ಕೊರೊನಾ ಸೋಂಕಿನ ಕುರಿತು ಭಾರತ ಸರ್ಕಾರ ವ್ಯಾಪಕವಾಗಿ ಪ್ರಚುರಪಡಿಸಿರುವ ಸಂದೇಶದ ಪ್ರಕಾರ, ಜನ ಭಯಭೀತರಾಗುವ ಅಗತ್ಯವಿಲ್ಲ; ಎಚ್ಚರ ಅತ್ಯಗತ್ಯ. ಆದರೆ ಈ ವೈರಾಣುವಿಗೆ ತೀವ್ರವಾಗಿ ಹರಡುವ ಗುಣ ಇರುವುದರಿಂದ ಒಬ್ಬ ವ್ಯಕ್ತಿಯಾಗಿ, ಒಂದು ಗುಂಪಾಗಿ, ಒಂದು ಸಮಾಜವಾಗಿ, ಒಂದು ದೇಶವಾಗಿ, ಒಂದು ಸರ್ಕಾರವಾಗಿ, ಅಂತರರಾಷ್ಟ್ರೀಯ ಸಮುದಾಯವಾಗಿ- ಹೀಗೆ ಎಲ್ಲರ ಮೇಲೂ ಹಲವು ರೀತಿಯ ಪ್ರತ್ಯೇಕ ಕರ್ತವ್ಯಗಳು ಇರುತ್ತವೆ. ಯಾರು ಎಷ್ಟರಮಟ್ಟಿಗೆ ತಮ್ಮ ಹೆಗಲ ಮೇಲಿನ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಅಥವಾ ಪರರ ಮೇಲೆ ಹೊತ್ತುಹಾಕಿ ಕೂತುಕೊಳ್ಳುತ್ತಾರೆ ಎಂಬುದರ ಮೇಲೆ ಈ ಕಾಯಿಲೆಯ ನಿಯಂತ್ರಣ, ಅನಿಯಂತ್ರಣ ಅವಲಂಬಿಸಿದೆ.
ಜಾಗತಿಕವಾಗಿ ಕೊರೊನಾ ಸೋಂಕಿನ ಕೇಂದ್ರಬಿಂದುವೆಂದು ಗುರುತಿಸಿಕೊಂಡಿದ್ದ ಚೀನಾ ಈಗ ಅಪಾಯದಿಂದ ಬಹುಪಾಲು ಪಾರಾಗಿದೆ. ಇದೀಗ ಈ ಸರದಿ ಇಟಲಿ ಪಾಲಿಗೆ ಬಂದಿದೆ. ಇನ್ನುಳಿದಂತೆ ಇರಾನ್, ಫ್ರಾನ್ಸ್, ಸ್ಪೇನ್, ದಕ್ಷಿಣ ಕೊರಿಯಾ, ಜರ್ಮನಿ, ಅಮೆರಿಕ, ಸ್ವಿಟ್ಜರ್‌ಲೆಂಡ್, ನೆದರ್‌ಲೆಂಡ್ಸ್, ಜಪಾನ್ ದೇಶಗಳು ತೀವ್ರತಮ ಕೊರೊನಾ ಸೋಂಕುಪೀಡಿತ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಜಾಗತಿಕವಾಗಿ ಸೋಂಕಿತರ ಸಂಖ್ಯೆ 1.90 ಲಕ್ಷ ದಾಟಿದರೆ, ಈವರೆಗೆ ಬಲಿಯಾದವರ ಸಂಖ್ಯೆ 7,500 ದಾಟಿದೆ. ಗಮನಾರ್ಹ ಅಂಶವೆಂದರೆ, ಈ ರೋಗಕ್ಕೆ ತುತ್ತಾದವರಲ್ಲಿ ಸಾವಿನ ಪ್ರಮಾಣ ಅತೀ ಕಡಿಮೆ. ತೀವ್ರ ಪೀಡನೆಗೆ ಒಳಗಾಗಿದ್ದ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಜೀವ ಕಳೆದುಕೊಂಡ ಸೋಂಕಿತರ ಪ್ರಮಾಣ ಶೇಕಡ 1.4 ಮಾತ್ರ. ಹಾಗಾಗಿ ಇತರ ದೇಶಗಳಲ್ಲಿ ಸಾವಿನ ಸಂಖ್ಯೆ ಇನ್ನೂ ಕಡಿಮೆ ಇರುತ್ತದೆ ಎಂದು ಲೆಕ್ಕ ಹಾಕಲಾಗಿದೆ. ಕಬಳಿಸುವಿಕೆಗಿಂತ ಹರಡುವಿಕೆ ಮೂಲಕ ಜಗತ್ತನ್ನು ಅಲುಗಾಡಿಸುತ್ತಿರುವುದು ಈ ಸೋಂಕಿನ ವಿಶೇಷ.
