ಇಂದಿಗೆ 68 ವರ್ಷಗಳ ಹಿಂದೆ, 1952ರ ಮೇ 13ರಂದು ರಾಜ್ಯಸಭೆಯು ತನ್ನ ಮೊದಲ ಕಲಾಪ ನಡೆಸಿತು. ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದಾದ ಹಣಕಾಸು ಮಸೂದೆಯಂಥವುಗಳನ್ನು ಹೊರತುಪಡಿಸಿದರೆ ಸಂವಿಧಾನವು ಸಂಸತ್ತಿನ ಎರಡೂ ಸದನಗಳಿಗೆ ಸಮಾನ ಅಧಿಕಾರ ನೀಡಿದೆ.
ರಾಜ್ಯಸಭೆಗೆ ‘ರಾಜ್ಯಗಳ ಪರಿಷತ್ತು’ ಎಂಬ ಹೆಸರೂ ಇದೆ. ಇದು ಅಸ್ತಿತ್ವಕ್ಕೆ ಬಂದಿದ್ದು, ಸಂವಿಧಾನ ರಚನಾ ಸಭೆಯ ಚರ್ಚೆಯ ವೇಳೆ, ಎರಡನೆಯ ಸದನದ ಅಗತ್ಯದ ಕುರಿತು1949ರಲ್ಲಿ ನಡೆದ ಪರಿಶೀಲನೆಯ ನಂತರ. ರಾಜ್ಯಸಭೆಯು ಪ್ರಗತಿಯ ಚಕ್ರಕ್ಕೆ ಅಡ್ಡಿಯಾಗುವುದಷ್ಟೇ ಅಲ್ಲದೆ, ಈ ಸದನವು ಸಾಮ್ರಾಜ್ಯಶಾಹಿಯ ಸೃಷ್ಟಿಯೂ ಹೌದು ಎಂದು ಮೇಲ್ಮನೆಯ ವಿರೋಧಿಗಳು ಹೇಳಿದ್ದರು. ಆದರೆ, ಎಂ. ಅನಂತಶಯನಂ ಅಯ್ಯಂಗಾರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರಂಥವರು ರಾಜ್ಯಸಭೆಯ ಪರವಾಗಿದ್ದರು. ಸಂವಿಧಾನ ರಚನಾ ಸಭೆಯಲ್ಲಿ ನಡೆದ 8 ದಿನಗಳ ಚರ್ಚೆಯ ನಂತರ, ಮೇಲ್ಮನೆಯ ಪರ ವಾದಕ್ಕೆ ಜಯವಾಯಿತು. ಶಾಸನ ರಚನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಮೇಲ್ಮನೆಯು ಮೇಧಾವಿಗಳಿಗೆ ನೀಡುತ್ತದೆ, ಇನ್ನೊಂದು ಸದನವು ಆವೇಶದಲ್ಲಿ ಅನುಮೋದನೆ ನೀಡಿದ ಮಸೂದೆಗೆ ತಡೆಯೊಡ್ಡುವ ವ್ಯವಸ್ಥೆ ಇದಾಗಲಿದೆ, ರಾಜ್ಯಗಳಿಗೆ ದನಿ ನೀಡುತ್ತದೆ ಇದು ಎಂದು ಮೇಲ್ಮನೆ ಪರವಿರುವವರು ವಾದಿಸಿದ್ದರು. ಅದು ವಿಶಾಲಾರ್ಥದಲ್ಲಿ ರಾಜ್ಯಸಭೆ ಮಾಡಬೇಕಾದ ಕೆಲಸವೂ ಹೌದು.
