ಕೊರೊನಾ ಸೋಂಕು, ಪ್ರಪಂಚದ ಎಲ್ಲರನ್ನೂ ಕಂಗೆಡಿಸಿರುವುದು ನಿಜ. ಆದರೆ, ಕೊರೊನಾ ತಂದೊಡ್ಡಿರುವ ಇಂತಹ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಅಧಿಕಾರ ಕೇಂದ್ರೀಕರಣ ಮತ್ತು ಖಾಸಗೀಕರಣದಂತಹ ತಮ್ಮ ಕಾರ್ಯಸೂಚಿಗಳ ವೇಗವನ್ನು ತೀವ್ರಗೊಳಿಸಲು ಅವಕಾಶವಾಗಿ ಬಳಸಿಕೊಳ್ಳುತ್ತಿವೆ. ಜನರ ಕಷ್ಟಗಳಿಗೆ ಸ್ಪಂದಿಸುವ ಸೋಗಿನಲ್ಲಿ, ತಮ್ಮ ಈ ಅಜೆಂಡಾದ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಸರ್ಕಾರಗಳು, ಬದಿಗೊತ್ತಲ್ಪಟ್ಟ ವರ್ಗ ಹಾಗೂ ಕಷ್ಟದಲ್ಲಿರುವ ಜನರ ಸಂಕಟಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿವೆ.
ಪ್ರಜಾತಂತ್ರ ವ್ಯವಸ್ಥೆಯ ತಳಹದಿಯಾದ ನಮ್ಮ ಹಳ್ಳಿಗಳಲ್ಲಿ ವಿಕೇಂದ್ರೀಕೃತ ಅಧಿಕಾರ ಬಲವಾಗಿ ಬೇರೂರಿದೆ. ಈ ಅಧಿಕಾರವನ್ನು ಕಸಿದುಕೊಳ್ಳಲು, ರಾಜ್ಯದ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಮುಗಿಯಲಿರುವ ಈ ಸಂದರ್ಭವು ಅವರಿಗೆ ಲಾಟರಿ ಹೊಡೆದಂತೆ ಒದಗಿಬಂದಿದೆ. ಅಧಿಕಾರ ವಿಕೇಂದ್ರೀಕರಣ ಮತ್ತು ಜನರ ನೇರ ಭಾಗವಹಿಸುವಿಕೆಯ ಮೂಲ ಹಾಗೂ ಪ್ರಬಲ ಅವಕಾಶವೇ ಪಂಚಾಯತ್ ರಾಜ್ ವ್ಯವಸ್ಥೆ. ಮುಖ್ಯವಾಗಿ, ಸ್ಥಳೀಯ ಸ್ವಯಂ ಸರ್ಕಾರವಾದ ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಸಭೆ. ಈ ವ್ಯವಸ್ಥೆಯು ಇವರ ಅಜೆಂಡಾದ ಅನುಷ್ಠಾನಕ್ಕೆ ಇರುವ ದೊಡ್ಡ ತಡೆಯಾಗಿದೆ. ಜೊತೆಗೆ ಇಂತಹ ವ್ಯವಸ್ಥೆಯು ದೇಶದಲ್ಲಿ ಬಲವಾಗಿ ಬೇರೂರಿರುವುದು ಕೆಲವೇ ರಾಜ್ಯಗಳಲ್ಲಿ. ಅಂತಹ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಶ್ರೇಣಿಯಲ್ಲಿದೆ. ಹಾಗಾಗಿ ಇದನ್ನು ದುರ್ಬಲಗೊಳಿಸುವ ಒಂದು ದಾಳವಾಗಿ ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ನಡೆಗೆ ಪೂರಕವಾಗಿ ರಾಜ್ಯ ಸರ್ಕಾರ ಕೈಜೋಡಿಸಿದೆ. ಇದರ ಫಲವೇ, ಗ್ರಾಮ ಪಂಚಾಯಿತಿಗಳಿಗೆ ಅಸಾಂವಿಧಾನಿಕವಾದ ಹಾಗೂ ಕಾನೂನಿಗೆ ವಿರುದ್ಧವಾಗಿರುವ ಆಡಳಿತ ಸಮಿತಿಯನ್ನು ರಚಿಸಲು ಮುಂದಾಗಿರುವುದು ಮತ್ತು ಆ ಮೂಲಕ, ಈಗಾಗಲೇ ವಿಕೇಂದ್ರೀಕೃತವಾಗಿರುವ ಜನರ ಅಧಿಕಾರವನ್ನು ಕಸಿಯಲು ಹೊರಟಿರುವುದು!
ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಇಟ್ಟ ಮೊದಲ ಹೆಜ್ಜೆಯೇ, ಸುರಕ್ಷಾ ಕ್ರಮಗಳಿಲ್ಲದೆ ದೇಶದಾದ್ಯಂತ ಲಾಕ್‍ಡೌನ್ ಘೋಷಿಸಿದ್ದು. ಕೊರೊನಾ ಧುತ್ತೆಂದು ಬಂದೆರಗಿದ ಸುನಾಮಿಯಲ್ಲ. ಆ ಆತಂಕ ನಮ್ಮಲ್ಲೂ ಉಂಟಾಗಬಹುದೆಂಬುದು ಜನವರಿಯಿಂದಲೇ ಚರ್ಚೆಯಲ್ಲಿತ್ತು. ಫೆಬ್ರುವರಿ- ಮಾರ್ಚ್‍ನಲ್ಲಿ ಇದು ನಿಚ್ಚಳವಾಯಿತು. ಸರ್ಕಾರದಲ್ಲಿ ಅನೇಕ ಮೇಧಾವಿಗಳು, ಅರ್ಥಶಾಸ್ತ್ರಜ್ಞರು ಇದ್ದಾಗ್ಯೂ, ಈ ಪರಿಸ್ಥಿತಿಯು ದಿನಗೂಲಿ ಕಾರ್ಮಿಕರನ್ನೂ ಒಳಗೊಂಡ ಬದಿಗೊತ್ತಲ್ಪಟ್ಟ ಜನರ ಜೀವನದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ ಎನ್ನುವುದನ್ನು ಮೊದಲೇ ಅಂದಾಜಿಸದಿದ್ದುದು ಮಾನವೀಯ ಕ್ರೌರ್ಯವೇ ಸರಿ.
ಈ ಕ್ರೌರ್ಯದ ಪರಿಣಾಮವಾಗಿ, ದಿನಗೂಲಿ ಕಾರ್ಮಿಕರು, ಸಣ್ಣ ಹಾಗೂ ಕಿರು ಕೈಗಾರಿಕೆಗಳು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಕೃಷಿಕರು– ರೈತರು, ಕಟ್ಟಡ ಕಾರ್ಮಿಕರು, ಸೇವಾ ವಲಯಗಳ ದಿನಗೂಲಿ ಕಾರ್ಮಿಕರು- ಹೀಗೆ ಪ್ರತಿದಿನದ ದುಡಿಮೆಯಿಂದ ಬದುಕುತ್ತಿದ್ದವರ ಎಲ್ಲಾ ಚಟುವಟಿಕೆಗಳು ನಿಂತುಹೋಗಿ, ಜೀವನವೇ ಅಸ್ತವ್ಯಸ್ತವಾಯಿತು. ಸಂಪೂರ್ಣವಾಗಿ ಹದಗೆಟ್ಟ ಅವರ ಬದುಕಿಗೆ ಬೆಂಬಲವೆಂಬಂತೆ ಸರ್ಕಾರ ಘೋಷಿಸಿದ ಉಪಕ್ರಮಗಳು ‘ತುಂಬಾ ತಡವಾಗಿ ಮಾಡಿದ ಅತೀ ಕಡಿಮೆ ವ್ಯವಸ್ಥೆ’ಯಂತಾದವು. ಅದಾಗಲೇ ತೂತಾಗಿರುವ ದೋಣಿಯಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು, ದೋಣಿ ಮುನ್ನಡೆಸಲು ಹುಟ್ಟು ಹಾಕುತ್ತಿರುವಂತೆ ಇದೆ ಸರ್ಕಾರದ ಈ ನಡೆ. ಹೀಗಿರುವಾಗ, ತಮ್ಮ ಉಳಿವಿಗಾಗಿಯೇ ಹೋರಾಡುತ್ತಿರುವ ಸಣ್ಣ ಅಥವಾ ಕಿರು ಉದ್ದಿಮೆದಾರರು ತಮ್ಮ ಕೆಲಸಗಾರರಿಗೆ ಸಂಬಳ ಕೊಡಬೇಕೆಂದು ಒತ್ತಾಯಿಸಿದ್ದು, ಅವರ ಪರಿಸ್ಥಿತಿಯನ್ನೂ ಹದಗೆಡಿಸಲು ಕೈಹಾಕಿದಂತಹ ನಡೆಯಾಯಿತು.