ಕೊರೊನಾ ವೈರಾಣು ಮನುಷ್ಯನ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುತ್ತಿಲ್ಲ; ಪ್ರಜೆಗಳ ವೈಯಕ್ತಿಕ ಜೀವನಶೈಲಿ, ಸಾಮುದಾಯಿಕ ನಡವಳಿಕೆ, ಆರ್ಥಿಕ ಸ್ಥಿತಿಗತಿ, ಜಾಗತಿಕ ಸಂಬಂಧ- ಮುಂತಾದ ಹತ್ತು ಹಲವು ಆಯಾಮಗಳಲ್ಲಿ ತನ್ನ ಪ್ರಭಾವ ಪ್ರದರ್ಶಿಸುತ್ತಿದೆ. ಈ ಸೋಂಕಿನ ಪರಿಸ್ಥಿತಿಯಿಂದಾಗಿ ವ್ಯಕ್ತಿ ಮತ್ತು ವ್ಯವಸ್ಥೆಗಳು ಕಠೋರ ಪರೀಕ್ಷೆಗೆ, ಅವಲೋಕನಕ್ಕೆ ಒಳಗಾಗುವ ಅನಿವಾರ್ಯ ಏರ್ಪಟ್ಟಿರುವುದು ಪರೋಕ್ಷವಾಗಿ ಒಂದು ಸಕಾರಾತ್ಮಕ ಬೆಳವಣಿಗೆಯಂತೆ ಕಾಣಿಸುತ್ತಿದೆ. ತಿಂಗಳೊಪ್ಪತ್ತಿನಲ್ಲಿ ಮರೆಯಾಗಬಹುದಾದ ಸೋಂಕು ತಾನು ಬಂದುಹೋದ ಗುರುತು ಮೂಡಿಸಲೋ ಎಂಬಂತೆ, ಬಹುಕಾಲೀನ ಬದಲಾವಣೆಗೆ ಕಾರಣವಾಗಬೇಕಾದದ್ದು ತಾರ್ಕಿಕ ನಡೆ. ಭಾರತದ ಮಟ್ಟಿಗಂತೂ ಇದು ಹೆಚ್ಚು ಪ್ರಖರವಾಗಿ ಗೋಚರಿಸುತ್ತಿದೆ.