ದ್ವಿಸದನ ತತ್ವದ ಅಡಿ, ಕಾನೂನು ರೂಪಿಸಲು, ಕಾನೂನು ಬದಲಿಸಲು ಎರಡು ವಿಭಿನ್ನ ಸಂರಚನೆಗಳನ್ನು ಹೊಂದಿರುವ ಸದನಗಳ ಅನುಮೋದನೆ ಬೇಕಾಗುತ್ತದೆ. ಲೋಕಸಭೆ ಹಾಗೂ ರಾಜ್ಯಸಭೆಗೆ ನಡೆಯುವ ಚುನಾವಣೆಗಳ ಬಗೆ, ಈ ಎರಡು ಸದನಗಳ ರಚನೆ ಹಾಗೂ ಕಾಲಾವಧಿ ಬೇರೆ ಬೇರೆ. ಲೋಕಸಭೆ ಕಾಲಕಾಲಕ್ಕೆ ವಿಸರ್ಜನೆಯಾಗುತ್ತದೆ, ರಾಜ್ಯಸಭೆಯು ನಿರಂತರವಾಗಿ ಇರುತ್ತದೆ. ಈ ಕಾರಣದಿಂದಾಗಿ, ಲೋಕಸಭೆಯಲ್ಲಿನ ಬಹುಮತದ ಆಧಾರದ ಮೇಲೆ ರಚಿತವಾದ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಅಗತ್ಯ ಸಂಖ್ಯಾಬಲ ಇಲ್ಲದಿರಬಹುದು. ಕಾನೂನು ರೂಪಿಸುವ ಕೆಲಸಗಳಲ್ಲಿ ರಾಜ್ಯಸಭೆಯು ಅಡೆತಡೆಯಾಗಿ ಪರಿಣಮಿಸಿದೆಯೇ ಎಂಬುದನ್ನು ಪರಿಶೀಲಿಸುವುದು ಈ ಹೊತ್ತಿಗೆ ಸೂಕ್ತವಾಗಬಹುದು.
1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯ ನಂತರ, ಆಯಾ ಕಾಲಘಟ್ಟದ ಸರ್ಕಾರಗಳು 29 ವರ್ಷಗಳವರೆಗೆ ಮಾತ್ರ ರಾಜ್ಯಸಭೆಯಲ್ಲಿ ಬಹುಮತ ಹೊಂದಿದ್ದವು ಎಂದು ರಾಜ್ಯಸಭಾ ಸಚಿವಾಲಯ ನಡೆಸಿದ ವಿಶ್ಲೇಷಣೆಯು ಹೇಳಿದೆ. ಕಳೆದ 31 ವರ್ಷಗಳ ಅವಧಿ ಸೇರಿದಂತೆ ಒಟ್ಟು 39 ವರ್ಷಗಳ ಅವಧಿಯಲ್ಲಿ ಸರ್ಕಾರಗಳು ರಾಜ್ಯಸಭೆಯಲ್ಲಿ ಬಹುಮತ ಹೊಂದಿರಲಿಲ್ಲ. ಇದರ ಪರಿಣಾಮ ಏನಾಗಿದೆ?
1952ರ ಮೇ 13ರ ಮೊದಲ ಕಲಾಪದ ನಂತರ ರಾಜ್ಯಸಭೆಯು ಒಟ್ಟು 3,857 ಮಸೂದೆಗಳನ್ನು ಅನುಮೋದಿಸಿದೆ. ಲೋಕಸಭೆಗೆ ಹೆಗಲುಕೊಟ್ಟು, ದೇಶದ ಸಮಾಜೋ–ಆರ್ಥಿಕ ಪರಿವರ್ತನೆಗೆ ಜೊತೆಯಾಗಿದೆ, ಮಹತ್ವದ ಶಾಸನಗಳನ್ನು ರೂಪಿಸಿದೆ. ಇದು, ರಾಷ್ಟ್ರ
ನಿರ್ಮಾಣದ ಕಾರ್ಯದಲ್ಲಿ ಎರಡೂ ಸದನಗಳ ನಡುವೆ ಇರುವ ವಿಶ್ವಾಸವನ್ನು, ಸಹಕಾರ ಮನೋಭಾವವನ್ನು ಹೇಳುತ್ತದೆ. ರಾಜ್ಯಸಭೆಯು ತನ್ನ ಸ್ವಾತಂತ್ರ್ಯವನ್ನು ಕೆಲವು ಸಂದರ್ಭಗಳಲ್ಲಿ ಗಟ್ಟಿಯಾಗಿ ಹೇಳಿದ್ದೂ ಇದೆ.
