ಭಾರತ, 2030ರ ಹೊತ್ತಿಗೆ ಆಂತರಿಕ ಶಕ್ತಿ ಬೇಡಿಕೆಯ ಶೇ 40ರಷ್ಟು ಭಾಗವನ್ನು ನವೀಕರಿಸಬಹುದಾದ ಇಂಧನದಿಂದಲೇ ಪೂರೈಸಿಕೊಳ್ಳುವ ಯೋಜನೆಯನ್ನು ಮುಂದಿಟ್ಟಿದೆ. ಅದೇ ಹೊತ್ತಿಗೆ ರಸ್ತೆಗಳ ಮೇಲೆ ಶೇ 30ರಿಂದ 40ರಷ್ಟು ವಿದ್ಯುತ್‍ಚಾಲಿತ ವಾಹನಗಳು ಓಡಾಡಬೇಕೆಂಬ ನೀಲನಕ್ಷೆಯನ್ನೂ ತಯಾರಿಸಿದೆ. ಎಲ್ಲ ದೇಶಗಳೂ ಇದನ್ನು ಮೆಚ್ಚುತ್ತವೆ; ಬೆಂಬಲಿಸುವುದೂ ದಿಟ. ಒಂದು ರೀತಿಯಲ್ಲಿ ತೈಲ, ಕಲ್ಲಿದ್ದಲು ಆಧರಿಸಿದ ಶಕ್ತಿಯ ಹಸ್ತಾಂತರ ಇದು.
ಪರೋಕ್ಷವಾಗಿ ತೈಲಾಧಿಪತಿಗಳ ಏಕಸ್ವಾಮ್ಯ ಮುರಿಯುವ ಕ್ರಾಂತಿಕಾರಿ ನಡೆ ಎಂದು ಮೇಲ್ನೋಟಕ್ಕೆ ಅನ್ನಿಸಬಹುದು. ಅದಕ್ಕಿಂತಲೂ ಮುಖ್ಯ ಭಾರತ ವಾಯುಗೋಳದಲ್ಲಿ ಕಾರ್ಬನ್ ಡೈ ಆಕ್ಸೈಡ್ ಜಮಾ ಮಾಡುವುದಕ್ಕೆ ಲಗಾಮು ಹಾಕಿ ಬದ್ಧತೆಯನ್ನು ಜಗತ್ತಿಗೆ ತೋರಿಸಬೇಕಾದ ಅನಿವಾರ್ಯ ಎದುರಾಗಿದೆ. ಹುಡುಕಿರುವ ಪರ್ಯಾಯ ಮಾರ್ಗ ಸರಿ ದಿಕ್ಕಿನಲ್ಲೇ ಇದೆ. ಆದರೆ ಮಾರ್ಗದ ತುಂಬ ರಸ್ತೆ ಡುಬ್ಬಗಳೇ ದಂಡಿಯಾಗಿವೆ.
ಈಗ ಶಕ್ತಿ ಪ್ರದರ್ಶನವೆಂದರೆ ನಮ್ಮ ಮಿಲಿಟರಿ ಶಸ್ತ್ರಾಸ್ತ್ರ ಪ್ರದರ್ಶನವಲ್ಲ, ಪರಮಾಣು ಅಸ್ತ್ರಗಳೂ ಅಲ್ಲ. ಅಷ್ಟೇ ಏಕೆ, ತೈಲದ ಮೇಲಿನ ಒಡೆತನವೂ ಅಲ್ಲ. ಶಕ್ತಿಯ ಆಕರವಾಗಿ ಬಳಸುವ ಕೆಲವು ಪುಟ್ಟ ಲೋಹಗಳು ಜಗತ್ತನ್ನು ಆಳಲು ಮುಂದಾಗಿವೆ. ಅದರಲ್ಲಿ ಮುಂಚೂಣಿಯಲ್ಲಿರುವುದು ಲಿಥಿಯಂ ಎಂಬ ‘ಶಕ್ತಿ’ ಸಾಮ್ರಾಟ. ಒಂದರ್ಥದಲ್ಲಿ ಜಗತ್ತಿನ ಶಕ್ತಿಯ ಜುಟ್ಟು ಲಿಥಿಯಂ ಕೈಯಲ್ಲಿದೆ. ಈ ಲೋಹ ಸಮೃದ್ಧ ರಾಷ್ಟ್ರಗಳು ಜಗತ್ತನ್ನು ಅಲ್ಲಾಡಿಸುತ್ತಿವೆ. ವಿದ್ಯುತ್‍ಚಾಲಿತ ವಾಹನ ಎಂದಾಗ, ಮೊದಲು ಕಣ್ಣೆದುರಿಗೆ ಮೂಡುವುದೇ ಬ್ಯಾಟರಿ- ರೀಚಾರ್ಜ್, ಬಾಳಿಕೆ, ಅಂತಿಮವಾಗಿ ತಗಲುವ ಖರ್ಚು.
