ADVERTISEMENT

ವಿಶ್ಲೇಷಣೆ | ಮೇಕ್‌ ಇನ್ ಇಂಡಿಯಾ: ಮಿಶ್ರಫಲ

ನಾವೀನ್ಯದ ಕುರಿತು ಸದಾ ಮಾತನಾಡುವ ನಾವು, ಸಂಶೋಧನೆಗೆ ಅಗತ್ಯ ಅನುದಾನ ಒದಗಿಸಿದ್ದೇವೆಯೇ?

ಗುರುರಾಜ್ ಎಸ್.ದಾವಣಗೆರೆ
Published 21 ಅಕ್ಟೋಬರ್ 2024, 0:17 IST
Last Updated 21 ಅಕ್ಟೋಬರ್ 2024, 0:17 IST
<div class="paragraphs"><p>ಮೇಕ್‌ ಇನ್ ಇಂಡಿಯಾ</p></div>

ಮೇಕ್‌ ಇನ್ ಇಂಡಿಯಾ

   

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಗೆ ಹತ್ತು ವರ್ಷಗಳು ತುಂಬಿವೆ. ಜೊತೆಗೆ ಯೋಜನೆಯ ಯಶಸ್ಸು, ಅಪಯಶಸ್ಸು ಕುರಿತು ದೊಡ್ಡ ಮಟ್ಟದ ಚರ್ಚೆಗಳೇ ಶುರುವಾಗಿವೆ. ಮನ್ ಕಿ ಬಾತ್‌ನ (ಮನದ ಮಾತು) 114ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಯೋಜನೆಯು ಅದ್ಭುತ ಯಶಸ್ಸು ಕಂಡಿದೆ ಎಂದು ಹೇಳಿದರು. ತಮ್ಮ ಮನದ ಮಾತಿನ ಕಾರ್ಯಕ್ರಮಕ್ಕೂ ಒಂದು ದಶಕ ತುಂಬಿರುವುದನ್ನು ಅತ್ಯಂತ ಭಾವುಕವಾಗಿ ಸ್ಮರಿಸಿದ್ದಲ್ಲದೆ, ನಾಡಿನ ಸಮಸ್ತರೂ ದೇಶೀಯವಾಗಿ ತಯಾರಾದ ಉತ್ಪನ್ನಗಳನ್ನೇ ಹಬ್ಬ– ಹರಿದಿನಗಳಲ್ಲಿ ಬಳಸಬೇಕು ಮತ್ತು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವಾಗಲೂ ಇವುಗಳಿಗೇ ಆದ್ಯತೆ ಕೊಡಬೇಕು ಎಂದು ಕರೆ ಕೊಟ್ಟರು.

ಯೋಜನೆಯ ಯಶಸ್ಸಿನ ಕುರಿತು ಹಲವಾರು ಉದಾಹರಣೆಗಳನ್ನು ಕೊಡುತ್ತಾ, ಈ ಒಂದು ದಶಕದಲ್ಲಿ ದೇಶವು ತಯಾರಿಕಾ ವಲಯದ ಪವರ್‌ಹೌಸ್ ಎನಿಸಿಕೊಂಡಿದೆ, ಈ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದುಕೊಂಡಿದೆ, ಇದಕ್ಕೆ ದೇಶದ ಯುವಸಮೂಹದ ಕೊಡುಗೆ ಅತ್ಯಂತ ದೊಡ್ಡದು ಎಂದರು. ಈ ಮಧ್ಯೆ ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳಿಗೆ ದೊಡ್ಡ ನೆಲೆ ಕಲ್ಪಿಸಿದ್ದ ರತನ್ ಟಾಟಾ ಅವರು ನಮ್ಮನ್ನು ಅಗಲಿದ್ದಾರೆ.