ಇದು ದೊಡ್ಡವರ ಪರಿಸ್ಥಿತಿಯಾದರೆ, ಇನ್ನು ಮಕ್ಕಳ ಪರಿಸ್ಥಿತಿಗೆ ಕಿವಿಗೊಡುವವರೇ ಇಲ್ಲದಂತಾಯಿತು. ಉದಾಹರಣೆಗೆ, ಬಾಲಕಿ ನಿರ್ಮಲಾಳ (ಹೆಸರು ಬದಲಿಸಲಾಗಿದೆ) ಕುಟುಂಬವು ಮೂಲ ಊರಾದ ಗದಗದಿಂದ ಕೆಲಸ ಅರಸಿ ಬೆಂಗಳೂರಿಗೆ ಬಂದು ಟೆಂಟ್‍ನಲ್ಲಿ ವಾಸವಾಗಿತ್ತು. ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ ಪ್ಲೈವುಡ್ ಕಾರ್ಖಾನೆಯೊಂದರಲ್ಲಿ ತ್ಯಾಜ್ಯ ಬೇರ್ಪಡಿಸುವ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್ ಬಳಿಕ ಎಲ್ಲರೂ ಕೆಲಸ ಕಳೆದುಕೊಂಡರು. ಅವರು ವಾಸವಿದ್ದ ಜಾಗದ ಮಾಲೀಕರು ಕೊರೊನಾ ಮುನ್ನೆಚ್ಚರಿಕೆಯಿಂದ ಅವರನ್ನೆಲ್ಲ ಅಲ್ಲಿಂದ ಎಬ್ಬಿಸಿದರು. ಹೀಗೆ ಈ ಕುಟುಂಬವು ಕೂಲಿಯಿಲ್ಲದೆ, ಊಟವಿಲ್ಲದೆ, ವಸತಿಯಿಲ್ಲದೆ ಅಕ್ಷರಶಃ ಬೀದಿಗೆ ಬಂದಿತು. ಬೇರೆ ದಾರಿ ಕಾಣದೆ ಊರಿಗೆ ಹೊರಟ ಇವರು, ಸಾರಿಗೆ ವ್ಯವಸ್ಥೆಯೂ ಇಲ್ಲದೆ ನಡೆದುಕೊಂಡೇ ಹೋಗಬೇಕಾಯಿತು. ನೂರಾರು ಮೈಲಿಗಳ ದೂರ, ಸಾಮಾನು ಸರಂಜಾಮನ್ನು ಹೆಗಲಿಗೇರಿಸಿಕೊಂಡು ನಿರ್ಮಲಾ, ಆಕೆಯ ಪುಟ್ಟ ತಮ್ಮ ಹಾಗೂ ತಂದೆ-ತಾಯಿ ದಾರಿಯುದ್ದಕ್ಕೂ ಸರಿಯಾದ ಆಹಾರ, ನೀರು ಇಲ್ಲದೆ ಹೆಣಗಾಡುತ್ತಾ ಊರು ಸೇರಿದರು. ಇದೊಂದು ಉದಾಹರಣೆ ಸಾಕು ಲಾಕ್‍ಡೌನ್‍ನ ಚಿತ್ರಣವನ್ನು ವಿವರಿಸಲು.
ನಿರ್ಮಲಾಳಂತೆಯೇ ಹಲವಾರು ಕುಟುಂಬಗಳು ನಗರದಿಂದ ಹಳ್ಳಿಗಳತ್ತ ಮುಖ ಮಾಡಿವೆ. ಆದರೆ, ಊರಿಗೆ ತೆರಳಿದ ಮೇಲೆಯೂ ಜೀವನ ಸುಧಾರಿಸುವ ಯಾವುದೇ ಭರವಸೆ ಅವರ‍್ಯಾರಿಗೂ ಇಲ್ಲ. ಪರಿಸ್ಥಿತಿ ಹೀಗಿರುವಾಗ, ಹಳ್ಳಿಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಥಳೀಯ ಸರ್ಕಾರದ ಅಸ್ತಿತ್ವವನ್ನೇ ಕೊನೆಗಾಣಿಸ ಹೊರಟಿರುವುದು ದುರಾಲೋಚನೆಯೇ ಸರಿ.