ಇದರ ಮೊದಲ ಕುರುಹಾಗಿ ನಮ್ಮ ಆರೋಗ್ಯ ವ್ಯವಸ್ಥೆಯ ಮಿತಿ-ಅತಿ ನಿಚ್ಚಳವಾಗಿ ಹೊಳೆಯುತ್ತಿವೆ, ಹುಳುಕುಗಳು ಹುತ್ತದಿಂದ ಹೊರಟ ಹುಳುಗಳಂತೆ ಪುಳುಪುಳು ಹೊರಬೀಳುತ್ತಿವೆ. ನಾಡಿನ ಮೊದಲ ಕೊರೊನಾ ಸಾವೆಂದು ದಾಖಲಾದ ಕಲಬುರ್ಗಿಯ ಮೊಹಮ್ಮದ್ ಹುಸೇನ್ ಸಿದ್ದಿಕಿ ಪ್ರಕರಣವನ್ನು ನಮ್ಮ ಪ್ರಸಕ್ತ ಆರೋಗ್ಯ (ಅ)ವ್ಯವಸ್ಥೆಗೆ ತಾಜಾ ನಿದರ್ಶನವಾಗಿ ಪರಿಗಣಿಸಬಹುದು. ಈ ಸಾವಿನ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸಿದ್ದಿಕಿ ವಿಷಯದಲ್ಲಿನ ಆರೋಗ್ಯ ಇಲಾಖೆಯ ವೈಫಲ್ಯ, ಹೈದರಾಬಾದ್ ಆಸ್ಪತ್ರೆಗಳ ಅಮಾನವೀಯ ವರ್ತನೆಯನ್ನು ಕಾಲಾನುಕ್ರಮವಾಗಿ ವಿವರಿಸಿದರು. ಖರ್ಗೆ ಸ್ಥಳೀಯರೇ ಆಗಿದ್ದರಿಂದ ಅವರ ಬಳಿ ಸಂಪೂರ್ಣ ವಾಸ್ತವಿಕ ಮಾಹಿತಿ ಇತ್ತು. ಆದರೆ, ಎಂದಿನಂತೆ ಅಧಿಕಾರಿಗಳ ಮಾಹಿತಿ ಅವಲಂಬಿಸಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ವಿವರಣೆಯು ತಿಪ್ಪೆ ಸಾರಿಸುವ ಕಾರ್ಯದ ಹೊರತಾಗಿ ಮತ್ತೇನನ್ನೂ ಮಾಡಲಿಲ್ಲ.
ಸೋಂಕು ಶಂಕೆಗೆ ಒಳಗಾಗಿದ್ದ ವ್ಯಕ್ತಿಯನ್ನು ಕಲಬುರ್ಗಿ ಸರ್ಕಾರಿ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ ಗಳಿಗೆಯಿಂದ ಹಿಡಿದು ಅವರ ರಕ್ತ ಪರೀಕ್ಷೆಯ ಫಲಿತಾಂಶ ಬರುವವರೆಗೆ ನಡೆದ ವಿದ್ಯಮಾನಗಳಲ್ಲಿ ಅಚ್ಚರಿಪಡುವಂತಹದ್ದೇನೂ ಇರಲಿಲ್ಲ! ಸರ್ಕಾರಿ ಆಸ್ಪತ್ರೆ ವೈದ್ಯರ ಮನೋಧರ್ಮ, ಖಾಸಗಿ ಆಸ್ಪತ್ರೆಯ ಸ್ವಾರ್ಥ, ಕೊರಿಯರ್ ಏಜೆನ್ಸಿ ವೈಖರಿ, ಸರ್ಕಾರದ ವಿವರಣೆ, ವಿಳಂಬ ಎಲ್ಲವೂ ಅದಕ್ಷ ವ್ಯವಸ್ಥೆಗೆ ಅನುಗುಣವಾಗಿಯೇ ಇದ್ದವು. ಪರಿಣಾಮವಾಗಿ ಇಡೀ ಕಲಬುರ್ಗಿ ಅಘೋಷಿತ ಕರ್ಫ್ಯೂ ಅನುಭವಿಸಬೇಕಿದೆ. ಸಾವಿಗೀಡಾದ ವ್ಯಕ್ತಿಯ ಮಗಳು ಮತ್ತು ಕುಟುಂಬ ವೈದ್ಯರಲ್ಲಿ ಸೋಂಕು ದೃಢಪಟ್ಟಿದೆ. ಅವರ ಸಂಪರ್ಕಕ್ಕೆ ಬಂದ ನೂರಾರು ಜನರನ್ನು ಹುಡುಕುವ, ಪ್ರತ್ಯೇಕಿಸುವ ಕಾರ್ಯ ನಡೆಯುತ್ತಲೇ ಇದೆ.
