ಉಕ್ರೇನ್ ಮೇಲೆ ರಷ್ಯಾದ ಅತಿಕ್ರಮಣದ ನಂತರ, ಭಾರತವು ರಷ್ಯಾದಿಂದ ಮಾಡಿಕೊಳ್ಳುತ್ತಿರುವ ಕಚ್ಚಾತೈಲದ ಆಮದಿನಲ್ಲಿ ಭಾರಿ ಏರಿಕೆಯಾಗಿದೆ. ಒಪೆಕ್ (ಪೆಟ್ರೋಲಿಯಂ ರಫ್ತು ದೇಶಗಳ ಸಂಘ) ದೇಶಗಳಿಂದ ಖರೀದಿಸಲಾಗುತ್ತಿರುವ ಕಚ್ಚಾತೈಲಕ್ಕಿಂತ ಕಡಿಮೆ ಬೆಲೆಯಲ್ಲಿ, ರಷ್ಯಾ ಕಚ್ಚಾತೈಲ ಪೂರೈಕೆ ಮಾಡುತ್ತಿದೆ. ಇದರಿಂದ ಭಾರತೀಯ ಕಂಪನಿಗಳು ರಷ್ಯಾದ ಕಚ್ಚಾತೈಲಕ್ಕೆ ಮುಗಿಬಿದ್ದಿವೆ.ಕಡಿಮೆ ದರದಲ್ಲಿ ಕಚ್ಚಾತೈಲ ದೊರೆಯುತ್ತಿರುವುದರಿಂದಲೇ ರಷ್ಯಾದಿಂದ ಹೆಚ್ಚು ಖರೀದಿಸಲಾಗುತ್ತಿದೆ. ಆದರೆ, ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಸಾಮಾನ್ಯವಾಗಿ ಭಾರತವು ಈವರೆಗೆ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ಖರೀದಿಸುತ್ತಿರಲಿಲ್ಲ. 2022ರ ಫೆಬ್ರುವರಿವರೆಗೂ ಇದೇ ಸ್ಥಿತಿ ಇತ್ತು. ಉಕ್ರೇನ್ ಅತಿಕ್ರಮಣದ ನಂತರ, ಬಹುತೇಕ ದೇಶಗಳು ರಷ್ಯಾದ ಜತೆಗೆ ಆರ್ಥಿಕ ಸಂಬಂಧವನ್ನು ಕಡಿದುಕೊಂಡಿವೆ. ಇದರಿಂದಾಗಿ, ಜಾಗತಿಕ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ (ಪ್ರತಿ ಬ್ಯಾರಲ್‌ಗೆ ಅಂದಾಜು 40 ಡಾಲರ್‌ನಷ್ಟು ರಿಯಾಯಿತಿ ದರದಲ್ಲಿ) ಪೂರೈಕೆ ಮಾಡುವುದಾಗಿ ರಷ್ಯಾ ಹೇಳಿತ್ತು. ಇದನ್ನು ಭಾರತ ಸರ್ಕಾರ ಒಪ್ಪಿಕೊಂಡಿತ್ತು. ಹೀಗಾಗಿ ದೇಶದ ಎಲ್ಲಾ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣ ಕಂಪನಿಗಳು ಮತ್ತು ಖಾಸಗಿ ತೈಲ ಸಂಸ್ಕರಣ ಕಂಪನಿಗಳು ರಷ್ಯಾದಿಂದ ಕಚ್ಚಾತೈಲ ಆಮದನ್ನು ಹೆಚ್ಚಿಸಿಕೊಂಡಿವೆ.
