ADVERTISEMENT

ಪ್ರೇಮ ‘ಪುಷ್ಪ’ಕ್ಕೆ ಕಾನೂನಿನ ‘ಬೇಲಿ’ಯೇ?

ರಕ್ಷಿತ್ ಪೊನ್ನಾಥಪುರ
Published 7 ನವೆಂಬರ್ 2020, 19:30 IST
Last Updated 7 ನವೆಂಬರ್ 2020, 19:30 IST
ಕಲೆ: ಬಸವರಾಜಾಚಾರ್‌ ಕೆ.ಆರ್‌.
ಕಲೆ: ಬಸವರಾಜಾಚಾರ್‌ ಕೆ.ಆರ್‌.   

ಮದುವೆಯನ್ನೇ ಗುರಿಯಾಗಿಸಿಕೊಂಡು ನಡೆಯುವ ಮತಾಂತರ ಸರಿಯಲ್ಲ ಎಂದು ಅಲಹಾಬಾದ್‌ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಬಲವಂತ’ದ ಮತಾಂತರ ಮತ್ತು ಮುಸ್ಲಿಂ ಪುರುಷ ಹಾಗೂ ಹಿಂದೆ ಹಿಂದೂ ಆಗಿದ್ದ ಸ್ತ್ರೀಯ ನಡುವಣ ಮದುವೆ ತಡೆಯುವುದಕ್ಕಾಗಿ ‘ಲವ್‌ ಜಿಹಾದ್‌ ಕಾನೂನು’ ತರುವ ವಿಚಾರದ ಬಗ್ಗೆ ಮಾತನಾಡುವ ಅವಕಾಶವಾಗಿ ಬಿಜೆಪಿ ಆಳ್ವಿಕೆ ಇರುವ ರಾಜ್ಯಗಳು ನ್ಯಾಯಾಲಯದ ಅಭಿಪ್ರಾಯವನ್ನು ಬಳಸಿಕೊಳ್ಳುತ್ತಿವೆ.

ಹೈಕೋರ್ಟ್‌ನ ಅಭಿಪ್ರಾಯವನ್ನು ಮೊದಲಿಗೆ ಬಳಸಿಕೊಂಡವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಪ್ರೀತಿಯ ಆಮಿಷದ ಮೂಲಕ ಮಹಿಳೆಯರನ್ನು ಆಕರ್ಷಿಸಿ ಮದುವೆಗೆ ಮೊದಲು ಅವರನ್ನು ಮತಾಂತರ ಮಾಡಿಸುವವರು ಕಾನೂನಿನ ತೀವ್ರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ರ‍್ಯಾಲಿಯೊಂದರಲ್ಲಿ ಯೋಗಿ ಎಚ್ಚರಿಕೆಯನ್ನೂ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಕಾನೂನು ರಚಿಸುವ ಬಗ್ಗೆ ತಮ್ಮ ಸರ್ಕಾರ ಯೋಚಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಇಂತಹುದೇ ಕಾನೂನಿನ ಬಗ್ಗೆ ಯೋಚನೆ ಮಾಡುತ್ತಿರುವುದಾಗಿ ಮಧ್ಯ ಪ್ರದೇಶ ಮತ್ತು ಹರಿಯಾಣದ ಮುಖ್ಯಮಂತ್ರಿಗಳೂ ಹೇಳಿದ್ದಾರೆ. ಬಿಜೆಪಿ ಆಳ್ವಿಕೆ ಇರುವ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೂ ಈ ರೀತಿಯ ಕಾನೂನು ತರುವ ಭರವಸೆ ಕೊಟ್ಟಿದ್ದಾರೆ.

