ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ನಾಯಕ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನದಿಂದ ಯಾವ ರೀತಿಯ ಪರಿಣಾಮಗಳು ಉಂಟಾಗಬಹುದು? ಇದು, ಲೋಕಸಭಾ ಚುನಾವಣೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು– ಮುಖ್ಯವಾಗಿ, ಎಎಪಿ
ಅಧಿಕಾರದಲ್ಲಿರುವ ದೆಹಲಿ ಹಾಗೂ ಪಂಜಾಬ್‌ನಲ್ಲಿ? ಇದರಿಂದ ‘ಇಂಡಿಯಾ’ ಮೈತ್ರಿಕೂಟದ ಮೇಲಾಗುವ ಪರಿಣಾಮಗಳೇನು? ಈ ಪ್ರಕರಣವು ಚುನಾವಣೆಯಲ್ಲಿ ಕೇಜ್ರಿವಾಲ್ ಹಾಗೂ ಎಎಪಿ ಪರ ಸಹಾನುಭೂತಿಯ ಅಲೆ ಎಬ್ಬಿಸುವುದೇ ಅಥವಾ ಜಾರಿ ನಿರ್ದೇಶನಾಲಯವು (ಇ.ಡಿ) ನ್ಯಾಯಾಲಯಕ್ಕೆ ತಿಳಿಸಿರುವಂತೆ, ಈ ನಾಯಕ ಅಬಕಾರಿ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಕಬಳಿಸಿದ್ದಾರೆ ಎಂದು ಜನ ನಂಬುವರೋ? ಅಥವಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವುದರಿಂದ ಕೇಜ್ರಿವಾಲ್ ಅವರನ್ನು ಈ ರೀತಿ ಬಲಿಪಶು ಮಾಡಲಾಗಿದೆ ಎನ್ನುವ ವಿರೋಧ ಪಕ್ಷಗಳ ಮಾತನ್ನು ನಂಬುವರೋ? ಈ ಬಂಧನದ ನಂತರ ಎಎಪಿಯ ಭವಿಷ್ಯ ಏನಾಗಬಹುದು? ಅಕಸ್ಮಾತ್ ಕೇಜ್ರಿವಾಲ್ ಅವರ ಸೆರೆವಾಸ ಬಹಳ ಕಾಲ ಮುಂದುವರಿದರೆ ಪಕ್ಷವನ್ನು, ದೆಹಲಿ ಸರ್ಕಾರವನ್ನು ಮುನ್ನಡೆಸುವವರು ಯಾರು? ಈ ಬೆಳವಣಿಗೆಯಿಂದ ಯಾವ ಪಕ್ಷಕ್ಕೆ ಲಾಭ? ಈ ಹಗರಣ ಈ ನಾಯಕನ
ವ್ಯಕ್ತಿತ್ವಕ್ಕೆ ಮಸಿ ಬಳಿದಿದೆಯೇ?
ಪ್ರಕರಣ ಒಂದು, ಪ್ರಶ್ನೆಗಳು ಹಲವಾರು. ಯಾವುದಕ್ಕೂ ಉತ್ತರವಿಲ್ಲ. ಸ್ಪಷ್ಟತೆ ಇಲ್ಲ. ಚುನಾವಣೆ ಸಂದರ್ಭದಲ್ಲಿ ನಡೆದಿರುವ ವಿರೋಧಿ ಬಣದ ಈ ನಾಯಕನ ಬಂಧನ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿದೆ. ಆದರೆ ಅದೇ ವೇಳೆ ಕೇಜ್ರಿವಾಲ್ ಅವರ ಬೆಂಬಲಿಗರಲ್ಲಿ ಎಎಪಿಯ ಭವಿಷ್ಯದ ಬಗ್ಗೆ ಗೊಂದಲ ಮೂಡಿಸಿದೆ.