ADVERTISEMENT

ಉದ್ಯೋಗ ಸೃಷ್ಟಿ, ಉತ್ಪಾದನೆಯ ಹೆಚ್ಚಳದಿಂದ ಜಿಡಿಪಿ ವೃದ್ಧಿ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿ, ವಿದೇಶಗಳಿಂದ ಭಾರತಕ್ಕೆ ಮರಳಿದ 300ಕ್ಕೂ ಹೆಚ್ಚು ಪಾರಂಪರಿಕ ವಸ್ತುಗಳಂತಹವು ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸಿನ ಕುರುಹುಗಳು ಎಂಬುದು ಕೆಲವು ಮಾರುಕಟ್ಟೆ ತಜ್ಞರ ಅಂಬೋಣ. 

ಆದರೆ ವಾಸ್ತವದಲ್ಲಿ ಏನಾಗಿದೆ ಎಂಬುದನ್ನು ಗಮನಿಸೋಣ. ಯೋಜನೆಯು 2014ರಲ್ಲಿ ಪ್ರಾರಂಭ ಆದಾಗ ಎರಡು ಮುಖ್ಯ ಉದ್ದೇಶಗಳಿದ್ದವು. ಮೊದಲನೆ ಯದು, ದೇಶದ ಜಿಡಿಪಿಗೆ ಶೇಕಡ 14ರಿಂದ 15ರಷ್ಟು ಕೊಡುಗೆ ನೀಡುತ್ತಿದ್ದ ತಯಾರಿಕಾ ವಲಯದ ಪಾಲನ್ನು ಹತ್ತು ವರ್ಷಗಳಲ್ಲಿ ಶೇಕಡ 25ಕ್ಕೆ ಏರಿಸುವುದು.

ಎರಡನೆಯದು, 2025ರ ವೇಳೆಗೆ ತಯಾರಿಕಾ ವಲಯದಲ್ಲಿ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸು ವುದು. ಈ ಎರಡೂ ಉದ್ದೇಶಗಳು ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ 2012ರಲ್ಲಿ ರೂಪುಗೊಂಡ ಉತ್ಪಾದನಾ ನೀತಿಯ ಪ್ರಮುಖ ಅಂಶಗಳಾಗಿದ್ದವು. ಇವೇ ಅಂಶಗಳು ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಪುನರಾವರ್ತನೆಯಾಗಿವೆ.

ಯೋಜನೆಯ ಪ್ರಾರಂಭದ ದಿನಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಹೆಚ್ಚಿಸುವುದು, ತಯಾರಿಕಾ ವಲಯದ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದು, ವಿವಿಧ ವಲಯಗಳ ರಫ್ತನ್ನು ಹೆಚ್ಚಿಸುವುದು, ನಾವೀನ್ಯದ ಕೆಲಸಗಳಿಗೆ ಹೆಚ್ಚಿನ ಧನಸಹಾಯ ನೀಡುವುದು, ಬಂಡವಾಳ ಹೂಡಿಕೆ ಪ್ರಕ್ರಿಯೆ ಸರಳಗೊಳಿಸುವುದು, ನವೀನ ಆವಿಷ್ಕಾರಗಳನ್ನು ಹೆಚ್ಚಿಸಲು ಬೌದ್ಧಿಕ ಆಸ್ತಿ ಹಕ್ಕು ಪಡೆಯುವುದನ್ನು ಮತ್ತಷ್ಟು ಪರಿಣಾಮಕಾರಿ ಆಗಿಸುವುದು ಮತ್ತು ಜನರ ಕೌಶಲಗಳನ್ನು ವೃದ್ಧಿಸುವ ಉದ್ದೇಶಗಳಿದ್ದವು.