ನವವಿವಾಹಿತ ದಂಪತಿಯು, ಮಹಿಳೆಯ ಮನೆಯವರಿಂದ ಬೆದರಿಕೆ ಇದೆ ಎಂಬ ಕಾರಣಕ್ಕೆ ಪೊಲೀಸ್ ರಕ್ಷಣೆ ಕೋರಿ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮದುವೆಗೆ ಒಂದು ತಿಂಗಳ ಮೊದಲು ಮಹಿಳೆಯು ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದರು. ದಂಪತಿಗೆ ಪೊಲೀಸ್‌ ರಕ್ಷಣೆ ಒದಗಿಸಲು ನ್ಯಾಯಾಲಯ ನಿರಾಕರಿಸಿದ್ದು ಮಾತ್ರವಲ್ಲದೆ, ಧಾರ್ಮಿಕ ವಿಚಾರಗಳ ಬಗ್ಗೆ ನಂಬಿಕೆ ಅಥವಾ ತಿಳಿವಳಿಕೆ ಇಲ್ಲದೆ ಆಗುವ ಮತಾಂತರವು ಸ್ವೀಕಾರಾರ್ಹ ಅಲ್ಲ ಎಂದಿದೆ. ಇಲ್ಲಿನ ಆಸಕ್ತಿಕರ ವಿಚಾರವೆದಂದರೆ, ಮುಸ್ಲಿಂ ಮಹಿಳೆಯು ಹಿಂದೂ ಧರ್ಮಕ್ಕೆ ಮತಾಂತರ ಆಗಿರುವ ವಿಚಾರವನ್ನೇ ‘ಲವ್‌ ಜಿಹಾದ್‌’ ಬಗ್ಗೆ ಮಾತನಾಡಲು ಬಳಸಿಕೊಳ್ಳಲಾಗುತ್ತಿದೆ. ಹಿಂದೂ ಮಹಿಳೆಯರು ಇಸ್ಲಾಂಗೆ ಮತಾಂತರವಾಗಿ ಮುಸ್ಲಿಂ ಪುರುಷನನ್ನು ಮದುವೆ ಆಗುವುದನ್ನು ಉಲ್ಲೇಖಿಸುವುದಕ್ಕೆ ‘ಲವ್‌ ಜಿಹಾದ್‌’ ಎಂಬ ಪದವನ್ನು ಕೆಟ್ಟ ಅರ್ಥದಲ್ಲಿ ಬಳಸಲಾಗುತ್ತಿದೆ.