ಕಾನೂನುಗಳ ವಿಚಾರದಲ್ಲಿ ಎರಡು ಸದನಗಳ ನಡುವಿನ ಅಭಿಪ್ರಾಯಭೇದವನ್ನು ಬಗೆಹರಿಸಲು ಇದುವರೆಗೆ ಮೂರು ಬಾರಿ ಮಾತ್ರ ಜಂಟಿ ಅಧಿವೇಶನ ಕರೆಯಲಾಗಿದೆ. ಲೋಕಸಭೆ ಅನುಮೋದಿಸಿದ್ದ ವರದಕ್ಷಿಣೆ ನಿಷೇಧ ಮಸೂದೆ– 1959ನ್ನು ರಾಜ್ಯಸಭೆ ತಿರಸ್ಕರಿಸಿದಾಗ 1961ರಲ್ಲಿ ಮೊದಲ ಬಾರಿಗೆ ಕರೆಯಲಾಗಿತ್ತು. ಆ ಹೊತ್ತಿನಲ್ಲಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇತ್ತು. ಬ್ಯಾಂಕಿಂಗ್ ಸೇವೆಗಳ ಆಯೋಗ (ಹಿಂತೆಗೆತ) ಮಸೂದೆಯ ವಿಚಾರವಾಗಿ 1978ರಲ್ಲಿ, ಭಯೋತ್ಪಾದನೆ ನಿಗ್ರಹ ಮಸೂದೆಯನ್ನು ರಾಜ್ಯಸಭೆ ತಿರಸ್ಕರಿಸಿದಾಗ 2002ರಲ್ಲಿ ಕೂಡ ಜಂಟಿ ಅಧಿವೇಶನ ಕರೆಯಲಾಗಿತ್ತು. 1978, 2002ರಲ್ಲಿ ಸರ್ಕಾರಗಳಿಗೆ ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ.
ಇತರ ಕೆಲವು ಸಂದರ್ಭಗಳಲ್ಲೂ ರಾಜ್ಯಸಭೆಯು ಲೋಕಸಭೆಯ ಜೊತೆ ಅಭಿಪ್ರಾಯಭೇದ ತೋರಿದ್ದಿದೆ. ಹಿಂದಿನ ಮಹಾರಾಜರಿಗೆ ನೀಡುತ್ತಿದ್ದ ಗೌರವಧನವನ್ನು ರದ್ದುಗೊಳಿಸುವ ಸಂವಿಧಾನ (ಇಪ್ಪತ್ತನಾಲ್ಕನೆಯ ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯು ತಿರಸ್ಕರಿಸಿದಾಗ, ಈ ಸದನವನ್ನು ‘ಪ್ರತಿಗಾಮಿ’ ಎಂದು ನಿಂದಿಸಿದ್ದೂ ಇದೆ. ಗ್ರಾಮ ಪಂಚಾಯಿತಿಗಳನ್ನು, ಮುನಿಸಿಪಾಲಿಟಿಗಳನ್ನು ಸಶಕ್ತಗೊಳಿಸುವ ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ರಾಜ್ಯಸಭೆಯು 1989ರಲ್ಲಿ ತಿರಸ್ಕರಿಸಿತು. ಆದರೆ, ಈ ಮೂರೂ ಮಸೂದೆಗಳು ನಂತರ ಎರಡೂ ಸದನಗಳ ಒಪ್ಪಿಗೆಯೊಂದಿಗೆ ಕಾನೂನಿನ ರೂಪ ಪಡೆದುಕೊಂಡವು.