2021–22ನೇ ಸಾಲಿನಲ್ಲಿ ಫೆಬ್ರುವರಿ 24ರವರೆಗೆ ರಷ್ಯಾದಿಂದ ಒಟ್ಟು 1.6 ಕೋಟಿ ಬ್ಯಾರಲ್ ಕಚ್ಚಾತೈಲವನ್ನಷ್ಟೇ ಖರೀದಿಸಲಾಗಿತ್ತು. ಆದರೆ, ಫೆಬ್ರುವರಿ 24ರಿಂದ ಮೇ 26ರವರೆಗೆ 3.4 ಕೋಟಿ ಬ್ಯಾರಲ್ ಕಚ್ಚಾತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ಹಿಂದಿನ ಆರ್ಥಿಕ ವರ್ಷದ ಮೊದಲ 11 ತಿಂಗಳಲ್ಲಿ ಖರೀದಿಸಿದ್ದ ಕಚ್ಚಾತೈಲಕ್ಕಿಂತ, ಶೇ 112ರಷ್ಟು ಹೆಚ್ಚುವರಿ ಕಚ್ಚಾತೈಲವನ್ನು ನಂತರದ ಮೂರು ತಿಂಗಳಲ್ಲಿ ಖರೀದಿಸಲಾಗಿದೆ. ಜೂನ್ ತಿಂಗಳಿಗಾಗಿ ಎಲ್ಲಾ ಕಂಪನಿಗಳು ಮತ್ತೆ 2.8 ಕೋಟಿ ಬ್ಯಾರಲ್ ಕಚ್ಚಾತೈಲವನ್ನು ರಷ್ಯಾದಿಂದ ಖರೀದಿಸಿವೆ. ಅದು ಇನ್ನಷ್ಟೇ ಪೂರೈಕೆಯಾಗಬೇಕಿದೆ. ಅಂದರೆ, ಫೆಬ್ರುವರಿ 24ರಿಂದ ಜೂನ್ ಅಂತ್ಯದವರೆಗೆ ಒಟ್ಟು 6.2 ಕೋಟಿ ಬ್ಯಾರಲ್ ಕಚ್ಚಾತೈಲವನ್ನು ಖರೀದಿಸಲಾಗಿದೆ. 2021–22ನೇ ಆರ್ಥಿಕ ವರ್ಷದ ಮೊದಲ 11 ತಿಂಗಳಲ್ಲಿ ರಷ್ಯಾದಿಂದ ಖರೀದಿಸಿದ್ದ ಕಚ್ಚಾತೈಲದ ಪ್ರಮಾಣಕ್ಕೆ ಹೋಲಿಸಿದರೆ, ನಂತರದ ನಾಲ್ಕು ತಿಂಗಳಲ್ಲಿ ಖರೀದಿಯಾಗಿರುವ ಕಚ್ಚಾತೈಲದ ಪ್ರಮಾಣದಲ್ಲಿ
ಶೇ 287ರಷ್ಟು ಏರಿಕೆಯಾಗಿದೆ.
ಇದರ ಮಧ್ಯೆ, ಮುಂದಿನ ಆರು ತಿಂಗಳವರೆಗೆ ಕಡಿಮೆ ದರದಲ್ಲಿ ಕಚ್ಚಾತೈಲ ಖರೀದಿಸಲು ಭಾರತದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣ ಕಂಪನಿಗಳು ರಷ್ಯಾದ ತೈಲ ಕಂಪನಿ ರೋಸ್‌ನೆಫ್ಟ್ ಜತೆಗೆ ಮಾತುಕತೆ ನಡೆಸಿವೆ. ಇಂಡಿಯನ್ ಆಯಿಲ್ ಕಂಪನಿಯು ಪ್ರತಿ ತಿಂಗಳು 60 ಲಕ್ಷ ಬ್ಯಾರಲ್, ಬಿಪಿಸಿಎಲ್ ಪ್ರತಿ ತಿಂಗಳು 40 ಲಕ್ಷ ಬ್ಯಾರಲ್ ಮತ್ತು ಎಚ್‌ಪಿಸಿಎಲ್ ಕಂಪನಿಯು ಪ್ರತಿ ತಿಂಗಳು 30 ಲಕ್ಷ ಬ್ಯಾರಲ್ ಕಚ್ಚಾತೈಲವನ್ನು ಖರೀದಿಸುವ ಪ್ರಸ್ತಾವವನ್ನು ರೋಸ್‌ನೆಫ್ಟ್ ಮುಂದೆ ಇರಿಸಿವೆ. ಸರ್ಕಾರಿ ಸ್ವಾಮ್ಯದ ಮತ್ತೊಂದು ಕಂಪನಿ ಎಂಆರ್‌ಪಿಎಲ್ ಎಷ್ಟು ಬ್ಯಾರಲ್ ಖರೀದಿಸುವ ಪ್ರಸ್ತಾವ ಇರಿಸಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಮಾತುಕತೆಯು ಯಾವ ಹಂತದಲ್ಲಿದೆ ಎಂಬುದರ ವಿವರ ಲಭ್ಯವಾಗಿಲ್ಲ. ಆದರೆ ಜೂನ್ ಅಂತ್ಯದ ವೇಳೆಗೆ ಪೂರೈಕೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಕಚ್ಚಾ ತೈಲ ದರದಲ್ಲಿ ಇನ್ನಷ್ಟು ಕಡಿತ ಮಾಡಬೇಕು. ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗೂ ಕಡಿಮೆಗೆ ತೈಲ ಪೂರೈಸಬೇಕು ಎಂಬ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಭಾರತ ಸರ್ಕಾರದ ಸ್ವಾಮ್ಯದ ಹಿಂದುಸ್ತಾನ್ ಪೆಟ್ರೋಲಿಯಿಂದ ಕಾರ್ಪೊರೇಷನ್‌ನ (ಎಚ್‌ಪಿಸಿಎಲ್) ಅಧ್ಯಕ್ಷ ಪುಷ್ಪಕುಮಾರ್ ಜೋಶಿ ಹೇಳಿದ್ದಾರೆ.
ರಷ್ಯಾದ ಕಚ್ಚಾತೈಲ ಆಮದಿನಲ್ಲಿ ಶೇ 70ಕ್ಕೂ ಹೆಚ್ಚು ಪಾಲು ಹೊಂದಿರುವ ಭಾರತದ ಖಾಸಗಿ ತೈಲ ಸಂಸ್ಕರಣ ಕಂಪನಿಗಳು, ಮುಂದಿನ ತಿಂಗಳುಗಳಲ್ಲಿ ರಷ್ಯಾದಿಂದ ಎಷ್ಟು ಕಚ್ಚಾತೈಲ ಖರೀದಿಸಲಿವೆ ಎಂಬುದರ ಮಾಹಿತಿ ದೊರೆತಿಲ್ಲ. ಆದರೆ, ಜೂನ್‌ನಲ್ಲಿ ಪೂರೈಕೆಯಾಗಬೇಕಿರುವ ಕಚ್ಚಾತೈಲದ ಖರೀದಿಯಲ್ಲೇ ಏರಿಕೆಯಾಗಿದೆ. ಹೀಗಾಗಿ ನಂತರದ ತಿಂಗಳುಗಳಲ್ಲಿ, ರಿಯಾಯಿತಿ ದರದಲ್ಲೇ ರಷ್ಯಾದ ಕಚ್ಚಾತೈಲ ಖರೀದಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ರಿಯಾಯಿತಿ ದರದ ಲಾಭ ಭಾರತದ ಚಿಲ್ಲರೆ ಗ್ರಾಹಕರಿಗೆ ದೊರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪೆಟ್ರೋಲಿಯಂ ಉತ್ಪನ್ನ ರಫ್ತು ಭಾರಿ ಹೆಚ್ಚಳ
ಭಾರತಕ್ಕೆ ರಿಯಾಯಿತಿ ದರದಲ್ಲಿ ಕಚ್ಚಾತೈಲ ಲಭ್ಯವಿರುವ ಕಾರಣ, ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾತೈಲದ ಪ್ರಮಾಣ ಏರಿಕೆಯಾಗಿದೆ. ಹೆಚ್ಚು ಪ್ರಮಾಣದಲ್ಲಿ ಖರೀದಿಸುತ್ತಿರುವ ಭಾರತ, ಅದನ್ನು ಸಂಸ್ಕರಿಸಿ ಇತರ ದೇಶಗಳಿಗೆ ರಫ್ತು ಮಾಡುವ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿರುವುದು ಕಳೆದ ಮೂರು ತಿಂಗಳ ದತ್ತಾಂಶಗಳಿಂದ ಸ್ಪಷ್ಟವಾಗುತ್ತಿದೆ.