ADVERTISEMENT

ಮತಾಂತರ ಎಂಬುದು ಭಾರತದಲ್ಲಿ ದಶಕಗಳಿಂದ ಚರ್ಚೆ ಆಗುತ್ತಿರುವ ವಿಚಾರ; ಈ ಅವಧಿಯಲ್ಲಿ ನ್ಯಾಯಾಲಯಗಳು ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ಕೂಡ ಈ ವಿಚಾರದಲ್ಲಿ ನೀಡಿವೆ. 1970ರ ದಶಕದಲ್ಲಿ ಒಡಿಶಾ ಮತ್ತು ಮಧ್ಯ ಪ್ರದೇಶ ಸರ್ಕಾರಗಳು, ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಮತಾಂತರವನ್ನು ನಿಷೇಧಿಸಿ ಕಾನೂನು ರಚಿಸಿದ್ದವು. ಜನರ ಆತ್ಮಸಾಕ್ಷಿಯ ಬಗ್ಗೆ ಮಾತನಾಡುವ ಸಂವಿಧಾನದ 25(1)ನೇ ವಿಧಿಯಲ್ಲಿ ಈ ನಿರ್ಬಂಧಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಎರಡೂ ಕಾಯ್ದೆಗಳು ಆಯಾ ರಾಜ್ಯದ ಹೈಕೋರ್ಟ್‌ನ ಪರಿಶೀಲನೆಗೆ ಒಳಪಟ್ಟವು. ಈ ರೀತಿಯ ಕಾನೂನು ಮಾಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿಯೇ ಇಲ್ಲ ಎಂದು ಒಡಿಶಾ ಹೈಕೋರ್ಟ್ ಹೇಳಿತು. ಮತಾಂತರಕ್ಕೆ ಸಂಬಂಧಿಸಿ ಕಾಯ್ದೆಯಲ್ಲಿರುವ ಕೆಲವು ವಿಚಾರಗಳ ವ್ಯಾಖ್ಯಾನ– ಉದಾಹರಣೆಗೆ ಪ್ರಲೋಭನೆ– ಅತ್ಯಂತ ಗೊಂದಲಮಯವಾಗಿದ್ದು, ದುರ್ಬಳಕೆಗೆ ಅವಕಾಶ ಕೊಡುವಂತಿದೆ ಎಂದು ಹೇಳಿತು. ಆದರೆ, ಮಧ್ಯ ಪ್ರದೇಶ ಹೈಕೋರ್ಟ್‌ ಆ ರಾಜ್ಯವು ರಚಿಸಿದ ಕಾನೂನನ್ನು ಎತ್ತಿ ಹಿಡಿಯಿತು. ಸಂವಿಧಾನದ 25(1)ನೇ ವಿಧಿಯಲ್ಲಿ ಹೇಳಿರುವಂತೆ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ನಿರ್ಬಂಧದ ವ್ಯಾಪ್ತಿಯ ಒಳಗೇ ಇದೆ ಎಂದಿತು. ಹೈಕೋರ್ಟ್‌ಗಳ ಈ ಪರಸ್ಪರ ವಿರುದ್ಧವಾದ ತೀರ್ಪುಗಳಿಂದಾಗಿ ವಿಷಯವು ಸುಪ‍್ರೀಂ ಕೋರ್ಟ್ ತಲುಪಿತು. ಮಧ್ಯ ಪ್ರದೇಶ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ಪ್ರಲೋಭನೆ ಮತ್ತು ವಂಚನೆಯ ಮೂಲಕ ಮತಾಂತರ ಮಾಡುವುದು ನಾಗರಿಕರ ಆತ್ಮಸಾಕ್ಷಿಯ ಉಲ್ಲಂಘನೆ ಎಂದು ಹೇಳಿತು. ಬಲವಂತದ ಮತಾಂತರ ತಡೆಯು ಸಾರ್ವಜನಿಕ ಸುವ್ಯವಸ್ಥೆ ಕಾಯ್ದುಕೊಳ್ಳುವುದರ ಭಾಗವೇ ಆಗಿರುವುದರಿಂದ ರಾಜ್ಯಗಳಿಗೆ ಇಂತಹ ಕಾನೂನು ರೂಪಿಸುವ ಅಧಿಕಾರ ಇದೆ ಎಂದೂ ಹೇಳಿತು. ಆದರೆ, ವಿವಾಹದ ಉದ್ದೇಶಕ್ಕಾಗಿ ಮತಾಂತರದ ಬಗ್ಗೆ ಯಾವುದೇ ಅಭಿಪ‍್ರಾಯ ವ್ಯಕ್ತಪಡಿಸಲಿಲ್ಲ.

ಅಲಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ವ್ಯಕ್ತಪಡಿಸಿದ ತನ್ನ ಅಭಿಪ್ರಾಯಕ್ಕೆ, ಹಿಂದೆ ತಾನೇ ನೀಡಿದ ತೀರ್ಪನ್ನು ಪೂರ್ವನಿದರ್ಶನವಾಗಿ ಬಳಸಿಕೊಂಡಿದೆ. ಇಸ್ಲಾಂಗೆ ಮತಾಂತರವಾಗಿ ಇಸ್ಲಾಂ ಪದ್ಧತಿ ಪ್ರಕಾರ ಮದುವೆ ಆದ ಕೆಲವು ಮಹಿಳೆಯರು ಪೊಲೀಸ್‌ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2014ರಲ್ಲಿ ಈ ನ್ಯಾಯಾಲಯವು ವಜಾ ಮಾಡಿತ್ತು. ಇಸ್ಲಾಂನ ಮೂಲಭೂತ ನಂಬಿಕೆಗಳ ಬಗ್ಗೆಯೇ ಅವರಿಗೆ ಅರಿವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡ ನ್ಯಾಯಾಲಯವು ಧರ್ಮದ ಬಗೆಗಿನ ನಂಬಿಕೆ ಮತ್ತು ಜ್ಞಾನವು ಮುಸ್ಲಿಂ ಆಗುವುದಕ್ಕೆ ಬೇಕಾದ ಪೂರ್ವಭಾವಿ ಅಂಶಗಳು. ಹಾಗಾಗಿ, ಅಂತಹ ನಂಬಿಕೆ, ಜ್ಞಾನ ಇಲ್ಲದವರ ಮತಾಂತರ, ತರುವಾಯದ ವಿವಾಹಗಳೆರಡೂ ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿತು.