ಭ್ರಷ್ಟಾಚಾರ ನಿಗ್ರಹ ಮಸೂದೆ– 1987 ಸೇರಿದಂತೆ ಕೆಲವು ಮಸೂದೆಗಳ ಅನುಮೋದನೆಗೆ ರಾಜ್ಯಸಭೆಯು ವಿಳಂಬ ಮಾಡಿದ್ದಿದೆ. ಇವೆಲ್ಲ ಅವಸರದ ಮಸೂದೆಗಳಿಗೆ ತಡೆಯೊಡ್ಡುವ ಕೆಲಸಗಳು ಎಂದಾದರೆ, 1984ರ ಆಗಸ್ಟ್ 25ರಂದು ರಾಜ್ಯಸಭೆಯು ಒಂದೇ ದಿನದಲ್ಲಿ ಐದು ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಅನುಮೋದನೆ ನೀಡಿದ್ದೂ ಇದೆ. ಹಣಕಾಸು ಮಸೂದೆಯ ವಿಚಾರದಲ್ಲಿ ರಾಜ್ಯಸಭೆ ಸೂಚಿಸಿದ ತಿದ್ದುಪಡಿಗಳನ್ನು ಲೋಕಸಭೆಯು ಒಪ್ಪಿಕೊಂಡ ಉದಾಹರಣೆಗಳು ಕೂಡ ಇವೆ.
ಜಿಎಸ್‌ಟಿ ಜಾರಿಗೆ ಸಂಬಂಧಿಸಿದ ಮಸೂದೆ, ದಿವಾಳಿ ಸಂಹಿತೆಯ ಮಸೂದೆ, ತ್ರಿವಳಿ ತಲಾಖ್ ನಿಷೇಧಿಸುವ ಮಸೂದೆ, ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣಾ ಮಸೂದೆ, ಪೌರತ್ವ ತಿದ್ದುಪಡಿ ಮಸೂದೆಗಳನ್ನು ರಾಜ್ಯಸಭೆಯು ಈಗಿನ ಸರ್ಕಾರಕ್ಕೆ ಅಲ್ಲಿ ಬಹುಮತ ಇಲ್ಲದಿದ್ದರೂ ಅನುಮೋದನೆ ನೀಡಿದೆ. ಇವನ್ನೆಲ್ಲ ಗಮನಿಸಿದರೆ, ರಾಜ್ಯಸಭೆಯು ‘ಅಡ್ಡಿ’ಯ ರೀತಿಯಲ್ಲಿ ವರ್ತಿಸುತ್ತದೆ ಎನ್ನಲು ಯಾವ ಆಧಾರವೂ ಸಿಗುವುದಿಲ್ಲ.
ಆದರೆ, ಕಲಾಪಕ್ಕೆ ಅಡ್ಡಿಪಡಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ರಾಜ್ಯಸಭೆಯ ಪಾಲಿಗೆ ದೊಡ್ಡ ಕಳವಳದ ಸಂಗತಿಯಾಗಿ ಕಾಣುತ್ತಿದೆ. 1997ರವರೆಗೆ ರಾಜ್ಯಸಭೆಯ ಕಾರ್ಯಕ‌್ಷಮತೆ ಶೇ 100ರಷ್ಟಿತ್ತು. ಆದರೆ, 1998ರಿಂದ 2004ರ ಅವಧಿಯಲ್ಲಿ ಇದು ಶೇ 87ರಷ್ಟಕ್ಕೆ ಕುಸಿಯಿತು. 2005–14ರ ನಡುವೆ ಶೇ 76ರಷ್ಟಕ್ಕೆ, 2015ರ ನಂತರ ಶೇ 61ರಷ್ಟಕ್ಕೆ ಕುಸಿದಿದೆ. ಶಾಸನಗಳ ಮೇಲೆ ರಾಜ್ಯಸಭೆಯು ತನ್ನ ಶೇಕಡ 29ರಷ್ಟು ಸಮಯವನ್ನು ನೀಡಿದೆ. ಆದರೆ, ಕಾರ್ಯಾಂಗದ ಉತ್ತರದಾಯಿತ್ವಕ್ಕೆ ಸಂಬಂಧಿಸಿದ ಕೆಲಸಗಳ ಮೇಲೆ ರಾಜ್ಯಸಭೆ ನೀಡಿದ ಸಮಯವು 2015ರ ನಂತರ ಶೇ 12.34ರಷ್ಟಕ್ಕೆ ಇಳಿದಿದೆ. ಇದಕ್ಕೆ ಮುಖ್ಯ ಕಾರಣ, ಗದ್ದಲಗಳ ಪರಿಣಾಮವಾಗಿ ಪ್ರಶ್ನೋತ್ತರ ಅವಧಿಗೆ ಸಮಯ ಸಿಗುತ್ತಿಲ್ಲದಿರುವುದು.