‘ನಾವು ಬ್ಯಾಟರಿ ಅವಲಂಬಿತ ಶಕ್ತಿಮೂಲಕ್ಕೆ ಹೊಸ ಹೆಜ್ಜೆ ಹಾಕುತ್ತಿದ್ದೇವೆ’ ಎಂದು ನೀತಿ ಆಯೋಗವು 2020ರ ಡಿಸೆಂಬರ್‌ನಲ್ಲಿ ತನ್ನ ಜಾಲತಾಣದಲ್ಲಿ ಹೆಮ್ಮೆಯಿಂದಲೇ ಮಾಹಿತಿ ಹಂಚಿಕೊಂಡಿತ್ತು. ಲಿಥಿಯಂ ಎಲ್ಲಿದೆ ಎಂದು ಕೇಳಿದರೆ ಶಾಲಾ ಮಕ್ಕಳು ‘ಆವರ್ತ ಕೋಷ್ಟಕದಲ್ಲಿದೆ’ ಎಂದು ಹೇಳಿದರೆ ಅದು ಸರಿಯಾದ ಉತ್ತರವೇ ಆಗಿರಬಹುದು. ಆದರೆ ಶಕ್ತಿಯ ಬಳಕೆಯ ಪ್ರಶ್ನೆ ಬಂದಾಗ ನಮ್ಮಲ್ಲಿ ಎಷ್ಟು ಸಂಪನ್ಮೂಲವಿದೆ ಎಂಬ ನಿಜವಾದ ಲೆಕ್ಕಾಚಾರವನ್ನು ಯೋಚಿಸಿಯೇ ಮಾಡಬೇಕಾಗುತ್ತದೆ.
ಈ ಪ್ರಶ್ನೆಗೆ ಭಾರತದ ಸಂದರ್ಭದಲ್ಲಿ ನಿರುತ್ತರವೇ ಉತ್ತರವಾಗಬಹುದು. ಏಕೆಂದರೆ ಭಾರತದಲ್ಲಿ ಲಿಥಿಯಂ ಧಾತುವಿನ ನಿಕ್ಷೇಪವಿಲ್ಲ, ಪರಾವಲಂಬನೆ ಅನಿವಾರ್ಯ. ಚೀನಾ, ಜಪಾನ್, ಥೈವಾನ್‍ಗೆ ದುಂಬಾಲು ಬೀಳಬೇಕು, ಮರ್ಜಿಗಾಗಿ ಕಾಯುವ ಸ್ಥಿತಿ.
ಭಾರತಕ್ಕಾಗಲೀ, ಇತರ ದೇಶಗಳಿಗಾಗಲೀ ಆಯ್ಕೆಗಳು ಹೆಚ್ಚಾಗಿಲ್ಲ. ಲಿಥಿಯಂ ಅಯಾನು ಬ್ಯಾಟರಿಗಳನ್ನು ಆಮದು ಮಾಡಿಕೊಂಡು ನೇರವಾಗಿ ವಾಹನಗಳಿಗೆ ಜೋಡಿಸುವುದು, ಇಲ್ಲ ನವೋದ್ಯಮಕ್ಕೆ ಬೆಂಬಲವಾಗಿ ನಮ್ಮಲ್ಲೇ ತಯಾರಿಸುವುದು. ಎರಡನೆಯ ಬಾಬತ್ತಿನಲ್ಲಿ ಪಾಲುಗಾರಿಕೆ ಅನಿವಾರ್ಯ. ನೇರವಾಗಿ ಸಿದ್ಧ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳುವುದು ನಮ್ಮ ದೇಶದ ಮಟ್ಟಿಗೆ ತತ್‍ಕ್ಷಣದಲ್ಲಿ ತೋಚಿರುವ ಸುಲಭ ಪರಿಹಾರ.