ಸದ್ಯಕ್ಕೆ ಭಾರತದಲ್ಲಿ ಕೊರೊನಾ ಸೋಂಕು ಎರಡನೇ ಹಂತದಲ್ಲಿದೆ. ಅಂದರೆ, ವಿದೇಶದಿಂದ ಬಂದವರು ಮತ್ತು ಅವರ ಸಂಪರ್ಕ ಹೊಂದಿದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಘಟ್ಟದಲ್ಲೇ ಇಷ್ಟೊಂದು ಗೊಂದಲ, ಕೊರತೆ ಮತ್ತು ಅತಂತ್ರ. ಇನ್ನು ಮೂರನೇ ಹಂತದಲ್ಲಿ ಒಂದು ವೇಳೆ ಸೋಂಕು ಸಮುದಾಯ ಸ್ವರೂಪ ಪಡೆದರೆ, ಆಗ ಪರಿಸ್ಥಿತಿ ಹೇಗಿರಬೇಡ? ಇದನ್ನು ಊಹಿಸಲೂ ಸಮಯಾವಕಾಶವಿಲ್ಲ. ಮುಂದಿನ ಎರಡೇ ವಾರಗಳಲ್ಲಿ ಆ ಹಂತ ಬಂದೇಬಿಡುತ್ತದೆ. ಸೋಂಕುಪೀಡಿತ ದೇಶಗಳ ಮೂರನೇ ಹಂತದ ವ್ಯಾಪಕತೆಯನ್ನು ಗಮನಿಸಿದರೆ ಸಮಸ್ಯೆಯ ಗಂಭೀರತೆ ಮತ್ತು ನಮ್ಮ ವ್ಯವಸ್ಥೆಯ ಕೊರತೆ ಅರಿವಿಗೆ ಬರುತ್ತದೆ.
ಸರ್ಕಾರಿ ಆಸ್ಪತ್ರೆಗಳಲ್ಲಿನ ಮೂಲ ಸೌಕರ್ಯಗಳ ಅಲಭ್ಯತೆ, ಸಿಬ್ಬಂದಿಯಲ್ಲಿನ ಬದ್ಧತೆಯ ಅಭಾವ, ಸ್ವಚ್ಛತೆಯ ಕಣ್ಮರೆ, ಕೇವಲ ನೌಕರರಾಗಿ ಮಾರ್ಪಾಟಾಗಿರುವ ವೈದ್ಯರು, ಅಧಿಕಾರದಾಹ
ದಲ್ಲಿ ತೇಲುವ ರಾಜಕಾರಣಿಗಳು, ಆಡಳಿತಾತ್ಮಕ ಕೌಶಲ ಮರೆತ ಅಧಿಕಾರಿಗಳು... ಇವರನ್ನೇ ನಂಬಬೇಕಾದ ಅನಿವಾರ್ಯದಲ್ಲಿ ಜನಸಾಮಾನ್ಯರು. ಎಂತಹ ಅದ್ಭುತ ಸಂಯೋಜನೆ ನೋಡಿ!
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ತೆಡ್ರಾಸ್ ಅಧಾನೊಮ್ ಅವರು ಜಾಗತಿಕವಾಗಿ ಕೊರೊನಾ ವೈರಾಣು ನಿಯಂತ್ರಣ ಮಾಡುವ ದಿಸೆಯಲ್ಲಿ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ‘ಸೋಂಕಿತರನ್ನು ಗುರುತಿಸದೇ ಸೋಂಕು ತಡೆಗಟ್ಟುವುದಾದರೂ ಹೇಗೆ’ ಎಂಬುದು ಅವರ ಮೂಲ ಪ್ರಶ್ನೆ. ಹಾಗಾಗಿ ಅವರು ತಮ್ಮ ಸಂದೇಶದಲ್ಲಿ, ‘ಟೆಸ್ಟ್, ಟೆಸ್ಟ್ ಆ್ಯಂಡ್ ಟೆಸ್ಟ್’ ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಆದರೆ ಭಾರತದಲ್ಲಿ ಸೋಂಕು ಶಂಕಿತರ ರಕ್ತ ಮತ್ತು ಗಂಟಲು ದ್ರವ ಪರೀಕ್ಷಿಸುವ ಪ್ರಯೋಗಾಲಯಗಳ ಸಂಖ್ಯೆ ಅಗತ್ಯಕ್ಕೆ ತಕ್ಕಷ್ಟು ಇಲ್ಲವೆಂಬುದು ಸಾಬೀತಾಗಿದೆ. ಇದರಿಂದಾಗಿ ಸೋಂಕಿತರ ಗುರುತಿಸುವಿಕೆ ವಿಳಂಬವಾಗಿ, ರೋಗ ಹರಡುವಿಕೆಗೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಸೀಮಿತ ಪರೀಕ್ಷಾ ಕೇಂದ್ರಗಳು ಮತ್ತು ವಿಳಂಬಿತ ಫಲಿತಾಂಶಗಳ ಕಾರಣದಿಂದ ಸೋಂಕಿತರ ನಿಜವಾದ ಸಂಖ್ಯೆ ಹೊರಬೀಳದಿರುವ ಸಾಧ್ಯತೆಯೇ ಹೆಚ್ಚು. ಇರಾನ್‍ನಲ್ಲಿ 85,000 ಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಫ್ರಾನ್ಸ್ ಪ್ರಧಾನಿ, ‘ನಾವೀಗ ಯುದ್ಧನಿರತರು. ಸೆಣಸುತ್ತಿರುವುದು ಅನ್ಯ ಸೇನೆಯೊಂದಿಗಲ್ಲ. ನಮ್ಮ ವೈರಿ ಇಲ್ಲಿಯೇ ಇದ್ದಾನೆ; ಕಣ್ಣಿಗೆ ಕಾಣುವುದಿಲ್ಲ, ಕೈಗೆ ನಿಲುಕುವುದಿಲ್ಲ... ಆದರೆ ಮುನ್ನುಗ್ಗುತ್ತಿದ್ದಾನೆ’ ಎಂದು ಕೊರೊನಾ ಮಾರಿಯನ್ನು ಬಣ್ಣಿಸಿದ್ದಾರೆ. ಸ್ಪೇನ್ ಸರ್ಕಾರ ತನ್ನ ದೇಶದ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಿ, ಸೈನ್ಯ ಸನ್ನದ್ಧಗೊಳಿಸಿದೆ. ವಿಶ್ವದ ಬಹುಪಾಲು ದೇಶಗಳು ಗಡಿಗಳನ್ನು ಬಂದ್ ಮಾಡಿ ವೈರಾಣು ವಿರುದ್ಧ ಅವಿರತ ಹೋರಾಡುತ್ತಿವೆ.
ತಾವೇ ಹೊರಡಿಸಿದ ಆದೇಶ ಉಲ್ಲಂಘಿಸಿ ಅದ್ಧೂರಿ ಮದುವೆಗೆ ಹಾಜರಾದ ಮುಖ್ಯಮಂತ್ರಿ, ನಿರ್ವಹಿಸುತ್ತಿರುವ ಖಾತೆ ಬಗ್ಗೆ ಕನಿಷ್ಠ ಪರಿಣತಿ- ಪರಿಜ್ಞಾನ ಇಲ್ಲದ ಮಂತ್ರಿಗಳು ಮತ್ತು ಬಾಲಬಡುಕ ಅಧಿಕಾರಿಗಳ ಕೈಯಲ್ಲಿ ನಮ್ಮ ನಿಮ್ಮೆಲ್ಲರ ಆರೋಗ್ಯ ರಕ್ಷಣೆಯ ಹೊಣೆಯಿದೆ. ಇದರಲ್ಲಿ ಸ್ವತಃ ರಕ್ಷಕರ ಆರೋಗ್ಯದ ರಿಸ್ಕ್ ಕೂಡಾ ಇದೆ. ಆದರೆ ಇದರ ಅರಿವು ಹೆಚ್ಚಿನವರಿಗೆ ಇಲ್ಲ. ಹಾಗಾಗಿ ಕೊರೊನಾ ವೈರಾಣು ಜೊತೆಗೆ ಕರಕಲು ವೈದ್ಯಕೀಯ ವ್ಯವಸ್ಥೆಯನ್ನು ನೈರ್ಮಲ್ಯೀಕರಣಗೊಳಿಸುವ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.