ಇವೆಲ್ಲ ಈಡೇರಿದ್ದರೆ ಅವುಗಳ ಪ್ರಮಾಣವೆಷ್ಟು ಎಂಬುದು ಮುಖ್ಯ ಪ್ರಶ್ನೆ. ಹೌದು ಎಂದು ನಿರೂಪಿಸಲು ಸರ್ಕಾರವು ಎಲೆಕ್ಟ್ರಾನಿಕ್ಸ್, ರಕ್ಷಣಾ ಕ್ಷೇತ್ರ ಮತ್ತು ಆಟಿಕೆ ಗೊಂಬೆಗಳ ತಯಾರಿಕೆ ಕ್ಷೇತ್ರದ ಉತ್ಪನ್ನಗಳ ರಫ್ತು ಪ್ರಮಾಣವು ತೀವ್ರ ಏರಿಕೆ ಕಂಡಿದೆ ಎಂದು ಹೇಳುತ್ತಿದೆ. ಅದು ನಿಜವೂ ಹೌದು. 2014ರಲ್ಲಿ ಮೊಬೈಲ್ ಫೋನ್‌ಗಳ ರಫ್ತಿನ ಮೌಲ್ಯವು ₹ 1,556 ಕೋಟಿಯಷ್ಟಿತ್ತು. 2024ರ ಮಾರ್ಚ್ ವೇಳೆಗೆ ಇದು ₹ 1.2 ಲಕ್ಷ ಕೋಟಿಗೆ ಏರಿದೆ. ಇದು ಸಂತಸದ ವಿಷಯವೇ. ಆದರೆ ನಮ್ಮದೇ ತಂತ್ರಜ್ಞಾನ ಬಳಸಿಕೊಂಡು ತಯಾರಾಗಿರುವ ಮೊಬೈಲ್ ಫೋನು ಯಾವುದು? ಅದು ನಮ್ಮದೇ ಮಾರುಕಟ್ಟೆಯಲ್ಲೇಕೆ ಪ್ರಸಿದ್ಧಿಗೆ ಬಂದಿಲ್ಲ. ಮೇಕ್‌ ಇನ್‌ ಇಂಡಿಯಾ ಉದ್ದೇಶವೇ ನಮ್ಮಲ್ಲಿ ತಯಾರಿಸಿದ ವಸ್ತುಗಳನ್ನು ನಾವು ಹೆಚ್ಚು ಬಳಸಬೇಕು ಎಂಬುದಲ್ಲವೇ?

ರಕ್ಷಣಾ ಸಾಮಗ್ರಿಗಳ ರಫ್ತಿನ ಮೌಲ್ಯವು ₹1,000 ಕೋಟಿಯಿಂದ ₹21,000 ಕೋಟಿಗೆ ಏರಿಕೆ ಕಂಡಿರುವುದು ಹೆಮ್ಮೆಪಡುವ ವಿಷಯ. ಆಟಿಕೆ ಗೊಂಬೆಗಳ ರಫ್ತಿನ ಪ್ರಮಾಣವು ಶೇಕಡ 239ರಷ್ಟು ಏರಿಕೆ ಕಂಡಿರುವುದು ಉತ್ಪಾದಕರನ್ನೇ ದಂಗುಬಡಿಸಿದೆ. ಇದಲ್ಲದೆ 2020ರಲ್ಲಿ ಪ್ರತ್ಯೇಕವಾಗಿ ಜಾರಿಗೆ ಬಂದ ಪ್ರೊಡಕ್ಷನ್ ಲಿಂಕ್ಡ್‌ ಸ್ಕೀಮ್ (ಉತ್ಪಾದನೆಗೆ ಸಂಬಂಧಿಸಿದ ಯೋಜನೆ) ಅನುಸಾರ ದೇಶದಲ್ಲೇ ಉತ್ಪಾದನೆ ಮಾಡುವ 14 ಕ್ಷೇತ್ರಗಳ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಲಾಗುತ್ತಿದೆ.