ಸುಪ್ರೀಂ ಕೋರ್ಟ್‌ ಹಿಂದೆ ನೀಡಿದ್ದ ತೀರ್ಪೊಂದನ್ನು ಕೂಡ ಅಲಹಾಬಾದ್‌ ಹೈಕೋರ್ಟ್‌ ಉಲ್ಲೇಖಿಸಿದೆ. ಇದು ಲಿಲ್ಲಿ ಥಾಮಸ್‌ ಪ್ರಕರಣ; ಹಿಂದೂ ವ್ಯಕ್ತಿಯೊಬ್ಬ ಎರಡನೇ ಮದುವೆ ಆಗುವುದಕ್ಕಾಗಿ ಇಸ್ಲಾಂಗೆ ಮತಾಂತರ ಆಗಿದ್ದ. ಆತ ಮತಾಂತರ ಆಗಿದ್ದಾನೆ ಎಂಬುದು ವಿಚ್ಛೇದನ ಕೇಳಲು ಕಾನೂನುಬದ್ಧ ನೆಲೆಯೇ ಆಗಿದೆ. ಆದರೆ, ಆತ ಹಿಂದೂ ಕಾನೂನು ಪ್ರಕಾರ ಆಗಿದ್ದ ಮೊದಲ ಮದುವೆಯು ಮತಾಂತರದಿಂದಾಗಿ ತನ್ನಿಂತಾನೇ ಅಸಿಂಧು ಆಗದು; ವಿವಾಹದ ಉದ್ದೇಶಕ್ಕಾಗಿಯೇ ನಡೆಯುವ ಮತಾಂತರವು ಸ್ವೀಕಾರಾರ್ಹ ಅಲ್ಲ ಎಂದೂ ಸುಪ್ರೀಂ ಕೋರ್ಟ್‌ ಹೇಳಿತ್ತು. ಅಲಹಾಬಾದ್‌ ಹೈಕೋರ್ಟ್‌ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಕುರ್‌–ಆನ್‌ನ ಸೂಕ್ತಿಯೊಂದನ್ನು ಕೂಡ ಉಲ್ಲೇಖಿಸಿದೆ. ಇಸ್ಲಾಂನ ಸಿದ್ಧಾಂತಗಳ ಬಗ್ಗೆ ಅರಿವಿರುವ ಮಹಿಳೆಯನ್ನು ಮಾತ್ರ ಮುಸ್ಲಿಂ ಪುರುಷ ಮದುವೆ ಆಗಲು ಅವಕಾಶ ಇದೆ ಎಂದು ಈ ಸೂಕ್ತಿಯು ಹೇಳುತ್ತದೆ. ವಿವಾಹದ ಉದ್ದೇಶದಿಂದಲೇ ಮಹಿಳೆಯು ಮತಾಂತರ ಆಗಿದ್ದು, ಇಸ್ಲಾಂನ ತತ್ವ ಸಿದ್ಧಾಂತಗಳ ಅರಿವಿಲ್ಲ ಎಂಬುದನ್ನೇ ಮದುವೆಯು ಕಾನೂನುಬಾಹಿರ ಎಂಬ ನಿರ್ಧಾರಕ್ಕೆ ಬರಲು ನ್ಯಾಯಾಲಯ‌ ಬಳಸಿಕೊಂಡಿತ್ತು.