ಆದರೆ ತೆರಬೇಕಾದ ವಿದೇಶಿ ವಿನಿಮಯ ಬಲು ದೊಡ್ಡದು. 2019-20ರಲ್ಲಿ ಭಾರತ ₹8,500 ಕೋಟಿ ಮೊತ್ತದ ಲಿಥಿಯಂ ಅಯಾನು ಬ್ಯಾಟರಿ ಆಮದು ಮಾಡಿಕೊಂಡಿತ್ತು. ಐದು ವರ್ಷಗಳ ಹಿಂದೆ ವೆಚ್ಚ ಮಾಡಿದ ಮೊತ್ತಕ್ಕಿಂತ ಐದು ಪಟ್ಟು ದುಬಾರಿ. ಬಹುಮಟ್ಟಿಗೆ ಚೀನಾದ ಖಜಾನೆಯನ್ನು ತುಂಬಿದ್ದೇ ಹೆಚ್ಚು. ಎಂದೇ ದೇಶದಲ್ಲೇ ಉತ್ಪಾದನೆ ಮಾಡುವ ಕಡೆ ಒಂದು ಹೆಜ್ಜೆ ಹಾಕಿರುವುದು ಕಾಣುತ್ತಿದೆ- ವಿದ್ಯುತ್‍ಚಾಲಿತ ವಾಹನಗಳ ಉತ್ಪಾದಕರಿಗೆ ಉತ್ಪಾದನೆ ಆಧಾರಿತ ಬೆಂಬಲ ಬೆಲೆ ಕೊಡುವುದು. ಈ ಕುರಿತು ಮೊದಲ ಯೋಜನೆ 2015ರಲ್ಲಿ ಪ್ರಕಟವಾದರೂ ಆ ದಿಸೆಯಲ್ಲಿ ಭಾರಿ ಪ್ರಗತಿಯೇನೂ ಕಾಣಲಿಲ್ಲ. ಈಗ ಉತ್ಪಾದಕರಿಗೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸರ್ಕಾರ ₹ 18,000 ಕೋಟಿ ಮೀಸಲಿಟ್ಟಿದೆ. ಲಿಥಿಯಂ ಅಯಾನು ಬ್ಯಾಟರಿಗಳ ವಿದ್ಯುತ್ ಸಂಗ್ರಹಣಾ ಸಾಮರ್ಥ್ಯ ಮುಂದಿನ ವರ್ಷಗಳಲ್ಲಿ 50 ಗಿಗಾ ವ್ಯಾಟ್ ಆಗಲಿದೆ ಎಂದು ಅಂದಾಜು.
ಏಕೆ ಲಿಥಿಯಂಗೆ ದಿಢೀರ್ ಬೇಡಿಕೆ? ಎಲ್ಲ ದೇಶಗಳೂ ಅದರತ್ತ ಮುಖ ಮಾಡಿವೆಯಲ್ಲ? ಮೊದಲನೆಯದಾಗಿ, ಅದು ಅತ್ಯಂತ ಹಗುರ ಲೋಹ. ಬ್ಯಾಟರಿಗೆ ಹೊರೆಯಾಗುವುದಿಲ್ಲ. ಅದನ್ನು ಬಳಸಿದಾಗ ವಿದ್ಯುತ್ ಸಂಗ್ರಹಣಾ ಸಾಮರ್ಥ್ಯ ಅತಿ ಹೆಚ್ಚು. ಇದರ ಜೊತೆಗೆ ಕೊಬಾಲ್ಟ್ ಬಳಸಿದಾಗ, ಅದರ ಸಾಮರ್ಥ್ಯ ಇನ್ನೂ ಹೆಚ್ಚುತ್ತದೆ. ಬ್ಯಾಟರಿಗಳ ಜೀವಾವಧಿ ಕೂಡ ಹೆಚ್ಚು. ಮುಖ್ಯವಾಗಿ ಉತ್ಪಾದನೆಗೆ ಬಳಸುವ ತಂತ್ರ ಕಷ್ಟವಾದುದಲ್ಲ. ಇಷ್ಟೊಂದು ಸದ್ಗುಣಗಳಿರುವಾಗ ಏಕೆ ಕೈಚಾಚಬಾರದು? ಆದರೆ ಲಿಥಿಯಂ ಪೂರೈಸುವ ರಾಷ್ಟ್ರಗಳು ಇದೇ ಸಂದರ್ಭವನ್ನು ಬಳಸಿಕೊಂಡು ಜಗತ್ತನ್ನು