ಅತಿಹೆಚ್ಚು ಪೆಟ್ರೋಲಿಯಂ ತೈಲ ಬಳಕೆದಾರ ದೇಶಗಳಲ್ಲಿ ಅಮೆರಿಕ, ಚೀನಾ ನಂತರದ ಸ್ಥಾನದಲ್ಲಿ ಭಾರತ ಇದೆ. ಭಾರತವು ತನ್ನ ಅಗತ್ಯದ ಶೇ 85ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾಗೆಯೇ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳನ್ನು, ಸಿಂಗಪುರ, ಥಾಯ್ಲೆಂಡ್ ಸೇರಿದಂತೆ ಸುಮಾರು 100 ದೇಶಗಳಿಗೆ ರಫ್ತು ಮಾಡುತ್ತಿದೆ.
ಫೆಬ್ರುವರಿಯಲ್ಲಿ ₹30,820 ಕೋಟಿ ಮೌಲ್ಯದ ತೈಲವನ್ನು ಭಾರತ ರಫ್ತು ಮಾಡಿದೆ. ರಫ್ತು ಮೌಲ್ಯವು ಮಾರ್ಚ್ ವೇಳೆಗೆ ₹55 ಸಾವಿರ ಕೋಟಿಗೆ ಹಾಗೂ ಏಪ್ರಿಲ್ ವೇಳೆಗೆ ₹62 ಸಾವಿರ ಕೋಟಿಗೆ ಏರಿಕೆಯಾಗಿದೆ.
ಭಾರತವು ರಫ್ತು ಮಾಡುವ ಸರಕುಗಳ ಪೈಕಿ ಪೆಟ್ರೋಲಿಯಂ ಉತ್ಪನ್ನಗಳ ಪಾಲು ಹೆಚ್ಚಳವಾಗಿದೆ. ಕಳೆದ ಮೂರು ತಿಂಗಳಲ್ಲಿ ರಷ್ಯಾದಿಂದ ತೈಲವನ್ನು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಜತೆಗೆ ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರಿ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ಹೀಗಾಗಿ, ಒಟ್ಟು ರಫ್ತಿನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪಾಲು ಗಣನೀಯವಾಗಿ ಹೆಚ್ಚಳವಾಗಿದೆ. ಫೆಬ್ರುವರಿಯಲ್ಲಿ ಶೇ 12ರಷ್ಟಿದ್ದ ಪಾಲು ಏಪ್ರಿಲ್ ವೇಳೆಗೆ ಶೇ 20ಕ್ಕೆ ಜಿಗಿದಿದೆ. ಈ ಮೂಲಕ ವಿದೇಶಿ ವಿನಿಮಯ ಗಳಿಕೆಯೂ ಹೆಚ್ಚಳವಾಗಿದೆ.
ನಿರ್ಬಂಧದ ಅಪಾಯ
ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ತಿರುಗಿಬಿದ್ದಿದ್ದು, ರಷ್ಯಾದ ಕಚ್ಚಾ ತೈಲ ಖರೀದಿಗೆ ನಿರ್ಬಂಧ ವಿಧಿಸಿವೆ. ಅಮೆರಿಕ ಸೇರಿದಂತೆ ಕೆಲವು ದೇಶಗಳು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿವೆ. ಆದರೆ ಭಾರತದ ತೈಲ ಸಂಸ್ಕರಣ ಕಂಪನಿಗಳು ಅಗ್ಗದ ದರದಲ್ಲಿ ಸಿಗುತ್ತಿರುವ ರಷ್ಯಾ ತೈಲವನ್ನು ತರಿಸಿಕೊಳ್ಳುತ್ತಿದ್ದು, ಭಾರಿ ಲಾಭ ಮಾಡಿಕೊಳ್ಳುತ್ತಿವೆ. ರಷ್ಯಾಕ್ಕೆ ಶಿಕ್ಷೆ ನೀಡುತ್ತಿರುವ ಪಾಶ್ಚಿಮಾತ್ಯ ದೇಶಗಳಿಂದ ಭಾರತದ ತೈಲ ಸಂಸ್ಕರಣಾ ಕಂಪನಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.