ಅಲಹಾಬಾದ್‌ ಹೈಕೋರ್ಟ್‌ನ ಇತ್ತೀಚಿನ ಪ್ರಕರಣದಲ್ಲಿ ಇದನ್ನೇ ಪೂರ್ವ ನಿದರ್ಶನವಾಗಿ ಬಳಸಿದ್ದು ಲೋಪದಿಂದ ಕೂಡಿದೆ ಎಂದು ಹಲವು ಜನರು ವಾದಿಸುತ್ತಿದ್ದಾರೆ. ಏಕೆಂದರೆ, ಇಲ್ಲಿ ಮಹಿಳೆಯು ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಹಿಂದೂ ವಿವಾಹ ಕಾನೂನಿನ ಪ್ರಕಾರ, ಮಹಿಳೆಯು ಮದುವೆಗೆ ಅರ್ಹ ಆಗಬೇಕಿದ್ದರೆ ಇಂತಹ ಸಿದ್ಧಾಂತಗಳನ್ನು ತಿಳಿದಿರಬೇಕು ಎಂಬ ಪೂರ್ವಭಾವಿ ಷರತ್ತು ಇಲ್ಲ. ಅಷ್ಟೇ ಅಲ್ಲದೆ, ಅಲಹಾಬಾದ್‌ ಹೈಕೋರ್ಟ್‌ನ ಮುಂದೆ ಬಂದ ಎರಡೂ ಪ್ರಕರಣಗಳು ಪೊಲೀಸ್‌ ರಕ್ಷಣೆ ಕೋರಿದ್ದಾಗಿವೆ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಈ ವಯಸ್ಕ ಮಹಿಳೆಯರು ತಮ್ಮ ಇಚ್ಛೆ ಮತ್ತು ಸಮ್ಮತಿಯಂತೆ ಮದುವೆ ಆಗಿದ್ದಾರೆ, ಅವರ ಸಮ್ಮತಿ ಮತ್ತು ಸ್ವಯಂಪ್ರೇರಿತ ನಿರ್ಧಾರದ ಬಗ್ಗೆ ಯಾವುದೇ ತಕರಾರು ಇಲ್ಲ ಎಂಬುದನ್ನೂ ಗಮನಿಸಬೇಕು. ಈ ಪ್ರಕರಣದಲ್ಲಿ ನ್ಯಾಯಾಲಯವು ತನ್ನ ವ್ಯಾಪ್ತಿ ಮೀರಿ ವರ್ತಿಸಿ ಧಾರ್ಮಿಕ ವ್ಯಾಖ್ಯಾನಗಳನ್ನು ನೀಡಿದೆ; ಮತಾಂತರ ಮತ್ತು ಧಾರ್ಮಿಕ ಸಿದ್ಧಾಂತಗಳ ಮೇಲಿನ ನಂಬಿಕೆಯ ಬಗ್ಗೆ ವ್ಯಾಖ್ಯಾನ ಕೊಟ್ಟಿದೆ. ಇದು, ಜನರ ವೈಯಕ್ತಿಕ ಆಯ್ಕೆಯ ವಿಚಾರಗಳಲ್ಲಿ ಮಧ್ಯಪ್ರವೇಶ ನಡೆಸಲು ಮತ್ತು ಬಹುಶಃ ಅದನ್ನು ನಿಯಂತ್ರಿಸಲು ಕೂಡ ರಾಜಕೀಯ ಪಕ್ಷಗಳಿಗೆ ಅವಕಾಶವೊಂದನ್ನು ಸೃಷ್ಟಿಸಿದೆ. ಇದು ಅತ್ಯಂತ ನಾಜೂಕಾದ ವಿಚಾರ. ತನ್ನ ಅಭಿಪ್ರಾಯವು ದುಷ್ಟ ಕೋಮುವಾದ ರಾಜಕಾರಣಕ್ಕೆ ಅಸ್ತ್ರ ಒದಗಿಸಬಹುದು ಎಂಬ ಅರಿವು ನ್ಯಾಯಾಲಯಕ್ಕೆ ಇರಬೇಕಿತ್ತು.

ರಾಜಕಾರಣವನ್ನು ಬದಿಗಿಟ್ಟು ನೋಡಿದರೂ, ವ್ಯಕ್ತಿಗಳ (ಮುಖ್ಯವಾಗಿ ಮಹಿಳೆಯರು) ಧರ್ಮದ ಆಚರಣೆ ಮತ್ತು ತಮ್ಮ ಇಷ್ಟದ ವ್ಯಕ್ತಿಯನ್ನು ಮದುವೆ ಆಗುವ ವೈಯಕ್ತಿಕ ಆಯ್ಕೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬೇಕು ಮತ್ತು ಅದನ್ನು ಸರ್ಕಾರ ನಿಯಂತ್ರಿಸಬೇಕು ಎಂದು ಬಯಸುವವರು ಹಾಗೂ ಇಂತಹ ಆಯ್ಕೆಗಳಲ್ಲಿ ತಮಗೆ ಸ್ವಾತಂತ್ರ್ಯ ಇರಬೇಕು ಹಾಗೂ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬ ಮನೋಭಾವದ ಜನರ ನಡುವಣ ಸಂಘರ್ಷ ಇದು. ‘ಶೋಷಣೆಯಿಂದ ಮಹಿಳೆಯರ ರಕ್ಷಣೆ’ ಎಂಬುದನ್ನು ಈ ಕಾಯ್ದೆಯನ್ನು ಸಮರ್ಥಿಸುವವರು ಬಳಸಬಹುದು. ಆದರೆ, ವಾಸ್ತವದಲ್ಲಿ ಇದು ಜನರ ಧಾರ್ಮಿಕ ನಂಬಿಕೆ ಹಾಗೂ ಮದುವೆಯಾಗುವ ಸಂಗಾತಿಯ ಆಯ್ಕೆಯ ವಿಚಾರದಲ್ಲಿ ಸರ್ಕಾರ ಹಾಗೂ ಪೊಲೀಸರಿಗೆ ಹಸ್ತಕ್ಷೇಪದ ಅವಕಾಶವನ್ನು ಸೃಷ್ಟಿಸುತ್ತದೆ. ಇಲ್ಲಿ ಹಲವು ಪ್ರಶ್ನೆಗಳೂ ಇವೆ– ಕಾನೂನು ಸಮ್ಮತವಲ್ಲದ ‘ಲವ್‌ ಜಿಹಾದ್‌’ನಂತಹ ನುಡಿಗಟ್ಟನ್ನು ಕಾನೂನು ಹೇಗೆ ವ್ಯಾಖ್ಯಾನಿಸುತ್ತದೆ, ಪ್ರಕರಣವೊಂದು ಈ ವ್ಯಾಖ್ಯೆಯ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು ನ್ಯಾಯಾಲಯವು ತೀರ್ಮಾನಿಸುವುದು ಹೇಗೆ ಎಂಬುದು ಅಂತಹ ಪ್ರಶ್ನೆಗಳು. ಕಾನೂನು ಸಿದ್ಧಗೊಂಡ ಬಳಿಕವಷ್ಟೇ ಈ ಅಂಶಗಳು ರೂಪುಗೊಳ್ಳಲು ಸಾಧ್ಯ.

ಲೇಖಕ: ಆರ್ಥಿಕ ಕಾರ್ಯನೀತಿ ಸಂಸ್ಥೆಯೊಂದರಲ್ಲಿ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.