ಅಂಕಿಅಂಶಗಳ ಪ್ರಕಾರ, 2003ರಿಂದ 2008ರ ಅವಧಿಯಲ್ಲಿ ಆರ್ಥಿಕತೆಗೆ ತಯಾರಿಕಾ ವಲಯದ ಕೊಡುಗೆ ಮತ್ತು ರಫ್ತು ಪ್ರಮಾಣ ಎರಡೂ ತಕ್ಕಮಟ್ಟಿಗೆ ಚೆನ್ನಾಗಿದ್ದವು. 2003ರಿಂದ 2013ರ ವರೆಗೂ ಜಿಡಿಪಿ ಬೆಳವಣಿಗೆಯು ಶೇಕಡ 7ರಿಂದ 8ರಷ್ಟು ಇತ್ತು. ಅದು, ಆರ್ಥಿಕತೆಗೆ ಬಲವನ್ನು ತುಂಬಿತ್ತು. ಆಮದು, ರಫ್ತಿನ ಜೊತೆಗೆ ಉದ್ಯೋಗ ಸೃಷ್ಟಿಯೂ ಸಮಾಧಾನಕರವಾಗಿತ್ತು. ಅಲ್ಲಿಂದ ಈಚೆಗೆ ಒಂದು ದಶಕವೇ ಕಳೆದಿದೆ. ನ್ಯಾಷನಲ್ ಅಕೌಂಟ್ಸ್‌ ಸ್ಟ್ಯಾಟಿಸ್ಟಿಕ್ಸ್ ವರದಿಯ ಪ್ರಕಾರ, 2001ರಿಂದ 2012ರವರೆಗೆ ಶೇಕಡ 8.1ರಷ್ಟಿದ್ದ ತಯಾರಿಕಾ ವಲಯದ ಒಟ್ಟಾರೆ ಮೌಲ್ಯ ಸೇರ್ಪಡೆ (ಜಿವಿಎ) ಪ್ರಮಾಣವು 2012-23ರ ಅವಧಿಯಲ್ಲಿ ಶೇ 5.5ಕ್ಕೆ ಕುಸಿದಿತ್ತು. ಜಿಡಿಪಿಗೆ ತಯಾರಿಕಾ ವಲಯದ ಕೊಡುಗೆಯು ಹಿಂದಿನ ಮೂರು ದಶಕಗಳಿಂದ ಶೇಕಡ 15ರಿಂದ 17ರಷ್ಟು ಇದೆ. ಅಲ್ಲಿಂದ ಸ್ವಲ್ಪವೂ ಏರಿಕೆ ಕಂಡಿಲ್ಲ.

ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ನೀಡಿರುವ ಮಾಹಿತಿಯ ಪ್ರಕಾರ, ಹಿಂದಿನ ಹತ್ತು ವರ್ಷಗಳಲ್ಲಿ ತಯಾರಿಕಾ ವಲಯದ ಉದ್ಯೋಗಾವಕಾಶದ ಪ್ರಮಾಣ ಶೇ 12.6ರಿಂದ ಶೇ 11.4ಕ್ಕೆ ಇಳಿಕೆ ಕಂಡಿದೆ. ಹಾಗೆ ನೋಡಿದರೆ, ಅಸಂಘಟಿತ ಕಾರ್ಯಕ್ಷೇತ್ರವು ಹೆಚ್ಚಿನ ಉದ್ಯೋಗಗಳನ್ನು ಮೊದಲಿನಿಂದಲೂ ಸೃಷ್ಟಿಸುತ್ತಿತ್ತು. ಅಲ್ಲೂ 82 ಲಕ್ಷ ಉದ್ಯೋಗಗಳು ನಷ್ಟಗೊಂಡಿವೆ. 2015- 16ರಲ್ಲಿ 3.8 ಕೋಟಿ ಉದ್ಯೋಗ ಸೃಷ್ಟಿಸಿದ್ದ ಅಸಂಘಟಿತ ವಲಯವು 2023ರಲ್ಲಿ ಬರೀ 3 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದ ಜವಳಿ, ಸಿದ್ಧ ಉಡುಪು, ಚರ್ಮದ ಉದ್ಯಮಗಳಲ್ಲೂ ನಿರೀಕ್ಷೆಯಂತೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿಲ್ಲ. ಕೃಷಿ ವಲಯ ಮಾತ್ರ ಇದಕ್ಕೆ ಅಪವಾದವೆಂಬಂತೆ ಆಶಾದಾಯಕ ಬೆಳವಣಿಗೆಯನ್ನು ಕಂಡಿದ್ದು, ಶೇಕಡ 3ರಷ್ಟು ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ನೇರ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣ ಇಳಿಮುಖವಾಗಿದೆ.

ಯೋಜನೆಯ ಪ್ರಾರಂಭದ ದಿನಗಳಲ್ಲಿ ಶೇ 1.5ರಷ್ಟಿದ್ದ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣವು 2024ರ ವೇಳೆಗೆ ಶೇ 0.8ರಷ್ಟು ಆಗಿರುವುದು ಮಾರುಕಟ್ಟೆ ತಜ್ಞರಲ್ಲಿ ದೊಡ್ಡ ಮಟ್ಟದ ಆತಂಕವನ್ನು ಸೃಷ್ಟಿಸಿದೆ.