ಆಟವಾಡಿಸುತ್ತಿವೆ. ತೈಲ ರಾಷ್ಟ್ರಗಳೂ ಬೆಚ್ಚಿಬಿದ್ದಿವೆ. ಮುಖ್ಯವಾಗಿ ಯುರೋಪು ಮತ್ತು ಅಮೆರಿಕ ವಿದ್ಯುತ್‍ಚಾಲಿತ ವಾಹನಗಳಿಗೆ ಆದ್ಯತೆ ನೀಡಿವೆ, ಅವು ಕೂಡ ಲಿಥಿಯಂ ಪೂರೈಕೆಗೆ ಭಾರತದಂತೆ ಹೆಚ್ಚು ಪಾಲು ಚೀನಾದತ್ತ ಮುಖಮಾಡಿವೆ. ಅಲ್ಲಿ ಬೇಡಿಕೆಗೆ ತಕ್ಕಂತೆ ಲಿಥಿಯಂ ಪೂರೈಕೆ ಮಾಡಲು ಆಗುತ್ತಿಲ್ಲ. ಉತ್ಪಾದನೆಯ ಶಕ್ತಿಗಾಗಿ ಚೀನಾ ಉಷ್ಣಸ್ಥಾವರಗಳನ್ನೇ ಅವಲಂಬಿಸಬೇಕು.
ಆದರೆ ವಾಯುಮಾಲಿನ್ಯ ಹೆಚ್ಚದಂತೆ ತಡೆಯುವ ಜವಾಬ್ದಾರಿಯೂ ಅದಕ್ಕಿದೆ. ಅಂದರೆ ಕಲ್ಲಿದ್ದಲ ಬಳಕೆಯನ್ನು ತಗ್ಗಿಸಬೇಕು. ಥೈವಾನ್ ಮತ್ತು ಜಪಾನ್‍ನಲ್ಲೂ ಲಿಥಿಯಂ ನಿಕ್ಷೇಪ ದೊಡ್ಡ ಪ್ರಮಾಣದಲ್ಲಿಲ್ಲ. ದುಬಾರಿ ಬೆಲೆಯಾದರೂ ಸರಿ ಅಮೆರಿಕ ಮತ್ತು ಯುರೋಪು ಆಮದು ಮಾಡಿಕೊಳ್ಳಲು ತಯಾರಾಗಿವೆ. ಹಡಗಿನಲ್ಲಿ ಸಾಗಣೆ ಮಾಡಿದರೆ ಸಮಯ ವ್ಯರ್ಥ ಎಂದು ವಿಮಾನದಲ್ಲಿ ತರಿಸಿಕೊಳ್ಳಲು ಅವು ಸಿದ್ಧ. ಇದು ಭಾರತದ ಮಟ್ಟಿಗೆ ಇಕ್ಕಟ್ಟಿನ ಪರಿಸ್ಥಿತಿಯೇ ಸರಿ.
ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಥಿಯಂ ಆಮದು ಮಾಡಿಕೊಂಡರೆ ಬ್ಯಾಟರಿ ಉದ್ಯಮವನ್ನು ಮುಂದುವರಿಸಬಹುದು ಎಂಬುದು ಉದ್ಯಮಪತಿಗಳ ನಿರೀಕ್ಷೆ. ಇಲ್ಲಿ ಇನ್ನೊಂದು ಅಂಶವೂ ಪರಿಗಣಿಸಬೇಕಾದ್ದೇ. ಲಿಥಿಯಂ ಅಯಾನು ಮಾತ್ರ ಬ್ಯಾಟರಿಗಳಲ್ಲಿ ಬಳಕೆಯಾಗುವುದಿಲ್ಲ. ಕೊಬಾಲ್ಟ್, ನಿಕ್ಕಲ್, ಮ್ಯಾಂಗನೀಸ್ ಪಾತ್ರವೂ ಉಂಟು. ಕೊಬಾಲ್ಟ್ ಉತ್ಪಾದನೆಯ ಶೇ 40ರಷ್ಟು ಪಾಲು ರಿಪಬ್ಲಿಕ್ ಆಫ್ ಕಾಂಗೊ ಕೈಯಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಅದು ಕೊಬಾಲ್ಟ್ ಬೆಲೆಯನ್ನು ಶೇ 300 ಪಟ್ಟು ಹೆಚ್ಚಿಸಿದೆ.