ಕೇಜ್ರಿವಾಲ್ ಬಂಧನ ಅವರ ಪಕ್ಷಕ್ಕೆ ಸ್ವಲ್ಪಮಟ್ಟಿನ ಸಹಾನುಭೂತಿಯನ್ನೇನೊ ತಂದುಕೊಡಬಲ್ಲದು. ಆದರೆ ಅದು ಮತವಾಗಿ ಪರಿವರ್ತನೆ ಹೊಂದುವುದೇ? ಎದುರಾಳಿ ಬಿಜೆಪಿ ಸುಮ್ಮನೆ ಕೂರುವ ಪಕ್ಷವಲ್ಲ. ಈ ಪ್ರಕರಣದಲ್ಲಿ, ತಾನು ಭ್ರಷ್ಟಾಚಾರ ವಿರೋಧಿ ಎಂದು ಹೇಳಿಕೊಳ್ಳುವ ನಾಯಕನೊಬ್ಬ ಅಬಕಾರಿ ಗುತ್ತಿಗೆಯನ್ನು ಬಳಸಿಕೊಂಡು ಹೇಗೆ ಹಣ ಮಾಡಿದ ಎಂದು ಪ್ರಚಾರ ಮಾಡಬಹುದು. ಕೇಜ್ರಿವಾಲ್ ಅವರೇ ಇಡೀ ಹಗರಣದ ‘ಕಿಂಗ್‌ಪಿನ್’ ಎಂದು ಇ.ಡಿ. ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿದೆ. ಕೇಜ್ರಿವಾಲ್ ಅವರ ಕಟ್ಟಾ ಹಿಂಬಾಲಕರು ಇದನ್ನು ನಂಬದಿರಬಹುದು. ಆದರೆ ಈ ಪ್ರಕರಣದಿಂದ ಕೇಜ್ರಿವಾಲ್ ಅವರ ‘ಇಮೇಜ್’ಗೆ ಸ್ವಲ್ಪವಾದರೂ ಏಟು ಬಿದ್ದಿದೆ ಎಂದು ಹೇಳಬಹುದು.
ಇನ್ನು ಪಕ್ಷದ ನಾಯಕತ್ವದ ಬಗ್ಗೆ ಹೇಳುವುದಾದರೆ, ಕೇಜ್ರಿವಾಲ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಇಬ್ಬರೂ ಈಗ ಜೈಲಿನಲ್ಲಿದ್ದಾರೆ. ಮೊದಲಿನಿಂದಲೂ ಪಕ್ಷದ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದುದು ಕೇಜ್ರಿವಾಲ್. ಹಾಗಾಗಿ, ಅವರಿಲ್ಲದೆ ಈಗ ಎಎಪಿಯಲ್ಲಿ ತೀರ್ಮಾನ ತೆಗೆದು ಕೊಳ್ಳುವವರು ಯಾರೂ ಇಲ್ಲ. ಅವರು ಪಕ್ಷದ ಏಕೈಕ ‘ಮಾಸ್ ಲೀಡರ್’ ಆಗಿದ್ದರು. ಪಕ್ಷಕ್ಕೆ ವೋಟು ಬರುತ್ತಿದ್ದುದು ಅವರಿಂದ. ಅವರಿಲ್ಲದೆ ಈಗ ಚುನಾವಣಾ ತಂತ್ರ, ಪ್ರಚಾರ, ಸಂಪನ್ಮೂಲ ಕ್ರೋಡೀಕರಣದಂತಹ ಅನೇಕ ವಿಷಯಗಳಲ್ಲಿ ಎಎಪಿ ಭಾರಿ ಹಿನ್ನಡೆ ಅನುಭವಿಸ ಬೇಕಾಗುತ್ತದೆ. ಅವರ ಬಗ್ಗೆ ಜನರಿಗೆ ಸಹಾನುಭೂತಿ ಇದ್ದರೂ ದೆಹಲಿ ಹಾಗೂ ಪಂಜಾಬ್‌ನ ಹೊರಗೆ ಅದನ್ನು ಮತವಾಗಿ ಪರಿವರ್ತನೆ ಮಾಡಲು ಬೇಕಾದ ಸಂಪನ್ಮೂಲ ಹಾಗೂ ತಳಮಟ್ಟದಲ್ಲಿನ ಕಾರ್ಯಕರ್ತರ ‘ನೆಟ್‌ವರ್ಕ್’ ಸಾಮರ್ಥ್ಯ ಪಕ್ಷಕ್ಕಿಲ್ಲ.