ಬಂಡವಾಳ ಹೂಡಿ ವ್ಯಾಪಾರ ಮಾಡುವುದನ್ನು ಸುಲಭವಾಗಿಸುವ (ಈಸ್ ಆಫ್ ಡೂಯಿಂಗ್ ಬಿಸಿನೆಸ್) ಹೇಳಿಕೆಗಳಿಗೆ ತದ್ವಿರುದ್ಧವಾಗಿದೆ ವಸ್ತುಸ್ಥಿತಿ. ವಿದೇಶಿ ಬಂಡವಾಳ ಹರಿದುಬರುತ್ತದೆ ಎಂದು ಕಾಯುತ್ತಾ ಕೂತದ್ದು ಮತ್ತು ತೆರಿಗೆ ಹೆಚ್ಚಳದ ಕ್ರಮಗಳು ಮೇಕ್‌ ಇನ್‌ ಇಂಡಿಯಾ ಯೋಜನೆಗೆ ದೊಡ್ಡ ಹಿನ್ನಡೆ ಉಂಟುಮಾಡಿವೆ ಎಂಬುದು ಸುಳ್ಳಲ್ಲ. ತೆರಿಗೆ ವ್ಯಾಜ್ಯಗಳನ್ನು ಎದುರಿಸುತ್ತಿರುವ ಅನೇಕ ಕಂಪನಿಗಳು ಮೇಕ್ ಇನ್ ಇಂಡಿಯಾದ ಬಗ್ಗೆ ಉತ್ಸಾಹ ತೋರಿಸುತ್ತಿಲ್ಲ. ಉತ್ಪಾದನೆ ಹೆಚ್ಚಲು ಕೌಶಲವಿರುವ ದೊಡ್ಡ ಪ್ರಮಾಣದ ಕೆಲಸಗಾರರು ಬೇಕು. ಅದರ ತೀವ್ರ ಕೊರತೆ ಇದೆ. ಈ ವಿಷಯದಲ್ಲಿ ವಿಯೆಟ್ನಾಂ ಮತ್ತು ಬಾಂಗ್ಲಾದೇಶ ನೀಡುತ್ತಿರುವ ಪೈಪೋಟಿಯನ್ನು ಸಹ ಎದುರಿಸಲಾಗುತ್ತಿಲ್ಲ.

ಮೊಬೈಲ್ ಫೋನ್ ತಯಾರಿಕೆ ಮತ್ತು ನೆಟ್‌ವರ್ಕ್ ವ್ಯಾಪಾರ ವಹಿವಾಟುಗಳಲ್ಲಿ ವಿದೇಶಿ ಕಂಪನಿಗಳದ್ದೇ ಇಂದಿಗೂ ಕಾರುಬಾರು. ನಾವೀನ್ಯದ ಕುರಿತು ಸದಾ ಮಾತನಾಡುವ ನಾವು, ಸ್ಯಾಮ್ಸಂಗ್ ಮತ್ತು ಗೂಗಲ್ ಕಂಪನಿಗಳು ಹೂಡುವಷ್ಟು ಬಂಡವಾಳವನ್ನು ಸಹ ಇಡೀ ದೇಶವಾಗಿ ಸಂಶೋಧನೆಗಳಿಗೆ ಮೀಸಲಿಡು ತ್ತಿಲ್ಲ. ನಮ್ಮ ಬಹುಪಾಲು ಸಂಶೋಧನೆಗಳು ಏನಿದ್ದರೂ ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿವೆಯೇ ವಿನಾ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಇಲ್ಲ. ಮೇಕ್ ಇನ್ ಇಂಡಿಯಾ ಯೋಜನೆ ನಿರೀಕ್ಷೆಯಂತೆ ಯಶಸ್ಸು ಗಳಿಸಬೇಕಾದರೆ ಈ ಧೋರಣೆ ಮೊದಲು ಬದಲಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.