ಭಾರತದ ಕಂಪನಿಗಳು ಸಂಸ್ಕರಿಸಿದ ರಷ್ಯಾದ ತೈಲವನ್ನು ಬೇರೆ ರಾಷ್ಟ್ರಗಳು ಆಮದು ಮಾಡಿಕೊಳ್ಳುತ್ತಿವೆ. ರಷ್ಯಾದಿಂದ ನೇರವಾಗಿ ಖರೀದಿಸದೇ, ಮೂರನೇ ರಾಷ್ಟ್ರವಾದ ಭಾರತದಿಂದ ಆಮದು ಮಾಡಿಕೊಳ್ಳುತ್ತಿವೆ. ಆದರೆ, ಭಾರತ, ಚೀನಾ ಮೊದಲಾದ ಮೂರನೇ ದೇಶಗಳಿಂದ ಪೂರೈಕೆಯಾದ ತೈಲಕ್ಕೆ ದಿಗ್ಬಂಧನ ಅನ್ವಯವಾಗುತ್ತದೆಯೇ ಎಂಬುದು ಇನ್ನಷ್ಟೇ ಸ್ಪಷ್ಟಗೊಳ್ಳಬೇಕಿದೆ.
ರಿಲಯನ್ಸ್, ನಯಾರಾ ಎನರ್ಜಿ ಮೊದಲಾದ ಭಾರತದ ಖಾಸಗಿ ಕಂಪನಿಗಳು ರಷ್ಯಾದ ಕಚ್ಚಾ ತೈಲವನ್ನು ಸಂಸ್ಕರಿಸಿ, ಆಸ್ಟ್ರೇಲಿಯಾಕ್ಕೆ ರಫ್ತು ಮಾಡುತ್ತಿವೆ. ಒಂದು ವೇಳೆ ಮೂರನೇ ದೇಶದಿಂದ ಆಮದಾಗುವ ಸಂಸ್ಕರಿತ ತೈಲೋತ್ಪನ್ನಗಳ ಮೇಲೂ ಆಸ್ಟ್ರೇಲಿಯಾ ಸರ್ಕಾರ ತನ್ನ ನಿರ್ಬಂಧವನ್ನು ವಿಸ್ತರಿಸಿದರೆ, ಖಾಸಗಿ ಕಂಪನಿಗಳ ಆದಾಯ ಖೋತಾ ಆಗಲಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿರುವ ಸಿಕ್ಕಾ ಬಂದರಿನಿಂದ ಯುರೋಪ್‌ಗೆ 25 ಕೋಟಿ ಬ್ಯಾರಲ್ ಡೀಸೆಲ್ ಅನ್ನು ಮೇ ತಿಂಗಳಲ್ಲಿ ರಫ್ತು ಮಾಡಲಾಗಿದೆ. ಐರೋಪ್ಯ ದೇಶಗಳು ಸಹ ಮೂರನೇ ದೇಶದಿಂದ ತೈಲೋತ್ಪನ್ನ ಖರೀದಿಸುವಂತಿಲ್ಲ ಎಂದು ತೀರ್ಮಾನಿಸಿದರೆ, ಅದು ಭಾರತದ ತೈಲ ಸಂಸ್ಕರಣ ಕಂಪನಿಗಳ ಕೈ ಕಟ್ಟಿಹಾಕಲಿದೆ.
