್ನಗಳಿಂದ ಈ ಅವಧಿಯನ್ನು ಐದರಿಂದ ಆರು ವರ್ಷಗಳಿಗೆ ಇಳಿಸುವುದು ಸಾಧ್ಯವಾದಲ್ಲಿ, 2030ರ ವೇಳೆಗೆ ದೇಶದ ಮುಂದಿರುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.