ಸ್ಥಳೀಯ ಸರ್ಕಾರದ ಮೇಲೆ ಆಡಳಿತ ಸಮಿತಿಯನ್ನು ಹೇರಿದರೆ, ಅಧಿಕಾರವು ಅನಾಯಾಸವಾಗಿ ಹಳ್ಳಿಯಿಂದ ದಿಲ್ಲಿಗೆ ವರ್ಗಾವಣೆಯಾಗುತ್ತದೆ. ಚುನಾವಣೆ ನಡೆಸಲು ಸ್ಪಷ್ಟ ಅವಕಾಶಗಳಿದ್ದರೂ ಚುನಾವಣೆ ಘೋಷಿಸದೆ, ಅಧಿಕಾರಿಗಳ ಅಧ್ಯಕ್ಷತೆಯಲ್ಲಿ, ಚುನಾಯಿತರಲ್ಲದ ಸದಸ್ಯರನ್ನು ಒಳಗೊಂಡ ಸಮಿತಿ ನೇಮಕದಂತಹ ವಾಮಮಾರ್ಗದ ಮೂಲಕ ಗ್ರಾಮಗಳಲ್ಲಿ ಜನರ ಅಧಿಕಾರವನ್ನು ಕಸಿದುಕೊಂಡು, ಪ್ರಜಾತಂತ್ರ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುವ ದುಸ್ಸಾಹಸಕ್ಕೆ ಸರ್ಕಾರ ಕೈಹಾಕಿದೆ. ಇದು, ಅದರ ಮುಖ್ಯ ಅಜೆಂಡಾದ ಉಪಅಜೆಂಡಾ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳಿಂದಾಗಿ ಜನರ ಕೈಗೆ ಅಧಿಕಾರ-ಜನರದ್ದೇ ನಿರ್ಧಾರ ಸಾಧ್ಯವಾಗಿದೆ. ಈ ಮೂಲಕ ವಿಕೇಂದ್ರೀಕರಣಕ್ಕೆ ಭದ್ರಬುನಾದಿ ಹಾಕಿಕೊಡುವಲ್ಲಿ ಈ ವ್ಯವಸ್ಥೆಯ ಕೊಡುಗೆ ಅಪಾರ. ಗ್ರಾಮಸಭೆಯ ಈ ಹಕ್ಕು ಮತ್ತು ಅಧಿಕಾರವು ಪ್ರಜಾಪ್ರಭುತ್ವದ ತಾಯಿಬೇರಾಗಿದೆ. ಗ್ರಾಮೀಣ ಪ್ರದೇಶಗಳು ನಗರ ಪ್ರದೇಶಗಳಿಗಿಂತ ಸಬಲವಾಗಿರಬೇಕು ಎಂಬ ಮಾದರಿಗೆ ಇದು ಪುಷ್ಟಿಕೊಡುತ್ತದೆ. ಆ ವ್ಯವಸ್ಥೆಯನ್ನೇ ತೆಗೆದುಹಾಕಿಬಿಟ್ಟರೆ, ಅವರ ದಾರಿಯಲ್ಲಿದ್ದ ಮಹಾನ್ ಅಡ್ಡಗೋಡೆಯನ್ನು ಕೆಡವಿದಂತಾಗುತ್ತದೆ.