ರಷ್ಯಾದ ಬಂದರುಗಳಿಂದ ತೈಲವನ್ನು ಹೊತ್ತ ಹಡಗುಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಪರಿಶೀಲನೆ ನಡೆಸುತ್ತಿವೆ. ಒಂದು ವೇಳೆ ಈ ಸ್ವರೂಪದ ನಿರ್ಬಂಧ ಜಾರಿಯಾದರೆ, ರಷ್ಯಾದಿಂದ ತೈಲವನ್ನು ಹಡಗುಗಳಲ್ಲಿ ತರಿಸಿಕೊಳ್ಳುವುದು ಕಷ್ಟವಾಗಲಿದೆ. ಈ ಹಿಂದೆ, ಇರಾನ್‌ನಿಂದ ರಫ್ತಾಗುವ ತೈಲದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಧಾರದಿಂದ ಹಲವು ದೇಶಗಳಲ್ಲಿ ತೈಲ ಬಿಕ್ಕಟ್ಟು ಎದುರಾಗಿತ್ತು. ಇದಕ್ಕೆ ಕಳ್ಳ ಮಾರ್ಗ ಹುಡುಕಿಕೊಂಡಿದ್ದ ಕೆಲವು ಕಂಪನಿಗಳು, ಹಡಗುಗಳು ಯಾವ ದೇಶದಿಂದ ಬರುತ್ತಿವೆ ಎಂಬ ಅಂಶವನ್ನು ಮರೆಮಾಚುವ ಯತ್ನ ನಡೆಸಿದ್ದವು. ಈಗಲೂ ಇದು ಪುನರಾವರ್ತನೆ ಆಗಬಹುದು.
ಉತ್ಪಾದನೆ ಹೆಚ್ಚಿಸಲಿದೆ ಒಪೆಕ್
ಒಪೆಕ್ ಪ್ಲಸ್ ದೇಶಗಳು ಈಗಿರುವ ಪ್ರತಿದಿನದ ತೈಲ ಉತ್ಪಾದನೆಗೆ ಹೆಚ್ಚುವರಿಯಾಗಿಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ 6.4 ಲಕ್ಷ ಬ್ಯಾರಲ್‌ನಷ್ಟು ಹೆಚ್ಚಿಸಲು ನಿರ್ಧರಿಸಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರುತ್ತಿರುವುದರಿಂದ ಹಲವು ದೇಶಗಳಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಿದ್ದು, ಇದಕ್ಕೆ ಪರಿಹಾರವಾಗಿ ತೈಲ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ಕೋವಿಡ್ ಅವಧಿಯಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದ ಒಪೆಕ್ ಪ್ಲಸ್ ದೇಶಗಳು ಹಂತಹಂತವಾಗಿ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆ ಹಾಕಿಕೊಂಡಿವೆ. ಒಟ್ಟು ಉತ್ಪಾದನೆಗೆ ಪ್ರತಿ ತಿಂಗಳು 4.32 ಲಕ್ಷ ಬ್ಯಾರಲ್ ತೈಲವನ್ನು ಹೆಚ್ಚುವರಿಯಾಗಿ ಸೇರಿಸುತ್ತಿವೆ. ತೈಲ ಬೆಲೆ ಅಧಿಕವಾಗುತ್ತಿರುವ ಕಾರಣ, ಉದ್ದೇಶಿತ ಯೋಜನೆಗಿಂತ ಹೆಚ್ಚಿನ ತೈಲವನ್ನು ಉತ್ಪಾದಿಸಲು ಒಪೆಕ್ ಪ್ಲಸ್ ದೇಶಗಳು ಗುರುವಾರ ನಿರ್ಧರಿಸಿವೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದ ಬಳಿಕ ಅಮೆರಿಕದಲ್ಲಿ ತೈಲ ಬೆಲೆಯಲ್ಲಿ ಶೇ 54ರಷ್ಟು ಹೆಚ್ಚಳವಾಗಿದೆ. ಹೀಗಾಗಿ ತೈಲ ಉತ್ಪಾದನೆ ಹೆಚ್ಚಿಸುವಂತೆ ಒಪೆಕ್ ಪ್ಲಸ್ ದೇಶಗಳ ಮೇಲೆ ಅಮೆರಿಕ ಒತ್ತಡ ಹೇರಿತ್ತು ಎನ್ನಲಾಗಿದೆ.
ಆಧಾರ: ರಾಯಿಟರ್ಸ್, ವಾಣಿಜ್ಯ ಸಚಿವಾಲಯದ ಮಾಸಿಕ ವರದಿಗಳು, ಪೆಟ್ರೋಲಿಯಂ ಪ್ರೈಸ್ ಅನಲಿಸಿಸ್ ಸೆಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.