ಸದ್ಯದ ಪ್ರಶ್ನೆ ಇರುವುದು, ಕೇಜ್ರಿವಾಲ್ ಮುಂದೆಯೂ ತಿಹಾರ್ ಜೈಲಿನಲ್ಲಿ ಇದ್ದುಕೊಂಡೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವರೇ ಎಂಬುದು. ಇದಕ್ಕೆ ನ್ಯಾಯಾಲಯ ತನ್ನ ಒಪ್ಪಿಗೆ ಸೂಚಿಸಿದೆ. ಆದರೆ ಈ ಬಗ್ಗೆ ಬಿಜೆಪಿಯ ಕಾರ್ಯತಂತ್ರವೇನು? ಈಗಾಗಲೇ ಕೇಸರಿ ಪಕ್ಷ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಪಕ್ಷದ ಮುಂದಿನ ನಡೆಯೇನು ಎನ್ನುವುದು ಕುತೂಹಲಕಾರಿ ಅಂಶ. ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬಹುದೇ? ಇದು ಈಗ ಬರೀ ಊಹಾಪೋಹ. ಬಿಜೆಪಿ ಕೂಡ ಈ ಬಗ್ಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಆದರೆ, ಈ ತಂತ್ರ ತನಗೇ ತಿರುಗುಬಾಣವಾಗಿ ಎಎಪಿಗೆ ಹೆಚ್ಚು ಅನುಕೂಲಕರವಾಗಬಹುದು ಎಂಬುದು ಆ ಪಕ್ಷಕ್ಕೂ ಚೆನ್ನಾಗಿ ಗೊತ್ತಿದೆ. ಇನ್ನೂ ಒಂದು ಊಹಾಪೋಹ ಇದೆ– ದೆಹಲಿಯನ್ನು ಜಮ್ಮು ಮತ್ತು ಕಾಶ್ಮೀರದ ರೀತಿ ಈಗಿರುವ ರಾಜ್ಯ ಸ್ಥಾನಮಾನ ತೆಗೆದು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದು. ಹೀಗಾದರೆ ದೆಹಲಿಯಲ್ಲಿ ಅಸೆಂಬ್ಲಿಯೂ ಇರುವುದಿಲ್ಲ, ಮುಖ್ಯಮಂತ್ರಿಯೂ ಇರುವುದಿಲ್ಲ. ಇದರ ಬಗ್ಗೆ ಕೂಡ ಬಿಜೆಪಿ ಯಾವುದೇ ಹೇಳಿಕೆ ಕೊಟ್ಟಿಲ್ಲ.
ಇನ್ನು ಎಎಪಿ ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟದ ಬಗ್ಗೆ ಹೇಳಬೇಕೆಂದರೆ, ಬಂಧನ ಈ ಮಿತ್ರಪಕ್ಷಗಳನ್ನು ಒಟ್ಟುಗೂಡಿಸಿದೆ. ಈಗಾಗಲೇ ದೆಹಲಿಯಲ್ಲಿ ಈ ಪಕ್ಷಗಳ ನಾಯಕರು ಬೃಹತ್ ಬಹಿರಂಗ ಸಭೆ ಏರ್ಪಡಿಸಿ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿದ್ದಾರೆ.ದೆಹಲಿ ಹಾಗೂ ಪಂಜಾಬ್‌ನಲ್ಲಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಈ ಮಿತ್ರಪಕ್ಷಗಳು ಮತ್ತೆ ಬಂಧನ ಹಾಗೂ ಬಿಜೆಪಿಯ ‘ಸೇಡು ತೀರಿಸಿಕೊಳ್ಳುವ ಮನೋಭಾವ’ದ ಬಗ್ಗೆ ಹೆಚ್ಚು ಒತ್ತು ಕೊಡಬಹುದೇ? ಮುಂಬರುವ ದಿನಗಳಲ್ಲೂ ಈ ರೀತಿಯ ಒಗ್ಗಟ್ಟಿನ ಪ್ರದರ್ಶನವನ್ನು ನೋಡಬಹುದೇ? ಈ ಬಗ್ಗೆ ಈಗಲೇ ಹೇಳುವುದು ಕಷ್ಟವಾಗಬಹುದು. ಏಕೆಂದರೆ, ಈ ಒಂದು ವರ್ಷದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಒಟ್ಟಾಗಿ ಸೇರಿದ್ದೇ ಕಡಿಮೆ. ಪರಸ್ಪರ ಭಾರಿ ಭಿನ್ನಾಭಿಪ್ರಾಯ (ಅಹಂ?) ಹೊಂದಿರುವ ಈ ನಾಯಕರು ಒಟ್ಟಾಗಿ ಸೇರುವುದೇ ಅಪರೂಪ. ಹಿಂದಿನ ಜೂನ್ ತಿಂಗಳಲ್ಲಿ ಪಟ್ನಾದಲ್ಲಿ ಈ ಎಲ್ಲಾ ನಾಯಕರು ಒಟ್ಟುಗೂಡಿ ಇಂಡಿಯಾ ಕೂಟವನ್ನು ಸ್ಥಾಪಿಸಿದ ನಂತರ ಅದೇ ರೀತಿ ಒಟ್ಟಾದದ್ದು ಮೊನ್ನೆ ರಾಮಲೀಲಾ ಮೈದಾನದಲ್ಲಿ ಮಾತ್ರ.