ಗ್ರಾಮೀಣಾಭಿವೃದ್ಧಿಗಾಗಿಯೇ ಇರುವ ಎಂ.ಪಿ. ಲ್ಯಾಡ್ ನಿಧಿಯನ್ನು ಈಗಾಗಲೇ ಪ್ರಧಾನಮಂತ್ರಿ ಕೇರ್ ನಿಧಿಗೆ ಒತ್ತಾಯಪೂರ್ವಕವಾಗಿ ವರ್ಗಾಯಿಸಲಾಗಿದೆ. ರಾಜ್ಯದ ಸಿ.ಎಸ್.ಆರ್.ನಿಧಿಗಳಿಗೂ ಹಣವನ್ನು ಹೀಗೆ ವರ್ಗಾಯಿಸದೆ ಬೇರೆ ರೀತಿ ಬಳಕೆ ಮಾಡಿದರೆ ಆದಾಯ ತೆರಿಗೆ ವಿನಾಯಿತಿ ಇಲ್ಲ ಎಂಬ ಷರತ್ತು ವಿಧಿಸಿ, ಆ ಹಣವೂ ಗ್ರಾಮೀಣ ಅಭಿವೃದ್ಧಿಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆದು, ಕೇಂದ್ರಕ್ಕೆ ವರ್ಗಾವಣೆಯಾಗುವಂತೆ ಪರೋಕ್ಷ ತಂತ್ರ ಹೂಡಿದೆ. ಹಣ, ಅಧಿಕಾರ ಎರಡನ್ನೂ ತನ್ನ ಕಪಿಮುಷ್ಟಿಗೆ ತೆಗೆದುಕೊಂಡರೆ ಕೇಂದ್ರೀಕರಣ ಅಜೆಂಡಾದ ಏಣಿಯನ್ನು ಏರುವುದು ಸುಲಭ, ಹಾಗಾಗಿಯೇ ಈ ಎಲ್ಲಾ ಕಾರ್ಯತಂತ್ರಗಳು.
ಗ್ರಾಮ ಸಭೆಯನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಇರುವುದು ಜನರ ಪರೋಕ್ಷ ಭಾಗವಹಿಸುವಿಕೆ. ಸ್ಥಳೀಯ ಸರ್ಕಾರವೊಂದನ್ನು ಬಿಟ್ಟು, ಉಳಿದೆಲ್ಲಾ ಸರ್ಕಾರಗಳ ರಚನೆಯಲ್ಲಿ, ಆಡಳಿತದಲ್ಲಿ ನಮ್ಮ ಪ್ರತಿನಿಧಿಗಳ ಕೈಗೆ ಅಧಿಕಾರ ಕೊಟ್ಟು, ಅವರ ಆಳ್ವಿಕೆಯಲ್ಲಿ ನಾವು ತೃಪ್ತಿಪಡಲು ಪ್ರಯತ್ನಿಸುವುದು ಮಾತ್ರ ಸಾಧ್ಯ. ಈ ಪ್ರತಿನಿಧಿಗಳ ಆಳ್ವಿಕೆಯ ಆಟದಲ್ಲಿ, ನಾವು ಒಂದು ರೀತಿಯಲ್ಲಿ ಆಟವೇ ಗೊತ್ತಿಲ್ಲದೆ ಆಟದಲ್ಲಿ ಭಾಗವಹಿಸುತ್ತಿರುವ ಆಟಗಾರರಂತೆ.
ದೇಶಕ್ಕೆ ಮಹಾನ್ ಕೊಡುಗೆ ನೀಡಿದ ಗಾಂಧೀಜಿ ಕನಸಿಗೆ ಪಂಚಾಯತ್ ರಾಜ್ ವ್ಯವಸ್ಥೆ ಒಂದು ಬೃಹತ್ ಮುನ್ನಡೆ. ಚುನಾವಣೆ ಮುಂದೂಡಿ, ಆಡಳಿತ ಸಮಿತಿ ನೇಮಿಸಿ, ಆ ವ್ಯವಸ್ಥೆಯನ್ನೇ ತೆಗೆದುಬಿಟ್ಟರೆ ಗಾಂಧೀಜಿ ಕನಸಿನ ಮಾದರಿಯೇ ಬಿದ್ದುಹೋಗುತ್ತದೆ. ಇದರಿಂದಾಗಿ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕಲ್ಪನೆಗೆ ಭಾರಿ ಹಿನ್ನಡೆಯುಂಟಾಗುತ್ತದೆ. ಸ್ವಾಯತ್ತ ಸಂಸ್ಥೆಯಾಗಿ ಅಧಿಕಾರ ಹೊಂದಿರುವ ಚುನಾವಣಾ ಆಯೋಗವು ಮೌನ ತಳೆದಿರುವುದು, ಈ ಹಿನ್ನಡೆಗೆ ಅಸ್ತಿಭಾರ ಹಾಕಲು ಪ್ರಯತ್ನಿಸುತ್ತಿರುವ ಸರ್ಕಾರಗಳಿಗೆ ಕುಮ್ಮಕ್ಕು ಕೊಟ್ಟಂತಾಗಿದೆ.
ಲೇಖಕಿ: ಸಂಚಾಲಕಿ, ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.