ರಾಜ್ಯಸಭೆಯು ಸಾರ್ವಜನಿಕ ಮಹತ್ವದ ವಿಚಾರಗಳ ಮೇಲೆ ಹೆಚ್ಚು ಸಮಯವನ್ನು ಮೀಸಲಿಡುತ್ತಿದೆ. ಇಂತಹ ವಿಚಾರಗಳ ಮೇಲೆ 1978ರಿಂದ 2004ರ ನಡುವಿನ ಅವಧಿಯಲ್ಲಿ ಶೇ 33.54ರಷ್ಟು ಸಮಯ ವಿನಿಯೋಗ ಆಗುತ್ತಿತ್ತು. 2005ರಿಂದ 2014ರ ನಡುವಿನ ಅವಧಿಯಲ್ಲಿ ಅದು ಶೇ 41.42ರಷ್ಟಕ್ಕೆ ಹೆಚ್ಚಳವಾಯಿತು. 2015ರ ನಂತರ ಈ ವಿಚಾರಗಳ ಮೇಲೆ ವಿನಿಯೋಗವಾಗುವ ಸಮಯದ ಪ್ರಮಾಣವು ಶೇ 46.59ರಷ್ಟಕ್ಕೆ ಏರಿದೆ.
ಕಲಾಪಕ್ಕೆ ಅಡ್ಡಿಪಡಿಸುವ ಪ್ರವೃತ್ತಿಯು ಶಾಸನ ರೂಪಿಸುವುದರ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಲವು ಸಂದರ್ಭಗಳಲ್ಲಿ ಚರ್ಚೆಗಳೇ ಇಲ್ಲದೆ ಮಸೂದೆಗಳು ಅಂಗೀಕಾರ ಪಡೆದಿದ್ದನ್ನು ಉದಾಹರಣೆಯಾಗಿ ಹೇಳಬಹುದು. 1998ರ ನಂತರ ಕಾಣಬರುತ್ತಿರುವ ಗದ್ದಲದ ಪ್ರವೃತ್ತಿಯು ಸಂಬಂಧಪಟ್ಟ ಎಲ್ಲರಿಗೂ ಕಳವಳ ಮೂಡಿಸುವ ವಿಚಾರವಾಗಬೇಕು. ರಾಜಕೀಯ ಆಕ್ರೋಶಗಳು ಇಂತಹ ಗದ್ದಲ, ಅಡ್ಡಿಗಳಿಗೆ ಮೂಲವಾಗಬಾರದು. ಸದನದ ಕಲಾಪ ಸರಿಯಾಗಿ ನಡೆಯುವಲ್ಲಿ ರಾಜ್ಯಸಭೆಯ ಎಲ್ಲ ವಿಭಾಗಗಳ ಕೊಡುಗೆ ಇರುತ್ತದೆ. ಸದನವು ವಿಚಾರಗಳನ್ನು ಚರ್ಚಿಸಿ, ಮಥಿಸಿ ಅದರ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಆಗಬೇಕು. ಇದೇ ಮುಂದಣ ದಾರಿ.
(ಲೇಖಕ: ಭಾರತದ ಉಪರಾಷ್ಟ್ರಪತಿ, ರಾಜ್ಯಸಭೆಯ ಸಭಾಪತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.