ಬ್ರೆಜಿಲ್, ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಕೆನಡಾ ನಿಕ್ಕಲ್ ಒಡೆಯರು. ಭಾರತದಲ್ಲಿ ನಿಕ್ಕಲ್ ಉತ್ಪಾದನೆ ತೀರಾ ನಗಣ್ಯ. ಇಲ್ಲೂ ನಮ್ಮದು ಪರಾವಲಂಬನೆಯೇ. ಇವೆಲ್ಲವನ್ನೂ ಮೀರಿ ವಿದ್ಯುತ್ ವಾಹನಗಳನ್ನು ರಸ್ತೆಗೆ ಇಳಿಸುವುದು ಸವಾಲೇ ಸರಿ. ಸರ್ಕಾರ ಈ ಕುರಿತು ದೀರ್ಘ ಆಲೋಚನೆ ಮಾಡಿ ಲಿಥಿಯಂ ಅಯಾನು ಬ್ಯಾಟರಿಗಳನ್ನು ನಮ್ಮಲ್ಲೇ ಉತ್ಪಾದಿಸುವ ಯೋಜನೆಯನ್ನು ಬೆಂಬಲಿಸಿದೆ. ಅಷ್ಟರಮಟ್ಟಿಗೆ ಖರ್ಚನ್ನು ತಗ್ಗಿಸಬಹುದು. ಬಹುತೇಕ ಉದ್ಯಮಗಳು ಗುಜರಾತಿನಲ್ಲಿ
ಕೇಂದ್ರೀಕರಿಸಿವೆ.
ಲಿಥಿಯಂ ಅಯಾನು ಬ್ಯಾಟರಿಯ ಜಾಗತಿಕ ಉದ್ಯಮದ ವಹಿವಾಟು 2030ರ ಹೊತ್ತಿಗೆ ಮೂರು ಪಟ್ಟು ಹೆಚ್ಚಲಿದೆ ಎಂಬುದು ಆರ್ಥಿಕ ತಜ್ಞರ ಅಂದಾಜು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರೀಸೈಕ್ಲಿಂಗ್, ಅಂದರೆ ಮರುಬಳಕೆಯ ತಂತ್ರ ನೆರವಿಗೆ ಬರಬಹುದು. ಆಗ ಖರ್ಚು ಗಣನೀಯವಾಗಿ ತಗ್ಗಬಹುದು. ಇದರ ಜೊತೆಗೆ ಲಿಥಿಯಂ ಬದಲು ಅಲ್ಯುಮಿನಿಯಂ ಏಕಾಗಬಾರದು ಎಂದು ಭಾರತ ಗಂಭೀರ ಸಂಶೋಧನೆಯಲ್ಲಿ ನಿರತವಾಗಿದೆ. ಈ ಲೋಹ ಕೂಡ ಅಷ್ಟೇ ಸಮರ್ಥವಾಗಿ ವಿದ್ಯುತ್ಹಿಡಿದಿಡಬಲ್ಲದು. ಮೇಲಾಗಿ ನಮ್ಮ ದೇಶದ ಪೂರ್ವ ಘಟ್ಟದಲ್ಲಿ ಅರವತ್ತು ಕೋಟಿ ಟನ್ ಅಲ್ಯುಮಿನಿಯಂ ಅದಿರು ಇದೆ. ಇಂಥ ಹೊಸ ನಿಟ್ಟಿನ ಚಿಂತನೆಗಳು ಲಿಥಿಯಂ ಒಡ್ಡಿರುವ ಸಮಸ್ಯೆಗಳಿಗೆ ಮುಂದೆ ಜವಾಬು ಆಗಬಲ್ಲವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.