ಪಟ್ನಾ ಸಭೆಯ ಮುಖ್ಯ ರೂವಾರಿ, ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಈಗ ಈ ಕೂಟದಲ್ಲಿಲ್ಲ. ಇತ್ತೀಚೆಗೆ ನಿತೀಶ್ ಇಂಡಿಯಾ ಕೂಟದ ಪ್ರತಿಸ್ಪರ್ಧಿಯಾದ, ಬಿಜೆಪಿ ನಾಯಕತ್ವದ ಎನ್‌ಡಿಎ ಸೇರಿದರು. ಇದರಿಂದ ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಭಾರಿ ಮುಖಭಂಗವಾಯಿತು. ಬಿಜೆಪಿಗೆ ತಾನು ಉತ್ತಮ ಪ್ರತಿಸ್ಪರ್ಧಿ ಎಂದು ತೋರಿಸಬೇಕಿದ್ದ ವಿರೋಧಿ ಗುಂಪು, ಪ್ರತಿ ಹಂತದಲ್ಲೂ ತಾನು ‘ಸೀರಿಯಸ್’ ಆಟಗಾರ ಅಲ್ಲ ಎಂದು ಪದೇ ಪದೇ ತೋರಿಸಿದೆ. ಚುನಾವಣೆ ಸಮಯದಲ್ಲಿ ಒಕ್ಕೂಟದ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಬಹಳ ಮಹತ್ವದ ಕಾರ್ಯ. ಇದು ಪಟ್ನಾ ಸಭೆ ಮುಗಿದ ಕೂಡಲೇ ಪ್ರಾರಂಭವಾಗಬೇಕಿತ್ತು. ಆದರೆ ಇಂಡಿಯಾ ಮೈತ್ರಿಕೂಟದ ಮುಖ್ಯ ಪಕ್ಷ ಕಾಂಗ್ರೆಸ್ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಈ ಕಾರಣದಿಂದ, ಕಾಂಗ್ರೆಸ್- ತೃಣಮೂಲ (ಪಶ್ಚಿಮ ಬಂಗಾಳ) ಹಾಗೂ ಕಾಂಗ್ರೆಸ್- ಎಎಪಿ (ಪಂಜಾಬ್) ನಡುವೆ ಆಗಬೇಕಿದ್ದ ಕ್ಷೇತ್ರ ಹೊಂದಾಣಿಕೆ ಆಗಲೇ ಇಲ್ಲ. ಕೊನೆಗಾಲದಲ್ಲಿ ಆದ ಮಾತುಕತೆ ಫಲ ತರಲಿಲ್ಲ. ಮೈತ್ರಿಕೂಟದಲ್ಲಿದ್ದೂ ಅವು ಈಗ ಎದುರಾಳಿಗಳು. ಉಳಿದ ಕಡೆ, ಅಂದರೆ ಬಿಹಾರ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ಒಂದು ರೀತಿಯ ಮೈತ್ರಿ ಏರ್ಪಟ್ಟಿದೆ.
ಇತ್ತೀಚಿನ ದೆಹಲಿ ಬಹಿರಂಗ ಸಭೆ ಮತ್ತೆ ಒಂದಾಗಲು ಈ ಕೂಟಕ್ಕೆ ಒಂದು ಅವಕಾಶ ಒದಗಿಸಿತ್ತು. ಕೇಜ್ರಿವಾಲ್ ಬಂಧನದ ವಿಷಯವನ್ನು ಜನರ ಹತ್ತಿರಕ್ಕೆ ಕೊಂಡೊಯ್ಯಲು ಇನ್ನೂ ಸಮಯ ಇದೆ– ಅದರಲ್ಲೂ ದೆಹಲಿ ಮತ್ತು ಪಂಜಾಬ್‌ನಲ್ಲಿ. ದೆಹಲಿಯಲ್ಲಿ ಮೇ 25 ಹಾಗೂ ಪಂಜಾಬ್‌ನಲ್ಲಿ ಜೂನ್ 1ರಂದು ಚುನಾವಣೆ ನಡೆಯಲಿದೆ. ಅದಾದ ಮೂರು ದಿನಗಳ ನಂತರ ದೇಶಕ್ಕೆ ಗೊತ್ತಾಗಲಿದೆ, ಕೇಜ್ರಿವಾಲ್ ಬಂಧನದ ಬಗ್ಗೆ ಜನತಾ ನ್ಯಾಯಾಲಯ ಯಾವ ತೀರ್ಪು ಕೊಟ್ಟಿದೆ ಎಂಬುದು.
ಲೇಖಕ: ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.